ನಾದವ್ ಲಾಪಿಡ್ :  ‘ಕಾಶ್ಮೀರ ಫೈಲ್ಸ್’ ಟೀಕೆಗಳನ್ನು ಮಾಡಿದ ಕಾರಣ ಮತ್ತು ಅದರ ತಕ್ಷಣದ ಪರಿಣಾಮಗಳು: ‘ಆತಂಕ, ಅಸ್ವಸ್ಥತೆ’

nadav lapidಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ.

‘ಕಾಶ್ಮೀರ್ ಫೈಲ್ಸ್’ ಚಲನ ಚಿತ್ರದ  ವಿರುದ್ಧ ತನ್ನ ಮಹಾನ್  ರಾಜಕೀಯ ಹೇಳಿಕೆಯನ್ನು ನೀಡುವ ಮೊದಲು ಇಡೀ ದಿನ ತಾನು 'ಆತಂಕಿತನಾಗಿದ್ದೆ' ಎಂದು ನಾದವ್ ಲಾಪಿಡ್ ಹೇಳಿದರು. ‘ಜನರು ಬಂದು ನನಗೆ ಧನ್ಯವಾದ ಹೇಳಿದರು’, ಎಂದು ಅವರು ನಂತರದ ಘಟನೆಗಳ ಬಗ್ಗೆ ಹೇಳಿದರು.

-ಇಂಡಿಯನ್ ಎಕ್ಸ್‌ಪ್ರೆಸ್| ನವೆಂಬರ್ 30, 2022 9:01:45 am

ಇತ್ತೀಚೆಗೆ ಮುಕ್ತಾಯಗೊಂಡ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ತಮ್ಮ ಕಾಮೆಂಟ್‌ಗಳಿಂದ ಕೋಲಾಹಲಕ್ಕೆ ಕಾರಣರಾದ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ಸಂದರ್ಶನವೊಂದರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ವಿರುದ್ಧ ಮಾತನಾಡುವುದು 'ಸುಲಭವಾಗಿದ್ದಿಲ್ಲ' ಮತ್ತು ಈ ಬಗ್ಗೆ ಅನುಭವಿಸಿದ ಆತಂಕದ ಬಗ್ಗೆ ವ್ಯಕ್ತಪಡಿಸಿದರು. ಉತ್ಸವದ ಸೋಮವಾರದ ಸಮಾರೋಪ ಸಮಾರಂಭದಲ್ಲಿ, ತೀರ್ಪುಗಾರರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಲ್ಯಾಪಿಡ್ ಅವರು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಚಲನಚಿತ್ರವನ್ನು 'ಅಶ್ಲೀಲ, ಪ್ರಚಾರ' ಎಂದು ಕರೆದರು.

ಗಣ್ಯರು ಮತ್ತು ಚಿತ್ರರಂಗದ ಪ್ರಸಿಧ್ಧ ವ್ಯಕ್ತಿಗಳಿಂದ ತುಂಬಿದ್ದ ಜನಸಮೂಹದ ಮುಂದೆ ಅವರು ಈ ಹೇಳಿಕೆಯನ್ನು ನೀಡಿದರು, ತಕ್ಷಣವೇ ಅವರ ಮಾತಿನ ಪ್ರಭಾವವು ಎಲ್ಲೆಡೆ ಹರಡಿತು. ನಂತರದ ಗಂಟೆಗಳಲ್ಲಿ, ಅಗ್ನಿಹೋತ್ರಿ ಮತ್ತು ಅವರ ‘ಕಾಶ್ಮೀರ ಫೈಲ್‌’ ಪಾತ್ರವರ್ಗದ ಸದಸ್ಯರು, ಹಾಗೂ  ಭಾರತದಲ್ಲಿ ಇಸ್ರೇಲ್‌ನ ರಾಯಭಾರಿ ಲ್ಯಾಪಿಡ್‌ನ ಕಾಮೆಂಟ್‌ಗಳನ್ನು  ಟೀಕಿಸಿದರು. ಕೆಲವರು - ಆದರೆ ಲ್ಯಾಪಿಡ್‌ ಅಲ್ಲ-  ಕ್ಷಮೆಯನ್ನು ಕೇಳಿದರು.  ಲಾಪಿಡ್ ಆದರೋ ಇಸ್ರೇಲಿ ವಾರ್ತಾ ಘಟಕ ‘ಯೆನೆಟ್‌’ಗೆ  “ವಿಮಾನ ನಿಲ್ದಾಣಕ್ಕೆ ಹೊರಟಿದ್ದೇನೆ, ಅಷ್ಟಕ್ಕೇ   ಸಂತೋಷ” ಎಂದು ಹೇಳಿದರು. "ಇಲ್ಲಿ ಏನು ನಡೆಯುತ್ತಿದೆ, ಇದು ಹುಚ್ಚುತನ," ಎ೦ದೂ ಅವರು ಹೇಳಿದರು.

ಚಿತ್ರವನ್ನು ವೀಕ್ಷಿಸಿದಾಗ, ಅದು ಕಾಶ್ಮೀರದ ಕುರಿತಾದ ಸರ್ಕಾರದ ನಿರೂಪಣೆಯನ್ನೇ ಎಷ್ಟು ನಿರ್ಲಜ್ಜವಾಗಿ ಅನುಸರಿಸುತ್ತದೆ ಎಂಬದು ತಮಗೆ ಬಲವಾಗಿ ಹೊಳೆಯಿತು ಎ೦ದು ಅವರು ಹೇಳಿದರು. ಈ ಚಿತ್ರವು 90 ರ ದಶಕದಲ್ಲಿ ಕಾಶ್ಮೀರಿ ಹಿಂದೂಗಳ ಸಾಮೂಹಿಕ ವಲಸೆಯನ್ನು ಆಧರಿಸಿದೆ ಮತ್ತು ಒಂದೇ ಒಂದು ದೃಶ್ಯ ಅಥವಾ ಸಂಭಾಷಣೆಯ ಸಾಲುಗಳನ್ನು ಬನಾವಟಿಯಾಗಿ ನಿರ್ಮಿಸಲಾಗಿಲ್ಲ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.  ಆದರೆ ಲ್ಯಾಪಿಡ್ ಅವರು “ಇದು ಮೂಲತಃ ಕಾಶ್ಮೀರದಲ್ಲಿನ ಭಾರತೀಯ ನೀತಿಯನ್ನು ಸಮರ್ಥಿಸುತ್ತದೆ ಮತ್ತು ಇದು ಫ್ಯಾಸಿಸ್ಟ್ ಲಕ್ಷಣಗಳನ್ನು ಹೊಂದಿದೆ” ಎಂದು ಹೇಳಿದರು. ‘ದಿ ಕಾಶ್ಮೀರ್ ಫೈಲ್ಸ್’ನಂತಹ ಚಿತ್ರ ಮುಂದಿನ ಒ೦ದೆರಡು ವರ್ಷಗಳಲ್ಲಿ  ಇಸ್ರೇಲ್‌ನಲ್ಲಿ ಬಂದರೂ ಆಶ್ಚರ್ಯವಿಲ್ಲ  ಎಂದರು ಅವರು.

ರಾಜಕೀಯ ಹೇಳಿಕೆ ನೀಡುವ ಮುನ್ನ ಅವರ ಮನಸ್ಸಿನಲ್ಲಿ ಏನು ಹೊಮ್ಮಿತು, ಅವರ ಮಾತು ಬಿರುಗಾಳಿ ಎಬ್ಬಿಸುತ್ತದೆ ಎಂದು ತಿಳಿದಿದ್ದರೇ, ಎಂದು ಕೇಳಿದರೆ, "ಇದು ದೇಶಕ್ಕೆ ಭಯಂಕರವಾಗಿ ಭಾವನಾತ್ಮಕ ಸಂಪರ್ಕ ಹೊಂದಿದ ಘಟನೆ ಎಂದು ನನಗೆ ತಿಳಿದಿತ್ತು. ಮತ್ತು ಎಲ್ಲರೂ ಅಲ್ಲಿ ನಿಂತು ಸರ್ಕಾರವನ್ನು ಹೊಗಳುತ್ತಾರೆ. ಇದು ಸುಲಭದ ಪರಿಸ್ಥಿತಿಯಲ್ಲ, ಏಕೆಂದರೆ ಓರ್ವನು ಅತಿಥಿಯಾಗಿರುತ್ತಾನೆ.  ನಾನು ಇಲ್ಲಿ ತೀರ್ಪುಗಾರರ ಅಧ್ಯಕ್ಷನಾಗಿದ್ದೇನೆ, ನಮ್ಮನ್ನು ತುಂಬಾ ಚೆನ್ನಾಗಿ ನಡೆಸಿಕೊಳ್ಳಲಾಗುತ್ತದೆ. ತದನಂತರ  ಬಂದು ಉತ್ಸವದ ಮೇಲೆ ದಾಳಿ ಮಾಡುತ್ತೀರಿ. ಆತಂಕವಿತ್ತು, ಅಸ್ವಸ್ಥತೆ ಇತ್ತು. ಆಯಾಮಗಳು ಏನೆಂದು ನನಗೆ ತಿಳಿದಿರಲಿಲ್ಲ, ಆದ್ದರಿಂದ ನಾನು ಅದನ್ನು ಸ್ವಲ್ಪ ಭಯದಿಂದ ಮಾಡಿದೆ. ಹೌದು, ನಾನು ಆತಂಕದಿಂದ ದಿನ ಕಳೆದೆ.  ಹೀಗೆ ಹೇಳೋಣ: ನಾನು ಈಗ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವುದಕ್ಕೆ ಸಮಾಧಾನವಿದೆ.”

 

ಲ್ಯಾಪಿಡ್ ಅವರ ಭಾಷಣದ ನಂತರ, ಅವರು ಹೇಳಿದ ಮಾತಿಗೆ ಧನ್ಯವಾದ ಹೇಳಲು ಜನರು ತಮ್ಮ ಬಳಿಗೆ ಬಂದರು ಎಂದು ಹೇಳಿದರು. ಅವರು ನಿಖರವಾಗಿ ಯಾರ ಬಗ್ಗೆ ಮಾತನಾಡುತ್ತಿದ್ದಾರೆಂದು ಗುರುತಿಸಲಿಲ್ಲ. "ಇದು ಸಾವಿರಾರು ಜನರನ್ನು ಹೊಂದಿರುವ ಸಭಾಂಗಣವಾಗಿತ್ತು, ಮತ್ತು ಪ್ರತಿಯೊಬ್ಬರೂ ಸ್ಥಳೀಯ ತಾರೆಗಳನ್ನು ನೋಡಲು ಮತ್ತು ಸರ್ಕಾರದ ಪರವಾಗಿ ಘೋಷಿಸಲು   ಭಾವಪರವಶರಾಗಿದ್ದರು. ಆದರೆ ತನ್ನ ಮನಸ್ಸಿನಲ್ಲಿ ತೋರಿದ್ದನ್ನು  ಮಾತನಾಡುವ ಅಥವಾ ಸತ್ಯವನ್ನು ಹೇಳುವ ಸಾಮರ್ಥ್ಯವನ್ನು ಹೆಚ್ಚು ಹೆಚ್ಚಾಗಿ ಕಳೆದುಕೊಳ್ಳುತ್ತಿರುವ ದೇಶಗಳಲ್ಲಿ, ಯಾರಾದರೂ ಹಿ೦ಜರಿಯದೆ ಮಾತನಾಡುವ ಅಗತ್ಯವಿದೆ. ನಾನು ಈ ಚಲನಚಿತ್ರವನ್ನು ನೋಡಿದಾಗ, ಇದೀಗ ಅಸ್ತಿತ್ವದಲ್ಲಿಲ್ಲದ ಆದರೆ ಖಂಡಿತವಾಗಿಯೂ ಅಸ್ತಿತ್ವಕ್ಕೆ ಬರಬಹುದಾದ ಅದರ ಇಸ್ರೇಲಿ ಸಮಾನತೆಯನ್ನು ನಾನು ಊಹಿಸುವದು ಅನಿವಾರ್ಯವಾಯಿತು.  ಹಾಗಾಗಿ ನಾನು ಅದನ್ನು ಹೇಳಲೇಬೇಕೆಂದು ನಾನು ಭಾವಿಸಿದೆ, ಏಕೆಂದರೆ ನಾನು ಸಹ ಸ್ವತಃ ಇನ್ನೂ ಸುಧಾರಣೆಯಾಗದ ಮತ್ತು ಇದೇ ಅನುಭವಗಳನ್ನು ಹೊ೦ದುವ  ದಾರಿಯಲ್ಲಿರುವ ಒ೦ದು  ಸ್ಥಳದಿಂದ ಬಂದಿದ್ದೇನೆ, ” ಎಂದು ಅವರು ಹೇಳಿದರು.

ತಮ್ಮ ಭಾಷಣದಲ್ಲಿ, ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ತೀರ್ಪುಗಾರರ ಅಭಿಪ್ರಾಯಗಳು ಸರ್ವಾನುಮತದಿಂದ ಕೂಡಿವೆ ಎಂದು ಲ್ಯಾಪಿಡ್ ಹೇಳಿದರು, ಆದರೆ ಸಹ ತೀರ್ಪುಗಾರ  ಸುದೀಪ್ತೋ ಸೇನ್ ಅವರು ಖಾಸಗಿಯಾಗಿದ್ದ ಚರ್ಚೆಗಳನ್ನು ಸಾರ್ವಜನಿಕ ಮಾಡುವ ಲ್ಯಾಪಿಡ್ ಅವರ ನಿರ್ಧಾರದಿಂದ ತನಗೆ ನೋವಾಗಿದೆ ಎಂದು ಹೇಳಿದರು. ಇದು ಲ್ಯಾಪಿಡ್ ಅವರ ವೈಯಕ್ತಿಕ ದೃಷ್ಟಿಕೋನವೇ ಹೊರತು ತೀರ್ಪುಗಾರರದ್ದಲ್ಲ ಎಂದು ಅವರು ಹೇಳಿದರು. 

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ಕಾಶ್ಮೀರ ಫೈಲ್ಸ್’ ಚಲನಚಿತ್ರ ಕಳಪೆ ವಿಮರ್ಶೆಗಳನ್ನು ಪಡೆಯಿತು, ಆದರೆ ಆಡಳಿತ ಪಕ್ಷದ ಸದಸ್ಯರ ಸಕಾರಾತ್ಮಕ ಮಾತುಗಳು ಮತ್ತು ಪ್ರಜ್ವಲಿಸುವ ಅನುಮೋದನೆಗಳು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 340 ಕೋಟಿ ರೂಪಾಯಿಗಳ ಗಡಿ ದಾಟಲು ಸಹಾಯ ಮಾಡಿತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು