ವಿವರಣೆ: ಮೋದಿ ಯುಗದಲ್ಲಿ ದೇಶದ್ರೋಹದ ಕಾನೂನನ್ನು ಹೇಗೆ ಬಳಸಲಾಗಿದೆ

ಕಳೆದ ದಶಕದಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಗಳನ್ನು ಟೀಕಿಸಿದ್ದಕ್ಕಾಗಿ 405 ಭಾರತೀಯರ ಮೇಲೆ ‘ದೇಶದ್ರೋಹ’ದ ಆರೋಪ ಹೊರೆಸಲಾಯಿತು. ಇವರಲ್ಲಿ  95% ರಷ್ಟು 2014 ರ ನಂತರ ಆರೋಪಿಸಲಾಗಿದೆ.

 

ಅಭಿಷೇಕ್ ಹರಿ ‘ದಿ ವೈರ್’ 11 ಮೇ 2022

 

 

ವಸಾಹತುಶಾಹಿ ಆಡಳಿತದ ಯಾವುದೇ ಕಟುವಾದ ಟೀಕೆಗಳನ್ನು ಎದುರಿಸಲು ಮತ್ತು ಭಾರತೀಯ ರಾಷ್ಟ್ರೀಯ ಚಳವಳಿಯ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಳಸಿಕೊಳ್ಳುವ ಸಾಧನವಾಗಿ ಬ್ರಿಟಿಷ್ ಸರ್ಕಾರವು ದೇಶದ್ರೋಹ ಕಾನೂನನ್ನು ಸೃಷ್ಟಿಸಿತು. ಬಾಲಗಂಗಾಧರ ತಿಲಕ್ ಮತ್ತು ಎಂ.ಕೆ.ಗಾಂಧಿ ಇದರ ಅತ್ಯಂತ ಪ್ರಸಿದ್ಧ ಬಲಿಪಶುಗಳು. ಗಾಂಧಿಜಿ ಈ ಕಾನೂನನ್ನು "ನಾಗರಿಕರ ಸ್ವಾತಂತ್ರ್ಯವನ್ನು ನಿಗ್ರಹಿಸಲು ವಿನ್ಯಾಸಗೊಳಿಸಿದ ಭಾರತೀಯ ದಂಡ ಸಂಹಿತೆಯ (IPC) ರಾಜಕೀಯ ಕಲಮುಗಳಲ್ಲಿ ರಾಜಕುಮಾರ" ಎಂದು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಸ್ವತಂತ್ರ ಭಾರತದಲ್ಲಿ ಕಾನೂನನ್ನು ಕೈಬಿಡಲಾಗಿಲ್ಲ ಮತ್ತು ಬದಲಿಗೆ ಈಗ, ಸ್ವಾತಂತ್ರ್ಯದ ಏಳು ದಶಕಗಳ ನಂತರ, ಇತ್ತೀಚಿನ ವರ್ಷಗಳಲ್ಲಿ ದೇಶದ್ರೋಹದ ಪ್ರಕರಣಗಳ ಉಲ್ಬಣಕ್ಕೆ ನಾವು ಸಾಕ್ಷಿಯಾಗಿದ್ದೇವೆ. ಇಷ್ಟಕ್ಕೂ ಭಾರತದ ಸರ್ವೋಚ್ಚ ನ್ಯಾಯಾಲಯ  ಕಾನೂನನ್ನೇ ಪ್ರಶ್ನಿಸಿದೆ .

ಜಾಲತಾಣ ಆರ್ಟಿಕಲ್ 14 ವರದಿಸಿದ  ಪ್ರಕಾರ ಗೃಹ ವ್ಯವಹಾರಗಳ ಸಚಿವಾಲಯ (MHA) ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB), ಕ್ರಮವಾಗಿ, 2019 ಮತ್ತು 2020 ರಲ್ಲಿ 2014 ರಿಂದ ದೇಶದ್ರೋಹ ಪ್ರಕರಣಗಳಲ್ಲಿ ತ್ವರಿತ ಹೆಚ್ಚಳವನ್ನು ಬಹಿರಂಗಪಡಿಸಿದೆ.

2010 ರಿಂದ ದೇಶದ್ರೋಹದ ಆರೋಪ ಹೊರಿಸಲಾದ 10,938 ಭಾರತೀಯರಲ್ಲಿ, 65%  ಪ್ರಕರಣಗಳನ್ನು ಮೇ 2014 ರಲ್ಲಿ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ಅಧಿಕಾರಕ್ಕೆ ಬಂದ ನಂತರ  ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ವಿರೋಧ ಪಕ್ಷದ ರಾಜಕಾರಣಿಗಳು, ವಿದ್ಯಾರ್ಥಿಗಳು, ಪತ್ರಕರ್ತರು, ಲೇಖಕರು ಮತ್ತು ಶಿಕ್ಷಣತಜ್ಞರನ್ನು ಈ ಪ್ರಕರಣಗಳಲ್ಲಿ ಹೆಚ್ಚಾಗಿ ಹೆಸರಿಸಲಾಗಿದೆ.

ಮೇ 2021 ರಲ್ಲಿ, ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು Aamoda Broadcasting Company & Anr vs State of Andhra Pradesh ಪ್ರಕರಣದ ವಿಚಾರಣೆಯಲ್ಲಿ  IPC ಯ ಸೆಕ್ಷನ್ 124A ಅಡಿಯಲ್ಲಿ ದೇಶದ್ರೋಹದ ಮಿತಿಗಳನ್ನು ವ್ಯಾಖ್ಯಾನಿಸುವ ಅಗತ್ಯವಿದೆ ಎಂದು ತೀರ್ಪು ನೀಡಿತು. ವೈಎಸ್‌ಆರ್ ಕಾಂಗ್ರೆಸ್ ಶಾಸಕರೊಬ್ಬರು ಮಾಡಿದ 'ಆಕ್ಷೇಪಾರ್ಹ ಭಾಷಣ'ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಎರಡು ಸುದ್ದಿ ವಾಹಿನಿಗಳ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣಗಳಲ್ಲಿ ‘ದೇಶದ್ರೋಹ’ದ ಅಭಿವ್ಯಕ್ತಿಗಳ ವ್ಯಾಪ್ತಿಯು ಕೇವಲ ಪೋಸ್ಟರ್‌ಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಹಿಡಿದು ಸಾಮಾಜಿಕ ಮಾಧ್ಯಮ ಸ೦ದೇಶಗಳು,  ಘೋಷಣೆಗಳನ್ನು ಎತ್ತುವುದು,  ಮತ್ತು ವೈಯಕ್ತಿಕ ಸಂವಹನಗಳವರೆಗೆ ಸೇರಿತ್ತು.  ಉದಾಹರಣೆಗೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ವಿಜಯದ ನಂತರ ಸಾಮಾಜಿಕ ಮಾಧ್ಯಮದಲ್ಲಿ " ಸ೦ಭ್ರಮದ ಸಂದೇಶಗಳನ್ನು ಪೋಸ್ಟ್ ಮಾಡಿದ" ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಆರೋಪ ಆಗ್ರಾದಲ್ಲಿ ಹೊರಿಸಲಾಯಿತು.

ಜುಲೈ 2021 ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಕಾನೂನನ್ನು ಟೀಕಿಸಿದರು: “ದೇಶದ್ರೋಹವು ವಸಾಹತುಶಾಹಿ ಕಾನೂನು. ಇದು ಸ್ವಾತಂತ್ರ್ಯವನ್ನು ನಿಗ್ರಹಿಸುತ್ತದೆ. ಇದನ್ನು ಮಹಾತ್ಮಾ ಗಾಂಧಿ, ತಿಲಕ್ ಅವರ ವಿರುದ್ಧ ಬಳಸಲಾಗಿದೆ... ಸ್ವಾತಂತ್ರ್ಯದ 75 ವರ್ಷಗಳ ನಂತರ ಈ ಕಾನೂನು ಅಗತ್ಯವಿದೆಯೇ?”

Kishore Chandra Wangkhemcha & Kanhaiya Lal Shukla vs. Union of India ಪ್ರಕರಣದಲ್ಲಿ ದೇಶದ್ರೋಹದ ಅಪರಾಧದ ಸಾಂವಿಧಾನಿಕ ಸಿಂಧುತ್ವವನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ . ಇಂಫಾಲ್ ಮೂಲದ ಪತ್ರಕರ್ತ ವಾಂಗ್‌ಖೇಮ್ ಅವರನ್ನು 2018 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ರಾಜ್ಯದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರನ್ನುಟೀಕಿಸಿದ್ದಕ್ಕಾಗಿ ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. . 

 

ದೇಶದ್ರೋಹದ ಕಾನೂನು ಏನು?

ದೇಶದ್ರೋಹವನ್ನು ಸೆಕ್ಷನ್ 124A ನಲ್ಲಿ  ಯಾವುದೇ ಭಾಷಣ ಅಥವಾ ಬರವಣಿಗೆ ಅಥವಾ ಗೋಚರ ನಿರೂಪಣದ ರೂಪದಲ್ಲಿ ಸರ್ಕಾರವನ್ನು ತುಚ್ಚೀಕರಿಸುವದು, ಅಥವಾ ದ್ವೇಷಕ್ಕೆ ತರುವದು ಅಥವಾ ಸರ್ಕಾರದ ಕಡೆಗೆ ‘ಅಸಮಾಧಾನ’ವನ್ನು ಪ್ರಚೋದಿಸುವದು ಅಥವಾ ಹಾಗೆ ಮಾಡಲು ಪ್ರಯತ್ನಿಸುವದು,  ಎಂದು ವ್ಯಾಖ್ಯಾನಿಸಲಾಗಿದೆ,

ದಂಡ, ಅಥವಾ ಮೂರು ವರ್ಷಗಳಿ೦ದ  ತೊಡಗಿ ಜೀವಾವಧಿಯವರೆಗೆ ಜೈಲುವಾಸ,  ಅಥವಾ ಇವೆರಡೂ ಸೇರಿದ೦ತೆ ಆಗಬಹುದು ದೇಶದ್ರೋಹದ ಶಿಕ್ಷೆ.  ಕಾನೂನು  ‘ಅಸಮಾಧಾನ’ವನ್ನು "ವಿಶ್ವಾಸದ್ರೋಹ ಮತ್ತು ದ್ವೇಷದ ಭಾವನೆಗಳು" ಎಂದು ವ್ಯಾಖ್ಯಾನಿಸುತ್ತದೆ. ಆದಾಗ್ಯೂ, ಸರ್ಕಾರದ ಕ್ರಮಗಳ ಅಥವಾ ಕೃತ್ಯಗಳ ಬಗ್ಗೆ ಅಸಮ್ಮತಿಯನ್ನು ವ್ಯಕ್ತಪಡಿಸುವುದು ಅಥವಾ ಅವುಗಳನ್ನು ಕಾನೂನುಬದ್ಧ ವಿಧಾನಗಳ ಮೂಲಕ, ದ್ವೇಷ, ಅಸಮಾಧಾನ ಅಥವಾ ಸರ್ಕಾರದ ಬಗ್ಗೆ ತಿರಸ್ಕಾರವನ್ನು ಉತ್ತೇಜಿಸದೆ, ಬದಲಾಯಿಸುವುದು, ಇವು  ಈ ಕಲಮಿನ  ಅಡಿಯಲ್ಲಿ ಬರುವುದಿಲ್ಲ ಎಂದೂ  ಅದು ಹೇಳುತ್ತದೆ.

ಸೆಕ್ಷನ್ 124A ವಸಾಹತುಶಾಹಿ ಮೂಲ

ದೇಶದ್ರೋಹದ ಕಾನೂನನ್ನು ಮೊದಲು 1837 ರಲ್ಲಿ ಥಾಮಸ್ ಬಾಬಿಂಗ್ಟನ್ ಮೆಕಾಲೆ ಅವರ  IPC ಯ ಕರಡು 113 ರಲ್ಲಿ ಮ೦ಡಿಸಲಾಯಿತು. ಆದಾಗ್ಯೂ, 20 ವರ್ಷಗಳ ವಿಳಂಬದ ನಂತರ IPC ಅಂತಿಮವಾಗಿ 1860 ರಲ್ಲಿ ಜಾರಿಗೆ ಬಂದಾಗ, ದೇಶದ್ರೋಹಕ್ಕೆ ಸಂಬಂಧಿಸಿದ ಕಲಮನ್ನು ನಿಗೂಢವಾಗಿ ಬಿಟ್ಟುಬಿಡಲಾಯಿತು ಎಂದು ಒ೦ದು ಅಧ್ಯಯನವು ಕ೦ಡಿದೆ. 

ಅಧ್ಯಯನದ ಪ್ರಕಾರ, 1857 ರ ದಂಗೆಯ ನಂತರ 1870 ರವರೆಗೆ ಬ್ರಿಟಿಷರ ವಿರುದ್ಧ ದಂಗೆಯ ಘಟನೆಗಳ ಜೊತೆಗೆ ಹೆಚ್ಚಿದ ವಹಾಬಿ ಚಟುವಟಿಕೆಗಳ ಬೆಳಕಿನಲ್ಲಿ ದೇಶದ್ರೋಹದ ಕಾನೂನನ್ನು ಮ೦ಡಿಸುವ ಅಗತ್ಯವನ್ನು ಬ್ರಿಟಿಷರು ಮೊದಲು ಗುರುತಿಸಿದರು. ಪರಿಣಾಮವಾಗಿ, ನವೆಂಬರ್ 25, 1870 ರಂದು IPC ಯ ಸೆಕ್ಷನ್ 124A ಅಡಿಯಲ್ಲಿ ದೇಶದ್ರೋಹ ಕಾನೂನನ್ನು ಸಂಯೋಜಿಸಲಾಯಿತು.

IPC (ತಿದ್ದುಪಡಿ) ಕಾಯಿದೆ, 1898 ಸೆಕ್ಷನ್ 124A ಅನ್ನು ತಿದ್ದುಪಡಿ ಮಾಡಿ, ಸ್ಥಾಪಿತ ಸರ್ಕಾರದ ಕಡೆಗೆ (ಅಸಮಾಧಾನ ಮಾತ್ರವಲ್ಲದೆ) ದ್ವೇಷ ಅಥವಾ ತಿರಸ್ಕಾರವನ್ನು ತರುವದು  ಅಥವಾ ತರಲು  ಪ್ರಯತ್ನವನ್ನು ಶಿಕ್ಷಾರ್ಹಗೊಳಿಸಲಾಯಿತು. ಅಂದಿನಿಂದ,  ಹೆಚ್ಚಾಗಿ ಅದೇ ರೂಪ ಉಳಿದುಕೊಂಡಿದೆ.

Sedition lingers on in India, refusing to go away, silencing students, doctors and writers today as it did nationalist leaders a century ago. Credit: Flickr

ಒಂದು ಶತಮಾನದ ಹಿಂದೆ ರಾಷ್ಟ್ರೀಯವಾದಿ ನಾಯಕರನ್ನು ಮಾಡಿದಂತೆ ಇಂದು ಭಾರತದಲ್ಲಿ ದೇಶದ್ರೋಹವು ದೂರವಿರಲು ನಿರಾಕರಿಸುತ್ತಿದೆ, ವಿದ್ಯಾರ್ಥಿಗಳು, ವೈದ್ಯರು ಮತ್ತು ಬರಹಗಾರರನ್ನು ಮೌನಗೊಳಿಸುತ್ತದೆ. ಕ್ರೆಡಿಟ್:

 

ಸ್ವತಂತ್ರ ಭಾರತದಲ್ಲಿ ವಸಾಹತುಶಾಹಿ ದೇಶದ್ರೋಹ

ಸ್ವಾತ೦ತ್ರ್ಯ ಗಳಿಸಿದನಂತರ, ಸಂವಿಧಾನ ಸಭೆಯಲ್ಲಿ ಚರ್ಚೆಗಳ ನಂತರ "ದೇಶದ್ರೋಹ" ಎಂಬ ಪದವನ್ನು 1948 ರಲ್ಲಿ ಸಂವಿಧಾನದಿಂದ ತೆಗೆದುಹಾಕಲಾಯಿತು. ಸ೦ವಿಧಾನವನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು. ಹೀಗಾಗಿ, ಆರ್ಟಿಕಲ್ 19(1) (A) ವಾಕ್ ಮತ್ತು ಅಭಿವ್ಯಕ್ತಿಯ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ . ಆದರೆ, ಐಪಿಸಿಯಲ್ಲಿ ಸೆಕ್ಷನ್ 124A ಮುಂದುವರೆಯಿತು.

ಆರ್ಗನೈಸರ್ ಎಂಬ ಆರ್ ಎಸ್ ಎಸ್ಸಿನ ಪ್ರಕಟಣೆಯಲ್ಲಿ ಆಕ್ಷೇಪಾರ್ಹ ಬರಹ  ಮತ್ತು ಕ್ರಾಸ್‌ರೋಡ್ಸ್ ಹೆಸರಿನ ಇನ್ನೊ೦ದು ನಿಯತಕಾಲಿಕೆ ಸರ್ಕಾರವನ್ನು ವಿರೋಧಿಸಿದ್ದಕ್ಕಾಗಿ  ನಡೆಸಿದ ಪ್ರಕರಣಗಳಲ್ಲಿ, 1950ಯಲ್ಲಿ ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ವಿರುದ್ಧ ತೀರ್ಪುನೀಡಿತು, ಸಾರ್ವಜನಿಕ ಸುವ್ಯವಸ್ಥೆಯು ವಾಕ್ ಸ್ವಾತಂತ್ರ್ಯದ ಹಕ್ಕಿಗೆ ಎಣಿಸಲ್ಪಟ್ಟ ಅಪವಾದವಲ್ಲ, ಮತ್ತು  ರಾಜ್ಯದ ಭದ್ರತೆಯನ್ನು ದುರ್ಬಲಗೊಳಿಸುವ ಉದ್ದೇಶದ ಪ್ರಕರಣದಲ್ಲಿ  ಮಾತ್ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದು ಎಂದು, ನ್ಯಾಯಾಲಯವು   ಹೇಳಿತು. ಈ ನಿರ್ಧಾರಗಳ ಬೆಳಕಿನಲ್ಲಿ, ದೇಶದ್ರೋಹದ ಕಾನೂನನ್ನು ಖಂಡಿಸುವದರೊಟ್ಟಿಗೆ, ಜವಾಹರಲಾಲ್ ನೆಹರು ವಾಕ್ ಸ್ವಾತಂತ್ರ್ಯದ ಮೇಲೆ "ಸಮಂಜಸವಾದ ನಿರ್ಬಂಧಗಳನ್ನು" ವಿಧಿಸಲು ರಾಜ್ಯಕ್ಕೆ ಅಧಿಕಾರ ನೀಡುವ ಮೊದಲ ತಿದ್ದುಪಡಿಯನ್ನು ಮ೦ಡಿಸಿದರು,.

ಆದಾಗ್ಯೂ, 1973 ರಲ್ಲಿ ಇಂದಿರಾಗಾಂಧಿ ಆಡಳಿತವು ಹೊಸ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (Code of Criminal Procedure) ಅಡಿಯಲ್ಲಿ ಭಾರತೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಸೆಕ್ಷನ್ 124A ‘ಕಾಗ್ನಿಸೇಬಲ್’ ಅಪರಾಧವಾಯಿತು. ಸೆಕ್ಷನ್ 124 A ಅಡಿಯಲ್ಲಿ ವಾರಂಟ್ ಇಲ್ಲದೆ ಬಂಧಿಸಲು ಪೊಲೀಸರಿಗೆ ಅಧಿಕಾರ ನೀಡಿತು.

2014ರ ನಂತರ ದೇಶದ್ರೋಹ ಪ್ರಕರಣಗಳು ಏಕೆ ಹೆಚ್ಚುತ್ತಿವೆ?

ಆರ್ಟಿಕಲ್ 14 ಪ್ರಕಟಿಸಿದ ವರದಿಗಳು  2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದ್ರೋಹ ಪ್ರಕರಣಗಳಲ್ಲಿ ತ್ವರಿತ ಹೆಚ್ಚಳವನ್ನು ಬಹಿರಂಗಪಡಿಸುತ್ತದೆ.

ಈ ವರದಿಗಳು ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಸಾರ್ವಜನಿಕ ಟೀಕೆ ಅಥವಾ ಪ್ರತಿಭಟನೆಗಳನ್ನು ಎದುರಿಸುವಾಗ ಹೇಗೆ ದೇಶದ್ರೋಹದ ಆರೋಪಗಳನ್ನು ವಾಸ್ತವಿಕ ತಂತ್ರವಾಗಿ ಬಳಸಿಕೊಂಡಿವೆ ಎಂಬುದನ್ನು ಎತ್ತಿ ತೋರಿಸುತ್ತವೆ. ದತ್ತಾ೦ಶಗಳು  ಪ್ರತಿಭಟನೆಗಳು ಅಥವಾ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವನ್ನು ಟೀಕಿಸುವ ಘಟನೆಗಳ ಸಂದರ್ಭದಲ್ಲಿ, ದೇಶದ್ರೋಹದ ಪ್ರಕರಣಗಳಲ್ಲಿ ಹೆಚ್ಚಳವನ್ನು ದಾಖಲಿಸಿದೆ.

NDA (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ) ಅಡಿಯಲ್ಲಿ ಕಡಿದಾದ ಏರಿಕೆ

2010 ರಿಂದ 816 ದೇಶದ್ರೋಹದ ಪ್ರಕರಣಗಳಲ್ಲಿ ಸುಮಾರು 11,000 ಜನರ ಮೇಲಿನ ಆರೋಪಗಳಲ್ಲಿ  65% ರಷ್ಟು ಆರೋಪಗಳನ್ನು  2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊರಿಸಲಾಗಿದೆ. ಕಳೆದ ದಶಕದಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಗಳನ್ನು ಟೀಕಿಸಿದ್ದಕ್ಕಾಗಿ ದೇಶದ್ರೋಹದ ಆರೋಪ ಹೊತ್ತಿರುವ 405 ಭಾರತೀಯರಲ್ಲಿ 95% ಪ್ರಕರಣಗಳಲ್ಲಿ ಆರೋಪವನ್ನು 2014 ರ ನಂತರ  ಹೊರಿಸಲಾಯಿತು. ಇವರಲ್ಲಿ 149 ಜನರು ಮೋದಿ ವಿರುದ್ಧ ಮತ್ತು 144 ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ "ವಿಮರ್ಶಾತ್ಮಕ" ಅಥವಾ "ಅವಹೇಳನಕಾರಿ" ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

2010-14ರ ಅವಧಿಯಲ್ಲಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಆಡಳಿತದ ಎರಡನೇ ಅಧಿಕಾರಾವಧಿಯ ವಾರ್ಷಿಕ ಸರಾಸರಿಗೆ ಹೋಲಿಸಿದರೆ, 2014 ಮತ್ತು 2020 ರ ನಡುವೆ  ಅಂದರೆ ಮೋದಿ ಅವರ ಅಧಿಕಾರಾವಧಿಯಲ್ಲಿ ಪ್ರತಿ ವರ್ಷ ದಾಖಲಾದ ದೇಶದ್ರೋಹದ ಪ್ರಕರಣಗಳಲ್ಲಿ 28% ಹೆಚ್ಚಳವನ್ನು ಡೇಟಾ ತೋರಿಸುತ್ತದೆ,.

ರಾಜ್ಯವಾರು ದೇಶದ್ರೋಹ ಪ್ರಕರಣಗಳು

2010-20ರ ಅವಧಿಯಲ್ಲಿ ಅತಿ ಹೆಚ್ಚು ದೇಶದ್ರೋಹ ಪ್ರಕರಣಗಳನ್ನು ಹೊಂದಿರುವ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಅಧಿಕಾರದಲ್ಲಿದೆ: ಬಿಹಾರ, ಯುಪಿ, ಕರ್ನಾಟಕ ಮತ್ತು ಜಾರ್ಖಂಡ್. ಉತ್ತರ ಪ್ರದೇಶದಲ್ಲಿ, 2010 ರಿಂದ ದಾಖಲಾದ 115 ದೇಶದ್ರೋಹದ ಪ್ರಕರಣಗಳಲ್ಲಿ 77% ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಕಳೆದ ನಾಲ್ಕು ವರ್ಷಗಳಲ್ಲಿ ದಾಖಲಾಗಿವೆ.

ದೇಶದ್ರೋಹ ಪ್ರಕರಣಗಳ ಅಗ್ರ 5 ರಾಜ್ಯಗಳಲ್ಲಿ ತಮಿಳು ನಾಡು ಮಾತ್ರ ಬಿಜೆಪಿಯೇತರ ರಾಜ್ಯ. ಈಲ್ಲಿ 80 % ಪ್ರಕರಣಗಳನ್ನು ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣವನ್ನು ವಿರೋಧಿಸುವವರ ವಿರುದ್ಧ ದಾಖಲಾಗಿವೆ

2014-2019ರ ನಡುವೆ ಭಾರತದಲ್ಲಿ 326 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದರೆ, ಚಾರ್ಜ್‌ಶೀಟ್‌ಗಳನ್ನು 141 ಪ್ರಕರಣಗಳಲ್ಲಿ ಮಾತ್ರ ಸಲ್ಲಿಸಲಾಗಿದೆ ಮತ್ತು ಕೇವಲ ಆರು ಜನರಿಗೆ ಶಿಕ್ಷೆಯಾಗಿದೆ. 54 ದೇಶದ್ರೋಹ ಪ್ರಕರಣಗಳೊಂದಿಗೆ ಅಸ್ಸಾಂ ಅಗ್ರಸ್ಥಾನದಲ್ಲಿದೆ, ಜಾರ್ಖಂಡ್ (40) ಮತ್ತು ಹರಿಯಾಣ (31) ನಂತರದ ಸ್ಥಾನದಲ್ಲಿವೆ. ಬಿಹಾರ, ಕೇರಳ ಮತ್ತು ಹಿಂದಿನ ರಾಜ್ಯ ಜಮ್ಮು ಮತ್ತು ಕಾಶ್ಮೀರ (ಜೆ & ಕೆ) ಈ ಅವಧಿಯಲ್ಲಿ ತಲಾ 25 ಪ್ರಕರಣಗಳನ್ನು ಹೊಂದಿದ್ದರೆ, ಕರ್ನಾಟಕದಲ್ಲಿ 22 ಪ್ರಕರಣಗಳು ವರದಿಯಾಗಿವೆ.

2014 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಮತ್ತು ನಂತರ ಬಿಹಾರದಲ್ಲಿ ದಾಖಲಾಗಿರುವ ಪ್ರಕರಣಗಳ ಸ್ವರೂಪವು ಗಮನಾರ್ಹವಾಗಿ ಭಿನ್ನವಾಗಿದೆ ಎಂದು ಆರ್ಟಿಕಲ್ ೧೪ ವರದಿ ಮಾಡಿದೆ. 2014 ರ ನಂತರ, 33 ಮಾವೋವಾದಿ ಪ್ರಕರಣಗಳಲ್ಲದೆ - 2010-14ರ ಅವಧಿಯಲ್ಲಿ 16 ರಿಂದ ಇವು ಹೆಚ್ಚಾದವು - ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ದ್ವೇಷದ ಅಪರಾಧಗಳ ವಿರುಧ್ಧ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ (CAA - ಸಿಎಎ) ವಿರುಧ್ಧ ವಿಮರ್ಶಾತ್ಮಕವಾಗಿ  ಮಾತನಾಡಿದ ಜನಪರಿಚಿತ ಗಣ್ಯ ವ್ಯಕ್ತಿಗಳು  ಮತ್ತು ಶಿಕ್ಷಣ ತಜ್ಞರ ವಿರುದ್ಧ ರಾಜ್ಯವು 20 ಪ್ರಕರಣಗಳನ್ನು ದಾಖಲಿಸಿದೆ..

ಯುಪಿ ಸರ್ಕಾರವು ಕ್ರಮವಾಗಿ 28 ಮತ್ತು 22 ದೇಶದ್ರೋಹ ಪ್ರಕರಣಗಳನ್ನು ಸಿಎಎ ವಿರೋಧಿ ಪ್ರತಿಭಟನಾಕಾರರು ಮತ್ತು ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ನಿರ್ವಹಣೆಯನ್ನು ಪ್ರಶ್ನಿಸಿದವರ ವಿರುದ್ಧ ದಾಖಲಿಸಿದೆ . ಆದಿತ್ಯನಾಥ್ ಮತ್ತು ಮೋದಿ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರನ್ನು ಟೀಕಿಸುವವರ ಮೇಲೆ ಯುಪಿ ಸರ್ಕಾರವು ವಿಶೇಷವಾಗಿ ಕಠೋರವಾಗಿತ್ತು. ಅಂತಹ 149 ಟೀಕಾಕಾರರ ವಿರುದ್ಧ ಕನಿಷ್ಠ 18 ದೇಶದ್ರೋಹದ ಆರೋಪಗಳನ್ನು ದಾಖಲಿಸಲಾಗಿದೆ.

ಘಟನೆ ಆಧಾರಿತ ವಿತರಣೆ

2019 ರಲ್ಲಿ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ, 44 ಜನರ ವಿರುದ್ಧ 27 ದೂರುಗಳನ್ನು ದಾಖಲಿಸಲಾಗಿದೆ, ಅದರಲ್ಲಿ 26 ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ "ಪಾಕಿಸ್ತಾನ ಪರ" ಘೋಷಣೆಗಳನ್ನು ಎತ್ತಿದ್ದಕ್ಕಾಗಿ ಮತ್ತು "ದೇಶ ವಿರೋಧಿ" ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಣೆ  ಮಾಡಿದ್ದಕ್ಕಾಗಿ ದಾಖಲಿಸಲಾಗಿದೆ. 

ಸಿಎಎ CAA -ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ, ಅಧಿಕಾರಿಗಳು 3,754 ವ್ಯಕ್ತಿಗಳ ವಿರುದ್ಧ 25 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿದ್ದಾರೆ, ಅದರಲ್ಲಿ 96 ಮಂದಿಯನ್ನು ಮಾತ್ರ ಗುರುತಿಸಲಾಗಿದೆ ಮತ್ತು ಉಳಿದವರನ್ನು “ಗುರುತಿಸಲಾಗಿಲ್ಲ”.  ಈ 25 ಪ್ರಕರಣಗಳಲ್ಲಿ 22 ಪ್ರಕರಣಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಾಖಲಾಗಿವೆ.

2018 ರಲ್ಲಿ ನೂರಾರು ಆದಿವಾಸಿಗಳ ಮೇಲೆ ದೇಶದ್ರೋಹದ ಅಡಿಯಲ್ಲಿ ಆರೋಪ ಹೊರಿಸಲು ಕಾರಣವಾದ ಜಾರ್ಖಂಡ್‌ನ ಪಾತಲ್‌ಗಡಿ ಚಳವಳಿಯು ರಾಜ್ಯದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿಯೇ  ಸಂಭವಿಸಿದೆ.

NCRB ವರದಿಯ ಪ್ರಕಾರ, 2016 ಮತ್ತು 2019 ರ ನಡುವೆ ದೇಶದ್ರೋಹದ ಪ್ರಕರಣಗಳ ಸಂಖ್ಯೆಯು 160% ರಷ್ಟು ಹೆಚ್ಚಾಗಿದೆ, ಆದರೆ 2016 ರಲ್ಲಿ 33.3% ರಿಂದ 2019 ರಲ್ಲಿ ಶಿಕ್ಷೆಯ ಪ್ರಮಾಣವು 3.3%ಕ್ಕೆ ಕುಸಿಯಿತು. 'ಸಾಕಷ್ಟು ಪುರಾವೆಗಳಿಲ್ಲದ’  ಅಥವಾ 'ಸುಳಿವಿಲ್ಲದ ' ಕಾರಣ ಇಪ್ಪತ್ತೊಂದು ಪ್ರಕರಣಗಳನ್ನು ಮುಚ್ಚಲಾಗಿದೆ, ಎರಡನ್ನು 'ಸುಳ್ಳು' ಎಂದು ವರ್ಗೀಕರಿಸಲಾಗಿದೆ ಮತ್ತು ಅಂತಿಮ ಪೋಲೀಸ್ ವರದಿಗಳ ಆಧಾರದ ಮೇಲೆ ಆರು ಪ್ರಕರಣಗಳನ್ನು ನಾಗರಿಕ ವಿವಾದಗಳೆಂದು ನಿರ್ಧರಿಸಲಾಯಿತು.

ಈ ಪ್ರಥಮ ಮಾಹಿತಿ ವರದಿಗಳಿಗೆ (FIRಗಳು), ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯಿದೆ, (Unlawful Activities Prevention Act (UAPA), Prevention of Damage to Public Property Act, Epidemic Diseases Act) ಮುಂತಾದ ಇತರ ಕಾನೂನುಗಳನ್ನು ಸಹ ಸೇರಿಸಲಾಗಿದೆ.

 

2019 ರಲ್ಲಿ, ಯುಎಪಿಎ (UAPA) ಅಡಿಯಲ್ಲಿ 1,226 ಪ್ರಕರಣಗಳನ್ನು ದಾಖಲಿಸಲಾಗಿದೆ - ಇದನ್ನು ಸತತ ಸರ್ಕಾರಗಳು ಭಿನ್ನಾಭಿಪ್ರಾಯವನ್ನು ತಗ್ಗಿಸಲು ಬಳಸಿಕೊಂಡಿವೆ. ಶಿಕ್ಷೆಗಳ ಸ೦ಖ್ಯೆ ನಗಣ್ಯ. ಅಲ್ಲದೇ ತಜ್ಞರ ಪ್ರಕಾರ, ದೇಶದ್ರೋಹದ ಕಾನೂನು ಮತ್ತು UAPA, ಒಂದೇ ವರ್ಗದ ಅಪರಾಧಗಳನ್ನು ನಿಯಂತ್ರಿಸುವ ಈ  ಎರಡು ಕಾನೂನುಗಳ ಸಹಬಾಳ್ವೆ "ತರ್ಕಬದ್ಧವಲ್ಲ".

 

2019 ರಲ್ಲಿ, ದೇಶದ್ರೋಹದ ಪ್ರಕರಣಗಳಿಗೆ ಶಿಕ್ಷೆಯ ಪ್ರಮಾಣವು 3.3% ಆಗಿದ್ದರೆ, UAPA ಪ್ರಕರಣಗಳಿಗೆ 2019 ರ ರಾಷ್ಟ್ರೀಯ ಸರಾಸರಿ ಶಿಕ್ಷೆಯ ದರವಾದ 50.4% ಗೆ ವ್ಯತಿರಿಕ್ತವಾಗಿ 29.2% ಆಗಿತ್ತು, ಇದು ಅಪರಾಧಗಳಿಗೆ ಭಾರತದ ಕಡಿಮೆ ಶಿಕ್ಷೆಯ ದರಗಳ ಮಾನದಂಡಗಳಿಂದಲೂ ತೀರಾ ಕಡಿಮೆಯಾಗಿದೆ.

ನ್ಯಾಯಾಲಯಗಳು ಮತ್ತು ತಜ್ಞರು ಏನು ಹೇಳುತ್ತಾರೆ

ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು Kedar Nath Das v. State of Bihar (1962) ದೇಶದ್ರೋಹದ ಕಾನೂನಿನ ಪ್ರಸ್ತುತ ವ್ಯಾಖ್ಯಾನವನ್ನು ಸ್ಥಾಪಿಸಿತು. ಇಂಡಿಯನ್ ಎಕ್ಸ್‌ಪ್ರೆಸ್ , ಪ್ರಕಾರ ಬಿಹಾರದ ಫಾರ್ವರ್ಡ್ ಕಮ್ಯುನಿಸ್ಟ್ ಪಕ್ಷದ ಸದಸ್ಯರಾದ ಕೇದಾರ್ ನಾಥ್ ಸಿಂಗ್ ಅವರು 1953 ರಲ್ಲಿ ಉರಿಯುತ್ತಿರುವ ಭಾಷಣವನ್ನು ಮಾಡಿದರು, ಇದು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ನಿಂದ ದೇಶದ್ರೋಹದ ಆರೋಪದ ಮೇಲೆ ಶಿಕ್ಷೆಗೆ ಕಾರಣವಾಯಿತು:

"ಇಂದು ಸಿಬಿಐನ ನಾಯಿಗಳು ಬರೌನಿಯ ಸುತ್ತ ಅಡ್ಡಾಡುತ್ತಿವೆ... ಬ್ರಿಟಿಷರನ್ನು ಓಡಿಸಿದಂತೆ ಈ ಕಾಂಗ್ರೆಸ್ ಗೂಂಡಾಗಳನ್ನೂ ಓಡಿಸುತ್ತೇವೆ.. ಬರಲಿರುವ ಕ್ರಾಂತಿಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಬಂಡವಾಳಶಾಹಿಗಳು, ಜಮೀನ್ದಾರರು ಮತ್ತು ಕಾಂಗ್ರೆಸ್ ನಾಯಕರು ಬೂದಿಯಾಗುತ್ತಾರೆ ಮತ್ತು ಅವರ ಬೂದಿಯ ಮೇಲೆ ಭಾರತದ ಬಡವರ ಮತ್ತು ದೀನದಲಿತರ ಸರ್ಕಾರವನ್ನು ಸ್ಥಾಪಿಸಲಾಗುವುದು.”

ಸಿಂಗ್ 1962 ರಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು, ಸೆಕ್ಷನ್ 124A ಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದರು. ಒಂದು ಮಹತ್ವದ ತೀರ್ಪಿನಲ್ಲಿ, ಕೇದಾರನಾಥನನ್ನು ದೇಶದ್ರೋಹದ ಆರೋಪದಿಂದ ಖುಲಾಸೆಗೊಳಿಸುವಾಗ ಉನ್ನತ ನ್ಯಾಯಾಲಯದ ಸಾಂವಿಧಾನಿಕ ಪೀಠವು ಕಾನೂನಿನ ಸಿಂಧುತ್ವವನ್ನು ಎತ್ತಿಹಿಡಿದಿದೆ.

ನ್ಯಾಯಾಲಯದ ವ್ಯಾಖ್ಯಾನದ ಪ್ರಕಾರ, ಹಿಂಸಾಚಾರಕ್ಕೆ ಪ್ರಚೋದನೆಯು ದೇಶದ್ರೋಹದ ಅಪರಾಧದ ಅಗತ್ಯ ಅಂಶವಾಗಿದೆ. ಅಂದಿನಿಂದ, ಸೆಕ್ಷನ್ 124A ಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಈ ವ್ಯಾಖ್ಯಾನವನ್ನು ಪೂರ್ವನಿದರ್ಶನವೆಂದು ಪರಿಗಣಿಸಲಾಗಿದೆ.

ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ 2017 ರಲ್ಲಿ ನ್ಯಾಯಮೂರ್ತಿ ಎ ಪಿ ಶಾ ಅವರು ಎಂಎನ್ ರಾಯ್ ಸ್ಮಾರಕ ಉಪನ್ಯಾಸವನ್ನು ನೀಡುತ್ತಾ ಕೇದಾರ್ ನಾಥ್ ತೀರ್ಪನ್ನು ವಿವರಿಸಿದರು: “ನ್ಯಾಯಾಲಯವು ದೇಶದ್ರೋಹದ ಸಾಂವಿಧಾನಿಕತೆಯನ್ನು ಎತ್ತಿಹಿಡಿದಿದೆ ಆದರೆ ಅದರ ಅನ್ವಯವನ್ನು ಅವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶ ಅಥವಾ ಪ್ರವೃತ್ತಿಯನ್ನು ಒಳಗೊಂಡಿರುವ ಕೃತ್ಯಗಳು , ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ, ಅಥವಾ ಹಿಂಸೆಗೆ ಪ್ರಚೋದನೆಗಳಿಗೆ ಸೀಮಿತಗೊಳಿಸಿದೆ. ಇದು ಈ ಕಾರ್ಯಗಳನ್ನು 'ಬಹಳ ಬಲವಾದ ಮಾತು' ಅಥವಾ ಸರ್ಕಾರವನ್ನು ಬಲವಾಗಿ ಟೀಕಿಸುವ 'ಹುರುಪಿನ ಪದಗಳ' ಬಳಕೆಯಿಂದ ಪ್ರತ್ಯೇಕಿಸುತ್ತದೆ.

ಮತ್ತೊಂದು ಮಹತ್ವದ ತೀರ್ಪನ್ನು ಉಲ್ಲೇಖಿಸುವಾಗ, ಕಾನೂನು ತಜ್ಞ ಮೌಶುಮಿ ಬಸು ಮತ್ತು ದೀಪಿಕಾ ಟಂಡನ್ ಇವರು  ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಬರೆದಿದ್ದಾರೆ:  ಸುಪ್ರೀಂ ಕೋರ್ಟ್ Balwant Singh v State of Punjab (1995)ರಲ್ಲಿ  ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಎದ್ದ ಭಾರತ ವಿರೋಧಿ ಘೋಷಣೆ ‘ಖಲಿಸ್ತಾನ್ ಜಿಂದಾಬಾದ್...ರಾಜ್ ಕರೇಗಾ ಖಾಲ್ಸಾ...ಹಿಂದೂಸ್ತಾನ್ ಮುರ್ದಾಬಾದ್’ ಗಳಿಗೆ ಸಂಬಂಧಿಸಿದಂತೆ, ದೇಶದ್ರೋಹದ ಆಪಾದನೆಯನ್ನು ತಳ್ಳಿ ಹಾಕಿತು.  ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ವಿಷಯದಲ್ಲಿ ಪರಿಣಾಮ ಬೀರದ ಕೇವಲ ಸಾಂದರ್ಭಿಕ ಘೋಷಣೆಗಳು ದೇಶದ್ರೋಹವನ್ನು ರೂಪಿಸುವುದಿಲ್ಲ ಎಂದು ತೀರ್ಪು ಅಭಿಪ್ರಾಯಪಟ್ಟಿದೆ.

 

ದೇಶದ್ರೋಹಿ ಕಾನೂನಿನ ದುರುಪಯೋಗದ ಬಗ್ಗೆ ಏನು ಮಾಡಲಾಗುತ್ತಿದೆ?

ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳ ಜೊತೆಗೆ ಮಾನವ ಹಕ್ಕುಗಳ ಕಾರ್ಯಕರ್ತರು ಸೆಕ್ಷನ್ 124A ಅನ್ನು ರದ್ದುಗೊಳಿಸಬೇಕೆಂದು, ದಮನಕಾರಿ ವಸಾಹತುಶಾಹಿ ನಿಬಂಧನೆಗೆ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ಥಾನವಿಲ್ಲ ಎಂದು, ಪ್ರತಿಪಾದಿಸಿದರು. ಅವರ ಪ್ರಕಾರ, ಶಾಸನವು ದೇಶದ್ರೋಹವನ್ನು ನಾಗರಿಕರ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಅಪಾಯ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ಇಲ್ಲದಿರುವಾಗಲೂ ಇದನ್ನು ಆಚರಣೆಗೆ ತರಲಾಗುತ್ತದೆ.

2018 ರಲ್ಲಿ, ಕಾನೂನು ಆಯೋಗವು 124A ಅಡಿಯಲ್ಲಿ ಕಾನೂನುಗಳನ್ನು ಮರುಪರಿಶೀಲಿಸಬೇಕೆಂದು ವಿನಂತಿಸುವ ಸಮಾಲೋಚನಾ ಲೇಖನವನ್ನು ಪ್ರಚಾರ ಮಾಡಿತು. ಇದರಲ್ಲಿ ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ ಮುಂತಾದ ದೇಶಗಳೊಂದಿಗೆ ದೇಶದ್ರೋಹದ ಕಾನೂನಿನ ಸೃಷ್ಟಿಕರ್ತ ಬ್ರಿಟನ್ ಸಹ ತಮ್ಮ ದೇಶದ್ರೋಹದ ಕಾನೂನನ್ನು ರದ್ದುಗೊಳಿಸಿರುವುದನ್ನು ಗಮನಿಸಲಾಗಿದೆ. ಬ್ರಿಟಿಷರು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ರೂಪಿಸಿದ ಕಾನೂನು ಈಗಲೂ ಭಾರತದಲ್ಲಿ ಜಾರಿಯಲ್ಲಿರುವದನ್ನು ಪ್ರಶ್ನಿಸಲಾಗಿದೆ

ಆದ್ದರಿಂದ, 1870 ರಲ್ಲಿ ಪ್ರಾರಂಭವಾದಾಗಿನಿಂದ ದೇಶದ್ರೋಹದ ಕಾನೂನನ್ನು ಪ್ರತಿಭಟನೆ, ಭಿನ್ನಾಭಿಪ್ರಾಯ ಅಥವಾ ಸರ್ಕಾರದ ಟೀಕೆಗಳ ಧ್ವನಿಯನ್ನು ಮೌನಗೊಳಿಸಲು ಬಳಸಲಾಗಿದೆ. ಇದಲ್ಲದೆ, ದೇಶದ್ರೋಹ ಕಾನೂನನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್‌ನ ಕೇದಾರ್ ನಾಥ್ ತೀರ್ಪು, ಕಾನೂನು ನಿರ್ಬಂಧಗಳ ಮೂಲಕ ಮಾನಸಿಕ ಅಡೆತಡೆಗಳನ್ನು ಉಂಟುಮಾಡುವ ವಾಕ್ ಸ್ವಾತಂತ್ರ್ಯಕ್ಕೆ "ಘನೀಕರಿಸುವ ಪರಿಣಾಮ" ದ೦ತಹ ಸಿದ್ಧಾಂತಗಳು ಕೇಳಿರದ ಸಮಯದಲ್ಲಿ ನೀಡಲಾಯಿತು.

ಕಳೆದ ಕೆಲವು ವರ್ಷಗಳಿಂದ ಹೆಚ್ಚುತ್ತಿರುವ ದೇಶದ್ರೋಹ ಪ್ರಕರಣಗಳು ಅಧಿಕಾರಿಗಳು ಈ ಅಸಾಧಾರಣ ಕಾನೂನನ್ನು ವಿವೇಚನಾರಹಿತವಾಗಿ ಬಳಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ದತ್ತಾಂಶವು ಸೆಕ್ಷನ್ 124A ರ  ಅಗಾಧವಾದ ದುರ್ಬಳಕೆ, ತನ್ನದೇ ಆದ ವೈಯಕ್ತಿಕ ಅನ್ವಯಿಸುವಿಕೆ, ಅಸ್ಪಷ್ಟತೆ, ಇವುಗಳಿ೦ದ  ಗುರುತಿಸಲಾಗಿದೆ ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ನಾಗರಿಕರಿಗೆ ಕಿರುಕುಳ ನೀಡುವ ಸಾಧನವಾಗಿ ಬಳಸಲಾಗುತ್ತದೆ ಎಂಬುದನ್ನೆಲ್ಲ ಸ್ಪಷ್ಟವಾಗಿ ತೋರಿಸುತ್ತದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು