ಸಾವರ್ಕರ್‌ರ ರಾಷ್ಟ್ರೀಯತೆ


ಕ್ರಿಸ್ಟೋಫ್ ಜಾಫ಼್ರೆಲೊ  ಫ್ರೆಂಚ್ ರಾಜಕೀಯ ವಿಜ್ಞಾನಿ ಮತ್ತು ದಕ್ಷಿಣ ಏಷ್ಯಾ, ವಿಶೇಷವಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ಪರಿಣತಿ ಹೊಂದಿರುವ ಭಾರತಶಾಸ್ತ್ರಜ್ಞ .

ಇವರ ಇತ್ತೀಚಿನ ಪುಸ್ತಕ “Modi's India: Hindu Nationalism and the Rise of Ethnic Democracy”.  (ಮೋದಿಯವರ ಭಾರತ: ಹಿಂದೂ ರಾಷ್ಟ್ರೀಯತೆ ಮತ್ತು ಜನಾಂಗೀಯ ಪ್ರಜಾಪ್ರಭುತ್ವದ ಉದಯ) ಅಗಸ್ಟ್ ೨೦೨೧ 


ಇ೦ಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆ ೩ ನವೆ೦ಬರ್ ೨೦೨೨



‘ರಾಷ್ಟ್ರದ ಬಗೆಗಿನ ಸಾವರ್ಕರ್ ಅವರ ದೃಷ್ಟಿಕೋನವು ಜನಾಂಗೀಯ-ಧಾರ್ಮಿಕವಾಗಿತ್ತು; ಅವರ ಗಮನವು ಮುಸ್ಲಿಮರ ವಿರುದ್ಧ ಹಿಂದೂಗಳನ್ನು ರಕ್ಷಿಸುವುದರಲ್ಲಿತ್ತು, ಇದಕ್ಕಾಗಿ ಅವರು ಬ್ರಿಟಿಷರೊಂದಿಗೆ ಸಹಕರಿಸಿದರು’


    ಭಾರತವು ಇಂದು ಅನುಭವಿಸುತ್ತಿರುವ ಇತಿಹಾಸವನ್ನು  ಪರಿಷ್ಕರಿಸುವ  ಅಲೆಯು ಪಠ್ಯಪುಸ್ತಕಗಳಲ್ಲಿ ಹಾಗೂ ಸಾರ್ವಜನಿಕ ಸ೦ವಾದದಲ್ಲಿ  ಗತಕಾಲದ ವಿವಿಧ ರೀತಿಯ ತಪ್ಪು ನಿರೂಪಣೆಯಲ್ಲಿ ಅಭಿವ್ಯಕ್ತಿ ಕಂಡುಕೊಳ್ಳುತ್ತದೆ. ಜವಾಹರಲಾಲ್ ನೆಹರು ಈ ಪ್ರವೃತ್ತಿಯ ಪ್ರಮುಖ ಬಲಿಪಶುಗಳಲ್ಲಿ ಒಬ್ಬರು - ಒಂದೋ ಅವರನ್ನು ಇತಿಹಾಸದಿಂದ ಅಳಿಸಲಾಗುತ್ತದೆ,  ಅಥವಾ ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ಆಧುನಿಕ ಭಾರತವನ್ನು ರೂಪಿಸುವುದರಲ್ಲಿ ಅವರ ಪಾತ್ರವನ್ನು ತಿರುಚಲಾಗುತ್ತಿದೆ. 


    ಸ್ವತಃ  ಮಹಾತ್ಮಾ ಗಾಂಧಿ ಅವರನ್ನು , ಸರ್ಕಾರವು ಭಾರತದಲ್ಲಿ ಮತ್ತು ಇನ್ನೂ ಹೆಚ್ಚಾಗಿ ವಿದೇಶಗಳಲ್ಲಿ ಅವರನ್ನು ಪೂಜಾವಿಗ್ರಹವಾಗಿ  ಬಳಸುವುದನ್ನು ಮುಂದುವರೆಸಿದರೂ, ಈಗ ಬಂದು ಭಾರತದ ಸ್ವಾತಂತ್ರ್ಯ ಹೋರಾಟದ ಮುಖ್ಯ ವಾಸ್ತುಶಿಲ್ಪಿ ಎಂದು ಗುರುತಿಸುವುದನ್ನು ಕೈಬಿಡಲಾಗಿದೆ. ಇಂದು ವೃತ್ತಿಪರರಲ್ಲದ ಇತಿಹಾಸಕಾರರು ‘ಸ್ವಾತಂತ್ರ್ಯವನ್ನು ಗೆದ್ದವರು ಗಾಂಧಿಯನ್ನು ಲೆಕ್ಕಿಸದೆ ಶಸ್ತ್ರಗಳನ್ನು ಕೈಗೆತ್ತಿಕೊಂಡವರು’ ಎಂದು ಹೇಳುತ್ತಾರೆ. ಅವರಲ್ಲಿ ಕೆಲವರು ನಾನು ಇತ್ತೀಚೆಗೆ ಲಂಡನ್‌ನಲ್ಲಿ ನೋಡಿದ ನಾಟಕ, ‘The Father and the Assassin’ - ’ದಿ ಫಾದರ್ ಅಂಡ್ ದಿ ಅಸ್ಸಾಸಿನ್‌’ - ನಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ  ವೀರ್ ಸಾವರ್ಕರ್ ಮತ್ತು ಅವರ ಶಿಷ್ಯರಾದ ನಾಥೂರಾಂ ಗೋಡ್ಸೆ ಅವರನ್ನು ನಿಜವಾದ ಕಥಾ ನಾಯಕರು   ಎಂದು ಪರಿಗಣಿಸುತ್ತಾರೆ. ಸಾವರ್ಕರ್ ಮತ್ತು ಗೋಡ್ಸೆ ನಿಜವಾಗಿಯೂ ಯಾರೆಂದು ತಿಳಿಯಲು, ಧೀರೇಂದ್ರ ಕೆ ಝಾ ಅವರ’ ಗಾಂಧಿಯ ಹಂತಕ’ ‘Gandhi’s Assassin’ ಮತ್ತು ವಿನಾಯಕ ಚತುರ್ವೇದಿಯವರ ‘ Hindutva and Violence: VDSavarkar and the Politics of History’-  ಹಿಂದುತ್ವ ಮತ್ತು ಹಿಂಸೆ: ವಿ.ಡಿ.ಸಾವರ್ಕರ್ ಮತ್ತು ಇತಿಹಾಸದ ರಾಜಕೀಯ - ಸೇರಿದಂತೆ ಅತ್ಯುತ್ತಮ ಪುಸ್ತಕಗಳನ್ನು ಓದಬಹುದು. ಇವೆರಡೂ ಇತ್ತೀಚೆಗೆ ಭಾರತದಲ್ಲಿ ಪ್ರಕಟವಾಗಿವೆ. ಇವು ಅನೇಕ ಪ್ರಶ್ನೆಗಳಿಗೆ ಉತ್ತರ ಹೊ೦ದಿವೆ, ಅವುಗಳಲ್ಲಿ ನನಗೆ ಸದ್ಯಕ್ಕೆ ತೋರುವ ಒ೦ದೇ ಪ್ರಶ್ನೆ : ನೆಹರೂ ಮತ್ತು ಗಾಂಧಿಯವರಿಗೆ ಹೋಲಿಸಿದರೆ ಸಾವರ್ಕರ್ ಯಾವ ಅರ್ಥದಲ್ಲಿ ರಾಷ್ಟ್ರೀಯವಾದಿಯಾಗಿದ್ದರು? 


    ಸಾವರ್ಕರ್ ಅವರು ಯುವಕನಾಗಿದ್ದಾಗ ಅಭಿವೃದ್ಧಿಪಡಿಸಿದ ಕ್ರಾಂತಿಕಾರಿ ಬದ್ಧತೆಯ ಕಾರಣದಿಂದಾಗಿ ರಾಷ್ಟ್ರೀಯತಾವಾದಿಯ ಚಿತ್ರಣವನ್ನು ಉಳಿಸಿಕೊಂಡರು, ಇದು ೧೯೧೦ರ ರಲ್ಲಿ ಅವರ ಬಂಧನಕ್ಕೆ ಕಾರಣವಾಯಿತು. ನಂತರ ಅವರನ್ನು ಅಂಡಮಾನ್‌ಗೆ ಕಳುಹಿಸಲಾಯಿತು ಮತ್ತು ೧೯೩೭ರ ವರೆಗೆ ಬ್ರಿಟಿಷರ ಕೈದಿಯಾಗಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ, ಅವರ ಮುಖ್ಯ ಗುರಿ ಮುಸ್ಲಿಮರಾಯಿತು. ಹಿಂದೂ ಮಹಾಸಭೆಯ  ಅಧ್ಯಕ್ಷರಾಗಿ ಅವರು ನೀಡಿದ ಅನೇಕ ಭಾಷಣಗಳಿಂದ ಈ ಬದಲಾವಣೆಯು ಸ್ಪಷ್ಟವಾಗಿದೆ.  ೧೯೪೧ರ ಹೊತ್ತಿಗೆ, ಅವರ ಮುಖ್ಯ ಧ್ಯೇಯವಾಕ್ಯವೆಂದರೆ “Hinduise all politics and militarise Hindudom” "ಎಲ್ಲ ರಾಜಕೀಯವನ್ನು ಹಿಂದುತ್ವಗೊಳಿಸಿ ಮತ್ತು ಹಿಂದುಧರ್ಮ ವನ್ನು ಮಿಲಿಟರೀಕರಣಗೊಳಿಸಿ" . ಇದು ಬ್ರಿಟಿಷರೊಂದಿಗೆ ತುಸು ಸಹಯೋಗವನ್ನು ಸೂಚಿಸುತ್ತದೆ. ರಾಜ್ ಸರ್ಕಾರವು ಬ್ರಿಟಿಷ್ ಸೈನ್ಯದಲ್ಲಿ ಭಾರತೀಯ ಸೈನಿಕರನ್ನು ನೇಮಿಸಿಕೊಳ್ಳುತ್ತಿತ್ತು ಮತ್ತು ಇದು ಸಾವರ್ಕರ್ ಅವರಿಗೆ "ನಮ್ಮ ಹಿಂದೂ ಜನಾಂಗವನ್ನು ಮಿಲಿಟರೀಕರಣಗೊಳಿಸುವ ಚಳುವಳಿಯನ್ನು  ಮು೦ದಕ್ಕೆ ಒತ್ತಲು  ಒಂದು ಅನನ್ಯ ಅವಕಾಶ" ಆಗಿತ್ತು. ಅವರು "ಇಂದು ಮುಸ್ಲಿಮರು ಬಹುತೇಕ ಏಕಸ್ವಾಮ್ಯವನ್ನು ಹೊಂದಿರುವ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಹಿಂದೂಗಳಿಗೆ ಶಾಶ್ವತವಾಗಿ ಪ್ರಬಲ ಸ್ಥಾನವನ್ನು ಪಡೆಯಲು ಬ್ರಿಟಿಷ್ ಸರ್ಕಾರದೊಂದಿಗೆ ಮಿಲಿಟರಿ ಸಹಕಾರವನ್ನು ವಿಸ್ತರಿಸುವ”  ಪರವಾಗಿದ್ದರು. ಅವರು ವೈಸ್ ರಾಯ್ ಅವರಿಗೆ ”ಮುಸಲ್ಮಾನರಿ೦ದ ಸರ್ಕಾರವು ಈಗಾಗಲೇ ಪಡೆದಿರುವ ಅಥವಾ ಮುಸಲ್ಮಾನರು ಸರ್ಕಾರಕ್ಕೆ ಮು೦ದೆ ನೀಡಬಹುದಾದ  ಯಾವುದೇ ಸಹಾಯ  ಭಾರತದಲ್ಲಿ  ಇಡೀ ಹಿಂದೂ ಧರ್ಮದಿಂದ  ಸರ್ಕಾರವು ಪಡೆದಿರುವ ಮತ್ತು ಭವಿಷ್ಯದಲ್ಲಿ ಖಚಿತವಾಗಿ ಪಡೆಯುವ ಸಹಾಯವನ್ನು  ಮೀರುವದು   ಅಸಾಧ್ಯವಾಗಿದೆ” (“No help the Moslems have given or can give to the government can ever outweigh the help which the government has already received and is sure to receive in future from Hindudom as a whole in India”) ಎಂದು ಭರವಸೆ ನೀಡಿದರು.


ಹಿಂದೂ ಸಭಾ ಸದಸ್ಯರು  ಯುವ ಹಿಂದೂಗಳನ್ನು ಸೈನ್ಯಕ್ಕೆ ಸೇರಲು ವಿನಂತಿಸುತ್ತಾ ದೇಶಾದ್ಯಂತ ಪ್ರವಾಸ ಮಾಡಿದರು ಮತ್ತು ಮಧ್ಯ ಪ್ರಾಂತ್ಯಗಳು ಮತ್ತು ಬಂಗಾಳದಲ್ಲಿ ಬ್ರಿಟಿಷರು ಸ್ಥಾಪಿಸಿದ ಯುದ್ಧ ಸಮಿತಿಗಳನ್ನು ಬೆಂಬಲಿಸಿದರು. ನಾರಾಯಣ ಆಪ್ಟೆ - ಗಾಂಧಿ ಹತ್ಯೆಯಲ್ಲಿ ಗೋಡ್ಸೆಯ ಸಹಚರ - ಸಹಾಯಕ ತಾಂತ್ರಿಕ ನೇಮಕಾತಿ ಅಧಿಕಾರಿಯಾದರು ಮತ್ತು ಈ ಸ್ಥಾನದಲ್ಲಿ ಯುದ್ಧ ಸೇವೆಗಳ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಅದೇ ಧಾಟಿಯಲ್ಲಿ ಸಾವರ್ಕರ್ ಅವರು ೧೫ ಹಿಂದೂ ಸಭಾ ಸದಸ್ಯರನ್ನು ಯುದ್ಧ ಸಲಹಾ ಮಂಡಳಿಗೆ ನೇಮಿಸುವಂತೆ ವೈಸರಾಯ್‌ಗೆ ಕೇಳಿಕೊಂಡರು. 


ಹಿಂದೂ ಮಹಾಸಭಾ ಒ೦ದು ನಿರ್ದಿಷ್ಟ ಸಂದರ್ಭದಲ್ಲಿ ಬ್ರಿಟಿಷರಿಗೆ ಬೆಂಬಲವನ್ನು ನೀಡುತ್ತಿತ್ತು. ೧೯೩೯ ರಲ್ಲಿ, ಅರ್ಧ ಡಜನ್‌ಗಿಂತಲೂ ಹೆಚ್ಚು ಪ್ರಾಂತ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ಬ್ರಿಟಿಷರು ಭಾರತವನ್ನು ಎರಡನೇ ಮಹಾಯುದ್ಧಕ್ಕೆ ಎಳೆದಿರುವುದನ್ನು ವಿರೋಧಿಸಿ ಈ ಸರ್ಕಾರಗಳಿಂದ ಹಿಂದೆ ಸರಿಯಿತು. ಹೆಚ್ಚು ಮುಖ್ಯವಾಗಿ, ಮಹಾತ್ಮ ಗಾಂಧಿಯವರು ಕ್ವಿಟ್ ಇಂಡಿಯಾ - “ಭಾರತವನ್ನು ತೊರೆಯಿರಿ” - ಚಳುವಳಿಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದರು. ಸಾವರ್ಕರ್, ಅವರ ಜೀವನಚರಿತ್ರೆಕಾರ ಧನಂಜಯ್ ಕೀರ್ ಸೂಚಿಸುವಂತೆ, ಕ್ವಿಟ್ ಇಂಡಿಯಾ ಚಳುವಳಿಯ ವಿರುದ್ಧವಾಗಿದ್ದರು.  ಅವರ ಆದ್ಯತೆ ಸ್ವಾತಂತ್ರ್ಯವಲ್ಲ, ಅದು ಮುಸ್ಲಿಮರ ವಿರುದ್ಧದ ಹೋರಾಟವಾಗಿತ್ತು, ಇದಕ್ಕಾಗಿ ಹಿಂದೂಗಳು ಸೈನ್ಯದಲ್ಲಿ ಮತ್ತು ರಾಜ್ಯ ಯಂತ್ರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹುದ್ದೆಗಳನ್ನು ಅಲಂಕರಿಸಬೇಕು. ಅಕ್ಟೋಬರ್ ೧೯೪೩ ರಲ್ಲಿ, ಸಾವರ್ಕರ್ ಇದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು: "ಶಾಸಕಾಂಗಗಳಲ್ಲಿ ಅಥವಾ ಸಚಿವಾಲಯಗಳಲ್ಲಿ ಅಥವಾ ಕಾರ್ಯಕಾರಿ ಮಂಡಳಿಯಲ್ಲಿ ರಾಷ್ಟ್ರದ  ರಾಜಕೀಯ ಯಂತ್ರದಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸ್ಥಳಗಳನ್ನು ವಶಪಡಿಸಿಕೊಳ್ಳಲು ನನ್ನ ಹಿಂದೂ ಸಂಘಟನಾವಾದಿ ಒಡನಾಡಿಗಳಿಗೆ ನಾನು ಮತ್ತೊಮ್ಮೆ ಸಲಹೆ ನೀಡುತ್ತೇನೆ..." ಹಿಂದೂ ಮಹಾಸಭೆಯು  ಮುಸ್ಲಿಂ ಲೀಗ್‌ನ ಸಹಭಾಗಿತ್ವವನ್ನು ಒಳಗೊಂಡಂತೆ ಹಲವಾರು ಪ್ರಾಂತ್ಯಗಳಲ್ಲಿ ಸಮ್ಮಿಶ್ರ ಸರ್ಕಾರಗಳನ್ನು ರಚಿಸಲು ಪ್ರಯತ್ನಿಸಿತು. ಜೂನ್ ೧೯೪೩ ರಲ್ಲಿ, ಸಾವರ್ಕರ್ ಅವರು ಲೀಗ್-ಪ್ರಾಬಲ್ಯದ ಸರ್ಕಾರಗಳು, ಹಿಂದೂ ಸಭಾಭಕ್ತರು "ಮಂತ್ರಿ ಸಭೆಯಲ್ಲಿ  ಸಾಧ್ಯವಾದಷ್ಟು ಸ್ಥಾನಗಳನ್ನು ವಶಪಡಿಸಿಕೊಳ್ಳಬೇಕು" ಎಂದು ವಾದಿಸಿದರು ಮತ್ತು ಹಿಂದೂ ಬಹುಸಂಖ್ಯಾತ ಪ್ರಾಂತ್ಯಗಳಲ್ಲಿ, "ಸಹಜವಾಗಿ, ಮುಸ್ಲಿಮರು ಅಥವಾ ಮುಸ್ಲಿಮ ಲೀಗ್ ಸದಸ್ಯರನ್ನು ಮ೦ತ್ರಿ ಸಭೆಗೆ ಸೇರಲು ಆಹ್ವಾನಿಸಬೇಕು".


ಆ ಸಮಯದಲ್ಲಿ ಬ್ರಿಟಿಷರ  ”ಸಹಯೋಗಿಗಳು” ಎಂದು ಕರೆಯಲ್ಪಡುವ ಕಾ೦ಗ್ರೆಸ್ಸಿಗರು  ಎಲ್ಲಿದ್ದರು? ಆಗಸ್ಟ್ ೮, ೧೯೪೨ರಂದು ಕ್ವಿಟ್ ಇಂಡಿಯಾ ನಿರ್ಣಯವನ್ನು ಪಕ್ಷವು ಅಂಗೀಕರಿಸಿದ ನಂತರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಹೆಚ್ಚಿನ ಸದಸ್ಯರನ್ನು ಬಂಧಿಸಲಾಯಿತು. ನೆಹರು, ಸರ್ದಾರ್ ಪಟೇಲ್, ಮೌಲಾನಾ ಆಜಾದ್ ಮತ್ತು ಇತರರು ಜೂನ್ ೧೯೪೫ ರವರೆಗೆ ಅಹಮದ್‌ನಗರ ಕೋಟೆಯ ಸೆರೆಮನೆಯೊಳಗೆ ಇದ್ದರು. ಅವರ ರಾಷ್ಟ್ರೀಯತೆಯ ವ್ಯಾಖ್ಯಾನವು ವಿಭಿನ್ನವಾಗಿತ್ತು: ಅವರು ಮುಕ್ತ, ಬಹುಸಂಸ್ಕೃತಿ ಮತ್ತು ಜಾತ್ಯತೀತ,   ಎಲ್ಲಾ ಸಮುದಾಯಗಳು ಸಮಾನ ನೆಲೆಯಲ್ಲಿ ಬದುಕುವ, ಒ೦ದು .ಭಾರತಕ್ಕಾಗಿ ಹೋರಾಡಿದರು.  ಭಾರತವನ್ನು ತೊಲೆದು ಹೋಗುವ೦ತೆ   ಬ್ರಿಟಿಷರನ್ನುಒತ್ತಾಯಿಸುವುದು ಅವರ ಆದ್ಯತೆಯಾಗಿತ್ತು ಮತ್ತು ಅವರು ಹೆಚ್ಚಾಗಿ ಅಹಿಂಸಾತ್ಮಕ ತಂತ್ರಗಳನ್ನು ಆಶ್ರಯಿಸುವ ಮೂಲಕ ಯಶಸ್ವಿಯಾದರು - ಇದು ವಿಶ್ವದ ಇತಿಹಾಸದಲ್ಲಿ ಒಂದು ಅನನ್ಯ ಸಾಧನೆಯಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಸಾವರ್ಕರ್ ಅವರ ರಾಷ್ಟ್ರದ ದೃಷ್ಟಿಕೋನವು ಜನಾಂಗೀಯ-ಧಾರ್ಮಿಕವಾಗಿತ್ತು. ಅವರು ೧೯೨೩ರಲ್ಲಿ ಔಪಚಾರಿಕವಾಗಿ ರೂಪಿಸಿದ ಹಿಂದುತ್ವದ ಕಲ್ಪನೆಗೆ ನಿಜವಾಗಿ, ಅವರು ಹಿಂದೂಗಳು ಇತರ ಸಮುದಾಯಗಳಿಗಿಂತ ಮೇಲುಗೈ ಸಾಧಿಸಬೇಕೆಂದು ಬಯಸಿದ್ದರು ಏಕೆಂದರೆ ಅವರ ಪ್ರಕಾರ, ಹಿ೦ದೂಗಳು  ಮಣ್ಣಿನ ಮಕ್ಕಳು ಮತ್ತು ಈ ಭೂಮಿಯನ್ನು ತಮ್ಮ  "ಪುಣ್ಯಭೂಮಿ" ಎಂದು ಗುರುತಿಸುವರು. ಆದ್ದರಿಂದ, ಮುಸ್ಲಿಮರ ವಿರುದ್ಧ ಹಿಂದೂಗಳನ್ನು ರಕ್ಷಿಸುವುದು ಮತ್ತು ಆ ಉದ್ದೇಶಕ್ಕಾಗಿ ಸಮರ ಶಕ್ತಿಯನ್ನು ಬಳಸುವುದು ಅವರ ಆದ್ಯತೆಯಾಗಿತ್ತು. ಆದ್ದರಿಂದ ಬ್ರಿಟಿಷರಿಂದ ಯುದ್ಧ ಕಲೆಯನ್ನು ಕಲಿಯಲು ಮತ್ತು ಅವರು ತಮ್ಮ ಪ್ರಜೆಗಳಿಗೆ ನೀಡಬಹುದಾದ ಅಧಿಕಾರದ ಸ್ಥಾನಗಳನ್ನು ಆಕ್ರಮಿಸಿಕೊಳ್ಳಲು ಅವರೊಂದಿಗೆ ಸಹಕರಿಸುವ ಬಯಕೆ. 


ಐತಿಹಾಸಿಕ ಪರಿಷ್ಕರಣಾವಾದವನ್ನು ಬಹಿರಂಗಪಡಿಸುವ ಸಲುವಾಗಿ ಬೌದ್ಧಿಕ ಸಂಭಾಷಣೆಗಳನ್ನು ನಡೆಸುವ ಚರ್ಚೆಗಳ ನಿಯಮಗಳು ಇವು. ಇತಿಹಾಸದಲ್ಲಿ ಬದುಕುವುದು ಕೆಟ್ಟ ವಿಚಾರವಲ್ಲ, ಆದರೆ ಯಾರೇ ಆದರೂ ತಾವು ಜೀವಿಸುತ್ತಿರುವ  ಇತಿಹಾಸವನ್ನು ತಿಳಿದುಕೊಳ್ಳುವುದು ಇನ್ನೂ ಹೆಚ್ಚು ಮುಖ್ಯವಾಗಿದೆ.                               




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು