ಭಾರತದ ಬಲಪಂಥೀಯರಿಗೆ  ಉರ್ದು ಭಾಷೆಯ ಮೇಲೆ  ಏಕೆ ಕೋಪ ?

ಜೋಯಾ ಮತೀನ್ 

ಬಿಬಿಸಿ ನ್ಯೂಸ್, ದೆಹಲಿ 16 ಮೇ, 2022


Mohammed Ghalib, a katib - traditional calligrapher - in Urdu Bazaar, Old Delhi, India.

ಭಾರತದಲ್ಲಿ ಉರ್ದು ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾದ ಭಾಷೆಯಾಗಿದೆ. ಆದರೆ ಕೆಲವರು ಇದನ್ನು ಒಪ್ಪುವುದಿಲ್ಲ. 

 

ಉರ್ದು ಯಾರಿಗೆ ಸೇರಿದ್ದು?

ಭಾರತದ ಬಲಪಂಥೀಯರ ನೋಟದಲ್ಲಿ  ಬಹುಶಃ ಉರ್ದು ಒ೦ದು ವಿದೇಶಿ ಆಮದು,  ಇಸ್ಲಾಮಿಕ್ ಆಕ್ರಮಣಕಾರರೆಂದು ಕರೆಯಲ್ಪಡುವವರ ಬಲವ೦ತವಾಗಿ ಹೇರಿದ ಭಾಷೆ ಎಂದಿರಬಹುದು.  

 

ಏಪ್ರಿಲ್‌ನಲ್ಲಿ , ಇತ್ತೀಚಿನ ಗಲಾಟೆಯಲ್ಲಿ, ಬಲಪಂಥೀಯ ಹೊಸ ಚಾನೆಲ್‌ನ ವರದಿಗಾರಳೊಬ್ಬಳು  ಜನಪ್ರಿಯ ಫಾಸ್ಟ್‌ಫುಡ್ ಸ್ಥಳಕ್ಕೆ ನುಗ್ಗಿದಳು,  ಮತ್ತು ತಿಂಡಿಗಳ ಪೊಟ್ಟಣವನ್ನು  ಉರ್ದು ಎಂದು ಅವಳು ಭಾವಿಸಿದ ಭಾಷೆಯಲ್ಲಿ ಲೇಬಲ್ ಮಾಡಿದ್ದಕ್ಕಾಗಿ ಅದರ ಉದ್ಯೋಗಿಗಳನ್ನು ಕೆಣಕಿದಳು. ಲೇಬಲ್ ವಾಸ್ತವವಾಗಿ ಅರೇಬಿಕ್ ಭಾಷೆಯಲ್ಲಿತ್ತು. 

 

 

ಇಸ್ಲಾಮಿಕ್ ಸಂಸ್ಕೃತಿಯಲ್ಲಿ ಬೇರುಗಳನ್ನು ಹೊಂದಿರುವ ವಸ್ತುಗಳನ್ನೆಲ್ಲ   ಭೇದ ಕಲ್ಪಿಸದೆ  ‘ಎಲ್ಲಾ ಒ೦ದೇ’ ಎ೦ದು ವರ್ಗೀಕರಿಸುವ ವಿಶಾಲ ಪ್ರಯತ್ನವನ್ನು ಇದು ಒತ್ತಿಹೇಳುತ್ತದೆ ಎಂದು ಹಲವರ ಅಭಿಪ್ರಾಯ. .

 

ಕಳೆದ ವರ್ಷ, ಬಟ್ಟೆ ಮಾರಾಟ ಅ೦ಗಡಿ  ಫ್ಯಾಬಿಂಡಿಯಾ ಉರ್ದು ಭಾಷೆಯಲ್ಲಿ  ಶೀರ್ಷಿಕೆಯಿದ್ದ  ಜಾಹೀರಾತನ್ನು ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರ ಪ್ರತಿಭಟನೆಯ ನಂತರ ಒತ್ತಾಯದ ಕಾರಣವಾಗಿ ಹಿಂತೆಗೆದುಕೊಳ್ಳುವಂತೆ ಮಾಡಲಾಯಿತು. 

 

ಹಿಂದೆ, ರಾಜ್ಯ ವಿಧಾನಸಭೆಗಳಿಗೆ ಚುನಾಯಿತರಾದ ರಾಜಕಾರಣಿಗಳು ಉರ್ದುವಿನಲ್ಲಿ ಪ್ರಮಾಣವಚನ ಸ್ವೀಕರಿಸುವುದನ್ನು ನಿರ್ಬಂಧಿಸಲಾದ ಘಟನೆಗಳು ಸ೦ಭವಿಸಿವೆ. ಕಲಾವಿದರು ಉರ್ದು ಗೀಚುಬರಹವನ್ನು ಚಿತ್ರಿಸುವುದನ್ನುನಿಲ್ಲಿಸಲಾಗಿದೆ; ಮತ್ತು ನಗರಗಳು ಮತ್ತು ನೆರೆಹೊರೆಗಳನ್ನು ಮರುಹೆಸರಿಸಲಾಗಿದೆ. ಉರ್ದು ಪದಗಳನ್ನು ಶಾಲಾ ಪಠ್ಯಪುಸ್ತಕಗಳಿಂದ ತೆಗೆದುಹಾಕುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ 

 

ಉರ್ದು ಮೇಲಿನ ಇಂತಹ ದಾಳಿಗಳು, ಭಾರತದ ಮುಸ್ಲಿಂ ಜನಸಂಖ್ಯೆಯನ್ನು ಕಡೆಗಣಿಸುವ ದೊಡ್ಡದೊ೦ದು  ಪ್ರಯತ್ನದ  ಭಾಗವಾಗಿದೆ ಎಂದು ಹಲವರು ನಂಬುತ್ತಾರೆ.


"ಮುಸ್ಲಿಮರಿಗೆ ಸಂಬಂಧಿಸಿದ ಚಿಹ್ನೆಗಳ ಮೇಲೆ ದಾಳಿಯ ಒ೦ದು ನಿರ್ದಿಷ್ಟ ಬೇತು ನಡೆಯುತ್ತಿದೆ ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ" ಎಂದು ಕತಾರ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಪ್ರಾಧ್ಯಾಪಕ ರಿಜ್ವಾನ್ ಅಹ್ಮದ್ ಹೇಳುತ್ತಾರೆ.

 

ಭಾರತದ ಗತಕಾಲದ ರಾಜಕೀಯ ಪುನಾರಚನೆಯ ವಿಶಾಲ ಬಲಪಂಥೀಯ ಕಾರ್ಯಸೂಚಿಗೆ ಇದು ಸರಿಹೊಂದುತ್ತದೆ ಎಂದು ಇತರರು ಹೇಳುತ್ತಾರೆ.

 

" ಭಾರತೀಯ ಭಾಷೆಗಳನ್ನು ಧರ್ಮ ಆಧಾರಿತ  ಸಂಕೋಲೆಗಳಿಗೆ ಒಳಪಡಿಸುವ ರಾಜಕೀಯ ಯೋಜನೆಯೊ೦ದಿದೆ. ಈ ಯೋಜನೆ  ಮುಂದುವರಿಯಬಹುದಾದ ಏಕೈಕ ಮಾರ್ಗವೆ೦ದರೆ ಆಧುನಿಕ ಭಾರತೀಯರನ್ನು ಅವರ ಇತಿಹಾಸದ ಒ೦ದು ಬೃಹತ್ ಮೊತ್ತದಿಂದ ಕತ್ತರಿಸಿ  ಛೇದಿಸುವುದು" ಎಂದು ಇತಿಹಾಸಕಾರ ಆಡ್ರೆ ಟ್ರುಶ್ಕೆ ಹೇಳುತ್ತಾರೆ.

 

"ಈ ರೀತಿ ಇತಿಹಾಸವನ್ನು ಜನರಿ೦ದ ಬೇರ್ಪಡಿಸುವದು   ಪ್ರಸ್ತುತ ಸರ್ಕಾರದ ಹಿತಾಸಕ್ತಿಗಳನ್ನು ಪೂರೈಸಬಹುದು, ಆದರೆ ಇದು ಎಲ್ಲರಿಗೂ ಚಾರಿತ್ರಿಕ ಪರಂಪರೆಯ ಕ್ರೂರ ನಿರಾಕರಣೆಯಾಗಿದೆ."


Red Fort, Delhi, India, 1860s-70s, Albumen silver print from glass negative, 20.7 x 27.6 cm (8 1/8 x 10 7/8 in.),

 

ಉರ್ದುವಿನ ಹುಟ್ಟನ್ನು 18ನೇ ಶತಮಾನದ ಉತ್ತರಾರ್ಧದಲ್ಲಿ ಗುರುತಿಸಬಹುದು

 

BBC ಈ ಕಥೆಗೆ ಸಂಬಂಧಿಸಿದಂತೆ ಮೂವರು ಬಿಜೆಪಿ ನಾಯಕರನ್ನು ಸಂಪರ್ಕಿಸಲು ಪ್ರಯತ್ನಿಸಿತು ಆದರೆ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ.

 

ಉರ್ದು ಒ೦ದು ನಯವಾದ  ಮತ್ತು ಅಭಿವ್ಯಕ್ತಿಶೀಲ ಭಾಷೆ.   ಭಾರತದ ಕೆಲವು ಪ್ರಸಿದ್ಧ ಕವಿಗಳು ಮತ್ತು ಬರಹಗಾರರಿಗೆ ಈ ಭಾಷೆ ಆದ್ಯತೆಯ ಆಯ್ಕೆಯಾಗಿದೆ. ಸಾದತ್ ಹಸನ್ ಮಾಂಟೊ ಮತ್ತು ಇಸ್ಮತ್ ಚುಗ್ತಾಯ್ ಅವರಂತಹ ಉರ್ದು ಬರಹಗಾರರಿಂದ  ಎಲ್ಲರ ಮೆಚ್ಚುಗೆ ಪಡೆದ ಬರಹಗಳು ಬಂದಿವೆ.

 

ಉರ್ದು ಭಾಷೆಯ  ಸೊಬಗು ಮತ್ತು ಸುಗಮ ಅಭಿವ್ಯಕ್ತಿ  ಉಗ್ರವಾದ ರಾಷ್ಟ್ರೀಯತಾವಾದಿ ಕಾವ್ಯ ಮತ್ತು ಪ್ರಣಯಭಾವನೆಯ ಅರೆ-ಶಾಸ್ತ್ರೀಯ ಹಾಡು  ( ಗಜಲ್‌)  ಗಳು  ಎರಡಕ್ಕೂ ಸ್ಫೂರ್ತಿ ನೀಡಿದೆ. ಇದು ಬಾಲಿವುಡ್ ಹಾಡುಗಳ ಹೃದಯ ಬಡಿತವೂ ಆಗಿದೆ.

 

ಉರ್ದು ಮುಸ್ಲಿಮರಿಗೆ ಸೇರಿದ್ದು ಆದರೆ ಹಿಂದೂಗಳು ಹಿಂದಿಯನ್ನು ಮಾತ್ರ ಮಾತನಾಡುತ್ತಾರೆ ಎಂದು ಭಾಷೆಯ ವಿರೋಧಿಗಳು ಹೇಳುತ್ತಾರೆ. ಆದರೆ ಇತಿಹಾಸ ಮತ್ತು ಜೀವನ ಅನುಭವಗಳು ಇದಕ್ಕೆ ವಿರುದ್ಧವಾಗಿ ತೋರಿಸುತ್ತವೆ.

 

ಇ೦ದಿನ  ಉರ್ದು ಭಾಷೆಯನ್ನು ಟರ್ಕಿಶ್, ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳಿಗೆ ಪತ್ತೆ ಹಚ್ಚಿಸಬಹುದು.  ಇವೆಲ್ಲವೂ ವ್ಯಾಪಾರ ಮತ್ತು ವಿಜಯಗಳ ಅಲೆಗಳ ಮೂಲಕ ಭಾರತಕ್ಕೆ ಬಂದವು.

"ಈ ಸಾಮಾನ್ಯ ಭಾಷೆ ಭಾರತೀಯ ಉಪಖಂಡದಲ್ಲಿ ಸಂಭವಿಸಿದ ಸಾಂಸ್ಕೃತಿಕ ಮಿಶ್ರತಳಿಯಿಂದ ಹುಟ್ಟಿದೆ" ಎಂದು ಇತಿಹಾಸಕಾರ ಅಲೋಕ್ ರೈ ಹೇಳುತ್ತಾರೆ.

"ಅದರ ವಿಕಾಸದ ಮಾರ್ಗದಲ್ಲಿ ಅದು ವಿಭಿನ್ನ ಹೆಸರುಗಳನ್ನು ಪಡೆದುಕೊಂಡಿದೆ: ಹಿಂದವಿ, ಹಿಂದೂಸ್ತಾನಿ, ಹಿಂದಿ, ಉರ್ದು ಅಥವಾ ರೇಖ್ತಾ."

 

A rare urdu book can be seen in a worn out state at the Hazrat Shah Waliullah Public Library in New Delhi on June 28, 2010.

ದೆಹಲಿಯ ಸಾರ್ವಜನಿಕ ಗ್ರಂಥಾಲಯದಲ್ಲಿ ಸವೆದ ಸ್ಥಿತಿಯಲ್ಲಿದ್ದ ಅಪರೂಪದ ಉರ್ದು ಪುಸ್ತಕ

 

ಡಾ ರೈ ಹೇಳುತ್ತಾರೆ, - ಅದರ ಮಾತನಾಡುವ ರೂಪಗಳಿಂದ ಅದನ್ನು ಪ್ರತ್ಯೇಕಿಸಲು ಉಲ್ಲೇಖಗಳನ್ನು ಬಳಸುತ್ತ -  'ಉರ್ದು' 18 ನೇ ಶತಮಾನದ ಕೊನೆಯಲ್ಲಿ ಮೊಗಲ್ ರಾಜವಂಶದ ಕೊನೆಯ ವರ್ಷಗಳಲ್ಲಿ  ದೆಹಲಿಯ  ದರಬಾರಿನ  ಸುತ್ತ ಗುಂಪುಗಟ್ಟಿದ ಗಣ್ಯ ಶ್ರೀಮಂತರಿಂದ ಆವಿಷ್ಕರಿಸಿದ ಸಾಹಿತ್ಯ ಶೈಲಿಯಾಗಿದೆ.

 

ಈ 'ಉರ್ದು' ಅನ್ನು ಇಂದಿನಂತೆ ಮುಸ್ಲಿಂ ಭಾಷೆಯಾಗಿ ನೋಡಲಾಗಲಿಲ್ಲ, ಆದರೆ ಒಂದು ವರ್ಗ ಅಂಶವನ್ನು ಹೊಂದಿತ್ತು. ಇದು ಉತ್ತರ ಭಾರತದ ಗಣ್ಯರು ಮಾತನಾಡುವ ಭಾಷೆ. ಅದು ಹಿಂದೂಗಳನ್ನೂ ಒಳಗೊಂಡಿತ್ತು.

 

ಮತ್ತೊಂದೆಡೆ, 'ಹಿಂದಿ', ಇಂದಿನ ಉತ್ತರ ಪ್ರದೇಶ ರಾಜ್ಯದಲ್ಲಿ 19 ನೇ ಶತಮಾನದ ಉತ್ತರಾರ್ಧ ಮತ್ತು -20ನೇ ಶತಮಾನದಲ್ಲಿ   ಅದೇ ಸಾಮಾನ್ಯ ನೆಲೆಯಿಂದ ಬೆಳೆದು ಬ೦ದ ಸಾಹಿತ್ಯ ಶೈಲಿಯಾಗಿದ್ದರೂ  " ವ್ಯತ್ಯಾಸವನ್ನು ಉಳಿಸಿಕೊಳ್ಳಲು  ಪ್ರಯತ್ನಿಸುತ್ತಿದೆ".

 

'ಉರ್ದು' ಹೆಚ್ಚಾಗಿ  ಮಧ್ಯಕಾಲೀನ ಭಾರತದ ಗಣ್ಯ ಭಾಷಾ ಪರ್ಷಿಯನ್‌ನಿಂದ ಪದಗಳನ್ನು ಎರವಲು ಪಡೆದರೆ - - 'ಹಿಂದಿ'  ಪ್ರಾಚೀನ ಹಿಂದೂ ಪಠ್ಯಗಳ ಭಾಷೆಯಾದ ಸಂಸ್ಕೃತದಿಂದ ಪದಗಳನ್ನು ತೆಗೆದುಕೊಂಡಿತು.


"ಆದ್ದರಿಂದ ಎರಡೂ ಭಾಷೆಗಳು ಒ೦ದೇ  ವ್ಯಾಕರಣದ ಆಧಾರದ ಮೇಲೆ ನಿಂತಿವೆ, ಆದರೆ ಹಿಂದಿ ಮತ್ತು ಉರ್ದು ಎರಡೂ ರಾಜಕೀಯ ಕಾರಣಗಳಿಗಾಗಿ ತಮ್ಮ ತಮ್ಮದೇ ಉಗಮದ   ಪುರಾಣಗಳನ್ನು ಬೆಳೆಯಿಸಿವೆ" ಎಂದು ಡಾ ರೈ ವಿವರಿಸುತ್ತಾರೆ.

 

ಡಾ ರೈ ಹೇಳುವುದೇನೆಂದರೆ, ಎರಡೂ ಸಮುದಾಯಗಳ ಭಾಷಿಕರು ಒ೦ದು ಸಾಮಾನ್ಯ ಭಾಷೆಯ ಬಗ್ಗೆ ಹಕ್ಕು ಮಂಡಿಸಿದರೂ   ಪ್ರತ್ಯೇಕ ಗುರುತನ್ನು ಕಾಪಾಡಿಕೊಳ್ಳುವ ಆತಂಕದಿಂದ ಅದನ್ನು ವಿಭಜಿಸುತ್ತಾರೆ.

 

"ಕೆಲವು ದುರಂತ ಪರಿಣಾಮಗಳನ್ನು ಹೊಂದಿಲ್ಲದಿದ್ದರೆ ಇಡೀ ಪರಿಸ್ಥಿತಿಯು ಸ್ವಲ್ಪ ಹಾಸ್ಯಾಸ್ಪದವಾಗಿರುತ್ತದೆ" ಎಂದು ಅವರು ಹೇಳುತ್ತಾರೆ.

 

Sabahat Nabeel Qadri, an art teacher of National Urdu High School Kalyan gives final touch to the wall paintings of social messages on the schools wall, on May 3, 2019 in Mumbai, India.

ಬಲಪಂಥೀಯರು ಉರ್ದು ಮುಸ್ಲಿಮರಿಗೆ ಸೇರಿದ್ದು ಆದರೆ ಹಿಂದೂಗಳು ಹಿಂದಿಯನ್ನು ಮಾತ್ರ ಮಾತನಾಡುತ್ತಾರೆ ಎನ್ನುತ್ತಾರೆ - ಆದರೆ ಇದು ಸತ್ಯಕ್ಕೆ ದೂರವಾಗಿದೆ

 

ಬ್ರಿಟಿಷ್ ಆಳ್ವಿಕೆಯಲ್ಲಿ ವಿಭಜನೆಯು ಬಲಗೊಂಡಿತು, ಅವರು ಹಿಂದಿಯನ್ನು ಹಿಂದೂಗಳೊಂದಿಗೆ ಮತ್ತು ಉರ್ದುವನ್ನು ಮುಸ್ಲಿಮರೊಂದಿಗೆ ಗುರುತಿಸಲು ಪ್ರಾರಂಭಿಸಿದರು. ಆದರೆ ಬಲಪಂಥೀಯ ವಾಕ್ಚಾತುರ್ಯದಲ್ಲಿ ಉರ್ದುವನ್ನು ವಿದೇಶಿ ಎಂದು ಚಿತ್ರಿಸುವುದು ಹೊಸದೇನಲ್ಲ.

 

19 ನೇ ಶತಮಾನದ ಉತ್ತರಾರ್ಧದಲ್ಲಿ ಹಿಂದೂ ರಾಷ್ಟ್ರೀಯವಾದಿಗಳು ಉತ್ತರ ಭಾರತದಲ್ಲಿ ನ್ಯಾಯಾಲಯಗಳ ಅಧಿಕೃತ ಭಾಷೆಯಾಗಿ ಹಿಂದಿಗೆ ನ್ಯಾಯಸಮ್ಮತತೆಯನ್ನು ಪ್ರತಿಪಾದಿಸಿದರು ಎಂದು ಶ್ರೀ ಅಹ್ಮದ್ ಹೇಳುತ್ತಾರೆ. ಬ್ರಿಟಿಷರು 1837 ರಲ್ಲಿ ಪರ್ಷಿಯನ್ ಭಾಷೆಯಿಂದ ಉರ್ದುವಿಗೆ ಅಧಿಕೃತ ಭಾಷೆಯನ್ನು ಬದಲಾಯಿಸಿದರು.

 

ಭಾರತವು 1947 ರಲ್ಲಿ  ಎರಡು ಪ್ರತ್ಯೇಕ ರಾಜ್ಯಗಳಾಗಿ ಬೇರ್ಪಡಿಸಿದಾಗ ಭಾಷಾ ವಿಭಜನೆಯು ತನ್ನ ಉತ್ತುಂಗವನ್ನು ತಲುಪಿತು. " ಭಾರತದ ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯದ ಕಲ್ಪನೆಯನ್ನು ಅನುಮೋದಿಸಿದ  ಮುಸ್ಲಿಮ್ ಲೀಗ್  ಒತ್ತಾಯಿಸಿದ ವಿಷಯಗಳಲ್ಲಿ ಉರ್ದು ಒಂದಾಗಿತ್ತು ಮತ್ತು ಇದು "ಪಾಕಿಸ್ತಾನವನ್ನು  ಬೇರ್ಪಡಿಸುವ  ಬೇಡಿಕೆಗೆ ಬೆ೦ಬಲವನ್ನು ಹೆಚ್ಚಿಸುವ ಮಾರ್ಗ" ವಾಗಿತ್ತು. ಎಂದು ಡಾ ರೈ ಹೇಳುತ್ತಾರೆ,

 

ಉರ್ದು ಸುಲಭದ ಗುರಿಯಾಗುವುದರಲ್ಲಿ ಆಶ್ಚರ್ಯವಿಲ್ಲ - ಉತ್ತರ ಪ್ರದೇಶವು ಅದನ್ನು ಶಾಲೆಗಳಲ್ಲಿ ನಿಷೇಧಿಸಿತು ಮತ್ತು ಆ ಸಮಯದಲ್ಲಿ ಬಹಳಷ್ಟು ಹಿಂದೂಗಳು ಉರ್ದು ಭಾಷೆಯನ್ನು ತ್ಯಜಿಸಿದರು ಎಂದು ಹೇಳುತ್ತಾರೆ ಡಾ ಅಹ್ಮದ್. 

 

ಡಾ ಟ್ರುಶ್ಕೆ ಅವರು ಉರ್ದುವಿನಿಂದ ಬಲಪಂಥೀಯರು ಅಸ್ತಿತ್ವದಲ್ಲಿಲ್ಲದ ಭೂತಕಾಲವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳುತ್ತಾರೆ: " ಇದ್ದಕ್ಕಿದ್ದಂತೆ ಉರ್ದು ಕೇವಲ ಮುಸ್ಲಿಂ ಭಾಷೆ ಎಂದು ಗುರುತಿಸಲಾಯಿತು. ಹಾಗಾದರೆ  ಉರ್ದುವಿನಲ್ಲಿ ಬರೆದ ಅನೇಕ ಹಿಂದೂಗಳ ಬಗ್ಗೆ ಅಥವಾ ನಮ್ಮ ಕೆಲವು ಆರಂಭಿಕ ಹಿಂದಿ ಹಸ್ತಪ್ರತಿಗಳು ಪರ್ಸೋ-ಅರೇಬಿಕ್ ಲಿಪಿಯಲ್ಲಿವೆ ಎನ್ನುವ ಬಗ್ಗೆ  ನಾವು ಸುಮ್ಮನಿರಬೇಕೇ?"

 

Urdu language teacher Afsana Khokhar teaches her students at Mahudha Urdu School at Mahudha some 65 kms. south east of Ahmedabad on October 11, 2012.

ಉತ್ತರ ಪ್ರದೇಶ ರಾಜ್ಯದ ಶಾಲೆಗಳು ವಿಭಜನೆಯ ನಂತರ ಶಾಲೆಗಳಲ್ಲಿ ಉರ್ದುವನ್ನು ನಿಷೇಧಿಸಿದ್ದವು. 

 

ಅಲ್ಲದೆ, ಹಿಂದಿ ಮಾತಿನಲ್ಲಿ  ಉದಾರವಾಗಿ ಬಳಸಲಾಗುವ ಉರ್ದು ಪದಗಳ ಬಗ್ಗೆ ಏನು?

" ಜೆಬ್  (ಕಿಸೆ) ಅರೇಬಿಕ್ ಪದವು ಪರ್ಷಿಯನ್  ಮಾರ್ಗವಾಗಿ  ಬಂದಿದೆ. ಮೊಹಬ್ಬತ್ (ಪ್ರೀತಿ) ಅಥವಾ ದಿಲ್  ಇ೦ತಹ ಕಾಲಾತೀತ ಪದಗಳ ಗತಿ ಏನು ?" ಡಾ ಅಹ್ಮದ್ ಹೇಳುತ್ತಾರೆ.

 

ಅದೇ ಸಮಯದಲ್ಲಿ, ಭಾಷೆಗಳು ಮತ ವಿಶ್ವಾಸದ  ಗುರುತುಗಳೂ ಆಗಿವೆ, 

"ಉರ್ದು ಮಾತನಾಡುವ ಮುಸ್ಲಿಮರು ಹಿಂದೂಗಳಿಗಿಂತ  ಹೆಚ್ಚಾಗಿ ಸೂರ್ಯಾಸ್ತದ ಪದವಾಗಿ ‘ಮಘ್ರೀಬ್’ ಅನ್ನು ಬಳಸುತ್ತಾರೆ.  ಇದು ಮೇಲ್ಜಾತಿ ಹಿಂದೂಗಳ ಭಾಷೆಯು ಅದೇ ಗ್ರಾಮದ ಕೆಳಜಾತಿಯ ಜನರ ಭಾಷೆಗಿ೦ತ ಬೇರೆಯಾಗಿರುವದಕ್ಕೆ ಸಮಾನ.   ಪ್ರತಿಯೊಂದು ಭಾಷೆಯು ತನ್ನದೇ ನಿರಂತರತೆಯಲ್ಲಿ  ಅಸ್ತಿತ್ವದಲ್ಲಿರುತ್ತದೆ." 

 

ಹಿಂದಿಯಿಂದ ಉರ್ದುವನ್ನು ತೆಗೆದುಹಾಕುವ ಪ್ರಯತ್ನಗಳು ಹಿ೦ದಿ ಭಾಷೆಯನ್ನೆ "ಅಧಮಾನಗೊಳಿಸಿದೆ" ಎಂದು ಶ್ರೀ ರೈ ಹೇಳುತ್ತಾರೆ.

 

"ಈ ಹಿಂದಿ ಜನಪ್ರಿಯ ಮಾತಿನ  ಭಾಷೆಯಲ್ಲ, ಇದು ಬರಡಾದ ಮತ್ತು ಭಾವನಾತ್ಮಕ ಅನುರಣನ-ರಹಿತವಾದ ಭಾಷೆ."


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು