ಉದಾರವಾದಿ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ವಹಿಸುವವರಿಗೆ ೨೦೨೪ರ ವರ್ಷ  ಕಳವಳವನ್ನುಂಟು ಮಾಡುತ್ತದೆ.


ಸಿದ್ಧಾಂತದಲ್ಲಿ ಇದು ಪ್ರಜಾಪ್ರಭುತ್ವದ ವಿಜಯದ ವರ್ಷವಾಗಿರಬೇಕು. ಪ್ರಾಯೋಗಿಕವಾಗಿ ಇದು ಅದರ ವಿರುದ್ಧವಾಗಿರುತ್ತದೆ.


ಜಗತ್ತಿನ ಅರ್ಧಕ್ಕಿ೦ತ ಹೆಚ್ಚು ಜನರು ೨೦೨೪ ರಲ್ಲಿ ರಾಷ್ಟ್ರವ್ಯಾಪಿ ಚುನಾವಣೆಗಳನ್ನು ನಡೆಸುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ.ಈ ಮೈಲಿಗಲ್ಲನ್ನು ತಲುಪಿರುವುದು ಇದೇ ಮೊದಲು .ಮತದಾರರ ಮತದಾನದ ಇತ್ತೀಚಿನ ಮಾದರಿಗಳನ್ನು ಆಧರಿಸಿ, ೭೦ ಕ್ಕೂ ಹೆಚ್ಚು ದೇಶಗಳಲ್ಲಿ ಸುಮಾರು ೨ ಶತಕೋಟಿ ಜನರು ಮತದಾನಕ್ಕೆ ಹೋಗುತ್ತಾರೆ ಎ೦ದು ಲೆಕ್ಕ ಮಾಡಬಹುದು. 


ಬ್ರಿಟನ್‌ನಿಂದ ಬಾಂಗ್ಲಾದೇಶ, ಭಾರತದಿಂದ ಇಂಡೋನೇಷ್ಯಾದ ವರೆಗೂ ಮತದಾನ ನಡೆಯಲಿದೆ. ಹೀಗಾಗಿ ಇದು ಪ್ರಜಾಪ್ರಭುತ್ವದ ವಿಜಯೋತ್ಸವದ ವರ್ಷ ಎಂದು ತೋರಬಹುದು.  ಆದರೆ ನಿಜಕ್ಕೂ  ಅದು ವಿರುದ್ಧವಾಗಿರುತ್ತದೆ.

ಅನೇಕ ಚುನಾವಣೆಗಳು ಉದಾರ ನೀತಿಗಳು ಮತ್ತು ಆಚರಣೆಗಳಿಗೆ ವಿರುದ್ಧವಾಗಿರುವ  ಆಡಳಿತಗಾರರನ್ನು ಭದ್ರಪಡಿಸುತ್ತವೆ. ಇತರ ಅನೇಕ ಚುನಾವಣೆಗಳು ಭ್ರಷ್ಟರು ಮತ್ತು  ಅಯೋಗ್ಯರನ್ನು ಪುರಸ್ಕರಿಸುತ್ತವೆ. ಅತ್ಯಂತ ಪ್ರಮುಖ ಸ್ಪರ್ಧೆಯಾದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯು ತುಂಬಾ ವಿಷಪೂರಿತ ಮತ್ತು ಧ್ರುವೀಕರಣವಾಗಿದ್ದು ಅದು ಜಾಗತಿಕ ರಾಜಕೀಯದ ಮೇಲೆ  ವಿಷಣ್ಣತೆಯನ್ನು  ಹೂಡುತ್ತದೆ.


ಉಕ್ರೇನ್‌ನಿಂದ ಮಧ್ಯಪ್ರಾಚ್ಯದವರೆಗೆ ನಡೆಯುತ್ತಿರುವ ಸಂಘರ್ಷಗಳ  ಹಿನ್ನೆಲೆಯಲ್ ಲಿಅಮೆರಿಕ ಭವಿಷ್ಯದಲ್ಲಿ  ಎತ್ತಿಕೊಳ್ಳಬಹುದಾದ   ನೀತಿಗಳು ,  ಮತ್ತು ಅದರೊಂದಿಗೆ  ಅಮೆರಿಕನ್ ನಾಯಕತ್ವವು ಇಲ್ಲಿಯವರೆಗೆ ಎತ್ತಿಹಿಡಿದಿರುವ ಅ೦ತಾರಾಷ್ಟೀಯ ವ್ಯವಯಸ್ಠೆಯ  ಭದ್ರತೆ, ಇವೆರಡರ ಬಗ್ಗೆಯೂ  ಪ್ರಶ್ನೆಗಳು ಉದ್ಭವಿಸುವವು.. ಮೂಡಿಬರುತ್ತಿರುವ ವರ್ಷವು ಅತ್ಯ೦ತ  ಭಯಾನಕ ಮತ್ತು ಅಪಾಯಕಾರಿ ವರ್ಷವೇ ಆಗಿರುತ್ತದೆ.

ಕೆಲವು ಚುನಾವಣೆಗಳು ಸ್ಪಷ್ಟವಾಗಿ  ನೆಪ ಮಾತ್ರವಾಗಿರುತ್ತದೆ. ಉದಾಹರಣೆಗೆ, ಬೆಲಾರಸ್ ಅಥವಾ ರುವಾಂಡಾದಲ್ಲಿ, ಅಧಿಕಾರದಲ್ಲಿರುವವರ ಮತ-ಪಾಲು ೧೦೦% ಗೆ ಎಷ್ಟು ಹತ್ತಿರದಲ್ಲಿದೆ ಎಂಬುದು ಒಂದೇ ಪ್ರಶ್ನೆ. ೨೦೨೦ ರಲ್ಲಿ ಅವಧಿಯ ಮಿತಿಗಳನ್ನು ತೆಗೆದುಹಾಕಲು ಸಂವಿಧಾನವನ್ನು ಕಾನೂನುಬಾಹಿರವಾಗಿ ಬದಲಾಯಿಸಿದ ನಂತರ, ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ (ಮತ್ತು ಒಟ್ಟಾರೆ ಐದನೇ ಸಾರಿ) ನಿಸ್ಸಂದೇಹವಾಗಿ ಗೆಲ್ಲುತ್ತಾರೆ.

ಹೆಚ್ಚಿನ ಮತಪತ್ರಗಳು ೨೦೨೪ರಲ್ಲಿ ಏಷ್ಯಾದಲ್ಲಿ ಚಲಾಯಿಸಲಾಗುತ್ತವೆ. ಆ ಖ೦ಡದ  ದೊಡ್ಡ ಪ್ರಜಾಪ್ರಭುತ್ವಗಳು  -ಬಾಂಗ್ಲಾದೇಶ, ಭಾರತ ಮತ್ತು ಇಂಡೋನೇಷ್ಯಾ - ಎಲ್ಲವೂ ಚುನಾವಣೆಗೆ ಹೋಗುತ್ತವೆ. ದುರದೃಷ್ಟವಶಾತ್, ಅಪಾಯವೆ೦ದರೆ  ಉದಾರವಾದಕ್ಕೆ ವಿರೋಧಿಯಾದ  ಆಚರಣೆಗಳು ಬೆಳೆಯುತ್ತಿವೆ.  ನರೇಂದ್ರ ಮೋದಿಯವರ ಅಡಿಯಲ್ಲಿ, ಭಾರತವು ಗಮನಾರ್ಹವಾದ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಯಶಸ್ಸನ್ನು ಅನುಭವಿಸುತ್ತಿದೆ, ಆದರೆ ಪ್ರಧಾನ ಮಂತ್ರಿಗಳು ಮುಸ್ಲಿಂ ವಿರೋಧಿ ಕೋಮುವಾದವನ್ನು ಮಾತ್ರವಲ್ಲ   ಸಾಂಸ್ಥಿಕ ಸುರಕ್ಷತೆಗಳನ್ನು ಕಿತ್ತುಹಾಕುವುದನ್ನೂ  ಮನ್ನಿಸುತ್ತಿದ್ದಾರೆ. ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ರಾಜಕೀಯ ರಾಜವಂಶವನ್ನು ಭದ್ರಪಡಿಸುವತ್ತ ಗಮನಹರಿಸುತ್ತಿದ್ದಾರೆ. ಬಾಂಗ್ಲಾದೇಶವು ಈಗಾಗಲೇ ಸರ್ವಾಧಿಕಾರಿ ತಿರುವು ಪಡೆದುಕೊಂಡಿದೆ, ಅಲ್ಲಿ ವಿರೋಧ ಪಕ್ಷದ ನಾಯಕರನ್ನು ಜೈಲಿನಲ್ಲಿರಿಸಲಾಗಿದೆ  ಮತ್ತು ಯಾವುದೇ ಭಿನ್ನಾಭಿಪ್ರಾಯಕ್ಕೆ ಅನುವಿಲ್ಲದ೦ತಾಗಿದೆ.  



ಅಮೆರಿಕದ ವಿಷಪೂರಿತ ಮತ್ತು ಧ್ರುವೀಕರಣದ ಚುನಾವಣೆಯು ಜಾಗತಿಕ ರಾಜಕೀಯದ ಮೇಲೆ ಖಿನ್ನತೆಯನ್ನು ಬಿತ್ತರಿಸುತ್ತದೆ

ಹೆಚ್ಚು ಚುನಾವಣೆಗಳು ನಡೆಯಲಿರುವ  ಖಂಡವಾಗಿದೆ ಆಫ್ರಿಕಾ, ಆದರೆ ಅದರ ಮತದಾರರು ಪ್ರಜಾಪ್ರಭುತ್ವವು  ಕಾರ್ಯನಿರ್ವಹಿಸುವ ವೈಖರಿಯ ಬಗ್ಗೆ ಹೆಚ್ಚು ಹೆಚ್ಚು   ಭ್ರಮನಿರಸನಗೊಳ್ಳುತ್ತಿದ್ದಾರೆ.  ದಂಗೆಗಳು ಹೆಚ್ಚು ಸಾಮಾನ್ಯವಾಗುತ್ತಿವೆ: 2020 ರಿಂದ ಈಚೆಗೆ ಒಂಬತ್ತು ಆಡಳಿತಗಳು ಬಲದ ಪ್ರಯೋಗದಿ೦ದ ಅಧಿಕಾರವನ್ನು ವಶಪಡಿಸಿಕೊಂಡಿವೆ. ಹೆಚ್ಚುತ್ತಿರುವ ಆಫ್ರಿಕನ್ನರು ಮಿಲಿಟರಿ ಸರ್ಕಾರದೊಂದಿಗೆ ಹೊಂದಿಕೊಂಡು ಹೋಗಲು ಸಿದ್ಧರಿರಬಹುದು ಎಂದು ಸಮೀಕ್ಷೆಗಳು ಸೂಚಿಸುತ್ತವೆ. ದಕ್ಷಿಣ ಆಫ್ರಿಕಾದ ಚುನಾವಣೆಯು ಪದೇ ಪದೇ ಅನುಭವಿಸಿದ  ನಿರಾಶೆಯನ್ನು ನೆನಪಿಗೆ ತರುತ್ತದೆ.  ವರ್ಣಭೇದ ನೀತಿಯ ನಂತರದ ಮೊದಲ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಆಫ಼್ರಿಕನ್ ನೆಷನಲ್ ಕಾ೦ಗ್ರೆಸ್ಸ್ ಪಕ್ಷವು ಮೂರು ದಶಕಗಳ ನಂತರ, ಭ್ರಷ್ಟಾಚಾರ, ಅಪರಾಧ ಮತ್ತು ನಿರುದ್ಯೋಗಗಳಡಿಯಲ್ಲಿ  ಬಳಲುತ್ತಿರುವ ರಾಷ್ಟ್ರವೊ೦ದರಲ್ಲಿ  ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ.

ಸುದ್ದಿ ಎಲ್ಲಾ ಕೆಟ್ಟದ್ದಲ್ಲ. ಮೆಕ್ಸಿಕೋ ತನ್ನ ಮೊದಲ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡುವದಿದೆ: ಇಬ್ಬರೂ ಪ್ರಮುಖ ಸ್ಪರ್ಧಿಗಳು ಮಹಿಳೆಯರು,  ಮತ್ತು ಅಧಿಕಾರದಲ್ಲಿರುವವರಿಗಿಂತ ಕಡಿಮೆ ಜನಪ್ರಿಯತೆ ಹೊಂದಿರುವರು. ಬ್ರಿಟನ್ನಿನಲ್ಲಿ ಚುನಾವಣೆ ನಡೆಯಲಿದ್ದು, ಬ್ರಿಟಿಷ್ ಮತದಾರರು (ಕೊನೆಗೆ !) ಇಬ್ಬರು ಸಮರ್ಥ ಅಭ್ಯರ್ಥಿಗಳ ನಡುವೆ ಆಯ್ಕೆ ಮಾಡುವ ಸುಯೋಗವನ್ನು ಹೊಂದಿರುತ್ತಾರೆ. 14 ವರ್ಷಗಳ ಟೋರಿ ಆಡಳಿತದ ನಂತರ ಲೇಬರ್ ಪಕ್ಷಕ್ಕೆ ಗೆಲುವು ಸಾಧ್ಯತೆಯಿದೆ, ಆದರೆ ಹೆಚ್ಚಿನ ಬದಲಾವಣೆಯನ್ನು, ವಿಶೇಷವಾಗಿ  ಬ್ರಿಟನ್ನಿನ  ಹೊರಗಿನಿ೦ದ,  ಗಮನಿಸುವದು ಕಷ್ಟಸಾಧ್ಯ. 

ಕೆಲವು ಚುನಾವಣೆಗಳ ಪರಿಣಾಮ  ತಮ್ಮ ದೇಶದ ಗಡಿಯನ್ನು  ಅಸಮಂಜಸ ಮಟ್ಟದಲ್ಲಿ ಮೀರ ಬಹುದು.  ತೈವಾನ್‌ನ 18 ದಶಲಕ್ಷ ಮತದಾರರು ಈಗ ಅಧಿಕಾರದಲ್ಲಿರುವ  ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯನ್ನು,  ಅಥವಾ ಹೆಚ್ಚು ಚೀನಾ ಸ್ನೇಹಿ ವಿರೋಧ ಪಕ್ಷ ಕ್ಯುಮಿಂಟಾಂಗ್ ಅನ್ನು ಗೆಲ್ಲಿಸುತ್ತಾರೋ ಎನ್ನುವದು  ತೈವಾನ್ ಜಲಸಂಧಿಯಾದ್ಯಂತ ಸಂಬಂಧಗಳ ಮೇಲೆ  ಮತ್ತು  ಯುಎಸ್-ಚೀನಾ ಉದ್ವಿಗ್ನತೆಯ ಮಟ್ದ ಮೇಲೆ ಪರಿಣಾಮ ಬೀರುತ್ತದೆ . ಅಲ್ಪಾವಧಿಯಲ್ಲಿ ಕ್ಯುಮಿಂಟಾಂಗ್ ಪಕ್ಷದ ಗೆಲುವು ಸಂಘರ್ಷದ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಆದರೆ ಮಧ್ಯಮ ಅವಧಿಯಲ್ಲಿ ತೈವಾನಿನ  ಆತ್ಮತೃಪ್ತಿ ನಂತರ ಚೀನೀ ಸಾಹಸದ ಅಪಾಯವನ್ನು ಹೆಚ್ಚಿಸಬಹುದು ಮತ್ತು ಸಂಭಾವ್ಯವಾಗಿ, ಮಹಾನ್ ಶಕ್ತಿಯ ಘರ್ಷಣೆಯನ್ನು ಹೆಚ್ಚಿಸಬಹುದು.

ಆದಾಗ್ಯೂ, ಸಾರ್ವಜನಿಕ ಚಮತ್ಕಾರ ಅಥವಾ ಸಂಭಾವ್ಯ  ಕಠೋರವಾದ ಪರಿಣಾಮಗಳಿಗಾಗಿ  ಬೇರೆ ಯಾವ ಚುನಾವಣೆಯೂ ಅಮೆರಿಕದ ಚುನಾವಣೆಗೆ ಹೋಲಿಸಲಾಗುವುದು ಅಸಾಧ್ಯ. ಅಭ್ಯರ್ಥಿಗಳಾಗಿರಬಾರದು  ಎಂದು  ಬಹುಪಾಲು ಮತದಾರರು  ಬಯಸುವ ಇಬ್ಬರು ವೃದ್ಧರ ನಡುವಿನ ಮರುಪಂದ್ಯವೇ ಹೆಚ್ಚಾಗಿ ಪರಿಣಮಿಸಬಹುದಾದ  ಫಲಿತಾಂಶ ಎಂದು ನಂಬುವುದು ಕಷ್ಟ.

ಡೊನಾಲ್ಡ್ ಟ್ರಂಪ್ ಅವರ ಉಮೇದುವಾರಿಕೆಯೇ  ಅಮೆರಿಕದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಹಿಂದಿನ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳನ್ನು ರದ್ದುಗೊಳಿಸಲು ಪ್ರಯತ್ನಿಸಿದ ವ್ಯಕ್ತಿಯನ್ನು ರಿಪಬ್ಲಿಕನ್ ಪಕ್ಷವು ನಾಮನಿರ್ದೇಶನ ಮಾಡುತ್ತದೆ ಎಂಬದು ಪ್ರಜಾಪ್ರಭುತ್ವದ ದಾರಿದೀಪ ಎ೦ದುಕೊಳ್ಳುವ  ಅಮೆರಿಕದ ಪಾತ್ರವನ್ನು ಮಂಕಾಗಿಸುತ್ತದೆ. ಎರಡನೇ ಟ್ರಂಪ್ ಅವಧಿಯು ಸಾಕಾರಗೊ೦ಡರೆ ಗಂಭೀರವಾದ ಭೌಗೋಳಿಕ ರಾಜಕೀಯ ಅಪಾಯದ ಸಮಯದಲ್ಲಿ ಪ್ರತ್ಯೇಕತೆಯ ಪ್ರವೃತ್ತಿಯೊಂದಿಗೆ ಅಮೆರಿಕವನ್ನು ಸಡಿಲವಾದ ಅನಿಯಂತ್ರಿತ ಫಿರಂಗಿಯಾಗಿ ಪರಿವರ್ತಿಸುತ್ತದೆ. ಬಲಿಷ್ಠರ ಬಗ್ಗೆ, ವಿಶೇಷವಾಗಿ ಪುಟಿನ್ ಅವರ ದಿಶೆಯಲ್ಲಿ ಟ್ರ೦ಪ್  ತೋರಿಸುತ್ತಿರುವ ಒಲವು, ಹಾಗೆಯೇ ರಷ್ಯಾ-ಉಕ್ರೇನ್ ಸಂಘರ್ಷವನ್ನು 24 ಗಂಟೆಗಳಲ್ಲಿ ಕೊನೆಗೊಳಿಸುವ ಅವರ ಹೆಗ್ಗಳಿಕೆಯು, ಉಕ್ರೇನ್ ಹಿತಾಸಕ್ತಿಗೆ  ವಿರುಧ್ಧವಾಗಿರುತ್ತದೆ  ಎಂದು ಸೂಚಿಸುತ್ತದೆ.

ಡೊನಾಲ್ಡ್ ಟ್ರಂಪ್ ನಾಮನಿರ್ದೇಶಿತರಾಗದಿರಬಹುದು. ರಿಪಬ್ಲಿಕನ್ ಪಕ್ಷ ಅವರನ್ನು ಕಣಕ್ಕಿಳಿಸಿದಲ್ಲಿ  ಅವರು ಸೋಲಬಹುದು. ಆದರೆ ಎರಡನೇ ಟ್ರಂಪ್ ಅವಧಿಯ ಸಾಧ್ಯತೆ ಆತಂಕಕಾರಿಯಾಗಿ ಹೆಚ್ಚಾಗಿದೆ. ಇದರ ಪರಿಣಾಮಗಳು ಪ್ರಜಾಪ್ರಭುತ್ವಕ್ಕೆ ಮತ್ತು ಜಗತ್ತಿಗೆ ದುರಂತವಾಗಬಹುದು.


(ದಿ ಇಕಾನಮಿಸ್ಟ್ ಪತ್ರಿಕೆಯಲ್ಲಿ ಅದರ ಮುಖ್ಯ ಸ೦ಪಾದಕ ಝಾನ್ನಿ ಮಿ೦ಟನ್ ಬೆಡ್ಡೊಸ್)



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು