ದ್ವೇಷದ ರಾಜಕೀಯದ ಅಂತ್ಯಕ್ಕೆ
ಕರೆ
ಪ್ರಧಾನ ಮ೦ತ್ರಿಯವರಿಗೆ ಬಹಿರಂಗ ಪತ್ರ
26 ಏಪ್ರಿಲ್ 2022
ಪ್ರಿಯ ಪ್ರಧಾನಮಂತ್ರಿಯವರೇ
ದೇಶದಲ್ಲಿ ದ್ವೇಷ ತುಂಬಿದ ವಿನಾಶದ ಉನ್ಮಾದವನ್ನು ನೋಡುತ್ತಿದ್ದೇವೆ. ಕೇವಲ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರನ್ನಲ್ಲ, ಸಂವಿಧಾನವನ್ನೇ ಬಲಿಪೀಠದಲ್ಲಿ ಇಡಲಾಗಿದೆ.
ಮಾಜಿ ನಾಗರಿಕ ಸೇವಕರಾಗಿರುವ ನಾವು ಸಾಮಾನ್ಯವಾಗಿ ಇ೦ತಹ ತೀಕ್ಷ್ಣಪದಗಳಲ್ಲಿ ವ್ಯಕ್ತಪಡಿಸುವ ರೂಢಿಯಿಲ್ಲ, ಆದರೆ ನಮ್ಮ ಸ್ಥಾಪಕ ಪಿತಾಮಹರು ರಚಿಸಿದ ಸಾಂವಿಧಾನಿಕ ಕಟ್ಟಡವು ನಾಶವಾಗುತ್ತಿರುವ ಪಟ್ಟುಬಿಡದ ವೇಗವು ಸ್ಪಷ್ಟವಾಗಿ ಮಾತನಾಡಲು ಮತ್ತು ನಮ್ಮ ಕೋಪ ಮತ್ತು ದುಃಖವನ್ನು ವ್ಯಕ್ತಪಡಿಸಲು ನಮ್ಮನ್ನು ಒತ್ತಾಯಿಸುತ್ತದೆ.
ಅಸ್ಸಾಂ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್, ಈ ಎಲ್ಲ (ದೆಹಲಿಯನ್ನು ಹೊರತುಪಡಿಸಿ , ಅದರೆ ದೆಹಲಿಯಲ್ಲಿ ಕೇಂದ್ರ ಸರ್ಕಾರವು ಪೊಲೀಸರನ್ನು ನಿಯಂತ್ರಿಸುತ್ತದೆ) ಭಾರತೀಯ ಜನತಾ ಪಾರ್ಟಿಯು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕಳೆದ ಕೆಲವು ವರ್ಷಗಳು ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ, ವಿಶೇಷವಾಗಿ ಮುಸ್ಲಿಮರ ವಿರುದ್ಧ ದ್ವೇಷದ ಹಿಂಸಾಚಾರದ ಉಲ್ಬಣವಾಗಿರುವದು ಭಯಾನಕ ಹೊಸ ಆಯಾಮವನ್ನು ಪಡೆದುಕೊಂಡಿದೆ. ಇನ್ನು ಮೇಲೆ ಇದು, ದಶಕಗಳಿಂದ ನಡೆಯುತ್ತಿರುವ ಆದರೆ ಕಳೆದ ಕೆಲವು ವರ್ಷಗಳಲ್ಲಿ ಹೊಸ ಸಾಮಾನ್ಯತೆಯ ಭಾಗವಾಗಿರುವ, ಕೇವಲ ದೃಢವಾದ ಹಿಂದುತ್ವದ ಅಸ್ಮಿತೆಯ ರಾಜಕೀಯ ಮಾತ್ರವಲ್ಲ, ಅಥವಾ ಕೋಮುವಾದದ ಕಾವನ್ನು ಕುದಿಯುತ್ತಾ ಇರಿಸುವುದಕ್ಕೆ ಮಾಡುವ ಪ್ರಯತ್ನವಲ್ಲ. ಈಗ ಆತಂಕಕಾರಿ ಸಂಗತಿಯೆಂದರೆ ನಮ್ಮ ಸಂವಿಧಾನದ ಮೂಲಭೂತ ತತ್ವಗಳು ಮತ್ತು ಕಾನೂನಿನ ಆಳ್ವಿಕೆಯನ್ನು ಬಹುಮತದ ಶಕ್ತಿಗಳಿಗೆ ಅಧೀನಗೊಳಿಸುತ್ತಿರುವುದು. ಇದರಲ್ಲಿ ರಾಜ್ಯಾಧಿಕಾರವು ಸಂಪೂರ್ಣವಾಗಿ ಭಾಗಿಯಾಗಿ ತೋರುವುದು .
ಮುಸ್ಲಿಮರ ವಿರುದ್ಧದ ದ್ವೇಷ ಮತ್ತು ದುರುದ್ದೇಶವು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ರಚನೆಗಳು, ಸಂಸ್ಥೆಗಳು ಮತ್ತು ಆಡಳಿತದ ಪ್ರಕ್ರಿಯೆಗಳ ಮಧ್ಯಂತರಗಳಲ್ಲಿ ಆಳವಾಗಿ ಹುದುಗಿಕೊ೦ಡಿದೆ ಎಂದು ತೋರುತ್ತದೆ. ಕಾನೂನಿನ ಆಡಳಿತವು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಸಾಧನವಾಗದೆ, ಅಲ್ಪಸಂಖ್ಯಾತರನ್ನು ಶಾಶ್ವತವಾದ ಒ೦ದು ಭಯದ ಸ್ಥಿತಿಯಲ್ಲಿ ಇಡುವ ಸಾಧನವಾಗಿ ಮಾರ್ಪಟ್ಟಿದೆ. ಅವರ ಸ್ವ೦ತ ಧರ್ಮವನ್ನು ಆಚರಣೆ ಮಾಡಲು, ತಮ್ಮದೇ ಆದ ಪದ್ಧತಿಗಳನ್ನು ಅನುಸರಿಸಲು, ತಮ್ಮ ಉಡಿಗೆ ನಿಯಮಗಳನ್ನು ಮತ್ತು ವೈಯಕ್ತಿಕ ಕಾನೂನುಗಳನ್ನು ಅನುಸರಿಸಲು ಮತ್ತು ತಮ್ಮದೇ ಆದ ಆಹಾರದ ಆಯ್ಕೆಗಳನ್ನು ಚಲಾಯಿಸಲು ಅವರ ಸಾಂವಿಧಾನಿಕ ಹಕ್ಕಿಗೆ ಬೆದರಿಕೆ ಹಾಕಲಾಗುತ್ತಿರುವದು ಜಾಗರೂಕ ಗುಂಪುಗಳು ಅವರ ಮೇಲೆ ನಿರ್ಭಯದಿಂದ ಹಿಂಸಾಚಾರವನ್ನು ಉಂಟುಮಾಡಲು ಬಿಡುವುದರಿಂದ ಮಾತ್ರವಲ್ಲ. ಅದರೊಟ್ಟಿಗೆ ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಮಿತಿಗೊಳಿಸುವುದಕ್ಕಾಗಿ ಮತ್ತು ಪೂರ್ವಾಗ್ರಹ ಪೀಡಿತ, ಕೋಮುವಾದಿ ಕಾರ್ಯನಿರ್ವಾಹಕರಿಗೆ ರಾಜ್ಯ ಅಧಿಕಾರವನ್ನು ಕೃತಕ ರೀತಿಯಲ್ಲಿ ಬಳಸಲು ಅನುಕೂಲಕರವಾಗುವ೦ತೆ ಕಾನೂನನ್ನೇ ತಿರುಚಲಾಗುತ್ತಿದೆ. ಹೀಗೆ ರಾಜ್ಯದ ಅಧಿಕಾರವನ್ನು ಒಂದು ಸಮುದಾಯದ ವಿರುದ್ಧ ಗುರಿಯಾಗಿಸುವ ಹಿಂಸಾಚಾರವನ್ನು ಸುಗಮಗೊಳಿಸಲು ಮಾತ್ರವಲ್ಲದೆ ಮೇಲ್ನೋಟಕ್ಕೆ ಕಾನೂನುಬಧ್ಧವೆ೦ದು ತೋರುವ ವಿಧಾನಗಳನ್ನು ಆಡಳಿತಕ್ಕೆ ಲಭ್ಯವಾಗುವಂತೆ ಮಾಡಲು ಬಳಸಲಾಗುತ್ತದೆ (ಉದಾ, ಮತಾಂತರ-ವಿರೋಧಿ ಕಾನೂನುಗಳು, ಗೋಮಾಂಸ ಸೇವನೆಯನ್ನು ನಿಷೇಧಿಸುವ ಕಾನೂನುಗಳು, ಅತಿಕ್ರಮಣ ತೆಗೆಯುವಿಕೆ, ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರದ ನಿಯಮಗಳನ್ನು ವಿಧಿಸುವದು). ಇದರ ಉದ್ದೇಶ ಈ ಸಮುದಾಯದಲ್ಲಿ ಭಯವನ್ನು ಉಂಟುಮಾಡುವುದು, ಅವರ ಜೀವನೋಪಾಯವನ್ನು ಕಸಿದುಕೊಳ್ಳುವುದು ಮತ್ತು ಬಹುಸಂಖ್ಯಾತ ರಾಜಕೀಯ ಶಕ್ತಿ ಮತ್ತು ಬಹುಸಂಖ್ಯಾತ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾನದಂಡಗಳಿಗೆ ತಮ್ಮನ್ನು ತಾವು ಅಧೀನಗೊಳಿಸಬೇಕಾದ ಕೀಳು ಪ್ರಜೆಗಳ ಸ್ಥಾನಮಾನವನ್ನು ಅವರು ಒಪ್ಪಿಕೊಳ್ಳಬೇಕು ಎಂದು ಅವರಿಗೆ ಸ್ಪಷ್ಟಪಡಿಸುವುದು. ನಾವು ವ್ಯವಸ್ಥಿತವಾಗಿ ನಮ್ಮವರೇ ಆದ ಪ್ರಜೆಗಳನ್ನು - ಅಲ್ಪಸಂಖ್ಯಾತರು, ದಲಿತರು, ಬಡವರು ಮತ್ತು ಅಂಚಿನಲ್ಲಿರುವ ವರ್ಗಗಳನ್ನು - ದ್ವೇಷದ ಗುರಿಗಳನ್ನಾಗಿ ಮಾಡುವ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಉದ್ದೇಶಪೂರ್ವಕವಾಗಿ ಕಸಿದುಕೊಳ್ಳುವ ದೇಶವಾಗುವ ಸಾಧ್ಯತೆಯು ಈಗ ಹಿಂದೆಂದಿಗಿಂತಲೂ ಹೆಚ್ಚು ಭಯಾನಕವಾಗಿದೆ.
ಪ್ರಸ್ತುತ ಕೋಮು ಉನ್ಮಾದದ ಉಲ್ಬಣವು ರಾಜಕೀಯ ನಾಯಕತ್ವದಿಂದ ಸಂಘಟಿತ ಮತ್ತು ನಿರ್ದೇಶಿಸಲ್ಪಟ್ಟಿದೆಯೇ ಎಂಬುದು ನಮಗೆ ತಿಳಿದಿಲ್ಲವಾದರೂ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಆಡಳಿತವು ಕಿಡಿಗೇಡಿತನದ ಗುಂಪುಗಳಿಗೆ ನಿರ್ಭಯವಾಗಿ ಕಾರ್ಯನಿರ್ವಹಿಸಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಅಂತಹ ಅನುಕೂಲ ಮತ್ತು ಬೆಂಬಲವು ಸ್ಥಳೀಯ ಪೋಲೀಸ್ ಮತ್ತು ಇತರ ಆಡಳಿತಾತ್ಮಕ ಅಧಿಕಾರಿಗಳು ನೀಡುವುದಕ್ಕೆ ಸೀಮಿತವಾಗಿಲ್ಲ; ಸ್ಥಳೀಯ ಮಟ್ಟದ ದಬ್ಬಾಳಿಕೆಗೆ ಅನುವು ಮಾಡಿಕೊಡುವ ನೀತಿ ಮತ್ತು ಸಾಂಸ್ಥಿಕ ವಾತಾವರಣವನ್ನು ಒದಗಿಸುವದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿನ ಅತ್ಯುನ್ನತ ರಾಜಕೀಯ ಮಟ್ಟಗಳ ಅಧ್ಯಾಹೃತ ಅನುಮೋದನೆಯನ್ನು ಹೊಂದಿರುವಂತೆ ಕಂಡುಬರುತ್ತದೆ. ಹಿಂಸಾಚಾರವನ್ನು ನಿಜವಾಗಿ ಕೈಗೊಳ್ಳುವುದನ್ನು ಅ೦ಚಿನಲ್ಲಿರುವ ಗುಂಪುಗಳಿಗೆ ಹೊರಗುತ್ತಿಗೆ ನೀಡಬಹುದಾದರೂ, ಅವರ ಕಾರ್ಯಾಚರಣೆಯ ನೆಲವನ್ನು ಹೇಗೆ ಫಲವತ್ತಾಗಿಸಲಾಗಿದೆ, ಪ್ರತಿಯೊಬ್ಬರೂ ಹೇಗೆ ಒ೦ದೇ ಮೂಲ ನಿಗದಿತ ಪಠ್ಯವನ್ನು ಅನುಸರಿಸುತ್ತಾರೆ ಮತ್ತು ಸಾಮಾನ್ಯ ಉಪಕರಣಗಳ ಗಂಟು ಮೂಟೆಯನ್ನು ಹೇಗೆ ಹಂಚಿಕೊಳ್ಳುತ್ತಾರೆ, ಮತ್ತು ತಮ್ಮ ಕಾರ್ಯಗಳನ್ನು ಸಮರ್ಥಿಸಿಕೊಳ್ಳಲು ಹೇಗೆ ಪಕ್ಷದ ಮತ್ತು ರಾಜ್ಯಾಧಿಕಾರದ ಪ್ರಚಾರ ಯಂತ್ರ ಅವರಿಗೆ ಲಭ್ಯವಾಗುತ್ತದೆ ಎನ್ನುವದರ ಬಗ್ಗೆ ಸ್ವಲ್ಪವೂ ಸಂದೇಹವಿಲ್ಲ.
ಹಿಂದಿನ ಕೋಮು ಘರ್ಷಣೆಗಳಿಂದ ಈಗ ನಡೆಯುತ್ತಿರುವ ಘಟನೆಗಳನ್ನು ಪ್ರತ್ಯೇಕಿಸುವುದು ಕೇವಲ ಹಿಂದೂ ರಾಷ್ಟ್ರಕ್ಕೆ ಆಧಾರವನ್ನು ಸಿದ್ಧಪಡಿಸುವ ಸರ್ವ ಸಮೃದ್ಧ ವಿನ್ಯಾಸವನ್ನು ಅನಾವರಣಗೊಳಿಸುತ್ತಿರುವುದು ಮಾತ್ರವಲ್ಲ, ಆದರೆ ಅಂತಹ ಬೆಳವಣಿಗೆಯನ್ನು ತಡೆಯಲು ರಚಿಸಲಾದ ಸಾಂವಿಧಾನಿಕ ಮತ್ತು ಕಾನೂನು ಚೌಕಟ್ಟನ್ನೇ ಸ್ವತಃ ಬಹುಸಂಖ್ಯಾತ ದೌರ್ಜನ್ಯದ ಸಾಧನವನ್ನಾಗಿ ಮಾಡಲು ತಿರುಚಿ ವಿಕೃತಗೊಳಿಸಲಾಗುತ್ತಿದೆ. ‘ಬುಲ್ಡೋಜರ್’ ಈಗ ರಾಜಕೀಯ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಅಕ್ಷರಶಃ ಮತ್ತು ಸಾಂಕೇತಿಕವಾಗಿ ಚಲಾಯಿಸುವ ಹೊಸ ರೂಪಕವಾಗಿ ಮಾರ್ಪಟ್ಟಿರುವುದು ಆಶ್ಚರ್ಯವೇನಿಲ್ಲ. 'ಅವಶ್ಯಕ ಕಾನೂನು ಪ್ರಕ್ರಿಯೆ'( ‘due process’) ಮತ್ತು 'ಕಾನೂನಿನ ನಿಯಮ'ದ ಕಲ್ಪನೆಗಳ ಸುತ್ತಲೂ ನಿರ್ಮಿಸಲಾದ ಕಟ್ಟಡವು ನೆಲಸಮಗೊಂಡಿದೆ. ಜಹಾಂಗೀರ್ಪುರಿ ಘಟನೆಯು ತೋರಿಸುವಂತೆ, ಭೂಮಿಯ ಅತ್ಯುನ್ನತ ನ್ಯಾಯಾಲಯದ ಆದೇಶಗಳನ್ನು ಸಹ ಕಾರ್ಯನಿರ್ವಾಹಕರು ಸ೦ಪೂರ್ಣ ಅಗೌರವದಿಂದ ಪರಿಗಣಿಸುತ್ತಾರೆ.
ಪ್ರಧಾನಮಂತ್ರಿಯವರೇ, ನಾವು, ಸಾಂವಿಧಾನಿಕ ನಡವಳಿಕೆ ಗುಂಪಿನ ಸದಸ್ಯರು - ನಾವೆಲ್ಲರೂ ಸಂವಿಧಾನದ ಸೇವೆಯಲ್ಲಿ ದಶಕಗಳನ್ನು ಕಳೆದಿರುವ ಮಾಜಿ ನಾಗರಿಕ ಸೇವಕರು - ನಾವು ಎದುರಿಸುತ್ತಿರುವ ಬೆದರಿಕೆಯು ಅಭೂತಪೂರ್ವ ಎ೦ದು ನ೦ಬುತ್ತೇವೆ. ಇಲ್ಲಿ ಕೇವಲ ಸಾಂವಿಧಾನಿಕ ನೈತಿಕತೆ ಮತ್ತು ನಡವಳಿಕೆಗಳು ಮಾತ್ರ ಗ೦ಡಾ೦ತರದಲ್ಲಿಲ್ಲ. ಇದರಲ್ಲಿ ನಮ್ಮ ಶ್ರೇಷ್ಠ ನಾಗರಿಕತೆಯ ಪರಂಪರೆ, ಮತ್ತು ಯಾವದನ್ನು ಸಂರಕ್ಷಿಸಲು ಸಂವಿಧಾನವನ್ನು ತುಂಬಾ ಸೂಕ್ಷ್ಮವಾಗಿ ವಿನ್ಯಾಸಗೊಳಿಸಲಾಗಿದೆಯೋ ಆ ವಿಶಿಷ್ಟವಾದ ಸಮಗ್ರ ಬಹುಸಂಸ್ಕೃತಿಯ ( syncretic) ಸಾಮಾಜಿಕ ರಚನೆಯು ಹರಿದುಹೋಗುವ ಸಾಧ್ಯತೆಯಿದೆ. ಈ ಅಗಾಧವಾದ ಸಾಮಾಜಿಕ ಬೆದರಿಕೆಯನ್ನು ಎದುರಿಸುತ್ತಿರುವ ಸ೦ದರ್ಭದಲ್ಲಿ ನಿಮ್ಮ ಮೌನವು ಅತೀವ ಗಮನಾರ್ಹ ನಿಗೂಢವಾಗಿದೆ.
ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂಬ ನಿಮ್ಮ ಭರವಸೆಯಿಂದ ಧೈರ್ಯವನ್ನು ತೆಗೆದುಕೊಳ್ಳುತ್ತಾ ನಾವು ನಿಮ್ಮ ಆತ್ಮಸಾಕ್ಷಿಗೆ ಮನವಿ ಮಾಡುತ್ತೇವೆ. 'ಆಜಾದಿ ಕಾ ಅಮೃತ್ ಮಹೋತ್ಸವ'ದ ಈ ವರ್ಷದಲ್ಲಿ, ನಿಮ್ಮ ಪಕ್ಷದ ನಿಯಂತ್ರಣದಲ್ಲಿರುವ ಸರ್ಕಾರಗಳು ತುಂಬಾ ಪರಿಶ್ರಮದಿಂದ ನಡೆಸುತ್ತಿರುವ ದ್ವೇಷದ ರಾಜಕಾರಣವನ್ನು ಕೊನೆಗೊಳಿಸಲು ನೀವು, ಪಕ್ಷಪಾತದ ಪರಿಗಣನೆಗಿಂತ ಮೇಲಕ್ಕೆ ಏರುತ್ತಾ, ಕರೆ ನೀಡುತ್ತೀರಿ ಎಂಬುದು ನಮ್ಮ ಮನೋದತ್ತ ಆಶಯವಾಗಿದೆ. ನಮ್ಮ ಸ್ಥಾಪಕ ಪಿತಾಮಹರು ಕಲ್ಪಿಸಿಕೊಂಡ ಮತ್ತು ಹೋರಾಡಿದ ಭಾರತದ ಕಲ್ಪನೆಯು ಅಭಿವೃದ್ಧಿ ಹೊಂದಲು ಭ್ರಾತೃತ್ವ ಮತ್ತು ಕೋಮು ಸೌಹಾರ್ದತೆಯ ವಾತಾವರಣದ ಅಗತ್ಯವಿದೆ. ದ್ವೇಷವು ದ್ವೇಷವನ್ನು ಹುಟ್ಟುಹಾಕುತ್ತದೆ, ಮತ್ತು ಅದರ ಫಲವಾಗಿ ಆ ಕಲ್ಪನೆಯು ಬದುಕಲು ಪರಿಸರವನ್ನು ತುಂಬಾ ಕ್ಲಿಷ್ಟಕರವಾಗಿ ಮಾಡುತ್ತದೆ.
ಸತ್ಯಮೇವ ಜಯತೆ
ನಿಮ್ಮ ,
ಸಾಂವಿಧಾನಿಕ ನಡವಳಿಕೆ ಗುಂಪು (108 ಸಹಿದಾರರು)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ