ಸಾಮೂಹಿಕ


ಮನೋವಿಜ್ಞಾನ:


ಕುಶಲತೆಯಿ೦ದ ಜನಸಾಮಾನ್ಯರ ನಿರ್ವಹಣೆ


ಎಡ್ವರ್ಡ್ ಬರ್ನೇಸ್ ಕೊಡುಗೆ 

ಜುಲೈ 12, 2017 ರಂದು ACADEMY OF IDEAS

“ಜನಸಾಮಾನ್ಯರಲ್ಲಿ ಅಭ್ಯಾಸಗಳು ಮತ್ತು ಅಭಿಪ್ರಾಯಗಳು ಆಯೋಜಿತವಾಗಿರುತ್ತವೆ. ಇವುಗಳನ್ನು  ಪ್ರಜ್ಞಾಪೂರ್ವಕವಾಗಿ ಮತ್ತು ಯುಕ್ತಿಯಿ೦ದ  ಹಿಡಿತದಲ್ಲಿಟ್ಟು ನಿರ್ವಹಣೆ  ಮಾಡುವದು ಪ್ರಜಾಪ್ರಭುತ್ವ ಸಮಾಜದಲ್ಲಿ ಪ್ರಮುಖ ಅಂಶವಾಗಿದೆ. ಇದೊ೦ದು  ಕಣ್ಣಿಗೆ ಕಾಣದ  ಕಾರ್ಯವಿಧಾನ ಮತ್ತು ಇದನ್ನು ಕುಶಲತೆಯಿಂದ ನಿರ್ವಹಿಸುವವರೇ ನಮ್ಮ ದೇಶದ ನಿಜವಾದ ಆಡಳಿತ ಶಕ್ತಿಯಾಗಿರುವ ಅದೃಶ್ಯ ಸರ್ಕಾರ. ನಾವು ಎ೦ದೂ ಕೇಳಿಲ್ಲದ ಯಾರೋ ನಮ್ಮನ್ನು ಆಳುತ್ತಿದ್ದಾರೆ, ಅವರಿ೦ದ ನಮ್ಮ ಮನಸ್ಸುಗಳಿಗೆ ಆಕಾರ ಕೊಡಲಾಗಿದೆ,  ನಮ್ಮ ಅಭಿರುಚಿಗಳು ರೂಪುಗೊಂಡಿವೆ, ನಮ್ಮ ಆಲೋಚನೆಗಳು ಸೂಚಿಸಲ್ಪಟ್ಟಿವೆ.  ರಾಜಕೀಯ ಅಥವಾ ವ್ಯವಹಾರದ ಕ್ಷೇತ್ರದಲ್ಲಿ, ನಮ್ಮ ಸಾಮಾಜಿಕ ನಡವಳಿಕೆಯಲ್ಲಿ ಅಥವಾ ನಮ್ಮ ದೈನಂದಿನ ಜೀವನದ ಪ್ರತಿಯೊಂದು ಕಾರ್ಯದಲ್ಲೂ ಸಣ್ಣ ಸ೦ಖ್ಯೆಯ ನಾವು ಕೇಳಿಲ್ಲದ ವ್ಯಕ್ತಿಗಳೇ  ಹೆಚ್ಚಾಗಿ ನಮ್ಮ ಮೇಲೆ ಅಧಿಕಾರ ನಡೆಸುತ್ತಾರೆ . ಅವರು ಜನಸಾಮಾನ್ಯರ ಮಾನಸಿಕ ಪ್ರಕ್ರಿಯೆಗಳು ಮತ್ತು ಸಾಮಾಜಿಕ  ವಿನ್ಯಾಸಗಳನ್ನು ಅರ್ಥಮಾಡಿಕೊ೦ಡಿರುವವರು. ಇವರೇ ಸಾರ್ವಜನಿಕ ಮನಸ್ಸನ್ನು ನಿಯಂತ್ರಿಸುವ ತಂತಿಗಳನ್ನು ಹಿಡಿತದಲ್ಲಿಟ್ಟುಕೊ೦ಡಿರುವವರು, ಹಳೆಯ ಸಾಮಾಜಿಕ ಶಕ್ತಿಗಳನ್ನು ಬಳಸಿಕೊಳ್ಳುತ್ತಾ ಜಗತ್ತನ್ನು ನಿರ್ಬ೦ಧಿಸಲು ಮತ್ತು ಮಾರ್ಗದರ್ಶನ ಮಾಡಲು ಹೊಸ ಮಾರ್ಗಗಳನ್ನು ರೂಪಿಸುತ್ತಾರೆ. (‘ಪ್ರಚಾರ, ಎಡ್ವರ್ಡ್ ಬರ್ನೇಸ್)

ಇದನ್ನು ಬರೆದವರು  ಜಾಹೀರಾತು, ಆಧುನಿಕ ಪ್ರಚಾರ ಮತ್ತು ಸಾರ್ವಜನಿಕ ಸಂಪರ್ಕ ಕ್ಷೇತ್ರದ  ಆದ್ಯಪ್ರವರ್ತಕ ಬುಧ್ಧಿ ಎಡ್ವರ್ಡ್ ಬರ್ನೇಸ್.  ಸಿಗ್ಮಂಡ್ ಫ್ರಾಯ್ಡ್ ಅವರ ಸೋದರಿಯ ಮಗ ಬರ್ನೇಸ್ ಪ್ರಭಾವ ಅಗಾಧವಾಗಿತ್ತು. ತನ್ನ ಚಿಕ್ಕಪ್ಪನ ಒಳನೋಟಗಳ ಮೇಲೆ  ಅವಲಂಬಿತವಾಗಿ, ಅವನು ಅತ್ಯಂತ ಯಶಸ್ವಿ ನಿರ್ವಹಣೆಯ ಕುಶಲ ತಂತ್ರಗಳನ್ನು ಬೆಳಸಿದನು.  ಈ ತ೦ತ್ರಗಳನ್ನು ಗ್ರಾಹಕ ವಸ್ತುಗಳನ್ನು ಮಾರಾಟ ಮಾಡಲು ಕಂಪನಿಗಳು ಇಂದಿಗೂ ಬಳಸುತ್ತವೆ,  ಅಲ್ಲದೆ ಬರ್ನೇಸ್ ಅವರ ಮಾತುಗಳಲ್ಲಿಅಧಿಕಾರದಲ್ಲಿರುವ  ಶಕ್ತಿಗಳೂ ಸಹ  ಈ ತ೦ತ್ರಗಳನ್ನು "ಜನಸಾಮಾನ್ಯರನ್ನು ನಿಯಂತ್ರಿಸಲು ಮತ್ತು ಕಟ್ಟುನಿಟ್ಟಾದ ಶಿಸ್ತು ಮತ್ತು ಬಲವಂತದ ಏಕರೂಪತೆಗೆ ತೊಡಗಿಸಲು” ಬಳಸುತ್ತವೆ.  (ಎಡ್ವರ್ಡ್ ಬರ್ನೇಸ್).

ಇಲ್ಲಿ ನಾವು ಬರ್ನೇಸ್ ಅವರ ಕೆಲವು ಕುತೂಹಲಕಾರಿ ವಿಚಾರಗಳನ್ನು ಅನ್ವೇಷಿಸುತ್ತೇವೆ, ಜನಸಮಾಜವನ್ನು ನಿಯಂತ್ರಿಸಲು ಮತ್ತು ಕುಶಲತೆಯಿಂದ ನಿರ್ವಹಿಸಲು ಸಮೂಹ ಮನೋವಿಜ್ಞಾನವನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಅವರ ಒಳನೋಟಗಳಿಗೆ ನಿರ್ದಿಷ್ಟ ಗಮನವನ್ನು ನೀಡುತ್ತೇವೆ.

ತಮ್ಮ ಶ್ರೇಷ್ಠ ಕೃತಿ ‘ಗ್ರೂಪ್ ಸೈಕಾಲಜಿ  ಅ೦ಡ್ ದಿ ಅನಾಲಿಸಿಸ್ ಆಫ್ ದಿ ಇಗೊ’ (‘Group Psychology and The Analysis of the Ego’) ನಲ್ಲಿ, ಸಿಗ್ಮಂಡ್ ಫ್ರಾಯ್ಡ್ ಸಮೂಹ ಮನೋವಿಜ್ಞಾನವನ್ನು ಈ ರೀತಿ ವರ್ಣಿಸಿದರು:   " ವೈಯಕ್ತಿಕ ಮಾನವನು  ಒಂದು ಜನಾಂಗದ, ರಾಷ್ಟ್ರದ, ಜಾತಿಯ, ವೃತ್ತಿಯ, ಸಂಸ್ಥೆಯ ಸದಸ್ಯನಾಗಿ  ಅಥವಾ ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಕೆಲವು ನಿರ್ದಿಷ್ಟ ಸಮಯದಲ್ಲಿ  ಸಂಘಟಿಸಲ್ಪಟ್ಟ ಜನರ ಗುಂಪಿನ ಭಾಗವಾಗಿ ಇರುತ್ತಾನೆ. ಸಮೂಹ ಮನೋವಿಜ್ಞಾನ ವ್ಯಕ್ತಿಯ ಈ ಆಯಾಮಕ್ಕೆ ಸ೦ಬ೦ಧಿಸಿದೆ" (ಸಿಗ್ಮಂಡ್ ಫ್ರಾಯ್ಡ್). ಇನ್ನೊ೦ದು  ರೀತಿಯಲ್ಲಿ ಹೇಳುವುದಾದರೆ,  ಸಮೂಹ ಮನೋವಿಜ್ಞಾನವು ಗುಂಪಿನ ಭಾಗವಾಗುವಾಗ ವ್ಯಕ್ತಿಯ ನಡವಳಿಕೆ, ಆಲೋಚನೆಗಳು ಮತ್ತು ಭಾವನೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ.

ಮಾನವರು ಗುಂಪುಗಳನ್ನು ರೂಪಿಸುವ ಪ್ರವೃತ್ತಿಯನ್ನು ನಮ್ಮ ವಿಕಸನದ ಭೂತಕಾಲದಲ್ಲಿ ಅದು ನೀಡುವ ಬದುಕುಳಿಯುವ ಪ್ರಯೋಜನಗಳಿಂದಾಗಿ ಆಯ್ಕೆಮಾಡಲಾಯಿತು. ಪ್ರಾಚೀನ ಮಾನವರು ಅವರು ವಾಸಿಸುತ್ತಿದ್ದ ಕಠಿಣ ಪರಿಸರದಲ್ಲಿ ಬುಡಕಟ್ಟುಗಳಾಗಿ ಸಂಘಟಿತರಾದಲ್ಲಿ ಬದುಕುಳಿಯುವ ಮತ್ತು ಸಂತಾನೋತ್ಪತ್ತಿ ಮಾಡುವ ಸಾಧ್ಯತೆ ಹೆಚ್ಚು ಆಗಿತ್ತು.   ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ, ಮಾನವರು ಇಂದು ಪರಿಸರವನ್ನು ಪರಿವರ್ತಿಸಿ ಬುಡಕಟ್ಟು ಸಂಘಟನೆಯ ಬದುಕುಳಿಯುವ ಮೌಲ್ಯವನ್ನು ಅನಾವಶ್ಯಕಗೊಳಿಸಿದ್ದಾರೆ.  

ಹೀಗಾದರೂ  ಬುಡಕಟ್ಟು ಸಂಘಟನೆಯ ಪುರಾತನ ಮತ್ತು ಸಹಜವಾದ ಎಳೆತವು ಹೆಚ್ಚಿನವರ ಜೀವನದಲ್ಲಿ ಈಗಲೂ ದೊಡ್ಡದಾಗಿದೆ,  ಈಗಲೂ ಅನೇಕ ಜನರು  ಜನಾಂಗ, ವರ್ಗ, ಲಿಂಗ, ರಾಷ್ಟ್ರೀಯತೆ, ಧರ್ಮ ಅಥವಾ ರಾಜಕೀಯ ಪಕ್ಷ ಅಥವಾ ಸಿದ್ಧಾಂತಗಳ ಆಧಾರದ ಮೇಲೆ ತಮ್ಮನ್ನು ಮತ್ತು ಇತರರನ್ನು ಗುರುತಿಸುತ್ತಿದ್ದಾರೆ, ಮತ್ತು ಅದರಿ೦ದಾಗಿ  ರೂಢಿಬಧ್ಧವಾಗಿಸುತ್ತಾರೆ.

ಗುಂಪು-ಗುರುತಿಸುವಿಕೆಯಲ್ಲಿ ತೊಡಗಿಸಿಕೊಳ್ಳುವ  ಪ್ರವೃತ್ತಿ ಏಕೆ ಆಧುನಿಕ ಕಾಲದಲ್ಲಿ ಮುಂದುವರಿದಿದೆ ?  ಬರ್ನೈಸ್ ಪ್ರಕಾರ, ವ್ಯಕ್ತಿಗಳು ಸಂಭಾವ್ಯ ಶಕ್ತಿಯುತ ರಾಶಿಯೊಂದರೊಡನೆ  ತಮ್ಮನ್ನು ತಾದಾತ್ಮ್ಯಗೊಳಿಸುವುದರಿಂದ ಸ್ವಯಂ-ಪ್ರಾಮುಖ್ಯತೆಯ ವಿಸ್ತೃತ ಪ್ರಜ್ಞೆಯನ್ನು ಪಡೆಯುತ್ತಾರೆ.  "ತೋಳದ ತ೦ಡವು ಅದರ ಪ್ರತ್ಯೇಕ ಸದಸ್ಯರ ಸಂಯೋಜಿತ ಶಕ್ತಿಗಿಂತ ಹಲವು ಪಟ್ಟು ಬಲವಾಗಿರುತ್ತದೆ" (ಎಡ್ವರ್ಡ್ ಬರ್ನೇಸ್), ಹಾಗೆಯೇ ವ್ಯಕ್ತಿಯು ಗುಂಪಿನ ಸಂಭಾವ್ಯ ಶಕ್ತಿಯನ್ನು ಗ್ರಹಿಸುತ್ತಾನೆ ಮತ್ತು ಅದರೊಂದಿಗೆ ಗುರುತಿಸಿಕೊಳ್ಳುವಲ್ಲಿ ಶಕ್ತಿಯ ಭಾವನೆಗಳನ್ನು ಪಡೆಯುತ್ತಾನೆ.

19 ನೇ ಶತಮಾನದ ಉತ್ತರಾರ್ಧದಲ್ಲಿ, ಹಲವಾರು ಚಿಂತಕರು, ಮುಖ್ಯವಾಗಿ ಫ್ರಾಯ್ಡ್ ಮತ್ತು ಗುಸ್ಟಾವ್ ಲೆ ಬಾನ್, ಜನರು ಗುಂಪು-ಗುರುತಿಸುವಿಕೆಯಲ್ಲಿ ಏಕೆ ತೊಡಗುತ್ತಾರೆ ಮತ್ತು ಗುಂಪು ಗುರುತಿಸುವಿಕೆಯು ಒಬ್ಬರ ಮನಸ್ಸು ಮತ್ತು ನಡವಳಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಬರ್ನೇಸ್ ಗಮನಿಸಿದಂತೆ, ಈ ಅಧ್ಯಯನದಿಂದ ಹೊರಹೊಮ್ಮಿದ ಒಳನೋಟಗಳು ಸಮಾಜಗಳ ಮೇಲೆ ತಮ್ಮ ನಿಯಂತ್ರಣವನ್ನು ವಿಸ್ತರಿಸಲು ಬಯಸುವ ಅಧಿಕಾರದ ಸ್ಥಾನದಲ್ಲಿರುವವರ ಗಮನವನ್ನು ಸೆಳೆಯಿತು. ಈ ಜನರು  ಸಮೂಹ ಮನೋವಿಜ್ಞಾನದ ಸೈದ್ಧಾಂತಿಕ ಒಳನೋಟಗಳನ್ನು ಉಪಯೋಗಿಸಿಕೊ೦ಡು   ಜನಸಾಮಾನ್ಯರನ್ನು ಕುಶಲತೆಯಿಂದ ನಿರ್ವಹಿಸಲು ಸಾರ್ವಜನಿಕರ ಕಣ್ಣಿಗೆ ಬೀಳದೆ ಬಳಸಬಹುದಾದ ಪ್ರಾಯೋಗಿಕ ವಿಧಾನಗಳಾಗಿ ಅವುಗಳನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಕ೦ಡುಕೊ೦ಡರು. ಇದು ಸಾರ್ವಜನಿಕ ಸಂಬಂಧಗಳ (public relations) ವಿಷಯದಲ್ಲಿ  ಬರ್ನೇಸ್ ಅವರ ಕೆಲಸದ ಆಧಾರವಾಗಿದೆ. ಬರ್ನೇಸ್ ತನ್ನ ಪುಸ್ತಕ ಪ್ರಚಾರ (‘Propaganda’) ದಲ್ಲಿ:

"ಸಾಮೂಹಿಕ ಮನೋವಿಜ್ಞಾನದ ವ್ಯವಸ್ಥಿತ ಅಧ್ಯಯನವು ...  ಸಮೂಹದಲ್ಲಿ ಮನುಷ್ಯನನ್ನು ಪ್ರಚೋದಿಸುವ ಪ್ರೇರಣೆಗಳನ್ನು  ಕುಶಲತೆಯಿ೦ದ ನಿರ್ವಹಿಸುವುದರ  ಮೂಲಕ ಸಮಾಜದ  ಅಗೋಚರ ಅಧಿಪತ್ಯ ನಡೆಸುವ  ಸಾಮರ್ಥ್ಯಗಳನ್ನು ಬಹಿರಂಗಪಡಿಸಿತು ... [ಈ ಅಧ್ಯಯನಗಳು]  ಸಮೂಹವು ತನ್ನದೇ ಆದ, ವ್ಯಕ್ತಿಯಿ೦ದ ಭಿನ್ನವಾದ, ಮಾನಸಿಕ ಗುಣಲಕ್ಷಣಗಳನ್ನು ಹೊಂದಿದೆ ಎಂದು ಸ್ಥಾಪಿಸಿತು. ಸಮೂಹವನ್ನು ಪ್ರೇರೇಪಿಸುವ ಭಾವನೆಗಳು ಮತ್ತು ಪ್ರಚೋದನೆಗಳನ್ನು  ವೈಯಕ್ತಿಕ ಮನೋವಿಜ್ಞಾನದ ಬಗ್ಗೆ ನಮಗೆ ತಿಳಿದಿರುವ ಆಧಾರದ ಮೇಲೆ ವಿವರಿಸಲಾಗುವದಿಲ್ಲ.  ಆದ್ದರಿಂದ ಪ್ರಶ್ನೆಯು ಸ್ವಾಭಾವಿಕವಾಗಿ ಉದ್ಭವಿಸಿತು: ಸಮೂಹ-ಮನಸ್ಸಿನ ಕಾರ್ಯವಿಧಾನ ಮತ್ತು ಉದ್ದೇಶಗಳನ್ನು ನಾವು ಅರ್ಥಮಾಡಿಕೊಂಡರೆ, ಜನಸಾಮಾನ್ಯರಿಗೆ ತಿಳಿಯದೆ ಅವರನ್ನು ನಮ್ಮ ಇಚ್ಛೆಗೆ ಅನುಗುಣವಾಗಿ ನಿಯಂತ್ರಿಸಲು ಮತ್ತು ಕಟ್ಟುನಿಟ್ಟಾದ ಶಿಸ್ತು ಮತ್ತು ಬಲವಂತದ ಏಕರೂಪತೆಗೆ ತೊಡಗಿಸಲು ಸಾಧ್ಯವಿಲ್ಲವೇ?” (‘ಪ್ರಚಾರ’, ಎಡ್ವರ್ಡ್ ಬರ್ನೇಸ್)

ಗುಂಪು ಮನೋವಿಜ್ಞಾನದಿಂದ ದೊರಕುವ ಒಳನೋಟಗಳನ್ನು ಜನಸಮೂಹವನ್ನು ನಿಯಂತ್ರಿಸಲು ಬಳಸುವ ದೊಡ್ಡ ಸಾಮರ್ಥ್ಯವು ಉದ್ಭವಿಸುವದು ಭಾಗಶಃ ಒಂದು ವಾಸ್ತವಿಕತೆಯಿ೦ದ, ಅ೦ದರೆ ,  ದೈಹಿಕವಾಗಿ ಪ್ರತ್ಯೇಕವಾಗಿರುವಾಗಲೂ ಒಬ್ಬ ವ್ಯಕ್ತಿಯು ಗುಂಪು ಅಥವಾ ಜನಸಮೂಹದಿ೦ದ ಪ್ರಭಾವಿತನಾಗುವದು ಸಾಧ್ಯ, ಎನ್ನುವದು. ತನ್ನ ಪುಸ್ತಕ ಕ್ರಿಸ್ಟಲೈಸಿಂಗ್ ಪಬ್ಲಿಕ್ ಒಪಿನಿಯನ್‌ (‘ಸಾರ್ವಜನಿಕ ಅಭಿಪ್ರಾಯದ ಸ್ಫಟಿಕೀಕರಣ’)   ನಲ್ಲಿ ಬರ್ನೇಸ್ ಸೂಚಿಸಿದಂತೆ, ಜನಸಮೂಹವು "ಕೇವಲ ಹಲವಾರು ವ್ಯಕ್ತಿಗಳ ಭೌತಿಕ ಒಟ್ಟುಗೂಡಿಸುವಿಕೆ ಎಂದರ್ಥವಲ್ಲ ... ಜನಸಮೂಹವು  ಮನಸ್ಸಿನ ಒ೦ದು ಸ್ಥಿತಿಯಾಗಿದೆ." (‘ಕ್ರಿಸ್ಟಲೈಸಿಂಗ್ ಪಬ್ಲಿಕ್ ಒಪಿನಿಯನ್’, ಎಡ್ವರ್ಡ್ ಬರ್ನೇಸ್) . ವ್ಯಕ್ತಿಗಳು ತಮ್ಮನ್ನು ಸಮೂಹದೊ೦ದಿಗೆ  ಗುರುತಿಸುವದರಲ್ಲಿ ತೊಡಗಿರುವವರೆಗೆ, ಗುಂಪಿನ ಮನೋವಿಜ್ಞಾನದ ನಿರಂತರ ಪ್ರಭಾವದಿಂದ  ಗುಂಪಿನ ಇತರ ಸದಸ್ಯರು ಭೌತಿಕವಾಗಿ ಸಮಕ್ಷಮದಲ್ಲಿ ಇಲ್ಲದೇ ಇದ್ದರೂ ಅವರ ಮನಸ್ಸು ಮತ್ತು ನಡವಳಿಕೆಯು ಬದಲಾಗುತ್ತದೆ,.

ಗುಂಪು-ಗುರುತಿಸುವಿಕೆಯಲ್ಲಿ ತೊಡಗಿಸಿಕೊಳ್ಳುವ ಮಾನವರ ಪ್ರವೃತ್ತಿಯು ಜನಸಾಮಾನ್ಯರನ್ನು ಕುಶಲತೆಯಿಂದ ನಿರೂಪಿಸಲು ಹೇಗೆ ಈಡಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ನಾವು  ಬರ್ನೇಸ್ ಅಭಿವೃದ್ಧಿಪಡಿಸಿದ ಕುಶಲತೆಯ ತಂತ್ರಗಳನ್ನು ಹೆಚ್ಚು ಪ್ರಭಾವಿಸಿದ ಫ್ರಾಯ್ಡ್ರನ  ಕಲ್ಪನೆಗಳಲ್ಲಿ ಒಂದನ್ನು ನೋಡಬೇಕು, ಇದನ್ನು 1928 ರಲ್ಲಿ ಪ್ರಕಟವಾದ ತನ್ನ ಪುಸ್ತಕ ‘ಪ್ರಚಾರ’ ದಲ್ಲಿ, ಬರ್ನೇಸ್ ವಿವರಿಸಿದನು:

“ಮುಖ್ಯವಾಗಿ ಫ್ರಾಯ್ಡ್ ಚಿ೦ತನೆಯ ಮನಶ್ಶಾಸ್ತ್ರಜ್ಞರು ಮನುಷ್ಯನ ಅನೇಕ ಆಲೋಚನೆಗಳು ಮತ್ತು ಕಾರ್ಯಗಳು ಅವನು ಹತ್ತಿಕ್ಕ ಬೇಕಾಗಿ ಬ೦ದಿರುವ  ಆಸೆಗಳಿಗೆ ಪರಿಹಾರವಾಗುವ ಪರ್ಯಾಯಗಳಾಗಿವೆ ಎಂದು ಸೂಚಿಸಿದ್ದಾರೆ. ಒಂದು ವಸ್ತುವನ್ನು ಅಪೇಕ್ಷಿಸುವುದು ಅದರ ಆಂತರಿಕ ಮೌಲ್ಯ ಅಥವಾ ಉಪಯುಕ್ತತೆಗಾಗಿ ಇರಲಿಕ್ಕಿಲ್ಲ, ಆದರೆ ಅದರಲ್ಲಿ ತಾನು ತನ್ನಲ್ಲಿಯೇ  ಒಪ್ಪಿಕೊಳ್ಳಲು ಲಜ್ಜಿತನಾಗುವ  ಯಾವುದೋ ಒ೦ದು ಬಯಕೆಯ ಒಂದು ಸಂಕೇತವನ್ನು ಅರಿವಿಲ್ಲದೆ ಅವನು ಕಾಣುತ್ತಾನೆ.    ಕಾರನ್ನು ಖರೀದಿಸುವ ವ್ಯಕ್ತಿಯು ಅದು ಚಲನವಲನದ  ಉದ್ದೇಶಗಳಿಗಾಗಿ  ಬೇಕಾಗಿದೆ  ಎಂದು ಭಾವಿಸಬಹುದು ... ಆದರೆ ಅದನ್ನು ಬಯಸುವ ನಿಜ ಕಾರಣ ಅದು  ಸಾಮಾಜಿಕ ಸ್ಥಾನಮಾನದ ಸಂಕೇತವಾಗಿದೆ, ಅಥವಾ ವ್ಯವಹಾರದಲ್ಲಿ ಅವನ ಯಶಸ್ಸಿನ ಪುರಾವೆಯಾಗಿದೆ ಅಥವಾ ಅವನ ಹೆಂಡತಿಯನ್ನು ಸಂತೋಷಪಡಿಸುವ ಸಾಧನವಾಗಿದೆ. (‘ಪ್ರಚಾರ’, ಎಡ್ವರ್ಡ್ ಬರ್ನೇಸ್)

ಫ್ರಾಯ್ಡ್ ಸೂಚಿಸಿದ ಸಂಗತಿಯೆಂದರೆ, ಒಬ್ಬನ ಪ್ರಜ್ಞಾಪೂರ್ವಕ ಆಲೋಚನೆಗಳು ಮತ್ತು  ವ್ಯಕ್ತಿಯ ಸ್ವಯಂ-ಚಿತ್ರಣಕ್ಕೆ ಹೊಂದಿಕೆಯಾಗದ  ಮತ್ತು ಆದ್ದರಿಂದ  ನಿಗ್ರಹಿಸಲಾಗುವ  ಭಾವನೆಗಳು ಮತ್ತು ಬಯಕೆಗಳ ನಡುವೆ ಆಗಾಗ್ಗೆ ವಿಚ್ಛೇದನವಿದೆ.  ಈ ಸತ್ಯವು ಮಾನವರನ್ನು ಕುಶಲತೆಯಿಂದ ನಿರ್ವಹಿಸುವದಕ್ಕೆ  ಎಡೆಕೊಡುತ್ತದೆ ಎ೦ಬದನ್ನು  ಬರ್ನೇಸ್ ಗುರುತಿಸಿದ್ದಾರೆ. ಅದು ಏನನ್ನು ಸೂಚಿಸುತ್ತದೆ ಎಂದರೆ, ವ್ಯಕ್ತಿಯ ಪ್ರಜ್ಞಾಪೂರ್ವಕ ಮತ್ತು ತರ್ಕಬದ್ಧ ಸಾಮರ್ಥ್ಯಗಳನ್ನು ಒಂದು ಬದಿಗೆ ಬಿಡುವ, ಮತ್ತು  ಬದಲಿಗೆ ನಿಗ್ರಹಿಸಿದ ಭಾವನೆಗಳು ಮತ್ತು ಗುಪ್ತ ಆಸೆಗಳನ್ನು ಗುರಿಯಾಗಿಸಿಕೊಳ್ಳುವ  ಪ್ರಚಾರ ಅಥವಾ ಮಾನಸಿಕ ಕಾರ್ಯಾಚರಣೆಗಳನ್ನು ವಿನ್ಯಾಸಗೊಳಿಸಿದರೆ, ಜನರಿಗೆ  ನಂಬಿಕೆಗಳು ಮತ್ತು ನಡವಳಿಕೆಗಳನ್ನು, ಅವರನ್ನು ಮುನ್ನಡೆಸುವ  ಪ್ರೇರಣೆಗಳ ಅರಿವಿಲ್ಲದೆ , ಅಳವಡಿಸಿಕೊಳ್ಳಲು ಸಾಧ್ಯವಿದೆ. ಬರ್ನೇಸ್ ವಿವರಿಸಿದಂತೆ:

"...ವ್ಯಕ್ತಿಗಳು  ತಮ್ಮಿಂದಲೇ  ಮರೆಮಾಚುವ ಉದ್ದೇಶಗಳಿಂದ ಹೆಚ್ಚಾಗಿ ಪ್ರಚೋದಿಸಲ್ಪಡುತ್ತಾರೆ ... ಯಶಸ್ವಿ ಪ್ರಚಾರಕ ನಿಜವಾದ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ತಮ್ಮ ಕ್ರಿಯೆಗೆ ವ್ಯಕ್ತಿಗಳು  ಹೇಳುವ ಕಾರಣಗಳನ್ನು ಸ್ವೀಕರಿಸಿ ತೃಪ್ತರಾಗಿರಬಾರದು ಎಂಬುದು ಸ್ಪಷ್ಟವಾಗಿದೆ." (‘ಪ್ರಚಾರ’, ಎಡ್ವರ್ಡ್ ಬರ್ನೇಸ್)

ಒಬ್ಬ ವ್ಯಕ್ತಿಯು ಪ್ರಾಮಾಣಿಕ ಮತ್ತು ವಿಮರ್ಶಾತ್ಮಕ ಆತ್ಮಾವಲೋಕನದ ಮೂಲಕ ತನ್ನ ನಂಬಿಕೆಗಳು ಮತ್ತು ಕ್ರಿಯೆಗಳನ್ನು ಚಾಲನೆ ಮಾಡುವ ಆಧಾರವಾಗಿರುವ ಹೇತುಗಳ ಬಗ್ಗೆ ಅರಿವು ಹೊಂದಲು, ಕಷ್ಟವಾಗಿದ್ದರೂ ಸಹ, ಸಾಧ್ಯವಿದೆ. ಆದಾಗ್ಯೂ, ಒಮ್ಮೆ ಗುಂಪು-ಗುರುತಿಸುವಿಕೆಯ ಪರಿಣಾಮಗಳಿಗೆ ಶರಣಾದಾಗ, ಅಂತಹ ನಿರ್ಣಾಯಕ ಆತ್ಮಾವಲೋಕನವು ಬಹುಮಟ್ಟಿಗೆ ಅಸಾಧ್ಯವಾಗುತ್ತದೆ. "ಒಂದು ಗುಂಪು ಅಸಾಧಾರಣವಾಗಿ ಭೋಳೆಸ್ವಭಾವದ್ದಾಗಿದೆ ಮತ್ತು ಪ್ರಭಾವಕ್ಕೆ ತೆರೆದಿರುತ್ತದೆ" ಎಂದು ಫ್ರಾಯ್ಡ್ ಬರೆದಿದ್ದಾರೆ, "ಇದು ಯಾವುದೇ ವಿಮರ್ಶಾತ್ಮಕ ಬುಧ್ಧಿ ಶಕ್ತಿಯನ್ನು  ಹೊಂದಿಲ್ಲ." (‘ಗ್ರೂಪ್ ಸೈಕಾಲಜಿ ಮತ್ತು ಅ೦ಡ್ ದಿ ಅನಾಲಿಸಿಸ್ ಆಫ್ ದಿ ಇಗೊ’, ಸಿಗ್ಮಂಡ್ ಫ್ರಾಯ್ಡ್).  ಗುಂಪಿನೊಂದಿಗೆ ತನ್ನನ್ನು ಗುರುತಿಸಿಕೊಳ್ಳುವದರಲ್ಲಿ, ವ್ಯಕ್ತಿಯು ಸ್ವಯಂ-ವಿಶ್ಲೇಷಣೆ ಮತ್ತು ಸತ್ಯದ ವಿವೇಚನಾಶೀಲ ಹುಡುಕಾಟವನ್ನು ಗುಂಪಿನ ಹಿತಾಸಕ್ತಿಗಳು ಮತ್ತು ಒಗ್ಗಟ್ಟನ್ನು ಕಾಪಾಡಿಕೊಳ್ಳುವ ಪರವಾಗಿ ಅಧೀನಗೊಳಿಸುತ್ತಾನೆ. ಮತ್ತು ಸಮೂಹ-ಮನೋವಿಜ್ಞಾನದ ಪ್ರಭಾವದಿಂದ ದುರ್ಬಲಗೊಂಡ  ನಿರ್ಣಾಯಕ ಸಾಮರ್ಥ್ಯಗಳೊಂದಿಗೆ, ಅವರು ನಿಗ್ರಹಿಸಲ್ಪಟ್ಟ ಅಥವಾ ಸುಪ್ತಾವಸ್ಥೆಯ ಆಸೆಗಳು ಮತ್ತು ಭಾವನೆಗಳನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾದ ಮಾನಸಿಕ ಕಾರ್ಯಾಚರಣೆಗಳಿಗೆ ಹೆಚ್ಚು ಒಳಗಾಗುತ್ತಾರೆ.

ಆಧುನಿಕ ದಿನದಲ್ಲಿ ಕಂಡುಬರುವ ಮುಖ್ಯವಾಹಿನಿಯ ಮಾಧ್ಯಮ ಮತ್ತು ಜನಪ್ರಿಯ ಸಂಸ್ಕೃತಿಯ ಮೂಲಕ ಕಾರ್ಯನಿರ್ವಹಿಸುವ ಶಕ್ತಿಗಳು,  ಕೆಲವು ಪ್ರಕಾರದ ಗುಂಪು ಗುರುತಿಸುವಿಕೆಯಲ್ಲಿ ತೊಡಗಿಸಿಕೊಳ್ಳಲು ವ್ಯಕ್ತಿಯ ಪ್ರವೃತ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ - ಅವುಗಳೆಂದರೆ ಜನಸಂಖ್ಯೆಯನ್ನು ಸಂಘರ್ಷದ ಗುಂಪುಗಳಾಗಿ ವಿಭಜಿಸುವ ಗುರುತಿಸುವಿಕೆಗಳು. ಈ ವಿದ್ಯಮಾನವು ಸಮಾಜದ ಸ್ಥಿರತೆ ಮತ್ತು ಸ್ವಾತಂತ್ರ್ಯ ಎರಡಕ್ಕೂ ಸಂಭಾವ್ಯ ಭೀಕರ ಪರಿಣಾಮಗಳನ್ನು ಹೊಂದಿದೆ ಏಕೆಂದರೆ ಇದು ಅಧಿಕಾರದಲ್ಲಿರುವವರಿಗೆ ‘ವಿಭಜಿಸಿ ವಿಜಯಿಸುವ’  ಹಳೆಯ ತಂತ್ರವನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ.

'ಡಿಸ್ಕೋರ್ಸಸ್ ಆನ್ ಲಿವಿ'ಯಲ್ಲಿ, ಮ್ಯಾಕಿಯಾವೆಲ್ಲಿ  ಜನಸಂಖ್ಯೆಯ ಮೇಲೆ ಅಧಿಕಾರವನ್ನು ಹೊಂದಿದ್ದವರು, ಬಹಳ ಹಿಂದಿನಿಂದಲೂ, ಒಂದು ಒಗ್ಗೂಡಿದ ಜನಸಂಖ್ಯೆಯು ಅದರ ಮೇಲೆ ಆಳುವವರಿಗಿಂತ ಯಾವಾಗಲೂ ಪ್ರಬಲವಾಗಿದೆ ಎಂದು ಅರಿತುಕೊಂಡಿದ್ದಾರೆ ಮತ್ತು ಆಳುವವರು ಪ್ರಾಚೀನ ಕಾಲದಿ೦ದಲೂ "ಅನೇಕರನ್ನು ವಿಭಜಿಸಲು,  ಮತ್ತು ಐಕಮತ್ಯದಲ್ಲಿ ಬಲಶಾಲಿಯಾಗಿದ್ದ ಬಲವನ್ನು ದುರ್ಬಲಗೊಳಿಸಲು  ವಿಭಜನೆಯನ್ನು ಉತ್ತೇಜಿಸುವ ವಿಧಾನಗಳ ಬಳಕೆಯನ್ನು ಆಚರಿಸಲು” ಪ್ರಯತ್ನಿಸಿದರು. (ಮ್ಯಾಕಿಯಾವೆಲ್ಲಿ)

ಜನಾಂಗ, ವರ್ಗ, ಧರ್ಮ, ಲಿಂಗ ಅಥವಾ ರಾಜಕೀಯ ಆದ್ಯತೆಯಂತಹ ರೇಖೆಗಳ  ಉದ್ದಕ್ಕೆ, ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ಸ್ವಾಭಾವಿಕವಾಗಿ ಘರ್ಷಣೆಗೆ ಒಳಗಾಗುವ ಗುಂಪುಗಳಾಗಿ, ಜನಸಂಖ್ಯೆಯನ್ನು ವಿಭಜಿಸುವ ಮೂಲಕ, ಸಮೂಹ ಮನೋವಿಜ್ಞಾನದ ಪರಿಣಾಮಗಳು ಈ ಪ್ರತ್ಯೇಕ ಗುಂಪುಗಳಲ್ಲಿನ ವ್ಯಕ್ತಿಗಳ ನಡುವೆ ತರ್ಕಬದ್ಧವಾದ ಸಂಭಾಷಣೆ ಮತ್ತು ಚರ್ಚೆಯನ್ನು ಅಸಂಭವಗೊಳಿಸುತ್ತವೆ. .

"ಪ್ರತಿಯೊಂದು ಗುಂಪು... ತನ್ನದೇ ಆದ ಮಾನದಂಡಗಳನ್ನು ಅಂತಿಮ ಮತ್ತು ನಿರ್ವಿವಾದವೆಂದು ಪರಿಗಣಿಸುತ್ತದೆ ಮತ್ತು ಎಲ್ಲಾ ವಿರುದ್ಧವಾದ ಅಥವಾ ವಿಭಿನ್ನ ಮಾನದಂಡಗಳನ್ನು ಅಸಮರ್ಥನೀಯವೆಂದು ತಳ್ಳಿಹಾಕುತ್ತದೆ." (‘ಕ್ರಿಸ್ಟಲೈಸಿಂಗ್ ಪಬ್ಲಿಕ್ ಒಪಿನಿಯನ್’, ಎಡ್ವರ್ಡ್ ಬರ್ನೇಸ್)

ತರ್ಕಬದ್ಧ ಸ೦ಭಾಷಣೆಯ  ಮೂಲಕ ಅಭಿಪ್ರಾಯಗಳಲ್ಲಿನ ಭಿನ್ನತೆಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗುವುದಿಲ್ಲವಾದ್ದರಿ೦ದ, ಘರ್ಷಣೆಗೆ ಒಳಗಾಗುವ ಗುಂಪುಗಳು  ತಮಗೆ ಬೆದರಿಕೆ ಎಂದು ಗ್ರಹಿಸುವವರನ್ನು ಸೋಲಿಸುವ ಪ್ರಯತ್ನದಲ್ಲಿ ಹೆಚ್ಚು ವಿನಾಶಕಾರಿ ವಿಧಾನಗಳಿಗೆ ಹಿಂತಿರುಗುತ್ತಾರೆ. ಅಂತಹ ಗುಂಪುಗಳು ಪ್ರಬಲವಾಗಿರುವ  ಸಮಾಜವು ಹೆಚ್ಚುತ್ತಿರುವ ಪ್ರತಿಕೂಲ ಸಂಘರ್ಷದಲ್ಲಿ ಸುಲಭವಾಗಿ ವಿಭಜಿಸುತ್ತದೆ ಮತ್ತು ಇದರ ಪರಿಣಾಮವಾಗಿ, ಮಾಕಿಯಾವೆಲ್ಲಿ ಸೂಚಿಸಿದಂತೆ ಒಟ್ಟಾರೆ ಜನಸಂಖ್ಯೆಯು ದುರ್ಬಲಗೊಳ್ಳುತ್ತದೆ, ಅಲ್ಲದೆ  ಜನರ ಕಣ್ಣುಗಳು ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ  "ಕೋಟಿ ಗಟ್ಟಲೆ ಜನರ ಭವಿಷ್ಯವನ್ನು ನಿಯಂತ್ರಿಸುವ ಅದೃಶ್ಯ ಸರ್ಕಾರ"ದ, ಕ್ರಿಯೆಗಳಿಂದ ದೂರ ತಿರುಗುತ್ತವೆ. (‘ಪ್ರಚಾರ’, ಎಡ್ವರ್ಡ್ ಬರ್ನೇಸ್).

ನಾವು ಇತರರೊಂದಿಗೆ ಹಂಚಿಕೊಳ್ಳುವ ಸಾಮಾನ್ಯತೆಗಳ ಆಧಾರದ ಮೇಲೆ  ಆಪ್ತೇಷ್ಟತೆಯ ಭಾವನೆಯನ್ನು ಪಡೆಯುವುದರಲ್ಲಿ  ತಪ್ಪಿಲ್ಲ. ಆದರೂ, ಪ್ರಾಥಮಿಕವಾಗಿ ನಮ್ಮ ಗುಂಪಿನ ಸದಸ್ಯತ್ವಗಳ ಮೇಲೆ ನಮ್ಮ ವೈಯಕ್ತಿಕ ಗುರುತನ್ನುಆಧರಿಸಿರುವುದು ತಪ್ಪುದಾರಿಗೆಳೆಯುತ್ತದೆ. ನಮ್ಮ ವಿಕಸನದ ಇತಿಹಾಸದ ವಿಷಯದಲ್ಲಿ, ಯಾವುದೇ ಗುಂಪು ಅಥವಾ ಬುಡಕಟ್ಟಿನಿಂದ ಪ್ರತ್ಯೇಕವಾಗಿರುವ ವ್ಯಕ್ತಿಗಳಾಗಿ ನಮ್ಮನ್ನು ನಾವು ಅರಿತುಕೊಳ್ಳುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದ್ದು ತೀರಾ ಇತ್ತೀಚೆಗೆ. ಇದು ಸ್ವಪ್ರಜ್ಞತೆಯಲ್ಲಿ ನಿರ್ಣಾಯಕ ಬೆಳವಣಿಗೆಯಾಗಿದೆ, ಏಕೆಂದರೆ ವೈಯಕ್ತಿಕ ಹಕ್ಕುಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳ ಆಧಾರದ ಸಮಾಜದ ಅಸ್ತಿತ್ವವು ವೈಯಕ್ತಿಕ ಪ್ರಜ್ಞೆಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದ ಜನಸಂಖ್ಯೆಯ, ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ತಮ್ಮನ್ನುಮತ್ತು ಇತರರನ್ನು ಮೊದಲು ಮತ್ತು ಅಗ್ರಗಣ್ಯವಾಗಿ ವ್ಯಕ್ತಿಗಳಾಗಿ ಪರಿಗಣಿಸಿ.ಅರ್ಥಮಾಡಿಕೊಳ್ಳುವ ವ್ಯಕ್ತಿಗಳ ಸಮಾಜದ ಮೇಲೆ,   ಅವಲಂಬಿತವಾಗಿದೆ, 

ದಿ ಒರಿಜಿನ್ಸ್ ಅಂಡ್ ಹಿಸ್ಟರಿ ಆಫ್ ಕಾನ್ಷಿಯಸ್‌ನೆಸ್‌ನಲ್ಲಿ, ವೈಯಕ್ತಿಕ-ಪ್ರಜ್ಞೆಯ ಈ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಮೊದಲು;

“...ಗುಂಪು ಮತ್ತು ಗುಂಪು-ಪ್ರಜ್ಞೆಯು ಪ್ರಬಲವಾಗಿದ್ದವು...[ವ್ಯಕ್ತಿ], ತನ್ನದೇ ಆದ ಜ್ಞಾನ, ನೈತಿಕತೆ, ಇಚ್ಛಾಶಕ್ತಿ ಮತ್ತು ಚಟುವಟಿಕೆಯೊಂದಿಗೆ ಸ್ವಾಯತ್ತತೆ ಹೊಂದಿರಲಿಲ್ಲ ; ಕೇವಲ ಗುಂಪಿನ ಒಂದು ಭಾಗವಾಗಿ ಮಾತ್ರ ವ್ಯಕ್ತಿ ಕಾರ್ಯನಿರ್ವಹಿಸಿದನು. ತನ್ನ ಮಿತಿಮೀರಿದ  ಶಕ್ತಿಯೊಂದಿಗೆ ಗುಂಪು ಮಾತ್ರ ನೈಜ ವಾಸ್ತವತೆಯಾಗಿತ್ತು. (‘ದ ಒರಿಜಿನ್ಸ್ ಅಂಡ್ ಹಿಸ್ಟರಿ ಆಫ್ ಕಾನ್ಷಿಯಸ್‌ನೆಸ್’  - ಎರಿಕ್ ನ್ಯೂಮನ್ The Origins and History of Consciousness, Erich Neumann)

ಇಂದು ಗುಂಪು-ಗುರುತಿಸುವಿಕೆಯಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಗಳ ಪ್ರವೃತ್ತಿಯು ಸಮಾಜದ ಸ್ವಾತಂತ್ರ್ಯ ಮತ್ತು ಸ್ಥಿರತೆಗೆ ಅಪಾಯವಾಗಿದೆ, ಇದು  ಹೆಚ್ಚು ಪ್ರಾಚೀನ ಮಾನಸಿಕ ಸ್ಥಿತಿಗೆ ಪ್ರಜ್ಞೆಯ ಹಿನ್ನಡೆಯಾಗಿದೆ, ಮತ್ತು ಆದ್ದರಿಂದ, ಆಧುನಿಕತೆಯ ದೃಷ್ಟಿಕೋನದಿಂದ, ಜಯಿಸಬೇಕಾಗಿರುವ ಒ೦ದು. ರೋಗಶಾಸ್ತ್ರೀಯ (pathological) ಪ್ರವೃತ್ತಿಯಾಗಿದೆ. ಅಥವಾ ಫ್ರಾಯ್ಡ್ ಹೇಳಿದಂತೆ:

“ಪ್ರತಿಯೊಬ್ಬ ವ್ಯಕ್ತಿಯೂ ಹಲವಾರು ಗುಂಪು ಮನಸ್ಸುಗಳಲ್ಲಿ ಪಾಲನ್ನು ಹೊಂದಿರುತ್ತಾನೆ - ಅವನ ಜನಾಂಗ, ಅವನ ವರ್ಗ, ಅವನ ಧರ್ಮ, ಅವನ ರಾಷ್ಟ್ರೀಯತೆ ಇತ್ಯಾದಿ. ಆದರೂ ಅವನು ಅವುಗಳನ್ನು ಮೀರಿ  ಸ್ವಾತಂತ್ರ್ಯ ಮತ್ತು ಸ್ವಂತಿಕೆಯ  ತುಣುಕನ್ನು ಹೊಂದುವ ಮಟ್ಟಕ್ಕೆ ತನ್ನನ್ನುಏರಿಸಿಕೊಳ್ಳಲೂ ಸಾಧ್ಯ.” (‘ಗ್ರೂಪ್ ಸೈಕಾಲಜಿ ಅ೦ಡ್ ದಿ ಅನಾಲಿಸಿಸ್ ಆಫ್ ದಿ ಇಗೊ’, ಸಿಗ್ಮಂಡ್ ಫ್ರಾಯ್ಡ್)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು