ಸ್ಪಿನೋಜಾ : ಧರ್ಮ, ನಾಸ್ತಿಕತೆ, ಮತಾಂಧತೆ (ಭಾಗ ೨)
ಮತಾಂಧತೆ ಇಷ್ಟೊಂದು ವಿನಾಶಕಾರಿಯಾಗಿದ್ದರೆ, ಅದು ಏಕೆ ಸಾಮಾನ್ಯವಾಗಿದೆ ಎಂದು ನಾವು ಆಶ್ಚರ್ಯಪಡಬಹುದು. ಅನೇಕರು ಈ ಮಾರ್ಗವನ್ನು ಏಕೆ ಆರಿಸಿಕೊಳ್ಳುತ್ತಾರೆ? ಸ್ಪಿನೋಜಾ ನೀಡುವ ಉತ್ತರ: ಮತಾಂಧತೆಯು ಆಕರ್ಷಕವಾದ ಪ್ರಲೋಭವನ್ನು ನೀಡುತ್ತದೆ. ಅನಿಶ್ಚಿತತೆಯ ಕಾಲದಲ್ಲಿ ಸಂಪೂರ್ಣ ಖಚಿತತೆ. ಸಂಕೀರ್ಣ, ಗೊಂದಲಮಯ ಜಗತ್ತಿನಲ್ಲಿ, ಮತಾಂಧನಿಂದ ಎಲ್ಲಾ ಪ್ರಶ್ನೆಗಳಿಗೆ ಸರಳ ಉತ್ತರಗಳ ಭರವಸೆ , ಪ್ರತ್ಯೇಕತೆಯ ಬಲವಾದ ಗುರುತು, ನೈತಿಕ ಶ್ರೇಷ್ಠತೆಯ ಭಾವನೆ (ಭ್ರಮೆ ?). ಇದು ಮಾದಕ ವ್ಯಸನದಂತಿದೆ ಏಕೆಂದರೆ ಇದು ತಾತ್ಕಾಲಿಕವಾಗಿ ಅಸ್ತಿತ್ವವಾದದ ವೇದನೆಯನ್ನು ನಿವಾರಿಸುತ್ತದೆ ಆದರೆ ಆಳವಾದ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ವಾಸ್ತವವಾಗಿ, ಇದು ಮತಾಂಧರಾದವರನ್ನು ಹದಗೆಡಿಸುತ್ತದೆ. ಮತಾಂಧನು ದುರಹಂಕಾರದ ಮೇಲೆ ಅವಲಂಬಿತನಾಗುತ್ತಾನೆ, ಅದರಿಂದಾಗಿ ಬೆಳೆಯಲು, ಕಲಿಯಲು ಅಥವಾ ವಿಕಸನಗೊಳ್ಳಲು ಅವನಿಂದ ಸಾಧ್ಯವಾಗುವುದಿಲ್ಲ.
ಸ್ಪಿನೋಜಾ ಮತಾಂಧತೆ ಮತ್ತು ಸಹಿಷ್ಣುತೆಯ ನಡುವಿನ ಸಮಾಜದ ಪರ್ಯಾಯಗಳ ಚಕ್ರವನ್ನು ಗಮನಿಸುತ್ತಾನೆ. ಬಿಕ್ಕಟ್ಟು, ಭಯ ಮತ್ತು ಅನಿಶ್ಚಿತತೆಗಳ ಕ್ಷಣಗಳಲ್ಲಿ ಜನರು ಮತಾಂಧ ಸಂದೇಶಗಳಿಗೆ ಹೆಚ್ಚು ಭೇದ್ಯರಾಗುತ್ತಾರೆ. ಜನರಿಗೆ ಬೇಕಾಗಿರುವದು ಬಲಿಪಶುಗಳು , ಸರಳ ಪರಿಹಾರಗಳ ಭರವಸೆ ನೀಡುವ ನಾಯಕರು, ಸಲೀಸಾಗಿ ಗುರುತಿಸಲಾದ ಶತ್ರುಗಳ ಮೂಲಕ ದುಷ್ಟವಾದದ್ದನ್ನೆಲ್ಲ ಸರಳ ಪರಿಕಲ್ಪನೆಗಳಲ್ಲಿ ವಿವರಿಸುವ ಸಿದ್ಧಾಂತಗಳ ಸರಮಾಲೆಗಳನ್ನು ಪೋಣಿಸುವ ಬುದ್ಧಿವಾದಿಗಳು. ಆದರೂ ಮತಾಂಧತೆಯ ಪ್ರಾಬಲ್ಯದ ಈ ಅವಧಿಗಳು ಎಂದಿಗೂ ಶಾಶ್ವತವಾಗಿ ಉಳಿಯುವುದಿಲ್ಲ. ಅಂತಿಮವಾಗಿ, ಸಮಾಜವು ಮತಾಂಧತೆಯ ಅತಿಯಾದ ವೆಚ್ಚದ ಹೊರೆಯನ್ನು ಅರಿತುಕೊಳ್ಳುತ್ತದೆ. ಮತಾಂಧತೆ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಅದು ಅವುಗಳನ್ನು ಗುಣಿಸುತ್ತದೆ. ಇದು ಶಾಂತಿಯನ್ನು ತರುವುದಿಲ್ಲ. ಇದು ಸಂಘರ್ಷವನ್ನು ಹುಟ್ಟುಹಾಕುತ್ತದೆ. ಇದು ಮಾನವೀಯತೆಯನ್ನು ಹೆಚ್ಚಿಸುವುದಿಲ್ಲ, ಆದರೆ ಅದನ್ನು ಕೆಳಮಟ್ಟಕ್ಕಿಳಿಸುತ್ತದೆ.
ಜಾಗೃತಿಯ ಈ ಕ್ಷಣಗಳಲ್ಲಿ, ಸ್ಪಿನೋಜನ ಕಲ್ಪನೆಗಳು ಪ್ರಸ್ತುತತೆಯನ್ನು ಪಡೆಯುತ್ತವೆ. ಮತಾಂಧತೆಗೆ ಬೀಳದೆ ವಿಶ್ವಾಸವನ್ನು ಇರಿಸಿಕೊಳ್ಳಲು ಸ್ಪಿನೋಜ ಪರ್ಯಾಯ ಮಾರ್ಗವನ್ನು ಸೂಚಿಸುತ್ತಾನೆ - ವೈಚಾರಿಕತೆಯನ್ನು ತ್ಯಜಿಸದೇ ಪವಿತ್ರವಾದದ್ದನ್ನು ಹುಡುಕುವುದು, ಇತರರನ್ನು ಹೊರಗಿಡದೆಯೇ ತಮ್ಮ ಸಮುದಾಯಕ್ಕೆ ನಿಷ್ಠಾವಂತರಾಗಿರುವದು. ಈ ದಾರಿ ಸುಲಭವಲ್ಲ. ಇದು ಭಾವನಾತ್ಮಕ ಪ್ರಬುದ್ಧತೆ, ಬೌದ್ಧಿಕ ಪ್ರಾಮಾಣಿಕತೆ, ಅತಿ ಆತ್ಮೀಯವಾದ ನಂಬಿಕೆಗಳನ್ನು ಸಹ ಪ್ರಶ್ನಿಸುವ ಧೈರ್ಯಗಳನ್ನು ಬಯಸುತ್ತದೆ. ಈ ಮಾರ್ಗದಲ್ಲಿ ಸಂಪೂರ್ಣ ನಿಶ್ಚಿತತೆಯ ಸೌಕರ್ಯವನ್ನು ತ್ಯಜಿಸಿ ನಿರಂತರ ಹುಡುಕಾಟದ ಸವಾಲಿನ ಪ್ರಯಾಣವನ್ನು ಅಂಗೀಕರಿಸುವ ಅಗತ್ಯವಿದೆ. ಆದರೆ ಈ ಮಾರ್ಗದ ಪ್ರತಿಫಲಗಳು ಅಸಾಧಾರಣ. ಅದರಂತೆ ನಡೆಯುವವರಲ್ಲಿ ಅಚಲವಾದ ಆಂತರಿಕ ಶಾಂತಿ, ಕೃತಕ ವಿಭಜನೆಗಳನ್ನು ಮೀರಿ ಕರುಣೆ, ನಿರಂತರವಾಗಿ ಆಳವಾಗುತ್ತಿರುವ ಬುದ್ಧಿವಂತಿಕೆಗಳು ಬೆಳೆಯುತ್ತವೆ. ಸಿದ್ಧಾಂತದ ಮೂಲಕ ಅಲ್ಲ, ಆದರೆ ಎಲ್ಲಾ ಅಸ್ತಿತ್ವದೊಂದಿಗಿನ ಸಂಪರ್ಕದ ನೇರ ಅನುಭವದ ಮೂಲಕ ದೇವರನ್ನು ಅವರು ಕಂಡುಕೊಳ್ಳುತ್ತಾರೆ
ಸ್ಪಿನೋಜಾ ಪ್ರತಿಪಾದಿಸುವ ಧಾರ್ಮಿಕ ತತ್ವಶಾಸ್ತ್ರದ ಮೂಲ ಕಲ್ಪನೆ ಮತ್ತು ನಂಬಿಕೆ ಹೀಗಿದೆ:
“ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಸ್ವಂತ ಪ್ರಜ್ಞೆಯ ಮೂಲಕ ದೈವಿಕತೆಗೆ ನೇರ ಪ್ರವೇಶವಿದೆ .”
ನಾವು ಏನು ಯೋಚಿಸಬೇಕು ಅಥವಾ ನಮಗೆ ಯಾವ ಭಾವನೆಗಳು ಇರಬೇಕು ಎಂದು ಹೇಳಿಕೊಡುವ ಮಧ್ಯವರ್ತಿಗಳ ಅವಶ್ಯಕತೆ ನಮಗೆ ಇಲ್ಲ. ನಿಷ್ಕಪಟತೆ, ವೈಯಕ್ತಿಕ ಅನುಭವ ಮತ್ತು ಸತ್ಯಕ್ಕಾಗಿ ಪ್ರಾಮಾಣಿಕ ಹುಡುಕಾಟದ ಆಧಾರದ ಮೇಲೆ ಯಾವದು ಪವಿತ್ರವೋ ಅದರೊಂದಿಗೆ ನಮ್ಮದೇ ಆದ ಸಂಬಂಧವನ್ನು ನಿರ್ಮಿಸಬಹುದು. ಇದರರ್ಥ ಧಾರ್ಮಿಕತೆಯ ಸಂಪ್ರದಾಯಗಳು ಅಥವಾ ವಿಶ್ವಾಸಿಗಳ ಸಮುದಾಯಗಳನ್ನು ತಿರಸ್ಕರಿಸುವದು ಎಂದಲ್ಲ. ಇದರರ್ಥ ವಿವೇಚನೆಯಿಂದ ಅವರನ್ನು ಸಮೀಪಿಸುವುದು, ಯಾವುದು ಆಧ್ಯಾತ್ಮಿಕ ಬೆಳವಣಿಗೆಯನ್ನು ಪೋಷಿಸುತ್ತದೆಯೋ ಅದನ್ನು ತೆಗೆದುಕೊಳ್ಳುವುದು ಮತ್ತು ಯಾವುದು ಮಿತಿಗೊಳಿಸುತ್ತದೆ ಅಥವಾ ವಿಭಜಿಸುತ್ತದೆ ಅಂತಹವುಗಳನ್ನು ಪ್ರಶ್ನಿಸುವುದು. ನಿಜವಾದ ಅರ್ಥದಲ್ಲಿ ಧಾರ್ಮಿಕರಾಗಬೇಕಾದರೆ ನಾವು ದೈವಿಕತೆಯೊಂದಿಗೆ, ಇತರರೊಂದಿಗೆ ಮತ್ತು ಸ್ವತಃ ನಮ್ಮೊಂದಿಗೆ ಕೂಡ ಮರು-ಸಂಪರ್ಕ ಸಾಧಿಸುವುದು ಸೇರುತ್ತವೆ. .
ಈ ದೃಷ್ಟಿಕೋನವು ಮತಾಂಧರು ಮತ್ತು ಉಗ್ರಗಾಮಿ ನಾಸ್ತಿಕರು ಇಬ್ಬರನ್ನೂ ಅಸಮಾಧಾನಗೊಳಿಸುತ್ತದೆ, ಅವರ ತಲೆಕೆಡಿಸುತ್ತದೆ ಎಂದು ಸ್ಪಿನೋಜಾಗೆ ತಿಳಿದಿತ್ತು.
ಮತಾಂಧರು: ಏಕೆಂದರೆ ಅದು ಸತ್ಯದ ಬಗ್ಗೆ ಅವರ ವಿಶೇಷ ಹಕ್ಕುಗಳನ್ನು ಪ್ರಶ್ನಿಸುತ್ತದೆ
ಉಗ್ರಗಾಮಿ ನಾಸ್ತಿಕರು : ಏಕೆಂದರೆ ಅದು ಆಧ್ಯಾತ್ಮಿಕತೆಯ ಅನುಭವವು ಅಕ್ಷರಶಃ ಅಥವಾ ಸಿದ್ಧಾಂತಬಧ್ದ ಅಥವಾ ಶಾಸ್ತ್ರಾಧಾರಿತವಾಗಿರದೇ ಇದ್ದರೂ ಸಹ ನೈಜ ಮತ್ತು ಮೌಲ್ಯಯುತವಾಗಿರಬಹುದು ಎಂದು ಸೂಚಿಸುತ್ತದೆ. ಆದರೆ ಬಹುಶಃ ಜಗತ್ತಿಗೆ ಬೇಕಾಗಿರುವುದು ನಿಖರವಾಗಿ ಇದೇ ಆಗಿರಬಹುದು. ಮತಾಂಧತೆಯ ಅಪಾಯಗಳು ಮತ್ತು ನಿಜವಾದ ಆಧ್ಯಾತ್ಮಿಕತೆಯ ಮೌಲ್ಯ ಎರಡನ್ನೂ ಗುರುತಿಸುವ ಮೂರನೇ ಮಾರ್ಗವನ್ನು ಸ್ಪಿನೋಜ ಸೂಚಿಸುತ್ತಾನೆ. ಏಕಕಾಲಕ್ಕೆ ಇದು ತಾರ್ಕಿಕತೆ ಮತ್ತು ಅಂತಃಪ್ರಜ್ಞೆ, ವಿಜ್ಞಾನ ಮತ್ತು ಅತೀಂದ್ರಿಯ ಅನುಭವ, ವ್ಯಕ್ತಿಯ ಪ್ರತ್ಯೇಕತೆಯೊಟ್ಟಿಗೇ ಸಮುದಾಯವನ್ನು ಗೌರವಿಸುವ ಒಂದು ವಿಧಾನವಾಗಿದೆ.
ಈ ಮೂರನೇ ಮಾರ್ಗವು ಹೊಸದಲ್ಲ, ಆಗಿಂದಾಗೆ ಮರೆತುಹೋಗಲಾಗುತ್ತದೆ ಅಷ್ಟೇ. . ಇತಿಹಾಸದುದ್ದಕ್ಕೂ, ನಂಬಿಕೆ ಮತ್ತು ತಾರ್ಕಿಕತೆ, ಆಧ್ಯಾತ್ಮಿಕತೆ ಮತ್ತು ಸಹಿಷ್ಣುತೆ, ಭಕ್ತಿ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಸಮನ್ವಯಗೊಳಿಸುವ ಜನರಿದ್ದಾರೆ. ಸ್ಪಿನೋಜಾ ಅವರಲ್ಲಿ ಒಬ್ಬ. ಅವನ ಸಂದೇಶವು ಇನ್ನೂ ಪ್ರಸ್ತುತವಾಗಿದೆ. ನಂಬಿಕೆಯ ನಿಜವಾದ ಶತ್ರು ಪ್ರಾಮಾಣಿಕ ಪ್ರಶ್ನಿಸುವಿಕೆಯಲ್ಲ, ಆದರೆ ಧಾರ್ಮಿಕತೆಯ ವೇಷದಲ್ಲಿರುವ ದುರಹಂಕಾರಿ ಖಚಿತತೆ.
ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಓದುಗರ ದೃಷ್ಟಿಕೋನವನ್ನು ಗಾಢವಾಗಿ ಬದಲಾಯಿಸಬಹುದಾದ ಇನ್ನೂ ಆಳವಾದ ಪದರಗಳಿವೆ ಈ ತತ್ವಶಾಸ್ತ್ರದಲ್ಲಿ. ಧಾರ್ಮಿಕ ಮತಾಂಧತೆಯು ಹೇಗೆ ಹರಡುತ್ತದೆ ಎಂಬುದನ್ನು ಸ್ಪಿನೋಜ ಗಮನಿಸಿದನು. ಮತಾಂಧರು ಹುಟ್ಟು ಮತಾಂಧರಲ್ಲ. ಭಯ ಮತ್ತು ಅಭದ್ರತೆಯನ್ನು ಪೋಷಿಸುವ ವ್ಯವಸ್ಥೆಗಳಿಂದ ಮತಾಂಧರನ್ನು ತಯಾರಿಸಲಾಗುತ್ತದೆ. ಇಲ್ಲೊಂದು ಆಘಾತಕಾರಿ ಸಂಗತಿಯಿದೆ. ಅನೇಕ ಧಾರ್ಮಿಕ ಸಂಸ್ಥೆಗಳು ಮತಾಂಧತೆಯನ್ನು ಸಹಿಸುವುದಷ್ಟೇ ಮಾತ್ರ ಅಲ್ಲ. ಈ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಅದನ್ನು ಬೆಳೆಸುತ್ತವೆ ಏಕೆ? ಏಕೆಂದರೆ ಭಯಭೀತರಾದ, ಅಸುರಕ್ಷಿತ ಜನರನ್ನು ನಿಯಂತ್ರಿಸುವುದು ಸುಲಭ. ದೈವಿಕತೆಗೆ ಬಲವಾದ ವೈಯಕ್ತಿಕ ಸಂಬಂಧವನ್ನು ಹೊಂದಿರುವ ಆತ್ಮವಿಶ್ವಾಸವುಳ್ಳ ಭಕ್ತರಿಗೆ ಧಾರ್ಮಿಕ ಮುಖಂಡರ ನಿರಂತರ ಅನುಮೋದನೆ
ಅಗತ್ಯವಿಲ್ಲ. ಈ ಭಕ್ತರು ದೇವರೊಂದಿಗೆ ಸಂಪರ್ಕ ಹೊಂದಲು ಬಾಹ್ಯ ಆಚರಣೆಗಳನ್ನು ಅವಲಂಬಿಸಿಲ್ಲ. ಅಂತಹ ಆಧ್ಯಾತ್ಮಿಕ ಸ್ವಾಯತ್ತತೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸಲು ಬಯಸುವವರ ಮೇಲೆ ಬೆದರಿಕೆ ಹಾಕುತ್ತದೆ.
ಮತಾಂಧ ನಾಯಕರು ವ್ಯವಸ್ಥಿತವಾಗಿ ಸ್ವತಂತ್ರ ಚಿಂತನೆಯನ್ನು ಕಡೆಗಣಿಸಿ ತಿರಸ್ಕರಿಸುವದನ್ನು ಕುಗ್ಗಿಸುವುದನ್ನು ಸ್ಪಿನೋಜಾ ಗಮನಿಸಿದನು. ಪ್ರಶ್ನಿಸುವುದು ಪಾಪ, ಅನುಮಾನವೇ ದ್ರೋಹ, ಸ್ವಂತವಾಗಿ ಯೋಚಿಸುವುದು ದುರಹಂಕಾರ ಎಂಬ ಭಯದ ವಾತಾವರಣವನ್ನು ಅವರು ಸೃಷ್ಟಿಸುತ್ತಾರೆ. ಅವರು ಮಾನವನ ಸಹಜ ಕುತೂಹಲವನ್ನು ಕೊಳಕು ಮತ್ತು ಅಪಾಯಕಾರಿಯಾಗಿ ಪರಿವರ್ತಿಸುತ್ತಾರೆ. ದೇವರ ಮಾರ್ಗಗಳನ್ನು ಪ್ರಶ್ನಿಸಬೇಡಿ, ವಿವೇಚನೆ ನಂಬಿಕೆಯ ಶತ್ರು, ಅಥವಾ ಹೆಚ್ಚು ಕೇಳುವವರು ದುಷ್ಟಶಕ್ತಿಗಳಿಂದ ಪ್ರಭಾವಿತರಾಗುತ್ತಾರೆ ಎಂಬಂತಹ ಮಾತುಗಳನ್ನು ನಾವಾದರೂ ಎಷ್ಟು ಬಾರಿ ಕೇಳಿದ್ದೇವೆ.
ಸ್ಪಿನೋಜಾ ಇವುಗಳನ್ನು ಆಧ್ಯಾತ್ಮಿಕ ವಿಕೃತ ಮರುರೂಪಿಸುವಿಕೆಯ ಸ್ಪಷ್ಟ ಚಿಹ್ನೆಗಳಾಗಿ ಕಂಡನು . ನಿಜವಾದ ದೇವರು ಮಾನವ ಪ್ರಶ್ನೆಗಳಿಗೆ ಹೆದರುವುದಿಲ್ಲ. ಸ್ಪಿನೋಜಾಗೆ, ಧಾರ್ಮಿಕ ಮತಾಂಧತೆಯು ಬಗೆಹರಿಯದ ನಂಬಿಕೆಯ ಬಿಕ್ಕಟ್ಟನ್ನು ಹೆಚ್ಚಾಗಿ ಸೂಚಿಸುತ್ತದೆ ಎಂಬುದು ಆಳವಾದ ಒಳನೋಟಗಳಲ್ಲಿ ಒಂದಾಗಿತ್ತು . ಮತಾಂಧರು ತಮ್ಮ ಖಚಿತತೆಗಳ ಬಗ್ಗೆ ಜೋರಾಗಿ ಕೂಗುತ್ತಾರೆ ಏಕೆಂದರೆ ಆಳದಲ್ಲಿ ಅವರು ತಮ್ಮ ಅನುಮಾನಗಳಿಗೆ ಭಯಭೀತರಾಗಿರುತ್ತಾರೆ. ಅವರ ಬಾಹ್ಯ ಆಕ್ರಮಣಶೀಲತೆಯು ಆಂತರಿಕ ಭಯವನ್ನು ಮರೆಮಾಡುತ್ತದೆ. ಮತಾಂಧರಿಗೆ ಇತರರನ್ನು ಪರಿವರ್ತಿಸಲು ಪ್ರಯತ್ನಿಸುವದೇ ಒಂದು ಗೀಳು. ತಮ್ಮ ನಂಬಿಕೆಗಳನ್ನು ಒಂಟಿಯಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲದೆ ಅವುಗಳನ್ನು ದೃಢೀಕರಿಸಲು ಅವರು ಎಲ್ಲರನ್ನು ಮತಾಂತರಗೊಳಿಸಲು ಶ್ರಮಿಸುತ್ತಾರೆ. ವಿಭಿನ್ನವಾಗಿ ಯೋಚಿಸುವ ಯಾರೇ ಆದರೂ ಅವರ ಜಗತ್ತನ್ನೇ ಅಲ್ಲಾಡಿಸುತ್ತಾರೆ, ಅವರ ದುರ್ಬಲವಾದ ಮಾನಸಿಕ ರಚನೆಗೆ ಬೆದರಿಕೆ ಹಾಕುತ್ತಾರೆ. ಸ್ಪಿನೋಜ ಇದನ್ನು ನಿಜವಾದ ನಂಬಿಕೆಯ ಜನರೊಂದಿಗೆ ಹೋಲಿಸುತ್ತಾನೆ . ದೈವಿಕತೆಯೊಂದಿಗಿನ ಅವರ ಸಂಪರ್ಕವು ಬಾಹ್ಯ ಅನುಮೋದನೆಯನ್ನು ಅವಲಂಬಿಸಿಲ್ಲದ ಕಾರಣ ಅವರು ಯಾರನ್ನೂ ಮತಾಂತರಿಸುವ ಅಗತ್ಯವಿಲ್ಲ. ಅವರ ನಂಬಿಕೆ ಸುರಕ್ಷಿತವಾಗಿರುವುದರಿಂದ ಅವರು ವಿಭಿನ್ನ ಧರ್ಮ ನಂಬಿಕೆಗಳೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸಬಹುದು.
ಸ್ಪಿನೋಜಾ ಮಾಡಿದ ಮೂಲಭೂತ ವ್ಯತ್ಯಾಸ ಇಲ್ಲಿದೆ: ಪ್ರೌಢ ನಂಬಿಕೆ ಮತ್ತು ಅದಕ್ಕೆ ಎದುರಾಗಿ ಬಾಲಿಶ ನಂಬಿಕೆ. ಬಾಲಿಶ ನಂಬಿಕೆಗೆ ಸಂಪೂರ್ಣ ಖಚಿತತೆಗಳು, ಸಿದ್ಧ ಉತ್ತರಗಳು, ಪ್ರಶ್ನಾತೀತ ತಳಹದಿಗಳು ಬೇಕಾಗುತ್ತವೆ. ಅದು ಪೋಷಕರು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಎಲ್ಲವನ್ನೂ ಸರಳವಾಗಿ ವಿವರಿಸಲು ಬಯಸುವ ಮಗುವಿನಂತೆ. ಪ್ರೌಢ ನಂಬಿಕೆಯು ನಿಗೂಢತೆಯನ್ನು ಅಳವಡಿಸಿಕೊಳ್ಳುತ್ತದೆ, ಸಂಕೀರ್ಣತೆಯನ್ನು ಸ್ವೀಕರಿಸುತ್ತದೆ ಮತ್ತು ಉತ್ತರಿಸಲಾಗದ ಪ್ರಶ್ನೆಗಳೊಂದಿಗೆ ಬದುಕುತ್ತದೆ. ಎಲ್ಲವನ್ನೂ ವಿವರಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿಳಿದಿರುವ, ಆದರೆ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಳ್ಳುವ ವಯಸ್ಕನಂತೆ.
ಅನೇಕ ಜನರು ಬಾಲಿಶ ನಂಬಿಕೆಯಲ್ಲಿ ಸಿಲುಕಿಕೊಂಡಿರಲು ಕಾರಣ ಏನೆಂದರೆ ಅವರ ಧಾರ್ಮಿಕ ಸಮುದಾಯಗಳು ಆಧ್ಯಾತ್ಮಿಕ ಬೆಳವಣಿಗೆಯನ್ನು ಕಡೆಗಣಿಸುವದು ಎಂದು ಸ್ಪಿನೋಜಾ ನಂಬಿದ್ದನು. ಕಠಿಣ ಪ್ರಶ್ನೆಗಳನ್ನು ಕೇಳುವ ಮತ್ತು ಸ್ವತಂತ್ರವಾಗಿ ಯೋಚಿಸುವ ವಯಸ್ಕರಿಗಿಂತ ಆಧ್ಯಾತ್ಮಿಕ ಮಕ್ಕಳ ಸಮಾನ ಹಿಂಡುಗಳನ್ನು ನಿರ್ವಹಿಸುವುದು ಸುಲಭವಾಗಿದೆ. ಸ್ಪಿನೋಜಾ ಇದನ್ನು ಕೇವಲ ವೈಯಕ್ತಿಕ ಸಮಸ್ಯೆಯಾಗಿ ನೋಡಲಿಲ್ಲ. ಇಡೀ ಸಮಾಜಗಳು ಧಾರ್ಮಿಕ ಅಪಕ್ವತೆಯಲ್ಲಿ ಸಿಲುಕಿಕೊಂಡು ದುರಂತ ಪರಿಣಾಮಗಳನ್ನು ಉತ್ಪಾದಿಸ ಬಹುದು ಎಂದು ಸ್ಪಿನೋಜಾ ಅರ್ಥಮಾಡಿಕೊಂಡನು .
ಇತಿಹಾಸವು ಪುನರಾವರ್ತನೆಯಾಗುತ್ತದೆ. ಮತಾಂಧತೆ ಪ್ರಾಬಲ್ಯ ಸಾಧಿಸಿದಾಗ, ಸಮಾಜವು ಅವನತಿ ಹೊಂದುತ್ತದೆ. ವಿಜ್ಞಾನವನ್ನು ಹಿಂಸಿಸಲಾಗುತ್ತದೆ, ಕಲೆಯನ್ನು ಸೆನ್ಸಾರ್ ಮಾಡಲಾಗುತ್ತದೆ, ತತ್ವಶಾಸ್ತ್ರವನ್ನು ನಿಷೇಧಿಸಲಾಗುತ್ತದೆ, ಪ್ರಗತಿಯನ್ನು ನಿಲ್ಲಿಸಲಾಗುತ್ತದೆ ಮತ್ತು ಹಿಂಜರಿತ ಪ್ರಾರಂಭವಾಗುತ್ತದೆ. ಇದಕ್ಕೆ ವಿರುದ್ಧವಾಗಿ, ನಂಬಿಕೆ ಮತ್ತು ವಿವೇಚನೆಯನ್ನು ಸಮತೋಲನಗೊಳಿಸುವ ಸಮಾಜಗಳು ಭಕ್ತರು ಮತ್ತು ಸಂದೇಹವಾದಿಗಳನ್ನು ಸಮಾನವಾಗಿ ರಕ್ಷಿಸುತ್ತವೆ ಮತ್ತು ವೈವಿಧ್ಯತೆಯನ್ನು ಪ್ರವರ್ಧಮಾನಕ್ಕೆ ತರುತ್ತವೆ. ಅವರು ಮಹಾನ್ ಕಲಾವಿದರು, ವಿಜ್ಞಾನಿಗಳು ಮತ್ತು ಚಿಂತಕರನ್ನು ಉತ್ಪಾದಿಸುತ್ತಾರೆ, ಸಂಪತ್ತನ್ನು ಸೃಷ್ಟಿಸುತ್ತಾರೆ, ದುಃಖವನ್ನು ಕಡಿಮೆ ಮಾಡುತ್ತಾರೆ, ಜ್ಞಾನವನ್ನು ವಿಸ್ತರಿಸುತ್ತಾರೆ.
ಸ್ಪಿನೋಜಾ ಇದನ್ನು ನೈಸರ್ಗಿಕ ನಿಯಮವೆಂದು ಪರಿಗಣಿಸುತ್ತಾನೆ. ಸಸ್ಯಗಳಿಗೆ ಉತ್ತಮವಾಗಿ ಬೆಳೆಯಲು ವೈವಿಧ್ಯಮಯ ಮಣ್ಣಿನ ಅಗತ್ಯವಿರುವಂತೆ ಮಾನವ ಸಮಾಜಗಳು ಅಭಿವೃದ್ಧಿ ಹೊಂದಲು ಬೌದ್ಧಿಕ ವೈವಿಧ್ಯತೆಯ ಅಗತ್ಯವಿದ. ಏಕಸಂಸ್ಕೃತಿಗಳು - ಅಂದರೆ ಕೃಷಿಯಲ್ಲಾ್ದಾರೆ ಒಂದೇ ವಿಧ ಪೈರನ್ನು ಬೆಳೆಯುವುದು, ಅಥವಾ ಮಾನವ ನಾಗರೀಕತೆಯಲ್ಲಿ ವ್ಯತ್ಯಾಸಗಳಿಲ್ಲದ ಏಕ ಸಂಸ್ಕೃತಿಯನ್ನು ಅನುಮತಿಸುವದು - ದುರ್ಬಲತೆಗೆ ಕಾರಣವಾಗುತ್ತದ. ದೇವರು ವೈವಿಧ್ಯತೆಯನ್ನು ಸಹಿಸಿಕೊಳ್ಳುವುದಲ್ಲದೆ, ಅದನ್ನು ಸಕ್ರಿಯವಾಗಿ ಉತ್ತೇಜಿಸುತ್ತಾನೆ ಎಂಬುದು ಸ್ಪಿನೋಜಾನ ಅತ್ಯಂತ ದಿಟ್ಟ ದೃಷ್ಟಿಕೋನಗಳಲ್ಲಿ ಒಂದಾಗಿದೆ. ಪ್ರಕೃತಿಯನ್ನು ನೋಡಿ: ಎರಡು ಎಲೆಗಳು ಸಮಾನರಾಗಿಗಿರುವದಿಲ್ಲ ಹಿಮದ ಎರಡು ಚಕ್ಕೆಗಳು ಒಂದೇ ರೀತಿಯಾಗಿರುವುದಿಲ್ಲ, ಎರಡು ಬೆರಳಚ್ಚುಗಳು ಹೋಲುವಂತಿಲ್ಲ. ದೇವರೇನಾದರೂ ಏಕರೂಪತೆಯನ್ನು ಬಯಸಿದ್ದರೆ , ಇಂತಹ ವೈವಿಧ್ಯತೆಯನ್ನು ಏಕೆ ರಚಿಸಬೇಕು?
ಇದು ಒಂದು ಆಮೂಲಾಗ್ರ ತೀರ್ಮಾನಕ್ಕೆ ಕಾರಣವಾಯಿತು. ಧಾರ್ಮಿಕ ವೈವಿಧ್ಯತೆಯು ಪರಿಹರಿಸಬೇಕಾದ ಸಮಸ್ಯೆಯಲ್ಲ, ಆದರೆ ಆಚರಿಸಬೇಕಾದ ಆಶೀರ್ವಾದ. ವಿಭಿನ್ನ ಆಧ್ಯಾತ್ಮಿಕ ಸಂಪ್ರದಾಯಗಳು ವಾದ್ಯವೃಂದದಲ್ಲಿನ ಸಂಗೀತ ವಾದ್ಯಗಳಂತೆ, ಪ್ರತಿಯೊಂದೂ ತನ್ನದೇ ಆದ ಮಾಧುರ್ಯವನ್ನು ಕೊಡುಗೆ ನೀಡುತ್ತದೆ. ಈ ಕಲ್ಪನೆಯು ಎಲ್ಲಾ ಧರ್ಮಗಳ ಮತಾಂಧರಿಗೆ ಅತ್ಯಂತ ಅಪಾಯಕಾರಿಯಾಗಿತ್ತು ಏಕೆಂದರೆ ಯಾವುದೇ ಸಂಪ್ರದಾಯವು ದೈವಿಕ ಸತ್ಯದ ಮೇಲೆ ಏಕಸ್ವಾಮ್ಯವನ್ನು ಹೊಂದಿಲ್ಲ ಎಂದು ಅದು ಸೂಚಿಸುತ್ತದೆ. ಪ್ರತಿಯೊಂದೂ ಪವಿತ್ರವಾದುದಕ್ಕೆ ಅಮೂಲ್ಯವಾದ ಒಳನೋಟಗಳು ಮತ್ತು ಕಾನೂನುಬದ್ಧ ಮಾರ್ಗಗಳನ್ನು ನೀಡಬಹುದು. ಆದರೂ ಯಾರಿಗೂ ಏಕೈಕ ಪಾತ್ರ ಇಲ್ಲ. ಇನ್ನೂ ಮುಂದೆ ಹೋಗಿ ಸ್ಪಿನೋಜ . ವಿಭಿನ್ನ ಧರ್ಮಗಳ ಜನರು ಅಥವಾ ಯಾವುದೇ ಧರ್ಮ ಇಲ್ಲದ ಜನರೂ ಕೂಡ ಅರಿವಿಲ್ಲದೆ ಆದರೂ ಒಂದೇ ದೇವರಿಗೆ ಸೇವೆ ಸಲ್ಲಿಸಬಹುದು ಎಂದು ಪ್ರಸ್ತಾಪಿಸಿದನು. ನಂಬಿಕೆಯನ್ನು ಲೆಕ್ಕಿಸದೆ ಬಡವರಿಗೆ ಸಹಾಯ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಡುವ ವ್ಯಕ್ತಿಯು ದೈವಿಕ ಕೆಲಸವನ್ನು ಮಾಡುತ್ತಾನೆ. ವಿಜ್ಞಾನದ ಮೂಲಕ ಸತ್ಯವನ್ನು ಹುಡುಕುವವನು ದೇವರ ಮನಸ್ಸನ್ನು ಅನ್ವೇಷಿಸುತ್ತಾನೆ. ಸೌಂದರ್ಯವನ್ನು ಸೃಷ್ಟಿಸುವ ಕಲಾವಿದ ದೈವಿಕ ಸ್ಫೂರ್ತಿಯನ್ನು ಸಾಗಿಸುತ್ತಾನೆ.
ಮತಾಂಧರಲ್ಲಿ ಅನೇಕರು ಆಧ್ಯಾತ್ಮಿಕ ಆಘಾತದಿಂದ ಬಳಲುತ್ತಿದ್ದಾರೆ ಎಂದು ಸ್ಪಿನೋಜ ಗಮನಿಸಿದನು. ಧಾರ್ಮಿಕ ಧುರೀಣರಿಂದ ಪಡೆದ ನೋವು, ನಂಬಿಕೆಯ ಸಮುದಾಯಗಳಿಂದ ಅನುಭವಿಸಿದ ದ್ರೋಹ, ಅಥವಾ ಭಯ-ಗ್ರಹಿತ ಧಾರ್ಮಿಕ ಪರಿಸರದಲ್ಲಿ ಬೆಳೆದಿದ್ದ ಕಾರಣ ಅವರ ಈ ಪ್ರತಿಕ್ರಿಯೆ. ಪ್ರತಿಕ್ರಿಯೆಯಾಗಿ ಕೆಲವರು ಯಾವುದೇ ಆಧ್ಯಾತ್ಮಿಕತೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಮತ್ತು ಉಗ್ರಗಾಮಿ ನಾಸ್ತಿಕರಾಗುತ್ತಾರೆ. ಇತರರು ತೀವ್ರವಾದ ಧಾರ್ಮಿಕತೆಯನ್ನು ಸ್ವೀಕರಿಸುತ್ತಾರೆ ಮತ್ತು ಮತಾಂಧರಾಗುತ್ತಾರೆ. ಎರಡೂ ಸಂದರ್ಭಗಳಲ್ಲಿ, ಮೂಲ ಗಾಯವು ವಾಸಿಯಾಗದೆ ಉಳಿಯುತ್ತದೆ, ಕೇವಲ ಮುಚ್ಚಲ್ಪಟ್ಟಿದೆ. ಅಂತಹ ಜನರ ಬಗ್ಗೆ ಸ್ಪಿನೋಜಗೆ ಆಳವಾದ ಸಹಾನುಭೂತಿ ಇತ್ತು. ಮತಾಂಧ ಆಕ್ರಮಣದ ಹಿಂದೆ ಅನೇಕ ಬಾರಿ ದೇವರ ಹೆಸರಿನಲ್ಲಿ ಆಳವಾಗಿ ಗಾಯಗೊಂಡ ವ್ಯಕ್ತಿಯೊಬ್ಬನು ಇರುತ್ತಾನೆ ಎಂದು ಅವನಿಗೆ ಅರ್ಥವಾಯಿತು. ಮತ್ತು ಉಗ್ರಗಾಮಿ ನಾಸ್ತಿಕರ ಕೋಪದ ಹಿಂದೆ ದೈವತ್ವವನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವವರಿಂದ ದ್ರೋಹ ಅನುಭವಿಸಿದ ವ್ಯಕ್ತಿ ಇರುತ್ತಾನೆ.
ಈ ಒಳನೋಟದಿಂದಾಗಿ ಕ್ರಾಂತಿಕಾರಿ ವಿಧಾನವೊಂದನ್ನು ಸ್ಪಿನೋಜ ಆಚರಿಸಿದನು . . ಮತಾಂಧರು ಅಥವಾ ಉಗ್ರಗಾಮಿ ನಾಸ್ತಿಕರ ಮೇಲೆ ದಾಳಿ ಮಾಡುವ ಬದಲು, ಅವರ ಆಧ್ಯಾತ್ಮಿಕ ಗಾಯಗಳನ್ನು ಸರಿಪಡಿಸಲು, ಅತಿರೇಕಗಳನ್ನು ಖಂಡಿಸುವ ಬದಲು, ಚಿಕಿತ್ಸೆ ಮತ್ತು ಸಮನ್ವಯದ ಮಾರ್ಗವನ್ನು ನೀಡುವದು, ಇವು ಸ್ಪಿನೋಜನ ರೀತಿಗಳಾಗಿತ್ತು ಮತಾಂಧತೆ ಮತ್ತು ಉಗ್ರಗಾಮಿ ನಾಸ್ತಿಕತೆ ಎರಡೂ ವಿಷಕಾರಿ ಧಾರ್ಮಿಕ ಅನುಭವಗಳಿಗೆ ಆಘಾತಕಾರಿ ಪ್ರತಿಕ್ರಿಯೆಗಳಾಗಿವೆ.
ಇದಕ್ಕೆ ಪರಿಹಾರವೆಂದರೆ ಇನ್ನೂ ಹೆಚ್ಚು ವಿಷತ್ವವಲ್ಲ, ಬದಲಾಗಿ ವಿವೇಚನೆ ಮತ್ತು ಅಂತಃಪ್ರಜ್ಞೆ, ವಿಜ್ಞಾನ ಮತ್ತು ಅತೀಂದ್ರಿಯತೆಯನ್ನು ಗೌರವಿಸುವ ಪ್ರಬುದ್ಧ ಆರೋಗ್ಯಕರ ಆಧ್ಯಾತ್ಮಿಕತೆಯನ್ನು ಪ್ರಸ್ತುತಪಡಿಸುವುದು. ಸ್ಪಿನೋಜಾ ‘ಚಿಕಿತ್ಸಕ ಆಧ್ಯಾತ್ಮಿಕತೆ’ ಎಂದು ಕರೆಯಬಹುದಾದ ವಿಚಾರವನ್ನು ಅಭಿವೃದ್ಧಿಪಡಿಸಿದರು. ಇದು ಹಾನಿ ಮಾಡುವ ಬದಲು ಗುಣಪಡಿಸುವ, ಹೊರಗಿಡುವ ಬದಲು ಒಳಗೊಳ್ಳುವ, ಬಂಧಿಸುವ ಬದಲು ಬಿಡುಗಡೆ ಮಾಡುವ ಪವಿತ್ರತೆಯ ಒಂದು ವಿಧಾನ. ಆಧ್ಯಾತ್ಮಿಕತೆ ಹಿಂದೆ ಅನುಭವಿಸಿದ ಆಘಾತಗಳನ್ನು ಅಂಗೀಕರಿಸುತ್ತದೆ ಮತ್ತು ಗುಣಪಡಿಸುವ ಮಾರ್ಗಗಳನ್ನು ನೀಡುತ್ತದೆ.
ಅವನ ಕ್ರಾಂತಿಕಾರಿ ಕಲ್ಪನೆಯ ಮೇರೆಗೆ ಧರ್ಮದ ನಿಜವಾದ ಧ್ಯೇಯವೆಂದರೆ ಆಧ್ಯಾತ್ಮಿಕತೆಯ ಗಾಯಗಳನ್ನು ಗುಣಪಡಿಸುವುದು, ಅವುಗಳನ್ನು ಸೃಷ್ಟಿಸುವುದಿಲ್ಲ. ಗುಣಪಡಿಸುವದರ ಬದಲಾಗಿ ಹೆಚ್ಚಿನ ಆಘಾತವನ್ನು ಉಂಟುಮಾಡುವ ಧರ್ಮಗಳು ಅವರ ದೈವಿಕ ಉದ್ದೇಶದಲ್ಲಿ ವಿಫಲರಾಗುತ್ತಾರೆ. ಈ ತಿಳುವಳಿಕೆಯು ಕ್ರೈಸ್ತ ಸುವಾರ್ತಾಬೋಧನೆಯ ಮತ್ತು ಧರ್ಮ ಪರಿವರ್ತನೆಯ ದೃಷ್ಟಿಕೋನವನ್ನು ಬದಲಾಯಿಸಿತು. ಗುರಿಯು ದೈವ ವಿಶ್ವಾಸವನ್ನು ಬದಲಾಯಿಸುವುದು ಅಲ್ಲ, ಆದರೆ ಆಧ್ಯಾತ್ಮಿಕ ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುವುದು ಮತ್ತು ಪವಿತ್ರದೊಂದಿಗೆ - ಅದರ ರೂಪ ಯಾವದೇ ಆಗಲಿ - ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳುವದು. ಆಧ್ಯಾತ್ಮಿಕವಾಗಿ ಆರೋಗ್ಯವಂತ ಜನರು ನಂಬಿಕೆಗಳ ನಿರ್ದಿಷ್ಟತೆಗಳನ್ನು ಲೆಕ್ಕಿಸದೆ ಸ್ವಾಭಾವಿಕವಾಗಿ ಉನ್ನತ ಮೌಲ್ಯಗಳಿಂದ ಬದುಕುತ್ತಾರೆ. ಅವರ ವರ್ತನೆ ಸಹಾನುಭೂತಿ, ನ್ಯಾಯ, ಉದಾರತೆಗಳಿಂದ ಹೊಳೆಯುತ್ತವೆ ಏಕೆಂದರೆ ಈ ಗುಣಗಳು ಶಾಂತಿಯುತ ಮನಸ್ಸುಗಳು ಮತ್ತು ವಾಸಿಯಾದ ಹೃದಯಗಳಿಂದ ಹರಿಯುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ಆಧ್ಯಾತ್ಮಿಕವಾಗಿ ಗಾಯಗೊಂಡ ಜನರು, ತಾವೇ ಆಳವಾಗಿ ಧಾರ್ಮಿಕರಾಗಿದ್ದರೂ, ಇತರರಲ್ಲಿ ಧಾರ್ಮಿಕ ಗಾಯಗಳನ್ನು ಶಾಶ್ವತಗೊಳಿಸುತ್ತಾರೆ . ತಮ್ಮ ನೋವನ್ನು ನಿಭಾಯಿಸಲು ಬೇರೆ ದಾರಿ ಗೊತ್ತಿಲ್ಲದ ಕಾರಣ ಅವರು ಧರ್ಮವನ್ನು ಆಯುಧದಂತೆ ಉಪಯೋಗಿಸುತ್ತಾರೆ. ಈ ಸಾಕ್ಷಾತ್ಕಾರವು ಆಶ್ಚರ್ಯಕರ ತೀರ್ಮಾನಕ್ಕೆ ಕಾರಣವಾಯಿತು. ಜಗತ್ತಿಗೆ ಬೇಕಾಗಿರುವದು ಇನ್ನೂ ಹೆಚ್ಚು ಧರ್ಮವಲ್ಲ ಆದರೆ ಹೆಚ್ಚು ಆರೋಗ್ಯಕರ ಧರ್ಮ. ಹೆಚ್ಚು ಮತಾಂತರಗೊಂಡವರಲ್ಲ, ಆದರೆ ಹೆಚ್ಚು ಗುಣಮುಖರಾದ ವ್ಯಕ್ತಿಗಳು. ಹೆಚ್ಚು ಸಿದ್ಧಾಂತಗಳಲ್ಲ, ಆದರೆ ಹೆಚ್ಚು ಪ್ರೀತಿ. ಸ್ಪಿನೋಜ ನಿರೂಪಿಸಿದ ತತ್ತ್ವಶಾಸ್ತ್ರದಲ್ಲಿ ‘ಪ್ರೀತಿ’ಯು ಶೃಂಗಾರ ಭಾವನೆಯ ಅಥವಾ ರೋಮಾ೦ಚನೀಯ ಪರಿಕಲ್ಪನೆಯಲ್ಲ. ಪ್ರೀತಿಯು ಎಲ್ಲಾ ಜೀವಿಗಳನ್ನು ಪರಸ್ಪರ ಅವಲಂಬನೆ ಮತ್ತು ಪರಸ್ಪರ ಕಾಳಜಿಯ ಜಾಲದಲ್ಲಿ ಜೋಡಿಸುವ ಪರಿವರ್ತಕ ಶಕ್ತಿಯಾಗಿದೆ. ಪ್ರೀತಿ ಇತರರು ನಮ್ಮಿಂದ ಭಿನ್ನವಾಗಿದ್ದರೂ ಸಹ ಅವರಲ್ಲಿರುವ ದೈವಿಕತೆಯನ್ನು ನೋಡಲು ನಮಗೆ ಅನುಮತಿಸುತ್ತದೆ.
ಪ್ರಕೃತಿ, ಸತ್ಯ ಅಥವಾ ಸೌಂದರ್ಯದಂತಹ ಗುಣಗಳಮೇಲಾಗಲಿ ಅಥವಾ ಇನ್ನೊಬ್ಬ ವ್ಯಕ್ತಿಯ ಮೇಲಿನ ಪ್ರೀತಿಯಾಗಲಿ, ನಿಜವಾದ ಪ್ರೀತಿಯನ್ನು ಅನುಭವಿಸುವುದು ದೇವರನ್ನು ನೇರವಾಗಿ ಅನುಭವಿಸುವುದಾಗಿದೆ ಎಂದು ಸ್ಪಿನೋಜ ನಂಬಿದ್ದ. ಆಚರಣೆಗಳು ಅಥವಾ ಸಂಕೀರ್ಣ ಸಿದ್ಧಾಂತಗಳು ಅನಗತ್ಯ. ಪ್ರೀತಿಯು ಅತ್ಯಂತ ಶುದ್ಧವಾದ ಆಚರಣೆ, ಸ್ಪಷ್ಟವಾದ ಸಿದ್ಧಾಂತ, ಅತ್ಯಂತ ಶಕ್ತಿಶಾಲಿ ಪ್ರಾರ್ಥನೆ. ಸ್ಪಿನೋಜ ಮತಾಂಧತೆಯನ್ನು ಏಕೆ ವಿನಾಶಕಾರಿ ಎಂದು ನೋಡಿದ ಎಂಬುದನ್ನು ಇದು ವಿವರಿಸುತ್ತದೆ. ಮತಾಂಧರು ನಿಜವಾದ ಪ್ರೀತಿಯನ್ನು ಅನುಭವಿಸಲು ಸಾಧ್ಯವಿಲ್ಲ ಏಕೆಂದರೆ ಅವರು ನಿಯಂತ್ರಣದ ಗೀಳನ್ನು ಹೊಂದಿರುತ್ತಾರೆ. ಅವರು ಇತರರನ್ನು ತಾವು ಯೋಚಿಸುವಂತೆ, ವರ್ತಿಸುವಂತೆ ಮತ್ತು ನಂಬುವಂತೆ ಒತ್ತಾಯಿಸಲು ಬಯಸುತ್ತಾರೆ. ನಿಜವಾದ ಪ್ರೀತಿ ಯಾವಾಗಲೂ ಇತರರ ಸ್ವಾತಂತ್ರ್ಯವನ್ನು ಗೌರವಿಸುತ್ತದೆ. ಸ್ಪಿನೋಜಾ ದೃಷ್ಟಿಯಲ್ಲಿ ದೇವರು ಪ್ರತಿಯೊಬ್ಬ ವ್ಯಕ್ತಿಯನ್ನು ಸಾಕಷ್ಟು ಪ್ರೀತಿಸುತ್ತಾನೆ, ತಮ್ಮದೇ ಆದ ಆಧ್ಯಾತ್ಮಿಕ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯವನ್ನು ನೀಡುತ್ತಾನೆ. ಅನುಸರಣೆಯನ್ನು ಹೇರುವ ಮೂಲಕ ಮತಾಂಧರು ತಾವು ಸೇವೆ ಸಲ್ಲಿಸುವುದಾಗಿ ಹೇಳಿಕೊಳ್ಳುವ ದೇವರನ್ನೇ ವಿರೋಧಿಸುತ್ತಾರೆ.
ಸ್ಪಿನೋಜಾ ಅವರ ಅತ್ಯಂತ ವಿಮೋಚನಾತ್ಮಕ ಆಲೋಚನೆಗಳಲ್ಲಿ ಒಂದಾಗಿದೆ ಇದು : ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಸಮಯ, ಮಾರ್ಗ, ಮತ್ತು ರೀತಿಯಲ್ಲಿ ಪವಿತ್ರವಾದದ್ದನ್ನು ಹುಡುಕುವ ದೈವಿಕ ಹಕ್ಕನ್ನು ಹೊಂದಿದ್ದಾನೆ.. ಈ ವೈಯಕ್ತಿಕ ನಿಕಟ ಪ್ರಯಾಣದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಯಾರ ಬಳಿಯೂ ಇಲ್ಲ. ಇದರರ್ಥ ಏನಾದರೂ ನಡೆಯುತ್ತದೆ ಅಥವಾ ಎಲ್ಲಾ ಮಾರ್ಗಗಳು ಸಮಾನವಾಗಿವೆ ಎಂದಲ್ಲ. ಇದರರ್ಥ ಪ್ರತಿಯೊಬ್ಬ ವ್ಯಕ್ತಿಯು ಪ್ರೀತಿ, ಸತ್ಯ ಮತ್ತು ಶಾಂತಿಗೆ ಯಾವ ಮಾರ್ಗವು ತನ್ನನ್ನು ಹೆಚ್ಚು ಹತ್ತಿರ ತರುತ್ತದೆ ಎಂಬುದನ್ನು ಮುಕ್ತವಾಗಿ ಕಂಡುಹಿಡಿಯಬೇಕು. ಅಂತಹ ಆವಿಷ್ಕಾರವು ಅನನ್ಯ ವೈಯಕ್ತಿಕ ಪ್ರಕ್ರಿಯೆ. ಸ್ಪಿನೋಸಾ ಇದನ್ನು ಮಾನವ ಹಕ್ಕು ಎಂದು ಮಾತ್ರವಲ್ಲದೆ ಆಧ್ಯಾತ್ಮಿಕ ಅಗತ್ಯ ಎಂದು ತಿಳಿದಿದ್ದ . ಹೇರಿದ ನಂಬಿಕೆ ಎಂದಿಗೂ ನಿಜವಾದ ನಂಬಿಕೆಯಲ್ಲ. ಬಲವಂತದಿಂದ ಪಡೆದ ನಂಬಿಕೆಗಳು ಎಂದಿಗೂ ನಿಜವಾದ ನಂಬಿಕೆಗಳಾಗಲಾರವು . ನಿಜವಾದ ಆಧ್ಯಾತ್ಮಿಕ ಅನುಭವಗಳು ಪ್ರಾಮಾಣಿಕ ಮತ್ತು ಸ್ವಯಂಪ್ರೇರಿತ ಹುಡುಕಾಟದಿಂದ ಮಾತ್ರ ಉದ್ಭವಿಸುತ್ತವೆ.
ಬಹುಶಃ ಈ ಪ್ರಾಚೀನ ಜ್ಞಾನವನ್ನು ಪುನಃ ಕಂಡುಕೊಳ್ಳುವ ಸಮಯ ಬಂದಿದೆ. ನಾವು ಮತಾಂಧತೆ ಇಲ್ಲದೆ ನಿಜವಾಗಿಯೂ ಆಧ್ಯಾತ್ಮಿಕರಾಗಿರಬಹುದು, ಅಸಹಿಷ್ಣುತೆ ಇಲ್ಲದೆ ಶ್ರದ್ಧೆಯಿಂದಿರಬಹುದು, ಕುರುಡುತನವಿಲ್ಲದೆ ನಂಬಿಕಸ್ಥರಾಗಿರಬಹುದು ಎಂಬುದನ್ನು ಅರಿತುಕೊಳ್ಳುವ ಸಮಯ ಬಂದಿದೆ.
ದೇವರು ಸ್ವತಃ ವಾಸ್ತವ, ವಿಶ್ವವನ್ನು ಚಲಿಸುವ ಶಕ್ತಿ, ಎಲ್ಲಾ ನೈಸರ್ಗಿಕ ನಿಯಮಗಳ ಹಿಂದಿನ ಬುದ್ಧಿವಂತಿಕೆ. ದೇವರನ್ನು ತಿಳಿದುಕೊಳ್ಳುವುದು ಎಂದರೆ ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವುದು, ಅಸ್ತಿತ್ವವನ್ನು ನಿಯಂತ್ರಿಸುವ ನಿಯಮಗಳನ್ನು ಗ್ರಹಿಸುವುದು. ಈ ದೃಷ್ಟಿಕೋನವು ದೇವರನ್ನು ಇತರ ಮಾನವರ ವಿರುದ್ಧ ಆಯುಧವಾಗಿ ಬಳಸುವುದು ಅಸಾಧ್ಯವಾಗಿಸಿತು. ಮತ್ತು ಅಂತಿಮವಾಗಿ, ಪ್ರೀತಿ ಯಾವಾಗಲೂ ಭಯಕ್ಕಿಂತ ದೊಡ್ಡದು, ಕರುಣೆ ಯಾವಾಗಲೂ ತೀರ್ಪಿಗಿಂತ ಶ್ರೇಷ್ಠ, ನಮ್ರತೆ ಯಾವಾಗಲೂ ದುರಹಂಕಾರಕ್ಕಿಂತ ದೇವರಿಗೆ ಹತ್ತಿರ. ಇದು ಸ್ಪಿನೋಜಾ ಅವರ ದೃಷ್ಟಿಕೋನ. ದಿಟ್ಟ, ಆಳವಾದ ವೈಚಾರಿಕತೆಯಿಂದ ನಂಬಿಕೆ ಮತ್ತು ಮತಾಂಧತೆಯ ಸಾಂಪ್ರದಾಯಿಕ ವಿವರಣೆಗಳನ್ನು ಮುರಿಯುವುದು ಇದರ ಉದ್ದೇಶ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ