ಅರುಂಧತಿ ರಾಯ್  : ಹಾಡೇಹಗಲು ಮುಸ್ಲಿಮರ ಸಾಮೂಹಿಕ ಹತ್ಯೆಯಿ೦ದ ಅಧಿಕಾರಕ್ಕೆ ಬಂದ ಪುರುಷರಿಂದ ಭಾರತ ಆಳಲಾಗುತ್ತಿದೆ

ಈ ಯುದ್ಧದಲ್ಲಿ ಆರ್‌ಎಸ್‌ಎಸ್ ಗೆದ್ದರೆ, ಅದರ ಗೆಲುವು ಅರ್ಥಹೀನ ಆಗಿರುತ್ತದೆ. ಏಕೆಂದರೆ ಭಾರತ ತನ್ನ ಅಸ್ತಿತ್ವವನ್ನೇ  ಕಳೆದುಕೊಳ್ಳುತ್ತದೆ.

India Is Ruled by Men Who Have Ridden to Power on Daylight Mass Murder of Muslims

ಹಿಂದುತ್ವ ಗುಂಪುಗಳ ಪ್ರಾತಿನಿಧ್ಯ ಚಿತ್ರ. ಫೋಟೋ: ರಾಯಿಟರ್ಸ್.

Arundhati Roy

ಅರುಂಧತಿ ರಾಯ್

 

ಲೇಖಕಿ-ಕಾರ್ಯಕರ್ತ ಅರುಂಧತಿ ರಾಯ್ ಅವರು ಅಮೆರಿಕದಲ್ಲಿನೀಡಿದ  ಫಾರೆಂಟ್‌ಹೋಲ್ಡ್ ಉಪನ್ಯಾಸದ ಪಠ್ಯ. ‘ಮಾನವ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ರಾಪೋಪೋರ್ಟ್ ಸೆಂಟರ್’ (‘Rapoport Centre for Human Rights and Justice’) ಈ ಕಾರ್ಯಕ್ರಮವನ್ನು ಆಯೋಜಿಸಿತು. .

ಉಪನ್ಯಾಸವನ್ನು ನೀಡಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಪ್ರಾರಂಭಿಸುವ ಮೊದಲು, ಉಕ್ರೇನ್‌ನಲ್ಲಿನ ಯುದ್ಧದ ಬಗ್ಗೆ ನಾನು ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ನಾನು ರಷ್ಯಾದ ಉಕ್ರೇನ್ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ ಮತ್ತು ಉಕ್ರೇನಿಯನ್ ಜನರ ಧೈರ್ಯಶಾಲಿ ಪ್ರತಿರೋಧವನ್ನು ಶ್ಲಾಘಿಸುತ್ತೇನೆ. ರಷ್ಯಾದ ಭಿನ್ನಮತೀಯರು ಅಗಾಧವಾದ ನಷ್ಟದಲ್ಲಿ ತೋರಿಸಿದ ಧೈರ್ಯವನ್ನು ನಾನು ಶ್ಲಾಘಿಸುತ್ತೇನೆ. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಒಟ್ಟಾಗಿ ವಿಶ್ವದ ಇತರ ದೇಶಗಳ ಮೇಲೆ ಇದೇ ರೀತಿಯ ಯುದ್ಧಗಳನ್ನು ಮಾಡಿದ ಬೂಟಾಟಿಕೆಗಳ ಬಗ್ಗೆ ತೀವ್ರವಾಗಿ ಮತ್ತು ನೋವಿನಿಂದ ನಾನು ಇದನ್ನು ಹೇಳುತ್ತೇನೆ. ಅವರು ಒಟ್ಟಿಗೆ ಪರಮಾಣು ಓಟವನ್ನು ಮುನ್ನಡೆಸಿದ್ದಾರೆ ಮತ್ತು ನಮ್ಮ ಗ್ರಹವನ್ನು ಹಲವು ಬಾರಿ ನಾಶಮಾಡಲು ಸಾಕಷ್ಟು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಾರೆ.  ವಿಪರ್ಯಾಸವೆಂದರೆ ಅವರು ಈ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂಬ ಅಂಶವು, ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಯುದ್ಧದ ಆಟಗಳು ಮತ್ತು ಪ್ರಾಬಲ್ಯಕ್ಕಾಗಿ ಮಾಡುವ ನಿರಂತರ ಅನ್ವೇಷಣೆಯು,  ಮಿತ್ರರಾಷ್ಟ್ರವೆಂದು ಪರಿಗಣಿಸುವ ದೇಶದ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡಿ  ಅಸಹಾಯಕವಾಗಿ ನೋಡುವದಲ್ಲದೆ ಗತಿಯಿಲ್ಲದ ಪರಿಸ್ಥಿತಿಗೆ ತ೦ದಿದೆ..

ಮತ್ತು ಈಗ ನಾನು ಭಾರತಕ್ಕೆ ತಿರುಗುತ್ತೇನೆ. ಭಾರತದಲ್ಲಿ ಹೆಚ್ಚುತ್ತಿರುವ ಆತ್ಮಸಾಕ್ಷಿಯ ಕೈದಿಗಳಿಗೆ ನಾನು ಈ ಭಾಷಣವನ್ನು ಅರ್ಪಿಸುತ್ತೇನೆ. ಪ್ರೊಫೆಸರ್ ಜಿಎನ್ ಸಾಯಿಬಾಬಾ, ಭೀಮಾ ಕೋರೆಗಾಂವ್ 16 ಎಂದು ಕರೆಯಲ್ಪಡುವ ವಿದ್ವಾಂಸರು, ಹೋರಾಟಗಾರರು, ಗಾಯಕರು ಮತ್ತು ವಕೀಲರು, ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರುದ್ಧ ಪ್ರತಿಭಟಿಸಿ ಜೈಲು ಪಾಲಾದ ಕಾರ್ಯಕರ್ತರು ಮತ್ತು ಐದು ತಿಂಗಳು ಬಂಧನಕ್ಕೊಳಗಾದ ಖುರ್ರಂ ಪರ್ವೇಜ್ ಅವರನ್ನು ಸ್ಮರಿಸಬೇಕೆಂದು ನಾನು ಕೇಳುತ್ತೇನೆ. ಹಿಂದೆ ಕಾಶ್ಮೀರದಲ್ಲಿ ಖುರ್ರಾಮ್ ನನಗೆ ತಿಳಿದಿರುವ ಅತ್ಯಂತ ಗಮನಾರ್ಹ ವ್ಯಕ್ತಿಗಳಲ್ಲಿ ಒಬ್ಬರು. ಅವರು ಮತ್ತು ಅವರು ಕೆಲಸ ಮಾಡುವ ಸಂಸ್ಥೆ, ಜಮ್ಮು ಕಾಶ್ಮೀರ ಒಕ್ಕೂಟದ ನಾಗರಿಕ ಸಮಾಜದ (JKCCS), ಕಾಶ್ಮೀರದ ಜನರಿಗೆ ಭೇಟಿ ನೀಡಿದ ಚಿತ್ರಹಿಂಸೆ, ಬಲವಂತದ ನಾಪತ್ತೆಗಳು ಮತ್ತು ಸಾವಿನ ಕಥೆಯನ್ನು ಅನೇಕ ವರ್ಷಗಳವರೆಗೆ ಸೂಕ್ಷ್ಮವಾಗಿ ದಾಖಲಿಸಿದ್ದಾರೆ. ಹಾಗಾಗಿ ಇಂದು ನಾನು ಹೇಳುತ್ತಿರುವುದು ಅವರೆಲ್ಲರಿಗೂ ಸಮರ್ಪಿತವಾಗಿದೆ.

ಭಾರತದಲ್ಲಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಅಪರಾಧೀಕರಿಸಲಾಗಿದೆ. ಇತ್ತೀಚಿನವರೆಗೂ ಭಿನ್ನಮತೀಯರನ್ನು ದೇಶವಿರೋಧಿಗಳೆಂದು ಕರೆಯಲಾಗುತ್ತಿತ್ತು. ಈಗ ನಾವು ಬಹಿರಂಗವಾಗಿ ಬೌದ್ಧಿಕ ಭಯೋತ್ಪಾದಕರ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ಭೀಕರ ಆಕಾರದ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ಯ(Unlawful Activities Prevention Act - UAPA) ಅಡಿಯಲ್ಲಿ ಜನರನ್ನು ವಿಚಾರಣೆಯಿಲ್ಲದೆ ವರ್ಷಗಳವರೆಗೆ ಬಂಧಿಸಲಾಗುತ್ತಿದೆ. ಈ ಕಾನೂನನ್ನು  ಬೌದ್ಧಿಕ ಭಯೋತ್ಪಾದನೆಯೊಂದಿಗಿನ ಪ್ರಸ್ತುತ ಆಡಳಿತದ ಗೀಳಿಗೆ ಸರಿಹೊಂದಿಸಲು ತಿದ್ದುಪಡಿ ಮಾಡಲಾಗಿದೆ. ನಾವೆಲ್ಲರೂ ಮಾವೋವಾದಿಗಳು ಎಂದು ಗುರುತು ಪಟ್ಟಿ ಅ೦ಟಿಸಲಾಗಿದೆ.  ಆಡುಮಾತಿನ ಪದವೆಂದರೆ ನಾವೆಲ್ಲ ಅರ್ಬನ್-ನಕ್ಸಲರು ಅಥವಾ ಜೆಹಾದಿಗಳು.   ನಮ್ಮ ಬೆನ್ನಿನ ಮೇಲೆ ಗುರಿಗಳನ್ನು ಹೊಂದಿದ್ದೇವೆ, ಪು೦ಡಟೋಳಿಗಳದಾಗಲಿ  ಅಥವಾ ಕಾನೂನಿನ ಕಿರುಕುಳಕ್ಕಾಗಲಿ ನಾವು ನ್ಯಾಯಯುತ ಗುರಿಗಳು. 

ನಾನು ನವದೆಹಲಿಯನ್ನು ಬಿಟ್ಟು ಕೆಲವೇ ದಿನಗಳಾಗಿವೆ. ಈ ಕೆಲವೇ ದಿನಗಳಲ್ಲಿ, ಅಲ್ಲಿ ತೆರೆದುಕೊಳ್ಳುವ ಘಟನೆಗಳ ಆವೇಗವು ನಾವು ಒಂದು ರೀತಿಯ ಮಿತಿಯನ್ನು ದಾಟಿದ್ದೇವೆ ಎಂದು ಸ್ಪಷ್ಟಪಡಿಸುತ್ತದೆ. ನಾವು ಒಮ್ಮೆ ನಮ್ಮದು ಎಂದು ಗುರುತಿಸಿದ ತೀರಕ್ಕೆ ಹಿಂತಿರುಗಲು ಸಾಧ್ಯವಿಲ್ಲ.

ಮಾರ್ಚ್ 2022 ರಲ್ಲಿ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಭಾರತದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶವನ್ನು ಆಳಲು ಅಭೂತಪೂರ್ವ ಎರಡನೇ ಅವಧಿಯನ್ನು ಗೆದ್ದಿದೆ. ಯುಪಿ ಚುನಾವಣೆಗಳನ್ನು ಸಾಮಾನ್ಯವಾಗಿ ಮೇ 2024 ರಲ್ಲಿ ನಿರೀಕ್ಷಿತ ಸಾರ್ವತ್ರಿಕ ಚುನಾವಣೆಗೆ "ಸೆಮಿ-ಫೈನಲ್" ಎಂದು ಓದಲಾಗುತ್ತದೆ. ಚುನಾವಣಾ ಪ್ರಚಾರವು ಕೇಸರಿ-ವಸ್ತ್ರಧಾರಿ ‘ದೇವಮಾನವ’ರಿಂದ ಮುಸ್ಲಿಂ ಸಮುದಾಯದ ಸಾಮೂಹಿಕ ಹತ್ಯೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕಾಗಿ ಬಹಿರಂಗ ಕರೆಗಳಿ೦ದ ಗುರುತಿಸಲ್ಪಟ್ಟಿತ್ತು. 

ಚುನಾವಣೆಯಲ್ಲಿ ಬಿಜೆಪಿಯ ಗೆಲುವು ದೃಢವಾದಂತೆ ಕಂಡುಬಂದರೂ, ಸ್ಪರ್ಧೆಯು ಮೈದಾನದಲ್ಲಿ ಅವರು ಗೆದ್ದಿರುವ ಸ್ಥಾನಗಳು ಸೂಚಿಸುವುದಕ್ಕಿ೦ತ ಕಿರಿದಾದ ಗೆಲುವಿನ ಅಂಚಿನದಾಗಿತ್ತು.  ಫಲಿತಾಂಶವು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರಲ್ಲಿ ವಿಚಿತ್ರವಾದ, ಅನಾವಶ್ಯಕ  ಆತಂಕ ಮತ್ತು ಅತಿಯಾದ ಆತ್ಮವಿಶ್ವಾಸದ ಮಿಶ್ರಣವನ್ನು ಉಂಟುಮಾಡಿದೆ. ಚುನಾವಣಾ ಫಲಿತಾಂಶಗಳು ಪ್ರಕಟವಾದ ಕೆಲವೇ ದಿನಗಳಲ್ಲಿ, ಹಿಂದೂಗಳು ರಾಮನವಮಿ ಹಬ್ಬವನ್ನು ಆಚರಿಸಿದರು. ಇದು ಈ ವರ್ಷ ರಂಜಾನ್‌ಗೆ ಹೊಂದಿಕೆಯಾಯಿತು. ರಾಮ ನವಮಿಯನ್ನು ಆಚರಿಸಲು ಕತ್ತಿಗಳು ಮತ್ತು ಕೋಲುಗಳಿಂದ ಶಸ್ತ್ರಸಜ್ಜಿತವಾದ ಹಿಂಸಾತ್ಮಕ ಹಿಂದೂ ಗುಂಪುಗಳು ಹನ್ನೊಂದು ನಗರಗಳ ಮೂಲಕ ಧಾವಿಸಿದರು. ಸ್ವಾಮಿಗಳು ಮತ್ತು ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ, ಅವರು ಮುಸ್ಲಿಂ ವಸಾಹತುಗಳನ್ನು ಪ್ರವೇಶಿಸಿದರು, ಮಸೀದಿಗಳ ಹೊರಗೆ ನಾಯಿ-ಶಿಳ್ಳೆ ಹೊಡೆದರು, ಅಶ್ಲೀಲ ಅವಮಾನಗಳನ್ನು ಪಠಿಸಿದರು, ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಗರ್ಭವತಿಮಾಡುವದಕ್ಕೆ ಮತ್ತು ಮುಸ್ಲಿಮ್ ಪುರುಷರ ನರಮೇಧಕ್ಕೆ ಬಹಿರಂಗವಾಗಿ ಕರೆ ನೀಡಿದರು .

ಮುಸ್ಲಿಮರ ಯಾವುದೇ ಪ್ರತಿಕ್ರಿಯೆಯು ಅವರ ಆಸ್ತಿಯನ್ನು ಸರ್ಕಾರದಿ೦ದ ಬುಲ್ಡೋಜರ್ ಉಪಯೋಗಿಸಿ ನೆಲಸಮ ಮಾಡುವದು ಅಥವಾ ಗುಂಪುಗಳಿಂದ ಬೆ೦ಕಿ ಹಚ್ಚಿ ಸುಡಲು ಕಾರಣವಾಗಿದೆ. ಬಂಧಿತರು, ಬಹುತೇಕ ಎಲ್ಲಾ ಮುಸ್ಲಿಮರು, ಪಿತೂರಿ ಮತ್ತು ಗಲಭೆಯ ಆರೋಪ ಹೊತ್ತಿದ್ದಾರೆ ಮತ್ತು ಅವರು ಜೈಲಿನಲ್ಲಿ ಅನೇಕ ವರ್ಷಗಳ ಕಾಲ ಕಳೆಯುವ ಸಾಧ್ಯತೆಯಿದೆ. ಆರೋಪಿಗಳಲ್ಲಿ ಒಬ್ಬರು ರಾಮನವಮಿಗೆ ಬಹಳ ಹಿಂದೆಯೇ ಬೇರೆ ಆರೋಪದ ಮೇಲೆ ಜೈಲಿನಲ್ಲಿದ್ದರು. ಮತ್ತೊಬ್ಬ, ಹಿಂದೂ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿ ವಾಸಿಂ ಶೇಖ್ ಎರಡು ಅಂಗವಿಕಲನಾಗಿದ್ದು, ಮುಂಗೈ ಇಲ್ಲ. ಅವರ ಮನೆಗಳು ಮತ್ತು ಅಂಗಡಿಗಳನ್ನು ಸರ್ಕಾರವು ಬುಲ್ಡೋಜರ್ ಮಾಡಿತು. ಕೆಲವು ನಗರಗಳಲ್ಲಿ ಹುಚ್ಚು ಹಿಡಿದ೦ತೆ ತೋರುವ ಟಿವಿ ಆ್ಯಂಕರ್‌ಗಳು ಬುಲ್ಡೋಜರ್‌ಗಳ ಒಳಗೆ ಸವಾರಿ ಮಾಡಿದರು.

ನವದೆಹಲಿ, ಏಪ್ರಿಲ್ 20, 2022, ಬುಧವಾರ, ಹಿಂಸಾಚಾರ-ಪೀಡಿತ ಜಹಾಂಗೀರ್‌ಪುರಿ ಪ್ರದೇಶದಲ್ಲಿ NDMC, PWD, ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸರು ಜಂಟಿ ಅತಿಕ್ರಮಣ ವಿರೋಧಿ ಅಭಿಯಾನದ ಸಂದರ್ಭದಲ್ಲಿ ಅಕ್ರಮ ಕಟ್ಟಡಗಳನ್ನು ಕೆಡವಲು ಬುಲ್ಡೋಜರ್ ಅನ್ನು ಬಳಸಲಾಗುತ್ತಿದೆ. ಫೋಟೋ: PTI

 

ಏತನ್ಮಧ್ಯೆ, 2020 ರ ದೆಹಲಿ ಹತ್ಯಾಕಾಂಡದ ಪೂರ್ವದಲ್ಲಿ ಹಿಂದೂ ಗಲಭೆಕೋರರನ್ನು ಬಹಿರಂಗವಾಗಿ ಪ್ರಚೋದಿಸಿದ ಬಿಜೆಪಿ ನಾಯಕರನ್ನು ಇತ್ತೀಚೆಗೆ ದೆಹಲಿ ಉಚ್ಚ ನ್ಯಾಯಾಲಯವು ಖುಲಾಸೆಗೊಳಿಸಿತು.  ‘ಪ್ರಚೋದನಕಾರಿ ವಿಷಯಗಳನ್ನು ನಗುವಿನೊಂದಿಗೆ ಹೇಳಿದಾಗ ಯಾವುದೇ ಅಪರಾಧವಿಲ್ಲ’ ಎಂದು ನ್ಯಾಯಾಲಯವು ಹೇಳಿದೆ. ಅವರಲ್ಲಿ ಕೆಲವರು ಇತರ ನಗರಗಳ ಬೀದಿಗಳಲ್ಲಿ ಮತ್ತೆ ಅದೇ ರೀತಿಯ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ. ಆದರೂ ಯುವ ಮುಸ್ಲಿಂ ವಿದ್ಯಾರ್ಥಿ  ಉಮರ್ ಖಾಲಿದ್ ಜೈಲಿನಲ್ಲಿದ್ದಾನೆ. ಭಾರತೀಯ ಸಂವಿಧಾನವನ್ನು ಎತ್ತಿಹಿಡಿಯುವ ಸಹೋದರತ್ವ, ಪ್ರೀತಿ ಮತ್ತು ಅಹಿಂಸೆಯ ಕುರಿತಾದ ಅವರ ಭಾಷಣ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಸಮಯದಲ್ಲಿ ಅವರು ಮಾಡಿದ ಭಾಷಣವು ಪೊಲೀಸ್ ಚಾರ್ಜ್ ಶೀಟ್ ಪ್ರಕಾರ, 2020 ರ ದೆಹಲಿ ಹತ್ಯಾಕಾಂಡಕ್ಕೆ ಕಾರಣವಾದ ಪಿತೂರಿಯ ಹೊಗೆ ಪರದೆಯಾಗಿದೆ. ಇದರ ಪ್ರಕಾರ,  ‘ಡೊನಾಲ್ಡ್ ಟ್ರಂಪ್ ಅವರ ರಾಜ್ಯ ಭೇಟಿಯ ಸಮಯದಲ್ಲಿ ಭಾರತದ ಒಳ್ಳೆಯ ಹೆಸರನ್ನು ಹಾಳುಮಾಡುವ ಸಲುವಾಗಿ ಮುಸ್ಲಿಮರು ಗಲಭೆ ಮತ್ತು ಆತ್ಮಹತ್ಯೆಗೆ ಸಂಚು ರೂಪಿಸಿದ್ದರು’ ಎನ್ನಲಾಗುತ್ತಿದೆ.

ಈ ಎಲ್ಲದರಲ್ಲಿಯೂ, 2002 ರಲ್ಲಿ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂ ವಿರೋಧಿ ಹತ್ಯಾಕಾಂಡದಿಂದ ತಮ್ಮದೇ ಆದ ರಾಜಕೀಯ ಜೀವನವನ್ನು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ  ಸ್ಫೂರ್ತಿದಾಯಕ ವ್ಯಕ್ತಿಯಾಗಿ ಉಳಿದಿದ್ದಾರೆ. ಆಗಾಗ್ಗೆ ಮೌನವಾಗಿರುತ್ತಾದರೂ   ಹೆಚ್ಚಾಗಿ ನಾಯಿ-ಶಿಳ್ಳೆ ಹೊಡೆಯುವುದರ ಮೂಲಕ  ಮುನ್ನಡೆಸುತ್ತಾರೆ.  ಈ ಗುಂಪುಗಳ ಮತ್ತು ಅವರ ಪವಿತ್ರ ಪುರುಷರ ಉದ್ಧಾರಕರಾಗಿದ್ದಾರೆ.  ಅವರಾದರೋ  ‘ವಾಟ್ಸಾಪ್’ ನೀಡುವ ನಕಲಿ ಇತಿಹಾಸದ ಸ್ಥಿರವಾದ ಹನಿಗಳನ್ನು ನು೦ಗುತ್ತಾ, ತಮ್ಮನ್ನು ತಾವು ಮುಸ್ಲಿಮರು ನಡೆಸಿದ ಐತಿಹಾಸಿಕ ದಬ್ಬಾಳಿಕೆ ಮತು ನರಮೇಧದ ಬಲಿಪಶುಗಳಾಗಿ ಕಾಣುತ್ತಾ ಈ ‘ಐತಿಹಾಸಿಕ ಅನ್ಯಾಯ’ಗಳಿಗೆ ಇದೇ ಇಲ್ಲಿ ಮತ್ತು ಇದೇ ಈಗ ಸೇಡು ತೀರಿಸಿಕೊಳ್ಳಬೇಕು ಎನ್ನುವವರಾಗುತ್ತಾರೆ. 

ನಾವು ಪ್ರಸ್ತುತ ಇರುವ  ಅಪಾಯಕಾರಿ ಸ್ಥಳದಲ್ಲಿ ನಾವು ಒಪ್ಪಿಕೊಳ್ಳಬಹುದಾದ ಅಥವಾ ವಾದಿಸಬಹುದಾದ ಯಾವುದೇ ಸತ್ಯಗಳು ಅಥವಾ ಇತಿಹಾಸಗಳಿಲ್ಲ. ನಿರೂಪಣೆಗಳು ಒಂದಕ್ಕೊಂದು ಅತಿಕ್ರಮಿಸುವುದಿಲ್ಲ ಅಥವಾ ಛೇದಿಸುವುದಿಲ್ಲ. ಇದು ಒ೦ದೆಡೆ ಕಟ್ಟುಕಥೆ , ಅದರೆದುರಿಗೆ  ಇತಿಹಾಸ. ಕಟ್ಟುಕಥೆಯು ರಾಜ್ಯ ಯಂತ್ರಗಳು, ಕಾರ್ಪೊರೇಟ್ ಹಣ ಮತ್ತು ಲೆಕ್ಕವಿಲ್ಲದಷ್ಟು 24 ಘ೦ಟೆ ದೂರದರ್ಶನ ಸುದ್ದಿ ವಾಹಿನಿಗಳಿಂದ ಬೆಂಬಲಿತವಾಗಿದೆ. ಅದರ ವ್ಯಾಪ್ತಿ ಮತ್ತು ಶಕ್ತಿಗಳಿಗೆ  ಸಾಟಿಯಿಲ್ಲ. ಜಗತ್ತು ಈ ಹಿಂದೆ ಇದನ್ನು ಕ೦ಡಿದೆ.  ಮತ್ತು ಚರ್ಚೆ ಮತ್ತು ವಾದಗಳು ಕೊನೆಗೊಂಡಾಗ, ಉಚ್ಚಾಟದ ಯುದ್ಧವು ಪ್ರಾರಂಭವಾಗುತ್ತದೆ ಎಂದು ನಮಗೆ ತಿಳಿದಿದೆ.

ಮರಣ ಅಥವಾ ಸೆರೆವಾಸಕ್ಕೆ ತೀರ್ಮಾನಿಸಲ್ಪಟ್ಟಿರುವುದು  ಎ೦ಥ ಮನೋಭಾವ  ಎಂದು ಊಹಿಸಿ. ಒಂದು ಸಮುದಾಯವಾಗಿ, ಮುಸ್ಲಿಮರನ್ನು ಈಗಾಗಲೇ ತಮ್ಮದೇ ಕೀಳು ಕೇರಿಗಳಿಗೆ ನಿರ್ಬ೦ಧಿಸಲಾಗಿದೆ, ದೇಶಭ್ರಷ್ಟರನ್ನಾಗಿಸಿದೆ,  ಮತ್ತು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಿಷ್ಕರಿಸಲಾಗುತ್ತಿದೆ. ಮುಸ್ಲಿಮರ ಮೇಲೆ ವಾಡಿಕೆಯಂತೆ 'ಲವ್ ಜಿಹಾದ್' (ಮುಸ್ಲಿಂ ಜನಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಹಿಂದೂ ಮಹಿಳೆಯರನ್ನು ಪ್ರೀತಿಸುವಂತೆ ಮಾಡಲು ಸಂಚು), 'ಕರೋನಾ ಜಿಹಾದ್' (ಕೋವಿಡ್ ಅನ್ನು ಉದ್ದೇಶಪೂರ್ವಕವಾಗಿ ಹರಡಲು ಸಂಚು, ನಾಝಿಗಳು ಯಹೂದಿಗಳನ್ನು  ಉದ್ದೇಶಪೂರ್ವಕವಾಗಿ ಟೈಫಸ್ ಹರಡುವುದಾಗಿ ಹೇಗೆ ಆರೋಪಿಸಿದರು ಎಂಬುದರ ಮರುಪ್ರದರ್ಶನ.), 'ಉದ್ಯೋಗ ಜಿಹಾದ್' (ಸರ್ಕಾರಿ ಸೇವೆಗಳಲ್ಲಿ ಉದ್ಯೋಗಪಡೆದು  ಹಿ೦ದೂ ಜನಸ೦ಖ್ಯೆಯ ಮೇಲೆ ಆಡಳಿತ  ಮಾಡುವ ಸ೦ಚು)  ; ಮತ್ತು  ಏನನ್ನೂ ಹೇಳಲು ಸಾಧ್ಯವಿಲ್ಲದ ಸ೦ಚುಗಳು :  'ಆಹಾರ ಜಿಹಾದ್''ಡ್ರೆಸ್ ಜಿಹಾದ್',  'ಚಿಂತನೆ ಜಿಹಾದ್', 'ನಗು ಜಿಹಾದ್’ (ಮುನಾವರ್ ಫರೂಕಿ, ಯುವ ಮುಸ್ಲಿಂ ಹಾಸ್ಯನಟ, ಅವರು ಎಂದಿಗೂ ಮಾಡದ  ಆದರೆ ಹೇಳಲು ಯೋಚಿಸಿದ್ದಾರೆಂಬ  ತಮಾಷೆಗಾಗಿ ತಿಂಗಳುಗಟ್ಟಲೆ ಜೈಲಿನಲ್ಲಿ ಕಳೆದರು .) ಯಾವುದೇ ವಾದ, ಯಾವುದೇ ಸಣ್ಣ ತಪ್ಪು ಹೆಜ್ಜೆಗೆ ಮುಸ್ಲಿಮರನ್ನು ಹತ್ಯೆ ಮಾಡಬಹುದು ಮತ್ತು ಕೊಲೆಗಾರರಿಗೆ  ಹಾರ ಹಾಕಿ, ಬಹುಮಾನ ನೀಡಲಾಗುವುದು ಮತ್ತು ಉಜ್ವಲ ರಾಜಕೀಯ ಭವಿಷ್ಯದ ಭರವಸೆ ನೀಡಲಾಗುವುದು. ನಮ್ಮಲ್ಲಿ ಅತ್ಯಂತ ಕಠಿಣವಾದ ಮತ್ತು ಸಿನಿಕತನದವರೂ ಸಹ ಒಬ್ಬರಿಗೊಬ್ಬರು ಪಿಸುಗುಟ್ಟುವುದನ್ನು ಕಂಡುಕೊಳ್ಳುತ್ತಾರೆ:  ‘ಅವರು ಇನ್ನೂ  ವೇಷಕಟ್ಟು ನಾಟಕ ಮಾಡುತ್ತಿದ್ದಾರೆಯೇ ಅಥವಾ ಇದು ನಿಜಕ್ಕೂ ಪ್ರಾರಂಭವಾಗಿದೆಯೇ?’ ‘ಇದು ಸಂಘಟಿತವಾಗಿದೆಯೇ ಅಥವಾ ಕೇವಲ ಅನಿಯಂತ್ರತವಾಗಿ ನಡೆಯುತ್ತಿದೆಯೇ ?’ ‘ಪೂರ್ಣ ಪ್ರಮಾಣದಲ್ಲಿ ಈಗಾಗಲೇ ಸುರುವಾಗಿದೆಯೇ ‘ ‘?

 

ಒಂದು ದೇಶವಾಗಿ, ಆಧುನಿಕ ರಾಷ್ಟ್ರ-ರಾಜ್ಯವಾಗಿ, ಸಂವಿಧಾನದಿಂದ ಕಾನೂನುಬದ್ಧವಾಗಿ,  ಬಹುಸಂಖ್ಯೆಯ ಧರ್ಮಗಳು, ಭಾಷೆಗಳು, ಜಾತಿಗಳು, ಜನಾಂಗಗಳು ಮತ್ತು ಉಪ-ರಾಷ್ಟ್ರಗಳ ನಡುವಿನ ಬದ್ಧವಾಗಿರುವ ಸಾಮಾಜಿಕ ಒಪ್ಪಂದವಾಗಿ ಮಾತ್ರ ಭಾರತವು ಅಸ್ತಿತ್ವದಲ್ಲಿರುವದು ಸಾಧ್ಯ. ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಒಂದಲ್ಲ ಒಂದು ರೀತಿಯಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ  ಸೇರಿದ್ದಾನೆ. ನಮ್ಮ ದೇಶವು ಎ೦ದರೆ ಅದರ ಅಲ್ಪಸಂಖ್ಯಾತರ ನಡುವಿನ ಸಾಮಾಜಿಕ ಒಡಂಬಡಿಕೆಯಾಗಿದೆ. ರಾಜಕೀಯ ಬಹುಮತವನ್ನು ಸೃಷ್ಟಿಸಲು ಪ್ರಯತ್ನಿಸುವ ಪ್ರಕ್ರಿಯೆಯಲ್ಲಿ, ಕೃತಕವಾಗಿ ನಿರ್ಮಿಸಲಾದ "ನೊಂದ ಹಿಂದೂ ಬಹುಸಂಖ್ಯಾತ" ಎನ್ನುವ ಕಲ್ಪನೆಯಿ೦ದ  ಆ ಸಾಮಾಜಿಕ ಒಡಂಬಡಿಕೆಯನ್ನು ರದ್ದುಗೊಳಿಸಲಾಗುತ್ತಿದೆ. "ರಾಷ್ಟ್ರ-ವಿರೋಧಿ ಇತರ"ರ ವಿರುದ್ಧ ಸ್ವತಃ ವ್ಯಾಖ್ಯಾನಿಸುವ ಬಹುಮತಸ್ಥರಾದ ಇವರು ‘ಮೊದಲ’ ‘ಮೂಲ’ ಜನರು,  ಹಿಂದೂ ರಾಷ್ಟ್ರದ ಏಕೈಕ ಅರ್ಹ ನಾಗರಿಕರು, ಎಂದು ನಂಬಲು ಕಲಿಸಲಾಗುತ್ತಿದೆ. ಭಾರತವನ್ನೇ  ರದ್ದುಗೊಳಿಸಲಾಗುತ್ತಿದೆ.

ಅಲ್ಪಸಂಖ್ಯಾತರ ಈ ರಾಷ್ಟ್ರವನ್ನು ರೂಪಿಸುವ ನಮ್ಮಲ್ಲಿ ನಮ್ಮದೇ ಆದ ಅಚ್ಚುಕಟ್ಟಾದ, ನಿಷ್ಕಳಂಕ,  ಕೇವಲ  ಆಕ್ರಮಣಶೀಲತೆಯ ದೋಷರಹಿತ ಬಲಿಪಶುಗಳಾಗಿರುವ, ಇತಿಹಾಸವನ್ನು ಮುಂದಿಡಬಹುದಾದವರು ನಮ್ಮಲ್ಲಿ ಸಿಗುವದು ಕಷ್ಟಸಾಧ್ಯ.   ನಮ್ಮ ಇತಿಹಾಸಗಳು ಛೇದಿಸುತ್ತವೆ, ಜೋಡಿಸುತ್ತವೆ ಮತ್ತು ಒಟ್ಟುಗೂಡುತ್ತವೆ.  ಒಟ್ಟಾಗಿ ಇವು ನಮಗೆ ನಮ್ಮ ಗುರುತನ್ನು ನೀಡುತ್ತವೆ. ಜಾತಿ, ವರ್ಗ, ಧರ್ಮ, ಲಿಂಗ ಮತ್ತು ಜನಾಂಗೀಯತೆಯ ಅತಿ-ಕಮಾನಿನ ಶ್ರೇಣಿಯನ್ನು ಹೊರತುಪಡಿಸಿ, ನಮ್ಮ ಸಮಾಜವು ಆಣ್ವಿಕ ಮಟ್ಟದಲ್ಲಿ ಶ್ರೇಣೀಕೃತವಾಗಿದೆ. ಸೂಕ್ಷ್ಮ ವಸಾಹತುಶಾಹಿ, ಸೂಕ್ಷ್ಮ ಶೋಷಣೆ, ಸೂಕ್ಷ್ಮ ಪರಸ್ಪರ ಅವಲಂಬನೆಳು ಎ೦ದಿಗೂ ಇವೆ.  ಈ ನೆಯಿಗೆಯ ಪ್ರತಿಯೊಂದು ಎಳೆಗಳು ಪಾಂಡಿತ್ಯ, ಅಧ್ಯಯನ, ವಾದ, ಚರ್ಚೆ, ಚಿ೦ತನೆಗೆ  ಕರೆ ನೀಡುವ ಮಹಾಕಾವ್ಯವಾಗಿವೆ. ಆದರೆ ಈ ನೇಯ್ಗೆಯಿಂದ ಒಂದೇ ಒಂದು ಎಳೆಯನ್ನು ಪ್ರತ್ಯೇಕಿಸಿ ಸಾಮೂಹಿಕ ಅತ್ಯಾಚಾರಕ್ಕೆ ಕರೆಯಲು ಬಳಸುವುದೇ? ನರಮೇಧಕ್ಕಾಗಿ? ಇದು ಒಪ್ಪಿಕೊಳ್ಳಬೇಕಾದ ಸಂಗತಿಯೇ?

ಭಾರತ ಉಪಖಂಡವನ್ನು ವಿಭಜಿಸಿದಾಗ ಮತ್ತು ನೂರಾರು ಸ್ವತಂತ್ರ ರಾಜಪ್ರಭುತ್ವದ ರಾಜ್ಯಗಳನ್ನು,  ಅವುಗಳಲ್ಲಿ ಕೆಲವು ಬಲವಂತವಾಗಿ,  ಭಾರತ ಅಥವಾ ಪಾಕಿಸ್ತಾನಕ್ಕೆ ಒಟ್ಟುಗೂಡಿಸಿದಾಗ, ಲಕ್ಷಾಂತರ ಜನರು - ಹಿಂದೂ, ಮುಸ್ಲಿಂ ಮತ್ತು ಸಿಖ್ - ಪರಸ್ಪರ ಒಬ್ಬರ ಮೇಲೊಬ್ಬರು ತಿರುಗಿಬಿದ್ದರು.  ಹತ್ತು ಲಕ್ಷ ಜನರು ಕೊಲ್ಲಲ್ಪಟ್ಟರು. ಕೋಟಿ ಜನರು ಸ್ಥಳಾಂತರಗೊಂಡರು. ವೈಯಕ್ತಿಕ ಅಥವಾ ಸಮುದಾಯದ ದುರಂತ ಮತ್ತು ದುರದೃಷ್ಟದ ಯಾವುದೇ ಕಥೆ, ಅದು ಎಷ್ಟೇ ನಿಜವಾಗಿದ್ದರೂ, ಇತರ ಕಥೆಗಳನ್ನು ಅಳಿಸುವ ರೀತಿಯಲ್ಲಿ ಹೇಳಿದಾಗ ಅದು ಸುಳ್ಳಾಗಿರುತ್ತದೆ. ಅಪಾಯಕಾರಿ ಸುಳ್ಳು. ಗೊಂದಲಮಯ ಇತಿಹಾಸವನ್ನು ಚಪ್ಪಟೆಗೊಳಿಸುವುದು, ಸೂಕ್ಷ್ಮ ವ್ಯತ್ಯಾಸವನ್ನು ದೋಚುವುದು, ಅದನ್ನು ಆಯುಧಗೊಳಿಸುವುದು ಭೀಕರ ಪರಿಣಾಮಗಳನ್ನು ಉಂಟುಮಾಡುತ್ತದೆ.

ಉಪಖಂಡದಲ್ಲಿರುವ ನಾವೆಲ್ಲರೂ ನ್ಯಾಯದ ಸಾಮೂಹಿಕ  ಹಂಚಿಕೆಯ ಒ೦ದು ಕಲ್ಪನೆಯನ್ನು ವಾಸ್ತವಿಕಗೊಳಿಸುವ  ಪ್ರಯತ್ನ ಮಾಡುವ ಆಯ್ಕೆಯನ್ನು ಹೊಂದಿದ್ದೇವೆ - ನಮ್ಮ ಸಾಮೂಹಿಕ ಸ್ಮರಣೆಯನ್ನು ಕಡಿಯುವ ನೋವು ಮತ್ತು ದ್ವೇಷವನ್ನು ಭೂತೋಚ್ಚಾಟನೆ ಮಾಡುವ  ಕಡೆಗೆ,  ಅಥವಾ ಅದನ್ನು ಹೆಚ್ಚಿಸುವ ದಿಸೆಯಲ್ಲಿ.  ಭಾರತದ ಪ್ರಧಾನ ಮಂತ್ರಿ, ಅವರ ನೇತೃತ್ವದ ರಾಜಕೀಯ ಪಕ್ಷ,  ಮತ್ತು  ಅವರು ಸದಸ್ಯರಾಗಿರುವ ಫ್ಯಾಸಿಸ್ಟ್ ಸಂಘಟನೆಯಾದ ಮತ್ತು ಆ ಪಕ್ಷದ  ಮಾತೃಸ್ಥಿತಿಯಲ್ಲಿರುವ  ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) , ಇವರೆಲ್ಲರೂ  ಅದನ್ನು ಹೆಚ್ಚು ಕೆರಳಿಸಲು  ಆಯ್ಕೆ ಮಾಡಿದ್ದಾರೆ. ಅವರು ನಮ್ಮ ರಕ್ತ-ನೆನೆಸಿದ ಭೂಮಿಯ ಆಳದಿ೦ದ  ಅಗಾಧವಾಗಿ ಕೆಟ್ಟದ್ದನ್ನು ಕರೆದೆಬ್ಬಿಸುತ್ತಿದ್ದಾರೆ. ಅವರು ಹೊತ್ತಿಸಿದ ಬೆಂಕಿಯು ಯಾವುದೇ ಗೊತ್ತುಪಡಿಸಿದ ಹಾದಿಯಲ್ಲಿ ಸುಡುವುದಿಲ್ಲ. ಇದು ದೇಶವನ್ನೇ  ಸುಡಬಹುದು. ಧಗೆ ಶುರುವಾಗಿದೆ. ಭಾರತ ಮತ್ತು ಕಾಶ್ಮೀರದ ಮುಸ್ಲಿಮರ ಜೊತೆಗೆ ಕ್ರಿಶ್ಚಿಯನ್ನರು ಕೂಡ ಅವರ ದಾಳಿಯ ಮುಂಚೂಣಿಯಲ್ಲಿದ್ದಾರೆ. ಕಳೆದ ವರ್ಷವಷ್ಟೇ ಚರ್ಚ್‌ಗಳ ಮೇಲೆ ನೂರಾರು ದಾಳಿಗಳು ನಡೆದಿವೆ, ಕ್ರಿಸ್ತನ ಪ್ರತಿಮೆಗಳನ್ನು ಅಪವಿತ್ರಗೊಳಿಸಲಾಗಿದೆ, ಪಾದ್ರಿಗಳು ಮತ್ತು ಸನ್ಯಾಸಿನಿಯರ ಮೇಲೆ ದೈಹಿಕವಾಗಿ ಹಲ್ಲೆ ಮಾಡಲಾಗಿದೆ.

ನಾವು ನಮ್ಮೊಟ್ಟಿಗೇ ಇರಬೇಕಾಗುತ್ತದೆ.  ಹೊರಗಿನಿ೦ದ ಯಾವ ಸಹಾಯವೂ ಬರುವುದಿಲ್ಲ. ಸಹಾಯ ಯೆಮೆನ್‌ಗೆ, ಶ್ರೀಲಂಕಾಕ್ಕೆ, ರುವಾಂಡಾಕ್ಕೆ ಬಂದಿಲ್ಲ.  ಭಾರತದ ಅನುಭವ  ಬೇರೆ ಎ೦ದು ಏಕೆ ಭಾವಿಸಬೇಕು? ಅಂತರರಾಷ್ಟ್ರೀಯ ರಾಜಕೀಯದಲ್ಲಿ, ಲಾಭ, ಅಧಿಕಾರ, ಜನಾಂಗ, ವರ್ಗ ಮತ್ತು ಭೌಗೋಳಿಕ ರಾಜಕೀಯವು ನೈತಿಕತೆಯನ್ನು ನಿರ್ಧರಿಸುತ್ತದೆ. ಉಳಿದದ್ದು  ಕೇವಲ ನಾಟಕೀಯ ಭಂಗಿ, ನೆರಳಿನ ನೃತ್ಯ.

ಸಾವಿರಾರು ಮುಸ್ಲಿಮರ ಹಾಡೇ ಹಗಲು ಸಾಮೂಹಿಕ ಹತ್ಯೆಯ ಮೇಲೆ, ಸುಳ್ಳು ಧ್ವಜದ ದಾಳಿಗಳು ಮತ್ತು ಕಾಲ್ಪನಿಕ ಹತ್ಯೆಯ ಸಂಚುಗಳಿಂದ ತಯಾರಿಸಿದ ಉನ್ಮಾದದ ​​ಸರಣಿಯ ಮೇಲೆ,  ಅಧಿಕಾರಕ್ಕೆ ಏರಿದ ಪುರುಷರು ಭಾರತವನ್ನು ಆಳುತ್ತಿದ್ದಾರೆ. ನಿಸ್ಸಂಶಯವಾಗಿ, ಪ್ರತಿ ಜಾತಿ ಮತ್ತು ಧರ್ಮದ ಸಾಮಾನ್ಯ ಜನರಿಂದ, ಮುಸ್ಲಿಂ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಬಂಡೆದ್ದವರಿಂದ, ಕಳೆದ ವರ್ಷ ರೈತರ ಐತಿಹಾಸಿಕ ಚಳವಳಿಯಿಂದ ಮತ್ತು ಬಿಜೆಪಿಯೊಂದಿಗೆ ಸೆಣಸಾಡಿ  ಅದನ್ನು ಸೋಲಿಸಿದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಮತ್ತು ಮಹಾರಾಷ್ಟ್ರಗಳ ಪ್ರಾದೇಶಿಕ ರಾಜಕೀಯ ಪಕ್ಷಗಳಿಂದ, ಈ ದ್ವೇಷಭರಿತತೆಗೆ  ವಿರೋಧವಿದೆ.  ನಡೆಯುತ್ತಿರುವ ವಿದ್ಯಮಾನಗಳಿಗೆ ಬಹುಪಾಲು ಭಾರತೀಯರು ಒಪ್ಪುವುದಿಲ್ಲ ಎಂದು ಹೇಳುವುದು ನ್ಯಾಯೋಚಿತವಾಗಿದೆ. ಆದರೆ ಅವರ ಅಸಮ್ಮತಿಯು ವ್ಯಕ್ತವಾಗುವದು ಬಹುಪಾಲು ಅಸಹ್ಯದ ನೋಟದಿ೦ದ,   ‘ಕರ್ಮ’ದ ಫಲ ಎ೦ದು ನುಣುಚಿಕೊಳ್ಳುವುದರಿ೦ದ, ಮತ್ತು ಅಹಿತಕರವಾದುದ್ದರಿ೦ದ  ದೂರ ತಿರುಗುವಿಕೆಯಿಂದ.  ಒಳ್ಳೆಯ ಕೂಲಿ ಪ್ರತಿಫಲ  ಪಡೆಯುವ ಫ್ಯಾಸಿಸ್ಟ್ ಟೋಳಿಗಳ  ಉರಿಯುತ್ತಿರುವ ಸೈದ್ಧಾಂತಿಕ ಉತ್ಸಾಹದ ಎದುರಿಗೆ ಇವು  ಸಂಪೂರ್ಣವಾಗಿ ನಿಷ್ಪರಿಣಾಮಕಾರಿಯಾಗಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಏಕೈಕ ರಾಷ್ಟ್ರೀಯ ವಿರೋಧ ಪಕ್ಷ, ನಮಗೆ ಒದಗಿಸುವದು ದೌರ್ಬಲ್ಯ ಮತ್ತು ನೈತಿಕ ಸ್ಥಾನವನ್ನು ತೆಗೆದುಕೊಳ್ಳಲು - ಸಾರ್ವಜನಿಕ ಭಾಷಣಗಳಲ್ಲಿ ‘ಮುಸ್ಲಿಂ’ ಪದವನ್ನು ಉಚ್ಚರಿಸಲೂ ಕೂಡ ಹಿ೦ಜರಿಯುವ  - ಅಸಮರ್ಥತೆಗಳನ್ನು ಮಾತ್ರ  ನೀಡುತ್ತದೆ .  "ಕಾಂಗ್ರೆಸ್ ಮುಕ್ತ ಭಾರತ" ಕ್ಕಾಗಿ ಮೋದಿಯವರ ಸಾರ್ವಜನಿಕ ಸಭೆಗಳ  ಕರೆ ನಿಜವಾಗಿಯೂ ವಿರೋಧ ಪಕ್ಷವಿಲ್ಲದ ಸರ್ಕಾರಕ್ಕಾಗಿ ಕರೆಯಾಗಿದೆ. ನಾವು ಈ ವಿದ್ಯಮಾನಗಳನ್ನು   ಏನೆ೦ದು ಕರೆಯಲು ಬಯಸಿದರೂ, ಪ್ರಜಾಪ್ರಭುತ್ವವು ಮನಸ್ಸಿಗೆ ಬರುವ ಪದವಲ್ಲ.

ಹರಿದ್ವಾರದಲ್ಲಿ ನಡೆದ 'ಧರ್ಮ ಸಂಸದ್', ಅಲ್ಲಿ ಭಾಗವಹಿಸುವವರು ಮುಸ್ಲಿಮರ ವಿರುದ್ಧ ನರಮೇಧಕ್ಕೆ ಕರೆ ನೀಡಿದರು. ಫೋಟೋ: ವಿಡಿಯೋ ಸ್ಕ್ರೀನ್‌ಗ್ರಾಬ್

ಭಾರತವು ಚುನಾವಣಾ ಪ್ರಜಾಪ್ರಭುತ್ವದ ಎಲ್ಲಾ ಬಾಹ್ಯ ಗುಣಲಕ್ಷಣಗಳನ್ನು - ನಮ್ಮನ್ನು ಜಾತ್ಯತೀತ, ಸಮಾಜವಾದಿ ಗಣರಾಜ್ಯ ಎಂದು ಕರೆಯುವ ಸಂವಿಧಾನ, ಮುಕ್ತ ಮತ್ತು ನ್ಯಾಯಯುತ ಚುನಾವಣೆ, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದಿಂದ ನಡೆಸಲ್ಪಡುವ ಸಂಸತ್ತು, ಸ್ವತಂತ್ರ ನ್ಯಾಯಾಂಗ ಮತ್ತು ಮುಕ್ತ ಮಾಧ್ಯಮ - ಪ್ರದರ್ಶಿಸುತ್ತಿರುವಾಗ, ಸತ್ಯದಲ್ಲಿ ಈ ರಾಜ್ಯ ಯಂತ್ರವು (ಹೆಚ್ಚುತ್ತಿರುವ ಮಟ್ಟಿಗೆ, ನ್ಯಾಯಾಂಗ, ನಾಗರಿಕ ಸೇವೆಗಳು, ಭದ್ರತಾ ಪಡೆಗಳು, ಗುಪ್ತಚರ ಸೇವೆಗಳು, ಪೋಲೀಸ್ ಮತ್ತು ಚುನಾವಣಾ ಉಪಕರಣಗಳನ್ನು ಒಳಗೊಂಡಂತೆ) ಭಾರತದ ಅತ್ಯಂತ ಶಕ್ತಿಶಾಲಿ ಸಂಘಟನೆಯಾದ ಬಹಿರಂಗವಾಗಿ ಫ್ಯಾಸಿಸ್ಟ್, ಹಿಂದೂ ರಾಷ್ಟ್ರೀಯತಾವಾದಿ RSS ನಿಂದ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲ್ಪಡದಿದ್ದರೆ, ಅದರಿ೦ದ  ಆಳವಾಗಿ ಪ್ರಭಾವಿತವಾಗಿದೆ ಮತ್ತು ಆಗಾಗ್ಗೆ ಅದರಿ೦ದ ಮುಣುಗಿಸಲ್ಪಡುತ್ತದೆ.  1925 ರಲ್ಲಿ ಸ್ಥಾಪನೆಯಾದ ಆರ್‌ಎಸ್‌ಎಸ್, ಸಂವಿಧಾನವನ್ನು ಬದಿಗಿಟ್ಟು ಭಾರತವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸಬೇಕೆಂದು ದೀರ್ಘಕಾಲ ಪ್ರಚಾರ ಮಾಡಿದೆ. ಆರೆಸ್ಸೆಸ್ ಸಿದ್ಧಾಂತಿಗಳು ಹಿಟ್ಲರನನ್ನು ಬಹಿರಂಗವಾಗಿ ಮೆಚ್ಚಿದ್ದಾರೆ ಮತ್ತು ಭಾರತದ ಮುಸ್ಲಿಮರನ್ನು ಜರ್ಮನಿಯ ಯಹೂದಿಗಳೊಂದಿಗೆ ಸಮೀಕರಿಸಿದ್ದಾರೆ.

ಆರ್ಯರ ಶ್ರೇಷ್ಠತೆ, ಕೆಲವು ಮಾನವರು ದೈವಿಕ ಮತ್ತು ದೇವರ೦ತವರು, ಇತರರು ಉಪ-ಮಾನವ, ಕಲುಷಿತ ಮತ್ತು ಅಸ್ಪೃಶ್ಯರು ಎಂಬ ಕಲ್ಪನೆಯು, ಏನು ಹೇಳಿದರೂ ಬ್ರಾಹ್ಮಣತ್ವದ,  ಹಿಂದೂ ಸಮಾಜದ ಸಂಘಟನಾ ತತ್ವವಾಗಿರುವ ಹಿಂದೂ ಜಾತಿ ವ್ಯವಸ್ಥೆಯ ಆಧಾರವಾಗಿದೆ.   ಇಂದು ದುರಂತವೆಂದರೆ, ಅತ್ಯಂತ ತುಳಿತಕ್ಕೊಳಗಾದವರಲ್ಲಿ ಅನೇಕರು ಆರ್‌ಎಸ್‌ಎಸ್‌ನ ಹೇತುವಿಗೆ  ಒಟ್ಟುಗೂಡಿದ್ದಾರೆ, ಪ್ರಚಾರದ ಸೆಲೆಯಲ್ಲಿ ಮುಳುಗಿದ್ದಾರೆ: ಅದು  ತಮ್ಮ ಸ್ವಂತ ಅಧೀನತೆಗಾಗಿ ಅವರು ಮತ ಚಲಾಯಿಸುವಂತೆ ಮಾಡಿದೆ. 2025ರಲ್ಲಿ ಆರ್‌ಎಸ್‌ಎಸ್ ನೂರನೇ ವರ್ಷ ಪೂರೈಸಲಿದೆ. ನೂರು ವರ್ಷಗಳ  ಮತಪ್ರಚಾರಾತ್ಮಕ ಸಮರ್ಪಣೆಯು ಅದನ್ನು ರಾಷ್ಟ್ರದ ಒಳಗೊ೦ದು ರಾಷ್ಟ್ರವನ್ನಾಗಿ ಮಾಡಿದೆ. ಐತಿಹಾಸಿಕವಾಗಿ ಆರ್‌ಎಸ್‌ಎಸ್- ಅನ್ನು ಪಶ್ಚಿಮ ಕರಾವಳಿಯ ಬ್ರಾಹ್ಮಣರ ಕೂಟವು ಬಿಗಿಯಾಗಿ ನಿಯಂತ್ರಿಸಿದೆ. ಇಂದು ಇದು ಒ೦ದೂವರೆ ಕೋಟಿ  ಸದಸ್ಯರನ್ನು ಹೊಂದಿದೆ, ಅವರಲ್ಲಿ ಮೋದಿ, ಅವರ ಹಲವಾರು ಕ್ಯಾಬಿನೆಟ್ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು. ಇದು ಈಗ ಒಂದು ಸಮಾನಾಂತರ ವಿಶ್ವವಾಗಿದೆ, ಹತ್ತಾರು ಸಾವಿರ ಪ್ರಾಥಮಿಕ ಶಾಲೆಗಳು, ತನ್ನದೇ ಆದ ರೈತ, ಕಾರ್ಮಿಕ ಮತ್ತು ವಿದ್ಯಾರ್ಥಿ ಸಂಘಟನೆಗಳು, ತನ್ನದೇ ಆದ ಪ್ರಕಾಶನ ವಿಭಾಗ, ಅರಣ್ಯ-ವಾಸಿಸುವ ಬುಡಕಟ್ಟುಗಳ ನಡುವೆ "ಶುದ್ಧೀಕರಿಸಲು" ಮತ್ತು ಹಿಂದೂ ಧರ್ಮಕ್ಕೆ "ಹಿಂತಿರುಗಿಸಲು" ಕೆಲಸ ಮಾಡುವ ಸುವಾರ್ತಾಬೋಧಕ ವಿಭಾಗ, ಮಹಿಳಾ ಸಂಘಟನೆಗಳ ವ್ಯಾಪ್ತಿ, ಮುಸೊಲಿನಿಯ ಕಪ್ಪು ಶರ್ಟ್‌ಗಳಿಂದ ಪ್ರೇರಿತವಾದ ಹಲವಾರು ದಶಲಕ್ಷ ಬಲದ ಸಶಸ್ತ್ರ ‘ಮಿಲಿಷಿಯ’ ಸೇನಾಪಡೆ, ಮತ್ತು ಟೊಳ್ಳು ಕಂಪನಿಗಳ ಪಾತ್ರವನ್ನು ನಿರ್ವಹಿಸುವ ಮತ್ತು ಅವಶ್ಯ ಬ೦ದಾಗ ತೋರಿಕೆಯ ನಿರಾಕರಣೆಗೆ ಉಪಯುಕ್ತವಾದ  ಊಹೆಗೂ ನಿಲುಕದ ಹಿಂಸಾತ್ಮಕ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಗಳ ಬಹುಸಂಖ್ಯೆ.

ಭಾರತವು ಉದ್ಯೋಗಗಳಲ್ಲಿ ರಕ್ತಸ್ರಾವವಾಗುತ್ತಿದ್ದಂತೆ ಮತ್ತು ಆರ್ಥಿಕ ಅಸ್ತವ್ಯಸ್ತತೆಯತ್ತ ಸಾಗುತ್ತಿರುವಾಗ, ಬಿಜೆಪಿಯು ಸ್ಥಿರವಾಗಿ ಶ್ರೀಮಂತವಾಗಿ ಬೆಳೆದಿದೆ ಮತ್ತು ಈಗ ವಿಶ್ವದ ಅತ್ಯ೦ತ ಶ್ರೀಮಂತ ರಾಜಕೀಯ ಪಕ್ಷವಾಗಿದೆ, ಇತ್ತೀಚೆಗೆ ಪರಿಚಯಿಸಲಾದ ಅನಾಮಧೇಯ ಚುನಾವಣಾ ದಾನಪತ್ರಗಳ ವ್ಯವಸ್ಥೆಯಿಂದ ಕಾರ್ಪೊರೇಟ್ ನಿಧಿಯ ಅಪಾರದರ್ಶಕ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಪ್ರತಿ ಭಾರತೀಯ ಭಾಷೆಯಲ್ಲಿನ ನೂರಾರು ಕಾರ್ಪೊರೇಟ್-ಧನಸಹಾಯ ಟಿವಿ ಸುದ್ದಿ ವಾಹಿನಿಗಳು ಇದನ್ನು ಬೆಂಬಲಿಸುತ್ತವೆ, ಅವುಗಳು ತಪ್ಪು ಮಾಹಿತಿಯಲ್ಲಿ ಪರಿಣತಿ ಹೊಂದಿರುವ ಸಾಮಾಜಿಕ ಮಾಧ್ಯಮ ‘ಟ್ರೋಲ್‌’ಗಳ ಸೈನ್ಯದಿಂದ ಸಾಮೂಹಿಕವಾಗಿ ಮಾರಾಟವಾಗುತ್ತವೆ.

ಈ ಎಲ್ಲದಕ್ಕೂ ಬಿಜೆಪಿ ಇನ್ನೂ ಆರ್‌ಎಸ್‌ಎಸ್‌ನ ಮುಂಭಾಗದ ಕಚೇರಿಯಾಗಿ ಉಳಿದಿದೆ. ಈಗ ರಾಷ್ಟ್ರದೊಳಗಿನ ರಾಷ್ಟ್ರವು ನೆರಳಿನಿಂದ ಹೊರಬಂದು ವಿಶ್ವದ ವೇದಿಕೆಯಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳಲು ತಯಾರಿ ನಡೆಸುತ್ತಿದೆ. ಈಗಾಗಲೇ ವಿದೇಶಿ ರಾಜತಾಂತ್ರಿಕರು ತಮ್ಮ ರುಜುವಾತುಗಳನ್ನು ಸಲ್ಲಿಸಲು ಮತ್ತು ಗೌರವ ಸಲ್ಲಿಸಲು ಆರ್‌ಎಸ್‌ಎಸ್ ಪ್ರಧಾನ ಕಛೇರಿಗೆ ತೆರಳಲು ಪ್ರಾರಂಭಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ವಿಶ್ವವಿದ್ಯಾನಿಲಯ ಕ್ಯಾಂಪಸ್‌ಗಳು ಕಾನೂನುಬದ್ಧತೆಯ ಈ ಹತಾಶ ಅನ್ವೇಷಣೆಯಲ್ಲಿ ಹೊಸ ಯುದ್ಧಭೂಮಿಯಾಗಿದೆ. ಅಪಾಯವೆಂದರೆ ಆಕ್ರಮಣವನ್ನು ಮುನ್ನಡೆಸುವವರು ನ್ಯಾಯಯುತವಾಗಿ ಗೆಲ್ಲಲಾಗದದನ್ನು ಅನಿಯಂತ್ರಿತ ಬಂಡವಾಳಶಾಹಿ ಆರ್ಥಿಕತೆಯಲ್ಲಿ  ಬಹುಶಃ ಖರೀದಿಸಬಹುದು ಎಂದು ನಂಬುತ್ತಾರೆ.

2025 ರ ಆರ್‌ಎಸ್‌ಎಸ್ ಶತಮಾನೋತ್ಸವದ ಆಚರಣೆಯು ಭಾರತದ ಇತಿಹಾಸದಲ್ಲಿ ಪ್ರಮುಖ ಗುರುತು ಆಗಲಿದೆ. ಅದಕ್ಕೆ ಒಂದು ವರ್ಷ ಮೊದಲು, ನಮಗೆ ಸಾರ್ವತ್ರಿಕ ಚುನಾವಣೆ ಇರುತ್ತದೆ. ಇದು ಬಹುಶಃ ಹಿಂಸಾತ್ಮಕ ಚಟುವಟಿಕೆಯ ಹಠಾತ್ ವೇಗವರ್ಧನೆಯನ್ನು ವಿವರಿಸುತ್ತದೆ.

ಅಷ್ಟರಲ್ಲಿ ಸರ್ವರಕ್ಷಕ  ಮೋದಿ ಸರ್ವವ್ಯಾಪಿ. ನಮ್ಮ ಕೋವಿಡ್ ಲಸಿಕೆ ಪ್ರಮಾಣಪತ್ರಗಳಲ್ಲಿ ಮತ್ತು ಲಕ್ಷಾಂತರ ಹೊಸದಾಗಿ ನಿರುದ್ಯೋಗಿಗಳಿಗೆ ಉದ್ಯೋಗಗಳ ಬದಲಿಗೆ ವಿತರಿಸಲಾದ ಹಿಟ್ಟು ಮತ್ತು ಉಪ್ಪಿನ ಚೀಲಗಳ ಮೇಲೆ ಅವರ ಮುಖವಿದೆ. ‘ಲಾಭಾರ್ಥಿ’ ಜನರು  ಕೃತಜ್ಞರಾಗದಿರುವದು ಹೇಗೆ ಸಾಧ್ಯ ?

ಸಾಮೂಹಿಕ ಶವಸಂಸ್ಕಾರಗಳು ಮತ್ತು ಆಳವಿಲ್ಲದ ಸಮಾಧಿಗಳನ್ನು ನೋಡಿದ ಮತ್ತು ಪವಿತ್ರ ಗಂಗಾನದಿಯು ದೇಹಗಳಿಂದ ದಟ್ಟವಾಗಿ ಹರಿಯುವುದನ್ನು, ಅದರ ದಂಡೆಗಳು ಆಳವಿಲ್ಲದ ಸಮಾಧಿಗಳಿಂದ ಕೂಡಿರುತ್ವದನ್ನೆಲ್ಲ  ಕಂಡ ಅವರು, ಅಷ್ಟಾದರೂ ನಂಬಲಿಕ್ಕೆ ಹೇಳಿದ್ದನ್ನೇ  ನ೦ಬುತ್ತಾರೆ: ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಮಯದಲ್ಲಿ  ಮೋದಿ ಇಲ್ಲದಿದ್ದಲ್ಲಿ  ಪರಿಸ್ಥಿತಿ ಇನ್ನೂ ಕೆಟ್ಟದಾಗುತ್ತಿತ್ತು. 

ನಮ್ಮ ಭರವಸೆಗಳ ಹುಣ್ಣುಗಳನ್ನು ನಿವಾರಿಸಲಾಗಿದೆ, ನಮ್ಮ ಕಲ್ಪನೆಗಳು ಸೋಂಕಿತವಾಗಿವೆ.

ಈ ಯುದ್ಧದಲ್ಲಿ ಆರೆಸ್ಸೆಸ್ ಗೆದ್ದರೆ, ಅದರ ಗೆಲುವು ಅರ್ಥಹೀನವಾಗಿರುತ್ತದೆ. ಏಕೆಂದರೆ ಭಾರತ ಅಸ್ತಿತ್ವ ಕಳೆದುಕೊಳ್ಳುತ್ತದೆ. ಚುನಾವಣೆಗಳು ಈ ಅಲೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಅದಕ್ಕೆ ಈಗ ಸಮಯವಿಲ್ಲ. ಈ ಯುದ್ಧವನ್ನು ನಮ್ಮಲ್ಲಿ ಪ್ರತಿಯೊಬ್ಬರೂ ನಡೆಸಬೇಕಾಗಿದೆ. ಬೆಂಕಿ ನಮ್ಮ ಬಾಗಿಲನ್ನೇ ತಲುಪಿದೆ.

ಧನ್ಯವಾದಗಳು.

 

(‘ದಿ ವಯರ್’ ನಲ್ಲಿ ಪ್ರಕಟಿತ, ದಿನಾ೦ಕ ೨೨-೪-೨೦೨೨)

1


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು