ಬಿ ಬಿ ಸಿ ವರದಿ 

 

ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿಯನ್ನು ಧ್ರುವೀಕರಣ ಹೇಗೆ ವಿಭಜಿಸುತ್ತಿದೆ

ಸೌತಿಕ್ ಬಿಸ್ವಾಸ್  ಬಿ ಬಿ ಸಿ ೭ ಎಪ್ರಿಲ್ ೨೦೨೨

 

 

ಕಳೆದ ವಾರ ಭಾರತದ ಅತಿ ಶ್ರೀಮಂತ ಮಹಿಳೆಯೊಬ್ಬರು ಆಡಳಿತಾರೂಢ ರಾಜಕಾರಣಿಗಳಿಗೆ ಅಸಾಮಾನ್ಯ ಮನವಿಯೊಂದನ್ನು ‘ಟ್ವೀಟ್’ ಮಾಡಿದ್ದಾರೆ.

 

ಪ್ರಮುಖ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ಬಯೋಕಾನ್‌ನ ಮುಖ್ಯಸ್ಥರಾಗಿರುವ ಕಿರಣ್ ಮಜುಂದಾರ್ ಶಾ ಅವರು 6.4  ಕೋಟಿ ಜನರಿರುವ ದಕ್ಷಿಣ ಭಾರತ ರಾಜ್ಯ ಕರ್ನಾಟಕದಲ್ಲಿ "ಬೆಳೆಯುತ್ತಿರುವ ಧಾರ್ಮಿಕ ವಿಭಜನೆಯನ್ನು ಪರಿಹರಿಸಲು"   ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದರು. ಶಾ ಅವರ ಉದ್ಯಮವು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನೆಲೆಗೊಂಡಿದೆ. ಬೆ೦ಗಳೂರು  ಭಾರತದ ಪ್ರವರ್ಧಮಾನಕ್ಕೆ ಬರುತ್ತಿರುವ ಮಾಹಿತಿ-ತಂತ್ರಜ್ಞಾನ ಕೇಂದ್ರವಾಗಿದೆ.

 

ಅವರ ಹೇಳಿಕೆಗಳು ಬ೦ದಿರುವದು ರಾಜ್ಯದಲ್ಲಿನ ಮೂಲಭೂತ ಹಿಂದೂ ಗುಂಪುಗಳ ಬೇಡಿಕೆಗಳ ಮೇಲೆ  ವಿವಾದದ ಹಿನ್ನೆಲೆಯಲ್ಲಿ.  ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳು ಮಳಿಗೆಗಳನ್ನು ಸ್ಥಾಪಿಸುವುದನ್ನು ನಿಷೇಧಿಸುವಂತೆ, ಮುಸ್ಲಿಂ ಕಟುಕರು ಮಾರುವ ಹಲಾಲ್ ಮಾಂಸವನ್ನು ಖರೀದಿಸದಂತೆ ಈ ಗುಂಪುಗಳು ಹಿಂದೂಗಳನ್ನು ಒತ್ತಾಯಿಸುತ್ತಿವೆ.  (ಹಲಾಲ್ ವಧೆಯ ಅವಶ್ಯಕತೆಗಳ ಅಡಿಯಲ್ಲಿ ಪ್ರಾಣಿಗಳನ್ನು ಕೊಲ್ಲುವ ಆಚರಣೆಯಲ್ಲಿ ಪ್ರಜ್ಞೆ ಇರುವಾಗಲೇ ಪ್ರಾಣಿಯ ಗಂಟಲನ್ನು ಹರಿತವಾದ ಚಾಕುವಿನಿಂದ ತ್ವರಿತವಾಗಿ ಸೀಳಲಾಗುತ್ತದೆ.) ಈಗ ಗುಂಪುಗಳು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲು ಮತ್ತು ಮುಸ್ಲಿಂ ಮಾವು ಮಾರಾಟಗಾರರನ್ನು ಬಹಿಷ್ಕರಿಸಲು ಪ್ರಯತ್ನಿಸುತ್ತಿವೆ.

 

ಅಷ್ಟೇ ಅಲ್ಲ. ಕಳೆದ ತಿಂಗಳುಗಳಲ್ಲಿ, ಹಿಜಾಬ್ ಧರಿಸಿ ಮುಸ್ಲಿಂ ಹುಡುಗಿಯರು ಕಾಲೇಜುಗಳಿಗೆ ಪ್ರವೇಶಿಸುವದನ್ನು ನಿಷೇಧಿಸುವ ಸರ್ಕಾರದ ಆದೇಶದ ಕುರಿತು ಕರ್ನಾಟಕವು ಉದ್ವಿಗ್ನತೆಯಿಂದ ನಲುಗಿದೆ. ನ್ಯಾಯಾಲಯವು ಆದೇಶವನ್ನು ಎತ್ತಿಹಿಡಿದಿದೆ. ಆದರೆ  ಪ್ರತಿಭಟನೆಯಲ್ಲಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗಳು ಮತ್ತು ತರಗತಿಗಳನ್ನು ಬಿಟ್ಟುಬಿಟ್ಟಿದ್ದಾರೆ.

 

ಕಳೆದ ವರ್ಷ, ಸುಮಾರು 13% ಜನರು ಮುಸ್ಲಿಮರಿರುವ ರಾಜ್ಯದಲ್ಲಿ ಗೋವುಗಳ ವ್ಯಾಪಾರ ಮತ್ತು ಹತ್ಯೆಯನ್ನು ಸರ್ಕಾರ ನಿಷೇಧಿಸಿತು. ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಯೋಚಿಸಲಾಗಿದೆ ಮತ್ತು 18 ನೇ ಶತಮಾನದ ಮೈಸೂರಿನ ಮುಸ್ಲಿಂ ದೊರೆ ಟಿಪ್ಪು ಸುಲ್ತಾನ್ ಅವರನ್ನು ‘ವೈಭವೀಕರಿಸುವ’  ಅಧ್ಯಾಯವನ್ನು ತೆಗೆದುಹಾಕುವ ಪ್ರಸ್ತಾಪವಿದೆ.

 

 

A restaurant cook prepares a dish named kheema roti at a restaurant for the Muslim devotees prior to the breaking of their fast on the first day of the holy fasting month of Ramadan, in Bangalore on April 3, 2022

ಚಿತ್ರ ಮೂಲ,

AFP

ಚಿತ್ರ ಶೀರ್ಷಿಕೆ,

ಗುಂಪುಗಳು ಮುಸ್ಲಿಂ ಕಟುಕರು ಮಾರುವ ಮಾಂಸವನ್ನು ಖರೀದಿಸದಂತೆ ಹಿಂದೂಗಳನ್ನು ಒತ್ತಾಯಿಸುತ್ತಿವೆ

 

ಈ ಅನೇಕ ನಡೆಗಳು ಅಭಿಪ್ರಾಯವನ್ನು ಧ್ರುವೀಕರಿಸಿವೆ. ವಿಮರ್ಶಕರು ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯವಾದಿ ಸರ್ಕಾರದಿಂದ ಮುಸ್ಲಿಮರನ್ನು ಅಂಚಿನಲ್ಲಿಡುವ ಪ್ರಯತ್ನಗಳನ್ನು ಕಾಣುತ್ತಾರೆ.

 

ಆದರೆ ಈ ಬೆಳವಣಿಗೆಗಳು , ಭಾರತದ ತುಲನಾತ್ಮಕವಾಗಿ ಸಮೃದ್ಧ ರಾಜ್ಯವೊ೦ದರ  ಚಿತ್ರವನ್ನು  ಕೊನೆಗೆ ಕೊಳೆಗೊಳಿಸಬಹುದು ಎಂದು ಹಲವರು ಭಯಪಡುತ್ತಾರೆ.

 

ಶ್ರೀಮತಿ ಶಾ ಅವರು ತಮ್ಮ ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಉದ್ದೇಶಿಸಿ ಬರೆದಿದ್ದಾರೆ.  ಕರ್ನಾಟಕವು ಯಾವಾಗಲೂ ವ್ಯಾಪಕವಾಗಿ ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ಆಚರಿಸಿದೆ ಎಂದು ಹೇಳಿದರು. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ನಗರ "ಕೋಮುವಾದಿ" ಆಗಿಬಿಟ್ಟರೆ, ಅದು "ಅದರ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ" ಎಂದು ಅವರು ಹೇಳಿದರು.

 

ಅವಳ ಕಾಳಜಿ ಅರ್ಥವಾಗುವಂತಹದ್ದಾಗಿದೆ. ಕರ್ನಾಟಕದ ಆರ್ಥಿಕ ಯಶಸ್ಸು ಬೆಂಗಳೂರಿನಿಂದ ಹರಿಯುತ್ತದೆ. ಸುಮಾರು 1 ಕೋಟಿ   ಜನರಿರುವ ಈ ಉತ್ಸಾಹಭರಿತ ಮತ್ತು ಅಸ್ತವ್ಯಸ್ತವಾಗಿರುವ ನಗರದಿಂದ ರಾಜ್ಯದ ಆದಾಯದ 60% ಕ್ಕಿಂತ ಹೆಚ್ಚು ಉತ್ಪತ್ತಿಯಾಗುತ್ತದೆ. 

 

ಇದು 13,000 ಕ್ಕೂ ಹೆಚ್ಚು ತಂತ್ರಜ್ಞಾನ ಹೊಸ (ಸ್ಟಾರ್ಟ್-ಅಪ್‌) ಉದ್ಯಮಗಳಿಗೆ ನೆಲೆಯಾಗಿದೆ. ಭಾರತದ 100-ರಷ್ಟು  ‘ಯುನಿಕಾರ್ನ್‌’ ( ಒ೦ದು ಬಿಲ್ಲಿಯನ್ $ ಡಾಲರಿಗಿ೦ತ  ಹೆಚ್ಚಿನ ಮೌಲ್ಯವನ್ನು ಹೊಂದಿರುವ ಷೇರು ಮಾರುಕಟ್ಟೆಲ್ಲಿ ಪಟ್ಟಿಮಾಡದ ಕಂಪನಿಗಳು)  ಗಳಲ್ಲಿ ಸುಮಾರು 40%  ಇಲ್ಲಿ ನೆಲೆಗೊಂಡಿವೆ. ಬೆಂಗಳೂರಿನ ಸಾಧನೆಯಿ೦ದಾಗಿ  ರಾಜ್ಯವು ಭಾರತದ ಮಾಹಿತಿ ತಂತ್ರಜ್ಞಾನ ರಫ್ತಿನ 41% ರಷ್ಟನ್ನು ಉತ್ಪಾದಿಸುತ್ತದೆ.

 

ಆದರೂ ಬೆಂಗಳೂರು - ಮತ್ತು ಕರ್ನಾಟಕ - ವಿಭಜಿತ ಸ್ಥಳವಾಗಿದೆ ಮತ್ತು ಈ ಮೊದಲು  ಧಾರ್ಮಿಕ ಹಿಂಸಾಚಾರವನ್ನು ಅನುಭವಿಸಿದೆ. ಮಾಹಿತಿ ತಂತ್ರಜ್ಞಾನ ಉದ್ಯಮವು ಬೆಂಗಳೂರಿನ "ಆಂತರಿಕ ಸಂಘರ್ಷಗಳನ್ನು" ದೂರವಿಟ್ಟು ಹೊರವಲಯದಲ್ಲಿ ನೆಲೆಸಿದೆ, ತನ್ನದೇ ಆದ ಮೂಲಸೌಕರ್ಯವನ್ನು ಸೃಷ್ಟಿಸುತ್ತದೆ,  ಮತ್ತು ನಗರದ ಉತ್ತಮ ಚಿತ್ರಣವನ್ನು ನಿಯಂತ್ರಿಸುತ್ತದೆ ಎಂದು ನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್‌ನ ಅರ್ಥಶಾಸ್ತ್ರದ ಪ್ರಾಧ್ಯಾಪಕ ನರೇಂದ್ರ ಪಾಣಿ ಹೇಳಿದರು.

 

ದಕ್ಷಿಣ ಭಾರತದಲ್ಲಿ ಬಿಜೆಪಿಯ ಇನ್ನೂ ಹೊಸ ಹೆಜ್ಜೆಗುರುತನ್ನು ವಿಸ್ತರಿಸಲು ಶ್ರೀ ಮೋದಿಯವರ ಚಲನೆಗೆ ಕರ್ನಾಟಕ ಕೇಂದ್ರವಾಗಿದೆ. ಐದು ದಕ್ಷಿಣದ ರಾಜ್ಯಗಳಲ್ಲಿ ಕರ್ನಾಟಕವು  ಪಕ್ಷವು ಅಧಿಕಾರವನ್ನು ಪಡೆದುಕೊ೦ಡ ಒ೦ದೇ ಒಂದಾಗಿದೆ. ಜಾತಿಗಳು, ಭಾಷಿಕ ಗುಂಪುಗಳು ಮತ್ತು ಧರ್ಮಗಳ ಮಿಶ್ರಣವನ್ನು ಹೊಂದಿರುವ ರಾಜ್ಯದಲ್ಲಿ, ಬಿಜೆಪಿ ಸತತ ನಾಲ್ಕು ಸಾರ್ವತ್ರಿಕ ಚುನಾವಣೆಗಳಲ್ಲಿ ಬಹುಪಾಲು ಸಂಸದೀಯ ಸ್ಥಾನಗಳನ್ನು ಗೆದ್ದಿದೆ.

Residential area and offices in Whitefield, a neighbourhood of Bengaluru, India. Bangalore is known as the "Silicon Valley of India" because of its role as the nation's leading information technology

ಇಮೇಜ್ ಸೋರ್ಸ್,

ಗೆಟ್ಟಿ ಇಮೇಜಸ್

ಚಿತ್ರ ಶೀರ್ಷಿಕೆ,

ಬೆಂಗಳೂರು ಭಾರತದ ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿದೆ

 

 

ಗಣನೀಯ ಸಂಖ್ಯೆಯ ಮುಸ್ಲಿಮರು ವಾಸಿಸುತ್ತಿರುವ ರಾಜ್ಯದ ಕರಾವಳಿ ಪ್ರದೇಶಗಳು ಮತ್ತು ಹಳ್ಳಿಗಳಲ್ಲಿ   ಬಿಜೆಪಿಯು ಕಟುವಾದ ಹಿಂದೂ ರಾಷ್ಟ್ರೀಯತೆಯ ರಾಜಕೀಯವನ್ನು ಅನುಸರಿಸುತ್ತಿದೆ. ಬಿಜೆಪಿಯ ಸೈದ್ಧಾಂತಿಕ ಚಿಲುಮೆಯಾದ ಆರ್‌ಎಸ್‌ಎಸ್ ಇಲ್ಲಿ ಆಳವಾದ ಬೇರುಗಳನ್ನು ಬಿಟ್ಟಿದೆ. ಹಿಂದೆ, ಹಿಂದೂ ಗುಂಪುಗಳು ‘ಪಬ್‌’ಗಳಲ್ಲಿ ಯುವಕರು ಮತ್ತು ಯುವತಿಯರ ಮೇಲೆ ದಾಳಿ ಮಾಡುವ ಮೂಲಕ ನೈತಿಕ ಪೊಲೀಸ್‌ಗಿರಿಯನ್ನು ಹೇರಲು ಪ್ರಯತ್ನಿಸಿದವು ಮತ್ತು "ಲವ್ ಜಿಹಾದ್" - ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಮದುವೆಯ ಮೂಲಕ ಮತಾಂತರಿಸುತ್ತಿದ್ದಾರೆ ಎಂದು ಆರೋಪಿಸಲು ಮೂಲಭೂತ ಹಿಂದೂ ಗುಂಪುಗಳು ಬಳಸುವ ಪದ - ವಿರುದ್ಧ ಅಭಿಯಾನಗಳನ್ನು ನಡೆಸಿದವು. 

 

 

ದೀರ್ಘಕಾಲದವರೆಗೆ, ಕರ್ನಾಟಕದ ಚುನಾವಣಾ ರಾಜಕೀಯವು ಮುಖ್ಯವಾಗಿ ಜಾತಿ ನಿಷ್ಠೆಯಿಂದ ನಿರ್ಧರಿಸಲ್ಪಟ್ಟಿತು. 2008 ರಲ್ಲಿ ಬಿಜೆಪಿಯ ಮೊದಲ ಗೆಲುವಿಗೆ ಕಾರಣವಾದ ಬಿಎಸ್ ಯಡಿಯೂರಪ್ಪ ಅವರು ರಾಜ್ಯದ ಮತದಾರರಲ್ಲಿ ಆರನೇ ಒಂದು ಭಾಗದಷ್ಟು ಲಿಂಗಾಯತರು ಮತ್ತು ಇತರ ಹಿಂದುಳಿದ ಜಾತಿಗಳ ಯಶಸ್ವಿ ಒಕ್ಕೂಟವನ್ನು ರೂಪಿಸಿದರು. ಆದರೆ ಲಿಂಗಾಯತರ ಒಂದು ಬಣವು ತಮ್ಮನ್ನು ಹಿಂದೂ ಧರ್ಮದಿಂದ ಪ್ರತ್ಯೇಕ ನಂಬಿಕೆಯಾಗಿ ಪರಿಗಣಿಸಬೇಕೆಂದು ಬಯಸುತ್ತದೆ.  ಮತ್ತು ಹೆಚ್ಚಿನ  ನಿಶ್ಚಯಾರ್ಥಕ  ಕ್ರಮ (ಮೀಸಲಾತಿ, ಆರ್ಥಿಕ ಸಹಾಯ, ಶಿಕ್ಷಣ ,  ಮು೦ತಾದವು) ಕ್ಕಾಗಿ ಹಿಂದುಳಿದ ಜಾತಿಗಳ ಹೆಚ್ಚು ಹೆಚ್ಚಾದ  ಬೇಡಿಕೆಗಳಿವೆ.

 

 "ಒತ್ತಡದ ಪರಿಸ್ಥಿತಿಯಲ್ಲಿ  ಬಿಜೆಪಿ ಈಗ ವಿಭಿನ್ನ ರಾಜಕೀಯವನ್ನು ರೂಪಿಸಲು ಪ್ರಯತ್ನಿಸುತ್ತಿದೆ. ಅದು ಹಿಂದೂ ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ತಮ್ಮನ್ನು ಬೆ೦ಬಲಿಸುವ ಮತದಾರ ಸ೦ಘಟನೆಯನ್ನು ರಚಿಸಲು ಪ್ರಯತ್ನಿಸುತ್ತಿದೆ" ಎಂದು (ಕರ್ನಾಟಕದಿಂದ ಬಂದಿರುವ ಏಕೈಕ ಭಾರತದ ಪ್ರಧಾನಿ ಎಚ್‌ಡಿ ದೇವೇಗೌಡರ ಜೀವನಚರಿತ್ರೆಯ ಲೇಖಕ)  ಸುಗತ ಶ್ರೀನಿವಾಸರಾಜು ಹೇಳಿದರು.

 

61 ವರ್ಷ ವಯಸ್ಸಿನ ರಾಜಕಾರಣಿ ಬೊಮ್ಮಾಯಿ ಕಳೆದ ವರ್ಷ ಯಡಿಯೂರಪ್ಪ ಅವರಿಂದ ಅಧಿಕಾರ ತೆಗೆದುಕೊ೦ಡರು. ಟೀಕಾಕಾರರು ಅವರ ಸರ್ಕಾರದ ಸಾಧನೆ ಕೆಳಮಟ್ಟದ್ದಾಗಿದೆ ಎಂದು ಹೇಳುತ್ತಾರೆ. ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸದ ಆರೋಪಗಳಿವೆ. ಗೌರವಾನ್ವಿತ ಸ್ಥಳೀಯ ಸುದ್ದಿ ಮತ್ತು ತನಿಖಾ ವೆಬ್‌ಸೈಟ್ ‘ದಿ ಫೈಲ್‌’ನಲ್ಲಿನ ವರದಿಯ ಪ್ರಕಾರ, ಸರ್ಕಾರದ ಅರ್ಧದಷ್ಟು ಇಲಾಖೆಗಳು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಆಂತರಿಕ ಪರಿಶೀಲನೆಯು ಕಂಡುಹಿಡಿದಿದೆ.

 

ಭ್ರಷ್ಟಾಚಾರವೂ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕಳೆದ ನವೆಂಬರ್‌ನಲ್ಲಿ ಸರಿಸಾಟಿಯಿಲ್ಲದ ಒಂದು  ಕ್ರಮದಲ್ಲಿ, ರಾಜ್ಯದ ಖಾಸಗಿ ಗುತ್ತಿಗೆದಾರರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಒ೦ದು ಯೋಜನೆಯ ವೆಚ್ಚದ ೪೦% ರಷ್ಟನ್ನು ಸಚಿವರು ಮತ್ತು ಅಧಿಕಾರಿಗಳಿಗೆ ಲಂಚವಾಗಿ ಪಾವತಿಸಬೇಕೆಂದು ಆರೋಪಿಸಿದರು. ಖರ್ಚು ಮಾಡದ  ಅಭಿವೃದ್ಧಿ ಹಣ, ಸಾರಿಗೆ ನೌಕರರಿಗೆ ವೇತನ ನೀಡದಿರುವುದು ಹಾಗೂ ಹಿಂದುಳಿದವರಿಗೆ ವಿದ್ಯಾರ್ಥಿ ವೇತನ ವಿಳಂಬವಾಗುತ್ತಿರುವ ಬಗ್ಗೆ ವರದಿಯಾಗಿದೆ. ಮುಂದಿನ ವರ್ಷ ರಾಜ್ಯ ಚುನಾವಣೆ ನಡೆಯಲಿದೆ. "ಸರ್ಕಾರವು ಆಡಬಹುದಾದ ಏಕೈಕ ಇಸ್ಪೀಟೆಲೆ  ಹಿಂದೂ ರಾಷ್ಟ್ರೀಯತೆಯಾಗಿದೆ. ಅವರು ಪ್ರಮುಖ ಸಾಧನೆಗಳ ಮೂಲಕ ತೋರಿಸಲು ಏನೂ ಇಲ್ಲ" ಎಂದು ಬೆಂಗಳೂರಿನಲ್ಲಿರುವ  ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ(Institute for Social and Economic Change)ಯ  ಸಮಾಜಶಾಸ್ತ್ರದ ಪ್ರಾಧ್ಯಾಪಕ ಚಂದನ್ ಗೌಡ ಹೇಳಿದರು.

 

ಶ್ರೀಮತಿ ಶಾ ಅವರ ಹೇಳಿಕೆಯ ಒಂದು ದಿನದ ನಂತರ, ಶ್ರೀ ಬೊಮ್ಮಾಯಿ ಜನರು "ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಕರಿಸುವಂತೆ" ಮನವಿ ಮಾಡಿದರು. ಕರ್ನಾಟಕ ಶಾಂತಿ ಮತ್ತು ಪ್ರಗತಿಗೆ ಹೆಸರಾಗಿದ್ದು, ಎಲ್ಲರೂ ಸಂಯಮ ಪಾಲಿಸಬೇಕು ಎಂದರು.

ಬೊಮ್ಮಾಯಿ ಅವರ ಪಕ್ಷದೊಳಗಿಂದ ಸ್ವಲ್ಪ ಹಿನ್ನಡೆಯಾಗಿದೆ. ಕನಿಷ್ಠ ಇಬ್ಬರು ಬಿಜೆಪಿ ಶಾಸಕರು ಸ್ಪಷ್ಟವಾದ ಮಾತುಗಳನ್ನು ಆಡಿದರು. ಹಿಂದೂ ದೇವಾಲಯದ ಉತ್ಸವಗಳಿಂದ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವುದು "ಅಸ್ಪೃಶ್ಯತೆಯ ಹೊರತಾಗಿ ಬೇರೇನೂ ಅಲ್ಲ... ಇದು ಅಮಾನವೀಯ ಆಚರಣೆಯಾಗಿದೆ" ಎಂದು ಎಎಚ್ ವಿಶ್ವನಾಥ್ ಬಿಬಿಸಿ ಹಿಂದಿಗೆ ತಿಳಿಸಿದರು. ದೇವಸ್ಥಾನದ ಉತ್ಸವಗಳಲ್ಲಿ ಮುಸ್ಲಿಮರು ವ್ಯಾಪಾರ ಮಾಡುವುದನ್ನು ನಾವು ತಡೆಯುವುದಿಲ್ಲ ಎಂದು ಅನಿಲ್ ಬೆನಕೆ ಹೇಳಿದರು. ಒಗ್ಗಟ್ಟಿನ ಪ್ರದರ್ಶನದಲ್ಲಿ, ಹಿಂದೂಗಳು ಮಾಂಸವನ್ನು ಖರೀದಿಸಲು ಮುಸ್ಲಿಂ ಮಾಂಸದ ಅಂಗಡಿಗಳ ಹೊರಗೆ ಸಾಲುಗಟ್ಟಿ ನಿಂತರು.

 

ಇದೆಲ್ಲವೂ ಭರವಸೆಯನ್ನು ನೀಡುತ್ತದೆ, ಆದರೆ ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. “ಕರ್ನಾಟಕದ ರಾಜಕೀಯಕ್ಕೆ ಧಾರ್ಮಿಕ ತಿರುವು ನೀಡುವುದು ಎರಡು ದಶಕಗಳ ನಿರಂತರ ಪ್ರಯತ್ನವಾಗಿದೆ. ಅನೇಕ ವರ್ಷಗಳಲ್ಲಿ, ವಿರೋಧ ಪಕ್ಷಗಳು, ಹೆಚ್ಚಿನ ಬುದ್ಧಿಜೀವಿಗಳು ಮತ್ತು ಉದ್ಯಮಿಗಳು ತಮ್ಮ ಪ್ರತಿಕ್ರಿಯೆಯಲ್ಲಿ ಮೌನವಾಗಿದ್ದಾರೆ ಅಥವಾ ಲೆಕ್ಕಾಚಾರ ಮಾಡುತ್ತಿದ್ದಾರೆ. ಅವರು ತಪ್ಪಾಗಿ ಸಮತೋಲನ ಮಾಡಲು ಪ್ರಯತ್ನಿಸದೆ ಧೈರ್ಯದಿಂದ ಅವರ ಅಭಿಪ್ರಾಯ ಮಾತನಾಡಬೇಕು,’’ ಎನ್ನುತ್ತಾರೆ ಶ್ರೀ ಶ್ರೀನಿವಾಸರಾಜು.

 

 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು