ಒ೦ದು ಕುತೂಹಲಕರ  ಜಾಮೀನು ಆದೇಶ ಮತ್ತು

ಯುಪಿ ಚುನಾವಣೆ ಮುಂದೂಡಿಕೆಯ ವದಂತಿಗಳು


ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರ ಉಲ್ಲೇಖಿತ  ಜಾಮೀನು ಆದೇಶದ ಬಗ್ಗೆ  ಸಮಾಚಾರಪತ್ರಿಕೆಯಲ್ಲಿ ಓದಿದವರೆಲ್ಲ  ಸ್ವಾಭಾವಿಕವಾಗಿ ಕುತೂಹಲಗೊ೦ಡಿರುತಾರೆ. ಈಗ ಈ ಆದೇಶ, ನ್ಯಾ. ಮೂ. ಯಾದವ್  ಅವರ ಇತರ ಕೆಲವು ಆದೇಶಗಳು,  ಮತ್ತು ಈ ನ್ಯಾಯಾಧೀಶರ ರಾಜನೀತಿಗಳ ಬಗ್ಗೆ ಸ್ವಾರಸ್ಯವಾಗಿ ಅ೦ಕಣವನ್ನು ಬರೆದಿದ್ದಾರೆ ಪತ್ರ ಕರ್ತ ಭರತ್ ಭೂಷಣ್.  ಇ೦ದಿನ (೨೭ ಡಿಸ೦ಬರ್ ೨೦೨೧) ‘ಬಿಸಿನೆಸ್ ಸ್ಟೆ೦ಡರ್ಡ್’  ದೈನಿಕದಲ್ಲಿ ಪ್ರಕಟವಾಗಿರುವ ಈ ಲೇಖನದಲ್ಲಿ  ಈ ಆದೇಶವನ್ನು 'ವಿಚಿತ್ರ' (‘strange’) ಎ೦ದು ವರ್ಣಿಸಿದ್ದಾರೆ.


ಚುನಾವಣೆಗೆ ಎನೂ ಸ೦ಬ೦ಧವಿಲ್ಲದ ಒಬ್ಬ ಆರೋಪಿ ದರೋಡೆಕೋರನ ಜಾಮೀನಿನ  ವಿಷಯಕ್ಕೆ ಸೇರಿದ ಆದೇಶದಲ್ಲಿ, ಮಾನ್ಯ ನ್ಯಾ. ಮೂ. ಅವರು  ಉತ್ತರ ಪ್ರದೇಶ ರಾಜ್ಯದ ಚುನಾವಣೆಯನ್ನು  ಮುಂದೂಡುವದನ್ನು ಪ್ರತಿಪಾದಿಸಿದ್ದಾರೆ. ಈ ಆದೇಶದ ಪ್ರತಿಗಳನ್ನು ಚುನಾವಣಾ ಆಯೋಗ, ಕೇ೦ದ್ರ ಸರ್ಕಾರಗಳಿಗೆ ಕಳುಹಿಸುವುದಲ್ಲದೆ   ಈ ಬಗ್ಗೆ ಪ್ರಧಾನ ಮ೦ತ್ರಿ ನರೇ೦ದ್ರ ಮೋದಿಗೆ ನೇರವಾಗಿ ಮನವಿಯನ್ನೂ ಸಲ್ಲಿಸಿದ್ದಾರೆ. 


ಆದೇಶದ  ಒ೦ದು ದಿನದ ನ೦ತರ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್   ಸ್ವಾಮಿ ಉತ್ತರ ಪ್ರದೇಶ ಚುನಾವಣೆ ಮು೦ದೂಡುವದಲ್ಲದೆ  ೨೦೨೨ ಸೆಪ್ತೆ೦ಬರ್ ವರೆಗೆ    ರಾಜ್ಯದಲ್ಲಿ  ರಾಷ್ಟ್ರಪತಿ ಆಡಳಿತದ  ಸಾಧ್ಯತೆಯನ್ನೂ ಸೂಚಿಸಿದ್ದಾರೆ. ಅದೇ  ದಿವಸ ಚುನಾವಣಾ  ಆಯೋಗವು ರಾಜ್ಯಕ್ಕೆ ಭೇಟಿಕೊಡುವುದನ್ನು ಘೋಷಿಸಿದೆ. ಇವೆಲ್ಲ ಕಾಕತಾಳೀಯವೇ ?


ನ್ಯಾ ಮೂ ಯಾದವರ ಈ  ಆದೇಶ ‘ಒಬಿಟರ್ ಡಿಕ್ಟ’ ರೂಪದ್ದಾಗಿದ್ದು   ಇದು ಯಾರ ಮೇಲೆಯೂ ಬಲವ೦ತಕಾರಕವಲ್ಲ.  ಹಾಗಾದರೆ ಆದೇಶವನ್ನು ಮಾಡಿದ ಉದ್ದೇಶವೇನು ? 


ಈ ನ್ಯಾಯ ಮೂರ್ತಿಯವರು  ಇ೦ತಹ  ಆದೇಶಗಳನ್ನು ಪದೇ ಪದೇ ಮಾಡುವ ರೂಢಿಯಿದೆ.  ಸಪ್ಟೆ೦ಬರಿನಲ್ಲಿ ಇನ್ನೊ೦ದು ಜಾಮೀನು ಆದೇಶದಲ್ಲಿ ಅವರು ಗೋವಿನ ರಕ್ಷಣೆಯನ್ನು ‘ಹಿ೦ದುಗಳ ಮೂಲಭೂತ ಹಕ್ಕು’ ಎ೦ದು ಘೋಷಿಸಬೇಕೆ೦ದು ಹೇಳಿದರು.   ‘ಶಾಸ್ತ್ರಜ್ಞರು ಆಮ್ಲಜನಕವನ್ನು ಒಳಕ್ಕೆಳೆದುಕೊ೦ಡು ಆಮ್ಲಜನಕವನ್ನು ಹೊರಬಿಡುವ ಏಕಮೇವ ಪ್ರಾಣಿ ಹಸುವು, ಎ೦ದಿದ್ದಾರೆ’ ಎ೦ದೂ ಅವರು (ತಪ್ಪಾಗಿ) ಹೇಳಿದರು.  ‘ಸ೦ಸತ್ತು ಹಸುವನ್ನು ರಾಷ್ಟ್ರಿಯ ಪ್ರಾಣಿಯಾಗಿ ಮಾಡುವ ಕಾನೂನನ್ನು ಹೊರಡಿಸಬೇಕು’, ಎ೦ದು ಆದೇಶಿಸುವುದಲ್ಲದೆ,   ‘ ಯಜ್ಞದಲ್ಲಿ ಗೋವಿನ ಹಾಲಿನಿ೦ದ ತಯಾರಿಸಿದ ತುಪ್ಪವನ್ನು  ಸಾ೦ಪ್ರದಾಯಿಕವಾಗಿ ಉಪಯೋಗಿಸುವ  ಕಾರಣ ಏನೆ೦ದರೆ ಇದು ಸೂರ್ಯನ ಕಿರಣಗಳಿಗೆ ವಿಶೇಷ ಶಕ್ತಿಯನ್ನು ಕೊಡುವುದು, ಅದರಿ೦ದ ಫಲವಾಗಿ ಕೊನೆಗೆ ಮಳೆ ಆಗುವದು’, ಎ೦ದೂ ಹೇಳಿದ್ದಾರೆ, ಎನ್ನುತ್ತಾರೆ ಭರತ್ ಭೂಷಣ್.


ಅಲಹಾಬಾದ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಾಧೀಶರು ನ್ಯಾಯಮೂರ್ತಿ ಯಾದವ್ ಅವರಿಗೆ 'ನ್ಯಾಯಾಲಯವು ನಿಮ್ಮ ಆಲೋಚನೆಗಳು/ತತ್ವಗಳನ್ನು ಹೇರುವ ವೇದಿಕೆಯಲ್ಲ ಮತ್ತು ಜಾಮೀನು ನಿಯಮಗಳಲ್ಲಿ ಪ್ರಕರಣದ ಅರ್ಹತೆಯನ್ನು ಮುಟ್ಟಬಾರದು’ ಎ೦ದು ಉಪದೇಶಿಸಿದ್ದರೂ, ಅದರಿ೦ದ  ಯಾವುದೇ ಪರಿಣಾಮವಾಗಲಿಲ್ಲ.


ಉಚ್ಛ ನ್ಯಾಯಾಧೀಶರು ಹಲವರೂ ಅಸ೦ಬಧ್ಢ ಆದೇಶಗಳನ್ನು ಹೊರಡಿಸಿದ್ದು  ಅನೇಕವಿವೆ. ಉದಾಹರಣೆಗೆ ಫಲವತ್ತತೆಯನ್ನು ಪ್ರಚೋದಿಸುವ ನವಿಲಿನ ಕಣ್ಣೀರಿನ ಗುಣಲಕ್ಷಣಗಳ ಬಗ್ಗೆ ವರ್ಣಿಸಿದರು ಓರ್ವರು (ನ್ಯಾ. ಮೂ. ಮಹೇಶ್ ಚ೦ದ್ರ ಶರ್ಮ, ರಾಜಸ್ಥಾನ್ ಉಚ್ಛ ನ್ಯಾಯಾಲಯ). ಇನ್ನೊಬ್ಬರು’ ೧೯೪೭ರಲ್ಲಿಯೇ ಭಾರತವನ್ನು ಹಿ೦ದು ರಾಷ್ಟ್ರವಾಗಿ ಘೋಷಿಸಬೇಕಾಗಿತ್ತು’ ಎ೦ದರು. (ನ್ಯಾ. ಮೂ. ಸುದೀಪ್ ರ೦ಜನ್ ಸೆನ್, ಮೇಘಾಲಯ ಉಚ್ಛ ನ್ಯಾಯಾಲಯ).


ನ್ಯಾ. ಮೂ. ಯಾದವ್ ಅವರು ತಮ್ಮ  ಹಿ೦ದುತ್ವದ ರಾಜಕೀಯವನ್ನು ಎ೦ದೂ  ಮರೆ ಮಾಚಿಲ್ಲ. ವಿವಿಧ ಕಾರ್ಯಕ್ರಮಗಳಲ್ಲಿ ಅವರು ಆರ್ ಎಸ್ ಎಸ್ ಮತ್ತು ವಿಶ್ವ ಹಿ೦ದು ಪರಿಷತ್ತಿನ ಭಾರವಾಹಿಗಳೂ ಹಾಗೂ ಬಿ ಜೆ ಪಿಯ ರಾಜಕಾರಣಿಗಳೊಟ್ಟಿಗೆ ಭಾಗವಹಿಸಿದ್ದಾರೆ.  ಈ ವಿಶಿಷ್ಟ  ಆದೇಶದ  ಹಿನ್ನೆಲೆ ತಮ್ಮ ಉಚ್ಛ ಸ್ಠಾನದ ಗರ್ವ ಮಾತ್ರವಲ್ಲ. ತಮ್ಮ  ರಾಜಕೀಯ ಅಭಿಪ್ರಾಯಗಳನ್ನು ಪ್ರಚಾರಮಾಡುವುದೇ ನ್ಯಾಯ ಮೂರ್ತಿಯವರ ಉದ್ದೇಶವಾಗಿದೆ ಎ೦ದು ಅಭಿಪ್ರಾಯ ಪಡುತ್ತಾರೆ ಶ್ರೀ ಭರತ್ ಭೂಷಣ್. . 


ಈ ಚುನಾವಣೆಯನ್ನು ಮು೦ದೂಡುವದರ ವಿವಿಧ ಆಯಾಮಗಳನ್ನೂ ಅ೦ಕಣದಲ್ಲಿ ಚರ್ಚಿಸಲಾಗಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು