ಡಾ. ಅ೦ಬೇಡ್ಕರ ಮತ್ತು ಸಾ೦ವಿಧಾನಿಕ ನೈತಿಕತೆ

 

ರಾಜಕೀಯ ಗಣ್ಯರು ಪ್ರಜಾಪ್ರಭುತ್ವದಲ್ಲಿ ಸಂವಿಧಾನವನ್ನುಗೌರವವಿಸಿದಿದ್ದರೆ ... ರಾಜಕೀಯದ  ಮತ್ತು ಸ್ವಯಂ ಸಂಯಮದ ಎರಡೂ  ಸ್ವಾತಂತ್ರ್ಯಗಳು ಕ್ಷೀಣವಾಗುತ್ತವೆ, ಅನಿಶ್ಚಿತತೆಯು ಸಮಾಜವನ್ನು ಕಾಡುತ್ತದೆ ಮತ್ತು ಸಾಮಾಜಿಕ  ಮತ್ತು ನೈತಿಕ ಪ್ರಮಾಣಗಳು ಕುಸಿಯತ್ತವೆ.

When the Political Elite Fails to Honour the Constitution in a Democracy...

ಜಾತಿ ತಾರತಮ್ಯದ ವಿರುದ್ಧದ ಪ್ರತಿಭಟನೆಯ ಪ್ರಾತಿನಿಧ್ಯ ಚಿತ್ರ. ಫೋಟೋ: ಪಿಟಿಐ

 

 

 

 

Neera Chandhoke

ನೀರಾ ಚಾಂಧೋಕ   ದಿ ವಯರ್ ಪ್ರಕಟಣೆಯಲ್ಲಿ 

ಜನವರಿ 24 ರಂದು, ರಾಜಸ್ಥಾನದ ಬುಂಡಿ ಜಿಲ್ಲೆಯ ಚಾಡಿ ಗ್ರಾಮದಲ್ಲಿ, ಬ್ಯಾಂಡ್, ಸ೦ಗೀತ  ಮತ್ತು ಕುದುರೆಯ ಸವಾರಿ ಸೇರಿ ಮೆರವಣಿಗೆಯೊ೦ದಿಗೆ ಒಬ್ಬ ಮದುಮಗನು  ತನ್ನ ಮದುವೆಯ ಸ್ಥಳಕ್ಕೆ ಬ೦ದನು. ತಮ್ಮ ಮದುವೆ ಸಮಾರಂಭಗಳು ನಡೆಯುವ ಸ್ಥಳಕ್ಕೆ ವರರು ಅ೦ದವಾದ ಬಟ್ಟೆ ಧರಿಸಿ ಸಾಮಾನ್ಯವಾಗಿ  ಕುದುರೆಯನ್ನು ಸವಾರಿ ಮಾಡುವ ಸಮಾಜದಲ್ಲಿ, ಇದು ಗಮನಾರ್ಹ  ವಿಷಯವಲ್ಲ.

ಆದರೆ ಜನವರಿ 25 ರ ಪತ್ರಿಕೆಗಳು ಶ್ರೀರಾಮ್ ಮೇಘವಾಲ್ ತಮ್ಮ ಮದುವೆಯ ಮೆರವಣಿಗೆಯಲ್ಲಿ ಸಂಗೀತ ಮತ್ತು ಸ೦ಗೀತ ನಿವೇದಕನೊ೦ದಿಗೆ ಕುದುರೆ  ಸವಾರಿ ಮಾಡಿದ ಸುದ್ದಿಯನ್ನು ವಿಶೇಷವಾಗಿ ಪ್ರಕಟಿಸಿದವು. ಬಂಡಿ ಜಿಲ್ಲೆಯಲ್ಲಿ ಇದೇ ಮೊದಲು, ಮುಖ್ಯವಾಗಿ 60 ಜನ ಪೊಲೀಸರು ಮತ್ತು ಜಿಲ್ಲಾಡಳಿತದ ಪ್ರತಿನಿಧಿಗಳು ಮೆರವಣಿಗೆ  ಸ೦ರಕ್ಷಣೆ ನೀಡುವದರಿ೦ದ,  ಇದು  ದಲಿತ ವರನೊಬ್ಬನಿಗೆ ಸಾಧ್ಯವಾಯಿತು ಅದೇ ಸಮಯದಲ್ಲಿ,  ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ, ದಿಲೀಪ್ ಅಹಿರ್ವಾರ್ ತನ್ನ ಮದುವೆಯ ಮೆರವಣಿಗೆಯನ್ನು ಮುನ್ನಡೆಸಲು ಕುದುರೆಯನ್ನು ಏರಿದನು. ಮೇಲ್ಜಾತಿ ಸಮುದಾಯಕ್ಕೆ ಸೇರಿದ ಕೆಲವರು ಅವರ ಮನೆಯನ್ನು ಧ್ವಂಸಗೊಳಿಸಿದರು.   ಮೇಲ್ಜಾತಿಗಳಿಗೆ ಮೀಸಲಾದ ಸಂಪ್ರದಾಯ, ದಲಿತರು ಅನುಸರಿಸಲು ಅನುಮತಿಸದ  ಸಂಹಿತೆಯನ್ನು ಮುರಿಯುವ ಧೈರ್ಯಕ್ಕಾಗಿ  ಬಹುಶಃ ಶಿಕ್ಷೆಯಾಗಿ ಇದನ್ನು ಮಾಡಲಾಗಿತ್ತು. 

ನಾವು ಪ್ರತಿ ವರ್ಷ ಜನವರಿ 26 ರಂದು ಆಚರಿಸುವ ಭಾರತದ ಸಂವಿಧಾನವು ಪ್ರತಿ ನಾಗರಿಕರಿಗೆ ಜೀವನ, ಸ್ವಾತಂತ್ರ್ಯ ಮತ್ತು ಭದ್ರತೆಯ ಹಕ್ಕುಗಳ ವಿಸ್ತಾರವಾದ ಗು೦ಪನ್ನು ವಿಧಿ  21 ರ ಅಡಿಯಲ್ಲಿ ನೀಡಿದೆ. ಒಂದು ಹಕ್ಕು ನಮಗೆ ಮಾಡಲು ಅಥವಾ ಮಾಡದಿರುವ ಸ್ವಾತಂತ್ರ್ಯವನ್ನು ನೀಡುತ್ತದೆ. ಒಬ್ಬ ಯುವಕ ತನ್ನ ಮದುವೆಯ ಸ್ಥಳಕ್ಕೆ ಹಾರ್ಲೆ-ಡೇವಿಡ್ಸನ್ ಬೈಕ ಸವಾರಿ ಮಾಡಲು ಬಯಸಿದರೆ, ಯಾರೂ ಹಾಗೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ.  ಅದರ೦ತೆಯೇ ಅವನು ನಡೆಯಬಹುದು, ಅಥವಾ ಓಡಬಹುದು ಅಥವಾ ಸ್ಥಳಕ್ಕೆ  ಸಾವಕಾಶವಾಗಿ  ತಿರುಗಾಡುತ್ತ ಹೋಗಬಹುದು,  ಇದರ ಆಯ್ಕೆಯು ಅವನದು  ಮತ್ತು ಅವನದು ಮಾತ್ರ. . ಅಥವಾ  ಹಿ೦ದಿನ  ಸಂಪ್ರದಾಯದ ಪ್ರಕಾರ ಅಲಂಕರಿಸಿದ ಕುದುರೆಯನ್ನು ಆರೋಹಿಸಬಹುದು. ಆದರೆ ಇಲ್ಲ. ನಮ್ಮ ಪ್ರಜಾಸತ್ತಾತ್ಮಕ ಸಂವಿಧಾನವು 1950 ರಲ್ಲಿ ಜಾರಿಗೆ ಬಂದಿತು. ಇಂದು ನಾವು 2022 ರಲ್ಲಿ ಇದ್ದೇವೆ. ಆದರೂ ದಲಿತರು  ತಮ್ಮ ಆಯ್ಕೆಗಳನ್ನು ಚಲಾಯಿಸುವುದನ್ನು ಈಗಲೂ ತಡೆಯಲಾಗುತ್ತಿದೆ.  ಇದು ನಮ್ಮ ದೃಷ್ಟಿಯಲ್ಲಿ ಮತ್ತು ಅಧಿಕಾರ ಹಿಡಿದಿರುವವರ ದೃಷ್ಟಿಯಲ್ಲಿ ಸಂವಿಧಾನದ ಸ್ಥಿತಿ ಏನೆಂಬುದರ ಬಗ್ಗೆ ಸಾರ್ವಜನಿಕ ಕಾಳಜಿ ಮತ್ತು ಚರ್ಚೆಯ ವಿಷಯವಲ್ಲವೇ?

ಜಗತ್ತು ಕಂಡ ಅತ್ಯಂತ ಶ್ರೇಣೀಕೃತ ಮತ್ತು ದಬ್ಬಾಳಿಕೆಯ ಜಾತಿ-ಬಂಧಿತ ಸಮಾಜಗಳಲ್ಲಿ ವಾಸಿಸುವುದನ್ನು ನಾವು ಮುಂದುವರಿಸುತ್ತಿದ್ದೇವೆ. ನಮ್ಮ ಸ್ವಂತ ಜನರು ತಮ್ಮ ಸಾಂವಿಧಾನಿಕವಾಗಿ ಖಾತರಿಯಾದ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸದಂತೆ ತಡೆಯಲಾಗುತ್ತಿದೆ.  ಹಕ್ಕುಗಳು ಮುಖ್ಯವಾಗಿವೆ ಏಕೆಂದರೆ ಅವು ಧಾರಕನಿಗೆ ನೈತಿಕ ಸ್ಥಾನಮಾನವನ್ನು ನೀಡುತ್ತವೆ. ಹಕ್ಕುಗಳ ಸ್ವಾಧೀನ ಮತ್ತು ಆಚರಣೆಯು  ಒ೦ದು ರಾಜಕೀಯ ಹೇಳಿಕೆಯನ್ನು ನೀಡುತ್ತದೆ: ಜನರ ಪರವಾಗಿ  ಮಾಡಬೇಕಾದ ಕೆಲವು ವಿಷಯಗಳಿವೆ; ಹಾಗೆಯೇ  ಅವರಿಗೆ ವಿರುಧ್ಧವಾಗಿ ಮಾಡಲಾಗದ  ಕೆಲವು ಕೆಲಸಗಳಿವೆ. 

ಪ್ರಜಾಸತ್ತಾತ್ಮಕ ಜಗತ್ತಿನಲ್ಲಿ, ಹಕ್ಕುಗಳು ನಮ್ಮ ಏಕೈಕ ರಾಜಕೀಯ ಅಸ್ತ್ರವಾಗಿದೆ; ಕ್ರಮಾನುಗತಗಳನ್ನು ಉರುಳಿಸಲು ನಮ್ಮ ಏಕೈಕ ರಾಜಕೀಯ ಶಬ್ದಕೋಶ. ಸಾಂವಿಧಾನಿಕವಾಗಿ ನೀಡಿರುವ ಹಕ್ಕುಗಳು ಭಾರತದಲ್ಲಿ ಸಾಮಾಜಿಕ ಸಮೀಕರಣಗಳನ್ನು ಬದಲಿಸುವಲ್ಲಿ ಯಶಸ್ವಿಯಾಗಿದೆಯೇ? ಬಹುಶಃ ಹೌದು, ಬಹುಶಃ ಇಲ್ಲ.

ಸಾಂವಿಧಾನಿಕ ಪ್ರಜಾಪ್ರಭುತ್ವ ಮತ್ತು ಅದರ ಹಕ್ಕುಗಳ ಭಾಷೆಯು ಆಳವಾದ ಮಟ್ಟದಲ್ಲಿ  ಪ್ರಜಾಸತ್ತಾತ್ಮಕವಲ್ಲದ ಸಮಾಜದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ನಾವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ಹೊಂದಿದ್ದೆವು. ನವೆಂಬರ್ 4, 1949 ರಂದು, ಕರಡು ಸಂವಿಧಾನದ ಚರ್ಚೆಯ ಸಮಯದಲ್ಲಿ, ಬಿ.ಆರ್. ಅಂಬೇಡ್ಕರ್ ಅವರು ಸಭೆಯ ಕಾರ್ಯಸೂಚಿಯ ಮೇಲೆ  ಭಾರಿಯಾಗಿ ಮೂಡಿಬ೦ದ  ಮಹತ್ವದ ವಿಷಯವನ್ನು ಪ್ರಸ್ತಾಪಿಸಿದರು - ಅದೆ೦ದರೆ ಸಂವಿಧಾನದ ನಿಬಂಧನೆಗಳನ್ನು ಪಶ್ಚಿಮದಿಂದ ಎರವಲು ಪಡೆಯಲಾಗಿದೆ. 20 ನೇ ಶತಮಾನದ ಮಧ್ಯಭಾಗದಲ್ಲಿ ರಚಿಸಲಾದ ಸಂವಿಧಾನವು ಸಂಪೂರ್ಣವಾಗಿ ಹೊಸದು ಆಗುವದು ಸಾಧ್ಯವೇ ? ಎ೦ದು ಅವರು  ಕೇಳಿದರು. "ಇಷ್ಟು ಕಾಲವಿಳ೦ಬವಾಗಿ  ರಚಿತವಾದ ಸಂವಿಧಾನದಲ್ಲಿ ಹೊಸ ವಿಷಯಗಳು ಏನಾದರೂ ಇರಬಹುದಾದರೆ, ಅವು ದೋಷಗಳನ್ನು ತೆಗೆದುಹಾಕಲು ಮತ್ತು ದೇಶದ ಅಗತ್ಯಗಳಿಗೆ ಸರಿಹೊಂದಿಸಲು ಮಾಡಿದ ಬದಲಾವಣೆಗಳು ಮಾತ್ರ.  ... ಭಾರತ ಸರ್ಕಾರದ ಕಾಯಿದೆ, 1935 (Government of India Act, 1935)ರ ನಿಬಂಧನೆಗಳ ದೊಡ್ಡದೊ೦ದು  ಭಾಗವನ್ನು ಕರಡು ಸಂವಿಧಾನವು  ಅಳವಡಿಸಿಕೊ೦ಡಿರುವ ಆರೋಪದಬಗ್ಗೆ  ನಾನು ಯಾವುದೇ ಕ್ಷಮೆಯಾಚಿಸುವುದಿಲ್ಲ. ಎರವಲು ತೆಗೆದುಕೊಳ್ಳುವುದರಲ್ಲಿ ನಾಚಿಕೆಪಡುವಂಥದ್ದೇನೂ ಇಲ್ಲ. ಇದರಲ್ಲಿ  ಕೃತಿಚೌರ್ಯ ಒಳಗೊಂಡಿಲ್ಲ”.

ಸಂವಿಧಾನದಲ್ಲಿನ ಆಡಳಿತಾತ್ಮಕ ನಿಬಂಧನೆಗಳ ವಿಭಾಗವು ಭಾರತ ಸರ್ಕಾರದ ಕಾಯಿದೆ, 1935 ಅನ್ನು ಪುನರಾವರ್ತಿಸುತ್ತದೆ ಎಂದು ಅಂಬೇಡ್ಕರ್ ಒಪ್ಪಿಕೊಂಡರು. ಖಂಡಿತವಾಗಿಯೂ, ಅಂತಹ ವಿವರವಾದ ಆಡಳಿತಾತ್ಮಕ ನಿಬಂಧನೆಗಳು ಸಂವಿಧಾನದ ಭಾಗವಾಗಿರಬಾರದು ಎಂದು ಅವರು ಹೇಳಿದರು. ಆದರೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಅವುಗಳ ಸೇರ್ಪಡೆ ಅಗತ್ಯವಾಗಿತ್ತು. ಏಕೆಂದರೆ, ಅವರು ಪ್ರಖ್ಯಾತವಾಗಿ  ಹೇಳುವಂತೆ, ಪ್ರಜಾಪ್ರಭುತ್ವವು " ಸಾರಭೂತವಾಗಿ ಪ್ರಜಾಸತ್ತಾತ್ಮಕವಲ್ಲದ ಭಾರತೀಯ ನೆಲದಲ್ಲಿ ಕೇವಲ ತೋರಿಕೆಯ ಪ್ರದರ್ಶನವಾಗಿದೆ, ಇದು".

ಭಾರತದ ಸಂವಿಧಾನ.

ಈ ನುಡಿಗಟ್ಟು ಸಾಕಷ್ಟು ಬಾರಿ ಉಲ್ಲೇಖಿಸಲಾಗಿದೆ. ಈ ಪದಗುಚ್ಛದ ಅರ್ಥಗಳು ಅಗಾಧವಾದ ಮಹತ್ವವನ್ನು ಹೊಂದಿವೆ. ಅಂಬೇಡ್ಕರ್ ಅವರು ಸಂವಿಧಾನ ಸಭೆಯ ಚರ್ಚೆಗಳಿಗೆ ಮಹಾನ್  ಕಲಿಕೆ, ಅಪಾರ ರಾಜಕೀಯ ತಿಳುವಳಿಕೆ ಮತ್ತು ಗ್ರಹಿಕೆಯನ್ನು ತಂದರು. ಅವರು ದಲಿತರಾಗಿ ತಮ್ಮ ಸ್ವಂತ ಅನುಭವಗಳಿಂದ ಹುಟ್ಟಿದ ಅಗಾಧ ಬುದ್ಧಿವಂತಿಕೆಯನ್ನೂ ಚರ್ಚೆಗೆ ತಂದರು. ಜನರು ಸಂವಿಧಾನವನ್ನು ತಮಗೆ ಕೇವಲ ರೂಪಕವಾಗಿ ನೀಡಿಕೊ೦ಡರೆ ಸಾಕಾಗುವುದಿಲ್ಲ ಎಂದು ಜೀವನ ಅವರಿಗೆ ಕಲಿಸಿತ್ತು. ಸಂವಿಧಾನವು ಜನರೆಲ್ಲರ ಮತ್ತು ರಾಜಕೀಯ ಗಣ್ಯರ ಜೀವನದ ಭಾಗವಾಗಬೇಕು, ಅದು ಗೌರವದ ವಸ್ತುವಾಗಿರಬೇಕು ಮತ್ತು ರಾಜಕೀಯ ಮನೋವಿಕಾರ ಪಡೆಯುವ  ವಸ್ತುವಾಗಿರಬೇಕು. ಈ ಶೀಲವನ್ನು ಅವರು 'ಸಾಂವಿಧಾನಿಕ ನೈತಿಕತೆ' ಎಂದು ಕರೆದರು.

 

ಸಾಂವಿಧಾನಿಕ ನೈತಿಕತೆಯ ಕಲ್ಪನೆ

ಅಂಬೇಡ್ಕರ್ ಅವರು  ನವೆಂಬರ್ 4, 1949 ರ ಸಂವಿಧಾನದ ಕರಡು ಕುರಿತ ತಮ್ಮ ಭಾಷಣದಲ್ಲಿ , ಮತ್ತು ನವೆಂಬರ್ 25, 1949 ರಂದು ಚರ್ಚೆಗೆ ತಮ್ಮಅಂತಿಮ ಉತ್ತರದಲ್ಲಿ, ಪರಿಚಯಿಸಿದ ‘ಸಂವಿಧಾನದ ನೈತಿಕತೆ’ಯ ಪರಿಕಲ್ಪನೆಗೆ ಸ್ಫೂರ್ತಿ ಪಡೆದದ್ದು, 19 ನೇ ಶತಮಾನದ ಬ್ರಿಟಿಷ್ ಇತಿಹಾಸಕಾರ ಮತ್ತು ಜ್ಞಾನೋದಯ ಚಿಂತಕ ಜಾರ್ಜ್ ಗ್ರೋಟ್ (George Grote (1794-1871) ರಿ೦ದ. ಗ್ರೋಟ್ ಗ್ರೀಸ್ ಇತಿಹಾಸದ (1846-1856), ವಿಶೇಷವಾಗಿ ಅಥೆನ್ಸಿನ  ಪ್ರಜಾಪ್ರಭುತ್ವದ ಬಗ್ಗೆ12 ಸಂಪುಟಗಳನ್ನು ಬರೆದಿದ್ದರು. ಪ್ಲೇಟೋನಿಂದ ಹಿಡಿದು  ಸಮಕಾಲೀನರವರೆಗಿನ ವಿಮರ್ಶಕರ ವಿರುದ್ಧ ಅಥೆನಿಯನ್ ಪ್ರಜಾಪ್ರಭುತ್ವವನ್ನು ಸಮರ್ಥಿಸುವಾಗ, ಸ್ವಾತಂತ್ರ್ಯ ಮತ್ತು ಸ್ವಯಂ ಸಂಯಮದ ಅವಳಿ  ರಾಜಕೀಯ  ಕಾರ್ಯಸೂಚಿಗಳ ಆಧಾರದ ಮೇಲೆ ಪ್ರಜಾಪ್ರಭುತ್ವದ ಕಲ್ಪನೆಯನ್ನು ಅಥೆನ್ಸ್  ರಾಜ್ಯವು ಜಗತ್ತಿಗೆ ನೀಡಿದೆ ಎಂದು ಗ್ರೋಟ್ ಸೂಚಿಸಿದರು. ಅಥೆನಿಯನ್ ಪ್ರಜಾಪ್ರಭುತ್ವದ ಸ್ಥಾಪಕ ಎಂದು ಪರಿಗಣಿಸಲಾದ ಕ್ಲೈಸ್ಥೆನೀಸ್ (Cleisthenes) ಮೇಲೆ,  ಮತ್ತು ನಾವು ಸಂವಿಧಾನಕ್ಕೆ ಉತ್ಕಟ ರೀತಿಯಲ್ಲಿ ನಮ್ಮ ಮನೋಭಾವನೆಗಳನ್ನು  ಲಗತ್ತಿಸಬೇಕು ಎಂಬ ಅವರ ನಂಬಿಕೆಯ ಮೇಲೆ , ಗ್ರೋಟ್ ಕೇಂದ್ರೀಕರಿಸಿದರು.

ಗ್ರೋಟ್‌ ಹೇಳಿದ ಸ್ವಾತಂತ್ರ್ಯ ಮತ್ತು ಸ್ವಯಂ ಹೇರಿದ ನಿರ್ಬಂಧಗಳ ಸಹಬಾಳ್ವೆಯನ್ನು ಇತರ ಎರಡು ಐತಿಹಾಸಿಕ ನಿದರ್ಶನಗಳಲ್ಲಿ ಕಾಣಬಹುದು. ಮೊದಲನೆಯದು 1688 ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ  ಮಹಿಮಾನ್ವಿತ ಕ್ರಾಂತಿ (the Glorious Revolution) ಯಾಗಿದೆ. ಆ ವರ್ಷದಲ್ಲಿ, ರಾಜ ಜೇಮ್ಸ್ II ಅವರ ಮಗಳು ಮೇರಿ II ಮತ್ತು ಅವಳ ಪತಿ ವಿಲಿಯಂ III ಸಿಂಹಾಸನದ ಮೇಲೆ ಬದಲಾಗಿ ಸ್ಥಾನ ಪಡೆದರು. ಇನ್ನೊಂದು ನಿದರ್ಶನವನ್ನು ಅಮೇರಿಕನ್ ಸಂವಿಧಾನವು ಒದಗಿಸಿದೆ. ಅಥೆನ್ಸ್‌ನ ಪ್ರಕರಣದಲ್ಲಿ, ಆ ನಂತರದ ಐತಿಹಾಸಿಕ ನಿದರ್ಶನಗಳಂತೆ, ನಿರ್ಧಾರ ತೆಗೆದುಕೊಳ್ಳುವ ಕಾರ್ಯವಿಧಾನಗಳನ್ನು ವಿಶೇಷವಾಗಿ ಕೆಲವು  ಸ೦ದರ್ಭಗಳ  ಬಗ್ಗೆ ಕಾನೂನು ಮೌನವಾಗಿದ್ದರೆ ಸಂವಿಧಾನದ ನೈತಿಕತೆಯ ಮೂಲಕ ನಿಯಂತ್ರಿಸಬೇಕು ಎಂದು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ. ಸಾಂವಿಧಾನಿಕ ನೈತಿಕತೆಯ ಕಲ್ಪನೆಯನ್ನು ಒಳಗೊಳ್ಳುವ ಆಳವಾದ ವಾದವಿತ್ತು. ಗ್ರೋಟ್ ಅವರ ಮಾತುಗಳಲ್ಲಿ ಇದು ಉತ್ತಮವಾಗಿ ವ್ಯಕ್ತವಾಗುತ್ತದೆ.

"ಸಾಂವಿಧಾನಿಕ ನೈತಿಕತೆ ಎಂದು ನಾವು ಕರೆಯಬಹುದಾದ ಅಪರೂಪದ ಮತ್ತು ಕಷ್ಟಕರವಾದ ಭಾವನೆಯನ್ನು ಬಹುಸಂಖ್ಯ ಜನತೆಯಲ್ಲಿ ರಚಿಸುವುದು (ಕ್ಲೈಸ್ಥೆನೀಸ್‌ಗೆ) ಅಗತ್ಯವಾಗಿತ್ತು - ಸಂವಿಧಾನದ ಸ್ವರೂಪಗಳಿಗೆ ಅತ್ಯುನ್ನತ ಗೌರವ, ಅಧಿಕಾರಿಗಳಿಗೆ ವಿಧೇಯತೆಯನ್ನು ಜಾರಿಗೊಳಿಸುವುದು, ಈ ಸ್ವರೂಪಗಳ ಅಡಿಯಲ್ಲಿ ಮತ್ತು ಚೌಕಟ್ಟಿನ ಒಳಗೆ ಕಾರ್ಯನಿರ್ವಹಿಸುವುದು, ಇಷ್ಟಾದರೂ  ಇವೆಲ್ಲವನ್ನು ಮುಕ್ತ ಭಾಷಣದ ಆಚರಣೆಯೊ೦ದಿಗೆ, ನಿರ್ದಿಷ್ಟ ಕಾನೂನು ನಿಯಂತ್ರಣದೊಳಗೆ ಮಾತ್ರ  ಎಲ್ಲಾ ಸಾರ್ವಜನಿಕ ಕಾರ್ಯಗಳ ನಿರ್ವಹಣೆ, ಕಾರ್ಯನಿರ್ವಹಿಸುವ ಅಧಿಕಾರಿಗಳ  ಸಾರ್ವಜನಿಕ  ಕೆಲಸಗಳ  ಅನಿಯಂತ್ರಿತ ಖಂಡನೆ  - ಇದೆಲ್ಲ ಪಕ್ಷಗಳ  ನಡುವಿನ ಸ್ಪರ್ಧೆಯ ಕಹಿರುಚಿಯ ಮಧ್ಯೆಯೂ  ಪ್ರತಿಯೊಬ್ಬ ನಾಗರಿಕನ ಎದೆಯಲ್ಲಿ ಸಂವಿಧಾನದ ರೂಪವು ವಿರೋಧಿಗಳ ದೃಷ್ಟಿಯಲ್ಲಿ ಅವನ ಸ್ವಂತಕ್ಕಿಂತ ಕಡಿಮೆ ಪವಿತ್ರವಾಗುವುದಿಲ್ಲ ಎನ್ನುವ ಪರಿಪೂರ್ಣ ವಿಶ್ವಾಸ ದೊಂದಿಗೆ ಸಂಯೋಜಿಸಲ್ಪಟ್ಟಿದೆ. 

ರಾಜಕೀಯ ಅಧಿಕಾರಿಗಳು, ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ರಾಜಕೀಯ ಸದ್ಗುಣವನ್ನು ಮತ್ತು ವಿಕ್ಟೋರಿಯನ್ ತಲೆಮಾರಿನ  ಕಾಲದಲ್ಲಿ   'ಉತ್ತಮ ನಡತೆ’ (‘character’) ಎ೦ದು ಪರಿಗಣಿಸುತ್ತಿದ್ದ ವರ್ತನೆಯನ್ನು  ಮೈಗೂಡಿಸಿಕೊಳ್ಳಲು ಜವಾಬ್ದಾರರಾಗಿದ್ದರು.  ( ಗ್ರೋಟ್  ಅವರ ಪ್ರತಿಪಾದನೆ ಅಥೆನಿಯನ್ನರ ಬಗ್ಗೆ ಅಲ್ಲ ಆದರೆ ಅವರ ತಮ್ಮ ಸ್ವಂತ ಪೀಳಿಗೆಯ ಬಗ್ಗೆ - ಮಿತವ್ಯಯ, ಉದ್ಯಮಶೀಲತೆ  ಮತ್ತು ಲಜ್ಜೆ ( prudishness) ಯಿ೦ದ  ಹುಟ್ಟಿದ ಸದ್ವರ್ತನೆಯನ್ನು  ಮರ್ಯಾದಿಸುವ ವಿಕ್ಟೋರಿಯನ್ನರ ಬಗ್ಗೆ - ಎಂದು ಆರೋಪಿಸುವ ವಿಮರ್ಶಕರೂ ಇದ್ದಾರೆ.)

ಮರಳಿ ಸಾಂವಿಧಾನಿಕ ನೈತಿಕತೆಗೆ :  ಸಂಯಮವನ್ನು ಅನುಸರಿಸುವದಕ್ಕೆ ಹೊರತಾಗಿ ಅಧಿಕಾರವನ್ನು ಹೊಂದಿರುವವರನ್ನು ಮುಕ್ತವಾಗಿ ಟೀಕಿಸುವ ಹಕ್ಕನ್ನು  ಪ್ರಜೆಗಳು ಹೊಂದಿದ್ದರು. ಆದರೆ ಇದು ಸಂಭವಿಸಬೇಕಾದರೆ, ಪ್ರತಿಯೊಬ್ಬ ರಾಜಕೀಯ ನಾಯಕರು ಸಂವಿಧಾನವನ್ನು ಪವಿತ್ರವೆಂದು ಪರಿಗಣಿಸುತ್ತಾರೆ ಎಂಬ ವಿಶ್ವಾಸ ಪ್ರಜೆಗಳಲ್ಲಿ ಇರಬೇಕು. ರಾಜಕೀಯ ಅಧಿಕಾರ, ಮತ್ತು ನಾಗರಿಕರ ಹಕ್ಕುಗಳು ಮತ್ತು ಜವಾಬ್ದಾರಿಗಳ ನಡುವಿನ ಸಂಬಂಧವು ಸಂವಿಧಾನದ ನೈತಿಕತೆಯ  ಗೌರವವನ್ನು ಒ೦ದೇ ಮನಸ್ಸಿನಿ೦ದ ಪಾಲುಗೊಳ್ಳುವ ಮನೋಭಾವದ ಮೇಲೆ ಆಧರಿಸಿದೆ. ಸರ್ಕಾರಕ್ಕೆ ವಿಶೇಷ ಜವಾಬ್ದಾರಿ ಇತ್ತು; ಅದೆ೦ದರೆ ತನ್ನ ನಿದರ್ಶನದ  ಮೂಲಕ ಜನರಿಗೆ ನೈತಿಕತೆಯನ್ನು ಕಲಿಸಬೇಕು. ಸಾಂವಿಧಾನಿಕ ನೈತಿಕತೆಯು  ಮಿತವಾದ ರಾಜಕೀಯವನ್ನು ಬೆಳೆಸುತ್ತದೆ, ಇಲ್ಲದಿದ್ದರೆ ಸಮಾಜಗಳು ಗ್ರೋಟ್ ಪ್ರಕಾರ, ಫ್ರೆಂಚ್ ಕ್ರಾಂತಿಯಿಂದ ಬೆಳೆಸಲ್ಪಟ್ಟ ಮಿತಿಮೀರಿದ ವರ್ತನೆಗೆ  ಇಳಿಯುತ್ತವೆ.

ಅದೇ ತರ್ಕವನ್ನು ಅಂಬೇಡ್ಕರ್ ಭಾರತೀಯ ಪ್ರಕರಣಕ್ಕೂ ಅನ್ವಯಿಸಿದರು. ಸಮಾಜವು ಸಾಂವಿಧಾನಿಕ ನೈತಿಕತೆಯಿಂದ ತುಂಬಿರುವಾಗ ಮಾತ್ರ, ಸಂವಿಧಾನದಲ್ಲಿನ ಆಡಳಿತದ ವಿವರಗಳನ್ನು ಬಿಟ್ಟುಬಿಡುವ ಸಾಹಸಿಕ ಹೆಜ್ಜೆಯನ್ನು ನಾವು ತೆಗೆದುಕೊಳ್ಳಬಹುದು. ಆದರೆ ಭಾರತದಲ್ಲಿ ಸಾಂವಿಧಾನಿಕ ನೈತಿಕತೆಯ ಹರಡುವಿಕೆ ಇದೆ ಎಂದು  ನಾವು ನ೦ಬಬಹುದೇ, ಎ೦ದು ಮೊನಚಾಗಿ ಕೇಳಿದರು ಅಂಬೇಡ್ಕರ್ ? ಸಾಂವಿಧಾನಿಕ ನೈತಿಕತೆಯನ್ನು ಬೆಳೆಸಿಕೊಳ್ಳಬೇಕು; ಇದು ಸಹಜ ಭಾವನೆಯಲ್ಲ.

ನಮ್ಮ ಸಮಾಜವು ಆಳವಾಗಿ ಪ್ರಜಾಸತ್ತಾತ್ಮಕವಲ್ಲದ ಕಾರಣ ಭಾರತೀಯರು ಸಾಂವಿಧಾನಿಕ ನೈತಿಕತೆಯನ್ನು ಇನ್ನೂ ಕಲಿತಿದ್ದಿಲ್ಲ. ಸಂವಿಧಾನದ ನೈತಿಕತೆಗೆ ಉತ್ಕಟವಾಗಿ ಅಂಟಿಕೊಂಡಿರುವ ಸರಕಾರವು ಜನರಲ್ಲಿ ಸದ್ಗುಣವನ್ನು ಮೈಗೂಡಿಸಿಕೊಳ್ಳಬೇಕೆಂಬುದು ತಾತ್ಪರ್ಯವಾಗಿತ್ತು. ನಾಯಕರು ಮಾದರಿಯಾಗಿರಬೇಕು. ಅವರು ತಾವೇ  ಸಂವಿಧಾನಕ್ಕೆ ಅಗೌರವ ತೋರಿಸುತ್ತಿರುವಾಗಲೂ     ತಮ್ಮ ಸಾಂವಿಧಾನಿಕವಾಗಿ ಪಡೆದುಕೊ೦ಡ  ಅಧಿಕಾರದ ಸ್ಥಾನಗಳಿಗೆ ನಾಗರಿಕರಿಂದ ಗೌರವವನ್ನು ನಿರೀಕ್ಷಿಸಲಾಗುವದು ಸಾಧ್ಯವಲ್ಲ.   ಇದಕ್ಕೆ ಅವರು ರಕ್ಷಿಸಬೇಕಾದ ಮೊದಲ ಗುರಿ ನಾಗರಿಕರ ಸ್ವಾತಂತ್ರ್ಯ.

ಅಂಬೇಡ್ಕರ್ ಅವರ ಸಾಂವಿಧಾನಿಕ ನೈತಿಕತೆ ಎರಡನೆಯ ಕಲ್ಪನೆ ಸ್ವಯಂ ಸಂಯಮದ ತಾತ್ಪರ್ಯವೆಂದರೆ, ಎಲ್ಲಾ ಹಿತಾಸಕ್ತಿಗಳ ಘರ್ಷಣೆಗಳು ಮತ್ತು ಎಲ್ಲಾ ಸಂಘರ್ಷಗಳನ್ನು ಸಂವಿಧಾನದ ಚೌಕಟ್ಟಿನೊಳಗೆ ಮತ್ತು ಸಂವಿಧಾನದ ನೈತಿಕತೆಗೆ ಅನುಗುಣವಾಗಿ ಪರಿಹರಿಸಬೇಕು. ಅ೦ಬೆಡ್ಕರ್ ಅವರ ತಿಳಿವಳಿಕೆಯಲ್ಲಿ ಸಂವಿಧಾನದ ಸ್ವೀಕರಣೆಯಿ೦ದಾಗಿ ಅಧೀನತೆಯಿ೦ದ  ಪ್ರಜೆಯಾಗಿ ನಡೆದ ಪರಿವರ್ತನೆ, ಆಂದೋಲನ ರಾಜಕೀಯದ ಅಂತ್ಯವನ್ನು ತೀರ್ಮಾನಿಸಿತು. 1920 ರ ದಶಕದಿಂದಲೂ ಭಾರತೀಯ ಜನರು ಸ್ವಾತಂತ್ರ್ಯಕ್ಕಾಗಿ 20 ನೇ ಶತಮಾನದ ಪ್ರಮುಖ ಹೋರಾಟಗಳಲ್ಲಿ ಒಂದನ್ನು ಸಜ್ಜುಗೊಳಿಸಿದರು. ವಸಾಹತುಶಾಹಿ ಸರ್ಕಾರಕ್ಕೆ ಪ್ರಾಯೋಗಿಕವಾಗಿ ಪ್ರತಿಯೊಂದು ನೀತಿಯಲ್ಲೂ ಸವಾಲು ಹಾಕುವಲ್ಲಿ ಸಾಮೂಹಿಕ ಚಳುವಳಿಗಳು ಯಶಸ್ವಿಯಾಗಿದ್ದವು. ಈಗ ಭಾರತೀಯರು ಆಂದೋಲನದ ರಾಜಕೀಯದಿಂದ ಜವಾಬ್ದಾರಿಯುತ ಪೌರತ್ವದ ರಾಜಕೀಯಕ್ಕೆ ಸಾಗುವ ಸಮಯ ಬಂದಿದೆ.

ಪರಿವರ್ತನೆಯು ನಿಸ್ಸಂದೇಹವಾಗಿ ಕಷ್ಟಕರವಾಗಿರುತ್ತದೆ.  ಬೇರೆ ಬೇರೆ ಮನವೊಲಿಕೆಗಳಿಗೆ ಸೇರಿದ ಜನರು ಅಸಹಕಾರ, ಅಥವಾ ನಾಗರಿಕ ಆಜ್ಞಾಭ೦ಗ, ಅಥವಾ ಭಾರತ ಬಿಟ್ಟು ತೊಲಗಿ ಎಂಬ ಧ್ವಜದ ಅಡಿಯಲ್ಲಿ ಸಜ್ಜುಗೊಳಿಸಬಹುದು. ಅವರು ಅದೇ ರೀತಿಯಲ್ಲಿ ಪರಸ್ಪರ ಒಟ್ಟಾಗಿ ಕೆಲಸ ಮಾಡಲು ಪ್ರಾರಂಭಿಸಬಹುದೇ ಮತ್ತು ಪ್ರಜಾಪ್ರಭುತ್ವದ ಆದರ್ಶಗಳನ್ನು ಪ್ರಜಾಸತ್ತಾತ್ಮಕವಲ್ಲದ ಸಮಾಜದಲ್ಲಿ ನೆರವೇರಿಸಬಹುದೇ?   "ನಮ್ಮ ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳನ್ನು ಸಾಧಿಸುವ ಸಾಂವಿಧಾನಿಕ ವಿಧಾನಗಳನ್ನು ಬಿಗಿಯಾಗಿ ಹಿಡಿದಿದ್ದರೆ ಮಾತ್ರ ನಾವು ಹಾಗೆ ಮಾಡಬಹುದು. ಕ್ರಾಂತಿಯ ರಕ್ತಸಿಕ್ತ ವಿಧಾನಗಳನ್ನು ನಾವು ತ್ಯಜಿಸುತ್ತೇವೆ ಎಂದರ್ಥ. ಇದರರ್ಥ ನಾವು ನಾಗರಿಕ ಅವಿಧೇಯತೆ, ಅಸಹಕಾರ, ಮತ್ತು ಸತ್ಯಾಗ್ರಹದ ವಿಧಾನವನ್ನು ತ್ಯಜಿಸಬೇಕು.”

ಅಂಬೇಡ್ಕರ್ ಅವರು ಸತ್ಯಾಗ್ರಹದ ಸ್ವ-ನೀತಿವ೦ತಿಕೆಯ  ಬಗ್ಗೆ ಗಾಢವಾಗಿ ಸಂಶಯಪಟ್ಟಿದ್ದರು. ಸತ್ಯಾಗ್ರಹಿಯು ಸತ್ಯವನ್ನು ಸಾಕಾರಗೊಳಿಸುತ್ತಾನೆ ಮತ್ತು ನೈತಿಕತೆಯ ಅತ್ಯುನ್ನತ ಸ್ವರೂಪವನ್ನು ಪ್ರತಿನಿಧಿಸುತ್ತಾನೆ ಎಂಬ ಪ್ರತಿಪಾದನೆಯ ಬಗ್ಗೆ ಅವರು ವಿಶೇಷವಾಗಿ ಸಂಶಯಹೊ೦ದಿದ್ದರು.  ಬಹುತ್ವ ಅಥವಾ ಎಲ್ಲಾ ಅಭಿಪ್ರಾಯಗಳಿಗೆ ಗೌರವವನ್ನು ನೀಡಬೇಕು ಎ೦ದು ನಂಬಿದ್ದರು. ಆಗ ಮಾತ್ರ ನಾವು ಸಂವಿಧಾನದ ವ್ಯಾಪ್ತಿಯಲ್ಲಿ ಸಂಘರ್ಷಗಳನ್ನು ಬಗೆಹರಿಸಲು  ಪ್ರಾರಂಭಿಸಬಹುದು. ಒಂದು ಪ್ರಮುಖ ರೀತಿಯಲ್ಲಿ ಅಂಬೇಡ್ಕರ್ ಅವರ ವಾದವು ಸಮಾನರ ನಡುವಿನ ಸಂವಾದದ ಮೂಲಕ ಮಾತ್ರ ನಾವು ಸಮಸ್ಯೆಗಳನ್ನು ಪ್ರಜಾಸತ್ತಾತ್ಮಕವಾಗಿ ಪರಿಹರಿಸಬಹುದು ಎಂಬ ಕಲ್ಪನೆಯನ್ನು ಉದ್ಘಾಟಿಸಿತು.

ಸಂವಾದದ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಇನ್ನೂ ಹೆಚ್ಚಿನದನ್ನು ಹೇಳಬಹುದು. ಅಧಿಕಾರ ಹಿಡಿದವರು ಸಂವಿಧಾನದ ನೈತಿಕತೆಯನ್ನು ಗೌರವಿಸುತ್ತಾರೆ ಎಂಬ ವಿಶ್ವಾಸವಿದ್ದರೆ ರಾಜಕೀಯದಲ್ಲಿ ನಾವು ಸ್ವಯಂ ಸಂಯಮವನ್ನು ರೂಢಿಸಿಕೊಳ್ಳಬಹುದು ಎಂಬುದು ನಿರ್ಣಾಯಕ ಅಂಶವಾಗಿದೆ. ಆದರೆ ಅವರು ಸಂವಿಧಾನವನ್ನು, ವಿಶೇಷವಾಗಿ ಸ್ವಯಂ-ಸಂಯಮಕ್ಕೆ ಸ್ವಾತಂತ್ರ್ಯವನ್ನು ಜೋಡಿಸುವ  ಮೂಲಭೂತ ಹಕ್ಕುಗಳ ಅಧ್ಯಾಯವನ್ನು ಅವಹೇಳನ ಮಾಡಲು ಪ್ರಾರಂಭಿಸಿದರೆ, ಸಮಾಜದ ವಿಭಾಗಗಳು ತಮ್ಮ ಸಹ-ನಾಗರಿಕರ ಘನತೆಯನ್ನು, ಹಕ್ಕುಗಳ ಮೂಲಕ ರಕ್ಷಿಸಲ್ಪಟ್ಟ ಘನತೆಯನ್ನು,  ಉಲ್ಲಂಘಿಸಲು ಪ್ರೋತ್ಸಾಹಿಸಲಾಗುತ್ತದೆ. ನೈತಿಕವಾಗಿ ಯಾದೃಚ್ಛಿಕ  ಜನನದ ಒ೦ದೇ ಅಂಶದಿಂದಾಗಿ ಒಂದು ಸಾಮಾಜಿಕ ಗುಂಪು ಮತ್ತೊಂದು ವರ್ಗಕ್ಕೆ ಇಲ್ಲದ ಹಕ್ಕುಗಳನ್ನು ಹೊಂದಿದೆ ಎಂದು ಹೇಗೆ ಸೊಕ್ಕು ಮಾಡಬಹುದು? ಪ್ರಜಾಪ್ರಭುತ್ವ ಮತ್ತು ನ್ಯಾಯದ ನೈತಿಕತೆಯಿರುವ ನಮ್ಮ ಸಂವಿಧಾನದ ನೈತಿಕತೆಗೆ ರಾಜಕೀಯ ಗಣ್ಯರು ಉತ್ಕಟವಾಗಿ ಅಂಟಿಕೊಂಡಿಲ್ಲ ಎಂಬ ವಿಶ್ವಾಸವಿದ್ದರೆ ಮಾತ್ರ ಅವರು ಹಾಗೆ ಮಾಡಬಹುದು.

ಅಧಿಕಾರದ ಗಣ್ಯರು ಸಂವಿಧಾನವನ್ನು ಗೌರವಿಸಲು ವಿಫಲವಾದಾಗ, ರಾಜಕೀಯದ  ಮತ್ತು ಸ್ವಯಂ ಸಂಯಮದ ಎರಡೂ  ಸ್ವಾತಂತ್ರ್ಯಗಳು ಕ್ಷೀಣವಾಗುತ್ತವೆ, ಅನಿಶ್ಚಿತತೆಯು ಸಮಾಜವನ್ನು ಕಾಡುತ್ತದೆ ಮತ್ತು ಸಾಮಾಜಿಕ  ಮತ್ತು ನೈತಿಕ ಪ್ರಮಾಣಗಳು ಕುಸಿಯತ್ತವೆ.

 

 

ನೀರಾ ಚಾಂಧೋಕ ದೆಹಲಿ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು