ಸ್ಪಿನೋಜಾ (1632-1677)
ಧರ್ಮ, ನಾಸ್ತಿಕತೆ, ಮತಾಂಧತೆ (ಭಾಗ ೧) - ದೈವ ನಂಬಿಕೆಯ ನಿಜವಾದ ಶತ್ರು ನಾಸ್ತಿಕತೆಯಲ್ಲ, ಆದರೆ ಮತಾಂಧತೆ
ದೈವ ನಂಬಿಕೆಯ ಬಗ್ಗೆ ಹೆಚ್ಚು ಜನ ಚರ್ಚಿಸಲು ಧೈರ್ಯಮಾಡಲಾರದ ಆಳವಾದ ಸತ್ಯವಿದೆ. ಬಾರುಕ್ ಸ್ಪಿನೋಜಾ ಮೂರು ಶತಮಾನಗಳ ಹಿಂದೆ ಈ ಸತ್ಯವನ್ನು ತೆರೆದಿಟ್ಟನು. ಈ ತತ್ವಜ್ಞಾನಿಯ ವಿಚಾರಗಳು ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಆಲೋಚನಾ ವಿಧಾನಗಳಿಗೆ ಸವಾಲು ಹಾಕಬಹುದು. ಸ್ಪಿನೋಜ ಯಾರದ್ದಾದರೂ ಧರ್ಮ, ಆಧ್ಯಾತ್ಮಿಕತೆ ಮತ್ತು ದೇವರೊಟ್ಟಿಗೆ ಅವರ ವೈಯಕ್ತಿಕ ಸಂಬಂಧದ ದೃಷ್ಟಿಕೋನ ಇವುಗಳನ್ನೆಲ್ಲ ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ.
ಸ್ಪಿನೋಜ ನಾಸ್ತಿಕನಾಗಿದ್ದನು ಎಂಬ ಸಾಮಾನ್ಯ ಅಭಿಪ್ರಾಯ ತಪ್ಪು. ವಾಸ್ತವದಲ್ಲಿ ಎಲ್ಲದರಲ್ಲೂ ದೈವಿಕತೆಯ ಇರುವಿಕೆಯನ್ನು ಸಾರ್ವತ್ರಿಕವಾಗಿ ಗ್ರಹಿಸಿದ ಸ್ಪಿನೋಜಾ ನಾಸ್ತಿಕನಾಗಿರಲಿಲ್ಲ. ಆದರೆ ಅವನ ವಿಶ್ವಾಸದ ರೀತಿ ಆ ಕಾಲದ ಯಹೂದಿ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ಆಳವಾಗಿ ಅಸ್ಥಿರಗೊಳಿವಂತಹದಾಗಿತ್ತು. ಪರಿಣಾಮವಾಗಿ ಕೇವಲ 24 ವರ್ಷ ವಯಸ್ಸಿನಲ್ಲಿ, ಸ್ಪಿನೋಜನನ್ನು ಆಮ್ಸ್ಟರ್‌ಡ್ಯಾಮ್‌ನ ಯಹೂದಿ ಪ್ರಾರ್ಥನಾಲಯ ಮತ್ತು ಒಕ್ಕೂಟ (ಸಿನಗೋಗ್) ದಿಂದ ಜಾತಿಭ್ರಷ್ಟಮಾಡಲಾಯಿತು. ಸಿನಗೋಗ್ ಇತಿಹಾಸದಲ್ಲಿ ದಾಖಲಾದ ಅತ್ಯಂತ ಕಟುವಾದ ಖಂಡನೆಗಳಲ್ಲಿ ಒಂದಾಗಿದೆ ಸ್ಪಿನೋಜಾ ವಿರುಧ್ದದ ತೀರ್ಪು.
ಅವನ ಅಪರಾಧವಾದರೂ ಏನು? ನಂಬಿಕೆಯನ್ನು ರಕ್ಷಿಸಲು ಅತ್ಯಂತ ತೀವ್ರವಾಗಿ ಕಾರ್ಯಗೊಳ್ಳುವವರು ಎಂದು ಹೇಳಿಕೊಳ್ಳುವವರೇ ನಂಬಿಕೆಯ ನಿಜವಾದ ಶತ್ರುಗಳಾಗಿರಬಹುದೇ ಎಂಬ ಕ್ಲೇಶಕರವಾದ ಪ್ರಶ್ನೆಯನ್ನು ಎತ್ತುವುದು.
ಅತ್ಯುನ್ನತವಾದ ಪವಿತ್ರ ಪಠ್ಯಗಳ ಶಿಕ್ಷಣವನ್ನು ಪಡೆದ ಒಬ್ಬ ಮೇಧಾವಿ ಯುವಕನಾಗಿದ್ದನು ಸ್ಪಿನೋಜ. ಇಂತಹ ವ್ಯಕ್ತಿ ಇದ್ದಕ್ಕಿದ್ದಂತೆ ತೊಂದರೆಗೊಳಿಸುವದೇನನ್ನೋ ಅರಿತುಕೊಳ್ಳುವ ಸನ್ನಿವೇಶವೊಂದನ್ನು ಕಲ್ಪಿಸಿಕೊಳ್ಳಿ . ಅವನು ಗಮನಿಸಿದಂತೆ ತನ್ನ ಸಮುದಾಯದ ಅತ್ಯಂತ ಧಾರ್ಮಿಕ ವ್ಯಕ್ತಿಗಳೇ ಅತ್ಯಂತ ಅಸಹಿಷ್ಣುಗಳು, ತಮ್ಮ ನಂಬಿಕೆಗಳಲ್ಲಿ ಅತ್ಯಂತ ಹೆಚ್ಚು ಹಿಂಸಾತ್ಮಕರು ಮತ್ತು ಭಿನ್ನಮತೀಯರಾದ ಯಾರನ್ನಾದರೂ ನಾಶಮಾಡಲು ಹೆಚ್ಚು ಸಿದ್ಧರು. ಸಮಸ್ಯೆ ಇರುವುದು ದೈವ ನಂಬಿಕೆಯಲ್ಲಿ ಅಲ್ಲ ಆದರೆ ಜನರು ಹೇಗೆ ಅದನ್ನು ಅನುಷ್ಠಾನಗೊಳಿಸುತಾರೆ ಎನ್ನುವುದರಲ್ಲಿ ಇರಬಹುದೇ ಎಂದು ಸ್ಪಿನೋಜ ವಿಚಾರಿಸಲು ಆರಂಭಿಸಿದನು. ನಾವು ಈಗ ‘ಧಾರ್ಮಿಕ ವಿರೋಧಾಭಾಸ’ ಎಂದು ಕರೆಯುವುದನ್ನು ಸ್ಪಿನೋಜಾ ಅಂದೇ ಗುರುತಿಸಿದ್ದಾರೆ. ‘ಧಾರ್ಮಿಕ ವಿರೋಧಾಭಾಸ’ವೆಂದರೆ ತಾವೇ ದೈವಿಕ ಸತ್ಯದ ರಕ್ಷಕರು ಎಂದು ಯಾರು ನಂಬುತ್ತಾರೋ, ಅವರು ಹೆಚ್ಚು ಕಠಿಣ ಮತ್ತು ಹೆಚ್ಚು ನಿರ್ದಯರಾಗಬಹುದು.
ವ್ಯಂಗ್ಯ? ಅಲ್ಲವೇ ?
ದೇವರ ಪ್ರೀತಿ, ಕರುಣೆ ಮತ್ತು ಬುದ್ಧಿವಂತಿಕೆಯನ್ನು ಸಾಕಾರಗೊಳಿಸಬೇಕಾದವರೇ ಅತ್ಯಂತ ಕಠೋರ, ತೀರಾ ವಿಮರ್ಶನಾತ್ಮಕ , ಮತ್ತು ಧರ್ಮ ವಿಶ್ವಾಸದ ಹೆಸರಿನಲ್ಲಿ ಸಂಕಟವನ್ನು ಉಂಟುಮಾಡಲು ಹೇರಲು ಹೆಚ್ಚು ಸಿದ್ಧರಿದ್ದಾರೆ. ಸ್ವಂತ ಅನುಭವದಲ್ಲಿ ಸದಾ ಧಾರ್ಮಿಕ ವಚನಗಳನ್ನು ಉಲ್ಲೇಖಿಸುವ ಆಳವಾದ ಧಾರ್ಮಿಕರಾದರೂ ಇನ್ನೂ ಕಟು ಅಥವಾ ದ್ವೇಷದ ಮನೋಭಾವದ ಜನರನ್ನು ನಮ್ಮ ಸುತ್ತುಮುತ್ತದಲ್ಲಿ ಎಷ್ಟೋ ಬಾರಿ ಎದುರಿಸುತ್ತೇವೆ ಎನ್ನುವುದನ್ನು ಅಲ್ಲಗಳೆಯಲಾಗದು. ಇವರು ಬೈಬಲನ್ನು (ಅಥವಾ ಯಾವುದೇ ಧರ್ಮ ಗ್ರಂಥವನ್ನು) ಆಯುಧದಂತೆ ಹಿಡಿಯುವವರು, ಇತರರನ್ನು ಅವಮಾನಿಸಲು ಶ್ಲೋಕಗಳು ವಚನಗಳನ್ನು ನಿರರ್ಗಳವಾಗಿ ಉಲ್ಲೇಖಿಸುವವರು, ಸಾಮಾನ್ಯರಿಗಿಂತ ಹೆಚ್ಚು ಶಾಸ್ತ್ರಗಳನ್ನು ತಿಳಿದಿರುವ ಕಾರಣ ತಮ್ಮದೇ ಶ್ರೇಷ್ಠತೆಯ ಬಗ್ಗೆ ಮನವರಿಕೆಗೊಂಡವರು . ಆದರೆ ಸ್ನಿನೋಜಾ ತಿಳಿದುಕೊಂಡ೦ತೆ ಇಂತಹ ಜನರು ದೇವರಿಗೆ ಹತ್ತಿರವಲ್ಲ, ಬದಲಿಗೆ ವಾಸ್ತವವಾಗಿ ದೇವರಿಂದ ದೂರ ಹೋಗುತ್ತಿರುವರು, ಎಂದು ಸರಿಯಾಗಿಯೇ ತಿಳಿದುಕೊಂಡನು ಸ್ಪಿನೋಜ ತನ್ನ ದೇವತಾಶಾಸ್ತ್ರ-ರಾಜಕೀಯ ಶಾಸ್ತ್ರಗಳ ಗ್ರಂಥದಲ್ಲಿ, ಸ್ಪಿನೋಜ ಕ್ರಾಂತಿಕಾರಿ ಅಭಿಪ್ರಾಯವೊಂದನ್ನು ಬರೆದಿದ್ದಾನೆ :
ಧರ್ಮದ ಸೋಗಿನಲ್ಲಿ ಮನುಷ್ಯರು ಅತ್ಯಂತ ದೊಡ್ಡ ದೌರ್ಜನ್ಯಗಳನ್ನು ಎಸಗುವಂತೆ ಪ್ರೇರೇಪಿಸುವ ಮತಾಂಧತೆಯ ನಿಜವಾದ ಪಾತ್ರ ಸ್ಪಿನೋಜ ಪ್ರಕಾರ ಮೂಢನಂಬಿಕೆಯನ್ನು ಕ್ರೋಧವಾಗಿ ಪರಿವರ್ತಿಸುವುದಲ್ಲದೆ ಬೇರೇನೂ ಅಲ್ಲ.
ಧರ್ಮವು ಮತಾಂಧವಾದಾಗ ಅದು ದೇವರ ಮಾರ್ಗವಾಗುವದನ್ನು ತ್ಯಜಿಸಿ ತಡೆಗೋಡೆಯಾಗುತ್ತದೆ ಎಂದು ಹೇಳಿದ ಸ್ಪಿನೋಜಾ, ಇದರರ್ಥ ಧರ್ಮ ವಿಶ್ವಾಸವನ್ನು ತ್ಯಜಿಸುವುದು ಯೋಗ್ಯ ಎಂದು ಎಂದಿಗೂ ಹೇಳಲಿಲ್ಲ. ನಿಜವಾದ ಧರ್ಮ ಮತ್ತು ಧಾರ್ಮಿಕ ಮೂಢನಂಬಿಕೆಗಳ ನಡುವೆ ನಿರ್ಣಾಯಕ ವ್ಯತ್ಯಾಸವನ್ನು ಮಾಡುವದೆ ಆಗಿತ್ತು ಅವನ ಉದ್ದೇಶ.
ನಿಜವಾದ ದೈವ-ವಿಶ್ವಾಸವು , ಸ್ಪಿನೋಜ ಪ್ರತಿಪಾದಿಸಿದ, ಪ್ರೀತಿ, ನ್ಯಾಯ, ಮತ್ತು ದಯಾಧರ್ಮಗಳನ್ನು ಬೆಳಸುತ್ತವೆ. ಮತ್ತೊಂದೆಡೆ ಇದಕ್ಕೆ ಪ್ರತಿಕೂಲವಾಗಿ ಮತಾಂಧತೆಯು ಮೂಢನಂಬಿಕೆ, ಭಯ, ದ್ವೇಷ ಮತ್ತು ವಿಭಾಗಗಳನ್ನು ಹುಟ್ಟುಹಾಕುತ್ತದೆ
ಇಲ್ಲಿದೆ ಕೇಂದ್ರ ಅಂಶ : ನಂಬಿಕೆಯ ದೈವ ವಿಶ್ವಾಸದ ಮಹಾನ್ ಎದುರಾಳಿ ನಂಬಿಕೆಯಿಲ್ಲದವನು ಅಲ್ಲ; ಆದರೆ ತನ್ನ ಕ್ರೌರ್ಯವನ್ನು ಸಮರ್ಥಿಸಲು ದೇವರನ್ನು ಬಳಸುವವನು.
ಕಲ್ಪಿಸಿಕೊಳ್ಳಿ ಇಬ್ಬರು ನೆರೆಹೊರೆಯವರನ್ನು : ಮೊದಲನೆಯವನು, ಉದಾಹರಣೆಗೆ, ಪ್ರತಿ ಭಾನುವಾರ ಚರ್ಚ್‌ಗೆ ಅಥವಾ ತನ್ನ ಪ್ರಾರ್ಥನಾಲಯ-ದೇವಾಲಯಕ್ಕೆ ಹಾಜರಾಗುತ್ತಾನೆ , ಬೈಬಲ್ ಅಥವಾ ತನ್ನ ದೈವ ಗ್ರಂಥವನ್ನು ಕಂಠ ಪಾಠ ಅರಿತಿದ್ದಾನೆ, ಹೃದಯದಿಂದ ತಿಳಿದಿದ್ದಾರೆ, ಎಲ್ಲಾ ಪೂಜೆ ಪ್ರಾರ್ಥನಾ ಗುಂಪುಗಳಲ್ಲಿ ಭಾಗವಹಿಸುತ್ತಾನೆ. ಆದರೂ ಅವನಿಂದ ಇನ್ನೊಬ್ಬರ ಒಂದೇ ಅಪರಾಧವನ್ನು ಕ್ಷಮಿಸಲು ಸಾಧ್ಯವಿಲ್ಲ, ಸಮುದಾಯದ ಸದಸ್ಯರ ಬಗ್ಗೆ ಅವರ ಬೆನ್ನ ಹಿಂದೆ ಅಲ್ಲದ ಸಲ್ಲದ ಮಾತುಗಳನ್ನು ಆಡುತ್ತಾನೆ, ಮತ್ತು ವಿಭಿನ್ನವಾಗಿ ಯೋಚಿಸುವ ಯಾರನ್ನಾದರೂ ಕೆಟ್ಟದಾಗಿ ನಡೆಸಿಕೊಳ್ಳುತ್ತಾನೆ . ಎರಡನೆಯವನು ಎಂದಿಗೂ ಚರ್ಚ್‌ಗೆ ಅಥವಾ ದೇವಸ್ಥಾನಕ್ಕೆ ಕಾಲಿಡುವುದಿಲ್ಲ, ಯಾವುದೇ ಸಂಘಟಿತ ಧರ್ಮವನ್ನು ಅನುಸರಿಸುವುದಿಲ್ಲ, ಆದರೆ ಎಲ್ಲರಿಗೂ ದಯೆ ತೋರುತ್ತಾನೆ, ಮನ್ನಣೆಯನ್ನು ನಿರೀಕ್ಷಿಸದೇ ಅಗತ್ಯವಿರುವವರಿಗೆ ಸಹಾಯ ಮಾಡುತ್ತಾನೆ, ಮತ್ತು ಪ್ರತಿ ವ್ಯಕ್ತಿಯನ್ನು ಘನತೆಯಿಂದ ನಡೆಸಿಕೂಳ್ಳುತ್ತಾನೆ. ಸ್ಪಿನೋಜಾ ತನ್ನ ಕೌತುಕವನ್ನು ಮುಚ್ಚಿಡುವುದಿಲ್ಲ : "ಯಾವನು ದೈವಿಕತೆಗೆ ಹತ್ತಿರವಾಗಿರುವನು ?" . ಈ ಪ್ರಶ್ನೆ ತುಂಬಾ ಆತಂಕಕಾರಿಯಾಗಿತ್ತು ಏಕೆಂದರೆ ಇದು ಅಹಿತಕರ ಸತ್ಯವನ್ನು ಬಹಿರಂಗಪಡಿಸುತ್ತದೆ.
ತಮ್ಮ ಧಾರ್ಮಿಕತೆಯ ಬಗ್ಗೆ ಜೋರಾಗಿ ಹೇಳಿಕೊಳ್ಳುವವರು ಹೆಚ್ಚಾಗಿ ತಮ್ಮ ದೈನಿಕ ಜೀವನದಲ್ಲಿ ತಾವೇ ಬೋಧಿಸುವ ಮೌಲ್ಯಗಳನ್ನು ಕನಿಷ್ಠವಾಗಿ ಬದುಕುತ್ತಾರೆ. ಅವರು ದೇವರನ್ನು ತಮ್ಮ ಸ್ವಂತ ದೌರ್ಬಲ್ಯಗಳನ್ನು ಮತ್ತು ಪೂರ್ವಾಗ್ರಹಗಳನ್ನು ಮರೆಮಾಚುವ ಹಗಲುಗನಸು ಅಥವಾ ಭ್ರಮೆಯಾಗಿ ಬಳಸುವಂತೆ ಕಾಣಬಹುದು. ಸ್ಪಿನೋಜಾ ತನ್ನ ಕಾಲದಲ್ಲಿ ಇದನ್ನು ಸ್ಪಷ್ಟವಾಗಿ ನೋಡಿದ್ದನು. ಅವನ ಯುಗದಲ್ಲಿ. ಆಂಸ್ಟರ್‌ಡ್ಯಾಮ್‌ನ ಧಾರ್ಮಿಕ ಮುಖಂಡರು ತಮ್ಮ ಪಾಂಡಿತ್ಯಕ್ಕಾಗಿ ಪ್ರಸಿದ್ಧರಾಗಿದ್ದರು, ಆದರೆ ಅಷ್ಟೇ ಸಹ ಅಸಹಿಷ್ಣುತೆಗೂ. ಅವರು ದೇವತಾಶಾಸ್ತ್ರವನ್ನು ಚರ್ಚಿಸಬಹುದು, ಆದರೆ ತಮ್ಮ ವಿಚಾರಧಾರೆಗೆ ಒಪ್ಪದಿರುವವರಿಗೆ ಸಹಾನುಭೂತಿ ತೋರಿಸಲು ವಿಫಲರಾದರು. ಸ್ಪಿನೋಜಾಗೆ ಈ ಮನಸ್ಥಿತಿ ಮತ್ತು ನಡವಳಿಕೆ ನಿಷ್ಕಾರಣ ಅಥವಾ ಕಾಕತಾಳೀಯವಾಗಿರಲಿಲ್ಲ. ಇದು ಆಧ್ಯಾತ್ಮಿಕ ಅನಾರೋಗ್ಯದ ಆಳದ ಸಂಕೇತವಾಗಿತ್ತು
ದೈವ ನಂಬಿಕೆಯು ಮತಾಂಧತೆಗೆ ತಿರುಗಿದಾಗ, ವ್ಯಕ್ತಿ ದೇವರನ್ನು ಪ್ರಾಮಾಣಿಕವಾಗಿ ಹುಡುಕುವುದನ್ನು ನಿಲ್ಲಿಸಿ ಬದಲಿಗೆ ಇತರರ ಮೇಲೆ ಹಿಡಿತವನ್ನು ಹುಡುಕುತ್ತಾನೆ ಎಂದು ಸ್ಪಿನೋಜಾ ನಂಬಿದ್ದನು. ಹೀಗಾಗುವಾಗ ಧರ್ಮವು ವಿಮೋಚನೆಯ ಸಾಧನವಾಗಿ ಉಳಿಯದೆ ನಿಯಂತ್ರಣದ ಸಾಧನವಾಗುತ್ತದೆ. ಮತಾಂಧರು ಬಯಸುವುದು ಆತ್ಮಗಳನ್ನು ಉಳಿಸುವದಲ್ಲ, ಆತ್ಮಗಳ ಮೋಕ್ಷವಲ್ಲ ; ಮನಸ್ಸಿನ ನಿಯಂತ್ರಣ . ಮತಾಂಧರು ಸತ್ಯವನ್ನು ಹುಡುಕುವುದಿಲ್ಲ ಆದರೆ ತಮ್ಮ ಪೂರ್ವಗ್ರಹಗಳ ಪಕ್ಷಪಾತಗಳ ದೃಢೀಕರಣವನ್ನು ಹುಡುಕುತ್ತಾರೆ.
ಸ್ಪಿನೋಜಾನ ಆಳವಾದ ಒಳ ನೋಟಗಳಲ್ಲಿ ಇದು ಒಂದಾಗಿದೆ : ಧಾರ್ಮಿಕ ಮತಾಂಧತೆ ಆಗಾಗ್ಗೆ ಭಯದಿಂದ ಹುಟ್ಟುತ್ತದೆ. ತಮ್ಮ ತಿಳುವಳಿಕೆ ತಪ್ಪು ಎಂಬ ಭಯ. ನಿಯಂತ್ರಣ ಕಳೆದುಕೊಳ್ಳುವ ಭಯ, ಸ್ಪಷ್ಟ ಸುಲಭ ಉತ್ತರಗಳಿಲ್ಲದ ಜೀವನದ ಸಂಕೀರ್ಣತೆಯನ್ನು ಎದುರಿಸುವ ಭಯ.
ಮತಾಂಧರು ಜನರೆಲ್ಲರೂ ಒಂದೇ ರೀತಿ ಯೋಚಿಸಬೇಕೆಂದು ಒತ್ತಾಯಿಸುತ್ತಾರೆ. ಇದಕ್ಕೆ ಕಾರಣ ಮನಸ್ಸಿನ ಆಳದಲ್ಲಿ ತಮ್ಮದೇ ಆದ ನಂಬಿಕೆಗಳ ಬಗ್ಗೆ ಅವರಲ್ಲಿರುವ ಅನಿಶ್ಚಿತತೆ
ಸ್ಪಿನೋಜಾ ನಾಸ್ತಿಕರನ್ನು ವೀಕ್ಷಿಸಿದ ರೀತಿ ಬೇರೆ.
ನಾಸ್ತಿಕರು ದೇವರ ಅಸ್ತಿತ್ವವನ್ನು ನಿರಾಕರಿಸಿದರೂ ಸಹ, ಅವರು ತಮ್ಮ ಅನುಮಾನಗಳ, ಶಂಕೆಗಳ ಬಗ್ಗೆ ಪ್ರಾಮಾಣಿಕರಾಗಿದ್ದಾರೆ. ಎಲ್ಲಿ ಖಚಿತತೆ ಅಸಾಧ್ಯವೋ ಅನುಮಾನಾಸ್ಪದವೊ ಅಲ್ಲಿ ಎಲ್ಲವನ್ನೂ ಅರಿತಂತೆ ನಟಿಸುವುದಿಲ್ಲ. ಅಥವಾ ಕೇವಲ ತಮ್ಮ ವೈಯಕ್ತಿಕವಾಗಿರುವ ಅಭಿಪ್ರಾಯಗಳನ್ನು ಬೆಂಬಲಿಸಲು ದೈವಿಕ ಅಧಿಕಾರವನ್ನು ಆವಾಹನೆ ಮಾಡುವುದಿಲ್ಲ. ಒಂದು ರೀತಿಯಲ್ಲಿ ಪ್ರಾಮಾಣಿಕ ನಾಸ್ತಿಕನು ಮತಾಂಧ ಅಪ್ರಾಮಾಣಿಕನಿಗಿಂತ ಸತ್ಯಕ್ಕೆ ಹತ್ತಿರವಾಗುತ್ತಾನೆ.
ಸ್ಪಿನೋಜ ಭಕ್ತರಿಗಿಂತ ನಾಸ್ತಿಕರಿಗೆ ಆದ್ಯತೆ ನೀಡಿದನೆಂದು ಇದರ ಅರ್ಥವಲ್ಲ. ಸ್ಪಿನೋಜಾ ಧಾರ್ಮಿಕ ಹಣೆಪಟ್ಟಿಗಳನ್ನು ಲೆಕ್ಕಿಸದೆ, ಬೂಟಾಟಿಕೆಗಿಂತ ಪ್ರಾಮಾಣಿಕತೆಯನ್ನು, ದುರಹಂಕಾರಕ್ಕಿಂತ ವಿನಮ್ರತೆಯನ್ನು, ದ್ವೇಷಕ್ಕಿಂತ ಪ್ರೀತಿಯನ್ನು ಗೌರವಿಸಿದನು. .
ಸ್ಪಿನೋಜಾ ಅವನ ಸಮಯದಲ್ಲಿ ಮೂಲಭೂತವಾದದ್ದನ್ನು ಪ್ರಸ್ತಾಪಿಸಿದನು:
ಯಾವುದೇ ವ್ಯಕ್ತಿಯ ಸ್ವರೂಪ, ಸಾಮರ್ಥ್ಯ ಅಥವಾ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಅಥವಾ ಅಂದಾಜು ಮಾಡಿ ನಿರ್ಣಯಿಸುವುದು ಆತನ ಘೋಷಿತ ನಂಬಿಕೆಗಳ ಆಧಾರದ ಮೇಲೆ ಅಲ್ಲ, ಆದರೆ ಆತನು ಮಾಡುವ ಕಾರ್ಯಗಳಿಂದ.
ಒಳ್ಳೆಯ ಮರವು ಒಳ್ಳೆಯ ಫಲವನ್ನು ನೀಡುತ್ತದೆ. ಕೆಟ್ಟ ಮರದಿ೦ದ ಕೊಳೆತ ಹಣ್ಣನ್ನು ಮಾತ್ರ ಪ್ರತೀಕ್ಷಿಸಬಹುದು. ಒಬ್ಬಾತ ಮಾಡುವ ಕಾರ್ಯಗಳು ದೈವಿಕ ಮೌಲ್ಯಗಳಿಗೆ ವಿರುದ್ಧವಾಗಿದ್ದರೆ ಅಂತ ವ್ಯಕ್ತಿ ದೇವರಲ್ಲಿ ನಂಬಿಕೆ ಇಟ್ಟಿದ್ದೇನೆಂದು ಎಷ್ಟು ಘೋಷಿಸಿದರೂ ಅದರಲ್ಲಿ ಹುರುಳಿರಲಾರದು. ಒಬ್ಬ ವ್ಯಕ್ತಿಯು ಪ್ರೀತಿ ಮತ್ತು ನ್ಯಾಯದಿಂದ ವರ್ತಿಸಿದರೆ ತಾನು ಅವಿಶ್ವಾಸಿ ಎಂದು ಹೇಳಿಕೊಂಡರೂ ಸಹ ಪರವಾಗಿಲ್ಲ. ಅದು ಸರಿಯೇ, ಅದು ಸ್ವೀಕಾರಾರ್ಹ.
ಸ್ಪಿನೋಜನ ಈ ಕಲ್ಪನೆ ಅಪಾಯಕಾರಿಯಾಗಿತ್ತು ಏಕೆಂದರೆ ಅದು ನೈತಿಕ ಹೊಣೆಗಾರಿಕೆಯನ್ನು ಸಂಬಂಧಪಟ್ಟ ವ್ಯಕ್ತಿಗೇ ಹಿಂದಿರುಗಿಸಿತು. ಸರಿಯಾದ ಧರ್ಮಕ್ಕೆ ಸೇರಿರುವದು ಅಥವಾ ಧಾರ್ಮಿಕ ವಚನಗಳನ್ನು, ಧಾರ್ಮಿಕ ಸಿದ್ಧಾಂತಗಳನ್ನು ಸರಿಯಾಗಿ ಪುನರಾವರ್ತಿಸುವುದು ಇವಿಷ್ಟೇ ಸಾಲದು. ಬದಲಾಗಿ ಮಾನವೀಯತೆಯ ಅತ್ಯುನ್ನತ ಮೌಲ್ಯಗಳೊಂದಿಗೆ ಸಾಮರಸ್ಯದಿಂದ ಬದುಕುವುದು ಅಗತ್ಯವಿದೆ.
ಧಾರ್ಮಿಕ ಮತಾಂಧರು ಸಾಮಾನ್ಯವಾಗಿ ಒಂದು ವಿಚಿತ್ರವಾದ ನೈತಿಕತೆಯ ಕುರುಡುತನವನ್ನು ಬೆಳೆಸಿಕೊಳ್ಳುವುದನ್ನು ಸ್ಪಿನೋಜಾ ಗಮನಿಸಿದನು. ಅವರು ಇತರರಲ್ಲಿ ಚಿಕ್ಕ ಪುಟ್ಟ ಪಾಪಗಳನ್ನು ಗುರುತಿಸುತ್ತಾರೆ ಆದರೆ ತಮ್ಮದೇ ಜೀವನದಲ್ಲಿ ತಾವೇ ಆಚರಿಸುವ ಗಂಭೀರದೋಷಗಳನ್ನು ನಿರ್ಲಕ್ಷಿಸುತ್ತಾರೆ. ಅವರು ಕ್ಷಮೆಯ ಬಗ್ಗೆ ವಚನಗಳನ್ನು ಕಂಠಪಾಠ ಮಾಡುತ್ತಾರೆ. ಆದರೆ ಕ್ಷಮಿಸಲು ಅವರಿಂದ ಸಾಧ್ಯವಿಲ್ಲ. ಅವರು ನೆರೆಯವರಿಗೆ ಪ್ರೀತಿಯನ್ನು ಬೋಧಿಸುತ್ತಾರೆ ಆದರೆ ಅದೇ ಕಾಲಕ್ಕೆ ಭಿನ್ನಮತೀಯರ ವಿರುದ್ಧ ವಿಷವನ್ನು ಹರಡುತ್ತಾರೆ. ಈ ಕುರುಡುತನ ಆಕಸ್ಮಿಕವಲ್ಲ. ಇದು ಸ್ವರಕ್ಷಣಾತ್ಮಕವಾಗಿದೆ. ಈ ಮತಾಂಧರು ತಮ್ಮಲ್ಲಿ ಹುದುಗಿರುವ, ಆದರೆ ನೋಡಲು ನಿರಾಕರಿಸುವ, ಕೆಟ್ಟದ್ದನ್ನು ಇತರರ ಮೇಲೆ ಪ್ರಕ್ಷೇಪಿಸುತ್ತಾರೆ.
ತಮ್ಮ ಆಂತರಿಕ ರಾಕ್ಷಸರನ್ನು ಎದುರಿಸುವುದನ್ನು ತಪ್ಪಿಸಲು ಮತಾಂಧರಿಗೆ ಬಾಹ್ಯ ಶತ್ರುಗಳ ಅಗತ್ಯವಿದೆ. ಅವರ ವರ್ತನೆಯಲ್ಲಿ ಧರ್ಮವು ದೈವಿಕತೆಗೆ ಸೇತುವೆಯಲ್ಲ ತಮ್ಮ ಅಹಂಕಾರವನ್ನು ಕಾಪಾಡುವ ಗುರಾಣಿಯಾಗುತ್ತದೆ .
ಇಲ್ಲಿ ಸ್ಪಿನೋಜಾನ ಅತ್ಯಂತ ಧೈರ್ಯಶಾಲಿ ವಿಚಾರಗಳಲ್ಲಿ ಒಂದು ಅಡಗಿದೆ :
“ಸಾಮಾನ್ಯವಾಗಿ ಇತರ ಧರ್ಮಗಳು ಅಥವಾ ತತ್ವಶಾಸ್ತ್ರಗಳ ಮೇಲೆ ಹೆಚ್ಚು ದಾಳಿ ಮಾಡುವವರು ಸ್ವತಃ ಅತ್ಯಂತ ಕಡಿಮೆ ನಿಜವಾದ ನಂಬಿಕೆಯನ್ನು ಹೊಂದಿರುವವರು.”
ನಿಜವಾದ ನಂಬಿಕೆಯು ತನ್ನನ್ನು ತಾನು ಮೌಲ್ಯೀಕರಿಸಿಕೊಳ್ಳಲು ಇತರ ನಂಬಿಕೆಗಳನ್ನು ನಾಶಮಾಡುವ ಅಗತ್ಯವಿಲ್ಲ. ವೈವಿಧ್ಯತೆಯೊಂದಿಗೆ ಬದುಕಲು, ವಿಭಿನ್ನ ದೃಷ್ಟಿಕೋನಗಳಿಂದ ಕಲಿಯಲು ಮತ್ತು ಗೌರವಾನ್ವಿತ ಸಂಭಾಷಣೆಯ ಮೂಲಕ ಬೆಳೆಯಲು ಅದು ಸಾಕಷ್ಟು ಬಲಶಾಲಿಯಾಗಿದೆ. ಮತಾಂಧರು, ಇದಕ್ಕೆ ವಿರುದ್ಧವಾಗಿ, ಏನೋ ಒಂದು ಪವಿತ್ರ ಯುದ್ಧದ ನಿರಂತರ ಸ್ಥಿತಿಯಲ್ಲಿ ವಾಸಿಸುತ್ತಾರೆ. ತಮ್ಮ ವಿಶ್ವಾಸದ ಬಗ್ಗೆ ಅವರಿಗೆ ಯಾವುದೇ ಪ್ರಶ್ನೆಯು ದೇವದೂಷಣೆಯಾಗಿದೆ, ಯಾವುದೇ ವ್ಯತ್ಯಾಸದ ಸೂಚನೆ ಬೆದರಿಕೆ ಅನಿಸುತ್ತದೆ, ಭಿನ್ನ ನಂಬಿಕೆ ವ್ಯವಸ್ಥೆಗಳ ಜೊತೆಗೆ ಯಾವುದೇ ಸಂಭಾಷಣೆ ವಿಶ್ವಾಸಘಾತಕತನವಾಗುತ್ತದೆ. ಅವರು ದೇವರನ್ನು ಪ್ರೀತಿಯ ತಂದೆಯಲ್ಲ, ಯುದ್ಧದ ಸೇನಾಧಿಪತಿ ಆಗಿ ಪರಿವರ್ತಿಸುತ್ತಾರೆ. ಸ್ಪಿನೋಜಗೆ, ಇದು ಆಧ್ಯಾತ್ಮಿಕ ಮೌಲ್ಯಗಳ ವಿರುದ್ಧದ ದೊಡ್ಡ ದ್ರೋಹವಾಗಿತ್ತು.
ದೈನಿಕ ಜೀವನದಲ್ಲಿ ನಾವೆಲ್ಲಾ ಅನುಭವಿಸುವ ಉದಾಹರಣೆಗಳನ್ನು ಪರಿಗಣಿಸೋಣ. (ಇಂಟರ್ನೆಟ್ ಸಾಮಾಜಿಕ ಮಾಧ್ಯಮವೂ ಇದರಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚಾಗಿ ಸೇರಿಕೊಳ್ಳುತ್ತಿದೆ.) ಧಾರ್ಮಿಕ ಜನರು ತಮ್ಮದೇ ಆದ ಸಂಪ್ರದಾಯಗಳಿಗೆ ವಿರುದ್ಧವಾದ ನಿಲುವುಗಳನ್ನು ಮೆಚ್ಚುವದನ್ನು ಅಥವಾ ತಮ್ಮದಲ್ಲದ ಧರ್ಮದ ಪ್ರೀತಿ ಮತ್ತು ಕರುಣೆಯ ಬೋಧನೆಗಳನ್ನು ಸಮರ್ಥಿಸಿಕೊಳ್ಳುವುದನ್ನು , ನೀವು ಎಷ್ಟು ಬಾರಿ ನೋಡಿದ್ದೀರಿ?
ಪೂರ್ವಾಗ್ರಹವನ್ನು ಸಮರ್ಥಿಸಲು ಬೈಬಲ್ ಮತ್ತಿತರ ಧರ್ಮ ಗ್ರಂಥಗಳನ್ನು ಬಳಸುವವರು, ದ್ವೇಷವನ್ನು ಹರಡಲು ಪ್ರವಚನ ವೇದಿಕೆಯನ್ನು ಬಳಸುವವರು ಮತ್ತು ದೇವಾಲಯಗಳನ್ನು ಅಸಹಿಷ್ಣುತೆಯ ಕೇಂದ್ರಗಳಾಗಿ ಬಳಸುವವರು - ಸ್ಪಿನೋಜ ಅಂತಹ ಜನರನ್ನು ನಿಜವಾದ ಧಾರ್ಮಿಕರಲ್ಲ ಬದಲಾಗಿ ಮೂಢನಂಬಿಕೆಯವರು ಎಂದು ಕರೆಯುತ್ತಾನೆ . ಅವರು ಪೂಜ್ಯ ಚಿಹ್ನೆಗಳ ಹಿಂದೆ ಅಪವಿತ್ರ ಉದ್ದೇಶಗಳನ್ನು ಮರೆಮಾಡುತ್ತಾರೆ. ಅವರು ಧರ್ಮವನ್ನು ತಮ್ಮ ಭಯ ಮತ್ತು ಅಭದ್ರತೆಗಳನ್ನು ಬಚ್ಚಿಡುವ ಮುಖವಾಡವಾಗಿ ಪರಿವರ್ತಿಸಿದ್ದಾರೆ.
ಮತ್ತೊಂದೆಡೆ, ಸ್ಪಿನೋಜಾ ಯಾವುದೇ ಔಪಚಾರಿಕ ಧಾರ್ಮಿಕತೆಗಳಿಲ್ಲದ ಆದರೆ ಅತ್ಯುನ್ನತ ಆಧ್ಯಾತ್ಮಿಕ ತತ್ವಗಳ ಪ್ರಕಾರ ಬದುಕುವ ವ್ಯಕ್ತಿಗಳನ್ನು ಕಂಡುಕೊಂಡನು . ಇವರ ವಿಶಿಷ್ಟ ಲಕ್ಷಣವೆಂದರೆ ಇವರು ಸ್ವರ್ಗೀಯ ಪ್ರತಿಫಲವನ್ನು ಬಯಸದೆ ದಾನ ಮಾಡಿದವರು, ಸಿದ್ಧಾಂತಗಳ ಹಿಂದೆ ಅಡಗಿಕೊಳ್ಳದೆ ಸತ್ಯವನ್ನು ಹುಡುಕಿದವರು, ಅನುಸರಿಸಿದವರು, ದೈವಾಜ್ಞೆಗಳ ಅಗತ್ಯವಿಲ್ಲದೆ ಎಲ್ಲರನ್ನೂ ಘನತೆಯಿಂದ ನಡೆಸಿಕೊಂಡವರು. ಸ್ಪಿನೋಜಾನ ದೃಷ್ಟಿಯಲ್ಲಿ ಈ ಆತ್ಮಗಳು ದೇವಾಲಯಗಳಿಗೆ ಹೋಗುವ ಅನೇಕರಿಗಿಂತ ದೇವರಿಗೆ ಹತ್ತಿರವಾಗಿದ್ದವು. ಇತರರು ಸಿದ್ಧಾಂತದಲ್ಲಿ ಮಾತ್ರ ತಾತ್ವಿಕವಾಗಿ ಬೋಧಿಸಿದ್ದನ್ನೇ ಅವರು ಆಚರಣೆಯಲ್ಲಿ ಸಾಕಾರಗೊಳಿಸಿದರು. ಅವರು ಸಂಘಟಿತ ಧರ್ಮದೊಂದಿಗೆ ಸಂಬಂಧ ಹೊಂದಿಲ್ಲವಾದರೂ ಆಳವಾದ ಅರ್ಥದಲ್ಲಿ ಧಾರ್ಮಿಕರಾಗಿದ್ದರು
ಈ ಒಳನೋಟವು ಸ್ಪಿನೋಜಾನನ್ನು ಗೊಂದಲದ ತೀರ್ಮಾನಕ್ಕೆ ಕರೆದೊಯ್ಯಿತು. ಆಧ್ಯಾತ್ಮಿಕ ಸಮಾಜಕ್ಕೆ ನಿಜವಾದ ದೊಡ್ಡ ತಡೆಗೋಡೆ ಧರ್ಮದ ಕೊರತೆಯಲ್ಲ, ಬದಲಾಗಿ ಅತಿಯಾದ ಧಾರ್ಮಿಕ ಮತಾಂಧತೆಯಾಗಿರಬಹುದು. ಬಹುಶಃ ದೇವರ ಕಡೆಗೆ ಹೋಗುವ ಮಾರ್ಗವು ಸೈದ್ಧಾಂತಿಕ ಸಾಂಪ್ರದಾಯಿಕತೆಗಿಂತ ಹೃದಯದ ಪ್ರಾಮಾಣಿಕತೆಯಲ್ಲಿದೆ..
ಧಾರ್ಮಿಕ ಸ್ವಾತಂತ್ರ್ಯವಿರುವ ಸಮಾಜಗಳು ಮತಾಂಧರು ಆಳುವ ಸಮಾಜಗಳಿಗಿಂತ ಹೆಚ್ಚು ಶಾಂತಿಯುತ ಮತ್ತು ಸಮೃದ್ಧವಾಗಿರುತ್ತವೆ ಎಂದು ಸ್ಪಿನೋಜ ಗಮನಿಸಿದ. ಸಹಿಷ್ಣುತೆ ಬೆಳೆದ ಕಡೆ, ಕಲೆ, ವಿಜ್ಞಾನ ಮತ್ತು ತತ್ವಶಾಸ್ತ್ರಗಳು ಪ್ರವರ್ಧಮಾನಕ್ಕೆ ಬಂದವು . ಇದಕ್ಕೆ ವಿರುದ್ಧ್ಯವಾಗಿ ಧಾರ್ಮಿಕ ಅಸಹಿಷ್ಣುತೆ ಮೇಲುಗೈ ಸಾಧಿಸಿದ ಕಡೆ, ಅಜ್ಞಾನ, ಬಡತನ ಮತ್ತು ಹಿಂಸೆ ಆಳ್ವಿಕೆ ನಡೆಸಿದವು. . ಇದು ಆಕಸ್ಮಿಕವಲ್ಲ. ಮತಾಂಧತೆ ಕುತೂಹಲವನ್ನು ಕೊಲ್ಲುತ್ತದೆ. ಆದರೆ ಕುತೂಹಲವಿಲ್ಲದೆ ಯಾವುದೇ ಪ್ರಗತಿಯಿಲ್ಲ. ಮತಾಂಧರು ಎಲ್ಲಾ ಉತ್ತರಗಳನ್ನು ಹೊಂದಿದ್ದೇವೆಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ಪ್ರಶ್ನೆಗಳನ್ನು ಏಕೆ ಕೇಳಬೇಕು? ಅವರು ಎಲ್ಲಾ ಸತ್ಯವನ್ನು ತಿಳಿದಿದ್ದೇವೆಂದು ಬೆನ್ನು ತಟ್ಟಿಕೊಳ್ಳುತ್ತಾರೆ. ಹಾಗಾದರೆ ಜ್ಞಾನವನ್ನು ಏಕೆ ಹುಡುಕಬೇಕು? ಈ ಬೌದ್ಧಿಕ ದುರಹಂಕಾರದ ಪರಿಣಾಮವಾಗಿ ವ್ಯಕ್ತಿ ಮಾತ್ರವಲ್ಲದೆ ಇಡೀ ಸಮುದಾಯಗಳು ದುರ್ಬಲಗೊಳ್ಳುವವು, ಬಡತನಕ್ಕೆ ಬೀಳುವವು.
ನಿಜವಾದ ಧಾರ್ಮಿಕತೆಯು ಹುಡುಕಾಟವನ್ನು ಪ್ರೋತ್ಸಾಹಿಸಬೇಕು, ಅದನ್ನು ನಿಗ್ರಹಿಸಬಾರದು ಎಂದು ಸ್ಪಿನೋಜಾ ವಾದಿಸಿದನು . ಅದು ಮನಸ್ಸುಗಳನ್ನು ತೆರೆಯಬೇಕು, ಅವುಗಳನ್ನು ಮುಚ್ಚಬಾರದು. ಅದು ಜನರನ್ನು ವಿಭಜಿಸಬಾರದು, ಒಗ್ಗೂಡಿಸಬೇಕು. ಬದುಕುಳಿಯಲು ಮೌಢ್ಯವನ್ನು ಅವಲಂಬಿಸುವ ದೈವ ನಂಬಿಕೆಯ ವ್ಯವಸ್ಥೆಯು ‘ಧರ್ಮ’ ಎಂಬ ಹೆಸರಿಗೆ ಅರ್ಹವಲ್ಲ ಎಂದು ಅವನು ಹೇಳಿದನು. ಇಲ್ಲಿ ನಾವು ದೇವರ ಸ್ವಭಾವದ, ಸ್ವರೂಪದ ಬಗ್ಗೆ ಸ್ಪಿನೋಜಾ ಹೊಂದಿದ್ದ ಅತ್ಯಂತ ಕ್ರಾಂತಿಕಾರಿ ವಿಚಾರಗಳಲ್ಲಿ ಒಂದನ್ನು ತಲುಪುತ್ತೇವೆ.
ಸ್ಪಿನೋಜಾ ದೇವರನ್ನು ಸ್ವರ್ಗದಲ್ಲಿ ಆಸೀನನಾಗಿದ್ದು ಪೂಜೆಯನ್ನು ಹಕ್ಕೊತ್ತಾಯ ಮಾಡುವ ಮತ್ತು ಭಿನ್ನಾಭಿಪ್ರಾಯವನ್ನು ಶಿಕ್ಷಿಸುವ ಕ್ರೂರ ಸರ್ವಾಧಿಕಾರಿ ಸಾಕಾರತೆಯಾಗಿ ನೋಡಲಿಲ್ಲ. ದೇವರು ಸ್ವತಃ ವಾಸ್ತವ, ಸತ್ಯ. ದೇವರು ವಿಶ್ವವನ್ನು ಚಲಿಸುವ ಶಕ್ತಿ, ನೈಸರ್ಗಿಕ ನಿಯಮಗಳ ಹಿಂದಿನ ಬುದ್ಧಿವಂತಿಕೆ. ದೇವರನ್ನು ತಿಳಿದುಕೊಳ್ಳುವುದು ಎಂದರೆ ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವುದು, ಅಸ್ತಿತ್ವವನ್ನು ನಿಯಂತ್ರಿಸುವ ನಿಯಮಗಳನ್ನು ಗ್ರಹಿಸುವುದು. ಈ ದೃಷ್ಟಿಕೋನವು ದೇವರನ್ನು ಇತರರ ವಿರುದ್ಧ ಆಯುಧವಾಗಿ ಬಳಸುವುದನ್ನು ಅಸಾಧ್ಯವಾಗಿಸಿತು. ಮಾನವರೆಲ್ಲರರೂ ದೈವತ್ವದ ಅಭಿವ್ಯಕ್ತಿಯಾಗಿದ್ದ ದೇವರ ಹೆಸರಿನಲ್ಲಿ ಯಾರನ್ನಾದರೂ ದ್ವೇಷಿಸಲು ಹೇಗೆ ಸಾಧ್ಯ ?
ಹಾಗೆಯೇ ಪ್ರಕೃತಿಯೆಲ್ಲವೂ ದೇವರನ್ನು ಬಹಿರಂಗಪಡಿಸಿದರೆ, ದೇವರ ಹೆಸರಿನಲ್ಲಿ ಪ್ರಕೃತಿಯನ್ನು ಹೇಗೆ ನಾಶಮಾಡಬಹುದು? ವಿವೇಚನೆಯು ದೇವರ ಅತ್ಯುತ್ತಮ ಕೊಡುಗೆಗಳಲ್ಲಿ ಒಂದಾಗಿದ್ದರೆ, ವಿವೇಚನೆಯನ್ನು ಹೇಗೆ ದೇವರ ಹೆಸರಿನಲ್ಲಿ ತಿರಸ್ಕರಿಸಬಹುದು? ದೇವರನ್ನು ಮಾನವರೂಪಿಕರಣಗೊಳಿಸುವುದು, ದೈವಿಕತೆಯನ್ನು ತಮ್ಮದೇ ಆದ ಮಾನವ ಮಿತಿಗಳ ವರ್ಧಿತ ಆವೃತ್ತಿಯಾಗಿ ಪರಿವರ್ತಿಸುವುದು ಎಂಬ ಮೂಲಭೂತ ತಪ್ಪನ್ನು ಮಾಡುತ್ತಾರೆ ಮತಾಂಧರು . ಇದರ ಪರಿಣಾಮವಾಗಿ ಇವರ ಕಲ್ಪನೆಯ ದೇವರು ಮಾನವ ಕುಲ-ಬಣಗಳಂತೆ ಸೇಡಿನ, ಕ್ಷುಲ್ಲಕ, ಮೂರ್ತೀಕರಣವಾಗಿದ್ದು ಧರ್ಮಾಚರಣೆಗಳು, ಸಂಪ್ರದಾಯಗಳು ಮತ್ತು ಸಿದ್ಧಾಂತಗಳ ಗೀಳನ್ನು ಹೊಂದುತ್ತಾನೆ. ಇದರಿಂದಾಗಿ ನಿಜವಾದ ದೈವತ್ವದ ಶ್ರೇಷ್ಠತೆ, ಸಾರ್ವತ್ರಿಕತೆ ಮತ್ತು ಅನಂತ ಕರುಣೆ ಇವೆಲ್ಲ ಕಳೆದುಹೋಗುತ್ತದೆ.
ಧಾರ್ಮಿಕ ಮತಾಂಧತೆಯು ಇತರರಿಗೆ ಮಾತ್ರವಲ್ಲ, ಸ್ವತಃ ಮತಾಂಧರಿಗೂ ಹಾನಿ ಮಾಡುತ್ತದೆ ಎಂದು ಸೂಚಿಸುತ್ತಾನೆ ಸ್ಪಿನೋಜ. ನಿರಂತರ ವಿಮರ್ಶನಾತ್ಮಕ ಮತ್ತು ಖಂಡನೆಯ ಸ್ಥಿತಿಯಲ್ಲಿ ಬದುಕುವ ಮತಾಂಧನು ಆಧ್ಯಾತ್ಮಿಕ ಜೀವನದಿಂದ ಸ್ವಾಭಾವಿಕವಾಗಿ ಹರಿಯಬೇಕಾದ ಸಂತೋಷ ಮತ್ತು ಶಾಂತಿಯನ್ನು ಅನುಭವಿಸಲು ಸಾಧ್ಯವಾಗದೆ ಕಹಿ, ಅರುಚಿ, ಆತಂಕಕ್ಕೊಳಗಾಗುತ್ತಾನೆ. ಸಾಮಾನ್ಯವಾಗಿ ಮತಾಂಧನೇ ಸಮುದಾಯದಲ್ಲಿ ಅತ್ಯಂತ ಅತೃಪ್ತ ಅಸಂತುಷ್ಟ ವ್ಯಕ್ತಿಯಾಗಿರುತ್ತಾನೆ ತರ್ಕಬಾಹಿರ ಭಯಗಳಿಂದ ಪೀಡಿಸಲ್ಪಟ್ಟು ಇತರರ ಪಾಪಗಳ ಸೆಳೆತಕ್ಕೊಳಗಾಗಿ ಜೀವನದ ಸರಳ ದೈವಾನುಗ್ರಹಗಳನ್ನು ಆನಂದಿಸಲು ಅಸಮರ್ಥರಾಗಿದ್ದಾರೆ. ಅವರು ದೈವ ನಂಬಿಕೆಯನ್ನು ವಿಮೋಚನೆಗಿಂತ ಹೆಚ್ಚಾಗಿ ಒಂದು ಸೆರೆಮನೆಯನ್ನಾಗಿ ಮಾಡಿದ್ದಾರೆ.
ಇದನ್ನು ನಿಜವಾದ ಆಧ್ಯಾತ್ಮಿಕತೆಯನ್ನು ಬದುಕುವವರೊಂದಿಗೆ ಹೋಲಿಸಿ. ಅವರು ಶಾಂತಿಯನ್ನು ಹೊರಸೂಸುತ್ತಾರೆ, ನಿಜವಾದ ಸಹಾನುಭೂತಿಯನ್ನು ತೋರಿಸುತ್ತಾರೆ, ದೈನಂದಿನ ಜೀವನದಲ್ಲಿ ಪವಿತ್ರತೆಯನ್ನು ಕಂಡುಕೊಳ್ಳುತ್ತಾರೆ. ಅವರು ತಮ್ಮ ವಿಶೇಷತೆಯನ್ನು ಸಾಬೀತುಪಡಿಸಲು ಇತರರನ್ನು ಖಂಡಿಸುವುದಿಲ್ಲ , ಬಹಿರಂಗ, .ಸಾರ್ವಜನಿಕ ಧಾರ್ಮಿಕತೆಯ ಪ್ರದರ್ಶನದ ಮೂಲಕ ತಮ್ಮ ನೈತಿಕ ಶ್ರೇಷ್ಠತೆಯನ್ನು ಋಜುವಾತು ಮಾಡುವದಿಲ್ಲ.
ಸ್ಪಿನೋಜಾ ಗುರುತಿಸಿದನು:
"ನಿಜವಾದ ಆಧ್ಯಾತ್ಮಿಕತೆಯು ಯಾವಾಗಲೂ ವಿಮೋಚನಾತ್ಮಕ, ಎಂದಿಗೂ ದಬ್ಬಾಳಿಕೆಯಲ್ಲ. ಇದು ಪ್ರೀತಿಸುವ, ಅರ್ಥಮಾಡಿಕೊಳ್ಳುವ ಮತ್ತು ಕ್ಷಮಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅದು ನಮ್ಮನ್ನು ಹೆಚ್ಚು ಮಾನವೀಯಗೊಳಿಸುತ್ತದೆ, ಕಡಿಮೆ ಅಲ್ಲ. ಅದು ನಮ್ಮನ್ನು ಎಲ್ಲಾ ಸೃಷ್ಟಿಯೊಂದಿಗೆ ಸಂಪರ್ಕಿಸುತ್ತದೆ, ನಮ್ಮನ್ನು ಪ್ರತ್ಯೇಕಿಸುವುದಿಲ್ಲ.”
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ