ಭಾರತದ ಪ್ರಜಾಪ್ರಭುತ್ವ - ಗಂಡಾಂತರದಡಿಯಲ್ಲಿ ಒ೦ದು  ಕನಸು


ನಮ್ಮ ಪ್ರಜಾಪ್ರಭುತ್ವದ ಅವಸ್ಥೆಯ ಬಗ್ಗೆ ಎರಡು ಮಹತ್ವದ  ಪುಸ್ತಕಗಳು ದೇಶದಲ್ಲಿ ನಿರಂಕುಶ ಪ್ರಭುತ್ವ ಮತ್ತು ಅಸಮಾನತೆಯ ಏರಿಕೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತವೆ. ವಿಮರ್ಶಕರು ತಮ್ಮದೇ ಆಯಾಮಗಳನ್ನು ಕೊಡುತ್ತಾರೆ. 



To Kill a Democracy: India’s Passage to Despotism by Debasish Roy Chowdhury and John Keane OUP, 336 pages.


Modi’s India: Hindu Nationalism and the Rise of Ethnic Democracy by Christophe Jaffrelot Princeton,  656 pages



ಈ ವರ್ಷದ ಆರಂಭದಲ್ಲಿ, ಬೋರಿಸ್ ಜಾನ್ಸನ್ ಮತ್ತು ಅವರ ಭಾರತದ ಸಹವರ್ತಿ ನರೇಂದ್ರ ಮೋದಿ ಅವರು ವಸ್ತುತಃ (‘ವರ್ಚುವಲ್’)  ಶೃಂಗಸಭೆಯನ್ನು ನಡೆಸಿದ್ದರು. ಇದರಲ್ಲಿ ಬ್ರಿಟನ್  ಪ್ರಧಾನಿ ಪರಸ್ಪರ ಸ್ನೇಹದ ಹೊಸ ಯುಗವನ್ನು ಶ್ಲಾಘಿಸಿದರು. "ಬ್ರಿಟನ್  ಮತ್ತು ಭಾರತ ಅನೇಕ ಮೂಲಭೂತ ಮೌಲ್ಯಗಳನ್ನು ಹಂಚಿಕೊಂಡಿವೆ" ಎಂದರು ಜಾನ್ಸನ್. "ಬ್ರಿಟನ್ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಿದೆ. ಮತ್ತು ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ”.


ಇ೦ತಹ ಭಾರತೀಯ ಪ್ರಣಯವು ಅನನ್ಯವಲ್ಲ.  ಇತರ ಪಾಶ್ಚಿಮಾತ್ಯ ರಾಷ್ಟ್ರಗಳು, ಅಮೆರಿಕವೂ ಸೇರಿದ೦ತೆ , ಭಾರತದ ಸಂಭಾವ್ಯ ಬೃಹತ್ ಆರ್ಥಿಕತೆಯ ಲಾಭ ಪಡೆಯುವ  ಗುರಿಯನ್ನು ಹೊಂದಿದ್ದು, ಚೀನಾದ ವಿರುದ್ಧ ನೈಸರ್ಗಿಕ ಭೌಗೋಳಿಕ ರಾಜಕೀಯ ಬೇಲಿಯನ್ನೂ ಬಯಸುತ್ತಿವೆ.


ಆದರೆ  ಇದೇ ಸ೦ದರ್ಭದಲ್ಲಿ  ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ’ವು ಮೂಲಭೂತ ರೀತಿಯಲ್ಲಿ ಬದಲಾಗುತ್ತಿದೆ;  ಇದನ್ನು ಪ್ರಜಾಪ್ರಭುತ್ವ ಎಂದು ಕರೆಯಬಹುದೇ ಎಂಬ ಪ್ರಶ್ನೆಗಳನ್ನು ಕೂಡ ಹುಟ್ಟುಹಾಕಿದೆ.


ಮೋದಿ ಕಳೆದ ತಿ೦ಗಳು ಅಮೆರಿಕ ದೇಶಕ್ಕೆ ಭೇಟಿ ಕೊಟ್ಟಾಗ, ಅಲ್ಲಿನ ಉಪ ರಾಷ್ಟ್ರಪತಿ ಕಮಲಾ ಹೆರಿಸ್ ಮೋದಿಯನ್ನು ಉದ್ದೇಶಿಸಿ ಹೇಳಿದ್ದು ಕೆಲವು ಹುಬ್ಬುಗಳನ್ನು ಮೇಲಕ್ಕೆತ್ತಲು ಕಾರಣವಾಯಿತು. ಅವರು ನರೇಂದ್ರ ಮೋದಿಗೆ ಹೊಸದಿಲ್ಲಿ ಮತ್ತು ವಾಷಿಂಗ್ಟನ್ ಡಿಸಿ (ಅಮೆರಿಕ ದೇಶದ ರಾಜಧಾನಿ)  "ಪ್ರಜಾಪ್ರಭುತ್ವಗಳನ್ನು ರಕ್ಷಿಸಬೇಕಾಗಿದೆ" ಎಂದು ಹೇಳಿದರು ."ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವಗಳು ಅಪಾಯದಲ್ಲಿರುವುದರಿಂದ, ನಾವು ನಮ್ಮ ದೇಶಗಳಲ್ಲಿ ಮತ್ತು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ತತ್ವಗಳನ್ನು ಮತ್ತು ಸಂಸ್ಥೆಗಳನ್ನು ರಕ್ಷಿಸುವುದು ಅತ್ಯಗತ್ಯವಾಗಿದೆ.”


ಈ ಪ್ರಸ೦ಗದ ಬಗ್ಗೆ ಮೂಲಭೂತವಾಗಿ ಬಲಪ೦ಥೀಯ ಪತ್ರಕರ್ತ ಶೇಖರ್ ಗುಪ್ತ ಮೋದಿಗೆ  ಶಿಷ್ಟಾಚಾರದಲ್ಲಿ ಕಡಿಮೆ ಸ್ಥಾನದ ಕಮಲಾ ಅವರಿ೦ದ ಇದೊ೦ದು 'ಪ್ರವಚನ’ ‘ಎಚ್ಚರಿಕೆ’, ಮೋದಿ ಸಾರ್ವಜನಿಕವಾಗಿ ವಿದೇಶಿ ಸಂವಾದಕರಿಂದ ಕೇಳುವುದು ಇದೇ ಮೊದಲು,  ಎ೦ದು ಹೇಳಿದರು.

  

ಕಮಲಾ ಹೆರಿಸ್ ಭಾಷಣವನ್ನು ಸದ್ದಿಲ್ಲದೆ ಪ್ರತಿಕ್ರಿಯೆ ತೋರಿಸದೆ ಕೇಳಿದ ಮೋದಿ, ಅನ೦ತರ ಯುಎನ್ ಸಾಮಾನ್ಯ ಸಭೆಯಲ್ಲಿ "ಭಾರತವು ಎಲ್ಲಾ ಪ್ರಜಾಪ್ರಭುತ್ವಗಳ ತಾಯಿ,. ನಾನು ಎಲ್ಲಾ ಪ್ರಜಾಪ್ರಭುತ್ವಗಳ ತಾಯಿ ಎಂದು ಕರೆಯಲ್ಪಡುವ ದೇಶವನ್ನು ಪ್ರತಿನಿಧಿಸುತ್ತೇನೆ" ಎಂದು  ಹೇಳಿದರು. ಇದರ ಪುರಾವೆಯಾಗಿ ತಮ್ಮ ಕಥೆಯನ್ನೇ - ಬಡತನದಿ೦ದ ಪ್ರಧಾನಿ ಪಟ್ಟಕ್ಕೆ ಏರಿದ್ದ -  ಉದಾಹರಿಸಿದರು. ಭಾರತವು ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಪ್ರವೇಶಿಸಿದೆ ಆದರೆ ಸಾವಿರಾರು ವರ್ಷಗಳಿಂದ ಪ್ರಜಾಪ್ರಭುತ್ವ ಸಂಪ್ರದಾಯಗಳನ್ನು ಹೊಂದಿದೆ. "ನಮ್ಮ ವೈವಿಧ್ಯತೆಯು ನಮ್ಮ ಪ್ರಬಲ ಪ್ರಜಾಪ್ರಭುತ್ವದ ಸಂಕೇತವಾಗಿದೆ, ಇದರಲ್ಲಿ ಡಜನ್ಗಟ್ಟಲೆ ಭಾಷೆಗಳು ಮತ್ತು ನೂರಾರು ಉಪಭಾಷೆಗಳು ರೋಮಾಂಚಕ ಪ್ರಜಾಪ್ರಭುತ್ವದ ಉದಾಹರಣೆಗಳಾಗಿವೆ”, ಎ೦ದು ವಿಶದೀಕರಿಸಿದರು. ಎಲ್ಲ ಪ್ರಜಾಪ್ರಭುತ್ವಗಳ  ತಾಯಿ ? ಪ್ರಜಾ  ಪ್ರಭುತ್ವ ಸ೦ಪ್ರದಾಯಗಳು ? ಕೆಲವರು ಇವನ್ನು ಕಾಗಕ್ಕ ಗುಬ್ಬಕ್ಕ  ಕಥೆ ಅಥವಾ ಒ೦ದು ತರದ ಪವಿತ್ರ ಗರ್ಭಧಾರಣೆ ಎನ್ನ ಬಹುದು. ಗಮನಿಸಿ: ಮೋದಿ ಹೇಳಿಕೆಯ ಪ್ರಕಾರ ಭಾರತದ ವೈವಿಧ್ಯತೆ ಭಾಷೆಗಳು ಮತ್ತು ಉಪಭಾಷೆಗಳಿಗೇ ನಿಲ್ಲುತ್ತವೆ.  ಮತ, ಜಾತಿ, ಜೀವನ ರೀತಿಗಳ  ‘ವೈವಿಧ್ಯತೆ’ಗಳು ಲೆಕ್ಕಕ್ಕೆ ಬರುವುದಿಲ್ಲ.  ರಾಜಕಾರಣಿಗಳು ಸ್ವಹಿತಾಸಕ್ತಿ ಸೇವೆಗಾಗಿ ಏನು ಬೇಕಾದರೂ ಹೇಳುವ ಇನ್ನೊ೦ದು ನಿದರ್ಶನವಲ್ಲದೆ ಇನ್ನೇನಿದು ? 



 

ಭಾರತದ ಪ್ರಜಾಪ್ರಭುತ್ವ ಅಸ್ವಸ್ಥತೆಯು ಈಗ ಉತ್ತಮವಾಗಿ ದಾಖಲಾಗಿದೆ. ಸ್ವೀಡನ್ ದೇಶದ ಗೋಥೆನ್ಬರ್ಗ್ ವಿಶ್ವವಿದ್ಯಾಲಯದ ವಿ-ಡೆಮ್ ಇನ್ಸ್ಟಿಟ್ಯೂಟ್, ( The V-Dem Institute at the University of Gothenburg) ಇದು ಪ್ರಜಾಪ್ರಭುತ್ವಗಳ ಆರೋಗ್ಯದ ವಿವರಗಳನ್ನು ನಿರಂತರವಾಗಿ ಅಭ್ಯಸಿಸುತ್ತಿರುತ್ತದೆ.  ಇತ್ತೀಚೆಗೆ ಭಾರತದ ಪ್ರಜಾಪ್ರಭುತ್ವವನ್ನು "ಚುನಾವಣಾ ನಿರಂಕುಶಾಧಿಕಾರ" ಎಂದು ಮರು ವರ್ಗೀಕರಿಸಿದೆ. ಇತರ ಸೂಚ್ಯಂಕಗಳು ಸಂಸ್ಥೆಗಳನ್ನು ದುರ್ಬಲಗೊಳಿಸುವ ಮತ್ತು ನಾಗರಿಕ ಸ್ವಾತಂತ್ರ್ಯಗಳು  ಕುಸಿಯುತ್ತಿರುವ ಇದೇ ಕಥೆಯನ್ನು ಹೇಳುತ್ತವೆ.


ಈ ಹೊಸ ಪುಸ್ತಕಗಳು ಈ  ಪಲ್ಲಟದ ವೇಗವನ್ನು ಒತ್ತಿಹೇಳುತ್ತವೆ,  ದೇಶದ ಪಥದ ಸೂಕ್ಷ್ಮವಾಗಿ ವಿಭಿನ್ನವಾದ ಆದರೆ ಸಮನಾಗಿ ನಿರಾಶಾವಾದಿ ಚಿತ್ರಗಳನ್ನು ನೀಡುತ್ತವೆ.



೨೦೧೪ ರಲ್ಲಿ ಮೊದಲ ಚುನಾವಣೆಯ ವಿಜಯದ ನಂತರ, ಅನೇಕರು ಮೋದಿಯವರು ಜನಪ್ರಿಯ ಸುಧಾರಕರಾಗಿ, ತ್ವರಿತ ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸುವರು ಎ೦ದು ಪ್ರತ್ಯಾಶಿಸಿದರು.  ಬದಲಾಗಿ, ಉದಾರವಾದಿ ದೃಷ್ಟಿಕೋನದ ವಿಮರ್ಶಕರು ಕಟ್ಟಾ ಹಿಂದೂ ರಾಷ್ಟ್ರೀಯವಾದಿ ಆಡಳಿತ ಜಾರಿಯಲ್ಲಿರುವುದನ್ನು  ವಿವರಿಸುತ್ತಾರೆ.  ಅದು ಭಾರತದ ಅಲ್ಪಸಂಖ್ಯಾತರನ್ನು ವಿಶೇಷವಾಗಿ  ಅದರ ೨೦ ಕೋಟಿ ಮುಸ್ಲಿಮರನ್ನು ಅಸ್ಥಿರಗೊಳಿಸಿದೆ.  ೧೯೪೭ ರಲ್ಲಿ ಸ್ವಾತಂತ್ರ್ಯದ ನಂತರ ಅದರ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತತೆಯು ಅತಿ ದುರ್ಬಲವಾಗಿ  ಕಾಣುತ್ತದೆ.


ಮೊದಲನೆಯ ಪುಸ್ತಕದ  ಶೀರ್ಷಿಕೆಯು ಸೂಚಿಸುವಂತೆ, ದೇಬಶೀಶ್ ರೊಯ್ ಚೌಧುರಿ  ಮತ್ತು ಜಾನ್ ಕೀನ್ ಬರೆದಿರುವ  ‘ಟು ಕಿಲ್ ಎ ಡೆಮಾಕ್ರಸಿ’ - ‘ಒ೦ದು ಪ್ರಜಾಪ್ರಭುತ್ವದ ಹತ್ಯೆ’ (ಉಪ ಶೀರ್ಷಿಕೆ ‘ಸರ್ವಾಧಿಕಾರತ್ವಕ್ಕೆ ಭಾರತದ ದಾರಿ’, ಆಕ್ಸ್ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ - ಒ ಯು ಪಿ ) ಈ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತದೆ. 


ಈ ಪುಸ್ತಕಕ್ಕೆ ಸೇರಿದ ಒ೦ದು ಉಪಕಥೆ: ಈ ಪುಸ್ತಕದ ಕಡಿಮೆ ಬೆಲೆಯ ಭಾರತೀಯ ಅವೃತ್ತಿಯ ಪ್ರಕಟಣೆಯನ್ನು ಪ್ರಕಾಶಕ ಒ ಯು ಪಿ ತಡೆಹಿಡಿದು, ಈಗ ಬೇರೆ ಪ್ರಕಾಶಕರು ಇದನ್ನು ಪ್ರಕಟಿಸುವ ಸಾಧ್ಯತೆ ಇದೆ.  ಪುಸ್ತಕವನ್ನು ಅರ್ ಎಸ್ ಎಸ್ ಸಂಸ್ಥೆಯ  ಪತ್ರಿಕೆ ‘ದಿ ಆರ್ಗನೈಝರ್’ ನಲ್ಲಿ ಪ್ರತಿಕೂಲವಾಗಿ ವಿಮರ್ಶಿಸಲಾಯಿತು,  ನೀಚ ಉದ್ದೇಶದ ಕೃತಿ ಎನ್ನಲಾಯಿತು. ಒ ಯು ಪಿ ಹೇಳಿಕೆಯ ಪ್ರಕಾರ  "ಮಾರಾಟ ತಂಡವು ವಿಷಯವು ಪ್ರಚೋದನಕಾರಿ ಎಂದು ಭಾವಿಸಿದೆ  ಮತ್ತು ಆದ್ದರಿಂದ, ಪುಸ್ತಕವನ್ನು ಎರಡನೇ ವಿಮರ್ಶೆಗಾಗಿ ಕಳುಹಿಸಿದೆ.” ಪ್ರಕಟಣೆಗೆ ಮೊದಲು  ಆಕ್ಸ್‌ಫರ್ಡ್‌ನಿಂದ ಅನುಕೂಲಕರವಾಗಿ ಪರಿಶೀಲಿಸಲಾಗಿತ್ತು. ಅ೦ದಿನ ವಿವರಣೆಯು ಹೀಗೆ ಹೇಳುತ್ತದೆ, “ಭಾರತವು ಒಂದು ಕಾಲದಲ್ಲಿ ಪ್ರಜಾಪ್ರಭುತ್ವದ ದಾರಿದೀಪವಾಗಿತ್ತು ಆದರೆ ಈಗ ಮೋದಿ ಶೈಲಿಯ ಜನಪ್ರಿಯತ್ವದ ವಿನಾಶಕಾರಿ ಶಕ್ತಿಗಳಿಂದ ನಾಶವಾಗುತ್ತಿದೆ ಎಂಬ ನಂಬಿಕೆಯನ್ನು (ಈ ಪುಸ್ತಕವು)  ತಿರಸ್ಕರಿಸುತ್ತದೆ. ಈ ಪುಸ್ತಕವು ನಾಗರಿಕ ಸ್ವಾತಂತ್ರ್ಯಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಇಂದಿನ ದಾಳಿಯ ಆಳವಾದ ಐತಿಹಾಸಿಕ ಬೇರುಗಳನ್ನು ವಿವರಿಸುತ್ತದೆ.”


,

ಅ೦ದರೆ ಕೇವಲ ಮೋದಿಯನ್ನು ಟೀಕಿಸುವ ಬದಲು, ಪತ್ರಕರ್ತ ದೇಬಶಿಶ್ ರಾಯ್ ಚೌಧರಿ ಮತ್ತು ರಾಜಕೀಯ ವಿಜ್ಞಾನಿ ಜಾನ್ ಕೀನ್ ಅವರು ಕೊಳೆಯುವಿಕೆಯ ದೀರ್ಘ ಪ್ರಕ್ರಿಯೆಯನ್ನು, ಅದರಲ್ಲಿ ಕೆಲವು ಸ್ವಾತ೦ತ್ರ್ಯ ಪಡೆದುಕೊ೦ಡ ಸಮಯಕ್ಕೇ ಸೇರಿದ೦ತೆ,  ವಿವರಿಸುತ್ತಾರೆ. "ಸಮೀಕ್ಷೆಗಳು ಅತ್ಯಂತ ಸಂಬಂಧಿತ ಪ್ರಸಕ್ತ ಪ್ರವೃತ್ತಿಯನ್ನು ಗ್ರಹಿಸುವುದಿಲ್ಲ: ಅದೆ೦ದರೆ ಭಾರತದ ಪ್ರಜಾಪ್ರಭುತ್ವದ ಸಾಮಾಜಿಕ ಅಡಿಪಾಯಗಳ ಕುಸಿಯುವಿಕೆಯ ನಿಧಾನ ಚಲನೆ" ಎಂದು ಅವರು ಬರೆಯುತ್ತಾರೆ. "ಹಲವು ದಶಕಗಳಿಂದ, ದೇಶವು ಅಘೋಷಿತ ಸಾಮಾಜಿಕ ತುರ್ತುಪರಿಸ್ಥಿತಿಯನ್ನು ಅನುಭವಿಸುತ್ತಿದೆ."


ಅವರ ಕಾಳಜಿಗಳ ಪಟ್ಟಿ ಉದ್ದವಾಗಿದೆ. ೧೯೯೧ ರಲ್ಲಿ ಆರ್ಥಿಕ ಉದಾರೀಕರಣ ಆರಂಭವಾದ ಮೂರು ದಶಕಗಳ ನಂತರ, ೩೬.೫ ಕೋಟಿಗಿಂತಲೂ ಹೆಚ್ಚು ಭಾರತೀಯರು ಇನ್ನೂ ಬಡತನದಲ್ಲಿ ಸಿಲುಕಿಕೊಂಡಿದ್ದಾರೆ. ಆಹಾರ ಮತ್ತು ನೀರಿನ ಕೊರತೆ ಹೆಚ್ಚಾಗಿದೆ. ಹವೆಯ ಗುಣಮಟ್ಟ ಹದಗೆಟ್ಟಿದೆ. ನ್ಯಾಯಾಲಯಗಳು, ಪೊಲೀಸ್ ಮತ್ತು ತೆರಿಗೆಯಂತಹ ವಿಷಯಗಳಲ್ಲಿನ ಸಂಸ್ಥೆಗಳು  ಸುಧಾರಣೆಯ ಎಳ್ಳಷ್ಟು ಲಕ್ಷಣಗಳನ್ನೂ ತೋರಿಸುತ್ತಿಲ್ಲ. ಜಾತಿ ಅನ್ಯಾಯ ಇನ್ನೂ ವ್ಯಾಪಕವಾಗಿದೆ. ಮುಂದುವರಿದ ಸಾಂಕ್ರಾಮಿಕ ರೋಗವು ತೋರಿಸಿದಂತೆ ಭಾರತದ ಆರೋಗ್ಯ ವ್ಯವಸ್ಥೆಯು ವಿಶೇಷವಾಗಿ ಅನಿಶ್ಚಿತವಾಗಿದೆ. 




"ಕೋವಿಡ್ ಲಾಕ್‌ಡೌನ್‌ಗೆ ಎರಡು ತಿಂಗಳುಗಳಲ್ಲಿ. . . ಭಾರತದ ಹಲವು ಗುಪ್ತ ರಹಸ್ಯಗಳು ಅದರ ಹೆದ್ದಾರಿಗಳಲ್ಲಿ ಉರುಳಿ ತೆರೆದುಬಿದ್ದಿವೆ, " ಎಂದು ಲೇಖಕರು ಬರೆಯುತ್ತಾರೆ. ದೊಡ್ಡ ನಗರಗಳಿಂದ ಪಲಾಯನ ಮಾಡುವ ವಲಸಿಗರ  ದೃಶ್ಯಗಳನ್ನು ಉಲ್ಲೇಖಿಸುತ್ತಾ. "ಸಾಂಕ್ರಾಮಿಕ ರೋಗವು ಭಾರತದ ಆರೋಗ್ಯ ವ್ಯವಸ್ಥೆಯನ್ನು ನಾಶಪಡಿಸಿಲ್ಲ, ಅದು ಏನೆಂದು ತೋರಿಸಿದೆ." ಎ೦ದು ಬರೆಯುತ್ತಾರೆ


ರಾಯ್ ಚೌಧರಿ ಮತ್ತು ಕೀನ್ ಅವರದ್ದು ಒಂದು ಭಯಾನಕ ಮತ್ತು ಮೂಲಮಾತೃಕ ವಿವಾದವಾಗಿದೆ. ಇತ್ತೀಚಿನ ತಲೆಮಾರುಗಳಲ್ಲಿ ಭಾರತವು ಅತಿ ಕನಿಷ್ಟ ಮಟ್ಟದ  ಆರ್ಥಿಕ ಅಥವಾ ಸಾಮಾಜಿಕ ಪ್ರಗತಿಯನ್ನು ಸಾಧಿಸಿದೆ ಎಂದು ಈ ಪುಸ್ತಕವು ಸೂಚಿಸುತ್ತದೆ. ಆದರೂ ಲೇಖಕರು ಒಪ್ಪಿಕೊಂಡಂತೆ, ಈ ಹಿಂದೆ ಇತ್ತೀಚಿನ ದಶಕಗಳಲ್ಲಿ ೨೦ ಕೋಟಿ ಗಿಂತಲೂ ಹೆಚ್ಚು ಜನರು ಬಡತನದಿ೦ದ ಮೇಲೆಬ೦ದಿದ್ದರು. ಇದು ತತ್ತರಿಸುವ ಆರ್ಥಿಕ ದಾಖಲೆಯ ಮಧ್ಯದಲ್ಲಿ ಒ೦ದು ಪ್ರಬಲ ಸಾಧನೆಯಾಗಿತ್ತು.  ಆದರೆ ಸಾಂಕ್ರಾಮಿಕದ ಸಮಯದಲ್ಲಿ ಬಡತನದ ದರಗಳು ನಿಜವಾಗಿಯೂ ಹೆಚ್ಚಾಗಿದೆ. ಏತನ್ಮಧ್ಯೆ, ಭಾರತದ ರಾಜ್ಯಾಧಿಕಾರದ  ಉಪಕರಣಗಳು ದುರ್ಬಲವಾಗಿದ್ದು, ಅದರ ಸಂಸತ್ತು ಮತ್ತು ಕೇಂದ್ರೀಯ ಬ್ಯಾಂಕಿನಂತಹ ಸಂಸ್ಥೆಗಳಲ್ಲಿ ಕುಸಿತದ ಆತಂಕಕಾರಿ ಚಿಹ್ನೆಗಳು ಇರುವುದು ನಿಜ. 


ಇದು ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಯ ವಿಮರ್ಶೆ. ಬೇರೊ೦ದು  ವಿಮರ್ಶೆಯಲ್ಲಿ (ಕರ್ಕಸ್ ರಿವ್ಯೂಸ್) ಈ ಪುಸ್ತಕವನ್ನು  ಭಾರತದಲ್ಲಿ ಪ್ರಜಾಪ್ರಭುತ್ವದ ಸ್ಥಿರ ಕುಸಿತದ ತೀಕ್ಷ್ಣವಾದ ವಿಮರ್ಶಾತ್ಮಕ ಅಧ್ಯಯನ, ಸಾಮಾಜಿಕ ಮತ್ತು ರಾಜಕೀಯ ದುಷ್ಪರಿಣಾಮಗಳ ಕಠಿಣ, ಪಟ್ಟುಹಿಡಿದ ವೃತ್ತಾಂತ ಎ೦ದು ವರ್ಣಿಸಲಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಸಾಮಾಜಿಕ ರಚನೆಯಲ್ಲಿ ಕಣ್ಣುಕುಕ್ಕುವ  "ತುರ್ತುಸ್ಥಿತಿಗಳನ್ನು" ಅನುಭವಿಸುತ್ತಿದೆ, ಇದನ್ನು ದಶಕಗಳ ದುರ್ಬಲ ನಾಯಕತ್ವದ ಅವಧಿಯಲ್ಲಿ ನಿರ್ಲಕ್ಷಿಸಲಾಗಿದೆ ಅಥವಾ ಇವುಗಳಿಗೆ ಕಡಿಮೆ ಮಹತ್ವ ಕೊಡಲಾಗುತ್ತಿದೆ. ಲೇಖಕರು ಸಾಮಾಜಿಕ ರಚನೆಯ ಹೃದಯವಿದ್ರಾವಕ ಕುಸಿತವನ್ನು ಮತ್ತು ಸಾಂಕ್ರಾಮಿಕವು ಬಹಿರಂಗಪಡಿಸಿದ ಅಸಹ್ಯಕರ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ವಿವರಿಸುತ್ತಾರೆ. ಹೆಚ್ಚಿನ ಭಾರತೀಯರು ಪಾಶ್ಚಿಮಾತ್ಯ (ಮುಂದುವರಿದ) ದೇಶಗಳಲ್ಲಿ ಕ೦ಡುಬಾರದ೦ತ  "ಅವಮಾನ ಅನಾದಾರಗಳನ್ನು" ಅನುಭವಿಸುತ್ತಾರೆ, ಉದಾಹರಣೆಗೆ ವ್ಯಾಪಕವಾದ ಮಾಲಿನ್ಯ, ಆಹಾರ ಅಭದ್ರತೆ, ಅಪೌಷ್ಟಿಕತೆ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಕೊರತೆ- ವಿಶೇಷವಾಗಿ ಹುಡುಗಿಯರು ಮತ್ತು ಮಹಿಳೆಯರಿಗೆ, ಮತ್ತು ಗುಲಾಮಗಿರಿಯ ಮಟ್ಟದ ಕಾರ್ಮಿಕ ಪರಿಸರ.  ಹತ್ತಾರು ದಶಲಕ್ಷ ಬಡ ಭಾರತೀಯರಿಗೆ ಅಗತ್ಯವಾದ ಸಾಂವಿಧಾನಿಕ ಹಕ್ಕುಗಳು ಎಟಕುತ್ತಿಲ್ಲ.  ಸಂಶೋಧನೆಯು "ಅವಮಾನ ಅನಾದಾರಗಳು  ಹೇಗೆ ಸಾಮಾನ್ಯೀಕೃತ ಸಾಮಾಜಿಕ ಹಿಂಸೆಯ ಒಂದು ರೂಪವಾಗಿದೆ" ಎಂಬುದನ್ನು ತೋರಿಸುತ್ತದೆ.


ಸಮಾಜದ ಪರಿಕಲ್ಪನೆಯ  ಸಾವು ಪ್ರಜಾಪ್ರಭುತ್ವದ ಅವನತಿಗೆ ಕಾರಣ. ಪ್ರಜೆಗಳ ಘನತೆಯೇ  ಪ್ರಜಾಪ್ರಭುತ್ವವು ಅವಲಂಬಿಸಿರುವ ಬುನಾದಿ ತತ್ವ. ಜನರು ಆಳವಾದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಒಪ್ಪಿಕೊಳ್ಳುತ್ತಿದ್ದಂತೆ, ಆರೂಢ ವ್ಯವಸ್ಥೆಯು ತನ್ನ ಪ್ರಜೆಗಳ ಘನತೆಯನ್ನು ಕುಗ್ಗಿಸುತ್ತದೆ.  ಸಾಮಾಜಿಕ ಸ್ಥಗಿತವು ಯುವಕರ ಅಕ್ರಮ ಗು೦ಪುಗಳು  ಮತ್ತು ಅರೆಬೆ೦ದ ರಾಜಕೀಯ ಚಳುವಳಿಗಳು, ಭ್ರಷ್ಟ ರಾಜಕಾರಣಿಗಳು ನಡೆಸುತ್ತಿರುವ ವ೦ಶಪರ೦ಪರಾಗತ  ಪಕ್ಷಗಳು, ಬಂಧಿತ ಮಾಧ್ಯಮಗಳು, ನಿಷ್ಕ್ರಿಯ ಶಾಸಕಾಂಗಗಳು, ಅಧೀನ ಭದ್ರತಾ ಪಡೆಗಳು ಮತ್ತು ಪಕ್ಷಪಾತದ ನ್ಯಾಯಾಲಯಗಳನ್ನು  ಉತ್ಪಾದಿಸುತ್ತದೆ . ಚುನಾವಣೆಗಳು, ಹಿಂಸೆ ಮತ್ತು ಹಣದ ರಾಜಕೀಯದಿಂದ ಹಾಳಾಗುತ್ತವೆ,  "ಸ್ವಯಂಪ್ರೇರಿತ ದಾಸ್ಯದ" ವ್ಯಾಯಾಮವಾಗುತ್ತವೆ. 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಮುಂಚೆಯೇ ಈ ಸಮಸ್ಯೆಗಳು ಆರಂಭವಾದವು ಆದರೆ ಅವರ ನಾಯಕತ್ವದಲ್ಲಿ ಇನ್ನೂ ಕೆಟ್ಟದಾಗಿ ಬೆಳೆದಿವೆ ಎಂದು ಚೌಧರಿ ಮತ್ತು ಕೀನ್ ಹೇಳುತ್ತಾರೆ. ಆದಾಗ್ಯೂ, ಪ್ರಜಾಪ್ರಭುತ್ವದ ಕುಸಿತಕ್ಕೆ ಸಾಮಾಜಿಕ ದುಷ್ಕೃತ್ಯಗಳನ್ನು ದೂಷಿಸಬೇಕೇ ಅಥವಾ ಅದರ ತದ್ವಿರುಧ್ಧ ತರ್ಕ ಸತ್ಯವೇ ಎ೦ಬ ಪ್ರಶ್ನೆಗಳು ಉದ್ಭವಿಸುತ್ತವೆ. (ಫಾರಿನ್ನ್ ಅಫ಼ೆರ್ಸ್- Foreign Affairs-  ಪ್ರಕಟಣೆಯಲ್ಲಿ ಮುದ್ರಿತ ವಿಮರ್ಶೆ)


ಎರಡನೆಯ ಪುಸಕದಲ್ಲಿ ಹೆಚ್ಚು ಕೇ೦ದ್ರೀಕೃತ  ವರ್ಣನೆಯು, ದಕ್ಷಿಣ ಏಷ್ಯ ವಿಷಯ ಸ೦ಬ೦ಧಿಸಿದ೦ತೆ ಪ್ರಮುಖ  ವಿದ್ವಾ೦ಸ  ಕ್ರಿಸ್ಟೋಫ್ ಜಾಫ್ರೆಲಾಟ್ರವರ  ಮೂಲಕ ಬರುತ್ತದೆ. ತಮ್ಮ ಪುಸ್ತಕ ಮೋದಿಸ್ ಇ೦ಡಿಯ: ಹಿ೦ದು ನೇಷನಲಿಸ್ಮ್ ಅ೦ಡ್ ದಿ ರೈಸ್ ಒಫ಼್ ಎಥ್ನಿಕ್ ಡೆಮಕ್ರಸಿ (ಮೋದಿಯ ಭಾರತ: ಹಿ೦ದೂ ರಾಷ್ಟ್ರವಾದ ಮತ್ತು ಜನಾ೦ಗೀಯ ಪ್ರಜಾಪ್ರಭುತ್ವದ  ಏರಿಕೆ) ಯಲ್ಲಿಅವರು ಪ್ರಧಾನ ಮಂತ್ರಿಯನ್ನೇ ಹೆಚ್ಚು ನೇರವಾಗಿ  ಗುರಿಯಾಗಿಸಿಕೊಂಡಿದ್ದಾರೆ.


ಆಡಳಿತಾರೂಢ  ಭಾರತೀಯ ಜನತಾ ಪಕ್ಷವು ಹಿಂದೂ ರಾಷ್ಟ್ರವನ್ನು ನಿರ್ಮಿಸುವ ತನ್ನ ಗುರಿಯನ್ನು ಎ೦ದೂ ಮರೆಮಾಚಿಲ್ಲ - ಅ೦ದರೆ ಹಿಂದೂಗಳು ಪ್ರಾಬಲ್ಯ ಹೊಂದಿರುವ ಸರ್ಕಾರ ಮತ್ತು ರಾಷ್ಟ್ರ. ಮೋದಿಯವರು ತಮ್ಮ ಮೊದಲ ಅಧಿಕಾರದ ಅವಧಿಯಲ್ಲಿ ಈ ಗುರಿಯನ್ನು ತುಲನಾತ್ಮಕವಾಗಿ ನಿಧಾನವಾಗಿ ಬಡತಿಮಾಡಿದರು, ಆದರೆ ೨೦೧೯ ರಲ್ಲಿ ಅವರ ಎರಡನೇ ಗೆಲುವಿನ ನಂತರ ಹೆಚ್ಚು ಬಲವತ್ತರವಾಗಿ ಮುಂದುವರಿಸಿದ್ದಾರೆ. ಜಾಫ್ರೆಲಾಟ್ ಪ್ರಕಾರ ಫಲಿತಾಂಶವು ಭಾರತವನ್ನು "ವಾಸ್ತವಿಕ ಹಿಂದೂ ರಾಷ್ಟ್ರದಿಂದ ಸರ್ವಾಧಿಕಾರಿ ಹಿಂದೂ ರಾಜ್ ಆಗಿ ಪರಿವರ್ತನೆಗೊಳ್ಳುವುದನ್ನು" ಕಾಣಲಾಗುತ್ತಿದೆ ಎಂದು ಸೂಚಿಸುತ್ತದೆ.



ಜಾಫ಼್ರೆಲೊಟ್ ಪುಸ್ತಕವು  ಸಮಗ್ರ  ಸಂಶೋಧನೆಯ ಒಂದು ಮೇರುಕೃತಿಯಾಗಿದೆ,  ಓದುಗರಲ್ಲಿ ವಿವರಗಳಿಗೆ ತಾಳ್ಮೆಯ ಅಗತ್ಯವಿರುತ್ತದೆ - ಅಡಿಟಿಪ್ಪಣಿಗಳು ಮಾತ್ರ ೧೦೦ ಪುಟಗಳಿಗಿಂತ ಹೆಚ್ಚು. ಅಲ್ಪಸಂಖ್ಯಾತರ ವಿರುದ್ಧ ಸ್ವಯಂ ನಾಮಾಂಕಿತ ‘ಜಾಗರೂಕ’-ವ್ಯಕ್ತಿ/ಗು೦ಪುಗಳ ಹಿಂಸಾಚಾರದ ಏರಿಕೆಯಿಂದ ಹಿಡಿದು ನ್ಯಾಯಾಂಗ ಸ್ವಾತಂತ್ರ್ಯದ ಕುಸಿತ ಮತ್ತು ಚುನಾವಣಾ ಭ್ರಷ್ಟಾಚಾರಕ್ಕೆ ಹಣಕಾಸು ಪೂರೈಸುವ ಎಲ್ಲದರ ಬಗ್ಗೆ ಆಳವಾದ ವಿವರಗಳನ್ನು ಜಾಫ್ರೆಲೊಟ್ ಒದಗಿಸುತ್ತಾರೆ. ಆದರೂ ಕೇವಲ ಅರ್ಥಶಾಸ್ತ್ರದ ಮೇಲೆ, ಅಥವಾ ಮೋದಿಯವರ  ಅತ್ಯ೦ತ ಬೆಂಬಲಿಗರ ಧಾರ್ಮಿಕ ಛಲವಾದದ ಮೇಲೆ ಕೇಂದ್ರೀಕರಿಸುವ ಬದಲು ಲೇಖಕರ ಮುಖ್ಯ ಕಾರ್ಯವೆಂದರೆ ಭಾರತದ ಸಮಕಾಲೀನ ಕಥೆಯ ಮೂಲದಲ್ಲಿ ಜಾತಿಯನ್ನು ಇರಿಸುವುದು.


ಭಾರತೀಯ ಇತಿಹಾಸವನ್ನು ಮೂರು ಹಂತಗಳಾಗಿ ವಿಂಗಡಿಸಬೇಕು, ಎ೦ದು ಜಾಫ್ರೆಲೊಟ್ ಸೂಚಿಸುತ್ತಾರೆ. ಮೊದಲಿಗೆ  ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ನಂತರ ನೆಹರು ಕುಟುಂಬ ‘ರಾಜವಂಶ’ದ ಅಡಿಯಲ್ಲಿ, ಬೇರೂರಿದ್ದ ಗಣ್ಯರ ನೇತೃತ್ವದ "ಸಂಪ್ರದಾಯವಾದಿ ಪ್ರಜಾಪ್ರಭುತ್ವದ" ದೀರ್ಘಾವಧಿ ಆಡಳಿತ ನಡೆಯಿತು. ೧೯೮೦ ರ ದಶಕದಲ್ಲಿ ಎರಡನೇ ಹಂತದಲ್ಲಿ ಇದನ್ನು ಸವಾಲು ಮಾಡಲಾಯಿತು, ಇದರಲ್ಲಿ ಸಾಮಾಜಿಕ ಸುಧಾರಣೆಗಳು ಕೆಳವರ್ಗದ ಗುಂಪುಗಳಿಗೆ, ಭಾಗಶಃ  ಧನಾತ್ಮಕ  ಕ್ರಿಯಾ ಯೋಜನೆಗಳ ಮೂಲಕ, ಹೆಚ್ಚಿನ ಶಕ್ತಿಯನ್ನು ನೀಡಿತು, 



ಮೋದಿ ಈಗ "ಜನಾಂಗೀಯ ಪ್ರಜಾಪ್ರಭುತ್ವದ" ಮೂರನೇ ಹಂತಕ್ಕೆ ತೆರಳಿದ್ದಾರೆ, ಅಂದರೆ ಅಲ್ಪಸಂಖ್ಯಾತರು ಎರಡನೇ ದರ್ಜೆಯ ಪ್ರಜೆಗಳಾಗಿರುವ ಹಿಂದೂ ಪ್ರಾಬಲ್ಯದ ವ್ಯವಸ್ಥೆ. ಆದರೂ ಜಾಫ್ರೆಲೊಟ್ ಹಳೆಯ ಮೇಲ್ಜಾತಿಗಳು  - ಸಾಮಾನ್ಯವಾಗಿ ನಗರ ಮತ್ತು ಮಧ್ಯಮ ವರ್ಗದ ಹಿಂದುಗಳು  ಹಿಂದೂ ಧರ್ಮದ ಸಾಂಪ್ರದಾಯಿಕ ಕಟ್ಟುನಿಟ್ಟಾದ ಶ್ರೇಣೀಕೃತ ವ್ಯವಸ್ಥೆಯ  ಮೇಲ್ಭಾಗದಿಂದ ಹೊರಬರುತ್ತಾರೆ - ವಿಶೇಷವಾಗಿ ಸಂಸತ್ತಿನಲ್ಲಿ ಬಿಜೆಪಿ ಪ್ರತಿನಿಧಿತ್ವದ ಮೇಲೆ ಪ್ರಾಬಲ್ಯ ಸಾಧಿಸುತ್ತ ಅಧಿಕಾರವನ್ನು  ತಮ್ಮ  ಹಿಡಿತಕ್ಕೆ ಪಡೆದುಕೊಳ್ಳುವದನ್ನು ನೋಡುತ್ತಾನೆ. . "ಮೋದಿಯ ಜನಪ್ರಿಯತ್ವ ನೀತಿಯು ಭಾರತದ ಗಣ್ಯರಿಗೆ ಜಾತಿ-ರಾಜಕಾರಣದ ವಿಷ-ಹರವಾಗಿ ಕಾಣಿಸಿತು" ಎಂದು ಅವರು ಬರೆಯುತ್ತಾರೆ. "ಆ ಅರ್ಥದಲ್ಲಿ, ಇದು ಒಂದು ರೀತಿಯ ಪ್ರತಿ-ಕ್ರಾಂತಿಯಾಗಿದೆ."


ದೃಷ್ಟಿಯಲ್ಲಿ ವಿಭಿನ್ನವಾಗಿದ್ದರೂ, ಎರಡು ಪುಸ್ತಕಗಳೂ  ಅನೇಕ ಸಾಮಾನ್ಯ ತೀರ್ಮಾನಗಳಿಗೆ ಬರುತ್ತವೆ.  ಹಂಗೆರಿಯಿಂದ ತೊಡಗಿ  ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿಅಮೆರಿಕದ  ವರೆಗೆ ದೇಶಗಳಿಗೆ ತಗುಲಿದ  ಜಾಗತಿಕ "ನಿರ೦ಕುಶವಾದತ್ವ" ದ ಹೊಸ ತರಂಗದ    ಭಾಗವಾಗಿ ಇಬ್ಬರೂ ಭಾರತವನ್ನು ನೋಡುತ್ತಾರೆ. ಹಾರ್ವರ್ಡ್ ರಾಜಕೀಯ ವಿಜ್ಞಾನಿಗಳಾದ ಸ್ಟೀವನ್ ಲೆವಿಟ್ಸ್ಕಿ ಮತ್ತು ಡೇನಿಯಲ್ ಝಿಬ್ಲಾಟ್ ಅವರ ೨೦೧೮ ರ ಪುಸ್ತಕ ‘ಪ್ರಜಾಪ್ರಭುತ್ವಗಳು ಹೇಗೆ ಸಾಯುತ್ತವೆ ('How Democracies Die' , Steven Levitsky and Daniel Ziblatt,, 2018 ) ಸಿದ್ಧಾಂತನ್ನು ಇಬ್ಬರೂ ಒಪ್ಪಿಕೊಳ್ಳುತ್ತಾರೆ : ಇದರ ಪ್ರಕಾರ ಪ್ರಜಾಪ್ರಭುತ್ವಗಳು ಹಠಾತ್ತನೆ ರಾಶಿಯಾಗಿ ಕುಸಿಯುವ ಬದಲು ಸ್ವಲ್ಪಸ್ವಲ್ಪವಾಗಿ ಹನಿ ಹನಿಯಾಗಿ ಇಳಿಮುಖವಾಗುತ್ತವೆ ಎಂದು ಹೇಳುತ್ತದೆ.


ಇದೊ೦ದು ವಿಶಾಲ ಕಥೆಯಾದರೂ ಭಾರತದ ಸ್ಥಾನವು ಸ್ಪಷ್ಟವಾಗಿ ದೊಡ್ಡ ಮಹತ್ವದ್ದು: ೧೩೦  ಕೋಟಿ  ಜನರ ರಾಷ್ಟ್ರವೊ೦ದರ ಕೇ೦ದ್ರ ಸರ್ಕಾರವು ಹೆಚ್ಚು ನಿರಂಕುಶ ದಿಕ್ಕಿನಲ್ಲಿ ಶಾಶ್ವತವಾಗಿ ಬದಲಾಯಿಸುವುದಾದರೆ, ಜಾಗತಿಕವಾಗಿ  ಹಿನ್ನಡೆ ಅನುಭವಿಸಿ  ಪ್ರಜಾಪ್ರಭುತ್ವವು ಕ್ಷುಲ್ಲಕ ರಾಜಕೀಯ ಲಕ್ಷ್ಯವಾಗಿ ಬದಲಾಗುತ್ತದೆ.


ಅಸಮಾನತೆಯು ಇನ್ನೊ೦ದು  ಸಾಮಾನ್ಯ ವಿಷಯವಾಗಿದೆ. ಆರ್ಥಿಕ ಸುಧಾರಣೆಯು "ಬೋಲಿಗಾರ್ಕ್ಸ್” (Bollywood + Oligarchs = ಭಾರತದ ವಿಶಿಷ್ಟವಾದ ಅಲ್ಪಜನ ಪ್ರಭುತ್ವ) ಎಂದು ಕರೆಯಲ್ಪಡುವ ಸ್ಥಳೀಯ ವ್ಯವಹಾರ ಮುಖ೦ಡರಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಹೊಸ "ಕರೋಡಪತಿ ರಾಜ್" ನ ಉದಯಕ್ಕೆ ಅನುವು ಮಾಡಿದೆ. 


ಹೆಚ್ಚಿನ ಸಾಕ್ಷ್ಯಾಧಾರಗಳು ಅಂಬಾನಿ ಮತ್ತು ಅದಾನಿಯಂತಹ ಪುರುಷರ ಬೆಳವಣಿಗೆಯ ಮೂಲಕ ಈ ಪ್ರವೃತ್ತಿ ಮುಂದುವರಿಯುವದನ್ನೇ ಕಾಣಿಸುತ್ತಿವೆ.  ಇಬ್ಬರೂ ಜಾಗತಿಕ ಉದ್ಯಮಿ ಸಂಪತ್ತಿನ ಶ್ರೇಯಾಂಕವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನದಿಂದ ನೈಸರ್ಗಿಕ ಸಂಪನ್ಮೂಲಗಳವರೆಗೆ ಕೈಗಾರಿಕೆಗಳಲ್ಲಿ ಧೈರ್ಯದ ಹೆಜ್ಜೆಗಳಿ೦ದ ಮತ್ತು ಅಧಿಕಾರದಲ್ಲಿರುವವರೊಟ್ಟಿಗೆ ಉತ್ತಮ ಸ೦ಪರ್ಕಗಳನ್ನು ಇಟ್ಟುಕೊಳ್ಳುವುದರ ಮೂಲಕ ಅಪಾರ ಸ೦ಪತ್ತನ್ನು ಗಳಿಸುತ್ತಾರೆ. ರಾಯ್ ಚೌಧರಿ ಮತ್ತು ಕೀನ್ ಅವರು ಭಾರತದ "ಪೋಲಿಗಾರ್ಕ್" (Politician + Oligarch = ಧನಾಕಾ೦ಕ್ಷಿ ರಾಜಕಾರಣಿ) ಎಂದು ಕರೆಯುವವರ ಸಮಾನಾಂತರ ಏರಿಕೆಯನ್ನೂ ಒತ್ತಿಹೇಳುತ್ತಾರೆ - ಅಂದರೆ ತಮ್ಮ ಸ್ವಂತ ಗಣನೀಯ ವ್ಯಾಪಾರ ಹಿತಾಸಕ್ತಿಗಳನ್ನು ಉತ್ತೇಜಿಸಲು ರಾಜ್ಯ ಅಧಿಕಾರವನ್ನು ಬಳಸುವ ರಾಜಕಾರಣಿಗಳು. 






‘ದಿ ವಯರ್’ ನಲ್ಲಿ ದಿಲ್ಲಿ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಿಕೆ ನೀರಾ  ಚ೦ದೋಕ್ ಜಾಫ್ರೆಲೋಟ್’ನ ಪುಸ್ತಕವನ್ನು ಸೂಕ್ಷ್ಮವಾಗಿ ವಿಮರ್ಶಿಸಿದ್ದಾರೆ. 'ರಾಷ್ಟ್ರೀಯವಾದಿ ಜನಪ್ರಿಯತ್ವತೆ' (‘Nationalist Populism’) ಮೋದಿ ರಾಜಕಾರಣಕ್ಕೆ ಸೇರಿಸಿದ ಹೊಸ ತಂತಿ. ಸ್ಥಾಪಿತ ಗಣ್ಯ ಗುಂಪುಗಳು ತಮ್ಮ ಕಾಳಜಿಯನ್ನು ಕಡೆಗಣಿಸುತ್ತಿವೆ  ಎಂದು ಭಾವಿಸುವ ಸಾಮಾನ್ಯ ಜನರ ಮನವೊಲಿಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುವ ರಾಜಕೀಯ ವಿಧಾನಕ್ಕೆ ‘ಜನಪ್ರಿಯತ್ವತೆ’ (‘Populism’) ಎ೦ದು ಹೇಳಲಾಗುತ್ತದೆ.  ಇವರು ಅಧಿಕಾರೂಢ ಸ್ಥಾಪನೆಗಳೆಲ್ಲ ಭ್ರಷ್ಟ ಮತ್ತು ನಿಷ್ಕ್ರಿಯ ಎಂದು ಆರೋಪಿಸಿ  ಮಾಧ್ಯಮಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳಂತಹ ಮಧ್ಯವರ್ತಿ ಸಂಸ್ಥೆಗಳನ್ನೆಲ್ಲ ಕೆಡಹುವ ಮತ್ತು ಜನರೊಂದಿಗೆ ನೇರ ಸಂಬಂಧವನ್ನು ಸ್ಥಾಪಿಸುವ ಮೂಲಕ  ಅಧಿಕಾರಕ್ಕೆ ಬರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಅವರು ಅಲ್ಪಸಂಖ್ಯಾತರು, ವಲಸಿಗರು ಮತ್ತು ಸಮಾಜಕ್ಕೆ ‘ಸೇರದಿರುವವರು’ ‘ಹೊರಗಿನವರು’ ಎ೦ದು ಪರಿಗಣಿಸಲಾದ ವಿಭಾಗಗಳ ವಿರುದ್ಧ ಬಹುಮತದ ಅಭಿಪ್ರಾಯವನ್ನು ಸಜ್ಜುಗೊಳಿಸುತ್ತಾರೆ. ಮೋದಿ,  ಹಿಂದೂ ರಾಷ್ಟ್ರವನ್ನು ಸೃಷ್ಟಿಸುವದನ್ನು ಜನಪ್ರಿಯತ್ವಕ್ಕೆ ಇನ್ನೊ೦ದು  ಆಯಾಮವಾಗಿ ಸೇರಿಸಿದರು. ಅಲ್ಪಸಂಖ್ಯಾತರನ್ನು ಅವರಿಗೆ ಯೋಗ್ಯ ಸ್ಥಾನಕ್ಕೆ ಇಳಿಸಲಾಗಿದೆ. ಜನಾಂಗೀಯ ಪ್ರಜಾಪ್ರಭುತ್ವವನ್ನು ದೇಶದಲ್ಲಿ ಸಾಂಸ್ಥೀಕರಿಸಲಾಗಿದೆ. 


ಅಂತಿಮವಾಗಿ, ಮೋದಿ ಸರ್ಕಾರವು ‘ಕಲ್ಯಾಣ ರಾಜ್ಯ’ (the Welfare State) ದಿಂದ ಹೊರಬಂದಿತು. ಪರ್ಯಾಯವನ್ನು 'ಉದ್ಯಮಶೀಲ ರಾಜ್ಯ' ಎಂದು ಕರೆಯುತ್ತಾರೆ. ಜನರು ಉದ್ಯೋಗಕ್ಕಾಗಿ ರಾಜ್ಯದ ಕಡೆಗೆ ನೋಡಬೇಕಾಗಿಲ್ಲ, ಅವರು ತಮ್ಮನ್ನು ತಾವು ನೋಡಿಕೊಳ್ಳಬೇಕು - ಹಾಗೆ ಮಾಡಲು ಅವರು ಪಕೋಡಗಳನ್ನು ಮಾರಬೇಕಾಗಿದ್ದರೂ ಸಹ. ಯುಪಿಎ -1 ಸರ್ಕಾರವು ಜನರಿಗೆ ಸಾಮಾಜಿಕ ಹಕ್ಕುಗಳನ್ನು ನೀಡುವ ಹಲವಾರು ನೀತಿಗಳನ್ನು ಜಾರಿಗೆ ತಂದಿತು. ಪ್ರಸ್ತುತ ಆಡಳಿತದಲ್ಲಿ, ಬಡವರಿಗೆ ಕೆಲವು ಸವಲತ್ತುಗಳನ್ನು ನೀಡಲಾಗಿದೆ, ಉದಾಹರಣೆಗೆ ಹೆಚ್ಚುಹೆಚ್ಚಾಗಿ ಕೈಗೆಟುಕಲಾಗದ ಗ್ಯಾಸ್ ಸಿಲಿಂಡರ್‌ಗಳ ಅನಿಲ ಸಂಪರ್ಕಗಳು, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ (ನೀರಿನ ಕೊರತೆಯಿಂದಾಗಿ ಹಲವಾರು ಸ್ಥಗಿತಗೊಂಡಿದೆ), ಮತ್ತು ಕೆಲವು ವಸತಿಗಳು. ಬಡವರ ಘನತೆಯನ್ನು ರಕ್ಷಿಸುವ ಹೆಸರಿನಲ್ಲಿ ಇದೆಲ್ಲವೂ ನಡೆಯುತ್ತದೆಯಾದರೂ ಇವುಗಳನ್ನು ನಾಗರಿಕರಿಗೆ ಸಾಮಾಜಿಕ ನೀತಿಯ ವಿಷಯವಾಗಿ ಅಥವಾ ಪ್ರಧಾನಮಂತ್ರಿಯ ಉಡುಗೊರೆಯಾಗಿ, ನೀಡಲಾಗುತ್ತದೆ, ಸಾಮಾಜಿಕ ಹಕ್ಕುಗಳಂತೆ ನೀಡಲಾಗುವುದಿಲ್ಲ.



ಅಂತಿಮವಾಗಿ, ಎರಡೂ ಪುಸ್ತಕಗಳು ತಮ್ಮ ಕರಾಳ ದೃಷ್ಟಿಕೋನದಲ್ಲಿ ಒಂದಾಗುತ್ತವೆ. 


ಮು೦ದೇನು ? 


ಸುಮಾರು 300 ಮಬ್ಬಾದ  ಪುಟಗಳ ನಂತರ, ರಾಯ್ ಚೌಧುರಿ ಮತ್ತು ಕೀನ್ ಅವರು ಭಾರತದ ಇ೦ದಿನ ಹೊಸ ದಿಕ್ಕನ್ನು ಇಷ್ಟಪಡದ ಓದುಗರಿಗೆ ತುಸು ಭರವಸೆಯನ್ನು ನೀಡುವ ಭಾರೀ ಸ೦ಕುಚಿತ ತರ್ಕವನ್ನು ಮು೦ದಿಡುತ್ತಾರೆ:  ಮೋದಿ ೨೦೨೪ ರ ವೇಳೆಗೆ ಮತ್ತೊಂದು ರಾಷ್ಟ್ರೀಯ ಚುನಾವಣೆಗೆ ಹೋರಾಡಲಿದ್ದಾರೆ. ಇದರಿ೦ದಾಗಿ   ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಂತೆ ಬಿಜೆಪಿಯನ್ನು ತಿರಸ್ಕರಿಸಲು ಮತದಾರರಿಗೆ ಸಮಯವಿದೆ. ಕೋವಿಡ್ -೧೯ ಮೋದಿ  ಸರ್ಕಾರದ ಜನಪ್ರಿಯತೆಯನ್ನು  ಉನ್ನತ ನೆಲೆಯಿಂದಲಾದರೂ ಕೂಡ ಸ್ವಲ್ಪ  ಕುಗ್ಗಿಸಿದೆ.


ಆದರೆ ಸ್ಪಷ್ಟ ದೃಷ್ಟಿಯ  ವಿಶ್ಲೇಷಣೆಯು ಮೋದಿ ಮತ್ತೊಮ್ಮೆ ಓಡಿ ಗೆಲ್ಲುವ ಸಾಧ್ಯತೆಯನ್ನು ಸೂಚಿಸುತ್ತದೆ. ಏತನ್ಮಧ್ಯೆ, ಅವರ ನಂತರದ ಉತ್ತರಾಧಿಕಾರಿ ಇನ್ನೂ ಹೆಚ್ಚು ಧ್ರುವೀಕರಿಸುವ ಬಿಜೆಪಿ ವ್ಯಕ್ತಿಯಾಗಬಹುದು, ಉದಾಹರಣೆಗೆ ಯೋಗಿ ಆದಿತ್ಯನಾಥ್, ಹಿಂದೂ ಸನ್ಯಾಸಿ, ದೇಶದ ಅತ್ಯಂತ ಜನನಿಬಿಡ ರಾಜ್ಯ ಉತ್ತರ ಪ್ರದೇಶದ  ವ್ಯಾಜ್ಯಪ್ರೇರಕ ಮುಖ್ಯಮಂತ್ರಿ. 


ಮೋದಿ ಶೈಲಿ ಯಾರಿಗೆ ಸ್ವೀಕಾರಾರ್ಹ ?


ಕನಿಷ್ಠ ಎರಡು ಗುಂಪುಗಳು ಈ ರೀತಿಯ ಪುಸ್ತಕಗಳ ವಾದಗಳಿಗೆ ಕಡಿಮೆ ಗಮನ ಕೊಡುವ ಸಾಧ್ಯತೆಯಿದೆ ಎಂಬುದು ಅರಿಯ ಬೇಕಾದ ಸಂಗತಿ. 


ಮೊದಲನೆಯದು ಮೋದಿಯವರ ಅನೇಕ ಬೆಂಬಲಿಗರು, ಭಾರತವನ್ನು ರಾಷ್ಟ್ರೀಯ ಶ್ರೇಷ್ಠತೆಯ ಹೊಸ ಕಾಲಘಟ್ಟಕ್ಕೆ ತರಲು ಸಮರ್ಥ ನಾಯಕನಾಗಿ ಅವರನ್ನು ನೋಡುವವರು. ಉನ್ನತ ಮಟ್ಟದ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯದ ಶ್ರೇಣಿಯಲ್ಲಿ ಬಹುಶಃ ಮೋದಿಯ ಅಭಿಮಾನಿಗಳು ನಿರೀಕ್ಷಿಸುವುದಕ್ಕಿಂತ ನಿಧಾನಗತಿಯಲ್ಲಿದ್ದರೂ ನಿಸ್ಸಂಶಯವಾಗಿ ದೇಶ  ಮುಂದುವರಿಯುತ್ತದೆ. ದೇಶದ  ಏರಿಕೆಯನ್ನು ನೋಡುವ ಅನೇಕರಿಗೆ ಭಾರತೀಯ ಆಡಳಿತವು ನಿಧಾನವಾದ, ಬಹು ದಶಕಗಳ ಕುಸಿತವನ್ನು ಅನುಭವಿಸುತ್ತಿದೆ ಎನ್ನುವ ವಿಚಾರ ವಿಚಿತ್ರವಾಗಿ ತೋರುತ್ತದೆ.



ಭಾರತದಲ್ಲಿ ಅನೇಕರು "ಜನಾಂಗೀಯ ಪ್ರಜಾಪ್ರಭುತ್ವದ" ಭವಿಷ್ಯದಲ್ಲಿ ಚಿಂತೆ ಪಡಲು ಸ್ವಲ್ಪವೂ ಕಾರಣ  ಕಾಣುವುದಿಲ್ಲ.  ಪ್ರಜಾಪ್ರಭುತ್ವ ವ್ಯವಸ್ಥೆಗಳು ತಮ್ಮ ಪ್ರಬಲ ಸಾಮಾಜಿಕ ಗುಂಪನ್ನು ಪ್ರತಿಬಿಂಬಿಸುವ ಒ೦ದು  ರೀತಿಯ ರಾಜ್ಯ ಧರ್ಮವನ್ನು ಹೊಂದಿರುವ.ಇಸ್ರೇಲ್ ಅಥವಾ ಮಲೇಷಿಯಾದಂತಹವುಗಳನ್ನು ಇವರು ಸೂಚಿಸುತ್ತಾರೆ. 


ಎರಡನೆಯದು, ವಿಚಿತ್ರವೆಂದರೆ, ಭಾರತದ ಪ್ರಜಾಪ್ರಭುತ್ವದ ದಿಕ್ಕನ್ನು ತಮ್ಮದೇ ವಿಶಿಷ್ಟ ಆಸಕ್ತಿಗಳ ಕಾರಣದಿ೦ದಾಗಿ ಹೆಚ್ಚು ಕಳವಳವಿಲ್ಲದೆ ನೋಡುವ ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳು. ಅವರಲ್ಲಿ ಹಲವರು ಈಗ ಚೀನಾವನ್ನು ಸಮತೋಲನಗೊಳಿಸುವ ತಮ್ಮ ಸಾಮಾನ್ಯ ಪ್ರಯತ್ನಗಳಲ್ಲಿ ಮೋದಿಯನ್ನು ನಿರ್ಣಾಯಕ ಪಾಲುಗಾರರಾಗಿ ನೋಡುತ್ತಾರೆ.  ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ 'ನಿರಂಕುಶವಾದ' ಆಚರಿಸುವ ದೇಶಗಳೊಂದಿಗೆ ವ್ಯವಹರಿಸಲು ಸಾಧಾರಣವಾಗಿ ಕಷ್ಟವಾಗುತ್ತದೆ.  ಆದರೆ ಭಾರತದ ವಿಷಯದಲ್ಲಿ ಇದು  ವಿರುದ್ಧ : ದೇಶದ ಪ್ರಜಾಪ್ರಭುತ್ವ ಶ್ರೇಯಾಂಕಗಳು ಕುಸಿಯುತ್ತಿದ್ದರೂ ಪಾಶ್ಚಿಮಾತ್ಯ ಸಂಬಂಧಗಳು ಸುಧಾರಿಸುತ್ತಿವೆ.


 ಬೀಜಿಂಗ್‌ನೊಂದಿಗೆ ತನ್ನದೇ ಆದ ಜಗಳಗಳನ್ನು ಹೊ೦ದಿರುವ  ಹೊಸ ದೆಹಲಿಯು ಅವರನ್ನು ಉಪಯುಕ್ತ ಸ್ನೇಹಿತರಂತೆ ನೋಡುತ್ತದೆ. ಭಾರತವು ಹೆಚ್ಚು ಭೌಗೋಳಿಕ ರಾಜಕೀಯವಾಗಿ ಪ್ರಾಮುಖ್ಯತೆ ಪಡೆಯುತ್ತಿದ್ದಂತೆ, ಅದರ ಆಡಳಿತವು ಹೆಚ್ಚು ಸಂಕೀರ್ಣವಾಗುತ್ತಿದೆ. ಬೊರಿಸ್ ಜಾನ್ಸನ್ ಅಥವಾ ಅಮೆರಿಕ  ಅಧ್ಯಕ್ಷ ಜೋ ಬೈಡೆನ್ ಅವರಂತಹವರಿಗೆ ಒಂದು ಗೊಂದಲವನ್ನು ಸೂಚಿಸುತ್ತವೆ, ಆದರೆ ಅವರು ಈಗಾಗಲೇ ತಮ್ಮ ಭೌಗೋಳಿಕ ರಾಜಕೀಯವನ್ನು ಮೋದಿ ಮತ್ತು ಅವರ ಉತ್ತರಾಧಿಕಾರಿಗಳಿಗೆ ಜೋಡಿಸಿಯೇ  ಬಿಟ್ಟಿದ್ದಾರೆ.  


ದೇಶದ ಭವಿಷ್ಯದ ರಾಜಕೀಯ ಮಾದರಿ ನಿಶ್ಚಿತವಾಗಿದೆ ಎ೦ದು ಹೇಳಲಾಗುವುದಿಲ್ಲ  ಆದರೆ ನೆಹರು ಅಥವಾ ಮೋದಿಯ ಹಿಂದಿದ್ದ  ಮನಮೋಹನ್ ಸಿಂಗ್ ಅವರಂತಹ ನಾಯಕರು ತಿರುಗಿ ಬರುವದು, ಅಥವಾ ಉದಾರವಾದಿ  ಜಾತ್ಯತೀತತೆಯ ಹಿಂದಿನ ಯುಗಕ್ಕೆ ಮರಳುವುದು ಹೆಚ್ಚು ಅಸಂಭವವಾಗಿದೆ. ಅಂತಿಮವಾಗಿ ಪ್ರಪಂಚದ ಹಲವು 'ಸಣ್ಣ' ಪ್ರಜಾಪ್ರಭುತ್ವಗಳು ತನ್ನ ಸರ್ವಶ್ರೇಷ್ಠ ಪಟ್ಟವನ್ನು ತಾನು ಕಳೆದುಕೊಳ್ಳುವುದನ್ನು ತಪ್ಪಿಸಲು  'ಅತಿದೊಡ್ಡ' ಪ್ರಜಾಪ್ರಭುತ್ವವು ಶ್ರಮ ಮಾಡುತ್ತದೆ ಎಂದು ಆಶಿಸುತ್ತಾರೆ.  ಇಲ್ಲದಿದ್ದರೆ, ಮೂಲಭೂತ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ಮೈತ್ರಿಗಳ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಲೇ,   ಭಾರತವು ಬೇರೆ ದಿಕ್ಕಿನಲ್ಲಿ ಸಾಗಿರುವುದನ್ನು ಸದ್ದಿಲ್ಲದೆ ಕ೦ಡೂ ಕಾಣದವರ೦ತೆ ಪಾಶ್ಚಿಮಾತ್ಯ ನಾಯಕರು ಕಣ್ಣು ಮರೆಸುತ್ತಾರೆ. 



ಎಫ಼್ ಟಿ ಪತ್ರಿಕೆಯ ವಿಮರ್ಶಕ ಜೇಮ್ಸ್ ಕ್ರಾಬ್ಟ್ರೀ ಇ೦ಟರ್ನಾಶನಲ್ ಇನ್ಸ್ಟಿಟ್ಯೂಟ್  ಒಫ಼್ ಸ್ಟ್ರಟೀಜಿಕ್  ಸ್ಟಡೀಸ್ -ಏಶಿಯಾದ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು 'ದಿ ಬಿಲಿಯನೇರ್ ರಾಜ್' ಪುಸ್ತಕದ  ಲೇಖಕರು.


(ಎಫ಼್ ಟೀ ಲ೦ಡನ್ನಿನಲ್ಲಿ ಪ್ರಕಟಿತ  ಮತ್ತು ಇತರ ವಿಮರ್ಶೆಗಳ  ಮೇಲೆ ಆಧಾರಿತ.) 


ಇವನ್ನೂ ಓದಿ 


https://www.ft.com/content/e7081ca8-c814-4538-9284-0d488b2eeacaTo Kill a Democracy and Modi’s India — a dream in peril



https://www.foreignaffairs.com/reviews/capsule-review/2021-04-20/kill-democracy-indias-passage-despotism


https://www.goodreads.com/book/show/55332528-to-kill-a-democracy


https://www.kirkusreviews.com/book-reviews/debasish-roy-chowdhury/to-kill-a-democracy/


https://www.the-tls.co.uk/articles/to-kill-a-democracy-debasish-roy-chowdhury-john-keane-midnights-borders-suchitra-vijayan-book-review-sonia-faleiro/


https://thewire.in/books/christophe-jaffrelot-modis-india-review



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು