ಕೋಮು  ವಿಷ

'ಕಲಿಸಿದ ಪಾಠಗಳು' ಮತ್ತು 'ನೀತಿವಂತ' ಹಿಂಸಾಚಾರದ ತಲೆಕೆಳಗಾದ ತರ್ಕ: ಸಾಮೂಹಿಕ ಹತ್ಯೆಯನ್ನು ನೈತಿಕವಾಗಿ  ಸಮರ್ಥಿಸಲಾಗುವ ರೀತಿ

ನಾಗರಿಕರ ಹತ್ಯೆಯನ್ನು 'ಆಕ್ರಮಣಕಾರಿ' ಅಲ್ಪಸಂಖ್ಯಾತರ ವಿರುದ್ಧ 'ರಕ್ಷಣಾರಹಿತ' ಬಹುಮತಸ್ಥರ ಪ್ರತಿರೋಧ ಎ೦ದು ನೋಡಲಾರಂಭಿಸಲಾಗುತ್ತಿದೆ.

ರಹೀಲ ಧತ್ತಿವಾಲಾ

‘ಸ್ಕ್ರೋಲ್. ಇನ್’ ನಲ್ಲಿ ಪ್ರಕಟಿತ ಲೇಖನ              ೫-೧೨-೨೦೨೨

‘Lessons taught’ and the inverted logic of righteous violence: How mass murder is morally justified

ಗೃಹ ಸಚಿವ ಅಮಿತ್ ಶಾ ನವೆಂಬರ್ 25 ರಂದು ಗುಜರಾತ್‌ನಲ್ಲಿ | @AmitShah/Twitter



1984ರಲ್ಲಿ ನಡೆದ ಸಿಖ್ಖರ ಹತ್ಯೆ ಮತ್ತು 2002ರಲ್ಲಿ ಗುಜರಾತ್‌ನಲ್ಲಿ ಮುಸ್ಲಿಮರ ಹತ್ಯೆಯ ನಡುವೆ ಗಮನಾರ್ಹ ಸಾಮ್ಯತೆಗಳಿವೆ. ಕೆಲವನ್ನು ಹೆಸರಿಸಲು:

1. ಆ ಸಮಯದಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರಗಳು - ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷ - ಎರಡು  ಹತ್ಯಾಕಾಂಡಗಳನ್ನೂ. ಹಿಂದಿನ ಪ್ರಚೋದಕಗಳಿಗೆ ಹಿಂದೂಗಳ "ಸ್ವಾಭಾವಿಕ" ಪ್ರತಿಕ್ರಿಯೆಗಳಾಗಿವ ಎ೦ದು ಘೋಷಿಸಿದ್ದವು.


2. ಪ್ರಚೋದಕ ಘಟನೆಗಳ ನಂತರ ತಕ್ಷಣವೇ ನಡೆದ ಮುಚ್ಚಿದ-ಬಾಗಿಲಿನ ಸಭೆಗಳಲ್ಲಿ, ಎರಡೂ ಪಕ್ಷಗಳು  ಅಲ್ಪಸಂಖ್ಯಾತರ ಮನೆಗಳನ್ನು ಗುರಿಯಾಗಿಸಲು ದಾಳಿಕೋರರಿಗೆ ಮೂರು ದಿನಗಳ ಕಾಲ ಮುಕ್ತ ಅವಕಾಶವನ್ನು ನೀಡಲು  ತೀರ್ಮಾನಿಸಿದವು  - ಕಾ೦ಗ್ರೆಸ್ಸಿನ ಪ್ರಕರಣದಲ್ಲಿ  ಸಿಖ್ಖರು ಮತ್ತು ಬಿಜೆಪಿಯ ಸಂದರ್ಭದಲ್ಲಿ ಮುಸ್ಲಿಮರು.


3. ಎರಡೂ ಘಟನೆಗಳಲ್ಲಿ ಪೋಲೀಸರು ಲೇಖಕ ಖುಷ್ವಂತ್ ಸಿಂಗ್ ಹೇಳಿದ೦ತೆ,  "ತಮಾಶ್ಬೀನ್" (ಹಿ೦ದಿ - तमाशबीन) ಅಥವಾ ಹತ್ಯಾಕಾಂಡವನ್ನು ನೋಡುವ ಪ್ರೇಕ್ಷಕರಂತೆ ವರ್ತಿಸಿದರು.


 4. ನಿರ್ಣಾಯಕವಾಗಿ, ಎರಡೂ ಘಟನೆಗಳಲ್ಲಿ, ಸಾಮೂಹಿಕ ಹತ್ಯೆಯನ್ನು ಸಮರ್ಥಿಸುವ ಸಾಮಾನ್ಯ ಪಲ್ಲವಿ ಎಂದರೆ "ದುಷ್ಕರ್ಮಿಗಳಿಗೆ ಪಾಠ ಕಲಿಸಲಾಯಿತು". 1984 ರ ಸಿಖ್ಖರ ಮೇಲಿನ ದಾಳಿಯ ಆರಂಭಿಕ ತನಿಖೆಯೊಂದರಲ್ಲಿ, ಜಿನೀವಾದಲ್ಲಿ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹಿಂದೂ ಅಧಿಕಾರಿಯೊಬ್ಬರು ತನಿಖಾಧಿಕಾರಿಗಳಿಗೆ, ಹಿಂಸಾಚಾರದ ಕೇಳಿಯನ್ನು ಅನುಮತಿಸಲಾಯಿತು, "ಇದರಿಂದಾಗಿ ಜನರು  ನಿಗ್ರಹಿಸಿದ ಭಾವನೆಯನ್ನು ಬಿಡುಗಡೆ ಮಾಡಬಹುದು ಮತ್ತು ಪಂಜಾಬ್‌ನಲ್ಲಿ (ಉಗ್ರಗಾಮಿ) ಸಿಖ್ಖರಿಗೆ ಪಾಠ ಕಲಿಸಬಹುದು”, ಎಂದು ಹೇಳಿದರು


ಗುಜರಾತಿನಲ್ಲಿ, ಸೆಪ್ಟೆಂಬರ್ 2002 ರಲ್ಲಿ ಮೆಹ್ಸಾನಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ, ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು, ಮುಸ್ಲಿಮರ ಹತ್ಯಾಕಾಂಡವನ್ನು ಮುಸ್ಲಿಮರಿಗೆ  ಸಲ್ಲತಕ್ಕ ಘಟನೆ ಎ೦ದು  ತಮ್ಮ ಭಾಷಣ ಕೇಳುವ  ಸಭಿಕರು  ಅರ್ಥಮಾಡಿಕೊಳ್ಳುತ್ತಾರೆ  ಎಂದು ಖಚಿತಪಡಿಸಿಕೊಂಡರು: “ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಇರುವವರಿಗೆ  ಪಾಠ ಕಲಿಸಬೇಕು. ”


ಅದೇ ರೀತಿ, 2002 ರ ಹಿಂಸಾಚಾರದ ನಂತರ ನಾನು ಅಹಮದಾಬಾದ್‌ನಲ್ಲಿ ಭೇಟಿಯಾದ ಹಿರಿಯ ಪೋಲೀಸ್‌ನೊಬ್ಬನು ಪೋಲೀಸರು  ಏಕೆ ಏನನ್ನೂ ಮಾಡಲಿಲ್ಲ ಎಂದು ನನಗೆ ಶಾಂತವಾಗಿ ಹೇಳಿದರು: “ಒಂದು ಪಾಠವನ್ನು ಕಲಿಸಬೇಕಾಗಿದೆ ... ನಾವು ಹಿಂದೂಗಳು ಸಹಿಷ್ಣು ಜನರು ಮತ್ತು ಅವರಂತಲ್ಲದೆ [ಮುಸ್ಲಿಮರು] ‘ಪಾಪ’ ಮತ್ತು ‘ಪುಣ್ಯ’ದ ಪರಿಕಲ್ಪನೆಗಳಲ್ಲಿ  ನಂಬುತ್ತೇವೆ”.


ನವೆ೦ಬರ್ ೨೫ರ೦ದು  ಗೃಹ ಸಚಿವ ಅಮಿತ್ ಶಾ ಅವರು  ನಮಗೆ  ನೆನಪಿಗೆ ತ೦ದ "ಪಾಠ ಕಲಿಸಿದ" ಸಮರ್ಥನೆಯು ಸಾಮೂಹಿಕ  ಹಿಂಸೆಯ ಪಠ್ಯಪುಸ್ತಕ  ಭಾಷೆಯಾಗಿದೆ - ಇದು ರಾಜ್ಯದಿಂದ ನಾಗರಿಕರ ಸಾಮೂಹಿಕ ಹತ್ಯೆಗಳನ್ನು ನೈತಿಕವಾಗಿ ಸಮರ್ಥಿಸಲು ಪ್ರಯತ್ನಿಸುವ ಬುದ್ಧಿವಂತ  ಕುಹಕ ಮನಸ್ಸಿನ ಕಪಟ  ಆಟವಾಗಿದೆ. ಗುಜರಾತ್ ಮತ್ತು ದೆಹಲಿ ಅಲ್ಲದೆ ರಾಜ್ಯವು ತನ್ನ ಹೊಣೆಗಾರಿಕೆಯ ನಿಸ್ಚಿ೦ತವಾಗಿ  ತಾನೇ ಮನ್ನಾ ಮಾಡುವದನ್ನು  1983 ರಲ್ಲಿ ಶ್ರೀಲಂಕಾದಲ್ಲಿ ಸಿಂಹಳೀಯರಿಂದ 3,000 ತಮಿಳರನ್ನು ಮತ್ತು ರುವಾಂಡಾದಲ್ಲಿ ಅರ್ಧ ಮಿಲಿಯನ್ ಟುಟ್ಸಿಗಳನ್ನುಕೊಲ್ಲುವದನ್ನು ಸಮರ್ಥಿಸಲು ಉಪಯೋಗಿಸಲಾಯಿತು  - ಅವರಿಗೆ "ಪಾಠ ಕಲಿಸಬೇಕಾಗಿದೆ" ಎ೦ದು  ಸರಳವಾಗಿ ಹೇಳಲಾಯಿತು. 


ಆದ್ದರಿಂದ ಕಾನೂನು ದೃಷ್ಟಿಕೋನದಿಂದ ಹತ್ಯೆಗಳು ತಪ್ಪಾಗಿದ್ದರೂ, ನೈತಿಕವಾಗಿ ನೀತಿಬಧ್ಧವೆ೦ದು ಬಿಂಬಿಸುವುದರಿಂದ ಸಾರ್ವಜನಿಕರ ಮನಸ್ಸಿನಲ್ಲಿ ತಮ್ಮ ಸಹ-ನಾಗರಿಕರ ಸಾಮೂಹಿಕ ಹತ್ಯೆಗಳ ಯಾವುದೇ ಅಪಶ್ರುತಿಯನ್ನು ತಣಿಸುತ್ತದೆ.


ಒಮ್ಮೆ  ನೈತಿಕವಾಗಿ ಸರಿ ಎಂದು ನಂಬಿದರೆ - ಕಾನೂನಾತ್ಮಕವಾಗಿ ತಪ್ಪಾಗಿದ್ದರೂ - ಪರಿಹಾರದ ಕಡೆಗೆ ಯಾವುದೇ ಹೊಣೆಗಾರಿಕೆಯಿಂದ ರಾಜ್ಯವು ನುಣುಚಿಕೊಳ್ಳುವುದು ಸುಲಭವಾಗುತ್ತದೆ.  ಭಾರತೀಯ ಸರ್ಕಾರಗಳು ಪದೇ ಪದೇ ವಾದಿಸಿದಂತೆ, ಇವುಗಳು ಜನಸಮೂಹಗಳು ಕೇವಲ ತಮ್ಮ ಹತ್ತಿಕ್ಕಲಾಗಿದ್ದ ಕೋಪವನ್ನು ತನ್ನಷ್ಟಕ್ಕೆ ತಾನೇ ಹೊರ ಹೊಮ್ಮುವ  "ಸ್ವಾಭಾವಿಕ" ಘಟನೆಗಳಲ್ಲದೆ ಬೇರೇನೂ ಅಲ್ಲ.

ಫೆಬ್ರವರಿ 2020 ರಲ್ಲಿ ನಡೆದ ಗಲಭೆಗಳ ಸಂದರ್ಭದಲ್ಲಿ ಈಶಾನ್ಯ ದೆಹಲಿಯ ಬೀದಿಗಳಲ್ಲಿ ಹಿಂಸಾತ್ಮಕ ಗುಂಪು. ಕ್ರೆಡಿಟ್: ರಾಯಿಟರ್ಸ್.

ಭಾರತದಲ್ಲಿ ಮತ್ತು ಬೇರೆಡೆ ನಾಗರಿಕರ ಕೊಲೆಗಳನ್ನು ಕೇವಲ ನ್ಯಾಯಸಮ್ಮತವಾದ ಹತ್ಯೆಯಾಗಿ ಕಾಣುವ ಪರಿಸ್ಥಿತಿಯಲ್ಲಿ , ನಿಜವಾದ ಅಪರಾಧಿಗಳ ಶಿಕ್ಷೆಯ ಪ್ರಮಾಣವು ತೀರಾ ಅಸಹ್ಯವಾಗಿ ಕಡಿಮೆಯಾಗಿದೆ. ಕೆಲವರ ಕೃತ್ಯಗಳಿಗಾಗಿ ಇಡೀ ಸಮುದಾಯವನ್ನು ದೂಷಿಸುವಲ್ಲಿ, ಆಕ್ರಮಣಕಾರ ಮತ್ತು ಬಲಿಪಶುಗಳ ನಿಜವಾದ ವರ್ಗಗಳನ್ನು ವ್ಯತಿರಿಕ್ತಗೊಳಿಸಲಾಗುತ್ತದೆ: ಯಾರ ಮೇಲೆ ಹಿಂಸಾಚಾರವನ್ನು ಆಚರಣೆ ಮಾಡಲಾಗುತ್ತದೆಯೋ ಅವರ ಮೇಲೆಯೇ  ಅಪರಾಧಿಗಳು ಎನ್ನುವ ಪಟ್ಟಿ ಅ೦ಟಿಸಲಾಗುತ್ತದೆ.

1984 ರಲ್ಲಿ ಸಿಖ್ ಹಿಂಸಾಚಾರದ ತನ್ನ ವಿಶ್ಲೇಷಣೆಯಲ್ಲಿ, ಮಾನವಶಾಸ್ತ್ರಜ್ನೆ ವೀಣಾ ದಾಸ್ "ಸಿಖ್ ಗುಣಲಕ್ಷಣ" ಎ೦ದು ಹೇಳುವ ಒ೦ದನ್ನು  ಹೇಗೆ ಇಡೀ ಸಮುದಾಯಕ್ಕೆ ಆರೋಪಿಸಲಾಯಿತು ಎ೦ಬುದನ್ನು ಗಮನಿಸಿದ್ದಾರೆ:   ಸಿಖ್ ಒಬ್ಬನು  ನಿಷ್ಠೆಯನ್ನು ಆಚರಿಸುವುದಿಲ್ಲ; ತನಗೆ ಉಣಿಸುವ ಕೈಯನ್ನು ಕಚ್ಚುವ ಹಾವಿನಂತೆ; ಸ್ವಾಭಾವಿಕವಾಗಿ ಆಕ್ರಮಣಕಾರಿ ಮತ್ತು ಹಿಂಸಾಚಾರಕ್ಕೆ ಆಕರ್ಷಿತವಾಗುವ ಗುಣ , ಇತ್ಯಾದಿ.


ಇಡೀ ಸಮುದಾಯದ ಅಂತಹ ಒಟ್ಟಾಗಿಸುವ  "ಗುಣ"ವು  ಅಭಿಪ್ರಾಯದಲ್ಲಿನ ವೈಯಕ್ತಿಕ ವ್ಯತ್ಯಾಸವನ್ನು ತೆಗೆದುಹಾಕಿತು: ಅನೇಕ ಸಿಖ್ಖರು ಉಗ್ರಗಾಮಿಗಳ ಕೃತ್ಯಗಳನ್ನು ನಂಬಿದಂತೆಯೇ ಅನೇಕರು ಅದನ್ನು ಸಂಪೂರ್ಣವಾಗಿ ಖಂಡಿಸಿದರು, ಆದರೆ ಇಡೀ ಸಿಖ್ ಸಮುದಾಯ ಆಕ್ರಮಣಕಾರಿ ಮತ್ತು ಅಪಾಯಕಾರಿ ಎಂದು ಚಿತ್ರಿಸಲಾಗಿದೆ. ಇಂದು "ಸಿಖ್ ಗುಣ" ವನ್ನು "ಮುಸ್ಲಿಂ ಗುಣ" ಕ್ಕೆ ಬದಲಾಯಿಸಬಹುದು. ಅಥವಾ "ಟುಟ್ಸಿ ಗುಣ" ಅಥವಾ "ತಮಿಳು ಗುಣ" ಕ್ಕೆ.


ಕೆಲವರ ಕೃತ್ಯಗಳಿಗೆ ಇಡೀ ಸಮುದಾಯವನ್ನೇ ದೂಷಿಸುವುದರಲ್ಲಿ ತರ್ಕ ತಲೆಕೆಳಗಾಗುತ್ತದೆ. ಹಿಂಸಾಚಾರವು ನೈತಿಕವಾಗಿ ಸಮರ್ಥನೀಯವಾಗುತ್ತಿದ್ದಂತೆ, ನಾಗರಿಕರ ಹತ್ಯೆಯು "ಆಕ್ರಮಣಕಾರಿ" ಅಲ್ಪಸಂಖ್ಯಾತರ ವಿರುದ್ಧ "ರಕ್ಷಣಾರಹಿತ" ಬಹುಸಂಖ್ಯಾತರ ಪ್ರತಿರೋಧದ ರೂಪವಾಗಿ ಕಂಡುಬರುತ್ತದೆ. ರುವಾಂಡಾದಲ್ಲಿ ಟುಟ್ಸಿಗಳ ನರಮೇಧದ ಹಿಂದಿನ ಅವಧಿಯಲ್ಲಿ, ರುವಾಂಡನ್ ಆಡಳಿತವು  ಅಲ್ಪಸಂಖ್ಯಾತ ಟುಟ್ಸಿ "ಇನ್ಯೆಂಜಿ" (ಜಿರಳೆಗಳ)  ವಿರುಧ್ಧ ಬಹುಸಂಖ್ಯಾತ ಹುಟು ಸಮಾಜವು ತಮ್ಮ  ರಕ್ಷಣೆಯನ್ನು ಸಿದ್ಧಪಡಿಸುವಂತೆ ಒತ್ತಾಯಿಸುವ ಸಂದೇಶಗಳನ್ನು ಸತತವಾಗಿ ಪ್ರಸಾರ ಮಾಡಿತು.


ನಾನು ಬೇರೆಡೆ ವಾದಿಸಿದಂತೆ, ಜನಾಂಗೀಯ ಅಮಾನವೀಯೀಕರಣವು ಐತಿಹಾಸಿಕವಾಗಿ ನೈತಿಕವಾಗಿ ಸಮರ್ಥನೀಯವೆ೦ದು ವಾದಿಸಲಾದ  ಯುದ್ಧ ಮತ್ತು ಅಲ್ಪಸಂಖ್ಯಾತ ಗುಂಪುಗಳ ನರಮೇಧಕ್ಕೆ ಪೂರ್ವಭಾವಿಯಾಗಿದೆ, ಉದಾಹರಣೆಗೆ, ಯಹೂದಿಗಳನ್ನು "ಕ್ರಿಮಿಕೀಟಗಳು" ಎಂದು ಕರೆಯುವ ನಾಜಿ ಅಮಾನವೀಯೀಕರಣ ಮತ್ತು ಭಾರತದಲ್ಲಿನ ಮುಸ್ಲಿಮರನ್ನು “ಗೆದ್ದಲು” ಗಳೊಂದಿಗೆ ಇತ್ತೀಚಿನ ಹೋಲಿಕೆ. (ಅನುವಾದಕರ ಟಿಪ್ಪಣಿ:ಇದನ್ನು ಮಾಡಿದವರು ಈಗಿನ ಗೃಹ ಮ೦ತ್ರಿ ಅಮಿತ್ ಶಾಹ್ - ಚುನಾವಣೆಯ ಸಮಯದಲ್ಲಿ)


ಸಾಮೂಹಿಕ ಹತ್ಯೆಗಳಿಗೆ ನೈತಿಕ ಬಣ್ಣ ನೀಡುವ ಮೂಲಕ ಕಾನೂನು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸುಸಂಸ್ಕೃತ ಸಮಾಜಕ್ಕೆ ವಿರುದ್ಧವಾಗಿದೆ. ಇಂದು ರಾಯಭಾರಿ ರುಚಿರಾ ಕಾಂಬೋಜ್ ಅವರು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಛೀಮಾರಿ ಹಾಕಿದರೆ, ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದು ಕಷ್ಟ.


ರಹೀಲ್ ಧತ್ತಿವಾಲಾ ಅವರು ಸಮಾಜಶಾಸ್ತ್ರಜ್ಞರು, ಹಿಂದೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಹವರ್ತಿ ಮತ್ತು ಬೋಧಕರಾಗಿದ್ದರು. ಇವರ ಪುಸ್ತಕ :  Keeping the Peace: Spatial Differences in Hindu-Muslim Violence in Gujarat in 2002, Cambridge University Press, 2019


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು