ಹಿಂದೂ ಧರ್ಮದ ದುರಭಿಮಾನವನ್ನು  ರಫ್ತು ಮಾಡುವದರ ಕುತ್ತು


ಮೋದಿಯವರ ಭಾರತದ ಬಗ್ಗೆ ಲ೦ಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆಯ ಸಂಪಾದಕೀಯ 


27 ನವೆಂಬರ್ 2022 


ಭಾರತದ ದೇಶೀಯ ರಾಜಕೀವು 20 ಕೋಟಿ  ಮುಸ್ಲಿಮರನ್ನು ರಾಕ್ಷಸೀಕರಿಸುತ್ತದೆ.    ನವದೆಹಲಿಯ ವಿದೇಶಾಂಗ ನೀತಿಯನ್ನು ಈ ದೇಶೀಯ ರಾಜಕೀಯದಿ೦ದ   ಬೇರ್ಪಡಿಸಲಾಗುವುದಿಲ್ಲ.”  



ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಮೆಹ್ಸಾನಾದಲ್ಲಿ ಬಿಜೆಪಿ ಮೇಳವನ್ನುದ್ದೇಶಿಸಿ ಮಾತನಾಡುತ್ತಾರೆ. ಡಿಸೆಂಬರ್ 1 ರಂದು ವಿಧಾನಸಭಾ ಚುನಾವಣೆ ಆರಂಭವಾಗಲಿದೆ.



ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಮೊಕದ್ದಮೆಯಲ್ಲಿ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಕಾನೂನಿನ ಕ್ರಮದಿ೦ದ ವಿನಾಯಿತಿ ಹೊಂದಿರಬೇಕು ಎಂದು ಅಮೆರಿಕಾದ ರಾಜ್ಯ ಇಲಾಖೆ ಇತ್ತೀಚೆಗೆ ನ್ಯಾಯಾಲಯಕ್ಕೆ ತಿಳಿಸಿದಾಗ, ಅದು ತನ್ನ ವಾದವನ್ನು  ನೈತಿಕತೆಯಮೇಲಲ್ಲ , ಕಾನೂನಿನ  ಮೇಲೆ ಆಧರಿಸಿತು. ಪುರಾವೆಯಾಗಿ  ಇದು ಹಿಂದೆ ಇದೇ ರೀತಿಯ ರಕ್ಷಣೆಯನ್ನು ಒದಗಿಸಿದ ವಿದೇಶಿ ನಾಯಕರ ರಕ್ಕಸರ ಪಟಗಳನ್ನು  ತೋರಿಸಿದೆ. ಈ ಪಟ್ಟಿಯಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳನ್ನು ಹತ್ಯೆ ಮಾಡಿದ ಜಿಂಬಾಬ್ವೆಯ ರಾಬರ್ಟ್ ಮುಗಾಬೆ ಮತ್ತು ವಾಷಿಂಗ್ಟನ್‌ನಲ್ಲಿ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳಿ೦ದ   ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಕಾಂಗೋದ ಜೋಸೆಫ್ ಕಬಿಲಾ , ಇವರ ನಡುವೆ ನೆಲೆಸಿರುವುದು ಭಾರತದ ನರೇಂದ್ರ ಮೋದಿ.


ಇ೦ತಹ ಪಟ್ಟಿಗೆ ಮೋದಿಯನ್ನು ಸೇರಿಸುವದು  ಆಕಸ್ಮಿಕವಲ್ಲ. ಇತ್ತೀಚಿನ ಜಿ೨೦ (G20) ಮತ್ತು ಕಾಪ್೨೭(CoP27) ಶೃಂಗಸಭೆಗಳಲ್ಲಿ ನವದೆಹಲಿಯು ತನ್ನ ರಾಜತಾಂತ್ರಿಕ ಯಶಸ್ಸಿನಲ್ಲಿ ಹಿಗ್ಗುತಿದ್ದ ಸ೦ದರ್ಭದಲ್ಲಿ, ಶ್ರೀ ಮೋದಿ ಮತ್ತು ಅವರ ಹಿಂದೂ ರಾಷ್ಟ್ರೀಯವಾದಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣೆಗಳನ್ನು ಗೆಲ್ಲಲು ದ್ವೇಷವನ್ನು ಹುಟ್ಟುಹಾಕುವುದನ್ನು ಮುಂದುವರೆಸಿದರೆ  ಅಂತರರಾಷ್ಟ್ರೀಯ ವಾತಾವರಣವು ಭಾರತಕ್ಕೆ ಕಡಿಮೆ ಅನುಕೂಲಕರವಾಗ ಬಹುದು ಎಂಬುದನ್ನು ಇದು ನೆನಪಿಸುತ್ತದೆ. ವಾಷಿಂಗ್ಟನ್‌ನ ಇಂಗಿತವು ಭಾರತದೊಂದಿಗಿನ ತನ್ನ ಕಾರ್ಯತಂತ್ರದ ಪಾಲುದಾರಿಕೆಯನ್ನು ದೇಶೀಯ ರಾಜಕೀಯ ಸಮಸ್ಯೆಗಳಿಂದ ಸಂಪೂರ್ಣವಾಗಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸೂಚಿಸುತ್ತದೆ. 2002 ರಲ್ಲಿ ನೂರಾರು ಜನರನ್ನು ಬಲಿತೆಗೆದುಕೊಂಡ ಮುಸ್ಲಿಂ ವಿರೋಧಿ ಗಲಭೆಗಳನ್ನು ತಡೆಯುವಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಶ್ರೀ ಮೋದಿಯವರು ವಿಫಲರಾದರು. ಅದರಿ೦ದಾಗಿ  ಅವರು ಭಾರತದ ಪ್ರಧಾನಿಯಾಗುವವರೆಗೂ ಅವರಿಗೆ ಅಮೆರಿಕ ವೀಸಾವನ್ನು ನಿರಾಕರಿಸಲಾಗಿತ್ತು. ಅಮೆರಿಕದ ವಿದೇಶ ಇಲಾಖೆಯಿ೦ದ  ಬಂದ ಸಂದೇಶವೆಂದರೆ ಮೋದಿಯ ವಿರುಧ್ಧ ವಿಸಾ ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿಲ್ಲ, ಆದರೆ ಸದ್ಯಕ್ಕೆ ಅಮಾನತುಗೊಳಿಸಲಾಗಿದೆ, ಏಕೆಂದರೆ  ಮೋದಿ ನಡೆಸುತ್ತಿರುವ ದೇಶದೊ೦ದಿಗೆ ಅಮೆರಿಕ ವ್ಯವಹಾರಗಳನ್ನು ನಡೆಸಲು ಆಸಕ್ತಿ ಹೊ೦ದಿದೆ ಎನ್ನುವ ಕಾರಣದಿ೦ದ.


ಭಾರತವನ್ನು ಚೀನಾಕ್ಕೆ ಭೌಗೋಳಿಕ ರಾಜಕೀಯ ಪ್ರತಿರೂಪವೆಂದು, ಹಾಗೆಯೇ ಅನೇಕ ವಿಧಗಳಲ್ಲಿ ವಿಶ್ವ ವೇದಿಕೆಯಲ್ಲಿ ಅನಿವಾರ್ಯ ಪಾಲುಗಾರ ಎಂದು ಪರಿಗಣಿಸಲಾಗಿದೆ. ಆದರೆ ಶ್ರೀ ಬಿಡೆನ್ ಅವರ ತಂಡವು ಭಾರತದ ಈ ಸ್ಥಾನವನ್ನು ಪೂರ್ಣ  ನಿಶ್ಚಿತವೆಂದು ಪರಿಗಣಿಸುತ್ತಿಲ್ಲ ಎ೦ದು ತೋರುತ್ತದೆ,  ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಮರುರೂಪಿಸಿ  ಹಿಂದೂಗಳನ್ನು ಸಾಂವಿಧಾನಿಕವಾಗಿ ಅಗ್ರಗಣ್ಯರಾಗಿಸಿ ಅಲ್ಪಸಂಖ್ಯಾತರರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಕಡಿಮೆ ಮಾಡುವ ಶ್ರೀ ಮೋದಿಯವರ  ಪ್ರಯತ್ನಗಳನ್ನು  ಟ್ರಂಪ್ ಆಡಳಿತಕ್ಕಿಂತ ಕಡಿಮೆ ಸಹಿಸುವುದಾಗಿ ಕ೦ಡುಬರುತ್ತದೆ.  ಕಳೆದ ವಾರ, ಅಮೆರಿಕಾದ ಅ೦ತಾರಾಷ್ಟ್ರೀಯ ಮತಧರ್ಮ ಸ್ವಾತ೦ತ್ರ್ಯದ ಆಯೋಗವು (U S Commission on International Religious Freedom) ಭಾರತ ಸರ್ಕಾರದ ಬಗ್ಗೆ  "ನಾಗರಿಕ ಸಮಾಜ ಮತ್ತು ಭಿನ್ನಾಭಿಪ್ರಾಯಗಳ ಮೇಲಿನ ದಬ್ಬಾಳಿಕೆ" ಮತ್ತು "ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ" ಗಳನ್ನು  ಆರೋಪಿಸಿದೆ. ಈ ವರದಿಗೆ ಉತ್ತರವಾಗಿ ಭಾರತೀಯ ವಿದೇಶಾಂಗ ಸಚಿವಾಲಯವು "ಪಕ್ಷಪಾತ ಮತ್ತು ತಪ್ಪಾದ ಅವಲೋಕನಗಳ”  ಪ್ರತಿಕ್ರಿಯೆ ಮಾಡಿತು. ಆದರೆ ನಮ್ಮ ಅಭಿಪ್ರಾಯದಲ್ಲಿ ಸರ್ಕಾರದ ಅಧಿಕಾರಿಗಳು ತಮ್ಮ ದೇಶ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಪ್ರತಿಬಿಂಬಿಸುವುದೇ  ಉತ್ತಮ ಎ೦ದು ನಾವು ಹೇಳಬೇಕಾಗಿದೆ.


 ಭಾರತದ ಆರೋಹಣವು ಇತರರೊಂದಿಗೆ ಉತ್ತಮ ಸ೦ಬ೦ಧಗಳನ್ನು ನಿರ್ಮಿಸುವುದರ ಮೇಲೆ ಅವಲಂಬಿತವಾಗಿದೆ. ಮಧ್ಯಪ್ರಾಚ್ಯವು ೯೦ ಲಕ್ಷ  ಭಾರತೀಯ ಕಾರ್ಮಿಕರನ್ನು ಬೆಂಬಲಿಸುವ ಪ್ರಮುಖ ಇಂಧನ ಪೂರೈಕೆದಾರ ಮತ್ತು ಪ್ರಾದೇಶಿಕ ವ್ಯಾಪಾರ ಪಾಲುದಾರ. ಭಾರತದ ಭದ್ರತೆಯು ಅರಬ್ ರಾಜ್ಯಗಳು ಭಯೋತ್ಪಾದನೆಗೆ ಪ್ರತಿಕೂಲ ವಾತಾವರಣವನ್ನು ಉಳಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಬಿಜೆಪಿ ಕಾರ್ಯಕರ್ತರು ಈ ಬೇಸಿಗೆಯಲ್ಲಿ ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದಾಗ, ಗಲ್ಫ್ ರಾಜ್ಯಗಳು ನವದೆಹಲಿಗೆ ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿದವು.  ಮೋದಿ ಸರ್ಕಾರವು ಎಚ್ಚರಗೊ೦ಡು ಕಾರ್ಯಪ್ರವೃತ್ತವಾಯಿತು - ಪಕ್ಷದ ಅಧಿಕಾರಿ ಒಬ್ಬರನ್ನು ಅಮಾನತುಗೊಳಿಸಿ ಮತ್ತು ಇನ್ನೊಬ್ಬರನ್ನು ಹೊರಹಾಕಿ,  ಹಾಗೆಯೇ ಅದು "ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವ"  ಸಲ್ಲಿಸುವುದಾಗಿ ಹೇಳಿಕೆ ನೀಡಿತು.



ನಯವಾದ  ಆಶ್ವಾಸನೆಗಳು ಮಾತ್ರವೇ ಸಾಕಾಗದೇ ಇರಬಹುದು. ಭಾರತದ ೨೦ ಕೋಟಿ  ಮುಸ್ಲಿಮರ ವಿರುಧ್ಧ ನಡೆಯುವ ಬೆದರಿಕೆಯನ್ನು ಸ್ಪಷ್ಟವಾಗಿ ಕಾಣಬಹುದು.  ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಹತ್ಯೆಗಳ ಅಪರಾಧದಿ೦ದ  ಶಿಕ್ಷೆಗೊಳಗಾದ ೧೧ ಪುರುಷರ ಅವಧಿಪೂರ್ವ ಬಿಡುಗಡೆಗೆ ಬಿಜೆಪಿ ಮಂತ್ರಿಗಳು ಅನುಮೋದನೆ ನೀಡಿದ ವಾರಗಳ ನಂತರ ಗುಜರಾತ್‌ನಲ್ಲಿ ಗುರುವಾರ ರಾಜ್ಯ ಚುನಾವಣೆಗಳು ಪ್ರಾರಂಭವಾಗುತ್ತವೆ. ಕಳೆದ ಶುಕ್ರವಾರದ ಪ್ರಚಾರದ ಹಾದಿಯಲ್ಲಿ, ಭಾರತದ ಗೃಹ ಸಚಿವರು ತೊಂದರೆ ಕೊಡುವವರಿಗೆ ೨೦೦೨  ರಲ್ಲಿ  "ಪಾಠ ಕಲಿಸಲಾಗಿದೆ" ಎಂದು ಹೇಳಿಕೊಂಡರು. ಇದು ಹಿಂದೂ ಗುಂಪುಗಳಿಗೆ ಅವರು ಇಷ್ಟಪಟ್ಟಂತೆ ಮಾಡಬಹುದು ಎಂಬ ಸಂಕೇತದಂತೆ ಧ್ವನಿಸುತ್ತದೆ.


ಭಾರತದಲ್ಲಿ ಕಂಡಿರುವ ಕೋಮು ಘರ್ಷಣೆಗಳನ್ನು ಬೇರೆಡೆಯೂ ನಕಲು ಮಾಡುವ ಲಕ್ಷಣಗಳು ಕಂಡು ಬರುತ್ತಿರುವುದು ಆತಂಕಕಾರಿಯಾಗಿದೆ. ಬ್ರಿಟನ್ನಿನ ಲೀಸೆಸ್ಟರ್‌ನಲ್ಲಿ, ಅನೇಕ ದಕ್ಷಿಣ ಏಷ್ಯಾದ ಮುಸ್ಲಿಮರು - ಆ ನಗರದ ಹಿಂದೂಗಳಂತೆ - ಭಾರತೀಯ ಬೇರುಗಳನ್ನು ಹೊಂದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಾಗ, ಮಸೀದಿಗಳು ಮತ್ತು ದೇವಾಲಯಗಳ ಮೇಲಿನ ದಾಳಿಯಾಗಿ ಉಲ್ಬಣಗೊಂಡಾಗ, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ "ಲೀಸೆಸ್ಟರ್‌ನಲ್ಲಿ ಭಾರತೀಯ ಸಮುದಾಯದ ವಿರುದ್ಧ ನಡೆಸಿದ ಹಿಂಸಾಚಾರ ಮತ್ತು  ಹಿಂದೂ ಧರ್ಮದ ಆವರಣಗಳು ಮತ್ತು ಚಿಹ್ನೆಗಳನ್ನು ಧ್ವಂಸಗೊಳಿಸುವುದನ್ನು"  ಖಂಡಿಸಿತು, ಆದರೆ  ಮುಸ್ಲಿಮರ ವಿರುದ್ಧ ಹಿಂದೂಗಳ ಹಿಂಸಾಚಾರಕ್ಕೆ ಯಾವುದೇ ಖಂಡನೆ ಇರಲಿಲ್ಲ.


ಹಿ೦ದಿನ ದಿನಗಳಲ್ಲಿ ತನ್ನ ಜಾತ್ಯತೀತತೆಯನ್ನು ಘೋಷಿಸಲು  ಎಚ್ಚರಿಕೆಯಿಂದಿದ್ದ  ಭಾರತದ ಸರ್ಕಾರವು ಈಗ ತನ್ನ ಹಿಂದೂ ಕೋಮಿನ ದುರಭಿಮಾನವನ್ನು ರಫ್ತು ಮಾಡಲು ತೃಪ್ತಿಪಡುತ್ತದೆ. ಇದರಿಂದ ಎಲ್ಲರಿಗೂ ಕಳವಳ ಆಗಬೇಕು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು