DINAKAR DESAI - 1
ಕವಿ ಕರ್ಮಯೋಗಿ ದಿನಕರ ದೇಸಾಯಿ (೧)
ದಿನಕರ ದೇಸಾಯಿ ಕನ್ನಡ ನಾಡು ನುಡಿ ಕಂಡ ಅಸಾಧಾರಣ ವ್ಯಕ್ತಿ. ‘ಜನ ಸೇವೆಯೇ ಜನಾರ್ದನ ಸೇವೆ’ ಎಂದು ನಂಬಿಕೊಂಡ ಅವರು ಜನಹಿತಕ್ಕಾಗಿ ಶಿಕ್ಷಣ ಸಂಸ್ಥೆ, ಜನಸೇವಕ ಪತ್ರಿಕೆ ಹಾಗೂ ಜನಪರವಾದ ಸಾಹಿತ್ಯವನ್ನು ಜನರಿಗೆ ಅರ್ಥವಾಗುವಂತೆ ಬರೆದವರು. ನಿಷ್ಠೆ, ಪ್ರಾಮಾಣಿಕತೆ, ಆದರ್ಶದಂತ ಶಬ್ದಗಳು ನಿಜ ಜೀವನದಲ್ಲಿ ಮರೆಯಾಇ ಶಬ್ದಕೋಶದಲ್ಲಿ ಮಾತ್ರ ಉಳಿದುಕೊಳ್ಳುವ ಸಂದರ್ಭದಲ್ಲಿ ಈ ಶಬ್ದಗಳಿಗೆ ತಮ್ಮ ವ್ಯಕ್ತಿತ್ವದ ಮೂಲಕ ದಿನಕರ ದೇಸಾಯಿ ಜೀವದಾನ ಮಾಡಿದರು. ‘ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು’ ಎಂಬ ಗಾದೆಯ ಮಾತು ರೂಢಿಯಲ್ಲಿದೆ. ಆದರೆ ಹತ್ತು ಕಟ್ಟುವಲ್ಲಿ ಹತ್ತು ಮುತ್ತುಗಳನ್ನು ಕಟ್ಟಿ ತಮ್ಮ ಅಗಾಧ ವ್ಯಕ್ತಿತ್ವದ ಸಾಧ್ಯತೆಯನ್ನು ತೆರೆದು ತೋರಿದವರು ದಿನಕರ ದೇಸಾಯಿಯವರು. ೧೯೦೯ನೇ ಇಸ್ವಿ ಸೆಪ್ಟೆಂಬರ್ ೧೦ರಂದು ತಮ್ಮ ತಾಯಿಯ ತವರೂರಾದ ಅಂಕೋಲೆಯ ಹೊನ್ನೆಕೇರಿಯಲ್ಲಿ ಜನಿಸಿದರು. ದಿನಕರ ದೇಸಾಯಿ ನವೆಂಬರ ೬, ೧೯೮೨ನೇ ಇಸ್ವಿಯಲ್ಲಿ ತಮ್ಮ ಕಾರ್ಯಕ್ಷೇತ್ರವಾಗಿದ್ದ ಮುಂಬೈಯಲ್ಲಿ ತಮ್ಮ ಇಹದ ಬದುಕಿಗೆ ವಿದಾಯ ಹೇಳಿದರು. ದಿನಕರರು ಮುಂಬೈ ಗಿರಗಾಂವದ ಹರಕಿಶನದಾಸ ಆಸ್ಪತ್ರೆಯಲ್ಲಿ ರಾತ್ರಿ ೧೧.೧೫ಕ್ಕೆ ಕೊನೆ ಉಸಿರೆಳೆದರು. ನವೆಂಬರ್ ೯, ೧೯೮೨ರಂದು ಕನ್ನಡ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳು ಅವರ ಬಗ್ಗೆ ಸಂಪಾದಕೀಯವನ್ನು ಬರೆದು ತಮ್ಮ ನುಡಿ ನಮನವನ್ನು ಸಲ್ಲಿಸಿದವು. ಸಂಯುಕ್ತ ಕರ್ನಾಟಕ ಪತ್ರಿಕೆ ಅಂದು ಬರೆದ ಸಂಪಾದಕೀಯ ಇಂತಿದೆ. “ನಮ್ಮಲ್ಲಿ ಹೆಸರಾದ ಸಾಹಿತಿಗಳಿದ್ದಾರೆ, ನುರಿತ ಸಾಮಾಜಿಕ ಕಾರ್ಯಕರ್ತರಿದ್ದಾರೆ, ಅನುಭವಿ ರಾಜಕಾರಣಿಗಳಿದ್ದಾರೆ, ಗಟ್ಟಿಗರೆನಿಸಿದ ಶಿಕ್ಷಣ ಸಂಸ್ಥೆಗಳ ಸಂಘಟಕರಿದ್ದಾರೆ, ಕಳಕಳಿಯ ಕಾರ್ಮಿಕ ನಾಯಕರಿದ್ದಾರೆ, ನಿರ್ದಾಕ್ಷಿಣ್ಯ ಮನೋಭಾವದ ಪತ್ರಕರ್ತರಿದ್ದಾರೆ. ಈ ಒಂದೊಂದೇ ಕ್ಷೇತ್ರದಲ್ಲೂ ಈ ರೀತಿ ಹೆಸರುಗಳಿಸುವಂತೆ ಕೆಲಸ ಮಾಡುವುದು ಸುಲಭದ ಸಂಗತಿಯಲ್ಲ. ಅಂದ ಮೇಲೆ ಈ ಎಲ್ಲಾ ಕ್ಷೇತ್ರದಲ್ಲೂ ಏಕ ಪ್ರಕಾರದ ಸಾಧನೆ ತೋರಿಸಿದ ವ್ಯಕ್ತಿ ತೀರಾ ಅಪರೂಪ. ಆದರೆ ದಿನಕರ ದೇಸಾಯಿ ಅಂಥ ಅಪರೂಪದ ವ್ಯಕ್ತಿತ್ವವನ್ನು ಮೆರೆದವರಲ್ಲಿ ಒಬ್ಬರು. ಅವರದು ಬಹುಮುಖ ವ್ಯಕ್ತಿತ್ವ. ಅಸಾಧಾರಣ ಪ್ರತಿಭೆ. ಅದ್ಭುತ ಸಂಘಟನಾ ಶಕ್ತಿ”
ದಿನಕರ ದೇಸಾಯಿಯವರನ್ನು ಚುಟುಕು ಕವಿ ಎಂದು ಗುರುತಿಸಲಾಗುತ್ತದೆ. ಅವರು ಬರೆದ ಚೌಪದಿಗಳು ಸರ್ವಜ್ಞನ ವಚನಗಳಂತೆ, ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗದಂತೆ ಕನ್ನಡದ ಮನೆ ಮನಗಳನ್ನು ತಲುಪಿದೆ. ಚೌಪದಿಗಳಲ್ಲಿ ವ್ಯಂಗ್ಯ ವಿಡಂಬನೆ ಗಳೊಂದಿಗೆ ಅತ್ಯಂತ ಸಮರ್ಥವಾಗಿ ಪ್ರಾಸಗಳನ್ನು ತಮ್ಮ ಅಭಿವ್ಯಕ್ತಿಗೆ ದುಡಿಸಿಕೊಂಡವರು ದಿನಕರ ದೇಸಾಯಿ. ಅವರು ಗಂಭೀರವಾದ ಚಿಂತನೆಗಳಿಂದ ಕೂಡಿದ, ವಿಚಾರ ಪ್ರಚೋದಕ ಕವನಗಳನ್ನು ಬರೆದಿದ್ದಾರೆ. ಪ್ರವಾಸ ಕಥನವನ್ನು, ಅಂತಾರಾಷ್ಟ್ರೀಯ ಕಾರ್ಮಿಕ ಪರಿಷತ್‍ನ್ನು ಕುರಿತು ಪುಸ್ತಕವನ್ನು, ಸಂಶೋಧನಾ ಪ್ರಬಂಧವನ್ನು, ಪ್ರಾಥಮಿಕ ಶಿಕ್ಷಣದ ಕುರಿತು ಗ್ರಂಥವನ್ನು, ಜನಸೇವಕದ ಮುಖ ಪುಟದ ಲೇಖನಗಳನ್ನು, ಸಂಪಾದಕೀಯಗಳನ್ನು ಬರೆದಿದ್ದಾರೆ. ಆದರೆ ಈ ಬಗ್ಗೆ ಅವರ ಕಾಲದಲ್ಲಿ ಹಾಗೂ ಅನಂತರ ಸಾಹಿತಿಗಳಿಂದ ಮತ್ತು ವಿಮರ್ಶಕರಿಂದ ಅವರ ಕೃತಿಗಳಿಗೆ ಸಿಗಬೇಕಾದ ಪ್ರಚಾರ ಹಾಗೂ ಪ್ರಸಿದ್ಧಿ ಸಿಗಲಿಲ್ಲ. ಕೆಲವರು ಅವರನ್ನು ಕೇವಲ ಚುಟುಕು ಕವಿ ಎಂದಷ್ಟೆ ಗುರುತಿಸಿದರು. ಅವರು ಮುಂಬೈಯಲ್ಲಿ ಹೆಚ್ಚುಕಾಲ ವಾಸ್ತವ್ಯವಿದ್ದ ಕಾರಣ ಒಂದು. ಸಮಾಜ ಸೇವೆ ಅವರ ಅತಿ ಮುಖ್ಯ ಕಾಳಜಿ ಆಗಿತ್ತು. ಕಾರ್ಮಿಕ ಸಂಘಟನೆ, ರೈತ ಹೋರಾಟದ ಮೂಲಕ ಜನ ಹಿತಕ್ಕಾಗಿ ದುಡಿದ ಅವರು ಸಾಹಿತಿಗಳ ಮತ್ತು ವಿಮರ್ಶಕರ ಮರ್ಜಿಗಾಗಿ ಕಾಯದೆ ಇದ್ದುದು ಇನ್ನೊಂದು ಕಾರಣ. ಇದರಿಂದ ಆಧುನಿಕ ಕನ್ನಡ ಸಾಹಿತ್ಯದ ಸಮೀಕ್ಷೆ ಹಾಗೂ ವಿಮರ್ಶೆಯ ಸಂದರ್ಭದಲ್ಲಿ ಅವರಿಗೆ ಅವರ ಸಾಹಿತ್ಯ ಕೃತಿಗಳಿಗೆ ನಿಜವಾಗಿ ಸಲ್ಲಬೇಕಾದ ಗೌರವ ಹಾಗೂ ಸ್ಥಾನ-ಮಾನ ಸಿಗಲಿಲ್ಲ ಎಂದು ಹೇಳಬಹುದು.
ಬದುಕು ಬರಹಗಳು ಪರಸ್ಪರ ಸಂಬಂಧಿಯಾದವುಗಳು. ಆದರೆ ಬದುಕಿನ ಬಗೆ ಒಂದಾದರೆ ಬರವಣಿಗೆಯ ರೀತಿಯೇ ಇನ್ನೊಂದಾದವರ ಗಡಣವೇ ಹೆಚ್ಚಾಗಿದೆ. ಹತ್ತರ ಸಂಗಡ ಹನ್ನೊಂದಾಗದೆ ಬದುಕಿದಂತೆ ಬರೆದ ಬಂಡಾಯಗಾರ ದಿನಕರ ದೇಸಾಯಿ ನಿಜ ನೇರಕ್ಕೆ ನಡೆದ, ಆತ್ಮ ಸಾಕ್ಷಿಗೆ ಒಪ್ಪುವಂತೆ ಬರೆದ ದಿನಕರ ದೇಸಾಯಿಯವರ ಬದುಕು ಬರಹಗಳ ಓದು ಹೊಸ ಬದುಕನ್ನು, ಹೊಸತನವನ್ನು ಹಂಬಲಿಸುವವರಿಗೆ ಸ್ಪೂರ್ತಿ ಆಗುತ್ತದೆ. ದಿನಕರ ದೇಸಾಯಿ ತಮ್ಮ ಬದುಕಿನ ಮೂಲಕವೇ ಜನರಿಗೆ ಸ್ಫೂರ್ತಿ ಆಗುತ್ತದೆ. ದಿನಕರ ದೇಸಾಯಿ ತಮ್ಮ ಬದುಕಿನ ಮೂಲಕವೇ ಜನರಿಗೆ ಸ್ಪೂರ್ತಿ ಆದರು. ‘ನುಡಿದಂತೆ ನಡೆ ಇದೆ ಜನ್ಮ ಕಡೆ’ ಎಂದು ಬಸವಣ್ಣನವರ ವಚನಾಂತೆ ನುಡಿದಂತೆ ನಡೆದು ತೋರಿದ, ಬದುಕಿದಂತೆ ಬರೆದು ಬಾಳಿದ ದಿನಕರ ದೇಸಾಯಿ ಕೇವಲ ಒಬ್ಬ ವ್ಯಕ್ತಿ ಅಷ್ಟೆ ಅಲ್ಲ, ಸಮರ್ಥ ಸಂಘಟನಾ ಶಕ್ತಿಯು ಹೌದು.
ದಿನಕರ ದೇಸಾಯಿಯವರು ಜಾತಿ ಮತ ಪಂಥಗಳನ್ನು ಮೀರಿ ನಿಂತ ಅಪ್ಪಟ ಮಾನವತಾವಾದಿ. ಜನಸೇವೆಗಾಗಿ ಹಗಲಿರುಳು ದುಡಿಯಲು ಟೊಂಕಕಟ್ಟಿ ನಿಂತ ಜನಸೇವಕ. ಇವರ ಮನೆತನದ ಮೂಲ ಪುರುಷರು ಗೌಡ ಸಾರಸ್ವತ ಜನಾಂಗಕ್ಕೆ ಸೇರಿದವರು. ಈ ಜನಾಂಗವನ್ನು ಗೌಡ ಸಾರಸ್ವತ ಬ್ರಾಹ್ಮಣ ಎಂದು (ಜೆ.ಎಸ್.ಬಿ) ಕರೆಯಲಾಗುತ್ತದೆ. ಕೊಂಕಣಿ ಇವರ ಮಾತೃ ಭಾಷೆ. ದಿನಕರ ದೇಸಾಯಿಯವರ ಪೂರ್ವಜರು ಕಾರವಾರ ಜಿಲ್ಲೆಯ ಕುಮಟಾ ತಾಲೂಕಿನ ಐತಿಹಾಸಿಕ ಸ್ಥಳ ಮಿರ್ಜಾನ ಕೋಟೆಯ ನಾಯಕ (ಕಿಲ್ಲೆದಾರ) ರಾಗಿದ್ದಾರು. ಅವರ ಪೂರ್ವಜರು ಇಂದಿಗೂ ಕುಮಟಾ ತಾಲೂಕಿನ ಅಂತರ್ವಳ್ಳಿ ಗ್ರಾಮದ ಹೊಂಡದ ಹಕ್ಕಲಿನಲ್ಲಿ ನೆಲೆಸಿದ್ದು. ಅವರ ಮನೆತನದವರನ್ನು ನಾಯಕ ಎಂದು ಕರೆಯಲಾಗುತ್ತದೆ. ಮಿರ್ಜಾನ ಕೋಟೆಯ ಅರಸ ಸರ್ಪಮಲ್ಲಿಕನ ಕಾಲದಲ್ಲಿ ಕೆಲವು ಹಳ್ಳಿಗಳ ಒಡೆತನ ಇವರ ಹಿರಿಯರಿಗೆ ದೊರಕಿದ್ದರಿಂದ ಇವರನ್ನು ದೇಸಾಯಿ ಎಂದು ಕರೆಯತೊಡಗಿದರು. ಶೇಷಗಿರಿ ಎಂಬುವರು ದಿನಕರ ದೇಸಾಯಿಯವರ ಮುತ್ತಜ್ಜ. ಅವರಿಗೆ ಸಾಂಬ ಮತ್ತು ಪುಂಡಲೀಕ ಎಂಬ ಇಬ್ಬರು ಮಕ್ಕಳಿದ್ದರು. ಸಾಂಬ ನಾಯಕರು ದಿನಕರ ದೇಸಾಯಿಯವರ ಅಜ್ಜನಾಗಿದ್ದರು. ಅವರಿಗೆ ರಾಮಚಂದ್ರ, ಮರ್ತೋಬ ದತ್ತಾತ್ರೇಯ, ಸರ್ವೋತ್ತಮ ಎಂಬ ನಾಲ್ಕು ಜನ ಮಕ್ಕಳಿದ್ದರು. ಸಾಂಬ ನಾಯಕರ ಮೂರನೇ ಮಗ ದತ್ತಾತ್ರೇಯ ದೇಸಾಯಿ ದಿನಕರ ದೇಸಾಯಿಯವರ ತಂದೆ. ಅವರು ಹೊಂಡದ ಹಕ್ಕಲಿನಿಂದ ಅಂಕೋಲೆಗೆ ಬಂದು ತಮ್ಮ ಬಂಧುಗಳಾದ ಅರಸ ಅವರ ಮನೆಯಲ್ಲಿ ಉಳಿದುಕೊಂಡು, ಒದನೇ ನಂಬರ ಶಾಲೆಯಲ್ಲಿ ಮುಲ್ಕಿಯವರೆಗೆ ಶಿಕ್ಷಣ ಪಡೆದು, ತಾವು ಕಲಿತ ಶಾಲೆಯಲ್ಲಿಯೇ ಶಿಕ್ಷಕರಾಗಿ ನೇಮಕಗೊಂಡರು. ಅಂಕೋಲೆಯ ಜನರಿಗೆ ದತ್ತ ಮಾಸ್ತರರೆಂದೇ ಪರಿಚಿತರಾದರು. ಅಂಕೋಲೆಯ ರಾಯ ನಾಡಕರ್ಣಿ ಅವರ ಮಗಳು ಅಂಬಿಕಾ ಎನ್ನುವವರನ್ನು ಮದುವೆಯಾದರು. ಅಂಕೋಲೆಯಿಂದ ಅಲಗೇರಿ ಎಂಬ ಹಳ್ಳಿಗೆ ವರ್ಗವಾಗಿ ಹೋದ ದತ್ತಾತ್ರೇಯ ದೇಸಾಯಿಯವರು, ಅಲಗೇರಿಯಲ್ಲಿ ಜಮೀನು ಖರಿದೀಸಿ, ಮನೆಕಟ್ಟಿಸಿ ಅಲ್ಲೇ ವಾಸ್ತವ್ಯ ಮಾಡಿದರು. ದತ್ತಾತ್ರೇಯ ದೇಸಾಯಿಯವರಿಗೆ ನಾಲ್ಕು ಜನ ಮಕ್ಕಳು, ಯಶವಂತ, ಶಂಕರ, ದಿನಕರ, ಸರಸ್ವತಿ ಹೀಗೆ ಮೂರು ಗಂಡು, ಒಂದು ಹೆಣ್ಣು. ದಿನಕರ ದೊಡ್ಡಣ್ಣ ಯಶವಂತ ದೇಸಾಯಿ ಒಡೋದೆಯ ಎಂ.ಎಸ್. ಯುನಿವರ್ಸಿಟಿಯಲ್ಲಿ ಇಂಜಿನಿಯರ್ ಪದವಿ ಪಡೆದು ವಾಸ್ತುಶಿಲ್ಪದ ಮೇಲೆ ವಿಶೇಷ ಅಭ್ಯಾಸ ಮಾಡಿದರು. ಮಧ್ಯಪ್ರದೇಶದ ಅಕೋಲಾದಲ್ಲಿ ಸೇವೆಯಲ್ಲಿದ್ದಾಗ ಖಾನ ದೇಶಕ್ಕೆ ಪ್ರವಾಸಕ್ಕೆ ಹೋದಾಗ ಕಾಲರಾಕ್ಕೆ ತುತ್ತಾಗಿ ಕೊನೆ ಉಸಿರೆಳೆದರು. ಶಂಕರ ದೇಸಾಯಿ ದಿನಕರ ಇನ್ನೊಬ್ಬ ಅಣ್ಣ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭೂಗತ ಹೋರಾಟ ನಡೆಸಿ ಜೈಲುವಾಸ ಅನುಭವಿಸಿದ ಇವರು ತಂದೆಯಂತೆ ಶಿಕ್ಷಣ ವೃತ್ತಿಯನ್ನು ಅನುಸರಿಸಿದರು. ವಿದ್ಯಾರ್ಥಿಗಳ ಅತಿ ಪ್ರೀತಿಯ ಗುರುಗಳಾಗಿದ್ದರು. ದಿನಕರರು ಅವರನ್ನು ದಾದಾ ಎಂದು ಕರೆಯುತ್ತಿದ್ದರು. ೧೯೫೧ರಲ್ಲಿ ಅವರು ಪ್ರಕಟಿಸಿದ ‘ಮಕ್ಕಳ ಗೀತೆಗಳು’ ಎಂಬ ಸಂಕಲನವನ್ನು ಅಣ್ಣ ಶಂಕರ ದೇಸಾಯಿಯವರಿಗೆ ಅರ್ಪಿಸಿದ್ದಾರೆ. ಸರಸ್ವತಿ ದಿನಕರರ ತಂಗಿ, ಮುಂಬೈಯಲ್ಲಿ ಪ್ರಾಧ್ಯಾಪಕರಾಗಿದ್ದ ವಾಮನ ನಾಡಕರ್ಣಿಯವರಿಗೆ ಅವರನ್ನು ಲಗ್ನ ಮಾಡಿ ಕೊಡಲಾಗಿತ್ತು. ತಂಗಿಯ ಆಕಸ್ಮಿಕ ನಿಧನ ದಿನಕರರಿಗೆ ತುಂಬಾ ನೋವನ್ನು ಉಂಟು ಮಾಡಿತ್ತು. “ಮಕ್ಕಳ ಪದ್ಯಗಳು” ಎಂಬ ಪುಸ್ತಕವನ್ನು ದಿನಕರುರು ತಮ್ಮ ಅಗಲಿದ ತಂಗಿಗೆ ಅರ್ಪಿಸಿದ್ದಾರೆ.
ದತ್ತಾತ್ರೇಯ ದೇಸಾಯಿಯವರ ಮೂರನೆಯ ಮಗನೇ ದಿನಕರ. ದಿನಕರ ಎಂಬ ಹೆಸರು ಅವರಿಗೆ ಅನ್ವರ್ಥಕವಾಗಿದೆ. ಕಾಡಿನ ಜಿಲ್ಲೆಯೆಂದು ಹೆಸರಾದ, ಉತ್ತರ ಕಾಣದ ಜಿಲ್ಲೆಯೆಂದು ಆಗಾಗ ಜಿಲ್ಲೆಯ ಬುದ್ದಿಜೀವಿಗಳು ವ್ಯಂಗ್ಯವಾಡಿದ, ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗಾಡುಗಳಲ್ಲಿ ಜನತಾ ವಿದ್ಯಾಲಯಗಳೆಂಬ ಶಾಲೆಗಳ ಮಾಲೆಗಳನ್ನು ಕಟ್ಟಿ, ಪ್ರಗತಿಪರ ನಿಲುವಿನೊಂದಿಗೆ ಜನಜಾಗೃತಿಯನ್ನುಂಟು ಮಾಡುವ, ‘ಜನಸೇವಕ’ ವೆಂಬ ವಾರ ಪತ್ರಿಕೆಯನ್ನು ಪ್ರಕಟಿಸಿ, ಶಿಕ್ಷಣವನ್ನು ಕುರಿತು ಪುಸ್ತಕಗಳನ್ನು, ಅಗ್ರಲೇಖನಗಳನ್ನು ಬರೆದು, ದಿನಕರರು ಕನ್ನಡ ನಾಡಿನ ಅಕ್ಷರ ಸೂರ್ಯ ಎನಿಸಿಕೊಂಡಿದ್ದಾರೆ. ೧೯೦೯ನೇ ಇಸ್ವಿ ಸೆಪ್ಟೆಂಬರ್ ೧೦ರಂದು ದತ್ತಾತ್ರೇಯ ಮತ್ತು ಅಂಬಿಕಾ ದೇಸಾಯಿಯವರ ಮೂರನೆಯ ಮಗನಾಗಿ ಜನಿಸಿದ ದಿನಕರರು ತಾವು ಹುಟ್ಟಿದ ದಿನವನ್ನು ಹಾಗೆ ತಮ್ಮ ಜೀವನದ ಹಲವು ಸಂಗತಿಗಳನ್ನು ಚೌಪದಿಯ ಚೌಕಟ್ಟಿನಲ್ಲಿ ಕಟ್ಟಿಕೊಟ್ಟ ಬಗೆ ಹೃದ್ಯವಾಗಿದೆ.
“ನಾನು ಹುಟ್ಟಿದ್ದು ಸಪ್ಟೆಂಬರ ಹತ್ತು
ನೆಲತಾಯಿ ಬಸಿರಾಗಿ ಕದಿರು ಮೂಡಿತ್ತು
ಹಸಿರು ಸೀರೆಯನುಟ್ಟ ಧರೆಗೆ ಆನಂದ
ಇದು ನನ್ನ ಸುಭಾಗ್ಯವೆನ್ನುವೆನು ಕಂದ“
(ದಿನಕರ ಚೌಪದಿ-ದಿನಕರ ದೇಸಾಯಿ, ಚು.ಸಂ. ೧೨೮೭, ಪು. ೨೫೮)
ಮಳೆಯುಂಡ ನೆಲತಾಯಿ ಬಸಿರಾಗಿ, ಭತ್ತದ ಗದ್ದೆಗಳಲ್ಲಿ ಕದಿರು ಮೂಡಿ, ಹಸಿರು ಸೀರೆಯನ್ನುಟ್ಟಂತೆ ಭೂಮಿಗೆ ಆನಂದವಾದ ಕಾಲದಲ್ಲಿಯೇ ನಾನು ಹುಟ್ಟಿ ಬಂದೆ. ಇದು ನನ್ನ ಸುಭಾಗ್ಯ ಎನ್ನುತ್ತಾರೆ. ಕವಿ ದಿನಕರ ದೇಸಾಯಿ. ಹೊಳೆವ ಕಣ್ಣುಗಳ, ಗೌರವರ್ಣದ ಬಾಲಕ ದಿನಕರ, ಅಣ್ಣಂದಿರು ಹಾಗೂ ತಂಗಿಯೊಡನೆ ಬೆಳೆಯತೊಡಗಿದರು. ಅಣ್ನಂದಿರು ತಮ್ಮನನ್ನು ಪ್ರೀತಿಯಿಂದ ‘ದಿನು’ ಎಂದು ಕರೆಯುತ್ತಿದ್ದರು. ತಾಯಿ ಅಂಬಿಕಾ, ದತ್ತಾತ್ರೇಯ ದೇಸಾಯಿಯವರಿಗೆ ಅನುರೂಪಳಾದ ಪತ್ನಿ. ತಮ್ಮ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲುಹಿದ್ದರು. ದಿನಕರರು ಒಂಬತ್ತನೇ ವರ್ಷದಲ್ಲಿದ್ದಾಗ ಅವರ ತಾಯಿ ವಿಷಮೀತಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು. ಇದು ಅವರ ಕುಟುಂಬಕ್ಕೆ ಅತಿದೊಡ್ದ ಅಪಘಾತವಾಗಿತ್ತು. ತನ್ನ ಮಗ ‘ದಿನು’ ಇಂಗ್ಲೀಷ ಕಲಿತು ದೊಡ್ಡ ಸಾಹೇಬನಾಗಬೇಕು ಎಂಬ ಆಸೆ ಹೊತ್ತಿದ್ದ. ಆ ತಾಯಿಯ ಬಗ್ಗೆ, ನನ್ನೊಂದಿಗೆ ಹೇಳುವಾಗ ತಮ್ಮ ಇಳಿವಯಸ್ಸಿನಲ್ಲೂ ದಿನಕರರು ಗದ್ಗದಿತರಾಗಿದ್ದರು. ಸಣ್ಣ ಮಕ್ಕಳ ಆರೈಕೆಯ ಹೊಣೆ ದತ್ತಾತ್ರೇಯ ದೇಸಾಯಿಯವರ ಮೇಲೆ ಬಿತ್ತು ಆಗ ಅವರು ಕಾರವಾರದ ಮಾಜಾಳಿಯವರಾದ ಕೃಷ್ಣೆ ಎಂಬುವವರನ್ನು ಮರು ಮದುವೆಯಾದರು. ಕೃಷ್ಣಾ ಬಾಯಿಯವರು ತಮ್ಮ ಮಕ್ಕಳಂತೆ ಇವರನ್ನು ಸಾಕಿ ಸಲಹಿದರು. ತಾಯಿಯ ನೆನಪದಾಗ ಬಾಲಕ ದಿನಕರ ಜೋರಾಗಿ ಅಳುತ್ತಿದ್ದಾಗ, ತಂದೆಯವರು ತಮ್ಮ ದಿನುವನ್ನು ಸಂತೈಸುತ್ತಿದ್ದ ಪರಿಯನ್ನು ಶಂಕರ ದೇಸಾಯಿಯವರು ತಮ್ಮ ಸಂದರ್ಶನದಲ್ಲಿ ವಿವರಿಸಿದ್ದಾರೆ. ಮನೆಗೆ ಆಗಾಗ ಬಂಧುಗಳು ಬಂದಾಗ, ದಿನಕರ ದೇಸಾಯಿಯವರು ಅವರು ಕೊಟ್ಟ ದುಡ್ಡಿನಿಂದ ಮೇಣಬತ್ತಿಯನ್ನು ತಂದು ಹಚ್ಚಿ, ಆ ಬೆಳಕನ್ನು ಕಂಡು ಸಂತಸ ಪಡುತ್ತಿದ್ದರು. ಬಾಲ್ಯದಲ್ಲಿ ಮೇಂಅಬತ್ತಿಯನ್ನು ತ್ರಂದು ಹಚ್ಚಿ ಆನಂದ ಪಡುತ್ತಿದ್ದ ಅವರ ಹವ್ಯಾಸ ಮುಂದೆ ಅದು ಪ್ರವೃತ್ತಿಯಾಗಿ ಬೆಳೆಯಿತು. ಕವಿ ಕರ್ಮಯೋಗಿ ಆಗಿ ರೂಪುಗೊಂಡ ದಿನಕರ ದೇಸಾಯಿ ಉತ್ತರ ಕನ್ನಡ ಜಿಲ್ಲೆಯ ತುಂಬಾ ಶಾಲಾ ಕಾಲೇಜುಗಳನ್ನು ತೆರೆದರು. ಅನಕ್ಷರತೆಯ ಗಾಢಾಂಧಕಾರ ದಲ್ಲಿದ್ದ ಜನತೆಗೆ ಅವರು ಜ್ಞಾನ ದೀವಿಗೆ ಆಗಿ ಅಕ್ಷರ ದೇಗುಲಗಳನ್ನು ಆರಂಭಿಸಿದರು. ದಿನಕರ ದೇಸಾಯಿಯವರು ತಮ್ಮ ವಿದ್ಯಾಲಯಗಳ ಮೂಲಕ ಹಚ್ಚಿದ ಮೇಣಬತ್ತಿಯ ಬೆಳಕು. ಇಂದು ನಾಡಿನಾದ್ಯಂತ ತನ್ನ ಪ್ರಭೆಯನ್ನು ಬೀರುತ್ತಿದೆ.
ತಂದೆಯ ಬಗೆಗೆ ದಿನಕರ ದೇಸಾಯಿಯವರಿಗೆ ವಿಶೇಷವಾದ ಪ್ರೀತಿ ಮತ್ತು ಅಭಿಮಾನ ‘ದಾಸಾಳ’ ಎಂಬ ತಮ್ಮ ಕವನ ಸಂಕಲನದಲ್ಲಿ ಅವರು ಅಭಿವ್ಯಕ್ತಿಸಿದ್ದು ಹೀಗೆ.
‘ಶೀಲವೆಂಬುದು ಮಗನೆ ಜೀವನದ ಜೇನು’
ಎಂದು ಕಾಗುಣಿತ ಕಲಿಸಿದೆ ನನಗೆ ನೀನು.
ನೀನು ಕಲಿಸಿದ ವರ್ಣಮಾಲೆಯ ಸುವರ್ಣ
ಬಂಗಾರಗಿಂತಲೂ ಶ್ರೇಷ ದತ್ತಣ್ಣ.
……………………….
ದತ್ತಣ್ಣ, ನಿನ್ನ ಹೃದಯದ ಹಣೆ ವಿಶಾಲ
ನಾನು ತೀರಿಸಲಾರೆ ನೀನಿತ್ತ ಸಾಲ.
(ದಾಸಾಳ-ದಿನಕರ ದೇಸಾಯಿ, ಪು.೧೪)
ದಿನಕರ ದೇಸಾಯಿಯವರು ತಮ್ಮ ಬದುಕಿನ ಕೆಲವು ಮಹತ್ವದ ಸಂಗತಿಗಳನ್ನು ತಮ್ಮ ಇಳಿ ವಯಸ್ಸಿನಲ್ಲಿ ನೆನಪಿಸಿಕೊಂಡು ಶ್ರೀ ಎಂ. ಎ ನಾಯಕ ಅವರಿಗೆ ಅದನ್ನು ಸಂಕ್ಷೇಪವಾಗಿ ಹೇಳಿ ಬರೆಸಿದ್ದು ಸಮಯ ಸಿಕ್ಕಾಗ ಅದನ್ನೆಲ್ಲಾ ವಿವರಿಸುವುದಾಗಿ ತಿಳಿಸಿದ್ದರಂತೆ. ಮುಂದೆ ತಾವು ಬರೆಯುವ ಆತ್ಮ ಚರಿತ್ರೆಯಲ್ಲಿ ಅದನ್ನು ಅಳವಡಿಸಿಕೊಳ್ಳುವ ವಿಚಾರ ಅವರಿಗೆ ಇತ್ತು. ಆದರೆ ಅದು ಕೃತಿರೂಪಕ್ಕೆ ಬರಲಿಲ್ಲ. ಬಹುಮುಖಿ ವ್ಯಕ್ತಿತ್ವದ ದಿನಕರರು ತಮ್ಮ ಆತ್ಮ ಚರಿತ್ರೆಯನ್ನು ಬರೆದಿದ್ದರೆ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಈವನದ ವಿವಿಧ ರಂಗಗಳೊಂದಿಗೆ ಸಂಪರ್ಕವಿದ್ದ ದಿನಕರರ ಆತ್ಮ ಚರಿತ್ರೆ ಹೆಚ್ಚು ಉಪಯುಕ್ತವಾಗುವ ಸಾಧ್ಯತೆ ಇತ್ತು.
ಶಿಕ್ಷಣ – ಶಿಕ್ಷಕರಾಗಿದ್ದ ದತ್ತಾತ್ರೇಯ ದೇಸಾಯಿಯವರು ತಮ್ಮ ಮಕ್ಕಳಿಗೆ ಅವರ ಆಸಕ್ತಿಯನ್ನು ಗಮನಿಸಿ ಶಿಕ್ಷಣ ನೀಡಲು ಶ್ರಮಿಸಿದರು. ದಿನಕರರು ತಮ್ಮ ತಂದೆಯವರಿದ್ದ ಅಲಗೇರಿ ಶಾಲೆಯಲ್ಲಿಯೇ ಕನ್ನಡ ನಾಲ್ಕನೇ ಇಯತ್ತೆವರೆಗೆ ಓದಿದರು. ನಂತರ ಎಡ್ವರ್ಡ ಹೈಸ್ಕೂಲಿನಲ್ಲಿ ಕಲಿತರು. ಆ ವೇಳೆ ಕಾರವಾರದ ಗವರ್ನಮೆಂಟ್ ಹೈಸ್ಕೂಲಿನ್ನು ಸೇರಿ ತಮ್ಮ ಮೆಟ್ರಿಕ್ಯುಲೇಷನ ಪರೀಕ್ಷೆಯನ್ನು ಪಾಸು ಮಾಡಿದರು. ಉಚ್ಚ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದರು. ಅಲ್ಲಿ ಕನ್ನಡದ ಹೆಸರಾಂತ ಕವಿಗಳಾಗಿದ್ದ ವಿ.ಸೀತಾರಾಮಯ್ಯ ಅವರು ಇಂಟರ್ ಮಿಡಿಯೆಟ್ ಕಲಿಯುತ್ತಿದ್ದಾಗ ದಿನಕರ ದೇಸಾಯಿಯವರ ಗುರುಗಳಾಗಿದ್ದರು. ಅವರ ಸಾನಿಧ್ಯ ದಿನಕರರ ಅರಿವಿನ ಕ್ಷಿತಿಜವನ್ನು ವಿಸ್ತರಿಸಿತು. ಬೆಂಗಳೂರಿನ ಇಂಟರ ಮಿಡಿಯೆಟ್ ಕಾಲೇಜಿಗೆ ತಮ್ಮ ವ್ಯಾಸಂಗವನ್ನು ಮುಗಿಸಿ ಬಿ.ಎ. ವ್ಯಾಸಂಗ ಮಾಡಲು ಮೈಸೂರಿನ ಮಹಾರಾಜ ಕಾಲೇಜಿಗೆ ಹೋದರು. ಅಲ್ಲಿ ಕನ್ನಡ ಇತಿಹಾಸ ಹಾಗೂ ರಾಜ್ಯಶಾಸ್ತ್ರದ ಮೂರು ಪತ್ರಿಕೆಗಳನ್ನು ದಿನಕರರು ತಮ್ಮ ವ್ಯಾಸಂಗಕ್ಕೆ ಆಯ್ದುಕೊಂಡಿದ್ದರು. ಇಂಗ್ಲೀಷಿನ ಎರಡು ಕನ್ನಡದ ಒಂದು ಪತ್ರಿಕೆಯನ್ನು ಬಿ.ಎ. ವ್ಯಾಸಂಗಕ್ಕೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗಿತ್ತು. ತೀ.ನಂ. ಶ್ರೀಕಂಠಯ್ಯನವರು ಅವರಿಗೆ ಕನ್ನಡವನ್ನು ಕಲಿಸುತ್ತಿದ್ದರು. ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಜೆ.ಸಿ. ರೋಲೆಯವರ ಅಚ್ಚುಕಟ್ಟುತನ ಹಾಗೂ ಶಿಸ್ತು ತಮ್ಮ ಬದುಕಿನ ಮೇಲೆ ಪ್ರಭಾವ ಬೀರಿದ್ದಾಗಿ ಅವರು ತಮ್ಮ ಸಂದರ್ಶನದಲ್ಲಿ ಹೇಳಿದ್ದರು. ಟಿ. ಎಸ್. ವೆಂಕಣ್ಣಯ್ಯ, ಬಿ. ಎಂ. ಶ್ರೀಕಂಠಯ್ಯ ಮೊದಲಾದವರು ಅವರ ಗುರುಗಳಾಗಿದ್ದರು. ಬಿ.ಎಂ. ಶ್ರೀಯವರು ‘ಇಂಗ್ಲೀಷ್ ಗೀತೆಗಳು’ ಸಂಕಲನ ತಮ್ಮ ಮೇಲೆ ಪ್ರಭಾವ ಬೀರಿದ್ದಾಗಿ ದಿನಕರರು ತಿಳಿಸಿದ್ದಾರೆ. ಶ್ರೀಯವರು ಸಂಪಾದಿಸಿದ ‘ತಳಿರು’ ಕವನ ಸಂಗ್ರಹದಲ್ಲಿ ದಿನಕರ ದೇಸಾಯಿಯವರ ನಾಲ್ಕು ಕವಿತೆಗಳು ಪ್ರಕಟಗೊಂಡಿದ್ದು ವಿಶೇಷ. ೧೯೩೧ನೇ ಇಸ್ವಿಯಲ್ಲಿ ದಿನಕರರು ಬಿ.ಎ. ಪರೀಕ್ಷೆಯಲ್ಲಿ ಪ್ರಥಮ ವರ್ಗದಲ್ಲಿ ತೇರ್ಗಡೆಯಾಗುವುದರೊಂದಿಗೆ ಕ್ಯಾಂಡಿ ಪಾರಿತೋಷಕವನ್ನು ಪಡೆದುಕೊಂಡರು. ಬಿ.ಎ. ಪದವಿ ಮುಗಿಯುತ್ತಿದ್ದಂತೆ ಕಾರವಾರದ ಹಿಂದೂ ಹೈಸ್ಕೂಲಿನಲ್ಲಿ ಶಿಕ್ಷಕರಾಗಲು ಅವರಿಗೆ ಕರೆ ಬಂದಿತ್ತು . ಮುಂದೆ ವ್ಯಾಸಂಗ ಮಾಡುವ ಇಚ್ಚೇ ಇದ್ದ ದಿನಕರರು ಅದನ್ನು ನಿರಾಕರಿಸಿ ಎಂ.ಎ. ವ್ಯಾಸಂಗ ಮಾಡಲು ಮುಂಬೈಗೆ ಹೋದರು. ಆ ಕಾಲದಲ್ಲಿ ಎಂ.ಎ. ಪದವಿ ಪಡೆಯಲು ಪಠ್ಯಕ್ರಮ ಅಭ್ಯಾಸ ಮಾಡಿ ಪರೀಕ್ಷೆ ಕೊಡುವ ಅಥವಾ ಯಾವುದಾದರೊಂದು ವಿಷಯವನ್ನು ಆಯ್ದುಕೊಂಡು ಪ್ರಬಂಧ ಕೊಡುವ ಅವಕಾಶ ಇತ್ತು. ಆಗ ದಿನಕರರು ‘Mahamandaleshwaras undre the chalukyaas of kalyani’ ಎಂಬ ವಿಷಯದ ಮೇಲೆ ಮಹಾಪ್ರಬಂಧ ಬರೆಯುವ ಸಿದ್ಧತೆ ನಡೆಸಿದರು. ಶ್ರೇಷ್ಠ ಇತಿಹಾಸಕಾರರಾದ ಫಾದರ್ ಹೆರಾಸ್ ಅವರು ದಿನಕರರ ಮಾರ್ಗದರ್ಶಕರಾಗಿದ್ದರು. ಅವರ ಜೊತೆಗೆ ಉಳಿದ ಏಳು ಮಂದಿ ಇದೇ ಬಗೆಯ ಸಂಶೋಧನೆಯನ್ನು ಕೈಗೊಂಡಿದ್ದರು. ಈ ಎಲ್ಲಾ ಮಹಾ ಪ್ರಬಂಧಗಳಲ್ಲಿ ದಿನಕರರು ಮಂಡಿಸಿದ ಪ್ರಬಂಧ ಉತ್ಕೃಷ್ಟವಾಗಿದ್ದು, ಅದಕ್ಕೆ ಎಂ.ಎ. ಪದವಿಯೊಂದಿಗೆ ಸೇಂಟ್ ಜೆವಿಯರ್ ರಜಶ ಪದಕವು ದೊರೆಯಿತು. ಕರ್ನಾಟಕದ ಇತಿಹಾಸವನ್ನು ಅಧ್ಯಯನ ಮಾಡುವವರಿಗೆ ಈ ಕೃತಿ ಒಂದು ಆಕರ ಗ್ರಂಥವಾಗಿದೆ.
ದಿನಕರರು ಸದಾ ಕ್ರಿಯಾಶೀಲ ವ್ಯಕ್ತಿ. ಅವರು ಎಂದಿಗೂ ಆಲಸಿ ಆಗಿರಲಿಲ್ಲ. ಎಂ.ಎ. ವ್ಯಾಸಂಗ ಮಾಡುತ್ತಿರುವಾಗಲೇ ಅವರು ಎಲ್.ಎಲ್.ಬಿ. ವ್ಯಾಸಂಗ ಮಾಡುತ್ತಿದ್ದರು. ಮಹಾ ಪ್ರಬಂಧವನ್ನು ಮಂಡಿಸುವ ಮೂಲಕ ಎಂ.ಎ. ಪದವಿಯನ್ನು, ಪರೀಕ್ಷೆ ಬರೆಯುವ ಮೂಲಕ ಎಲ್.ಎಲ್.ಬಿ. ಪದವಿಯನ್ನು ಅವರು ಪೂರ್ತಿಗೊಳಿಸಿದರು. ಕೆಲಸ ಮಾಡಲು ಕರೆಬಂದಿತ್ತು. ಸಮಾಜ ವಾಡಿಯಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಲು ಕರೆಬಂದಿತ್ತು. ಸಮಾಜ ಸೇವೆಯಲ್ಲಿ ಆಸಕ್ತರಾಗಿದ್ದ ದಿನಕರರು ಉಪನ್ಯಾಸಕ ವೃತ್ತಿಯನ್ನು ನಿರಾಕರಿಸಿದರು.
ಎಂ.ಎ, ಎಲ್.ಎಲ್.ಬಿ. ಪದವಿ ಮುಗಿಸಿದ ಅವರು ಬೆಳಗಾವಿ ನ್ಯಾಯಲಯದಲ್ಲಿ ವಕೀಲ ವೃತ್ತಿ ಕೈಗೊಳ್ಳಲು ಬಯಸಿದ್ದರು. ಅದಕ್ಕಾಗಿ ಸನ್ನದನ್ನು ತೆಗೆದುಕೊಳ್ಳಲು ಬೆಳಗಾವಿಗೆ ಹೋಗಿದ್ದರು. ಅಲ್ಲಿಯ ಹೋಟೆಲ್ ಒಂದರಲ್ಲಿ ಚಹಾ ಕುಡಿಯಲು ಕುಳಿತಾಗ ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರಲಿಚ್ಚಿಸುವವರು ಅರ್ಜಿ ಸಲ್ಲಿಸಬಹುದು ಎಂಬ ಪತ್ರಿಕೆಯ ಜಾಹಿರಾತನ್ನು ನೋಡಿದರು. ಅವರ ಸಂಬಂಧಿಕರಾದ ನರಹರಿ ಪಿಕಳೆಯವರು ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಬಗ್ಗೆ ಒಳ್ಳೆಯ ಮಾತನ್ನು ಆಡಿದಾಗ, ಅವರು ಅದನ್ನು ಸೇರುವ ನಿರ್ಧಾರವನ್ನು ಗಟ್ಟಿಗೊಳಿಸಿದರು. ಈ ವಿಷಯವನ್ನು ತಂದೆಯವರಿಗೆ ತಿಳಿಸಿದಾಗ, ಅವರು ನಿನ್ನ ಇಷ್ಟದಂತೆ ಮಾಡಿ ಎಂದು ಹೇಳಿ ತಮ್ಮ ಒಪ್ಪಿಗೆ ಸೂಚಿಸಿದರು. ಸರ್ವೆಂಟ್ಸ್ ಆಫ್ ಇಂಡಿಯಾ ಸಒಸೈಟಿ (ಭಾರತ ಸೇವಕ ಸಮಾಜ) ಯನ್ನು ನಾಮಧಾರ ಗೋಪಾಲಕೃಷ್ಣ ಗೋಖಲೆಯವರು ೧೯೦೫ರಲ್ಲಿ ಸ್ಥಾಪಿಸಿದ್ದರು. ಜನರಲ್ಲಿ ರಾಷ್ಟ್ರೀಯ ಮನೋಭಾವನೆಯನ್ನು ಉದ್ದಿಪಿಸುವ ಹಾಗೂ ಶೈಕ್ಷಣಿಕವಾಗಿ ಸಾಮಾಜಿಕವಾಗಿ ದೇಶದ ಜನತೆಯನ್ನು ಉದ್ದರಿಸುವ ಆಶಯದೊಂದಿಗೆ ಭಾರತ ಸೇವಕ ಸಮಾಜವನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಗೆ ಯಾರು ಬೇಕಾದರೂ ಇಷ್ಟ ಬಂದಾಗ ಸೇರುವಂತಿರಲಿಲ್ಲ. ಅದು ಸೇವಾವೃತಿಗಳ, ನಿಸ್ವಾರ್ಥಿಗಳ ಹಾಗೂ ದೇಶಭಕ್ತರ ಗರಡಿ ಮನೆಯಂತಿತ್ತು. ಅಲ್ಲಿ ಪ್ರವೇಶ ಪಡೆಯುವ ವ್ಯಕ್ತಿಯ ಪ್ರಾಮಾಣಿಕತೆ, ನಿಷ್ಠೆ, ನಿಸ್ವಾರ್ಥ ಮನೋಭಾವವನ್ನು ಒರಗೆ ಹಚ್ಚಿ, ಆತನನ್ನು ಸೇರಿಸಿಕೊಳ್ಳಲಾಗುತ್ತಿತ್ತು. ದಿನಕರ ದೇಸಾಯಿಯವರು ಭಾರತ ಸೇವಾ ಸಮಾಜಕ್ಕೆ ಪ್ರವೇಶ ಪಡೆಯಲು ಕಾರ್ಮಿಕ ಅಂದೋಲನದ ಪಿತಾಮಹರು ಕೂಲಿಕಾರರ ಮುಂದಾಳುಗಳೂ ಲೋಕಸಭೆಯ ಸದಸ್ಯರು ಆದ ಶ್ರೀ ಎನ್.ಎಂ. ಜೋಶಿಯವರನ್ನು ಭೇಟಿಮಾಡಿದ್ದರು. ಅವರು ಭಾರತ ಸೇವಕ ಸಮಾಜದ ಅಂದಿನ ಉಪಾಧ್ಯಕ್ಷರಾಗಿದ್ದು, ದಿನಕರರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡರು. ಜೋಶಿಯವರು ದಿನಕರ ದೇಸಾಯಿಯವರಿಂದ ಭಾರಾ ಸೇವಕ ಸಮಾಜಕ್ಕೆ ಸಂಬಂಧಿಸಿದ ಕೆಲವು ತಿದ್ದುಪಡಿಗಳನ್ನು ಹೇಳಿ ಬರೆಯಿಸಿದರು. ಲೋಕಸಭೆಯ ಅಧಿವೇಶನಕ್ಕೆ ದಿನಕರರನ್ನು ಕರೆದುಕೊಂಡು ಹೋಗಿ ಅಲ್ಲಿಯ ಕಲಾಪಗಳನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಬರೆಯಲು ತಿಳಿಸಿದರು. ಅಸೆಂಬ್ಲಿಯ ಅಟ್ಟದಿಂದ, ಅಸೆಂಬ್ಲಿಯ ಉಪ್ಪರಿಗೆಯಿಂದ, ಅಸೆಂಬ್ಲಿಯ ಗ್ಯಾಲರಿಯಿಂದ ವ್ಂಬ ಶಿರೋನಾಮೆಯಲ್ಲಿ ದಿನಕರರು ಲೇಖಕಕರು ಲೇಖನವನ್ನು ಬರೆದು ಕಳಿಸಿದರು. ಅದು ೧೯೩೭ನೇ ಇಸ್ವಿಯ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ೪೦ ಕಂತುಗಳಲ್ಲಿ ಪ್ರಕಟವಾಯಿತು. ತಮ್ಮ ಹೆಸರನ್ನು ಹಾಕದೆ ‘ಕನ್ನಡ ಪ್ರೇಕ್ಷಕನೊಬ್ಬನ ನಿರೀಕ್ಷೆ’ ಎಂಬ ಹೆಸರಿನಲ್ಲಿ ದಿನಕರರು ಸಂಸದೀಯ ಕಲಾಪಗಳನ್ನು ಬರೆದರು. ಎನ್.ಎಂ. ಜೋಶಿಯವರು ಭಾರತ ಸೇವಕ ಸಮಾಜದ ಮದ್ರಾಸ ಶಾಖೆಯ ಕನ್ನಡಿಗರಾದ ವೆಂಕಟಸುಬ್ಬಯ್ಯ ಅವರಿಗೆ ಆ ಲೇಖನಗಳನ್ನು ಕಳುಹಿಸಿ ಅದರ ಗುಣಮಟ್ಟದ ಬಗ್ಗೆ ಕೇಳಿದಾಗ ಅದು ಚೆನ್ನಾಗಿದೆ ಎಂದು ಎನ್.ಎಂ. ಜೋಶಿಯವರಿಗೆ ತಿಳಿಸಿದರು. ಗುರುಗಳಾದ ಜೋಶಿಯವರು ಒಡ್ಡಿದ ಎಲ್ಲಾ ಪರೀಕ್ಷೆಗಳಲ್ಲಿ ದಿನಕರರು ಯಶಸ್ವಿಯಾಗಿ ತೇರ್ಗಡೆಯಾದರು. ೧೯೩೫ರಲ್ಲಿ ಭಾರತ ಸೇವಕ ಸಮಾಜ ಅಜೀವ ಸದಸ್ಯರಾಗಿ ಸೇವಾ ಜೀವನ ಆರಂಭಿಸುವವರಿಗೆ ಕರೆಯನ್ನು ನೀಡಿತು. ದಿನಕರ ದೇಸಾಯಿಯವರು ಇದಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಎನ್. ಎಂ. ಜೋಶಿಯವರು ನೀನು ನನ್ನೊಡನೆ ಇದ್ದು ಕೆಲಸ ಮಾಡಿರುವೆ. ಅದಕ್ಕಾಗಿ ಸಂಭಾವನೆ ಕೊಡುತ್ತೇನೆ ಎಂದರು. ದಿನಕರ ದೇಸಾಯಿಯವರು ಅದನ್ನು ಸ್ವೀಕರಿಸಲು ಒಪ್ಪಲಿಲ್ಲ. ಈ ಸತ್ವ ಪರೀಕ್ಷೆಯಲ್ಲಿ ಸಹ ಅವರು ಉತ್ತೀರ್ಣರಾದರು. ಆಗ ಜೋಶ್ಯವರು ದಿನಕರರಿಗೆ ದಿಲ್ಲಿಯ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು, ಆಗಾಕ್ಕೆ ಹೋಗಿ ಅಲ್ಲಿಯ ತಾಜಮಹಲ್‍ನ್ನು ನೋಡುವ ಏರ್ಪಾಡು ಮಾಡಿ ನಂತರ ಅವರನ್ನು ಮುಂಬೈಗೆ ಕಳಿಹಿಸಿಕೊಟ್ಟರು.
ದಿನಕರ ದೇಸಾಯಿಯವರು ತಾವು ಬಯಸಿದ್ದ ಭಾರತ ಸೇವಕ ಸಮಾಜದ ಅಜೀವ ಸದಸ್ಯರಾಗಿ ಆಯ್ಕೆ ಆದರು. ನಿಷ್ಠೆ ಹಾಗೂ ನಿಯತ್ತಿನಿಂದ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಿದರು. ಅಲ್ಲಿ ಸೇರಿದಾಗ ಅವರ ಆರಂಭಿಕ ವೇತನ ಕೇವಲ ೭೫ ರೂಪಾಯಿ. ಈ ಸಂಗತಿಯನ್ನು ಮದುವೆ ಆಗುವ ಮೊದಲೇ ಮಾತುಕತೆಯಲ್ಲಿ ತನ್ನ ಸತಿ ಆಗುವಳಿಗೆ ತಿಳಿಸಿದ್ದರು. ದಿನಕರ ದೇಸಾಯಿ. ೧೯೩೬ನೇ ಇಸ್ವಿ ಜುಲೈ ೨ನೇ ತಾರೀಖಿನಂದು ದಿನಕರ ದೇಸಾಯಿಯವರು ಕಾರವಾರ ತಾಲೂಕಿನ ಬಾಡ ಗ್ರಾಮದ ಮಹಾಭಲೇಶ್ವರ ವಾಗಳೆ ಹಾಗೂ ರುಕ್ಮೀಣಿ ಬಾಯಿಯವರ ಮೊದಲ ಮಗಳು ಇಂದಿರಾ ಅವರನ್ನು ರಿಜಿಸ್ಟರ್ ಮದುವೆ ಆದರು. ಆಗಿನ ಕಾಲದ ದೀರ್ಘ ವಿವಾಹ ವಿಧಿಗೆ ದಿನಕರರು ಅವಕಾಶ ಕೊಡಲಿಲ್ಲ. ಕೇವಲ ೧೩ ರೂಪಾಯಿಗಳಲ್ಲಿ ನನ್ನ ಮದುವೆಯ ವಿಧಿ ಮುಗಿದಿತ್ತು ಎಂದು ದಿನಕರರು ಹೇಳಿದ್ದಾರೆ. ಅಂದಿನ ಸಾಂಪ್ರದಾಯಿಕ ವಿವಾಹ ವ್ಯವಸ್ಥೆಯ ವಿರುದ್ದ್ಝ ದಿನಕರ ದೇಸಾಯಿ ಬಂಡಾಯ ಮಾಡಿದ್ದರು. ಆ ಸರಳ ವಿವಾಹಕ್ಕೆ ಪ್ರಸಿದ್ಧ ಕವಿಗಳಾಗಿದ್ದ ಪಂಜೆ ಮಂಗೇಶರಾವ್ ಸಾಕ್ಷಿ ಆಗಿದ್ದರು. ದಿನಕರ ದೇಸಾಯಿಯವರ ಸಮಾಜ ಸೇವಾ ಕಾರ್ಯಗಳಿಗೆ, ಸಾಹಿತ್ಯ ರಚನೆಗೆ, ಪತ್ರಿಕೋದ್ಯಮಕ್ಕೆ ಸರ್ವೆಂಟ್ಸ್ ಅಂಡ್ ಇಂಡಿಯಾ ಸೊಸೈಟಿಯಲ್ಲಿ ಕಾರ್ಯಕಲಾಪಗಳಿಗೆ ದಿನಕರರು ಸಂಗಾತಿಯಾಗಿ ಇಂದಿರಾ ದೇಸಾಯಿ ಸಮರ್ಥ ಸಾತ್ ನೀಡಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಿರಿಯ ಮಗಳು ಉಷಾ, ಎರಡನೇ ಮಗಳು ನಿಷಾ. ಮುಂದಿನ ಗಂಡು ಸಂತಾನಕ್ಕೆ ಕಾಯದೇ ಸ್ವತಃ ದಿನಕರ ದೇಸಾಯಿಯವರು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಉಳಿದವರಿಗೂ ಮಾದರಿ ಆದರು. ದಿನಕರ ಎಂದರೆ ಸೂರ್ಯ, ಇಂದು ಎಂದರೆ ಚಂದ್ರ (ಇಂದಿರಾ). ಸೂರ್ಯ ಚಂದ್ರರು ಹಗಲು (ಉಷಾ) ರಾತ್ರಿ (ನಿಷಾ)ಗಳಿಗೆ ಕಾರಣರಾಗುತ್ತಾರೆ. ಸೇವಾ ವೃತ್ತಿಯಿಂದ ದಿನಕರ ದೇಸಾಯಿಯವರು ತನ್ನ ಚುಟುಕದಲ್ಲಿ ಸಮಾಜ ಸೇವೆ ಹಾಗೂ ಶಿಕ್ಷಣದ ಪ್ರಸಾರಕ್ಕೆ ತಾವು ಕಟ್ಟಿದ ಟ್ರಸ್ಟ್ ತಮಗೆ ಹುಟ್ಟಿದ ಗಂಡು ಮಗು ಎಂದು ತಮ್ಮ ಚುಟುಕದಲ್ಲಿ ಹೀಗೆ ಸಮರ್ಥಿಸಿಕೊಂಡಿದ್ದಾರೆ.
ನನಗೆ ಮಕ್ಕಳು ಮೂರು : ಹಿರಿಯ ಮಗು ಬಾಲೆ
ಇನ್ನೊಂದು ಹೆಣ್ಣು ಹುಟ್ಟಿದಳು ಆಮೇಲೆ
ಗಂಡು ಬೇಕೆಂದು ಬಯಸಿದೆವು ಬಹಳಷ್ಟು
ಕೊನೆಗೆ ಹುಟ್ಟಿದ ಗಂಡು ; ಶಿಕ್ಷಣದ ಟ್ರಸ್ಟು.
(ದಿನಕರ ಚೌಪದಿ ದಿನಕರ ದೇಸಾಯಿ, ಚು.ನಂ. ೧೦೯೪, ಪು. ೨೧೮)
ದಿನಕರ ದೇಸಾಯಿಯವರ ಮೊದಲು ಮಗಳು ಉಷಾ ೧೯೩೮ನೇ ಇಸ್ವಿ ಆಗಸ್ಟ್ ತಿಂಗಳ ೪ನೇ ತಾರೀಕಿನಂದು ಜನಿಸಿದರು. ಸಂಖ್ಯಾಶಾಸ್ತ್ರವನ್ನು ತೆಗೆದುಕೊಂಡು ಎಂ.ಎ. ಪದವಿಯನ್ನು ಮುಗಿಸಿದ ಅವರು ಬ್ಯಾಂಕ್ ಆಫ್ ಮಹಾರಾಷ್ಟ್ರದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ. ಇವರ ಪತಿ ಶ್ರೀ ವಿಜಯ ಪ್ರಧಾನ ಅವರೌ ಮುಂಬೈ ಹೈಕೋರ್ಟಿನ ಪ್ರಭಾವಿ ನ್ಯಾಯವಾದಿ. ಇವರದು ಅಂತರಜಾತಿಯ ವಿವಾಹ. ದಿನಕರ ದೇಸಾಯಿಯವರೇ ಮುಂದೆ ನಿಂತು ತೀರಾ ಸರಳವಾದ ರೀತಿಯಲ್ಲಿ ಮದುವೆಯನ್ನು ನೆರವೇರಿಸಿದರು. ಇವರಿಗೆ ಇಬ್ಬರು ಗಂಡು ಮಕ್ಕಳು ರಣಜಿತ್ ಮತ್ತು ಸಂಜಿತ್ ಎಂದು ಅವರ ಹೆಸರು. ದಿನಕರ ದೇಸಾಯಿ ಅವರು ಈ ಮೊಮ್ಮಕ್ಕಳ ಬಗ್ಗೆ ಪ್ರತ್ಯೇಕ ಚುಟುಕಗಳನ್ನು ಬರೆದಿದ್ದಾರೆ.
ನಿಷಾ ದಿನಕರ ದೇಸಾಯಿಯವರ ಎರಡನೇ ಮಗಳು ೧೯೪೦ನೇ ಇಸ್ವಿ ಅಗಸ್ಟ್ ೩೦ರಂದು ಜನಿಸಿದವರು. ತತ್ವಶಾಸ್ತ್ರ ವಿಷಯದಲ್ಲಿ ಪದವೀಧರರಾದ ಇವರು, ಬರೋಡಾದ ಕ್ಯಾಲಿಡೊ ಪಾಲಿಸ್ಟಾರ್ ಕಂಪನಿಯಲ್ಲಿ ಟೆಕ್ನಿಕಲ್ ಮ್ಯಾನೇಜರರಾದ ಡಾ. ಸತೀಶ್ಚಂದ್ರ ವೆಂಗಸರ್ಕಾರ ಅವರನ್ನು ಮದುವೆ ಆದರು. ಇವರಿಗೆ ಮೊನಾಲಿ ಮತ್ತು ಮೇಘನಾ ಎಂಬ ಇಬ್ಬರು ಹೆಣ್ಣು ಮಕ್ಕಳು. ಇವರನ್ನು ಕುರಿತ ದಿನಕರರು ಚುಟುಕ ಬರೆದಿದ್ದಾರೆ. ದಿನಕರ ದೇಸಾಯಿಯವರದ್ದು ಸುಖಿ ದಾಂಪತ್ಯ ಜೀವನ. ಸದಾ ಸಮಾಜ ಸೇವೆಯ ಕಡೆಗೆ ಅವರ ಗಮನ. ಮಕ್ಕಳು ಮತ್ತು ಪತ್ನಿ ದಿನಕರ ದೇಸಾಯಿಯವರು ನಿರ್ಚಹಿಸುತ್ತಿರುವ ಗುರುತರವಾದ ಜವಾಬ್ದಾರಿಯನ್ನು ಅರಿತು ಅವರ ಕೆಲಸಕ್ಕೆ ಯಾವುದೇ ಅಡ್ಡಿ ಆತಂಕವನ್ನು ಉಂಟು ಮಾಡುತ್ತಿರಲಿಲ್ಲ. ದಿನಕರರು ಕೈಗೊಳ್ಳುವ ಎಲ್ಲ ಕಾರ್ಯ ಚಟುವಟಿಕೆಗಳನ್ನು ಅವರ ಇಡೀ ಕುಟುಂಬ ಪ್ರೀತಿ ಮತ್ತು ಅಭಿಮಾನದಿಂದ ಬೆಂಬಲಿಸುತ್ತಿತ್ತು. ಇದರಿಂದ ಸಮಾಜಸೇವೆ ಕ್ಷೇತ್ರದಲ್ಲಿ ಮುನ್ನಡೆಯಲು ದಿನಕರರಿಗೆ ಸಾಧ್ಯವಾಯಿತು.
ದಿನಕರ ದೇಸಾಯಿಯವರು ನೇರ, ನಿರ್ಭಿಡೆಯ, ಸರಳ ವ್ಯಕ್ತಿಯಾಗಿದ್ದರು. ಪ್ರಾಮಾಣಿಕತೆ ಹಾಗೂ ನಿಸ್ಪೃಹತೆಯನ್ನು ತಮ್ಮ ಜೀವನದುದ್ದಕ್ಕೂ ಅವ್ಚರು ಕಾಪಾಡಿಕೊಂಡು ಬಂದರು. ನಿಯಮಿತ ತನವನ್ನು ಅವರು ಸದಾ ಪಾಲಿಸಿಕೊಂಡು ಬಂದಿದ್ದರು ಬೆಳಿಗ್ಗೆ ೬ ಗಂಟೆಗೆ ಏಳುವುದು ನಂತರ ಶೌಚ, ಆ ಮೇಲೆ ದಾಡಿ ಮಾಡಿಕೊಳ್ಳುವುದು ನಿತ್ಯದ ರೂಢಿ. ಆ ಬಳಿಕ ಸ್ನಾನ, ಸ್ನಾನಕ್ಕೆ ಚರ್ಮಕ್ಕೆ ಹಿತವಾದ ಪಿಯರ್ಸ್ ಸಾಬೂನು, ಅದು ಸಿಗದೆ ಇದ್ದಾಗ ಮೈಸೂರು ಸ್ಯಾಂಡಲ್ ಅಥವಾ ಲಿರಿಲ್ ಸಾಬೂನಿನ ಅಪರೂಪದ ಬಳಕೆ. ಸ್ನಾನದ ನಂತರ ಚಹಾ, ಉಪಹಾರದ ಜೊತೆಗೆ ಬ್ರೆಡ್ ಟೋಸ್ಟ್ ಮತ್ತು ಮೊಟ್ಟೆಯನ್ನು ತೆಗೆದುಕೊಳ್ಳುತ್ತಿದ್ದರು. ಆಹಾರ ಸೇವನೆಯಲ್ಲಿಯು ಹಿತ ಮತ್ತು ಮಿತ. ಮಿತಕ್ಕೆ ಪ್ರಾಶಸ್ತ್ಯ. ನಾಳೆ ಏನು ತಿಂಡಿ ಎಂದು ಮೊದಲೇ ವಿಚಾರಿಸುತ್ತಿದ್ದರು. ಉಪ್ಪಿಟ್ಟು. ದೋಸೆ, ಬಠಾಣಿಕಾಳು ಉಸುಳಿ, ತಾಳಿಪಟ್ಟು, ಬ್ರೆಡ್ ಟೋಸ್ಟ್ ಹೀಗೆ ಪ್ರತಿದಿನ ಉಪಹಾರಕ್ಕೆ ಅವರು ಸೂಚನೆ ಕೊಡುತ್ತಿದ್ದರು. ಮುಂಬೈಯಿಂದ ಇಂದಿರಾ ದೇಸಾಯಿ ಅಂಕೋಲೆಗೆ ಬಂದಾಗ ಅಡಿಗೆ ಸರ್ವೋತ್ತಮನದು. ಮಧ್ಯಾಹ್ನ ೧೨:೩೦ಕ್ಕೆ ಅವರು ಊಟಮಾಡುತ್ತಿದ್ದರು. ಊಟ ಉಪಹಾರ ರುಚಿಕಟ್ಟಾಗಿರುವುದರೊಂದಿಗೆ ಎಲ್ಲವು ಶಿಸ್ತಿನಿಂದ ಇರುವದನ್ನು ಅವರು ಬಯಸುತ್ತಿದ್ದರು. ಊಟದಲ್ಲಿ ಮೀನು, ಕುರಿ, ಕೋಳಿ, ಬಸಲೆ ಸೊಪ್ಪು, ಶಟ್ಲಿ, ಚಿಪ್ಪಿಕಲ್ಲು ಇದನ್ನು ಬೆರಕೆ ಮಾಡಿದ ಸಾರನ್ನು ಇಷ್ಟಪಡುತ್ತಿದ್ದರು. ಊಟದ ನಂತರ ೧೫-೨೦ ನಿಮಿಷ ವಿಶ್ರಾಂತಿ. ಪಡೆದು ನಂತರ ಭಾರತ ಸೇವಕ ಸಮಾಜದ ಕಛೇರಿಗೆ ಹೋಗುತ್ತಿದ್ದರು. ಅಲ್ಲಿಂದ ರಾತ್ರಿ ೭.೩೦ ರಿಂದ ೮.೦೦ ಗಂಟೆಯೊಳಗೆ ಮನೆಗೆ ಬರುತ್ತಿದ್ದರು. ೮.೩೦ ರಿಂದ ೯.೦೦ ಗಂಟೆಯೊಳಗೆ ಊಟಮಾಡಿ ಮಲಗಿ ಬಿಡುತ್ತಿದ್ದರು. ರಾತ್ರಿ ೧೨ ರಿಂದ ೧೨:೩೦ರ ಸಮಯದಲ್ಲಿ ಎಚ್ಚರವಾದಾಗ ಮಂಚದ ಹತ್ತಿರ ಮೊದಲೇ ಸಿದ್ಧಪಡಿಸಿದ್ದ ಬಿಳಿಯ ಹಾಳೆಯಲ್ಲಿ ಚುಟುಕುಗಳನ್ನು ಬರೆದಿಡುತ್ತಿದ್ದರು. ತಿಂಡಿ, ತಿನಿಸುಗಳೆಂದರೆ ಅವರಿಗೆ ಇಷ್ಟ. ಚುರಮುರಿ, ಗರಂಮಸಾಲೆ ಹಾಕಿ ಕಲ್ಸಿದ ಅವಲಕ್ಕಿ ಚೆನ್ನಾಗಿ ಹುರಿದ ಶೇಂಗಾ ಬೀಜ, ಗರಿಗರಿಯಾದ ಚಕ್ಕುಲಿ, ಇವುಗಳನ್ನು ಅವರು ಇಷ್ಟಪಟ್ಟು ತಿನ್ನುತ್ತಿದ್ದರು.
ಡಾ. ಕ್ರೊನೆನ್ ಬರ್ಗ ಎಂಬ ನೇತ್ರ ವೈದ್ಯರು ಅಂಕೋಲೆಗೆ ಶಸ್ತ್ರ ಕ್ರಿಯೆಗೆ ಬಂದಾಗ ಅವರಿಗೆ ಕಲ್ಗನ ಮಾಂಸವನ್ನು ತರಿಸಿದ್ದಲ್ಲದೆ, ಬೇರೆ ಕಡೆಯಿಂದ ಪರಿಣತವಾದ ಅಡುಗೆ ಭಟ್ಟರನ್ನು ಕರೆಯಿಸಿ ಆ ವೈದ್ಯರಿಗೆ ವಿಶೇಷವಾದ ಅತಿಥ್ಯವನ್ನು ನೀಡಿದ್ದು ದಿನಕರರ ವಿಶೇಷ.
ದಿನಕರ ದೇಸಾಯಿಯವರು ತುಂಬಾ ಚೆನ್ನಾಗಿ ಉಡುಪು ಧರಿಸುತ್ತಿದ್ದರು. ಸರ್ವಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರಿದ ಹೊಸತರಲ್ಲಿ ಸೂಟನ್ನು ಧರಿಸಿದ ಅವರು ತುಂಬಾ ಚೆನ್ನಾಗಿ ಕಾಣುತ್ತಿದ್ದರು. ಶಿಸ್ತು ಮತ್ತು ದಕ್ಷತೆಯ ಕಡೆಗೆ ಅವರು ಗಮನ ಕೊಡುತ್ತಿದ್ದರು. ‘ದಾಸಾಳ’ ಅವರಿಗೆ ಪ್ರಿಯವಾದ ಹೂವು.
“ದಾಸಾಳದೊಳಗುಂಟು
ನನ್ನ ಜೀವದ ಗಂಟು
ಹನ್ನೆರಡು ತಿಂಗಳು ಬಿರಿದು ಬಿರಿದೂ
ಇದಕ್ಕೆ ಬೇಕಾಗಿಲ್ಲ ಯಾವ ಬಿರುದು.”
(ದಾಸಾಳ-ಕವನ ಸಂಗ್ರಹ : ದಿನಕರ ದೇಸಾಯಿ, ಪು. ೩)
ವರುಷವಿಡಿ ಅರಳುತ್ತಿದ್ದರೂ ಯಾವ ಬಿರುದನ್ನು ಬಯಸದೆ ದಾಸಾಳದಂತೆ ದಿನಕರರ ಜೀವನದ ರೀತಿ. ಗುಲಾಬಿ ಹೂವು ಅವರಿಗೆ ತುಂಬಾ ಪ್ರಿಯವಾಗಿತ್ತು. ಪೂಜೆ ಮಲ್ಲಿಗೆ, ಸಂಪಿಗೆ ಹೂವಿನ ಪರಿಮಳವನ್ನು ಅವರು ಇಷ್ಟಪಡುತ್ತಿದ್ದರು. ಬೆಕ್ಕು ದಿನಕರರಿಗೆ ಅಚ್ಚುಮೆಚ್ಚು. ಬೆಕ್ಕು ಸ್ವಾತಂತ್ರ್ಯದ ಸಂಕೇತ. ಅದು ತುಂಬಾ ಸ್ವಾಭಿಮಾನಿ. ಅದಕ್ಕೆ ಸರ್ಕಸ್ಸಿನ ಡೇರೆಗೆ ಅದು ಸೇರಲಿಲ್ಲ ಎಂದು ಚುಟುಕ ಬರೆದ ದಿನಕರರು, ಜನಸೇವಕದ ಪ್ರಜಾರಾಜ್ಯೋತ್ಸವ ಸಂಚಿಕೆಯಲ್ಲಿ ಬೆಕ್ಕಿನ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿದ್ದರು. ಅವರ ನಿಸರ್ಗ ಪ್ರೀತಿ ಅನನ್ಯವಾದುದು. ಜನಸೇವಕ ಪತ್ರಿಕೆಯ “ಉತ್ತರ ಕನ್ನಡ ಕೈಪಿಡಿ” ಎಂಬ ಅಂಕಣದಲ್ಲಿ ಉತ್ತರ ಕನ್ನಡದ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ನಾಡಿನ ಜನತೆಗೆ ಪರಿಚಯಿಸಿದ್ದಾರೆ.
ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು
ನಡು ಮಧ್ಯದಲ್ಲಿ ಅಡಿಕೆ ತೆಂಗುಗಳ ಮಡಿಲು
ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ
ಇಲ್ಲಿಯೆ ಇನ್ನೊಮ್ಮೆ ಹುಟ್ಟುವೆನು ನಲ್ಲೆ
(ದಿನಕರ ಚೌಪದಿ – ದಿನಕರ ದೇಸಾಯಿ, ಚು.ಸಂ.೫೬೨, ಪು. ೧೧೩)
ಎಂದು ತಮ್ಮ ಚೌಪದಿಯಲ್ಲಿ ಉತ್ತರ ಕನ್ನಡದ ನಿಸರ್ಗ ಸೌಂದರ್ಯವನ್ನು ಬಣ್ಣಿಸುತ್ತಾ ಇಲ್ಲಿಯೇ ಇನ್ನೊಮ್ಮೆ ಹುಟ್ಟುತ್ತೇನೆ ಎಂದಿದ್ದಾರೆ. ಪಂಪ ಬನವಾಸಿಯನ್ನಿ ಮುರಿಸುಂಬಿಯಾಗಿ ಕೋಗಿಲೆಯಾಗಿ ಹುಟ್ಟ ಬಯಸಿದಂತೆ ದಿನಕರರು ಉತ್ತರ ಕನ್ನಡದಲ್ಲಿ ಜನ್ಮವೆತ್ತ ಬಯಸಿದ್ದಾರೆ. ನಿನ್ನ ಸ್ನೇಹಿತರು ಯಾರು ಎಂದು ಹೇಳು. ನಾನು ನಿನ್ನ ಬಗ್ಗೆ ಹೇಳುತ್ತೇನೆ. ಎಂಬ ಮಾತೊಂದಿದೆ. ಹಾಗೆ ಸಾಹಿತಿಗಳಾದ ದಿನಕರರು ಹಲವು ಸಾಹಿತಿಗಳ ಒಡನಾಟ ಹಾಗೂ ಗೆಳೆತನವನ್ನು ಹೊಂದಿದ್ದರು. ಬಿ.ಎಂ.ಶ್ರೀ, ವಿ.ಸೀ., ಡಿ.ವಿ.ಜಿ, ಮಾಸ್ತಿ, ಡಾ.ಗೋಕಾಕ್ ಮುಂತಾದವರ ಒಡನಾಟವಿದ್ದ ದಿನಕರರು ಅವರ ಬಗ್ಗೆ ಗೌರವವನ್ನು ಹೊಂದಿದ್ದರು. ಡಾ. ಶಿವರಾಮ ಕಾರಂತ, ಶಂಬಾ ಜೋಶಿ, ರಂಗನಾಥ ದಿವಾಕರ, ಖಾದ್ರಿ ಶಾಮಣ್ಣ, ಬಸವರಾಜ ಕಟ್ಟೀಮನಿ, ಚನ್ನವೀರ ಕಣವಿ, ಸದಾಶಿವ ಒಡೆಯರ, ಡಾ. ಆರ್. ಸಿ. ಹಿರೇಮಠ, ಡಾ.ಡಿ.ಸಿ. ಪಾವಟೆ, ಪಾಟೀಲ ಪುಟ್ಟಪ್ಪ, ಯಶವಂತ ಚಿತ್ತಾಲ, ಗೌರೀಶ ಕಾಯ್ಕಿಣಿ, ಆನಂದ ವರ್ಟಿ, ರಂ.ಶ್ರೀ.ಮುಗಳಿ ವಿ.ಜಿ.ಭಟ್ ಮೊದಲಾದವರು ದಿನಕರರ ಸಾಹಿತಿ ಮಿತ್ರರಾಗಿದ್ದರು. ಮಧು ದಂಡವತೆ, ವಿ.ಬಿ.ಕಾರ್ಣಿಕ, ಶ್ಯಾಮ ಸುಂದರ ಮಿಶ್ರಾ, ಆರ್.ಜಿ.ಕಾಕಡೆ ಮುಂತಾದವರು ಅವರ ರಾಜಕೀಯ ಹಾಗೂ ಸಾಮಾಜಿಕ ರಂಗದ ಸ್ನೇಹಿತರಾಗಿದ್ದರು
https://kanaja.karnataka.gov.in
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ