ನೋಮ್ ಚೋಮ್ಸ್ಕಿ ಅವರೊಂದಿಗೆ ಸಂಭಾಷಣೆ 

ಭಾಗ 3: ಪಾಕಿಸ್ತಾನ, ಭಾರತ, ಧರ್ಮ ಮತ್ತು ಹವಾಮಾನ ಬದಲಾವಣೆ

ಹಸನ್ ಮಿರ್ಜಾರಿಂದ ಮೂರು-ಭಾಗದ ಸಂದರ್ಶನ

ಜನವರಿ 17, 2020. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್.

ಪ್ರೊಫೆಸರ್ ನೋಮ್ ಚೋಮ್ಸ್ಕಿ ಅವರೊಂದಿಗಿನ ಈ ಸಂಭಾಷಣೆಯ ಭಾಗ 1 ಅಮೇರಿಕನ್ ಸಂಸ್ಕೃತಿ ಮತ್ತು ರಾಜಕೀಯವನ್ನು ಒಳಗೊಂಡಿದೆ. ಭಾಗ 2 ವಿಜ್ಞಾನ, ಭಾಷೆ ಮತ್ತು ಮಾನವ ಸ್ವಭಾವದ ಜೊತೆಗೆ ಮಾಧ್ಯಮ, ಬುದ್ಧಿಜೀವಿಗಳು ಮತ್ತು ಸಾಮ್ರಾಜ್ಯಶಾಹಿಯನ್ನು ಒಳಗೊಂಡಿದೆ.

 ಭಾಗ 3 ಭಾರತೀಯ ಉಪಖಂಡ, ಹವಾಮಾನ ಬದಲಾವಣೆ ಮತ್ತು ವಲಸೆ ಬಿಕ್ಕಟ್ಟಿನ ಬಗ್ಗೆ ಚರ್ಚೆಯೊಂದಿಗೆ ಧರ್ಮ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ ಸಂಭಾಷಣೆಯನ್ನು ಒಳಗೊಂಡಿದೆ.

~

ಧರ್ಮ ಮತ್ತು ಆಧ್ಯಾತ್ಮಿಕತೆ

ಹಾಸನ ಮಿರ್ಜಾ (HM): ನೀವು ಬೆಳೆಯುತ್ತಿರುವಾಗ ಧರ್ಮವು ನಿಮ್ಮ ಮೇಲೆ ದೊಡ್ಡ ಪ್ರಭಾವ ಬೀರಿದೆಯೇ? ನಿಮ್ಮ ಕುಟುಂಬದ ಸದಸ್ಯರು ಧಾರ್ಮಿಕರಾಗಿದ್ದರೆ?

 

ನೋಮ್ ಚೋಮ್ಸ್ಕಿ (NC): ಯೆಹೂದಿಮತ (ದೊಡ್ಡ ಪ್ರಭಾವ) ಮಾಡಿತು, ಧರ್ಮ ಪ್ರಭಾವ ಮಾಡಲಿಲ್ಲ. ನನ್ನ ಹೆತ್ತವರು ಸಾಮಾನ್ಯ ಅರ್ಥದಲ್ಲಿ ಧಾರ್ಮಿಕರಾಗಿರಲಿಲ್ಲ. ಯಹೂದಿ/ಹೀಬ್ರ್ಯೂ  ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದರು, ಸ್ವಲ್ಪ ಆಚರಿಸುತ್ತಿದ್ದರು.

 

HM: ಸಾವಿನ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮತ್ತು ನೀವು ಮರಣಾನಂತರದ ಜೀವನವನ್ನು ನಂಬುತ್ತೀರಾ?

 

NC: ಯುವ ಹದಿಹರೆಯದವನಾಗಿದ್ದಾಗ, ನಾನು ವೈಯಕ್ತಿಕ ಪ್ರಜ್ಞೆಯ ಅಂತ್ಯದ ಬಗ್ಗೆ ಚಿಂತಿಸುತ್ತಿದ್ದೆ, ಆದರೆ ನಂತರ ನನ್ನ ಜೀವನದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದೇನೆ ಮತ್ತು ಈಗಲೂ ಮಾಡುತ್ತಿದ್ದೇನೆ. ಮರಣಾನಂತರದ ಜೀವನ ಅಥವಾ ದೈವಿಕ ನ್ಯಾಯವನ್ನು ನಂಬಲು ಯಾವುದೇ ಕಾರಣವನ್ನು ಕ೦ಡಿಲ್ಲ. 

HM: ನನ್ನ ಓದು ಹೇಳುತ್ತದೆ 'ಧರ್ಮ' ಎಂದರೆ ವಿಭಿನ್ನ ಜನರಿಗೆ ವಿಭಿನ್ನ ವಿಷಯಗಳು, ಪರಿಕಲ್ಪನೆಗಳು, ವಿಚಾರಗಳು. ಮತ್ತು ಇದು ಉಪಯುಕ್ತ ತಿಳುವಳಿಕೆಯ ಮಾರ್ಗ  ಮತ್ತು ಸಮುದಾಯ ನಿರ್ಮಾಣ ಸಾಧನವಾಗಿರಬಹುದು.

 

NC: ಸಂಪೂರ್ಣವಾಗಿ ಒಪ್ಪುತ್ತೇನೆ. ನಾನು ಅನೇಕ ವರ್ಷಗಳಿಂದ ಇದೇ ರೀತಿಯ ವಿಷಯಗಳನ್ನು, ಆದರೆ ಆಗಾಗ್ಗೆ ವಿಭಿನ್ನ ಉದಾಹರಣೆಗಳೊಂದಿಗೆ,  ಹೇಳುತ್ತಿದ್ದೇನೆ.

 

HM: ನನ್ನ ಅಭಿಪ್ರಾಯದಲ್ಲಿ, ಧರ್ಮದ ಅರಿವು-ಪರಿಹಾರ ಒದಗಿಸುವ  ಸ್ವಭಾವ ಮತ್ತು ಅಬ್ರಹಾಮಿಕ್ ಧರ್ಮಗಳ ಮೂಲಭೂತ ಪ್ರತಿಬಂಧಗಳು ಅರ್ಥಪೂರ್ಣವಾಗಿವೆ ಮತ್ತು ಸ್ಟೀಫನ್ ಪಿಂಕರ್, ರಿಚರ್ಡ್ ಡಾಕಿನ್ಸ್, ಜೋಸೆಫ್ ಸ್ಟಿಟ್ಗ್ಲಿಟ್ಜ್ ಮತ್ತು ಪಶ್ಚಿಮದ ಇತರ ಜನಪ್ರಿಯ ವ್ಯಕ್ತಿಗಳ ದಪ್ಪ ಪುಸ್ತಕಗಳಿಗಿಂತ ಜನರು ಬದುಕಲು ಸಹಾಯ ಮಾಡುತ್ತವೆ.  ಜಗತ್ತಿನಲ್ಲಿ ಎಲ್ಲರೂ ಬದುಕಲು ಮತ್ತು ಅಭಿವೃದ್ಧಿ ಹೊಂದಲು ಇಷ್ಟು ಓದಬೇಕೆ ಮತ್ತು ಇಷ್ಟು ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕೇ?  'ಏಕೆ' ಎನ್ನುವ ಪ್ರಶ್ನೆ(ತಿಳುವಳಿಕೆ)ಯ ಮೇಲೆ ಮಿತಿಗಳನ್ನಿಟ್ಟು 'ಹೇಗೆ' (ಬದುಕುಳಿಯುವದು,  ಕೆಲಸಗಳನ್ನು ಮಾಡುವುದು, ನಂಬಿಕೆ) ಎನ್ನುವದರ ಮೇಲೆ ಹೆಚ್ಚು ಗಮನಹರಿಸಬೇಕು ಅಲ್ಲವೆ ? 

 

NC: ಜನರು ಪ್ರಮುಖ ಧರ್ಮಗಳಲ್ಲಿ ಕಂಡುಬರುವ ವ್ಯಾಪಕ ಶ್ರೇಣಿಯ ನಂಬಿಕೆಗಳಿಂದ ತಮ್ಮ ಜೀವನವನ್ನು ಸುಧಾರಿಸುವ ರೀತಿಯಲ್ಲಿ ಆರಿಸಬಹುದಾದರೆ, ಇತರರೊಂದಿಗೆ ಹಸ್ತಕ್ಷೇಪ ಮಾಡದಿರುವವರೆಗೆ, ಆಕ್ಷೇಪಿಸಲು   ಯಾವುದೇ ಕಾರಣವಿಲ್ಲ. ಆದರೆ ನಿಲುವಿನಲ್ಲಿ ವಿಜ್ಞಾನದೊಂದಿಗೆ ಯಾವುದೇ ಸಂಘರ್ಷವಿಲ್ಲ, ಅಥವಾ ಇರಬಾರದು.

 

HM: ಕಳೆದ ಕೆಲವು ವರ್ಷಗಳಲ್ಲಿ ಉಗ್ರಗಾಮಿ 'ಹೊಸ ನಾಸ್ತಿಕತೆ' ಆಂದೋಲನವು ಪಾಶ್ಚಿಮಾತ್ಯ ಜಗತ್ತಿನಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಈ ಜನರು 'ವೈಜ್ಞಾನಿಕತೆ' (ವೈಜ್ಞಾನಿಕ ಜ್ಞಾನ ಮತ್ತು ತಂತ್ರಗಳ ಶಕ್ತಿಯಲ್ಲಿ ಅತಿಯಾದ ನಂಬಿಕೆ)ಯ ತಪ್ಪಿತಸ್ಥರೇ?

 

NC: ನಾನು "ಹೊಸ ನಾಸ್ತಿಕತೆ" ಯನ್ನು ಟೀಕಿಸಿದ್ದೇನೆ ಆದರೆ ವಿಭಿನ್ನ ಆಧಾರದ ಮೇಲೆ. ಸಮಸ್ಯೆ 'ವೈಜ್ಞಾನಿಕತೆ' ಎಂದು ನಾನು ಭಾವಿಸುವುದಿಲ್ಲ. ವಿಜ್ಞಾನದಿಂದ ನಿರಾಕರಿಸಲ್ಪಟ್ಟಂತೆ ಕಂಡುಬರುವ ವಸ್ತುಗಳನ್ನು ಪವಿತ್ರ ಗ್ರಂಥಗಳಲ್ಲಿ ಯಾವುದೇ ಹದಿಹರೆಯದವರು ಸುಲಭವಾಗಿ ಕಾಣಬಹುದು. ವಾಸ್ತವವಾಗಿ, ಈ ವಿಷಯಗಳನ್ನು ಮಧ್ಯಕಾಲೀನ ತತ್ತ್ವಶಾಸ್ತ್ರದಲ್ಲಿ ಎಲ್ಲಾ ಅಬ್ರಹಾಮಿಕ್ ಧರ್ಮಗಳಲ್ಲಿ, ಆಳವಾಗಿ ಚರ್ಚಿಸಲಾಗಿದೆ, ಆದರೆ ಎಲ್ಲವನ್ನೂ ಹೊಸ ನಾಸ್ತಿಕರು ನಿರ್ಲಕ್ಷಿಸಿದ್ದಾರೆ. ಆದರೆ 'ಹೊಸ ನಾಸ್ತಿಕ'ರ ಆಳವಾದ ದೋಷವೆಂದರೆ ಜನರ ಜೀವನಕ್ಕೆ ಅತ್ಯಂತ ಮುಖ್ಯವಾದ ಮತ್ತು ಗೌರವಿಸಬೇಕಾದ ನಂಬಿಕೆಗಳನ್ನು, ಅವರ ಪ್ರಾಯೋಗಿಕ ಸಿಂಧುತ್ವದ ಬಗ್ಗೆ ನಾವು ಯೋಚಿಸುವದು ಹೇಗೇ ಇದ್ದರೂ,  ಅಪಹಾಸ್ಯದಿಂದ ತಳ್ಳಿಹಾಕುವುದು. ತಾಯಿಯು ತನ್ನ ಸಾಯುತ್ತಿರುವ ಮಗುವನ್ನು ಸ್ವರ್ಗದಲ್ಲಿ ನೋಡುವದಾಗಿ ಆಶಿಸಿದರೆ, ಅವಳಿಗೆ ಜ್ಞಾನಶಾಸ್ತ್ರದ  ಪಾಠಗಳನ್ನು ನೀಡುವುದು ನನ್ನ ಕೆಲಸವಲ್ಲ.

 

 

HM: ಸಮಾಜ ವಿಜ್ಞಾನದ ಅನೇಕ ತಜ್ಞರು, 'ಹೊಸ ನಾಸ್ತಿಕರು' ಮತ್ತು ಲಾರೆನ್ಸ್ ಕ್ರೌಸ್‌ನಂತಹ ಪ್ರಸಿದ್ಧ ನಾಸ್ತಿಕರು ಧರ್ಮ ಅಥವಾ ನಂಬಿಕೆ ಸಹ ಅಪ್ರಸ್ತುತ ಎಂದು ಪ್ರತಿಪಾದಿಸುತ್ತಲೇ ಇರುತ್ತಾರೆ ಏಕೆಂದರೆ ನಾವು ಈಗ ಶೋಧನೆಯ ಮೂಲಕ ಎಲ್ಲವನ್ನೂ ತಿಳಿದುಕೊಳ್ಳಬಹುದು ಮತ್ತು ಮಾನವ ವ್ಯವಹಾರಗಳ ಮತ್ತು ಪಕ್ಷಪಾತಗಳ ವಿಷಯದಲ್ಲಿ ‘ಮಾದರಿ’ಗಳನ್ನು ನಿರ್ಮಿಸಿ ಎಲ್ಲವನ್ನೂ ವಿವರಿಸಬಹುದು. ಅನೇಕ ಬಾರಿ ಸಮಾಜ ವಿಜ್ಞಾನದಲ್ಲಿ (ಮಾನವಶಾಸ್ತ್ರದಂತಹ) ಸಂಶೋಧನೆಯನ್ನು ಪುನರುತ್ಪಾದಿಸಲಾಗುವುದಿಲ್ಲ ಆದರೂ ಇನ್ನೂ ಅದು ವೈಜ್ಞಾನಿಕವಾಗಿದೆ ಎಂದು ಹೇಳಲಾಗುತ್ತದೆ. 

NC:  ಮಾನವಶಾಸ್ತ್ರದ ಬಗ್ಗೆ,  ಬಳಸಿಕೊಳ್ಳಬಹುದಾದ ಉತ್ತಮ ಕೆಲಸಗಳಿವೆ ಮತ್ತು ನೀವು ವಿವರಿಸುವದೂ (ಕಳಪೆ) ಬಹಳಷ್ಟು ಇವೆ. "ಹೊಸ ನಾಸ್ತಿಕರು" ಸಾಮಾನ್ಯವಾಗಿ ವಿಜ್ಞಾನದ ಪ್ರತಿನಿಧಿಗಳು ಎಂದು ನಾನು ಭಾವಿಸುವುದಿಲ್ಲ . ನಿರ್ದಿಷ್ಟವಾಗಿ ಕ್ರೌಸ್ ಮುಕ್ತ ಮನಸ್ಸಿನವನು.

 

 

HM: ಸಮಕಾಲೀನ ಪಾಶ್ಚಿಮಾತ್ಯ ಚಿಂತನೆಯಲ್ಲಿ ಧರ್ಮವು ತತ್ತ್ವಶಾಸ್ತ್ರಕ್ಕೆ ಏಕೆ ಪೂರಕವಾಗಿ ಇರಲಾರದು?

 

NC: ಅನೇಕ ಜನರಿಗೆ (ಇವೆರಡೂ ಪೂರಕ) ಆಗಿವೆ - ಆದರೆ  ಧಾರ್ಮಿಕ ಸಿದ್ಧಾಂತಗಳು ಪ್ರಪಂಚದ ಪ್ರಾಯೋಗಿಕ ಶೋಧನೆಯನ್ನು ಉಲ್ಲಂಘಿಸದಿರುವುದರ ಮಟ್ಟಿಗೆ.

 

HM: ಜಗತ್ತು ಧರ್ಮದ ಕಡೆಗೆ ಅಥವಾ ದೂರ ಹೋಗುತ್ತಿದೆಯೇ?

 

NC: ಕೆಲವು ವಲಯಗಳಲ್ಲಿ ಧರ್ಮದ ಪುನರುಜ್ಜೀವನವಿದೆ, ಆದರೆ ನಂಬಿಕೆಯಿಲ್ಲದವರೆಂದು ಸ್ವಯಂ-ಗುರುತಿಸಿಕೊಳ್ಳುವವರ ಹೆಚ್ಚಳವೂ ಇದೆ.

ಭಾರತೀಯ ಉಪಖಂಡ, ಹವಾಮಾನ ಬದಲಾವಣೆ ಮತ್ತು ವಲಸೆಯ ಬಿಕ್ಕಟ್ಟು

HM: ಭಾರತೀಯ ಉಪಖಂಡದಲ್ಲಿ, ನಾವು ಇನ್ನೂ ವಿನ್‌ಸ್ಟನ್ ಚರ್ಚಿಲ್ ಅವರ ಪ್ರಬಂಧಗಳು ಮತ್ತು ಭಾಷಣಗಳನ್ನು ಓದುತ್ತೇವೆ, ಅವನ್ನು ಸುಂದರವಾಗಿ ಬರೆಯಲಾಗಿದೆ. ನಾವು ಇನ್ನೂ  ಮಾನಸಿಕವಾಗಿ ವಸಾಹತುಶಾಹಿ ಜನರಾಗಿದ್ದೇವೆ ಎಂದು ತೋರುತ್ತದೆ.

 

NC: ಭಾರತಕ್ಕೆ ಭೇಟಿ ನೀಡಿದಾಗ ಮಾನಸಿಕ ವಸಾಹತುಶಾಹಿಯ ವೈಯಕ್ತಿಕ ಅನುಭವವನ್ನು ನಾನು ಹೊಂದಿದ್ದೇನೆ, ಅನೇಕ ಬಾರಿ, ಕೆಲವೊಮ್ಮೆ ಅತಿ ಆಶ್ಚರ್ಯಕರವಾಗಿ.

 

HM: ಸಾಮಾನ್ಯ ಆಂಗ್ಲೋ-ಅಮೆರಿಕನ್ ಪ್ರಚಾರವೆಂದರೆ ಬ್ರಿಟಿಷರು ಸ್ಪ್ಯಾನಿಷ್, ಫ್ರೆಂಚ್, ಬೆಲ್ಜಿಯನ್, ಪೋರ್ಚುಗೀಸ್, ಜಪಾನೀಸ್ ಸಹವರ್ತಿಗಳಿಗಿಂತ ತಮ್ಮ ವಸಾಹತುಗಳಲ್ಲಿದ್ದ ಭಾರತ ಮತ್ತು ಆಫ್ರಿಕಾದಲ್ಲಿ ಹೆಚ್ಚು ಸೌಮ್ಯರಾಗಿದ್ದರು. ಆದರೆ, ವಾಸ್ತವವೆಂದರೆ ಅದು ಮೊದಲಿನಿಂದಲೂ ರಕ್ತ-ತೋಯ್ದದಾಗಿತ್ತು, ಆ್ಯಡಮ್ ಸ್ಮಿತ್ ಗೆ ಇದರ ಬಗ್ಗೆ ಗೊತ್ತಿತ್ತು ಎಂದು ನೀವು ಹೇಳಿದಂತೆ. ಈ ಅಸಂಬದ್ಧ ವರ್ಣನೆಗಳನ್ನು ಒಪ್ಪಿಕೊಳ್ಳುವ ಮತ್ತು ಅವುಗಳನ್ನು ಸಕ್ರಿಯವಾಗಿ ಶಾಶ್ವತಗೊಳಿಸುವ ಅನೇಕ ದಕ್ಷಿಣ ಏಷ್ಯಾದ ಇ೦ಗ್ಲಿಷ್-ಆರಾಧಕರಿದ್ದಾರೆ. ಅವರು ಸಾಕಷ್ಟು ಅಧೀನರಾಗಿದ್ದಾರೆ.

 

NC: ನಿಮ್ಮ ಪತ್ರವು ಸುಮಾರು 10 ವರ್ಷಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದನ್ನು ನೆನಪಿಸುತ್ತದೆ. ನಾನು ಪಶ್ಚಿಮ ಬಂಗಾಳದಲ್ಲಿದ್ದೆ, ಆಗ ಸರ್ಕಾರವನ್ನು ನಡೆಸುತ್ತಿದ್ದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) (ಸಿಪಿಐ-ಎಂ) ನಿಂದ ಆಹ್ವಾನಿತನಾಗಿದ್ದೆ. ಒಂದು ದಿನ ಅವರು ನನ್ನನ್ನು ಮ್ಯೂಸಿಯಂಗೆ ಕರೆದೊಯ್ದರು, ಅದನ್ನು ವಿಕ್ಟೋರಿಯಾ ಸ್ಮಾರಕ ಎಂದು ಕರೆಯಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ನನ್ನ ಜೊತೆಯಲ್ಲಿ ಪ್ರಮುಖ ಎಡ ಕಾರ್ಯಕರ್ತರು ಇದ್ದರು.  ಸಮೀಪಿಸಿದಾಗ,  ಮೊದಲು ನೋಡುವುದು ಬಂಗಾಳದ ನಾಶವನ್ನು ಪ್ರಾರಂಭಿಸಿದ ಕ್ರೂರ ಕೊಲೆಗಡುಕ ರಾಬರ್ಟ್ ಕ್ಲೈವ್‌ನ ಪ್ರತಿಮೆ. ಮ್ಯೂಸಿಯಂನಲ್ಲಿ, ಅವರು ನನ್ನನ್ನು ಹಜಾರಗಳ  ಮೂಲಕ  ಭಾರತೀಯರನ್ನು ಥಳಿಸಿ ಅವಮಾನಕ್ಕೊಳಗಾಗಿಸುವ  ಭೀಕರವಾದ ವರ್ಣಚಿತ್ರಗಳ ಮೂಲಕ ಕರೆದೊಯ್ದರು ಮತ್ತು ಅಂತಿಮವಾಗಿ, ಅವರು ನನ್ನನ್ನು ವಿಕ್ಟೋರಿಯಾ ರಾಣಿಯ ಅದ್ಭುತ ಆಳ್ವಿಕೆಯನ್ನು ಆಚರಿಸುವ ‘ಚಹಾ ಕೋಣೆ’ಗೆ  ಕರೆದೊಯ್ದರು -  ಇದೆಲ್ಲವನ್ನೂ ಗೌರವಪೂರ್ವಕವಾಗಿ ಮಾಡಲಾಯಿತು. ನನಗೆ ನಂಬಲಾಗಲಿಲ್ಲ. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ.

ಆದರೆ ಇಂಗ್ಲೆಂಡ್‌ನಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ. ಎರಡು ವರ್ಷಗಳ ಹಿ೦ದೆ ಇತಿಹಾಸಕಾರ ಬರ್ನಾರ್ಡ್ ಪೋರ್ಟರ್ ಬ್ರಿಟಿಷ್ ಅಡಳಿತದ ಬಗ್ಗೆ ಇತ್ತೀಚಿನ ಹಲವು ಪುಸ್ತಕಗಳನ್ನು ವಿಮರ್ಶಿಸಿ  ಟೈಮ್ಸ್ ಲಿಟರರಿ ಸಪ್ಲಿಮೆಂಟ್‌ನಲ್ಲಿ ‘ಪೂರ್ಣ ವಿವರಗಳು ಹೊರಬ೦ದರೆ ಬ್ರಿಟಿಷರು  ೨೦ ನೇ ಶತಮಾನದ ನರಹಂತಕರಲ್ಲಿ ಸ್ಥಾನ ಪಡೆಯುತ್ತಾರೆ ‘ ಎಂದು ಬರೆದಿದ್ದಾರೆ.

 

HM: ಇದಕ್ಕೆ ನನ್ನ ಬಳಿ ವಿವರಣೆ ಇದೆ. ಉಪಖಂಡದಲ್ಲಿ ಜೀವನ ಪರಿಸ್ಥಿತಿಗಳು ತುಂಬಾ ಕೆಟ್ಟದಾಗಿದೆ. ಜಾತಿ ವ್ಯವಸ್ಥೆಯ ಉತ್ಪನ್ನವಾಗಿರುವ ಅಸಂಖ್ಯಾತ ಸಾಮಾಜಿಕ ಶ್ರೇಣಿಗಳ ಮೂಲಕ ಜನರು ಪರಸ್ಪರ ಗುಲಾಮರಾಗಿದ್ದಾರೆ. ಪಲಾಯನವಾದದ ಸಲುವಾಗಿ, ನಮ್ಮ ಅಧಿಪತಿಗಳಿಂದ ನಮಗೆ ಉಣಬಡಿಸಲಾದ ಬ್ರಿಟಿಷ್ ರಾಜ್‌ನ ರಮ್ಯರೂಪದ ಆವೃತ್ತಿಯ ಕಡೆಗೆ ನಾವು ನೋಡುತ್ತೇವೆ.

 

NC: ಆದರೂ, ನಾನು ಕಂಡ  ಭಾರತೀಯ ಅವನತಿ ಮತ್ತು ಅವಮಾನದ ಸಂಕೇತಗಳನ್ನು ಗಣ್ಯ ಮತ್ತು ಸಾಕಷ್ಟು ಬಲ್ಲವರಾದ ಸಿಪಿಐ(ಎಂ) ವ್ಯಕ್ತಿಗಳು  ಪರಿಗಣಿಸಿದ ರೀತಿಗಳನ್ನು  ಅರ್ಥಮಾಡಿಕೊಳ್ಳಲು ನನಗೆ ಕಷ್ಟವಾಗುತ್ತಿದೆ.

 

HM: ನೀವು 2000 ರ ದಶಕದಲ್ಲಿ ದಕ್ಷಿಣ ಏಷ್ಯಾಕ್ಕೆ ಭೇಟಿ ನೀಡಿದ್ದೀರಿ ಮತ್ತು ಕಲ್ಕತ್ತಾ ಮತ್ತು ಲಾಹೋರ್‌ನಲ್ಲಿ ಮಾತುಕತೆಗಳನ್ನು ನೀಡಿದ್ದೀರಿ. ಎರಡೂ ದೇಶಗಳಲ್ಲಿನ ಬಡತನದ ಮಟ್ಟಗಳ ಬಗ್ಗೆ ನಿಮ್ಮ ಅನಿಸಿಕೆಗಳೇನು?

 

NC: ಭೇಟಿಗಳು ಸಂಕ್ಷಿಪ್ತವಾಗಿದ್ದವು ಮತ್ತು ನಾನು ಆಳವಾಗಿ ಅನ್ವೇಷಿಸಲು ಸಾಧ್ಯವಾಗಲಿಲ್ಲ. ಆದರೆ ಅಗಾಧವಾದ ಶ್ರೀಮಂತಿಕೆಯ ಮಧ್ಯದಲ್ಲಿರುವ ಶೋಚನೀಯ ಬಡತನವು ಲಾಹೋರ್‌ಗಿಂತ ಕಲ್ಕತ್ತಾದಲ್ಲಿ (ಮತ್ತು ನಾನು ಭಾರತದಲ್ಲಿ ಪ್ರಯಾಣಿಸಿದ ಬೇರೆಡೆ) ಹೆಚ್ಚು ಗಮನಾರ್ಹವಾಗಿದೆ.

 

HM: ನಮ್ಮ ಜನಸಂಖ್ಯೆಯ ಮಟ್ಟವನ್ನು ಹೆಚ್ಚಿಸಲು ಪಾಕಿಸ್ತಾನದ ಧಾರ್ಮಿಕ ಹಕ್ಕು ಯಾವಾಗಲೂ ನಮ್ಮನ್ನು ಉತ್ತೇಜಿಸುತ್ತದೆ. ಹೆಚ್ಚಾಗಿ ಜನಸಂಖ್ಯಾ ಸ್ಫೋಟದಿಂದಾಗಿ ದೇಶವು ವೇಗವಾಗಿ ಕುಸಿಯುತ್ತಿದೆ, 

NC: ಪಾಕಿಸ್ತಾನವು ಅನೇಕ ರೀತಿಯಲ್ಲಿ ದುರಂತ ಕತೆಯಾಗಿದೆ. ಮತ್ತು ಈ ಪ್ರತಿಗಾಮಿ ಶಕ್ತಿಗಳು ಅಸ್ತಿತ್ವದಲ್ಲಿವೆ ಮತ್ತು ಅವನ್ನು ಹೇಗಾದರೂ ಎದುರಿಸಬೇಕಾಗುತ್ತದೆ. ದುರದೃಷ್ಟವಶಾತ್, ಅಮೆರಿಕಾದ  ಪಾತ್ರವು ಭಯಾನಕವಾಗಿದೆ. ಪ್ರಬಲ ಮೂಲಭೂತವಾದಿ ಧಾರ್ಮಿಕ ಗು೦ಪುಗಳು ಮತ್ತು ಕ್ಯಾಥೋಲಿಕ್ ಚರ್ಚ್‌ನ ಪ್ರಭಾವದ ಅಡಿಯಲ್ಲಿ, ಕುಟುಂಬ ಯೋಜನೆಗೆ ಸಹ ಅಮೆರಿಕವು ಸಹಾಯ ನೀಡುವದನ್ನು ನಿರ್ಬಂಧಿಸುತ್ತದೆ.

 

HM: ಜಾಗತಿಕ ತಾಪಮಾನ ಏರಿಕೆ ಮತ್ತು ಜನಸಂಖ್ಯಾ ಸ್ಫೋಟದಂತಹ ಕೆಲವು ಪ್ರಮುಖ ಬೆದರಿಕೆಗಳು ಅಲ್ಲಿನ ಜನರು ಎದುರಿಸುತ್ತಿರುವ ವಾಸ್ತವವನ್ನು ಗಮನಿಸಿದರೆ ಭಾರತೀಯ ಉಪಖಂಡ ಮತ್ತು ಅದರ ಜನರ ಭವಿಷ್ಯ ಏನಾಗಬಹುದು ಎಂದು ನೀವು ಯೋಚಿಸುತ್ತೀರಿ?

 

NC: ದಕ್ಷಿಣ ಏಷ್ಯಾದ ಭವಿಷ್ಯ,  ಕಠೋರವಾಗಿರಬಹುದು ಎಂದು ನಾನು ಹೆದರುತ್ತೇನೆ. ಗಂಭೀರ ಕ್ರಮಗಳನ್ನು ಕೈಗೊಳ್ಳದ ಹೊರತು  ಜಾಗತಿಕ ತಾಪಮಾನ ಏರಿಕೆಯೊ೦ದೇ ಈ ಸ್ಥಳಗಳನ್ನು  ವಾಸ್ತವಿಕವಾಗಿ ವಾಸಯೋಗ್ಯ ಆಗದ೦ತೆ ಮಾಡ ಬಹುದು.  ಬಡತನ, ವಿಶೇಷವಾಗಿ ಭಾರತದಲ್ಲಿ, ಸಂಪೂರ್ಣವಾಗಿ ಆಘಾತಕಾರಿಯಾಗಿದೆ. ಪಾಕಿಸ್ತಾನದ ಬಗ್ಗೆ ನಾನು ಚರ್ಚಿಸಬೇಕಾಗಿಲ್ಲ. ಏತನ್ಮಧ್ಯೆ, ಸಭ್ಯ ಬದುಕುಳಿಯುವ ಸಮಸ್ಯೆಗಳನ್ನು ಪರಿಹರಿಸುವ ಬದಲು ನಾಯಕರು ಹಣವನ್ನು ವಿನಾಶದ ವಿಧಾನಗಳಿಗಾಗಿ ಸುರಿಯುತ್ತಾರೆ ಮತ್ತು ನಿರಂತರವಾಗಿ ಯುದ್ಧವನ್ನು ಎದುರಿಸುತ್ತಿದ್ದಾರೆ. ಪ್ರದೇಶದಲ್ಲಿ ಶ್ರೀಮಂತ ಸಂಪನ್ಮೂಲಗಳಿವೆ - ಬೌದ್ಧಿಕ, ಸಾಂಸ್ಕೃತಿಕ, ಆರ್ಥಿಕ, ಇನ್ನೂ ಹೆಚ್ಚು. ಆದರೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಲು ಹೆಚ್ಚು ಸಮಯವಿಲ್ಲ. ಪ್ರಸ್ತುತ ಹಾದಿಯಲ್ಲಿ ಮು೦ದುವರೆದರೆ, ದಕ್ಷಿಣ ಏಷ್ಯಾದ ಬಹುಪಾಲು ಶೀಘ್ರದಲ್ಲೇ ಸಸ್ತನಿಗಳಿಗೆ ವಾಸಿಸಲು ಅಸಾಧ್ಯವಾಗುವದು.

 

HM: ಅರಬ್ ಪ್ರಪಂಚವು ಹವಾಮಾನ ಬಿಕ್ಕಟ್ಟಿನಿಂದ ಬದುಕುಳಿಯಬಹುದೇ?

 

NC: ಅರಬ್ ಪ್ರಪಂಚದ ಬಗ್ಗೆ ಅಷ್ಟು ಖಚಿತವಾಗಿಲ್ಲ. ಶಾಖದ ಕಾರಣದಿಂದಾಗಿ ಹೆಚ್ಚಿನವು ವಾಸಯೋಗ್ಯವಲ್ಲದ ಸಾಧ್ಯತೆಯಿದೆ.

 

HM: ಹವಾಮಾನ ಬದಲಾವಣೆಯು ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಹಾನಿಯನ್ನುಂಟುಮಾಡುತ್ತದೆ ಎಂಬ ಅಂಶವನ್ನು ಗಮನಿಸಿದರೆ, ಪಾಶ್ಚಿಮಾತ್ಯ ದೇಶಗಳು ಹವಾಮಾನ ನಿರಾಶ್ರಿತರನ್ನು ತಮ್ಮ ದೇಶಗಳಲ್ಲಿ ಪುನರ್ವಸತಿ ಮಾಡಲು ಅನುಮತಿಸಬೇಕು ಎಂದು ನೀವು ಭಾವಿಸುತ್ತೀರಾ?

 

NC: ಸ್ಪಷ್ಟವಾಗಿ ಇದೇ ಆಗಬೇಕು. ಆದರೆ ಯುರೋಪ್, ಯುಎಸ್ ಮತ್ತು ಆಸ್ಟ್ರೇಲಿಯಾಗಳು ಇಂದು ನಿರಾಶ್ರಿತರ ಒಂದು ಸಣ್ಣ ಹರಿವನ್ನು - ಜನರು ಯುಎಸ್-ಯುರೋಪಿಯನ್ ಅಪರಾಧಗಳ ವಿನಾಶದಿಂದ ಪಲಾಯನ ಮಾಡುತ್ತಿದ್ದಾರೆ - ಹೇಗೆ ಪರಿಗಣಿಸುತ್ತಿವೆ ಎಂಬುದನ್ನು ನೋಡಿ  .

 

HM: ಮುಂಬರುವ ದಶಕಗಳಲ್ಲಿ ಏಷ್ಯ, ಆಫ್ರಿಕ, ದಕ್ಷ್ಢಿಣ ಅಮೆರಿಕಗಳ (“ಗ್ಲೋಬಲ್ ಸೌತ್’)  ಜನರ ಪ್ರವಾಹವು  ಸೃಷ್ಟಿಸಲ್ಪಡುವದಿದೆ;  ಮಹಾ ಪ್ರಮಾಣದಲ್ಲಿ ಒಂದು ಪ್ರಮುಖ ಮಾನವೀಯ ದುರಂತವು ದಾರಿಯಲ್ಲಿದೆ ಎಂದು ನಾನು ಹೆದರುತ್ತೇನೆ. ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶವೂ ಹೆಚ್ಚು ತೊಂದರೆ ಅನುಭವಿಸುತ್ತದೆ.

 

ಎನ್‌ಸಿ: ಇದು ಒಂದು ಭಯಾನಕ ಕಥೆ ತಯಾರಿಕೆಯಲ್ಲಿದೆ. ಮತ್ತು ಏತನ್ಮಧ್ಯೆ, ‘ಗ್ಲೋಬಲ್ ಸೌತ್’ ಉರಿಯುತ್ತಿರುವಾಗ ಶಕ್ತಿಯುತರು  ಮಜಾ ಮಾಡುತ್ತಿದ್ದಾರೆ.

 

HM: ಹೆಚ್ಚಿನ ನಿರಾಶ್ರಿತರ ಹೊರೆಯನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಹೊರುತ್ತಿವೆ.

 

NC: ನಿರಾಶ್ರಿತರ ಹೊರೆಯ ಬಗ್ಗೆ ನೀವು ಸರಿಯಾಗಿ ಹೇಳಿದ್ದೀರಿ. ಪ್ರಮುಖ ನಿರಾಶ್ರಿತರನ್ನು ಸ್ವೀಕರಿಸುವ ರಾಷ್ಟ್ರಗಳು  ಕೀನ್ಯಾ, ಉಗಾಂಡಾ, ಬಾಂಗ್ಲಾದೇಶದಂತಹ ದೇಶಗಳು. ನಿರಾಶ್ರಿತರನ್ನು ದೂರವಿಡಲು ಯುರೋಪ್ ಟರ್ಕಿಗೆ ಲಂಚ ನೀಡಿತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಮಾನವೀಯ ನೆರವಿನ ನೆಪದಲ್ಲಿ ಅವರು ನೈಜರ್‌ನಲ್ಲಿಯೂ ಸಹ ಇದೇ ರೀತಿಯದ್ದನ್ನು ಮಾಡಿದ್ದಾರೆ ಎಂಬುದು ಕಡಿಮೆ ಪ್ರಸಿದ್ಧವಾಗಿದೆ. ರೇಗನ್ ವರ್ಷಗಳಲ್ಲಿ (ಮತ್ತು ಬಹಳ ಹಿಂದೆಯೇ), ಅಮೆರಿಕಾ ನಾಶಪಡಿಸಿದ  ಎಲ್ ಸಾಲ್ವಡಾರ್ ಮತ್ತು ಗ್ವಾಟೆಮಾಲಾ ದೇಶಗಳಿಗೆ ಅಮೆರಿಕ  ನಿರಾಶ್ರಿತರನ್ನು ಒತ್ತಾಯದಿ೦ದ ಕಳಿಸುತ್ತಿದೆ. ಪೋಪ್ ಫ್ರಾನ್ಸಿಸ್ ಹೇಳಿದಂತೆ, 'ನಿರಾಶ್ರಿತರ ಸಮಸ್ಯೆ ನಿರಾಶ್ರಿತರ ಬಿಕ್ಕಟ್ಟು ಅಲ್ಲ ಆದರೆ ಪಶ್ಚಿಮಕ್ಕೆ ನೈತಿಕ ಬಿಕ್ಕಟ್ಟು'. ಹವಾಮಾನ ನಿರಾಶ್ರಿತರು ನಮ್ಮ ಗ್ರಹದ ವಿನಾಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಲಾಯನ ಮಾಡಲು ಪ್ರಾರಂಭಿಸಿದಾಗ ಏನಾಗುತ್ತದೆ ಎಂದು ನಾನು ಊಹಿಸಲೂ ಸಾಧ್ಯವಿಲ್ಲ.

 

HM: ಅಭಿವೃದ್ಧಿ ಹೊಂದಿದ ಪ್ರಪಂಚದ ಅನೇಕ ಭಾಗಗಳು ಕಡಿಮೆ ಮಟ್ಟದ ಜನಸಂಖ್ಯಾ ಸಾಂದ್ರತೆಯೊಂದಿಗೆ ಸಾಕಷ್ಟು ಖಾಲಿಯಾಗಿವೆ, ಕೆಲವು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಜನಸಂಖ್ಯೆಯ ವರ್ಗಾವಣೆಯು ಸಮರ್ಥನೀಯವೇ?

 

NC: ನಾನು ಗಡಿಯಿಂದ ದೂರದಲ್ಲಿ ಅಲ್ಲದಿರುವ  ಟೂಸೊನ್ (Tucson ) ನಲ್ಲಿ ವಾಸಿಸುತ್ತಿದ್ದೇನೆ. ರಾಜ್ಯವು ಬಹುತೇಕ ಖಾಲಿಯಾಗಿದೆ. ನಾನು ಹಲವು ಬಾರಿ ಮಾಡಿದಂತೆ ಅಮೆರಿಕ ದೇಶದ  ಮೇಲೆ ವಿಮಾನದಲ್ಲಿ ಹಾರಿದಾಗ, ನೋಡುತ್ತಿರುವುದು ಬಹುತೇಕ ಖಾಲಿ ಜಾಗವನ್ನು. ಸಮಸ್ಯೆಯು ವಾಸ್ತವವಾಗಿ ಸ್ಥಳವಲ್ಲ. ಇದು ಮೊದಲ ದಿನದಿಂದಲೂ ಅಮೆರಿಕ ದೇಶದ ಸಂಸ್ಕೃತಿಯ ಪ್ರಬಲ ಲಕ್ಷಣವಾಗಿರುವ ಬಿಳಿಯ ಕ್ರಿಶ್ಚಿಯನ್ ಪ್ರಾಬಲ್ಯವನ್ನು ಕಳೆದುಕೊಳ್ಳುವ ಭಯವಾಗಿದೆ. ಜಗತ್ತಿನ ಅತ್ಯಂತ ಸಂತೋಷದ ದೇಶವಾದ ಡೆನ್ಮಾರ್ಕ್‌ನಲ್ಲಿಯೂ ಅದೇ. ಜನಸಂಖ್ಯೆಯ ಒಂದು ಸಣ್ಣ ಭಾಗವು ಹೊಂಬಣ್ಣದ ಕೂದಲು ಮತ್ತು ನೀಲಿ ಕಣ್ಣಿನವರಲ್ಲದ ತಕ್ಷಣ, ಉದಾರವಾದಿ ಡೆನ್ಮಾರ್ಕ್ ಅನಿಯ೦ತ್ರಿತವಾಗುತ್ತದೆ.  ಇದೇ ಜಿಲ್ಯಾಂಡ್-ಪೋಸ್ಟನ್ನಲ್ಲಿ ಮಹಮ್ಮದ್‌ನ ಪ್ರಸಿದ್ಧ ವ್ಯಂಗ್ಯಚಿತ್ರಗಳ ಹಿನ್ನೆಲೆ. ಕೆಲವೇ ತಿಂಗಳ ಹಿಂದೆ ಕ್ರಿಸ್ತನ ವ್ಯಂಗ್ಯಚಿತ್ರಗಳನ್ನು ಈ ಪತ್ರಿಕೆ ತಿರಸ್ಕರಿಸಿತ್ತು. ಮತ್ತು ಮೋಶೆಯ ವ್ಯಂಗ್ಯಚಿತ್ರವು ಅಂತರರಾಷ್ಟ್ರೀಯ ಹಗರಣವಾಗಿ ಬದಲಾಗುತ್ತದೆ. ಅಭಿವೃದ್ಧಿ ಹೊಂದಿದ ಪ್ರಪಂಚದಾದ್ಯಂತ ಈ ವರ್ತನೆ ಸಾಮಾನ್ಯ. ಜನಸಂಖ್ಯೆಯ ಕುಸಿತದ ಕಾರಣ ಜರ್ಮನಿಗೆ ವಲಸಿಗರ ಅಗತ್ಯವಿದೆ. ಅದೇ ರೀತಿ ಜಪಾನ್. ಆದರೆ ವರ್ಣಭೇದ ನೀತಿ ಎಲ್ಲವನ್ನೂ ಜಯಿಸುತ್ತದೆ.

 

HM: ಪರಿಸ್ಥಿತಿ ಕಠಿಣವಾಗಿ ಕಾಣುತ್ತದೆ; ಮುಂದಿನ ದಿನಗಳಲ್ಲಿ ಅದು ಕೆಟ್ಟದಾಗಬಹುದೇ? ಯಾವುದೇ ಭರವಸೆ ಇದೆಯೇ?

 

NC: ಪರಿಸ್ಥಿತಿ  ತುಂಬಾ ಕೆಟ್ಟದಾಗಬಹುದು. ಅಧಿಕೃತ ಅಧ್ಯಯನದಲ್ಲಿ ಟ್ರಂಪ್ ಆಡಳಿತವು ನಮ್ಮ ಪ್ರಸ್ತುತ ಮಾರ್ಗದಲ್ಲಿ, ಶತಮಾನದ ಅಂತ್ಯದ ವೇಳೆಗೆ ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 4 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ತಲುಪುತ್ತದೆ ಎಂದು ಭವಿಷ್ಯ ನುಡಿದಿದೆ, ಇದು ವಿಜ್ಞಾನಿಗಳು ಸಂಘಟಿತ ಮಾನವ ಜೀವನದ ಮಿತಿ ಎಂದು ಪರಿಗಣಿಸುವ ಎರಡು ಪಟ್ಟು ಹೆಚ್ಚು. ಇದು 500-ಪುಟಗಳ ಪರಿಸರ ಮೌಲ್ಯಮಾಪನವಾಗಿದೆ, ಆದರೆ ನಡೆಯುತ್ತಿರುವದೇನು -   ಮೋಟಾರ ವಾಹನಗಳ ಹೊರಸೂಸುವಿಕೆಯನ್ನು ತಡೆಯಲಾಗುತ್ತಿಲ್ಲ,  ಪಳೆಯುಳಿಕೆ ಇಂಧನ ಬಳಕೆ ಹೆಚ್ಚಾಗುತ್ತ ಇದೆ. ಪ್ರಪಂಚದ ಭವಿಷ್ಯವು ಮಾನವ ಇತಿಹಾಸದಲ್ಲಿ ದೊಡ್ಡ ಅಂತರದಿಂದ ಅತ್ಯಂತ ಕೆಟ್ಟ ಅಪರಾಧಿಗಳ ಕೈಯಲ್ಲಿದೆ. ಬದುಕುಳಿಯುವ ಸಾಧ್ಯತೆಗಳು (ವಿಶೇಷವಾಗಿ ವಾಷಿಂಗ್ಟನ್‌ನಲ್ಲಿನ ಮಹಾ ಅಪರಾಧಿಗಳ ಕಾರಣದಿಂದಾಗಿ) ಉತ್ತಮವಾಗಿಲ್ಲದಿದ್ದರೂ , ಇನ್ನೂ ಭರವಸೆ ಇದೆ, ಬಹಳಷ್ಟು ಕೆಲಸಗಳಿವೆ.

ಕೊನೆಯ ಆಲೋಚನೆಗಳು

HM: ಮನುಷ್ಯರ ಜಗತ್ತು ಮತ್ತು ವ್ಯವಹಾರಗಳನ್ನು ಅರಿತುಕೊಳ್ಳಲು ಪ್ರಯತ್ನಿಸುವ ಫಲಿತಾಂಶ ಅನೇಕ ಬಾರಿ ಖಿನ್ನತೆ ಮತ್ತು ಆತಂಕವಾಗಿದೆ. ಬಹುಶಃ ನಿಮ್ಮ ಸುದೀರ್ಘ ಜೀವನದಲ್ಲಿ ನೀವು ಅಂತಹ ಭಾವನೆಗಳು ಮತ್ತು ವಿರೋಧಾಭಾಸಗಳನ್ನು ಅನುಭವಿಸಿದ್ದೀರಿ?

 

NC: ನಾನು ಚಿಕ್ಕವನಾಗಿದ್ದಾಗಿನಿಂದ, ೧೯೩೦ರ ಆರ್ಥಿಕ ಖಿನ್ನತೆಯ ಸಮಯದಲ್ಲಿ ಮತ್ತು ನಿರಂತರವಾಗಿ ಅಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇನೆ. ಎ೦ದಿಗೂ ದೂರವಿಲ್ಲ ಈ ಭಾವನೆ, ದೊಡ್ಡ ಹತ್ಯಾಕಾಂಡಗಳಿಗೆ  ನನ್ನದೇ ದೇಶವು ಕಾರಣವಾಗಿದೆ ಎನ್ನುವದರಿ೦ದ ಹೆಚ್ಚು ಕೆಟ್ಟದ್ದಾಗಿದೆ. ಇದು ನಿಷ್ಕ್ರಿಯಗೊಳಿಸು೦ತದು  ಎಂದು ನಾನು ಎಂದಿಗೂ ಭಾವಿಸಲಿಲ್ಲ; ಬದಲಿಗೆ, ಚೈತನ್ಯವನ್ನು ಏರಿಸುತ್ತದೆ.

 

HM: ನಿಮ್ಮ ಆತ್ಮಚರಿತ್ರೆ ಅಥವಾ ಆತ್ಮಚರಿತ್ರೆ ಬರೆಯಲು ನೀವು ಉದ್ದೇಶಿಸಿದ್ದೀರಾ ಅಥವಾ ನಿಮ್ಮ ಜೀವನಚರಿತ್ರೆಯನ್ನು ಬರೆಯಲು ನೀವು ಯಾರಿಗಾದರೂ ಅಧಿಕಾರ ನೀಡಿದ್ದೀರಾ? ಅದನ್ನು ಓದುವುದು ತುಂಬಾ ಆಸಕ್ತಿದಾಯಕವಾಗಿರುತ್ತದೆ.

 

NC: ನಾನು ಒಂದನ್ನು ಬರೆಯಲು ಉದ್ದೇಶಿಸಿಲ್ಲ ಮತ್ತು ಹಾಗೆ ಮಾಡಲು ಬೇರೆಯವರಿಗೆ ಅಧಿಕಾರ ನೀಡಿಲ್ಲ.

 

HM: ಪ್ರಪಂಚದಾದ್ಯಂತ ನಿಮಗೆ ಪತ್ರಗಳನ್ನು ಕಳುಹಿಸುವ ಜನರಿಗೆ ಪ್ರತಿಕ್ರಿಯಿಸಲು ನಿಮ್ಮನ್ನು ಯಾವುದು ಪ್ರೇರೇಪಿಸುತ್ತದೆ?

 

NC: ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಜನರಿಗೆ ಆದರ - ಅದು ಪ್ರೇರೇಪಣೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು