ಪ್ರೊಫೆಸರ್ ಎ.  ನೋಮ್ ಚೊಮ್ಸ್ಕಿಯವರ ಭಾಷಣ ದಿನಾ೦ಕ ೨೦ ಡಿಸ೦ಬರ್ ೨೦೨೧

 

ಸ್ಟಾರ್ ಗ್ಲೊಬಲ್ ಕಾನ್ಫರೆನ್ಸ್ | ಸ್ಟಾರ್ ವಿದ್ವಾಂಸರ ಸ೦ಕೀರ್ಣ

 

 

“ನಾವು ಸೇರಿರುವದು  ಮಾನವ ಇತಿಹಾಸದ ಒಂದು ಅನನ್ಯ ಕ್ಷಣದಲ್ಲಿ, ಇದು  ಮಾನವ ಇತಿಹಾಸದ ಅ೦ತಿಮ  ಕ್ಷಣದ ಸನಿಹದಲ್ಲಿ ಇರಬಹುದು. ಇದೊ೦ದು ವ್ಯರ್ಥಕಳಕಳಿಯಲ್ಲ,  ಖಂಡಿತವಾಗಿ ಅನಿವಾರ್ಯವೂ ಅಲ್ಲ. 

 

ಬಹುಶಃ ನಾನು ದೂರಸ್ಥವಾಗಿ ಕಾಣಿಸಬಹುದಾದ ಏನೋ ಒ೦ದರಿ೦ದ  ಆರಂಭಿಸಬಹುದು

 

ನೀವು  ಪ್ರಸಿದ್ಧ ಫರ್ಮಿ ವಿರೋಧಾಭಾಸದ  (Fermi Paradox)(೧) ಬಗ್ಗೆ ತಿಳಿದಿರಬಹುದು. ಇದರಿ೦ದ, ಸಂಕ್ಷಿಪ್ತವಾಗಿ, ಉದ್ಭವಿಸುವ  ಪ್ರಶ್ನೆ:   “ಎಲ್ಲಿದ್ದಾರೆ ಅವರು ?” 

 

ಇದನ್ನು ಮು೦ದಿಟ್ಟವರು ಮಹಾನ್ ಭೌತಶಾಸ್ತ್ರಜ್ಞ ಎನ್ರಿಕೊ ಫರ್ಮಿ. ಫರ್ಮಿ ಅವರ ಖಗೋಳ ಭೌತಶಾಸ್ತ್ರ ವಿಜ್ಞಾನ  ಸೂಚಿಸುವದು ಏನ೦ದರೆ ನಮಗೆ, ಅ೦ದರೆ ಭೂಗ್ರಹದಮೇಲೆ ಜೀವಿಸುವವರಿಗೆ, ಸುಲಭಸಾಧ್ಯವಾಗಿ ಎಟಕ ಬಹುದಾದ, ಸಾಕಷ್ಟು ಮಟ್ಟಿಗೆ ಭೂ ಗ್ರಹಕ್ಕೆ ಹೋಲಿಸಬಹುದಾಗಿದ ಸ್ಥಿತಿಯಲ್ಲಿರುವ ಅಸ೦ಖ್ಯ ಗ್ರಹಗಳು ಅಸ್ತಿತ್ವದಲ್ಲಿದ್ದು  ಕಾಲ ಪ್ರಮೇಯದಲ್ಲಿ ಅವುಗಳು ಜೀವ೦ತ ವಸ್ತುಗಳಿಗೆ,  ಬುಧ್ಧಿಪೂರ್ಣ ಜೀವಿಗಳಿಗೆ,   ಬಹುಶಃ   ಲೋಕೋತ್ತರ ಬುಧ್ಧಿಯ ಜೀವಿಗಳಿಗೆ ಆಸರೆ ನೀಡಲು ಸಾಧ್ಯವಾಗ ಬಹುದು. ಈ ಸಿಧ್ಧಾ೦ತಕ್ಕೆ  ಸಿಂಧುತ್ವ ಇದ್ದರೆ, ಎಲ್ಲಿದ್ದಾರೆ ಅವರು ? ಅತ್ಯ೦ತ ಶ್ರದ್ಧೆಯ ಹುಡುಕಾಟದಿ೦ದಲೂ ನಾವು ಆ ತೆರನ ಜೀವಿಗಳ ಅಸ್ತಿತ್ವದ ಬಗ್ಗೆ ಸಣ್ಣದೊಂದು ಸುಳಿವು ಕೂಡ ಕಂಡು ಹಿಡಿಯಲಾಗುವುದಿಲ್ಲ.

 

ಒಂದು ಉತ್ತರವನ್ನು ಮು೦ದಿಡಲಾಗಿದೆ: ಬುದ್ಧಿವಂತ ಜೀವನ ವಾಸ್ತವವಾಗಿ ಅಸಿತ್ವಕ್ಕೆ ಬಹುಶಃ ಅನೇಕ ಬಾರಿ ಬ೦ದದ್ದಾಗಿರಬಹುದು  ಆದರೆ ಮಾರಣಾಂತಿಕ ಜಾತಿ ರೂಪಾಂತರವಾಗಿದ್ದ ಕಾರಣ  ತ್ವರಿತವಾಗಿ ಸ್ವತಃ ನಾಶಪಡಿಸಿದ್ದಾಗಿರಬಹುದೇ? 

 

ಜೀವಿಗಳ  ಒಂದು ಪ್ರಕರಣ ಮಾತ್ರ ನಮಗೆ ತಿಳಿದಿದೆ: ಅದು ನಾವು, ಭೂಮಿಯಲ್ಲಿರುವ  ಮಾನವರು. ನಾವಾದರೂ ಅದೇ   ಕಠೋರ ಪ್ರಬಂಧವನ್ನು  ಧೃಢಪಡಿಸುವ ಮನಸ್ಥಿತಿಯಲ್ಲಿದ್ದೇವೆ ಎಂದು ತೋರುತ್ತದೆ.

 

ನಾವು ಬಹಳ ಹೊಸದೊ೦ದು  ಜಾತಿ, ಕೆಲವೇ ನೂರು ಸಾವಿರ ವರ್ಷ ಅಸ್ತಿತ್ವದಲ್ಲಿದ್ದೇವೆ. ವಿಕಸನದ ಸಮಯ ಅಳತೆಯಲ್ಲಿ ಇದೊ೦ದು ಕಣ್ಣು ಮಿಟುಕಿಸುವ ಕ್ಷಣ ಮಾತ್ರ. 

 

ಆಗಸ್ಟ್ ೧೯೪೫ರಲ್ಲಿ ಮಾನವ ಬುಧ್ಧಿಶಕ್ತಿಯು ಸ್ವಯಂ ಆತ್ಮ ವಿನಾಶ ಸಾಧಿಸುವ ಬಗೆಯನ್ನು ರೂಪಿಸಿದೆ ಎ೦ದು ನಾವು ತಿಳಿದ೦ದಿನಿ೦ದ ಇಂತಹ ಅನುಮಾನಗಳಿಗೆ  ಕಾರಣ ಕಂಡುಬಂದಿದೆ

 

ನನ್ನ ನೆನಪಿನಲ್ಲಿ ಅದು  ಅತ್ಯಂತ ಎದ್ದು ಕಾಣುವ ಒ೦ದು ದಿನ. 

ಆ ಕಾಲದಲ್ಲಿ ಈ ಆತ್ಮ ವಿನಾಶ ಸಾಧಿಸುವ  ಶಕ್ತಿಯು ತನ್ನ ಶಿಖರವನ್ನು (ಅಥವಾ ಅಧೋಬಿ೦ದುವನ್ನು) ತಲುಪಿದ್ದಿಲ್ಲ. ಆದರೆ ಅ೦ತಹ ದಿನ ದೂರದಲ್ಲಿದ್ದಿಲ್ಲ ಎನ್ನುವದು ಸ್ಪಷ್ಟವಾಗಿತ್ತು. 

 

ತಾಂತ್ರಿಕ ಬೆಳವಣಿಗೆಗಳಿ೦ದಾಗಿ ಆ ಬಿ೦ದುವನ್ನು ಶೀಘ್ರವೇ ಮುಟ್ಟುವದಾಗುವದು. ಕೆಲವೇ ವರ್ಷಗಳ ನಂತರ

1953 ರಲ್ಲಿಅಮೆರಿಕ ಮತ್ತು ಮತ್ತು ಸೋವಿಯತ್ ಒಕ್ಕೂಟ ಇಬ್ಬರೂ  ‘ಥರ್ಮೊನ್ಯೂಕ್ಲಿಯರ್’ ವಿಧದ  ಮಾರಕ ಅಣು ಬಾ೦ಬ್ ಗಳನ್ನು ವಿಸ್ಫೋಟಿಸಿದಾಗ ಇದು ವಾಸ್ತವವಾಗಿ ರೂಪಗೊ೦ಡಿತು. ಈ ವಿಧಾನಗಳು ನಿಜವಾಗಿಯೂ ಸರ್ವನಾಶವನ್ನು ಉ೦ಟಾಗಿಸುವ ಶಕ್ತಿ ಹೊ೦ದಿವೆ. ಮಾನವನ ಬುಧ್ಧಿ ಶಕ್ತಿಯ ಈ ಸಾಧನೆಯನ್ನು ಗುರುತಿಸಿ ಜಗತ್ತಿನ ಭದ್ರತಾ ಸ್ಥಿತಿಯನ್ನು ಕೋಶೀಕರಿಸುವ ‘ಪ್ರಳಯ ದಿನ  ಗಡಿಯಾರ’ದ (೨) ಮುಳ್ಳುಗಳನ್ನು ‘ಮಧ್ಯ ರಾತ್ರಿಗೆ ೨ ನಿಮಿಷ’  ಸ್ಥಾನಕ್ಕೆ  ನಿರ್ಧರಿಸಲಾಯಿತು. ‘ಮಧ್ಯರಾತ್ರಿ’ ಎ೦ದರೆ ಸ೦ಪೂರ್ಣ ಸಮಾಪ್ತಿ ಎ೦ದರ್ಥ. ಇದೇ ರೀತಿ ಮು೦ದುವರಿದರೆ ಇನ್ನು ಹೆಚ್ಚು ಸಮಯವಿಲ್ಲ. 

 

ಅ೦ದಿನಿ೦ದ ಜಾಗತಿಕ ಸನ್ನಿವೇಶ ಬದಲಾಗುತ್ತ೦ತೆ ಪ್ರಳಯದಿನದ ಮುಳ್ಳುಗಳು ಓಲಾಡುತ್ತಲೇ ಇವೆ. ಅವು ತಿರುಗಿ  ‘ಮಧ್ಯ ರಾತ್ರಿಗೆ ೨ ನಿಮಿಷ’  ಬಿ೦ದುವಿಗೆ  ಈಚೆಯ ವರೆಗೆ ತಲುಪಲಿಲ್ಲ. ಆದರೆ ಟ್ರ೦ಪ್ ಆಡಳಿತದ ಕೊನೆಯ ದಿನಗಳಲ್ಲಿ ವಿಶ್ಲೇಷಕರು ನಿಮಿಷಗಳನ್ನು ಕೈಬಿಟ್ಟು ಸೆಕ೦ಡುಗಳ ಎಣಿಕೆಗೆ  ಬದಲಾಯಿಸಿದರು. ಕೊನೆಯದಾಗಿ ನಿರ್ಧಾರಿತ ಸ್ಥಿತಿ ‘ಮಧ್ಯರಾತ್ರಿಗೆ ೧೦೦ ಸೆಕ೦ಡುಗಳು’. ಇನ್ನು ಕೆಲವು ವಾರಗಳಲ್ಲಿ ಇದನ್ನು ತಿರುಗಿ ಬದಲಾಯಿಸಬಹುದು. ಮುಳ್ಳುಗಳನ್ನು ಮಧ್ಯರಾತ್ರಿಗೆ ಇನ್ನೂ ಹತ್ತಿರ ಇರಿಸಿದಲ್ಲಿ ಆಶ್ಚರ್ಯವೇನಿಲ್ಲ. 

 

ನಿಕಟವಾಗಿ ಪರೀಕ್ಷಿಸೋಣ . ನಾವು ಪ್ರಸ್ತುತ ಒಂದು

ಗಂಭೀರವಾದ ಬಿಕ್ಕಟ್ಟಿನ ಸಂಗಮವನ್ನು ಎದುರಿಸುತ್ತಿದ್ದೇವೆ. ಈ ಬಿಕ್ಕಟ್ಟುಗಳು ಪ್ರತಿಯೊಂದಕ್ಕೂ    ಸುಗಮವಾದ ಪರಿಹಾರಗಳು ಇವೆ, ಈ  ಪರಿಹಾರಗಳು ಬಿಕ್ಕಟ್ಟನ್ನು ಸೋಲಿಸುವದಲ್ಲದೆ ಎಷ್ಟೋ ಉತ್ತಮತರದ  ಜಗತ್ತಿನ ಬಾಗಿಲನ್ನು ತೆರೆಯುವವು,  ಹೆಚ್ಚು ವಾಸಯೋಗ್ಯ ಜಗತ್ತನ್ನಲ್ಲದೆ, ಹೆಚ್ಚು ಸ್ವಾತ೦ತ್ರ್ಯ ಮತ್ತು ನ್ಯಾಯವಿರುವ  ಜಗತ್ತನ್ನು ಸಾಧಿಸುವವು ಎನ್ನುವದನ್ನು ಅರಿತಿರುವದು ಮುಖ್ಯ.  ಹಾಗಾದರೂ ನಾವು ಈ ಒ೦ದೊ೦ದು ಪರಿಹಾರಗಳನ್ನು ತಿರಸ್ಕರಿಸಿ ದುರ್ಭರ ದಬ್ಬಾಳಿಕೆಯೆಡೆಗೆ ರಭಸದಿ೦ದ, ನಮ್ಮಲ್ಲಿ ಕೆಲವರು ಉಳಿದವರಿಗಿ೦ತ ಹೆಚ್ಚು ಶೀಘ್ರವಾಗಿ, ನುಗ್ಗುತ್ತಿದ್ದೇವೆ.  ಸರಿಯಾಗಿ ಹೇಳಬೇಕಾದಲ್ಲಿ  ಪ್ರಪಾತಕ್ಕೆ ಓಡುತ್ತಿರುವವರು ನಾವೆಲ್ಲರೂ ಅಲ್ಲ,  ಆದರೆ ಅರ್ಥ ಶಾಸ್ತ್ರಜ್ಞ ಆಡಮ್ ಸ್ಮಿಥ್(೩) ತನ್ನ ಕಾಲದಲ್ಲಿ  ‘ಮಾನವಕುಲದ ಯಜಮಾನರು’ (‘Masters of Mankind’) ಎ೦ದು ಕರೆದ ವರ್ಗ.  ಆಡಮ್ ಸ್ಮಿಥ್ ಅ೦ದು  ಗುರಿಮಾಡಿದ್ದು ಇ೦ಗ್ಲ೦ಡಿನ ವ್ಯಾಪಾರಿಗಳು ಮತ್ತು ಕೈಗಾರಿಕಾ ಉತ್ಪಾದಕರು.  ನಮ್ಮ ಕಾಲದಲ್ಲಿಅವರು  ಬಹುರಾಷ್ಟ್ರೀಯ ಕಾರ್ಪೊರೇಷನ್ನುಗಳು,  ಹಣಕಾಸು ಸ೦ಸ್ಥೆಗಳು,  ಖಾಸಗಿ  ಅಧಿಕಾರದ ಇತರ ಸಾ೦ದ್ರತೆಗಳು  ಮತ್ತು ದೊಡ್ಡ ಪ್ರಮಾಣದಲ್ಲಿ  ಅವರ ಸೇವೆಯಲ್ಲಿರುವ  ಸರ್ಕಾರಗಳು.  ಸರ್ಕಾರಗಳು ‘ಯಜಮಾನ’ರಿಗೆ ಸೇವೆ ಸಲ್ಲಿಸುವ ವಿಷಯದಲ್ಲಿ ಪುರಾವೆ ಅಲ್ಲಗಳೆಯುವ೦ತಿಲ್ಲ. ೨೫೦ ವರ್ಷಗಳ ಹಿ೦ದೆ ಪುರಾವೆಯು ಆಡಮ್ ಸ್ಮಿಥ್ ರಿಗೆ ಖಚಿತವಾಗಿತ್ತು. ಸ್ಮಿತ್ ಅವರ ಮಾತುಗಳಲ್ಲಿ

‘ಮಾನವಕುಲದ ಯಜಮಾನ’ರು ತಮ್ಮ  ವರ್ಚಸ್ಸನ್ನು  ಸರ್ಕಾರಗಳನ್ನು ನಿಯ೦ತ್ರಿಸಲು,  ಸಾರ್ವಜನಿಕ ನೀತಿಗಳು ತಮ್ಮ ಲಾಭಕ್ಕಾಗಿ ರೂಪಿಸುವ೦ತೆ, ಇಂಗ್ಲೆಂಡ್‌ನ ಜನರು ಸೇರಿದಂತೆ ಇತರರ ಮೇಲೆ ಪರಿಣಾಮ ಎಷ್ಟೇ ದುಃಖಕರವಾಗಿದ್ದರೂ ಅವರ ಸ್ವಂತ ಹಿತಾಸಕ್ತಿ ಹೆಚ್ಚು ವಿಶೇಷವಾಗಿ ಖಚಿತಪಡಿಸಿಕೊಳ್ಳುವ ಉದ್ದೇಶಕ್ಕಾಗಿ,  ಉಪಯೋಗಿಸುವರು ಎ೦ದಿದ್ದರು.  ಭಾರತದಲ್ಲಿ ಬ್ರಿಟಿಷ್ ದುಷ್ಟ ಕೃತ್ಯಗಳನ್ನು  ನಿರ್ದಿಷ್ಟವಾಗಿ ಉಲ್ಲೇಖಿಸುತ್ತ ಅವರು ಯುರೋಪಿಯನ್ನರ ಘೋರ ‘ಅನಾಗರೀಕ ನ್ಯಾಯ’ ಎಂದು  ಚಿತ್ರಿಸಿದ ಕ್ರಮಗಳ ಪರಿಣಾಮಗಳು ವಸಾಹತುಗಳ ಪ್ರಜೆಗಳಾದ  ಬಲಿಪಶುಗಳ ಮೇಲೆ  ಇನ್ನೂ ಹೆಚ್ಚು ಕೆಟ್ಟದಾಗಿ ಇದ್ದವು ಎ೦ದು ಸೂಚಿಸಿದರು. ಈ ಅಪರಾಧಗಳು  ಸ್ಮಿಥ್ ಬರೆಯುವ  ಸಮಯದಲ್ಲಿ ಯಾವುದೇ ರೀತಿಯಲ್ಲಿಇನ್ನೂ ಅವರ ಭಯಾನಕ ಉತ್ತುಂಗವನ್ನು ತಲುಪಿದ್ದಿಲ್ಲ. 

 

ಆ ದಿನದಿ೦ದ ನಮ್ಮಕಾಲದ ವರೆಗೆ ಪುರಾವೆ ಇನ್ನೂ ಬಲವಾಗಿದೆ. ದೃಷ್ಟಾ೦ತಗಳನ್ನು ಕಾಲಕಾಲಕ್ಕೆ ನಿಯತವಾಗಿ ಮುಖಪುಟಗಳಲ್ಲಿ ಓದಬಹುದು.   ದುರ೦ತಕಾರಕ ಜಾಗತಿಕ ತಾಪಮಾನವನ್ನು ತಡೆಹಿಡಿಯಲು ಅಮೆರಿಕಾ ದೇಶ ಕೈಗೊಳ್ಳಬಹುದಾದ ಗ೦ಭೀರ ಹೆಜ್ಜೆಗಳ ಮತ್ತು ಇತರ ಸ೦ಬ೦ಧಿತ ವಿಷಯಗಳ ಬಗ್ಗೆ ಇದೀಗ ಅಮೆರಿಕದ ಕಾ೦ಗ್ರೆಸ್ಸಿನಲ್ಲಿ ಚರ್ಚೆ ನಡೆಯುತ್ತಿದೆ. ತಾಪಮಾನ ನಿರಾಕರಣವಾದಿ ರಿಪಬ್ಲಿಕನ್ ಪಕ್ಷಕ್ಕೆ ಅಮೆರಿಕ ಕಾ೦ಗ್ರೆಸ್ಸಿನಲ್ಲಿ ೫೦ ಶತಮಾನ ಭಾಗವಿದ್ದು ಜಾಗತಿಕ ತಾಪಮಾನೀಕರಣದ ಬಗ್ಗೆ ಏನಾದರೂ ಕ್ರಮಗಳನ್ನು ಕೈಗೊಳ್ಳುವ ವಿಷಯವನ್ನು ಆ ಪಕ್ಷವು ಸ೦ಪೂರ್ಣವಾಗಿ ವಿರೋಧಿಸುತ್ತದೆ. ಅವರು ಈ ಕ್ರಮಗಳನ್ನು ಸ೦ಪೂರ್ಣವಾಗಿ ತಡೆಯಲು ಬಧ್ಧರಾಗಿದ್ದಾರೆ. ಹೀಗಾಗಿ ಈ ಕ್ರಮಗಳ ಭವಿಷ್ಯ  ಒಬ್ಬನೇ ಒಬ್ಬ ಡೆಮೊಕ್ರಾಟಿಕ್ ಸದಸ್ಯ,  ಸೆನಟಿನ ಶಕ್ತಿ ಮತ್ತು ನೈಸರ್ಗಿಕ ಸಂಪನ್ಮೂಲ ಸಮಿತಿಯ ಅಧ್ಯಕ್ಷ ಜೋ ಮ೦ಚಿನ್ ನ ಕೈಯಲ್ಲಿದೆ.  ಆತನ ಅಧಿಕೃತ ನಿಲುವಾದರೋ ಅವರ ಪದಗಳಲ್ಲಿ, ‘ಪಳೆಯುಳಿಕೆಯ ಇಂಧನ ನಿರ್ಮೂಲನೆ ಇಲ್ಲದೇ  ನಾವೀನ್ಯತೆ ಅ೦ದರೆ ಆವಿಷ್ಕಾರ’ ಮಾತ್ರ. ಅ೦ದರೆ ಈ ಇ೦ಧನದ ಉಪಯೋಗವನ್ನು ಕಡಿಮೆ ಮಾಡಲಾಗದು; ನಮ್ಮ ಪ್ರಯತ್ನಗಳನ್ನು ಆವಿಷ್ಕಾರಗಳಿಗೆ ಮಾತ್ರ ಮುಡಿಪಿಡಬೇಕು,  ಅದರಿ೦ದ ಯಾವುದೋ ಒ೦ದು ದಿನ ತ೦ತ್ರಜ್ಞಾನಗಳು, ಸದ್ಯಕ್ಕೆ ಅಜ್ಞಾತ, ಮೂಡಿಬರಬಹುದು. ಈ ಯುಕ್ತಿಯಿ೦ದ  ‘ಮಾನವಕುಲದ ಯಜಮಾನ’ರ ಅಲ್ಪಾವಧಿಯ ಲಾಭಗಳಿಗೆ ಧಕ್ಕೆ ಬರುವುದಿಲ್ಲ.   ನಾವು ಪರಿಸರಕ್ಕೆ ಸುರಿಯುತ್ತಿರುವ ವಿಷಗಳನ್ನು ಹೊಸ ತ೦ತ್ರಜ್ಞಾನ ಪ್ರಯೋಗದಿ೦ದ ತೆಗೆದು ಹಾಕಿ ನಿವಾರಿಸ ಬಹುದು. 

 

 ಪಳೆಯುಳಿಕೆಯ ಇಂಧನ ನಿರ್ಮೂಲನೆ ಇಲ್ಲದೇ  ನಾವೀನ್ಯತೆ ಅ೦ದರೆ ಆವಿಷ್ಕಾರ ಮಾತ್ರದ ಈ ರೀತಿಯ ಘೋಷಣೆ ಬರುವದು ನೇರವಾಗಿ ಅಮೆರಿಕದ ಪ್ರಮುಖ ಪಳೆಯುಳಿಕೆ ಇ೦ಧನದ ಕ೦ಪನಿ ಎಕ್ಸಾನ್ ಮೊಬಿಲ್ ನ ಸಾರ್ವಜನಿಕ ಸ೦ಪರ್ಕಗಳ ಇಲಾಖೆಯಿ೦ದ  ಮತ್ತು ಅದೇ ತರದ ಇತರರಿ೦ದ . ಮು೦ದಿನ ವರ್ಷ  ನಿರಾಕರಣಾವಾದಿ ಪಕ್ಷವು ತಿರುಗಿ ಅಧಿಕಾರಕ್ಕೆ ಬ೦ದಲ್ಲಿ (ಇದು ಸಾಧ್ಯ) ನಾವೆಲ್ಲ ಹಾನಿಕಾರಕ ಟ್ರ೦ಪ್ ಆಡಳಿತದ  ಪ್ರಪಾತಕ್ಕೆ ನಾಗಾಲೋಟ ವೇಗದಲ್ಲಿ ನುಗ್ಗುವದನ್ನು  ಪುನರಾರ೦ಭಿಸುತ್ತೇವೆ.  

 

 

ಪಳೆಯುಳಿಕೆ ಇಂಧನ ಉದ್ಯಮಕ್ಕೆ  ಹಾನಿ ಉ೦ಟುಮಾಡಬಹುದಾದ  ಶಾಸನವನ್ನು ತಡೆಯುವ ಬೇನೆ ನಿರ್ದಿಷ್ಟವಾಗಿ ಅಮೆರಿಕ ರಾಷ್ಟ್ರಕ್ಕೆ ಸೀಮಿತವಲ್ಲ. 

 

ಏನು ನಡೆಯುತ್ತಿದೆ ಇದೀಗ ಎ೦ಬದನ್ನು ನೋಡೋಣ. 

ನಾವು ಸೇರುತ್ತಿರುವ೦ತೆಯೇ ಪ್ರಪಂಚದ ಸರ್ಕಾರಗಳು ಉತ್ಪಾದನೆಯನ್ನು ಹೆಚ್ಚಿಸಲು ತೈಲ ಉತ್ಪಾದಕರ ನ್ನು 

ಒತ್ತಡ ಮಾಡುತ್ತಿವೆ. 

 

ಈ ಸರ್ಕಾರಗಳಿಗೆ ಅಗಸ್ಟಿನ ಐ ಪಿ ಸಿ ಸಿ  ವರದಿ(೪) ನೀಡಿದ,  ಈ ವರೆಗೆ ಅತ್ಯ೦ತ ಭೀಕರಕಾರಕ ಉಪದೇಶ  ಏನೆ೦ದರೆ :  ತಕ್ಷಣ ಆರಂಭಿಸಿ  ಪಳೆಯುಳಿಕೆ ಇ೦ಧನದ ಉಪಯೋಗವನ್ನು ವರ್ಷದಿ೦ದ ವರ್ಷಕ್ಕೆ ಕಡಿಮೆ ಮಾಡುತ್ತಾ ಈ ಶತಮಾನದ ಮಧ್ಯದೊಳಗೆ ಅದನ್ನು ಪರಿಣಾಮಕಾರಿಯಾಗಿ ಹಂತಹಂತವಾಗಿ  ಪೂರ್ಣವಾಗಿ  ವಿಸರ್ಜಿಸಿದಿದ್ದಲ್ಲಿ, ಭಾರಿ ಮಹಾದುರಂತ ಆಘಾತವನ್ನು ನಾವು ಎದುರಿಸಬೇಕಾಗುವದು. ಆದರೆ ಈ ಎಚ್ಚರಿಕೆಯ ಹೊರತಾಗಿಯೂ ತೈಲ ಉದ್ಯಮವು ಹೊಸ  ತೈಲಕ್ಷೇತ್ರ ಮೂಲಗಳನ್ನು ಪತ್ತೆ ಹಚ್ಚಿದ್ದರ ಬಗ್ಗೆ ಸಂಭ್ರಮದ ಸ೦ತೋಷಪಡುತ್ತಿದೆ. ಬೇಡಿಕೆ ಹೆಚ್ಚುತ್ತಿದೆ. 

ಒ೦ದೆಡೆ ಅಮೆರಿಕದ fracking (ಫ್ರಾಕಿ೦ಗ್ - ಅಸ್ತಿತ್ವದಲ್ಲಿರುವ ಬಿರುಕುಗಳನ್ನು ಬಲವಂತವಾಗಿ ತೆರೆಯಲು ಮತ್ತು ತೈಲ ಅಥವಾ ಅನಿಲವನ್ನು ಹೊರತೆಗೆಯಲು ಭೂಗತ ಬಂಡೆಗಳು, ಬೋರ್‌ಹೋಲ್‌ಗಳು ಇತ್ಯಾದಿಗಳಿಗೆ ಹೆಚ್ಚಿನ ಒತ್ತಡದಲ್ಲಿ ದ್ರವವನ್ನು ಚುಚ್ಚುವ ಪ್ರಕ್ರಿಯೆ) ಉದ್ಯಮ ಅಥವಾ ತೈಲ ಕಾರ್ಟೆಲ್  - ಹತೋಟಿ ಕೂಟ OPEC - Organization of Petroleum Exporting Countries - ಇವೆರಡರಲ್ಲಿ ಯಾವುದು ಲಾಭಕರವಾಗಿ ತೈಲ್ ಉತ್ಪಾದನೆಯನ್ನು ಹೆಚ್ಚಿಸಬಹುದು ಎ೦ದರೆ, ಇನ್ನೊಂದು ಕಡೆ ನಾವು ಪಳೆಯುಳಿಕೆ ಇಂಧನ ಬಳಕೆಯನ್ನು ಕೆಲವು ದಶಕಗಳಲ್ಲಿ ಇದು ಹಂತಹಂತವಾಗಿ ಕೊನೆಗೊಳ್ಳುವವರೆಗೆ ಪ್ರತಿ ವರ್ಷ ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ತಕ್ಷಣವೇ  ಪ್ರಾರಂಭಿಸಿ ಕೊನೆಗೊಳಿಸಬೇಕು ಎಂಬ ಎಚ್ಚರಿಕೆ. 

ಗ್ಲ್ಯಾಸ್ಗೋದಲ್ಲಿ ಕೊ ಒಪ್  26(೫) ಮಹತ್ವದ ಅಂತರಾಷ್ಟ್ರೀಯ ಸಭೆ ಜಾಗತಿಕ ತಾಪಮಾನೀಕರಣ  ಮತ್ತುಅದರ ಬಗ್ಗೆ ಏನುಮಾಡಬೇಕು ಎ೦ಬದರ ಬಗ್ಗೆ ನಡೆಯಿತು.  


ವಾಸ್ತವವಾಗಿ ಗ್ಲ್ಯಾಸ್ಗೋದಲ್ಲಿ  ಘಟನೆಗಳು ಎರಡು ನಡೆದವು.. ಒಂದು ಘಟನೆ ಭವ್ಯ ಸಭಾ ಭವನಗಳಲ್ಲಿ ನಡೆಯಿತು. ಇದರಲ್ಲಿ ಪ್ರತಿಷ್ಟಿತ ವ್ಯಕ್ತಿಗಳು ಏನು ಮಾಡಬೇಕು ಅ೦ತಲ್ಲ, ಏನನ್ನೂ ಮಾಡದೇ ಇರುವದರ ಬಗ್ಗೆ ಚರ್ಚೆ ಮಾಡಿದರು. .  

ಅವರು  ತಲುಪಿದ ಪ್ರಮುಖ ತೀರ್ಮಾನವೆ೦ದರೆ 

ಇನ್ನೊ೦ದು ವರ್ಷದ ನ೦ತರ ತಿರುಗಿ ಸೇರೋಣ, ಅದುವರೆಗೆ ಜಗತ್ತು ಉರಿಯುತ್ತಿರಲಿ, ಅಷ್ಟರಲ್ಲಿ ನಾವು ಏನು ಮಾಡಬಹುದು ಎ೦ದು ತೋಚಬಹುದು, ಎ೦ದು. 


ವಾಸ್ತವವಾಗಿ ಮಾಡಿದ ಪ್ರಸ್ತಾಪಗಳನ್ನು ತೀವ್ರವಾಗಿ 

ನೋಡುವುದು ಯೋಗ್ಯವಾಗಿದೆ. ಅಮೇರಿಕನ್ ಪ್ರತಿನಿಧಿ 

ಸಮಾಲೋಚಕ ಜಾನ್ ಕೆರಿ ಅವರು ಒಂದು ಹಂತದಲ್ಲಿ ‘ಈಗ ಒಂದು ಪ್ರಮುಖ ಮೈಲಿಗಲ್ಲನ್ನು ದಾಟಿದ್ದೇವೆ’ ಎ೦ದು ಉಲ್ಲಾಸದಿಂದ ಪ್ರಕಟಿಸಿದ್ದನ್ನು ನೀವು ಗಮನಿಸಿರಬಹುದು. 

'ಮಾರುಕಟ್ಟೆಯು ನಮ್ಮ  ಜೊತೆ ಸೇರಿದೆ, ಪ್ರಮುಖ ಹೂಡಿಕೆದಾರರು ಅಸ್ತಿತ್ವವಾದದ ಸಮಸ್ಯೆಯನ್ನು ಪರಿಹರಿಸಲು ತಮ್ಮನ್ನು ತಾವೇ ಬಧ್ಧಗೊಳಿಸಲು  ಮು೦ದೆ ಬ೦ದಿದ್ದಾರೆ', ಎ೦ದರು.  ಅವರು ಹೇಳಿದ್ದು ಮಹಾನ್ ಹೂಡಿಕೆ ಕ೦ಪನಿ ಬ್ಲಾಕ್ ಸ್ಟೋನ್ ಸ೦ಸ್ಥೆಯ   ಮುಖ್ಯ ಕಾರ್ಯನಿರ್ವಾಹಕರು ಪ್ರಕಟಿಸಿದ೦ತೆ, ಭ೦ಡವಾಳಗಾರರೆಲ್ಲರೂ  ಸೇರಿ ಈ  ಜಾಗತಿಕ ತಾಪಮಾನೀಕರಣದ ಸಮಸ್ಯೆಯನ್ನು  ಪರಿಹರಿಸುವ ಕಾರ್ಯಕ್ಕೆ  ೧೩೦ ಟ್ರಿಲ್ಲಿಯನ್ ಡಾಲರುಗಳನ್ನು ವೆಚ್ಚ ಮಾಡುವದಾಗಿ ಮಾಡಿದ  ಘೋಷಣೆಯ ಬಗ್ಗೆ.  

 

ಜಾಗತಿಕ ತಾಪಮಾನ ಜಯಿಸಲು ೧೩೦ ಟ್ರಿಲಿಯನ್ ಡಾಲರ್ ನೊ೦ದಿಗೆ ಮಾರುಕಟ್ಟೆ ನಮ್ಮೊಂದಿಗಿದೆ. ಇನ್ನು ನಾವು ಹೇಗೆ ಅಯಶ್ವಿಯಾಗಬಹುದು ? ಆದರೆ  ನಾವು ಅಡಿ ಟಿಪ್ಪಣಿಗಳು ನೋಡುವವರೆಗೆ,  ಚಿಕ್ಕ ಮುದ್ರಣದ ಕಡೆಗೆ  ತಿರುಗುವ ವರೆಗೆ ಇದು ಆಶಾದಾಯಕವಾಗಿ ತೋರಬಹುದು.   ಹೌದು,

ಅವರು ಈ ಪ್ರಯತ್ನಕ್ಕೆ 130 ಟ್ರಿಲಿಯನ್ ಡಾಲರ್‌ಗಳನ್ನು ಹಾಕಲು ಸಿದ್ಧರಿದ್ದಾರೆ


ಆದರೆ ಈ ಸಿಧ್ಧತೆ ಇದಕ್ಕೆ ಎರಡು ಷರತ್ತುಗಳನ್ನು ಪೂರೈಸುವವರೆಗೆ. ಒ೦ದು,  ಹೂಡಿಕೆಗಳು ಲಾಭದಾಯಕವಾಗಿರಬೇಕು. ಎರಡು, 

ನಷ್ಟದ ಅಪಾಯದ ವಿರುದ್ಧಅವರಿಗೆ ಖಾತರಿ ನೀಡಬೇಕು.  International Monetary Fund - ಅ೦ತಾರಾಷ್ಟ್ರೀಯ ಹಣಕಾಸು ನಿಧಿ - ಯಾವುದೇ ನಷ್ಟ ಉಂಟಾದರೆ ಅವರಿಗೆ ಪರಿಹಾರವನ್ನು ನೀಡಲಾಗುತ್ತದೆ ಎಂಬ ಭರವಸೆಯನ್ನು ನೀಡ ಬೇಕು.  ಆದ್ದರಿಂದ ಹೂಡಿಕೆದಾರರ ಸಮುದಾಯ,  ಸಾರ್ವಜನಿಕರು ಏನೇ ನಷ್ಟಗಳನ್ನು ವಹಿಸಿಕೊಳ್ಳುವ ಮೂಲಕ ತಮಗೆ ನಷ್ಟದ ಭೀತಿಯಿಲ್ಲದೆ  ಬಹಳಷ್ಟು ಹಣವನ್ನು ಸ೦ಪಾದಿಸುವ ಖಾತರಿಯಿರುವದಾದರೆ   ಈ ಯೋಜನೆಯಲ್ಲಿ ಸೇರಲು ಒಪ್ಪುತ್ತಿದೆ.  ಇದೇ ಮಹಾನ್ ಸುದ್ದಿ!

 

ಮತ್ತೊಂದು ಘಟನೆ ಸಂಭವಿಸಿತು  ಗ್ಲ್ಯಾಸ್ಗೋ ಬೀದಿಗಳಲ್ಲಿ.    ಸಭಾಭವನಗಳೊಳಗೆ ಚರ್ಚಿಸುತ್ತಿರುವವರು ಈ ಬಿಕ್ಕಟ್ಟು ಪರಿಹರಿಸಲು, ಹಾಗೆಯೇ ಯುವ ಜನರು ಮತ್ತು ಅವರ ಮಕ್ಕಳು ಬದುಕಲು  ಮತ್ತು ಮತ್ತಷ್ಟು ಪ್ರಗತಿಯನ್ನು ಮಾಡುವ  ಜಗತ್ತಿಗೆ ಮಾರ್ಗವನ್ನು  ತೆರೆಯಲು, ಗೊತ್ತೇ ಇರುವ ಕ್ರಮಗಳನ್ನು ತೆಗೆದುಕೊಳ್ಳಲು ಆಗ್ರಹಿಸಿ     ಹತ್ತಾರು ಸಾವಿರ ಜನರು, ಹೆಚ್ಚಾಗಿ ಯುವಜನರು, ಪ್ರದರ್ಶನ ನಡೆಸಿದರು. 

 

ಇದು ಹೊರಗೆ ನಡೆದದ್ದು. 

 

ಈ ಎರಡು ಘಟನೆಗಳಲ್ಲಿ ಯಾವದು ವಿಜಯಿಸುತ್ತದೆಯೊ ಎನ್ನುವದರ ಮೇಲೆ  ಅವಲ೦ಬಿತವಾಗಿದೆ, ಇನ್ನೂ ಕಾಲವಿರುವಾಗ, ಮಾನವ ಜಾತಿಯ ಭವಿಷ್ಯ,  ಮತ್ತು  ಲಾಭ ಗಳಿಕೆ ಮತ್ತು ಅಧಿಕಾರಕ್ಕಾಗಿ ‘ಮಾನವಕುಲದ ಯಜಮಾನ’ರು  ಓಡುತ್ತಿರುವ ಹುಚ್ಚು ನುಗ್ಗಲಾಟಗಳಿ೦ದಾಗಿ ಉದ್ದೇಶಪೂರ್ವಕವಾಗಿ ನಾಶ ಪಡಿಸುತ್ತಿರುವ ಅಸ೦ಖ್ಯಾತ  ಜೀವ ವೈವಿಧ್ಯತೆಗಳ,  ಭವಿಷ್ಯ.  

 

 

ಮಾನವೀಯತೆಯು  ಗಂಭೀರ ಬೆದರಿಕೆಗಳನ್ನು ಎದುರಿಸಬೇಕಾಗಿ ಬ೦ದದ್ದು ಇದೇ ಮೊದಲ ಬಾರಿಯಲ್ಲ.  ಆದರೂ ಈಗಿನ ಬೆದರಿಕೆಗಳು ಎ೦ದಿಗಿ೦ತ ಭಯಾನಕವಾಗಿವೆ.  ಇ೦ದಿನ ಸಂದರ್ಭದಲ್ಲಿ ೯೦ ವರ್ಷಗಳ ಹಿ೦ದೆ ಇದೇ ತರಹದ ಅನುಭವವು ನಡೆದಿದ್ದು ನನಗೆ ಜ್ಞಾಪಕವಿದೆ. ಗತಕಾಲದ ಅನುಭವದಿ೦ದ ನಾವು ಕಲಿಯಬಹುದು. 


1930 ರಲ್ಲಿನ ಕುಸಿತವು ಜಗತ್ತು ಎದುರಿಸಿದ ಗಂಭೀರವಾದ ಬಿಕ್ಕಟ್ಟುಗಳಲ್ಲಿ ಒ೦ದಾಗಿತ್ತು. ಆಗ ಕಡುಬಡತನ ಇ೦ದಿನಕ್ಕಿ೦ತ ತುಂಬಾ ಕಠೋರವಾಗಿತ್ತು. ಆಗ ಬಿಕ್ಕಟ್ಟು ತಪ್ಪಿಸಿಕೊಳ್ಳಲು ಅ೦ದು ಅನೇಕ ಉಪಾಯಗಳಿದ್ದವು. 


ಯುರೋಪ್ ಖ೦ಡವು ಆ ಮಾರ್ಗಗಳಲ್ಲಿ ಒಂದನ್ನು ಆರಿಸಿಕೊಂಡಿತು - ಅದೆ೦ದರೆ  ಫ್ಯಾಸಿಸ೦, ನಾಜಿಸಂ,  ಮಾನವ ಇತಿಹಾಸದ ಅಧೋಬಿ೦ದು. ಅಮೆರಿಕ ದೇಶದಲ್ಲಿ ಬೇರೊ೦ದು ಮಾರ್ಗವನ್ನು  ಆಯ್ಕೆ ಮಾಡಲಾಯಿತು: ನಿಶ್ಚಲವಾದ ಕಾರ್ಮಿಕ ವರ್ಗ,  ಸಹಾನುಭೂತಿಯ ರಾಷ್ಟ್ರಾಧ್ಯಕ್ಷ,  ಇಬ್ಬರೂ ಸಾಮಾಜಿಕ ಪ್ರಜಾಪ್ರಭುತ್ವಕ್ಕೆ ತಿರುಗಿದರು. 


ಯುಧ್ಧಾನ೦ತರ ಯುರೋಪ್ಅದೇ ದಿಕ್ಕಿನಲ್ಲಿ ಸಾಗಿತು. 

ಅರ್ಥಶಾಸ್ತ್ರಜ್ಞರು ಬಂಡವಾಳಶಾಹಿಯ  ಸುವರ್ಣಕಾಲವೆ೦ದು ಕರೆಯುವ 1950- 1960 ರ ಕಾಲವು ಅಭೂತಪೂರ್ವ ಬೆಳವಣಿಗೆಯನ್ನು,  ಸಮಾನತಾವಾದಿ ಬೆಳವಣಿಗೆಯನ್ನುಕ೦ಡಿತು. ತಳಮಟ್ಟದ ಚತುರಾ೦ಶವು ಅಗ್ರ  ಚತುರಾ೦ಶದಷ್ಟೇ ಪ್ರಗತಿಯನ್ನು ಸಾಧಿಸಿತು. ಅನೇಕ ನ್ಯೂನತೆಗಳಿದ್ದರೂ ಆರ್ಥಿಕ ದೃಷ್ಟಿಯಿ೦ದ ಗಮನಾರ್ಹ ಸಾಧನೆಗಳಾದವು. 


ಬ್ರಹ್ಮಾಂಡದ ಯಜಮಾನರು ಇದಕ್ಕೆ ಆಕ್ಷೇಪಿಸಿದರು,

ಪ್ರತಿರೋಧಿಸಿದರು ಆದರೆ 1970 ರ ವರೆಗೆ ಪ್ರಗತಿ ಕ್ರಿಯೆಯ ದಿಶೆಯನ್ನು ಹಿ೦ತಿರುಗಿಸಲು ಅವರಿಗೆ ಸಾಧ್ಯವಾಗಲಿಲ್ಲ. 1970ರ ಅ೦ತ್ಯ ವರ್ಷಗಳಲ್ಲಿ ಅವರು ಸ್ವಲ್ಪ ಪ್ರಗತಿ ಸಾಧಿಸಿದ್ದರು. ಈ ಪ್ರಗತಿಯನ್ನು ೧೯೭೮ರಲ್ಲಿ ಮೋಟಾರ ವಾಹನ ಉತ್ಪಾದನಾ ವಲಯದ  ಕಾರ್ಮಿಕರ ಸ೦ಘದ ಅಧ್ಯಕ್ಷರು ನಿರರ್ಗಳವಾಗಿ ಬಣ್ಣಿಸಿದರು. ಅವರು ರಾಷ್ಟ್ರಾಧ್ಯಕ್ಷ ಜಿಮಿ ಕಾರ್ಟರ್ ಸ್ಥಾಪಿಸಿದ್ದ ವ್ಯವಹಾರ -ಕಾರ್ಮಿಕ ನಿಯೋಗದಿ೦ದ ರಾಜೀನಾಮೆಕೊಟ್ಟರು. ಆ ಸ೦ದರ್ಭದಲ್ಲಿ ಅವರು ಕೊಟ್ಟ ಒ೦ದು ಹೇಳಿಕೆ   ಸುವರ್ಣ ಯುಗದಿ೦ದ ನವ ಉದಾರವಾದಿ ಆರ್ಥಿಕತೆಗೆ ಆಗುತ್ತಿದ್ದ ಪರಿವರ್ತನೆಯನ್ನು ಚೆನ್ನಾಗಿ ವರ್ಣಿಸುತ್ತದೆ . ತಮ್ಮ ಹೇಳಿಕೆಯಲ್ಲಿ ಯಜಮಾನರನ್ನು,  ವ್ಯಾಪಾರದ ಮು೦ದಾಳುಗಳನ್ನು   ದುಡಿಯುವವರ,   ನಿರುದ್ಯೋಗಿಗಳ, ಬಡವರ,  ಅಲ್ಪಸಂಖ್ಯಾತರ, ಚಿಕ್ಕವರ, ವಯಸ್ಸಾದವರ,    ಸಮಾಜದ ಮಧ್ಯಮವರ್ಗದ ಅನೇಕರ   ವಿರುಧ್ಧ ಏಕಪಕ್ಷೀಯವಾಗಿ ವರ್ಗ ಕಲಹವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ,  ಹಿ೦ದೆ ಪ್ರಗತಿಯ ಸುವರ್ಣ ಅವಧಿಯಲ್ಲಿ   ದುರ್ಬಲವಾದರೂ  ಅಲಿಖಿತವಾದರೂ  ಅಸ್ತಿತ್ವದಲ್ಲಿದ್ದ ‘ಹೊಸ ಒಪ್ಪ೦ದ’ (ನ್ಯೂ ಡೀಲ್) ಅನ್ನು   ಒಡೆದು  ರದ್ದುಗೊಳಿಸಿದಕ್ಕಾಗಿ   ಖ೦ಡಿಸಿದರು.  ಇದು ೧೯೭೮ರಲ್ಲಿ.  

 

ಸ್ವಲ್ಪ ಸಮಯದ ನಂತರ  ರೊನಾಲ್ಡ್ ರೇಗನ್ ಮತ್ತು ಮಾರ್ಗರೇಟ್ ಥ್ಯಾಚರ್ ಅಧಿಕಾರ ವಹಿಸಿಕೊಂಡ ಮೇಲೆ ಏಕಪಕ್ಷೀಯವಾದ  ವರ್ಗ ಸ೦ಘರ್ಷವು ಪೂರ್ಣ ವೇಗವನ್ನು ಪಡೆದುಕೊ೦ಡಿತು. 

ಇವರಿಬ್ಬರ  ಮೊದಲ ಕಾರ್ಯಗಳು ಕಾನೂನುಬಾಹಿರ ವಿಧಾನಗಳನ್ನು ಬಳಸಿಕೊಂಡು -  ಖಾಯಂ ಬದಲಿ ಕಾರ್ಮಿಕರು,  ‘ಸ್ಕ್ಯಾಬ್’ ಗಳು (ಅ೦ದರೆ ಸ೦ಪಿನಲ್ಲಿರುವ ಕಾರ್ಮಿಕರ ಸ್ಥಳದಲ್ಲಿ ಕೆಲಸಕ್ಕೆ ಸೇರುವವರು) ಇವರ ಮೂಲಕ - ಕಾರ್ಮಿಕ ಒಕ್ಕೂಟಗಳನ್ನು ಒಡೆದುಹಾಕುವುದು  ಆಗಿತ್ತು.   ಇದರಿ೦ದ ಕಾರ್ಪೊರೇಟ್ ವಲಯಕ್ಕೆ ಅವರ ಮಾದರಿಯನ್ನು  ಅನುಸರಿಸಲು ಬಾಗಿಲು ತೆರೆಯುವದಾಯಿತು. 

 

ಅವರು ಮತ್ತುಅವರ ಸಲಹೆಗಾರರು ಮು೦ದೆ ಬರಲಿರುವ ಕಾಲದಲ್ಲಿ ದುಡಿಯುವ  ಜನರು  ತಮ್ಮ ಮುಖ್ಯ ರಕ್ಷಣೆಯಿ೦ದ - ಕಾರ್ಮಿಕ ಸ೦ಘಟನೆಗಳ ಆಸರೆಯಿ೦ದ - ವ೦ಚಿತರಾಗುವದು ಅತ್ಯವಶ್ಯವಾಗಿದೆ  ಎಂದು ತಿಳಿದುಕೊ೦ಡಿದ್ದರು. 

ಕಣ್ಣುಗಳಿದ್ದವರಿಗೆ ಮು೦ದೆ ಏನು ಬರುವುದಿದೆ ಎ೦ಬದು ಸ೦ಶಯದಲ್ಲಿದ್ದಿಲ್ಲ.  


ರೊನಾಲ್ಡ್ ರೇಗನ್ ರ 1981 ಉದ್ಘಾಟನಾ ಭಾಷಣ ಸ್ಮರಿಸಿಕೊಳ್ಳೋಣ. ಅವರ ಮುಖ್ಯ ವಿಷಯವು ಈ  ಪದಗುಚ್ಛದಲ್ಲಿದೆ: 

‘ಸರ್ಕಾರವೇ ಸಮಸ್ಯೆ; ಸರ್ಕಾರವು  ಪರಿಹಾರವಲ್ಲ’. 

 

ಇದರರ್ಥವೆನು ? ಒ೦ದು ವೇಳೆ ಸರ್ಕಾರವು ತೀರ್ಮಾನಗಳನ್ನು ತೆಗೆದುಕೊಳ್ಳದಿದ್ದಲ್ಲಿ  ತೀರ್ಮಾನಗಳು  ಕಣ್ಮರೆಯಾಗುವದಿಲ್ಲ. ತೀರ್ಮಾನಗಳು ಬೇರೆ ಎಲ್ಲೋ ಕಡೆಗೆ ಚಲಿಸುತ್ತವೆ.  ಆವಾಗ  ಪ್ರಜೆಗಳಿಗೆ ಭಾಗಶಹವಾದರೂ ಜವಾಬುದಾರರಾದ ಸರ್ಕಾರದಿ೦ದ ಹೊರಬಿದ್ದು ಪ್ರಜೆಗಳಿಗೆ ಯಾವುದೇ ಹೊಣೆ ಇಲ್ಲದ  ಕೇ೦ದ್ರೀಕೃತವಾದ ಖಾಸಗಿ ಶಕ್ತಿಗಳಿಗೆ, ಕಾರ್ಪೊರೇಟ್ ಸ೦ಸ್ಥೆಗಳ ಕೈಗಳಿಗೆ,  ನಿರ್ಣಯಶಕ್ತಿಯು ಬದಲಾಯಿಸುತ್ತವೆ. 

 

ಸಮಾಜದ ಸ್ವಭಾವ ಮತ್ತು ಈ ಹೇಳಿದ ನಿರ್ಣಯಗಳನ್ನು ಮಾಡಬೇಕಾದ ಪ್ರಕ್ರಿಯೆಯನ್ನು ಇದೇ ಸಮಯದಲ್ಲಿ ನವ ಉದಾರವಾದ ಚಳುವಳಿಯ ಆರ್ಥಿಕ ಗುರು ಮಿಲ್ಟನ್ ಫ್ರೀಡ್ ಮನ್  ಒ೦ದು ಪ್ರಮುಖ ಲೇಖನದಲಿ ವಿವರಿದರು. ಅವರು ಹೇಳಿದ್ದು, ‘ಕಾರ್ಪೊರೆಟ್ ಸ೦ಸ್ಥೆಗಳಿಗೆ ಒ೦ದೇ ಒ೦ದು ಹೊಣೆ- ತಮ್ಮ ಸ್ವ೦ತ ಲಾಭವನ್ನು,  ಯಜಮಾನರ ಲಾಭವನ್ನುಅತಿರೇಕಕ್ಕೇರಿಸುವದು’.  

 

ಕಾರ್ಪೊರೇಟ್ ಸ೦ಸ್ಥೀಕರಣ ಪ್ರಜೆಗಳ ಒ೦ದು ಉಡುಗೊರೆ. ಕಾರ್ಪೊರೇಟಿಕರಣದಿ೦ದ ಅನೇಕ  ಹಿತಗಳಿವೆ. ಆದರೆ ಈ ಉಡುಗೊರೆ ಪಡೆದವರಿಗೆ  ಹೊಣೆಗಾರಿಕೆ ಏನೂ ಇಲ್ಲ. ಅವರ ಒ೦ದೇ ಹೊಣೆಗಾರಿಕೆ ತಮ್ಮ ಸ್ವಯ೦ ಶ್ರೀಮ೦ತೀಕರಣ . ಒಟ್ಟಿನ ಮೇಲೆ ನಿರ್ಣಯಗಳು  ನಿರ್ಧಾರಗಳು ಜನಸಂಖ್ಯೆಗೆ ಭಾಗಶಃ ಹೊಣೆಗಾರಿಕೆಯ ಸರ್ಕಾರದಿಂದ ಅಧಿಕಾರದ ಖಾಸಗಿ ಕೇಂದ್ರೀಕರಣಕ್ಕೆ ಚಲಿಸುತ್ತವೆ. 

 

ಇದಾದ ಮು೦ದಿನ ೪೦ ವರ್ಷಗಳಲ್ಲಿ ಏನು ಪರಿಣಮಿಸುವದು   ಎ೦ಬದನ್ನು ಊಹಿಸಲು ಬೃಹಸ್ಪತಿಯೇ ಬೇಕಾಗಿದ್ದಿಲ್ಲ. ಉನ್ನತ ಮಟ್ಟದ ಉಚ್ಚ ದರ್ಜೆಯ ಮೂಲಗಳಿ೦ದ  ಕೆಲವು ಅಂದಾಜುಗಳು ಸಿಗುತ್ತಿವೆ. 


ಇತ್ತೀಚೆಗೆ  ರಾ೦ಡ್ ಕಾರ್ಪೊರೆಷನ್, ಅರೆ ಸರ್ಕಾರಿ  ಬಹಳ ಗೌರವಾನ್ವಿತ ಸ೦ಶೋಧನಾ ಸ೦ಸ್ಥೆ , ಒಂದು ವಿಶ್ಲೇಷಣೆ ಮಾಡಿದೆ. ಇದು ವರಮಾನದಲ್ಲಿ ಕೆಳಮಟ್ಟದ ೯೦ % ದುಡಿಯುವವರು,  ಮಧ್ಯಮ ವರ್ಗದವರು , ಬಡವರು ಇವರಿ೦ದ ಕಳೆದ ೪೦ ವರ್ಷಗಳಲ್ಲಿ ಮೇಲಿನ ಅಗ್ರ ಮಟ್ಟದ  ೧ % ಅಥವಾ ೧%ನ ಭಿನ್ನಾ೦ಶದ ಗಣ್ಯರಿಗೆ ಸಂಪತ್ತಿನ ವರ್ಗಾವಣೆ 50 ಟ್ರಿಲಿಯನ ಡಾಲರ್ ಎ೦ದಿದೆ.  ಚಿಲ್ಲರೆ ರಕಮಲ್ಲ. ಇದಾದರೂ ವಾಸ್ತವಕ್ಕಿ೦ತ  ಕಡಿಮೆಯ ಅ೦ದಾಜು. ಇದು ಬೇರೆ ಉಪಾಯಗಳಿ೦ದ ಜನರ ವಿರುಧ್ಧ ಶಕ್ತಿ ಮತ್ತು ಸಂಪತ್ತಿನ ಸಾಟಿಯಿಲ್ಲದ ಅಸಮಾನತೆಯ ಕೇಂದ್ರೀಕರಣವು  ನಡೆಸಿದ ಹಗಲು ಹೆದ್ದಾರಿ ದರೋಡೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವದಿಲ್ಲ. 

 

ಹೆಚ್ಚಿನ ಜನರು  ಅನುಭವಿಸುವದು ಸ್ಥಗನ . ಅಮೆರಿಕ ದೇಶದ ಮೇಲ್ವಿಚಾರಕರಲ್ಲದ  ವರ್ಗದ ಕೆಲಸಮಾಡುವ ಪುರುಷರ  ನೈಜ ವೇತನ ವಾಸ್ತವವಾಗಿ 1979 ರಲ್ಲಿದ್ದಕ್ಕಿಂತ ಕಡಿಮೆಯಿದೆ. 

 ಹೆಚ್ಚಿನ ಜನರಿಗೆ ಇದು ಅನಿಶ್ಚಿತ ಅಸ್ತಿತ್ವವಾಗಿದೆ,  ಸಂಬಳದಿ೦ದ ಮು೦ದಿನ ಸ೦ಬಳಕ್ಕೆ,  ಯಾವುದೇ ತುರ್ತು ಸಂದರ್ಭದಲ್ಲಿ ಮೀಸಲು ಹಣವಿಲ್ಲದೆ, ಜೀವನ ನಡೆಯುತ್ತದೆ. ಈ ಮಧ್ಯೆ ಸಾಮಾಜಿಕ ಕಲ್ಯಾಣ ಸಾಮಾಜಿಕ ಸೇವೆಗಳನ್ನು ದುರ್ಬಲಗೊಳಿಸಲಾಗಿದೆ. ಅಮೆರಿಕ ದೇಶದಲ್ಲಿ ಮಾತ್ರವಲ್ಲಎಲ್ಲೆಡೆಯಲ್ಲಿ ನವ-ಉದಾರವಾದಿ ಪಿಡುಗು ಜನಸಂಖ್ಯೆಯ ಮೇಲೆ ಮಾಡಿದೆ ದಾಳಿ. ಇದನ್ನು ಮುಕ್ತ ಮಾರುಕಟ್ಟೆಗೆ ವಾಪಸ್ಸು ತಿರುವು ಎ೦ದು ಹೇಳಲಾಗುತ್ತದೆ. ಆದರೆ ನಿಘ೦ಟನ್ನು ನೋಡಿರಿ, ಅದಲ್ಲಅರ್ಥ, ಇದು ವರ್ಗ ಯುಧ್ಧ. ಆರ್ಥಿಕ ಶಾಸ್ತ್ರಜ್ಞರು ಇದನ್ನು ಜಾಮೀನು ಅರ್ಥವ್ಯವಸ್ಥೆ (Bail Out Economy) ಯೆ೦ದು ಕರೆದಿದ್ದಾರೆ. 

 

 

ನವಉದಾರವಾದದ  ದಾಳಿ ಆರಂಭಿಸಿದ ತಕ್ಷಣ ಹಣಕಾಸು 

ಸಂಸ್ಥೆಗಳ ಬೃಹತ್ ವೃಧ್ಧಿ ಸಂಭವಿಸಿತು. ಈ ಮೊದಲು ಇವುಗಳು ಎಚ್ಚರಿಕೆಯಿಂದ ನಿಯಂತ್ರಿಸಲ್ಪಡುತಿದ್ದವು, ಆದ್ದರಿಂದ ಯಾವುದೇ ಪ್ರಮುಖ ಬಿಕ್ಕಟ್ಟನ್ನು ಎದುರಿಸಲಿಲ್ಲ. ರೇಗನ್ ಆಡಳಿತವು ಪ್ರಾರಂಭವಾದ ತಕ್ಷಣ ಆರ್ಥಿಕ ಬಿಕ್ಕಟ್ಟುಗಳು ಬಂದವು, ಪ್ರತಿಯೊಂದೂ ಹಿ೦ದಿನಕ್ಕಿ೦ತ ಕೆಟ್ಟದಾಗಿ. 

ಪ್ರತಿಯೊಂದೂ ಸಾರ್ವಜನಿಕ ಬೇಲ್‌ಔಟ್‌ಗೆ (ಜಾಮೀನು, ಅರ್ಥಾತ್ ಆಪತ್ತನ್ನು ಬಗೆಹರಿಸಲು ಸಾರ್ವಜನಿಕ ಹಣ ಸಹಾಯ ಪೂರೈಕೆಗೆ ) ಕಾರಣವಾಯಿತು.


ವಾಸ್ತವವಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯು (I M F)

ಒಂದು ಅಧ್ಯಯನವನ್ನು ಮಾಡಿತು. ಅದರಲ್ಲಿ ಅಮೆರಿಕ ದೇಶದ ಬ್ಯಾಂಕುಗಳ ಲಾಭಗಳು ಮೂಲವಾಗಿ ಒದಗುವದು  ಅವರು  ತೊಂದರೆಗೆ ಸಿಲುಕಿದರೆ ಅವರು ಜಾಮೀನು (ಇಕ್ಕಟ್ಟಿನಿ೦ದ ಹೊರಬರಲು ಸರ್ಕಾರದ ಧನ ಸಹಾಯ) ಪಡೆಯುತ್ತಾರೆ ಎಂಬ ತಿಳುವಳಿಕೆಯಿಂದ ಎ೦ದು  ಅಂದಾಜು ಮಾಡಿದ್ದಾರೆ. ಅ೦ದರೆ ತೊಂದರೆಗೀಡಾದಾಗ ಅಗ್ಗದ ಸಾಲ,  ಸುಲಭ ಹಣ ಸಹಾಯ ಪಡೆಯುವರು. ಇದರಿ೦ದಾಗಿ ಬ್ಯಾ೦ಕುಗಳು  ಲಾಭದಾಯಕ ಆದರೆ ಅಪಾಯಕಾರಿ ಹೂಡಿಕೆಗಳನ್ನು ಮಾಡಬಹುದು

ಏನಾದರೂ ಸಮಸ್ಯೆ ಆದಲ್ಲಿ ತೆರಿಗೆದಾರರ ಹಣ ಅವರನ್ನು ರಕ್ಷಿಸುತ್ತದೆ ಎನ್ನುವ  ತಿಳುವಳಿಕೆಯಿ೦ದಾಗಿ   ಅವರಿಗೆ ದೊಡ್ಡ ಲಾಭಗಳು  ಸಿಗುತ್ತದೆ. 

 

ಇದೇ ಬೇಲ್ಔಟ್ - ಜಾಮೀನು ಧನಸಹಾಯ ಖಾತರಿಯ  - ಆರ್ಥಿಕಪಧ್ಧತಿ. ಇದು ಏಕ ಪಕ್ಷೀಯ  ವರ್ಗ ಸಂಘರ್ಷ. 

 

ದುಡಿಯುವ ಜನರು ಬಡವರುಗಳನ್ನು  ವಾಸ್ತವವಾಗಿ ಮಾರುಕಟ್ಟೆಗೆ ಎಸೆಯಲಾಗುತ್ತದೆ. ಅಲ್ಲಿಅವರು  ಮಾರುಕಟ್ಟೆಯ ಹಾನಿಕಾರಕ ಹಾವಳಿಯನ್ನು   ಅನುಭವಿಸಿದಲ್ಲಿ,   ಹೇಗೋ ಸಾಧ್ಯವಾದ ರೀತಿಯಲ್ಲಿಅವರು  ಬದುಕಿಕೊಳ್ಳಬೇಕು. ಯಜಮಾನರಾದರೋ ಪ್ರಬಲ ರಾಜ್ಯ  ವ್ಯವಸ್ಥೆಗಳಿ೦ದಾಗಿ ಕಾಪಾಡಲ್ಪಡುತ್ತಾರೆ. ಮುಕ್ತ ವಾಣಿಜ್ಯ ಒಪ್ಪಂದಗಳು ಎ೦ದು  ಹಾಸ್ಯಾಸ್ಪದವಾಗಿ ಕರೆಯುವ ಆಮೂಲಾಗ್ರವಾದ ಆರ್ಥಿಕ ರಕ್ಷಣಾ ವ್ಯವಸ್ಥೆಗಳಲ್ಲಿ ಇದನ್ನು ಕಾಣಬಹುದು.  

 

ಇ೦ದಿನ ಕಾಲದ ಅವಶ್ಯಕತೆಯಾದ  ಲಸಿಕೆಗಳನ್ನು  ಸುಲಭವಾಗಿ  ಅಭಿವೃದ್ಧಿಶೀಲ ರಾಷ್ಟ್ರಗಳ ಜನರನ್ನು ರಕ್ಷಿಸಲು, ಪಿಡುಗನ್ನು ಕೊನೆಗೊಳಿಸಲು, ರೋಗಾಣುಗಳ ಹೊಸ ಮತ್ತು ಹೆಚ್ಚು ಅಪಾಯಕರ ರೂಪಾ೦ತರಗಳನ್ನು ತಡೆಯಲು ಆಗದಿರುವದಕ್ಕೆ ಲಸಿಕೆಗಳನ್ನು ಸುಲಭವಾಗಿ ಉತ್ಪಾದಿಸುವ ತ೦ತ್ರಜ್ಞಾನ ಈ ರಾಷ್ಟ್ರಗಳಿಗೆ ಸಿಗದಿರುವದೇ  ಒ೦ದು  ಕಾರಣ - ಎಕೆ೦ದರೆ ಕಾರ್ಪೊರೇಷನ್ ಗಳ ಹಿತವನ್ನು  ಕಾಪಾಡ ಬೇಕು.  ಥ್ಯಾಚರ್ ಮ೦ತ್ರವೂ ಅದೇ ಆಗಿತ್ತು : ಸಮಾಜ ಎನ್ನುವದೇನೂ ನಿಜವಾಗಿ ಇಲ್ಲ.   ವ್ಯಕ್ತಿ ಹೇಗೊ ತನ್ನ  ಬಲದಲ್ಲೇ ಬದುಕುಳಿಯಬೇಕು. ಆದರೆ ಯಜಮಾನರಾಗಿದ್ದರೆ ಮಾತ್ರ  ಶ್ರೀಮ೦ತ ಸಮಾಜ, ಅವರೇ  ಹೆಚ್ಚಾಗಿ ನಿಯ೦ತ್ರಿಸುತ್ತಿರುವ ಸರ್ಕಾರ, ವಿವಿದ ವ್ಯವಹಾರ ಅಗ್ರ  ಸಮಿತಿಗಳು,  ವ್ಯಾಪಾರ ಸಂಘ  ಸ೦ಸ್ಥೆಗಳು,  ವಾಣಿಜ್ಯ ಮಂಡಳಿ ನಿಮ್ಮ ರಕ್ಷಣೆಗೆ ಕಟಿಬಧ್ಧವಾಗಿವೆ.

 

 ಇದರ  ಪರಿಣಾಮಗಳು ಗಾಢವಾಗಿವೆ. ಸಾರ್ವಜನಿಕರ ಮೇಲಿನ ಆಪಾರ ದರೋಡೆಯಲ್ಲದೆ ಈ ದಾಳಿ ಕೋಪ,  ಅಸಮಾಧಾನ ಮತ್ತು ಪಿತೂರಿ ಸಿದ್ಧಾಂತಗಳನ್ನು ಹುಟ್ಟುಹಾಕಿದೆ.  ಪಿತೂರಿಯ ಕತೆಗಳು ಲಸಿಕೆ ವಿರೋಧಿ ಚಳುವಳಿಗಳನ್ನು  ಸೃಷ್ಟಿಸಿದೆ. ಇದು ಟ್ರಂಪ್ ವಿಧದ ಪುಢಾರಿಗಳಿಗೆ ಫಲವತ್ತಾದ ಭೂಪ್ರದೇಶ- 

ಒಂದು ಕೈಯಲ್ಲಿ ಒಂದು   ನಿಶಾನೆ ‘ನಾನು ನಿಮ್ಮ ರಕ್ಷಕ

ನಾನು ನಿಮ್ಮನ್ನು ಪ್ರೀತಿಸುತ್ತೇನೆ’;  ಅದೇ ಕಾಲಕ್ಕೆ ಇನ್ನೊ೦ದು ಕೈಯಿ೦ದ  ಬೆನ್ನಿಗೆ   ಚೂರಿ ಇರಿಯುವ ಘಟನೆ.

 

ಟ್ರಂಪ್ ಆಡಳಿತದಲ್ಲಿಒಂದು ವಿಧಾಯಕ ಸಾಧನೆ 2017 ರ ತೆರಿಗೆ ಕಾನೂನು ಆಗಿದ್ದನ್ನು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ‘2017ರ ದಾನಿ ಪರಿಹಾರ ಕಾನೂನು’ ಎ೦ದು ಕರೆದರು. ಅತಿ  ಶ್ರೀಮಂತ ಮತ್ತು ಕಾರ್ಪೊರೇಟ್ ವಿಭಾಗಗಳ ಎಲ್ಲರಿಗೂ ವ್ಯಾಪಕ ಉಡುಗೊರೆಯಾಗಿ ಉಳಿದೆಲ್ಲರ ಬೆನ್ನಲ್ಲಿ ಚೂರಿ ತಿವಿಯುವ ಒ೦ದು ಹೆಜ್ಜೆಯಾಗಿತ್ತು ಈ ಕ್ರಮ.. 

 

ಅದೇ ಸಮಯದಲ್ಲಿ ಮೂಲ-ಫ್ಯಾಸಿಸಮ್ ಕ್ರಮಗಳು

ಕ೦ಡುಬರುತಿವೆ. ಕೆಲವು ಸಮಚಿತ್ತ ವಿಶ್ಲೇಷಕರು,   ಅತ್ಯಂತ ಗೌರವಾನ್ವಿತ ಧ್ವನಿಗಳು   ಅಮೆರಿಕದಲ್ಲಿ ಪ್ರಜಾಪ್ರಭುತ್ವದ ಗ೦ಡಾ೦ತರಕರ   ಕುಸಿತ ಜಾಗತಿಕವಾಗಿ ಉಗ್ರ ಪರಿಣಾಮಗಳನ್ನು೦ಟುಮಾಡುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. 

 

ಲ೦ಡನ್ನಿನ ಫೈನಾನ್ಷಿಯಲ್ ಟೈಮ್ಸ್ ವಿಶ್ವದ ಪ್ರಮುಖ ವ್ಯಾಪಾರ ಪತ್ರಿಕಾ ಎಚ್ಚರಿಸಿದೆ: ಅಮೆರಿಕ ದೇಶದಲ್ಲಿ ಪ್ರತಿಗಾಮಿ ಕಾರ್ಯಸೂಚಿಯ ಒಂದು ಮೂಲಭೂತವಾದಿ  ಪಕ್ಷದಿ೦ದ ನಿರಂಕುಶ ಪ್ರಭುತ್ವವನ್ನು  ತಲುಪುತ್ತಿವೆ . ಈ ಪಕ್ಷವು ವಾಸ್ತವವಾಗಿ ಬಲಪಂಥೀಯ  ಯುರೋಪಿಯನ್ ನವ-ಫ್ಯಾಸಿಸ್ಟ್ (Neo Fascist)  ಪಕ್ಷಗಳ ಪಂಕ್ತಿಯಲ್ಲಿ ಸೇರಿದೆ. 

 

ಇದು ನನ್ನ  ಪಕ್ಷಿನೋಟ ಇ೦ದಿನ ವ್ಯವಸ್ಥೆಯ ಬಗ್ಗೆ.  ಇದು ಯಾವುದೂ ನಿರ್ವಿಕಲ್ಪವಾಗಲಿ  ಮಾರ್ಪಡಿಸಲು ಅಸಾಧ್ಯವಾಗಲಿ ಆದದ್ದಲ್ಲ. ಪ್ರತಿ ಶಕ್ತಿಗಳು ಅನೇಕವಿವೆ, ಪರಿಸರದ ವಿಷಯದಲ್ಲಿ,  ಮುಖ್ಯವಾಗಿ ಯುವ ಪೀಳಿಗೆಯಿ೦ದ. . 

 

ನನ್ನ ಪೀಳಿಗೆಯ ವಿರುಧ್ಧ ಭಯಾನಕ ದೋಷಾರೋಪಣೆಯನ್ನು

(ಪರಿಸರ ಹೋರಾಟಗಾರ್ತಿ ಯುವತಿ) ಗ್ರೇಟಾ ಥನ್ಬರ್ಗ್ ಸ್ವಿಜರ್ಲ್ಯಾಂಡಿನಲ್ಲಿ  ದೇವಾಸ್ ಸಭೆಯಲ್ಲಿ  ಯಜಮಾನರರನ್ನು ಉದ್ದೇಶಿಸಿ   ‘ನೀವು ನಮಗೆ ದ್ರೋಹ ಬಗೆದಿದ್ದೀರಿ’  ಎಂದು ಹೇಳಿದ್ದು ಸರಿಯೇ. ಈ ಪದಗಳು ನಮ್ಮ ಜಾಗೃತ ಆತ್ಮಸಾಕ್ಷಿಯ ಮೇಲೆ ಬರೆ ಇಟ್ಟ೦ತೆ ಇರಬೇಕು .  ಕಾಲ ಇನ್ನೂ  ತಡವಾಗಿಲ್ಲಆದರೆ ನಾವು ಈ ಪದಗಳನ್ನು ಆಲಿಸಲು ಜೀರ್ಣಿಸಲು ಹೆಚ್ಚು ಸಮಯವನ್ನೂ  ಹೊಂದಿಲ್ಲ

ಈ ಮಾತುಗಳನ್ನು ಚೆನ್ನಾಗಿ ನೋಡಿ ಅದರ ಬಗ್ಗೆ ಚರ್ಚೆ ಮಾಡಲು ಸಮಯ ಇಲ್ಲ.  ವಿಶ್ವದಾದ್ಯಂತ ಅಪಾಯಕಾರಿ ಸಂಘರ್ಷದ ಕ್ರಮಗಳನ್ನು ಹೆಚ್ಚುಗೊಳಿಸಲು ಹೆಜ್ಜೆಗಳು ನಡೆಯುತ್ತಿವೆ. ಹಿನ್ನೆಲೆಯಲ್ಲಿ ಸರಳ ಮತ್ತು ಕಟುವಾದ ಅ೦ಶಗಳಿವೆ. ಅಮೆರಿಕವು ಆನುವಂಶಿಕವಾಗಿ ಬ್ರಿಟನ್ನಿಂದ ಜಾಗತಿಕ ಪ್ರಾಬಲ್ಯದ ಅಧಿಕಾರವನ್ನು ಪಡೆಯಿತು. ಅದರ ಅಧಿಕಾರವು ದೀರ್ಘಮಟ್ಟಿಗೆ ಹೆಚ್ಚಿತು. ಈಗ ಚೀನಾವು ಏರುತ್ತಿರುವ ಶಕ್ತಿಯಾಗಿದ್ದು ಅದು ವಿಶ್ವ ವ್ಯವಹಾರಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.  ನಾವು ಎದುರಿಸುತ್ತಿರುವ ಬಿಕ್ಕಟ್ಟುಗಳು ಎಲ್ಲಾ ಮೂಲಭೂತವಾಗಿ ಅಂತರರಾಷ್ಟ್ರೀಯ ಗುಣಗಳನ್ನು ಹೊ೦ದಿವೆ  - ಸಾಂಕ್ರಾಮಿಕ ರೋಗಗಳು,  ಪರಿಸರದ ವಿನಾಶ, ಪರಮಾಣು ಯುದ್ಧಗಳಿಗೆ ಗಡಿಗಳಿಲ್ಲ. ಅಮೆರಿಕ ಮತ್ತು 

ಮತ್ತು ಚೀನಾ ಒ೦ದೇ ಈ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ

ಸಹಕರಿಸುತ್ತವೆ, ಇಲ್ಲವೆ ನಾವೆಲ್ಲರೂ  ಅವನತಿ ಹೊಂದುತ್ತೇವೆ. ಖಂಡಿತವಾಗಿಯೂ ಪರಿಹಾರವನ್ನು ಸಾಧಿಸಬಹುದು

ನಾವು ಎದುರಿಸಬೇಕಾಗುವ ಇತರ ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಇರುವ೦ತೆ ಇವೂ ಪರಿಹಾರಗಳನ್ನು ಹೊಂದಿವೆ. ನಮ್ಮ ಮು೦ದಿರುವ ಪ್ರಶ್ನೆ ಏನ೦ದರೆ ನಮ್ಮ ತಾ೦ತ್ರಿಕ ಸಾಧನೆಗಳಿ೦ದ ನಮ್ಮ ಮು೦ದೆ ಬ೦ದಿರುವ ಸರ್ವನಾಶದ ಸಾಧ್ಯತೆಯ ಪರಿಸ್ಥಿತಿಯಿ೦ದ ನಮ್ಮನ್ನು ಉಳಿಸಿಕೊಳ್ಳುವ ಇಚ್ಚಾ ಶಕ್ತಿ,  ನೈತಿಕ ಬುಧ್ಧಿ ನಮ್ಮಲ್ಲಿದೆಯೇ,  ಅಥವಾ ನಾವು  ನಮ್ಮ ಅಧಿಕ ಬುಧ್ಧಿಶಕ್ತಿಯ ಮಾರಕ ರೂಪಾ೦ತರವೇ ಎ೦ದು ಪ್ರದರ್ಶಿಸುವ ಹ೦ತದಲ್ಲಿದ್ದೇವೋ,  ಎ೦ಬದರ ಬಗ್ಗೆ  ಉತ್ತರವನ್ನು ಫ಼ೆರ್ಮಿ ಪ್ಯಾರಡೊಕ್ಸ್  ವಿಪರ್ಯಾಸಕ್ಕೆ  ಒದಗಿಸುವ ಹ೦ತದಲ್ಲಿದ್ದೇವೆ. ಈ ಕಠೋರ ಪ್ರಶ್ನೆಗಳ ಉತ್ತರ ನಿಮ್ಮ ಕೈಗಳಲ್ಲಿಇವೆ. ನಿಮಗೆ ಒಳ್ಳೆಯ ಅದೃಷ್ಟ ಬಯಸುತ್ತೇನೆ. ಧನ್ಯವಾದ.”

 


 

ಪ್ರೊ. ನೋಮ್ ಚೊ೦ಸ್ಕಿ ದಿನಾ೦ಕ ೨೦ ಡಿಸೆ೦ಬರ್ ೨೦೨೧ರ೦ದು ‘ಸ್ಟಾರ್ ಗ್ಲೋಬಲ್ ಕಾನ್ಫರನ್ಸ್’ (Star Global Conference) ನಲ್ಲಿ ನೀಡಿದ ಮುಖ್ಯ ಭಾಷಣ. 


ಭಾಷಣದ ನ೦ತರ ಎಲ್ಲರೂ ಪ್ರೊಫ಼ೆಸ್ಸರ್ ಚೊ೦ಸ್ಕಿ ಅವರಿಗೆ ಜನ್ಮದಿನ ಆಶ೦ಸೆಗಳನ್ನು ಕೋರುತ್ತಾರೆ. ಡಿಸೆ೦ಬರ್ ೭ರ೦ದು ಅವರಿಗೆ ೯೩ ವರ್ಷ ವಯಸ್ಸಾಗಿತ್ತು.

 

ಟಿಪ್ಪಣಿಗಳು:

(೧) ಫರ್ಮಿ ಪ್ಯಾರಡೊಕ್ಸ್ : ಫರ್ಮಿ ವಿರೋಧಾಭಾಸವು ಭೂಮ್ಯತೀತ ಜೀವನಕ್ಕೆ ಸ್ಪಷ್ಟವಾದ, ನಿಚ್ಚಳವಾದ ಪುರಾವೆಗಳ ಕೊರತೆ ಮತ್ತು ಅವುಗಳ ಅಸ್ತಿತ್ವದ ವಿವಿಧ ಹೆಚ್ಚಿನ ಅಂದಾಜುಗಳ ನಡುವಿನ ಸಂಘರ್ಷವಾಗಿದೆ.

 

(೨)‘ಪ್ರಳಯ ದಿನ  ಗಡಿಯಾರ’ : Doomsday  Clock ಡೂಮ್ಸ್‌ಡೇ ಗಡಿಯಾರವು ನಮ್ಮದೇ ಆದ ಅಪಾಯಕಾರಿ ತಂತ್ರಜ್ಞಾನಗಳೊಂದಿಗೆ ನಮ್ಮ ಜಗತ್ತನ್ನು ನಾಶಮಾಡಲು ನಾವು ಎಷ್ಟು ಹತ್ತಿರವಾಗಿದ್ದೇವೆ ಎಂಬುದರ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ವಿನ್ಯಾಸವಾಗಿದೆ. ಇದು ಒಂದು ರೂಪಕವಾಗಿದೆ, ನಾವು ಗ್ರಹದಲ್ಲಿ ಬದುಕಬೇಕಾದರೆ ನಾವು ಪರಿಹರಿಸಬೇಕಾದ ಅಪಾಯಗಳ ಜ್ಞಾಪನೆಯಾಗಿದೆ - ಪರಮಾಣು ವಿಜ್ಞಾನಿಗಳ ಬುಲೆಟಿನ್

 

(3) ಆಡಮ್ ಸ್ಮಿಥ್: Adam Smith (೧೭೨೩-೧೭೯೦) ಆಡಮ್ ಸ್ಮಿತ್  ಒಬ್ಬ ಸ್ಕಾಟಲ೦ಡಿನ  ಅರ್ಥಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾಗಿದ್ದು, ಆಧುನಿಕ ಅರ್ಥ ಶಾಸ್ತ್ರದ ಪಿತಾಮಹ ಎ೦ದು ಕರೆಯಲ್ಪಡುತ್ತಾರೆ. 

 

(೪) ಐ ಪಿ ಸಿ ಸಿ  ವರದಿ ( United Nations (UN) Intergovernmental Panel on Climate Change (IPCC)) .ಹವಾಮಾನ ಬದಲಾವಣೆಯ ಕುರಿತಾದ ಯುನೈಟೆಡ್ ನೇಷನ್ಸ್ (UN) ಇಂಟರ್ ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (IPCC) ನ ಆರನೇ ಮೌಲ್ಯಮಾಪನ ವರದಿ (AR6) ಹವಾಮಾನ ಬದಲಾವಣೆಗೆ ಸಂಬಂಧಿಸಿದ ವೈಜ್ಞಾನಿಕ, ತಾಂತ್ರಿಕ ಮತ್ತು ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ನಿರ್ಣಯಿಸುವ ವರದಿಗಳ ಸರಣಿಯಲ್ಲಿ ಆರನೆಯದು.

 

(೫)  COP 26 : The 26th session of the Conference of the Parties (COP 26) to the UNFCCC.  ಗ್ಲ್ಯಾಸ್ಗೋದಲ್ಲಿ ನಡೆದ ಯುಎನ್ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (COP26) 120 ವಿಶ್ವ ನಾಯಕರು ಮತ್ತು 22,274 ಪಕ್ಷದ ಪ್ರತಿನಿಧಿಗಳು, 14.124 ವೀಕ್ಷಕರು ಮತ್ತು 3.886 ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ 40,000 ನೋಂದಾಯಿತ ಭಾಗವಹಿಸುವವರನ್ನು ಒಟ್ಟುಗೂಡಿಸಿದರು. ಎರಡು ವಾರಗಳವರೆಗೆ, ಹವಾಮಾನ ಬದಲಾವಣೆಯ ಎಲ್ಲಾ ಅಂಶಗಳ ಮೇಲೆ - ವಿಜ್ಞಾನ, ಪರಿಹಾರಗಳು, ಕಾರ್ಯನಿರ್ವಹಿಸುವ ರಾಜಕೀಯ ಇಚ್ಛಾಶಕ್ತಿ ಮತ್ತು ಕ್ರಿಯೆಯ ಸ್ಪಷ್ಟ ಸೂಚನೆಗಳು - ಚರ್ಚೆ ನಡೆಯಿತು. 

 

COP26 ಫಲಿತಾಂಶ - ಗ್ಲ್ಯಾಸ್ಗೋ ಹವಾಮಾನ ಒಪ್ಪಂದ 

 

 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು