ಸಾವಿರಾರು ಭಾರತೀಯ ಗೃಹಿಣಿಯರ ಆತ್ಮಹತ್ಯೆಯ ಹಿಂದೆ ಏನಿದೆ?
ಗೀತಾ ಪಾಂಡೆ
ಬಿಬಿಸಿ ನ್ಯೂಸ್, ದೆಹಲಿ ೧೬ ಡಿಸೆಂಬರ್ ೨೦೨೧
ಪ್ರತಿ ವರ್ಷ ಸಾವಿರಾರು ಭಾರತೀಯ ಗೃಹಿಣಿಯರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?
ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ೨೨,೩೭೨ ಗೃಹಿಣಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ - ಅಂದರೆ ಪ್ರತಿ ದಿನ ಸರಾಸರಿ ೬೧ ಆತ್ಮಹತ್ಯೆಗಳು ಅಥವಾ ಪ್ರತಿ ೨೫ ನಿಮಿಷಕ್ಕೆ ಒಬ್ಬರು.
ಸನ್ ೨೦೨೦ರಲ್ಲಿ ಭಾರತದಲ್ಲಿ ಒಟ್ಟು ೧೫೩, ೦೫೨ ದಾಖಲಿತ ಆತ್ಮಹತ್ಯೆಗಳಲ್ಲಿ ೧೪.೬% ಗೃಹಿಣಿಯರಿದ್ದರು. ಇವರು ಮಹಿಳೆಯರಲ್ಲಿ ಅರ್ಧಕ್ಕಿ೦ತ ಹೆಚ್ಚು. ಕಳೆದ ವರ್ಷ ಈ ವಿಷಯದಲ್ಲಿ ವಿಶೇಷವಾಗಿದ್ದಿಲ್ಲ. ೧೯೯೭ರಿಂದ ಉದ್ಯೋಗ ಅಥವಾ ಉಪಜೀವಿಕೆಯ ಆಧಾರದ ಮೇಲೆ ಆತ್ಮಹತ್ಯೆ ವಿವರಗಳನ್ನು ಸಂಗ್ರಹಿಸಲು ಪ್ರಾರಂಭಿಸಿದಾಗ, ಪ್ರತಿ ವರ್ಷ ೨೦,೦೦೦ಕ್ಕೂ ಹೆಚ್ಚು ಗೃಹಿಣಿಯರು ತಮ್ಮನ್ನು ತಾವೇ ಕೊಲ್ಲುತ್ತಿದ್ದಾರೆ ಎ೦ದು ಕ೦ಡುಬ೦ದಿತು. ೨೦೦೯ರಲ್ಲಿ, ಅವರ ಸಂಖ್ಯೆ ೨೫,೦೯೨ಕ್ಕೆ ಏರಿತು.
ವರದಿಗಳು ಯಾವಾಗಲೂ ಅಂತಹ ಆತ್ಮಹತ್ಯೆಗಳನ್ನು "ಕುಟುಂಬದ ಸಮಸ್ಯೆಗಳು" ಅಥವಾ "ಮದುವೆ ಸಂಬಂಧಿತ ಸಮಸ್ಯೆಗಳು" ಎಂದು ದೂಷಿಸುತ್ತವೆ. ಆದರೆ ನಿಜವಾಗಿಯೂ ಸಾವಿರಾರು ಮಹಿಳೆಯರನ್ನು ತಮ್ಮ ಪ್ರಾಣ ತೆಗೆಯಲು ಪ್ರೇರೇಪಿಸುವುದು ಯಾವುದು?
ಮಾನಸಿಕ ಆರೋಗ್ಯ ತಜ್ಞರು ಹೇಳುವ ಪ್ರಕಾರ ಅತಿರೇಕದ ಕೌಟುಂಬಿಕ ಹಿಂಸಾಚಾರ - ಇತ್ತೀಚಿನ ಸರ್ಕಾರಿ ಸಮೀಕ್ಷೆಯೊಂದರಲ್ಲಿ ಎಲ್ಲಾ ಮಹಿಳೆಯರಲ್ಲಿ ೩೦% ತಾವು ಸಂಗಾತಿಯ ಹಿಂಸೆಯನ್ನು ಎದುರಿಸಿದ್ದೇವೆ ಎಂದು ಹೇಳಿದ್ದಾರೆ - ಮತ್ತು ಮದುವೆಗಳನ್ನು ಗೋಳುಗುಟ್ಟಿಸುವ ದೈನಿಕ ಹೊಲೆಪಾಡು ಮತ್ತು ವೈವಾಹಿಕ ಮನೆಗಳನ್ನು ಉಸಿರುಗಟ್ಟಿಸುವ ದೈನಂದಿನ ದಬ್ಬಾಳಿಕೆ ಇವು ಪ್ರಮುಖ ಕಾರಣಗಳು.
"ಮಹಿಳೆಯರು ನಿಜವಾಗಿಯೂ ತಾವೇ ಚೇತರಿಸಿಕೊಳ್ಳುತ್ತಾರೆ, ಆದರೆ ಸಹನೆಗೆ ಮಿತಿಯಿದೆ" ಎಂದು ವಾರಣಾಸಿಯ ವೈದ್ಯಕೀಯ ಮನಶಾಸ್ತ್ರಜ್ಞೆ ಡಾ ಉಷಾ ವರ್ಮಾ ಶ್ರೀವಾಸ್ತವ ಹೇಳುತ್ತಾರೆ.
"ಹೆಚ್ಚಿನ ಹೆಣ್ಣುಮಕ್ಕಳಿಗೆ ಮದುವೆಗೆ ಕಾನೂನುಬದ್ಧ ವಯಸ್ಸು ಆದ ೧೮ ವರ್ಷ ತುಂಬಿದ ತಕ್ಷಣ ಮದುವೆ ಮಾಡಲಾಗುತ್ತದೆ . ಅವಳು ಹೆಂಡತಿ ಮತ್ತು ಸೊಸೆಯಾಗುತ್ತಾಳೆ ಮತ್ತು ಇಡೀ ದಿನ ಮನೆಯಲ್ಲಿಯೇ ಕಳೆಯುತ್ತಾಳೆ, ಅಡುಗೆ ಮತ್ತು ಸ್ವಚ್ಛಗೊಳಿಸುವ ಮತ್ತು ಮನೆಕೆಲಸಗಳನ್ನು ಮಾಡುತ್ತಾಳೆ. ಎಲ್ಲಾ ರೀತಿಯ ನಿರ್ಬಂಧಗಳು ಅವಳ ಮೇಲೆ ಇರಿಸಲಾಗುತ್ತದೆ, ಅವಳು ಅತ್ಯಲ್ಪ ವೈಯಕ್ತಿಕ ಸ್ವಾತಂತ್ರ್ಯವನ್ನು ಹೊಂದಿದ್ದು ತನ್ನದೇ ಆದ ಹಣವನ್ನು ವಿರಳವಾಗಿ ಪಡೆಯುತ್ತಾಳೆ.
"ಅವಳ ಶಿಕ್ಷಣ ಮತ್ತು ಕನಸುಗಳು ಇನ್ನು ಮುಂದೆ ಮುಖ್ಯವಲ್ಲ ಮತ್ತು ಅವಳ ಮಹತ್ವಾಕಾಂಕ್ಷೆಯು ನಿಧಾನವಾಗಿ ನಂದಿಸಲು ಪ್ರಾರಂಭಿಸುತ್ತದೆ, ಹತಾಶೆ ಮತ್ತು ನಿರಾಶೆಯು ಪ್ರಾರಂಭವಾಗುತ್ತದೆ, ಮತ್ತು ಕೇವಲ ಅಸ್ತಿತ್ವವು ಹಿಂಸೆಯಾಗುತ್ತದೆ. "
ಭಾರತದಲ್ಲಿ ಮನೆಗೆಲಸವು ಯಾವಾಗಲೂ ಮಹಿಳೆಯ ಜವಾಬ್ದಾರಿಯಾಗಿದೆ
ವಯಸ್ಸಾದ ಮಹಿಳೆಯರಲ್ಲಿ, ಡಾ ವರ್ಮಾ ಶ್ರೀವಾಸ್ತವ ಹೇಳುತ್ತಾರೆ, ಆತ್ಮಹತ್ಯೆಗೆ ಕಾರಣಗಳು ವಿಭಿನ್ನವಾಗಿವೆ.
"ಮಕ್ಕಳು ಬೆಳೆದು ಮನೆಯಿಂದ ಹೊರಬಂದ ನಂತರ ಅನೇಕರು ‘ಖಾಲಿ ಗೂಡಿ’ನ ಲಕ್ಷಣಗಳನ್ನು ಎದುರಿಸುತ್ತಾರೆ ಮತ್ತು ಅನೇಕರು ಮುಟ್ಚು ನಿಲ್ಲುವ ಕಾಲದ ಮಾನಸಿಕ ಲಕ್ಷಣಗಳಿಂದ ಬಳಲುತ್ತಾರೆ. ಇದು ಖಿನ್ನತೆ ಮತ್ತು ಅಳುವ ಸ೦ಭವಗಳನ್ನು ಉಂಟುಮಾಡಬಹುದು."(ಟಿಪ್ಪಣಿ: ‘ಖಾಲಿ ಗೂಡಿನ ಮಾನಸಿಕ ಲಕ್ಷಣ’ ಎ೦ದರೆ ತಮ್ಮ ಮಕ್ಕಳು ಮನೆಯಿಂದ ಹೊರಗೆ ಹೋದಾಗ ಅನೇಕ ಪೋಷಕರು ಅನುಭವಿಸುವ ದುಃಖವನ್ನು ಸೂಚಿಸುತ್ತದೆ. ಪ್ರಾಥಮಿಕ ಆರೈಕೆದಾರನ ಪಾತ್ರವನ್ನು ಹೊಂದಿರುವ ಮಹಿಳೆಯರಲ್ಲಿ ಈ ಸ್ಥಿತಿಯು ಹೆಚ್ಚು ಸಾಮಾನ್ಯವಾಗಿದೆ.)
ಆದರೆ ಆತ್ಮಹತ್ಯೆಗಳನ್ನು ಸುಲಭವಾಗಿ ತಡೆಗಟ್ಟಬಹುದು ಮತ್ತು "ನೀವು ಯಾರನ್ನಾದರೂ ಒಂದೇ ಕ್ಷಣ ತಡೆದರೆ, ಅವರು ಆತ್ಮಹತ್ಯೆಯ ಕ್ರಿಯೆಯನ್ನೇ ನಿಲ್ಲಿಸುವ ಸಾಧ್ಯತೆಗಳಿವೆ" ಎಂದು ಅವರು ಹೇಳುತ್ತಾರೆ.
ಏಕೆಂದರೆ, ಮನೋವೈದ್ಯ ಸೌಮಿತ್ರ ಪಠಾರೆ ವಿವರಿಸಿದಂತೆ, ಅನೇಕರು ಭಾರತೀಯ ಆತ್ಮಹತ್ಯೆಗಳು ಮನಸ್ಸಿನ ಆವೇಗದ ಹಠಾತ್ ಪ್ರತಿಕ್ರಿಯೆ. "ಗ೦ಡಸು ಮನೆಗೆ ಬರುತ್ತಾನೆ, ಹೆಂಡತಿಯನ್ನು ಹೊಡೆಯುತ್ತಾನೆ, ಮತ್ತು ಅವಳು ತನ್ನನ್ನೇ ಕೊ೦ದುಕೊಳ್ಳುತ್ತಾಳೆ."
ತಮ್ಮ ಜೀವವನ್ನು ತೆಗೆದುಕೊಳ್ಳುವ ಭಾರತೀಯ ಮಹಿಳೆಯರಲ್ಲಿ ಮೂರನೇ ಒಂದು ಭಾಗದಷ್ಟು ಕೌಟುಂಬಿಕ ಹಿಂಸಾಚಾರದ ಇತಿಹಾಸವನ್ನು ಹೊಂದಿರುತ್ತಾರೆ ಎಂದು ಸ್ವತಂತ್ರ ಸಂಶೋಧನೆಯು ತೋರಿಸುತ್ತದೆ.
ಆದರೆ ಕೌಟುಂಬಿಕ ಹಿಂಸಾಚಾರವನ್ನು ಎನ್‌ಸಿಆರ್‌ಬಿ ದತ್ತಾಂಶದಲ್ಲಿ ಒಂದು ಕಾರಣವೆಂದು ಉಲ್ಲೇಖಿಸಲಾಗಿಲ್ಲ.
ಬೆಂಗಳೂರು ಮೂಲದ ಮಾನಸಿಕ ಆರೋಗ್ಯ ಸಹಾಯಕ ಕಾರ್ಯಕ್ರಮ ವೈಸಾ (Wysa)ದ ಮನಶ್ಶಾಸ್ತ್ರಜ್ಞೆ ಚೈತಾಲಿ ಸಿನ್ಹಾ ಹೇಳುತ್ತಾರೆ: "ನಡೆಯುತ್ತಿರುವ ಕೌಟುಂಬಿಕ ಹಿಂಸಾಚಾರದ ಸಂದರ್ಭಗಳಲ್ಲಿ ಬಳಲುತ್ತಿರುವ ಬಹಳಷ್ಟು ಮಹಿಳೆಯರು ತಮಗೆ ದೊರಕುವ ಅನೌಪಚಾರಿಕ ಬೆಂಬಲದಿಂದ ಮಾತ್ರ ತಮ್ಮ ಚಿತ್ತ ಸ್ವಾಸ್ಥ್ಯವನ್ನು ಉಳಿಸಿಕೊಳ್ಳುತ್ತಾರೆ".
ಈ ಹಿಂದೆ ಮುಂಬೈನ ಸರ್ಕಾರಿ ಮನೋವೈದ್ಯಕೀಯ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ ಶ್ರೀಮತಿ ಸಿನ್ಹಾ, ಆತ್ಮಹತ್ಯೆಗೆ ಯತ್ನಿಸಿದ ಬದುಕುಳಿದವರಿಗೆ ಉಪದೇಶ ನೀಡುತ್ತಿದ್ದವರು. ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಅಥವಾ ತರಕಾರಿಗಳನ್ನು ಖರೀದಿಸುವಾಗ ನೆರೆಹೊರೆಯವರೊಂದಿಗೆ ಮಹಿಳೆಯರು ಚಿಕ್ಕ ಬೆಂಬಲ ಗುಂಪುಗಳನ್ನು ರಚಿಸುವುದನ್ನು ಕಾಣುತ್ತೇವೆ, ಎಂದು ಹೇಳಿದರು.
"ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬೇರೆ ಮಾರ್ಗವನ್ನು ಹೊಂದಿಲ್ಲ ಮತ್ತು ಕೆಲವೊಮ್ಮೆ ಅವರ ಚಿತ್ತ ಸ್ವಾಸ್ಥ್ಯವು ಅವರು ಕೇವಲ ಒಬ್ಬ ವ್ಯಕ್ತಿಯೊಂದಿಗೆ ನಡೆಸಬಹುದಾದ ಈ ಸಂಭಾಷಣೆಯ ಮೇಲೆ ಅವಲಂಬಿತವಾಗಿದೆ" ಎಂದು ಅವರು ಹೇಳುತ್ತಾರೆ. ಸಾಂಕ್ರಾಮಿಕ ಮತ್ತು ಲಾಕ್‌ಡೌನ್ ಅವರ ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.
"ಪುರುಷರು ಕೆಲಸಕ್ಕೆ ಹೋದ ನಂತರ ಗೃಹಿಣಿಯರಿಗೆ ಮನೆಯು ಸುರಕ್ಷಿತ ಸ್ಥಳವಿತ್ತು, ಆದರೆ ಸಾಂಕ್ರಾಮಿಕ ಸಮಯದಲ್ಲಿ ಅದು ಕಣ್ಮರೆಯಾಯಿತು. ಕೌಟುಂಬಿಕ ಹಿಂಸಾಚಾರದ ಸಂದರ್ಭಗಳಲ್ಲಿ, ಅವರು ಆಗಾಗ್ಗೆ ತಮ್ಮ ಮೇಲೆ ದೌರ್ಜನ್ಯ ಮಾಡುವವರೊಂದಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದರ್ಥ. ಇದು ಅವರಿಗೆ ಸಂತೋಷ ಅಥವಾ ಸಾಂತ್ವನವನ್ನು ತರುವ೦ತಹ ಅವರ ಚಲನೆ ಮತ್ತು ಕೆಲಸಗಳನ್ನು ಮಾಡುವ ಸಾಮರ್ಥ್ಯವನ್ನು ಮತ್ತಷ್ಟು ನಿರ್ಬಂಧಿಸಿತು. ಆದ್ದರಿಂದ ಕೋಪ, ನೋವು ಮತ್ತು ದುಃಖವು ಕಾಲಾನಂತರದಲ್ಲಿ ಬೆಳೆಯುತ್ತದೆ ಮತ್ತು ಆತ್ಮಹತ್ಯೆ ಅವರ ಕೊನೆಯ ಉಪಾಯವಾಗುತ್ತದೆ."
ಜಾಗತಿಕವಾಗಿ ಅತಿ ಹೆಚ್ಚು ಆತ್ಮಹತ್ಯೆಗಳನ್ನು ಭಾರತವು ವರದಿ ಮಾಡಿದೆ: ಜಾಗತಿಕ ಆತ್ಮಹತ್ಯೆಗಳಲ್ಲಿ ಭಾರತೀಯ ಪುರುಷರು ಕಾಲು ಭಾಗದಷ್ಟು ಇದ್ದಾರೆ, ಆದರೆ ೧೫ರಿಂದ ೩೯ ವರ್ಷ ವಯಸ್ಸಿನ ಎಲ್ಲಾ ಜಾಗತಿಕ ಆತ್ಮಹತ್ಯೆಗಳಲ್ಲಿ ಭಾರತೀಯ ಮಹಿಳೆಯರು ೩೬% ರಷ್ಟಿದ್ದಾರೆ.
ಆದರೆ ಮಾನಸಿಕ ಅಸ್ವಸ್ಥತೆಗಳು ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆಯ ಬಗ್ಗೆ ಸಂಶೋಧನೆ ನಡೆಸಿದ ಡಾ ಪಠಾರೆ, ಭಾರತದ ಅಧಿಕೃತ ಸಂಖ್ಯೆಗಳು ಅತಿ ಕಡಿಮೆ ಅಂದಾಜು ಆಗಿದ್ದು ಸಮಸ್ಯೆಯ ನಿಜವಾದ ಪ್ರಮಾಣವನ್ನು ತಿಳಿಸುವುದಿಲ್ಲ ಎಂದು ಹೇಳುತ್ತಾರೆ.
ಮಹಿಳೆಯರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕನಿಷ್ಠ ಮಾರ್ಗಗಳನ್ನು ಮಾತ್ರ ಹೊಂದಿರುತ್ತಾರೆ
೧೯೯೮-೨೦೧೪ ರ ನಡುವೆ ೨೪ ಲಕ್ಷ ಕುಟುಂಬಗಳಲ್ಲಿ ಸುಮಾರು ೧.೪ ಕೋಟಿ ಜನರನ್ನು ಅಭ್ಯಸಿಸಿದ ‘ಮಿಲ್ಲಿಯನ್ ದೆಥ್’ ಅಥವಾ ಲ್ಯಾನ್ಸೆಟ್ ಪ್ರಕಟನೆಯ ಅಧ್ಯಯನವನ್ನುನೋಡಿದಲ್ಲಿ ಭಾರತದಲ್ಲಿ ಆತ್ಮಹತ್ಯೆಗಳು ೩೦% ರಿ೦ದ ೧೦೦% ರ ನಡುವೆ ಕಡಿಮೆ ವರದಿಯಾಗಿದೆ ."
ಅವರು ಹೇಳುತ್ತಾರೆ: "ಆತ್ಮಹತ್ಯೆಯ ಬಗ್ಗೆ ಇನ್ನೂ ಸಭ್ಯರೆಡೆಯಲ್ಲಿ ಬಹಿರಂಗವಾಗಿ ಮಾತನಾಡುವುದಿಲ್ಲ - ಅದರಲ್ಲಿ ಅವಮಾನ ಮತ್ತು ಕಳಂಕವಿದೆ ಮತ್ತು ಅನೇಕ ಕುಟುಂಬಗಳು ಅದನ್ನು ಮರೆಮಾಡಲು ಪ್ರಯತ್ನಿಸುತ್ತವೆ. ಗ್ರಾಮೀಣ ಭಾರತದಲ್ಲಿ, ಶವಪರೀಕ್ಷೆಗಳ ಅಗತ್ಯವಿಲ್ಲ ಮತ್ತು ಶ್ರೀಮಂತರು ಸ್ಥಳೀಯರ ಮೇಲೆ ಒತ್ತಡ ಹಾಕಿ, ಪೊಲೀಸರು ಆತ್ಮಹತ್ಯೆಯನ್ನು ಆಕಸ್ಮಿಕ ಸಾವು ಎಂದು ತೋರಿಸುತ್ತಾರೆ. ಮತ್ತು ಪೊಲೀಸ್ ನಮೂದುಗಳನ್ನು ಪರಿಶೀಲಿಸಲಾಗುತ್ತಿಲ್ಲ."
ಭಾರತವು ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸುತ್ತಿರುವ ಈ ಸಮಯದಲ್ಲಿ, ದತ್ತಾ೦ಶ ಗುಣಮಟ್ಟವನ್ನು ಸರಿಪಡಿಸುವುದು ಆದ್ಯತೆಯಾಗಿರಬೇಕು ಎಂದು ಡಾ ಪಠಾರೆ ಹೇಳುತ್ತಾರೆ.
" ಭಾರತದಲ್ಲಿ ಆತ್ಮಹತ್ಯೆಗೆ ಯತ್ನಿಸಿದವರ ಸಂಖ್ಯೆಗಳನ್ನು ನೋಡಿದರೆ, ಅವು ಹಾಸ್ಯಾಸ್ಪದವಾಗುವಷ್ಟು ಕಡಿಮೆಯಾಗಿದೆ. ಪ್ರಪಂಚದಲ್ಲಿ ಎಲ್ಲಿಯಾದರೂ, ಅವು ಸಾಮಾನ್ಯವಾಗಿ ನೈಜ ಆತ್ಮಹತ್ಯೆಗಳ ನಾಲ್ಕರಿಂದ ೨೦ ಪಟ್ಟು ಹೆಚ್ಚು. ಹಾಗಾಗಿ, ಕಳೆದ ವರ್ಷ ಭಾರತವು ೧೫೦,೦೦೦ ಆತ್ಮಹತ್ಯೆಗಳನ್ನು ದಾಖಲಿಸಿದ್ದರೆ, ಆತ್ಮಹತ್ಯೆ ಪ್ರಯತ್ನಿಸಿದ ಪ್ರಕರಣಗಳು ೬೦೦,೦೦೦ ಮತ್ತು ಅರುವತ್ತು ಲಕ್ಷಗಳ ನಡುವೆ ಇರುತ್ತವೆ."
ಯಾವುದೇ ಆತ್ಮಹತ್ಯೆ ತಡೆಗಟ್ಟುವಿಕೆ ಕಾರ್ಯಕ್ರಮದಲ್ಲಿ ಮಧ್ಯಸ್ಥಿಕೆಗೆ ಗುರಿಯಾಗಬೇಕಾದವರು ಅತಿ ಅಪಾಯದಲ್ಲಿರುವ ಜನಸಂಖ್ಯೆ ಎಂದು ಡಾ ಪಥಾರೆ ಹೇಳುತ್ತಾರೆ, ಆದರೆ ವಿಶ್ವಾದ್ಯಂತ ಪರಿಣಾಮಗಳೊಂದಿಗೆ ಕಳಪೆ ದತ್ತಾಂಶದಿಂದ ನಾವು ತತ್ತರಿಸಿದ್ದೇವೆ ಎಂದು ಅವರು ಹೇಳುತ್ತಾರೆ.
"೨೦೩೦ ರ ವೇಳೆಗೆ ಜಾಗತಿಕವಾಗಿ ಮೂರನೇ ಒಂದು ಭಾಗದಷ್ಟು ಆತ್ಮಹತ್ಯೆಗಳನ್ನು ಕಡಿತಗೊಳಿಸುವುದು ವಿಶ್ವಸಂಸ್ಥೆಯ ಗುರಿಯಾಗಿದೆ, ಆದರೆ ಕಳೆದ ವರ್ಷದಲ್ಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ನಮ್ಮದು ೧೦%ರಷ್ಟು ಹೆಚ್ಚಾಗಿದೆ. ಅದನ್ನು ಕಡಿಮೆ ಮಾಡುವುದು ಅಸಾಧ್ಯ ಕನಸಾಗಿಯೇ ಉಳಿದಿದೆ."
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ