ರt


            ದೆಹಲಿ ಉಚ್ಚ ನ್ಯಾಯಲಯವು  ೧೫ ಜೂನ್ ೨೦೨೧ರ೦ದು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (UAPA) ಯಡಿಯಲ್ಲಿ ಜೇಲಿನಲ್ಲಿದ್ದ ನತಾಶಾ ನರ್ವಾಲ್, ದೇವಂಗಾನ ಕಲಿತಾ, ಆಸಿಫ್ ಇಕ್ಬಾಲ್ ಇವರನ್ನು ಜಾಮೀನು ಮೇಲಿ ಬಿಡುಗಡೆ ಮಾಡುವ೦ತೆ ಆದೇಶ ನೀಡಿದ್ದು ದೇಶದಲ್ಲೆಲ್ಲ ದೊಡ್ಡ ಸುದ್ದಿಯಾಗಿತ್ತು. ಈ ಪ್ರಕರಣಗಳೂ ಸೇರಿದ೦ತೆ ಕಾನೂನು ಮತ್ತು ಪೋಲೀಸ್/ಪ್ರಾಸಿಕ್ಯೂಷನ್ ಕಾರ್ಯವಿಧಾನಗಳ ದುರುಪಯೋಗಗಳ ಬಗ್ಗೆ, ಹಾಗೂ ನ್ಯಾಯಾಲಯಗಳು ಈ ವಿಷಯದಲ್ಲಿ ಹೊರಡಿಸಿದ ಕೆಲವು ಒಳ್ಳೆಯ  ಮತ್ತು ಕೆಲವು ನಿರಾಶಾದಾಯಕ ಆದೇಶಗಳ ಬಗ್ಗೆ ಪ್ರತ್ಯೇಕವಾಗಿ ಬರೆಯಲು ಯೋಚಿಸಿದ್ದೇನೆ.

ಸದ್ಯಕ್ಕೆ,ಈ ಪ್ರಕರಣದ ಬಗ್ಗೆ  ಸುಪ್ರೀಮ್ ಕೋರ್ಟಿನ ನಿವೃತ್ತನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರ ಒ೦ದು ಅತ್ಯ೦ತ ಆಸಕ್ತಿದಾಯಕ ವಿಶ್ಲೇಷಣೆ ‘ದಿ ವಯರ್’  ಆನ್‌ಲೈನ್ ನಿಯತಕಾಲಿಕಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದರಲ್ಲಿ ಲೋಕೂರ್ ಅವರು ಪ್ಪ್ರೊಸಿಕ್ಯೂಷನ್ ಮತ್ತು ಪೋಲೀಸರು ಮಾಡಿದ ಅತಿರೇಕಗಳಬಗ್ಗೆ ಹಾಗೂ ನ್ಯಾಯಾಲಯಗಳು ಸ್ವೀಕರಿಸಿದ ನೆಲೆಗಳ ಬಗ್ಗೆ ನೇರವಾಗಿ ಏನನ್ನೂ ಮುಚ್ಚದೆ ಬರೆದಿದ್ದಾರೆ.

 

 

ನತಾಶಾ ನರ್ವಾಲ್, ದೇವಂಗಾನ ಕಲಿತಾ, ಆಸಿಫ್ ಇಕ್ಬಾಲ್ 

ವಿರುದ್ಧ ನಾಚಿಕೆಗೇಡಿನ  ಪ್ರಕ್ರಿಯೆಗಳ  ಕುರಿತು  ಐದು  ಪ್ರಶ್ನೆಗಳು

ನ್ಯಾ. ಮೂ. (ನಿ.) ಮದನ್ ಬಿ ಲೋಕೂರ್

https://thewire.in/rights/student-activists-natasha-narwal-devangana-kalita-uapa-delhi-police-high-court ೨೨ ಜೂನ್ ೨೦೧೧

“ಈ ಪ್ರಕ್ರಿಯೆಯು ಮಾನವ ಹಕ್ಕುಗಳು, ಕಾನೂನಿನ ನಿಯಮ ಮತ್ತು ನ್ಯಾಯದ ಬಗ್ಗೆ ಅತ್ಯಲ್ಪ ಗೌರವವನ್ನು ತೋರಿಸಿದೆ, ಈ ಪ್ರಕ್ರಿಯೆಯಲ್ಲಿ, ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯ ದುರ್ಬಲತೆಯ  ಕೆಲವು ವಿಷಯಗಳು  ಬಹಿರಂಗಗೊಳ್ಳುತ್ತವ,.  ಮತ್ತು ಇದು ಬಹಳ ಕೊಳಕು ದೃಶ್ಯ.” ಎನ್ನುತ್ತಾರೆ ನ್ಯಾ ಮೂ ಲೋಕೂರ್.

ಲೋಕೂರ್ ಅವರ ಲೇಖನದಿ೦ದ ನನಗೆ ತೋರಿಬರುವದು ಕೆಲವು ಸ್ಪಷ್ಟ ಅನುಮಾನಗಳು: ಪೋಲೀಸ್ ಅಧಿಕಾರಿಗಳು ಕೆಲವು ಭಿನ್ನಾಭಿಪ್ರಾಯದ (ಅ೦ದರೆ ಸರ್ಕಾರಗಳ ನೀತಿ- ಕಾರ್ಯರೀತಿಗಳನ್ನು ಒಪ್ಪದ) ವ್ಯಕ್ತಿಗಳನ್ನು ಸದೆಬಡಿಯುವ ಮನಸ್ಸು ಮಾಡಿದರೆ, ಅವರ ಮೇಲೆ ಒ೦ದಾದನ೦ತರ ಒ೦ದು ಮೇಲೊ೦ದು ಬೇರೆ ಬೇರೆ ‘ಮೊದಲ ಮಾಹಿತಿ ವರದಿ’ (ಎಫ಼್ ಐ ಆರ್)  ಗಳನ್ನು ದಾಖಲು ಮಾಡುವದು. ಹೀಗಾಗಿ ಒ೦ದು ಪ್ರಕರಣದಲ್ಲಿ ಈ ಗುರಿ ಮಾಡಿರುವ ವ್ಯಕ್ತಿಗಳು ಜಾಮೀನು  (ಬೇಲ್) ಪಡೆದುಕೊ೦ಡರೆ, ಇನೊ೦ದರಲ್ಲಿ ತಿರುಗಿ  ಬ೦ಧನ ಮಾಡಬಹುದು. ಎಫ಼್ ಐ ಆರ್ ಗಳಲ್ಲಿ ಆರೋಪಗಳೂ ಬೇರೆ ಬೇರೆ. ಕೆಲವೊಮ್ಮೆ ನ್ಯಾಯಾಧೀಶರು ಆರೋಪಿಯಬಗ್ಗೆ ಸ್ವಲ್ಪ ಅನುಕೂಲವಾಗಿ ಒ೦ದು ಪ್ರಕರಣದಲ್ಲಿ ಬರೆದರೆ, ಬೇರೊ೦ದು ಅರೋಪ ಪಟ್ಟಿ ಅಪರಾಧಿಯನ್ನುತಿರುಗಿ ಬ೦ಧಿಸಲು ಉಪಯುಕ್ತವಾಗುತ್ತದೆ.

ದೇವಂಗನಾ ಕಾಲೀತಾ : ಇವರ ವಿರುದ್ಧದ ನಾಲ್ಕು ಎಫ್‌ಐಆರ್‌ಗಳಲ್ಲಿ, ಮೊದಲನೆಯದು ೨೦೧೯ ರ ಡಿಸೆಂಬರ್ ೨೧ ರಂದು ನೋಂದಾಯಿಸಲ್ಪಟ್ಟ ಎಫ್‌ಐಆರ್ ೨೫೦/೨೦೧೯ .  ಈ ಎಫ್‌ಐಆರ್ ಅಡಿಯಲ್ಲಿ೨೦೨೦ ರ ಮೇ ೩೦ ರಂದು ಬಂಧಿಸಲಾಯಿತು (ಒಂದು ವರ್ಷದ ನಂತರ).  ಆದರೆ ನಂತರ ಜೂನ್ ೨ ರಂದು ಜಾಮೀನು ನೀಡಲಾಯಿತು. ನಾಲ್ಕನೇ ಎಫ್ಐಆರ್ ಸಂಬಂಧಿಸಿದಂತೆ ಕಾಲಿತಾ ಈಗಾಗಲೇ ಜೈಲಿನಲ್ಲಿದ್ದಳು. ಆಕೆಯ ವಿರುದ್ಧದ ಆರೋಪವು ಮುಖ್ಯವಾಗಿ ಮಾರಣಾಂತಿಕ ಆಯುಧದಿಂದ ಗಲಭೆಯಾಗಿದೆ. ದೇಶದ್ರೋಹದ ಆರೋಪವಿಲ್ಲ.

ಎರಡನೆಯದು ಫೆಬ್ರವರಿ ೨೪, ೨೦೨೦ ರ ಎಫ್‌ಐಆರ್ ೪೮/೨೦೨೦, ಇದಕ್ಕಾಗಿ ಆಕೆಯನ್ನು ಮೇ ೨೩, ೨೦೨೦ ರಂದು ಬಂಧಿಸಲಾಯಿತು, ಆದರೆ ಮರುದಿನವೇ ಜಾಮೀನು ನೀಡಲಾಯಿತು. ಆಕೆಯ ವಿರುದ್ಧ ಪ್ರಮುಖ ಆರೋಪವೆಂದರೆ ಗಲಭೆ. ಮತ್ತು ಆಕೆಗೆ ಜಾಮೀನು ದೊರೆತಾಗ, ವಿಚಾರಣಾ ನ್ಯಾಯಾಧೀಶರು ನೀಡಿದ ಆದೇಶದಲ್ಲಿ "ಆರೋಪಿಗಳು ಕೇವಲ ಎನ್‌ಆರ್‌ಸಿ ಮತ್ತು ಸಿಎಎ (ನಾಗರಿಕರ ರಾಷ್ಟ್ರೀಯ ನೋ೦ದಣಿ ಮತ್ತು ನಾಗರಿಕತಾ ತಿದ್ದುಪಡಿ ಕಾನೂನು) ವಿರುದ್ಧ ಪ್ರತಿಭಟಿಸುತ್ತಿದ್ದರು ಮತ್ತು ಆರೋಪಿಗಳು ಯಾವುದೇ ಹಿಂಸಾಚಾರದಲ್ಲಿ ತೊಡಗಲಿಲ್ಲ" ಎಂದು ಉಲ್ಲೇಖಿಸಿದ್ದಾರೆ.

ದೇವಾ೦ಗನ ವಿರುದ್ಧದ ಮೂರನೇ ಎಫ್‌ಐಆರ್ ಕ್ರ.ಸ೦. ೫೦/೨೦೨೦. ಇದರಡಿಯಲ್ಲಿ ಅವರನ್ನು ಮೇ ೨೪ ರಂದು ಬಂಧಿಸಲಾಯಿತು. ದೆಹಲಿ ಹೈಕೋರ್ಟ್ ಗಮನಿಸಿದಂತೆ “ ಮೇಲ್ಮನವಿದಾರರನ್ನು ಗೌರವಾನ್ವಿತ ಡ್ಯೂಟಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ [ಎಫ್‌ಐಆರ್ ೪೮/೨೦೨೦ ರಲ್ಲಿ] ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೇ, ತಕ್ಷಣ ಮತ್ತು ಅದೇ ನ್ಯಾಯಾಲಯದ ಕೋಣೆಯಲ್ಲಿ, ಅಪರಾಧ ಶಾಖೆಯ ಪೊಲೀಸ್ ಅಧಿಕಾರಿಗಳು ಮತ್ತೆ  ಎಫ್ಐಆರ್ ಸಂಖ್ಯೆವ್೫೦/೨೦೨೦ ರಲ್ಲಿ ಬಂಧಿಸಿದ್ದಾರೆ. ” ಸೆಪ್ಟೆಂಬರ್ ೧ ರಂದು ಈ ಪ್ರಕರಣದಲ್ಲಿ ಆಕೆಗೆ ಜಾಮೀನು ಸಿಕ್ಕಿತು. ಆಕೆಯ ವಿರುದ್ಧದ ಮೂಲ ಆರೋಪವೆಂದರೆ ಮಾರಣಾಂತಿಕ ಆಯುಧದಿಂದ ಗಲಭೆ. 

ಸ್ವಾರಸ್ಯಕರವಾಗಿ, ಸಾಮಾನ್ಯವಾಗಿ ನ್ಯಾಯಾಲಯದ ಒಳಗಡೆಯಲ್ಲಿಯೇ  ಪ್ರತಿವಾದಿಗಳನ್ನು ಬಂಧಿಸಲಾಗುವುದಿಲ್ಲ - ಇದು ಕೊನೆಯ ಬಾರಿಗೆ ನಡೆದದ್ದು ಅಮಿತಾಬ್ ಬಚ್ಚನ್ ಅವರ ‘ಶಹೆನ್ ಶಾಹ್’ (ಸಿನೆಮ) ದಲ್ಲಿ!

ದೇವಂಗಣ ವಿರುದ್ಧದ ನಾಲ್ಕನೇ ಎಫ್‌ಐಆರ್ ೨೦೨೦ ರ ಮಾರ್ಚ್ ೬ ರಂದು ೫೯/೨೦೨೦ ಆಗಿದೆ. ಈ ಎಫ್‌ಐಆರ್ ಇತ್ತೀಚೆಗೆ ದೆಹಲಿ ಹೈಕೋರ್ಟ್ ನೀಡಿದ ಜಾಮೀನಿನ ವಿಷಯವಾಗಿದೆ. ಅವರು ಈಗಾಗಲೇ ಜೈಲಿನಲ್ಲಿದ್ದಾಗ ಮೇ ೨೯ ರಂದು (ಮೂರು ತಿಂಗಳ ನಂತರ) ಈ ಪ್ರಕರಣದಲ್ಲಿ ಆಕೆಯನ್ನು ಬಂಧಿಸಲಾಯಿತು. ಸೆಪ್ಟೆಂಬರ್ ೧೬, ೨೦೨೦ ರಂದು ಈ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆಕೆಯ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಲಾಗಿದ್ದು, ಅಪರಾಧವನ್ನು ಸೆಪ್ಟೆಂಬರ್ ೧೭ ರಂದು ದಾಖಲಿಸಲಾಯಿತು.

ಗಮನಿಸಿ: ದೇವಾ೦ಗನರನ್ನು ನಾಲ್ಕು ಸಲ - ಮೊದಲು ೨೦೨೦ ರ ಮೇ ೨೩ ರಂದು, ನಂತರ ಮೇ ೨೪ ಮತ್ತು ಮೇ೨೯ ರಂದು ಮತ್ತು ಅಂತಿಮವಾಗಿ ಮೇ ೩೦ ರಂದು ಬಂಧಿಸಲಾಯಿತು. “ಪೊಲೀಸರು ಮತ್ತು ಕಾನೂನು ಕ್ರಮಗಳು ಎಷ್ಟು ಉಗ್ರರಾಗಬಹುದು?” ಎ೦ದು ಕೇಳುತ್ತಾರೆ ನ್ಯಾ ಮೂ ಲೋಕೂರ್!

ಸಾಕಷ್ಟು ಸ್ಪಷ್ಟವಾಗಿ, ಸ೦ಬ೦ಧಪಟ್ಟ ದಿನಾ೦ಕಗಳನ್ನು ಪರಿಶೀಲಿಸಿದರೆ , ದೇವಾ೦ಗನಾ ಜಾಮೀನು .ಅರ್ಜಿಯನ್ನು ಆಕೆಗೆ ಚಾರ್ಜ್‌ಶೀಟ್ ನೀಡುವ ಮೊದಲು  ಸಲ್ಲಿಸಲಾಗಿತ್ತು. ಆದರೆ ಕುತೂಹಲಕಾರಿಯಾಗಿ,ಬೀಟಾ, ಡೆಲ್ಟಾ, ಎಕೋ, ಜುಪಿಟರ್, ಸ್ಮಿತ್, ಜಾನಿ ಎನ್ನುವ  ಕೃತಕ ನಾಮಧೇಯಗಳನ್ನು ಕೊಟ್ಟಿರುವ ಕೆಲವು ಸಂರಕ್ಷಿತ ಸಾಕ್ಷಿಗಳ ಹೇಳಿಕೆಗಳಿಗೆ ವಿಚಾರಣಾ ನ್ಯಾಯಾಧೀಶರ ಆದೇಶದಲ್ಲಿ ಸಾಕಷ್ಟು ಉಲ್ಲೇಖಗಳಿವೆ.  (ತಮಾಷೆಗಾಗಿ, ‘ಎಲ್ಲಿ, ಚಾರ್ಲಿ? ಅವನೊಬ್ಬನನ್ನೇಯಾಕೆ ಬಿಟ್ಟರು?’ ). ಈ ಯಾವುದೇ ಹೇಳಿಕೆಗಳು ದೇವಂಗನಾ ಜ್ಞಾನದಲ್ಲಿಲ್ಲ ಅಥವಾ ಅವಳೊಂದಿಗೆ ಹಂಚಿಕೊಂಡಿಲ್ಲ. ಇದು ನ್ಯಾಯೋಚಿತವೇ?

ಈ ಆದೇಶವು  ದೆಹಲಿ ಹೈಕೋರ್ಟ್‌ನ ಪರಿಗಣನೆಯ ಅಡಿಯಲ್ಲಿತ್ತು.

ನತಾಶಾ ನರ್ವಾಲ್ ; ದೇವಾ೦ಗನಾ ಪ್ರಕರಣಕ್ಕೆ  ಹೋಲಿಸಿದರೆ, ಇವರ ಮೆಲೆ ೩ ಎಫ಼್ ಐ ಅರ್ ಗಳನ್ನು ದಾಖಲಿಸಿದೆ. ಮೊದಲನೆಯದು ೨೦೨೦ ರ ಫೆಬ್ರವರಿ ೨೪ ರ ಎಫ್‌ಐಆರ್ ೪೮/೨೦೨೦. ಈ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆಕೆಯನ್ನು ಮೇ ೨೩ ರಂದು ಬಂಧಿಸಲಾಯಿತು ಆದರೆ ಮೇ ೨೪ ರಂದು ಸಾಮಾನ್ಯ ಆದೇಶದಿಂದ ಜಾಮೀನು ನೀಡಲಾಯಿತು. ಮತ್ತೆ, ಕಾಲಿತಾ ಪ್ರಕರಣದಂತೆಯೇ, ಫೆಬ್ರವರಿ ೨೬ ರ ಎರಡನೇ ಎಫ್‌ಐಆರ್, ಎಫ್‌ಐಆರ್ ೫೦/೨೦೨೦ ಗೆ ಸಂಬಂಧಿಸಿದಂತೆ ಮೇ ೨೪ ರಂದು ನ್ಯಾಯಾಲಯದಿಂದಲೇ ನರ್ವಾಲ್‌ನನ್ನು ಬಂಧಿಸಲಾಯಿತು. ಅತ್ಯಗತ್ಯ ಆರೋಪವೆಂದರೆ ಮಾರಣಾಂತಿಕ ಆಯುಧದಿಂದ ಗಲಭೆ. ವಿಚಾರಣಾ ನ್ಯಾಯಾಧೀಶರು ಸೆಪ್ಟೆಂಬರ್‌ ೧೭ರ೦ದು ನರ್ವಾಲ್‌ಗೆ ಜಾಮೀನು ನೀಡಿದರು.

ನತಾಶಾ ವಿರುದ್ಧದ ಮೂರನೇ ಎಫ್‌ಐಆರ್ ೨೦೨೦ ರ ಮಾರ್ಚ್ ೬ ರ ಎಫ್‌ಐಆರ್ ೫೯/೨೦೨೦ ಆಗಿದೆ, ಇದರಲ್ಲಿ ಅವರು ಮೇ ೨೯ ರಂದು ಈಗಾಗಲೇ ಜೈಲಿನಲ್ಲಿದ್ದಾಗ ಬಂಧನಕ್ಕೊಳಗಾದರು. ಅವರು ಸೆಪ್ಟೆಂಬರ್೨೦೨೦ ರಲ್ಲಿ ಈ ಪ್ರಕರಣದಲ್ಲಿ  ಸ್ಪಷ್ಟವಾಗಿ ತನ್ನ  ಮೇಲೆ ಚಾರ್ಜ್‌ಶೀಟ್ ನೀಡುವ ಮೊದಲು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು.  ಜಾಮೀನು ಅರ್ಜಿಯನ್ನು ೨೦೨೧ ರ ಜನವರಿ ೨೮ ರಂದು ತಿರಸ್ಕರಿಸಲಾಯಿತು. ವಿಚಾರಣಾ ನ್ಯಾಯಾಧೀಶರ ತೀರ್ಮಾನವು ಜೂನ್ ೧೫ ರ ದೆಹಲಿ ಹೈಕೋರ್ಟ್‌ನ ತೀರ್ಪಿನಲ್ಲಿ ಚರ್ಚೆಯ ವಿಷಯವಾಗಿದೆ.

ಆಸಿಫ್ ಇಕ್ಬಾಲ್ ತನ್ಹಾ: ೨೦೧೯ ರ ಡಿಸೆಂಬರ್ ೧೬ ರಂದು ಆಸಿಫ್ ಇಕ್ಬಾಲ್ ತನ್ಹಾ ವಿರುದ್ಧ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ೨೯೮/೨೦೧೯ ದಾಖಲಿಸಲಾಗಿದೆ. ದೇಶದ್ರೋಹ ಅಥವಾ ಭಯೋತ್ಪಾದನೆ ಆರೋಪವಿಲ್ಲ. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ.

ನಮ್ಮ ಸಂವಿಧಾನದಲ್ಲಿ, ಶಾಂತಿಯುತ ಪ್ರತಿಭಟನೆಯನ್ನು  ಶಸ್ತ್ರಾಸ್ತ್ರಗಳಿಲ್ಲದೆ ಶಾಂತಿಯುತ ಸಭೆ ಎ೦ದು ಕರೆಯಲಾಗುತ್ತದೆ. ಇದು ನಮ್ಮ ಸಂವಿಧಾನದ ವಿಧಿ ೧೯ (೧) (ಬಿ) ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕು. ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿ ಆರ್ ಪಿಸಿ) ಯ ಸೆಕ್ಷನ್ ೧೪೪ ಹೊರತುಪಡಿಸಿ, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಅಥವಾ ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಶಸ್ತ್ರಾಸ್ತ್ರಗಳಿಲ್ಲದ ಶಾಂತಿಯುತ ಸಭೆಗಾಗಿ ಯಾವುದೇ ಸಮಂಜಸವಾದ ನಿರ್ಬಂಧ ಅಥವಾ ನಿಷೇಧಗಳನ್ನು ವಿಧಿಸುವ  ಕಾನೂನು ಯಾವದೂ ಇಲ್ಲ.

 

ಅಪರಾಧ  ಕಾರ್ಯವಿಧಾನ ಕಾನೂನು (ಸಿಆರ್‌ಪಿಸಿ)ಯ ಸೆಕ್ಷನ್ ೧೪೪ ರ ಅಡಿಯಲ್ಲಿ ಅಧಿಕಾರದ ಬಳಕೆಯನ್ನು ಕೆಲವು ಅಗತ್ಯ ಷರತ್ತುಗಳೊಂದಿಗೆ ಪಾಲಿಸಬೇಕಾಗಿದೆ. ಈ ಷರತ್ತುಗಳು ಆಡಳಿತಕ್ಕೆ ಅಪ್ರಿಯ, ಆದರೆ ಅದು ಮತ್ತೊಂದು ಕಥೆ. ಆದ್ದರಿಂದ, ಸಿಎಎ ವಿರುದ್ಧ ತನ್ಹಾ ನಡೆಸಿದ ಪ್ರತಿಭಟನೆಯು ಶಾ೦ತಿಯುತ ಎನ್ನುವ ತಥ್ಯವನ್ನು ಕಡೆಗಣಿಸಿ , ಅವರ  ಮೇಲೆ ಗಲಭೆ ಮತ್ತು ಅದೂ ಮಾರಣಾಂತಿಕ ಆಯುಧದಿಂದ ಶಸ್ತ್ರಸಜ್ಜಿತನಾಗಿದ್ದನೆಂದು ಆರೋಪ ಹೇರಲಾಯಿತು. ಕೊಲೆ ಯತ್ನದ ಆರೋಪವೂ ಇತ್ತು. ಈ ಆಪಾದಿತ ಅಪರಾಧಗಳಿಗಾಗಿ, ಅವರನ್ನು ೨೦೨೦ ರ ಮೇನಲ್ಲಿ ಬಂಧಿಸಲಾಯಿತು, ಆದರೆ ೨೦೨೦ ರ ಮೇ ೨೮ ರಂದು ಜಿಲ್ಲಾ ನ್ಯಾಯಾಧೀಶರು ಜಾಮೀನು ನೀಡಿದರು.

ಕಲುಷಿತ ಉದ್ದೇಶದಿ೦ದ ಆರೋಪಿಗೆ ಚಾರ್ಜ್‌ಶೀಟ್‌ನ ನಿರಾಕರಣೆ

ಈ ಸಂಪೂರ್ಣ ಅವಧಿಯಲ್ಲಿ, ಮೂರು ಪ್ರಮುಖ ಘಟನೆಗಳು ಸಂಭವಿಸಿದವು. ಮೊದಲನೆಯದಾಗಿ, ೨೦೨೦ ರ ಫೆಬ್ರವರಿಯ ಕೊನೆಯಲ್ಲಿ ಈಶಾನ್ಯ ದೆಹಲಿಯಲ್ಲಿ ಗಲಭೆಗಳು ನಡೆದವು. ಶೀಘ್ರದಲ್ಲೇ, ಮಾರ್ಚ್ ೬ ರಂದು ಎಫ್ಐಆರ್ ೫೯/೨೦೨೦ ಅನ್ನು ದೇವಂಗಾನ, ನತಾಶಾ ಮತ್ತು ಆಸಿಫ್ ವಿರುದ್ಧ ಗಲಭೆ (ದ೦ಗೆ)ಗಾಗಿ ದಾಖಲಿಸಲಾಯಿತು. ಎರಡನೆಯದಾಗಿ, ಏಪ್ರಿಲ್ ೧೯ ರಂದು, ಮೂವರೂ ಇನ್ನೂ ನ್ಯಾಯಾಂಗ ಬಂಧನದಲ್ಲಿರುವಾಗ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಯ ಅಡಿಯಲ್ಲಿ ಭಯೋತ್ಪಾದನೆ ಆರೋಪವನ್ನು ಮತ್ತು ಇದರೊಟ್ಟಿಗೆ ದೇಶದ್ರೋಹದ ಆರೋಪವನ್ನುಎಫ್‌ಐಆರ್‌ಗೆ  ಸೇರಿಸಲಾಯಿತು -  ಮೂರನೆಯದಾಗಿ, ಎಫ್‌ಐಆರ್ ೫೯ ಗೆ ಸಂಬಂಧಿಸಿದಂತೆ ಆಸಿಫ್‌ನನ್ನು ಮೇ ೨೦ ರಂದು ಮತ್ತು ದೇವಂಗಾನ ಮತ್ತು ನತಾಶಾ ಅವರನ್ನು ಮೇ ೨೯ ರಂದು ಬಂಧಿಸಲಾಯಿತು.

 

ಎಫ್‌ಐಆರ್ ೫೯ ಗೆ ಸಂಬಂಧಿಸಿದ ತನಿಖೆಯ ಮುಕ್ತಾಯಗೊ೦ಡು, ಸೆಪ್ಟೆಂಬರ್ ೧೬ ರಂದು ಮೂವರು ಆರೋಪಿಗಳ (ಮತ್ತು ಇತರರ) ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಯಿತು. ನ್ಯಾಯಾಧೀಶರು ಮರುದಿನ, ಅಗತ್ಯ ಅನುಮತಿ  ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಾಸಿಕ್ಯೂಷನ್ ಸ್ವೀಕರಿಸಿಲ್ಲ ಎನ್ನುವ ಕಾರಣದಿ೦ದ ದೇಶದ್ರೋಹದ ಅಪರಾಧವನ್ನು ಮಾತ್ರ ಹೊರತುಪಡಿಸಿ, ಉಳಿದ  ಅಪರಾಧಗಳನ್ನು ದಾಖಲೆಮಾಡಿಕೊಂಡರು. ಸೆಪ್ಟೆಂಬರ್ ೧೭ರಂದು ವಿಚಾರಣಾ ನ್ಯಾಯಾಧೀಶರು ಚಾರ್ಜ್‌ಶೀಟ್‌ನ ಪ್ರತಿಯನ್ನು ದೇವಂಗಾನ, ನತಾಶಾ ಮತ್ತು ಆಸಿಫ್‌ಇವರಿಗೆ ಪೂರೈಸುವ ಮೊದಲ ಆದೇಶವನ್ನು ಜಾರಿಗೊಳಿಸಿದರು.

ಹಕ್ಕಿನ ಪ್ರಕಾರ, ಅವರ ವಿರುದ್ಧ ಸಲ್ಲಿಸಿದ ಚಾರ್ಜ್‌ಶೀಟ್‌ನ ಪ್ರತಿ ಪಡೆಯಲು ಅರೋಪಿಗಳಿಗೆ ಅರ್ಹತೆ ಇದೆ. ಸಿಆರ್‌ಪಿಸಿಯ ಸೆಕ್ಷನ್ ೨೦೭ ಅದಕ್ಕೆ ಅವಕಾಶ ನೀಡುತ್ತದೆ. 

ವಿಚಾರಣಾ ನ್ಯಾಯಾಧೀಶರು ಅಂಗೀಕರಿಸಿದ ಸೆಪ್ಟೆಂಬರ್ ೧೭ ರ ಆದೇಶಕ್ಕೆ ಅನುಸಾರವಾಗಿ ಇದನ್ನು ಸೆಪ್ಟೆಂಬರ್ ೨೧ ರಂದು ‘ಪೆನ್ ಡ್ರೈವ್‌’ನಲ್ಲಿ ಪೂರೈಸಲಾಯಿತು (ಇದನ್ನು ಓದಲು ಕ೦ಪ್ಯೂಟರ್ ಬೇಕು) . ಪ್ರಶ್ನೆ: ವಿದ್ಯುನ್ಮಾನ ಪ್ರತಿ ನಕಲನ್ನು ಆರೋಪಿಗಳಿಗೆ ಸರಬರಾಜು ಮಾಡಲಾಗಿದ್ದು, ಅವರು - ಮತ್ತು ಇತರರು - ಅವರು ಬಯಸಿದಾಗಲೆಲ್ಲಾ ಜೈಲಿನಲ್ಲಿ ಕಂಪ್ಯೂಟರ್‌ಗೆ ಉಚಿತ ಮತ್ತು ಅನಿಯಮಿತ ಬಳಕೆಯ ವ್ಯವಸ್ಥೆ ಮಾಡಲಾಗಿತ್ತೇ ?

ಕಂಪ್ಯೂಟರ್‌ನಲ್ಲಿ ೧೭,೦೦೦- ಅಥವಾ ೧೯,೦೦೦ ಪುಟಗಳ ಡಾಕ್ಯುಮೆಂಟ್ ಅನ್ನು ಓದಲು,  ಅದು ಎಷ್ಟು ಅನುಕೂಲಕರ ಅಥವಾ ಅನಾನುಕೂಲವಾಗಿದೆ ಎಂದು ಕಂಡುಹಿಡಿಯಲು,  ಸರ್ಕಾರ ಪರ ವ್ಯಾಜ್ಯಗಾರರು (ಪ್ರಾಸಿಕ್ಯೂಷನ್)  ಪ್ರಯತ್ನಿಸಿದ್ದರೇ ? ಇದು ಕಾನೂನಿನ ಅಕ್ಷರದ ವಿಷಯವಲ್ಲ,  ವೈಯಕ್ತಿಕ  ಸ್ವಾತಂತ್ರ್ಯದ ವಿಷಯದಲ್ಲಿ ವಿಶೇಷವಾಗಿ ಅನುಸರಿಸಬೇಕಾದದ್ದು ಕಾನೂನಿನ ಉಸಿರು, ಉದ್ದೇಶ,  ಮನೋಭಾವ. ಆದರೆ, ಕಾನೂನು ಬಧ್ಧ ಹಕ್ಕುಗಳ ಬಗ್ಗೆ ಪ್ರಾಸಿಕ್ಯೂಷನ್ ಕಾಳಜಿ ವಹಿಸುತ್ತದೆಯೇ, ಅಥವಾ ಅವುಗಳ ಅಸ್ತಿತ್ವವನ್ನಾದರೂ ಅಂಗೀಕರಿಸುತ್ತದೆಯೇ?

ಮುಂದಿನ ದಿನಾಂಕ, ಸೆಪ್ಟೆಂಬರ್ ೧೯ ರಂದು, ಚಾರ್ಜ್‌ಶೀಟ್‌ನ ಭೌತಿಕ ನಕಲನ್ನು ಅವರಿಗೆ ಏಕೆ ಪೂರೈಸಲಾಗುವುದಿಲ್ಲ ಎಂದು ವಿವರಿಸುವಾಗ, ಚಾರ್ಜ್‌ಶೀಟ್‌ನಲ್ಲಿ ಸಾವಿರಾರು ಪುಟಗಳಿವೆ ಮತ್ತು ೧೫ ಆರೋಪಿಗಳು ಇದ್ದಾರೆ, ಮತ್ತು ಹಣಕಾಸು ಸೇರಿದಂತೆ ಕೆಲವು ಅನುಮೋದನೆಗಳು ಇನೂ ಸಿಗಲಿವೆ  ಎಂದು ಪ್ರಾಸಿಕ್ಯೂಷನ್ ಸಲ್ಲಿಸಿತು.  ಅಂತಹ ಸಲ್ಲಿಕೆಯನ್ನು ನಿರಾಕರಿಸಿದ ವಿಚಾರಣಾ ನ್ಯಾಯಾಧೀಶರು ಆರೋಪಿತರಿಗೆ ಚಾರ್ಜ್-ಶೀಟ್ ಪೂರೈಸಲು ಎರಡನೇ ಆದೇಶವನ್ನು ಜಾರಿಗೊಳಿಸಿದರು, ಜೈಲಿನಲ್ಲಿಯೇ ಎಲ್ಲಾ ಆರೋಪಿಗಳಿಗೆ ಚಾರ್ಜ್-ಶೀಟಿನ ಭೌತಿಕ ನಕಲನ್ನು ಸರಬರಾಜು ಮಾಡಲಾಗುವುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. .

ಕಿರುಕುಳವನ್ನು ಮುಂದುವರೆಸುತ್ತಾ, ಚಾರ್ಜ್‌ಶೀಟ್‌ನ ಭೌತಿಕ ನಕಲನ್ನು ಇನ್ನೂ ಮೂವರಿಗೆ ಒದಗಿಸಲಾಗಲಿಲ್ಲ. ಚಾರ್ಜ್‌ಶೀಟ್‌ನ ಮುದ್ರಿತ ನಕಲನ್ನು ಆರೋಪಿಗಳಿಗೆ ಪೂರೈಸಲು ಸರ್ಕಾರದಿ೦ದ ಹಣಕಾಸಿನ ಅನುಮತಿ ಬೇಕು ಎಂದು ಅಕ್ಟೋಬರ್ ೨೧ ರಂದು ವಿಚಾರಣಾ ನ್ಯಾಯಾಧೀಶರ ಮುಂದೆ ಪ್ರಾಸಿಕ್ಯೂಷನ್ ಸಲ್ಲಿಸಿತು. ವಿಚಾರಣಾ ನ್ಯಾಯಾಧೀಶರು ಚಾರ್ಜ್‌ಶೀಟ್ ಪೂರೈಸುವ ಆದೇಶವನ್ನು ಅಂಗೀಕರಿಸಿದ ಒಂದು ತಿಂಗಳ ನಂತರ ಈ ಸಲ್ಲಿಕೆಯನ್ನು ಮಾಡಲಾಗಿದೆ. ಈ ಅವಧಿಯಲ್ಲಿ ಕಾನೂನು ಕ್ರಮ ಜರುಗಿಸಲು ಅನುಮತಿ ಪಡೆಯಲಾಗಲಿಲ್ಲವೇ? ಅದಕ್ಕಿಂತ ಮುಖ್ಯವಾಗಿ, ನೈಸರ್ಗಿಕ ನ್ಯಾಯ ತತ್ವಗಳ ಅನುಸರಣೆಗೆ ಸರ್ಕಾರದ ಅನುಮತಿ ಅಗತ್ಯವಿದೆಯೇ?  ಅದ್ಭುತ, ಅಲ್ಲವೇ?

ವಿಚಾರಣಾ ನ್ಯಾಯಾಧೀಶರು ಈ ಸಲ್ಲಿಕೆಯೊಂದಿಗೆ "ಸ೦ತುಷ್ಟ”ರಾಗದೆ  ಈ ಸಲ್ಲಿಕೆಯನ್ನು ಸರಿಯಾಗಿಯೇ  ತಿರಸ್ಕರಿಸಿದರು. “ಒಮ್ಮೆ ತನಿಖಾ ಸಂಸ್ಥೆ ಚಾರ್ಜ್‌ಶೀಟ್ ಸಲ್ಲಿಸಿದ ನಂತರ, ಅದು ಎಷ್ಟೇ  ದೊಡ್ಡದಾಗಲಿ, ಸ್ವಲ್ಪ ವೇಗದಿ೦ದ ಕ್ರಮ ಕೈಗೊ೦ಡು  ಅದರ ಮುದ್ರಿತ ನಕಲನ್ನು ಪ್ರತಿ ಆರೋಪಿಗಳಿಗೆ  ಒದಗಿಸಬೇಕಾಗುತ್ತದೆ, ಅದು ನ್ಯಾಯಾಲಯದ ನಿರ್ದೇಶನವೂ ಆಗಿತ್ತು. ಈ ಉದ್ದೇಶಕ್ಕಾಗಿ ಹಣದ ಅನುಮತಿ ಅಗತ್ಯವಿರಬಹುದು; ಆದಾಗ್ಯೂ, ಅವರು ಕೂಡಲೇ ಕಾರ್ಯನಿರ್ವಹಿಸಬೇಕಿತ್ತು. ” ಮೂರನೆಯ ಬಾರಿಗೆ ಚಾರ್ಜ್‌ಶೀಟ್‌ನ ಭೌತಿಕ ನಕಲನ್ನು ಪ್ರತಿ ಆರೋಪಿಗಳಿಗೆ ವಿಚಾರಣೆಯ ಮುಂದಿನ ದಿನಾಂಕದ ಮೊದಲು “ತಪ್ಪದೆ” ಪೂರೈಸಬೇಕೆಂದು ನಿರ್ದೇಶಿಸಲಾಯಿತು.

(L to R) Asif Iqbal Tanha, Natasha Narwal and Devangana Kalita. Photo: Facebook/DrSushil Gautam.

ದಾಖಲೆಯ (ಚಾರ್ಜ್ ಶೀಟಿನ) ಗಾತ್ರವನ್ನು ದೊಡ್ಡದು ಮಾಡುವದು ಪ್ರಾಸಿಕ್ಯೂಷನ್ನ್ನಿನ ತೀರ್ಮಾನವಾಗಿತ್ತು. ಅದನ್ನು ಫೋಟೋಕಾಪಿ ಮಾಡಲು ಹಣಕಾಸಿನ ಅನುಮತಿ ಅಗತ್ಯವಿದ್ದರೆ, ಇದೆಲ್ಲ ಸಂಪೂರ್ಣವಾಗಿ ಪ್ರಾಸಿಕ್ಯೂಷನ್‌ನ ಕಾಳಜಿಯಾಗಿದೆ.  ಆದರೆ ಅದು ಆರೋಪಿತ ವ್ಯಕ್ತಿಗಳಿಗೆ ಚಾರ್ಜ್‌ಶೀಟ್ ಪೂರೈಸಲೇಬೇಕು. ೧೭,೦೦೦ ಅಥವಾ ೧೯,೦೦೦ ಪುಟಗಳ ಪ್ರತಿ ತೆಗೆಯುವುದು ಮತ್ತು ಹಣಕಾಸಿನ ಅನುಮತಿ ಪಡೆಯುವುದು ಪ್ರಾಸಿಕ್ಯೂಷನ್ನಿಗೆ ಕಠಿಣ ಕಾರ್ಯ, ಒ೦ದು ಸಮಸ್ಯೆ, ಆಗಬಹುದು, ಆದರೆ ನಾಗರಿಕನಿಗೆ ಅವನ ಅಥವಾ ಅವಳ ಸಾಂವಿಧಾನಿಕ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳುವುದು ಈ ಅಧಿಕಾರಿಗಳಿಗೆ ಸಮಸ್ಯೆಯೆಂದು ತೋರುತ್ತಿಲ್ಲ.

ಚಾರ್ಜ್‌ಶೀಟ್‌ನ ಭೌತಿಕ ನಕಲನ್ನು ಪೂರೈಸುವುದು ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿತು ಮತ್ತು ತನ್ನ  ವಿಚಿತ್ತ್ರ ವರ್ತನೆಯ ಮುಂದುವರಿಕೆಯಾಗಿ, ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ವಿಚಾರಣಾ ನ್ಯಾಯಾಧೀಶರ ಆದೇಶಗಳನ್ನು ಪ್ರಾಸಿಕ್ಯೂಷನ್ ಪ್ರಶ್ನಿಸಿತು. ಈ ಅರ್ಜಿಯನ್ನು ಹೈಕೋರ್ಟ್ ನವೆಂಬರ್ 4 ರಂದು ಎತ್ತಿಕೊ೦ಡು   ಪ್ರಕರಣದ ವಿಚಾರಣೆಯನ್ನು ನವೆಂಬರ್ ೧೦ ರಂದು ತಡೆಹಿಡಿಯಿತು. ಅರ್ಜಿಯು ಹಲವಾರು ಮುಂದೂಡಿಕೆಗಳನ್ನು ಅನುಭವಿಸಿತು ಮತ್ತು ಅಂತಿಮವಾಗಿ ಮಾರ್ಚ್ ೨೩,೨೦೨೧ ರಂದು, ಚಾರ್ಜ್‌ಶೀಟ್‌ನ ಸಂಪೂರ್ಣ ಮುದ್ರಿತ  ನಕಲು ಸಿದ್ಧವಾಗಿದೆ ಮತ್ತು ಅದನ್ನು ವಿಚಾರಣ ನ್ಯಾಯಾಲಯದಿ೦ದ ಪಡೆದುಕೊಳ್ಳಲು  ಆರೋಪಿಗಳು ಸ್ವಾತಂತ್ರ್ಯದಲ್ಲಿದ್ದಾರೆ ಎಂದು ಹೈಕೋರ್ಟ್‌ಗೆ ಸಲ್ಲಿಸಲಾಯಿತು

ಈ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿದೆ. ಸರಿಯಾಗಿ ಹೇಳುವುದಾದರೆ, ೨೦೨೦ ರ ಸೆಪ್ಟೆಂಬರ್ ೧೬ ರಂದು ಸಲ್ಲಿಸಲಾದ ಚಾರ್ಜ್‌ಶೀಟ್ ಅನ್ನು ಆರು ತಿಂಗಳ ಅಂತರದ ನಂತರ ೨೦೨೧ ರ ಮಾರ್ಚ್ ೨೫ ರಂದು ಮಾತ್ರ ದೇವಂಗಾನ, ನತಾಶಾ ಮತ್ತು ಆಸಿಫ್‌ಗೆ  ಲಭ್ಯಗೊಳಿಸಲಾಯಿತು. ಮತ್ತು ಈ ಕಾಲವೆಲ್ಲ ಅವರು ಜೈಲಿನಲ್ಲಿದ್ದಾಗ   ತಮ್ಮ ವಿರುಧ್ಧ ನಿಜವಾದ ಅಪರಾಧದ ಆರೋಪಗಳು ಮತ್ತು ದೋಷಾರೋಪಣೆಗಳನ್ನು ತಿಳಿದುಕೊಳ್ಳದೆ ಇದ್ದರು

ಚಾರ್ಜ್‌ಶೀಟ್ ಮತ್ತು ಸಂಬಂಧಿತ ದಾಖಲೆಗಳಿಲ್ಲದೆ ಜಾಮೀನು ವಿಚಾರಣೆ

ಏತನ್ಮಧ್ಯೆ, ಮೂವರು ಆರೋಪಿಗಳು ಸ್ವತಂತ್ರವಾಗಿ ತನಿಖೆ ಪೂರ್ಣಗೊಳ್ಳಲು ಬಾಕಿ ಉಳಿದಿದ್ದರಿ೦ದ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು,, ಆದರೆ ಅವನ್ನು ತಿರಸ್ಕರಿಸಲಾಯಿತು. ಈ ಕಾಲದಲ್ಲಿ  ಪೊಲೀಸರು ತಮ್ಮ ತನಿಖೆಯನ್ನು ಮುಂದುವರೆಸಿದರು ಮತ್ತು ಮೊದಲ ಪೂರಕ ಚಾರ್ಜ್‌ಶೀಟ್ ಅನ್ನು ನವೆಂಬರ್ ೨೨, 2020 ರಂದು ಮತ್ತು ಎರಡನೇ ಪೂರಕ ಚಾರ್ಜ್‌ಶೀಟ್ ಅನ್ನು ಮಾರ್ಚ್ ೧, ೨೦೨೧ ರಂದು ಸಲ್ಲಿಸಿದರು. ಇದರ ಅರ್ಥವೇನೆಂದರೆ ಒಟ್ಟಾರೆ ತನಿಖೆಗಳು ಪೂರ್ಣಗೊಂಡಿಲ್ಲವಾದರೂ  ಆರಂಭದಲ್ಲಿ ಏನೋ ಒ೦ದು ಅಪರಾಧದ ಆರೋಪ ಹೊತ್ತಿದ್ದ ದೇವಂಗಾನ, ನತಾಶಾ ಮತ್ತು ಆಸಿಫ್‌ರನ್ನು ತನಿಖೆ ಪೂರ್ಣಗೊಳ್ಳುವವರೆಗೆ ಬಂಧಿಸುವದು ಅವಶ್ಯವಾಗಿತ್ತು - ಸರ್ಕಾರದ ದೃಷ್ಟಿಯಲ್ಲಿ.

ಸೈದ್ಧಾಂತಿಕವಾಗಿ, ಪ್ರಾಸಿಕ್ಯೂಷನ್ ಮೂರನೇ, ನಾಲ್ಕನೇ ಮತ್ತು ಐದನೇ ಪೂರಕ ಚಾರ್ಜ್‌ಶೀಟ್ ಸಲ್ಲಿಸುವುದನ್ನು ತಡೆಯಲು ಏನೂ ಇಲ್ಲ, ಏಕೆಂದರೆ ತನಿಖೆಗಳು ಇನ್ನೂ ಒಂದು ಅಥವಾ ಎರಡು ವರ್ಷಗಳವರೆಗೆ ಮುಂದುವರಿಯಬಹುದು,  ಮತ್ತು ‘ಜೈಲಿನಲ್ಲಿರುವ ಆರೋಪಿಗಳು ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.’ ಎನ್ನುವದನ್ನು ಬಂಧನವನ್ನು ಮುಂದುವರೆಸಲು  ಪ್ರಾಸಿಕ್ಯೂಷನ್ ಆಧಾರವಾಗಿ ಬಳಸಬಹುದು. ವಾಸ್ತವವಾಗಿ, ಇದನ್ನು ಪ್ರಾಸಿಕ್ಯೂಷನ್ ಮಾಡಿದ ಸಲ್ಲಿಕೆ (ಸ್ಪಷ್ಟ ಪದಗಳಲ್ಲಿಲ್ಲದಿದ್ದರೂ) ಎಂದು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ, "ಹೆಚ್ಚಿನ ತನಿಖೆಗೆ ಸಂಬಂಧಿಸಿದಂತೆ, ಎಲ್ಲಾ ಅಪರಾಧಿಗಳನ್ನು ಬಂಧಿಸುವವರೆಗೆ ಮತ್ತು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುವವರೆಗೂ ಇದು (ತನಿಖೆ)ಇನ್ನೂ ನಡೆಯುತ್ತಿದೆ ಎಂದು [ಪ್ರಾಸಿಕ್ಯೂಷನ್] ಗಮನಸೆಳೆದಿದೆ" ಎಂದು ಹೇಳಲಾಗಿದೆ.

ಯಾರ ವಿರುದ್ಧ ತನಿಖೆ ಪೂರ್ಣಗೊಂಡಿದೆಯೋ ಮತ್ತು ಚಾರ್ಜ್‌ಶೀಟ್ ಸಲ್ಲಿಸಲಾಗಿದೆಯೋ ಅವರು “ಎಲ್ಲ ದುಷ್ಕರ್ಮಿಗಳನ್ನು ಬಂಧಿಸಿ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುವವರೆಗೆ” ಜೈಲಿನಲ್ಲಿ ಯಾಕೆ ಉಳಿಯಬೇಕು? ಅವರ ಪ್ರಕರಣವನ್ನು ಬೇರ್ಪಡಿಸಲು ಮತ್ತು ಅಧ್ಯಾಯವನ್ನು ಅವರಿಗೆ ಸಂಬಂಧಪಟ್ಟಂತೆ ಮುಚ್ಚಲು ಸಾಧ್ಯವಿಲ್ಲವೇ? ಹೆಚ್ಚಿನ, ಮು೦ದುವರೆದ  ತನಿಖೆಯಲ್ಲಿ ಹೆಚ್ಚಿನ ಸಂಗತಿಗಳು ಬಹಿರಂಗವಾದಾಗ ಇತರರ ವಿರುದ್ಧ ಪೂರಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಬಹುದು, ಆದರೆ ಇವರನ್ನು (ಅ೦ದರೆ ಈ ಲೇಖನದ ಮೂರು ಆಪಾದಿತರನ್ನು) ಏಕೆ ದ೦ಡಿಸಬೇಕು?

ಅದಿರಲಿ, ಚಾರ್ಜ್‌ಶೀಟ್ ಸಲ್ಲಿಸುವ ಮೊದಲು ಜಾಮೀನು ಅರ್ಜಿಗಳನ್ನು ಸಲ್ಲಿಸಲಾಯಿತು ಮತ್ತು ಅದರ ದಾಖಲಾತಿಯನ್ನು ತೆಗೆದುಕೊಳ್ಳಲಾಯಿತು. ಅವುಗಳನ್ನು ತಿರಸ್ಕರಿಸಲಾಯಿತು. ಆದರೆ ಅದಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ, ಚಾರ್ಜ್‌ಶೀಟ್ ಸಲ್ಲಿಸಿದ ನಂತರ ಮತ್ತು ಅದರ ದಾಖಲಾತಿ ತೆಗೆದುಕೊಂಡ ನಂತರ ಸಹ ಜಾಮೀನು ಅರ್ಜಿಯನ್ನು ಸಲ್ಲಿಸಲಾಯಿತು. ಈ ಅರ್ಜಿಗಳನ್ನೂ ವಿಚಾರಣಾ ನ್ಯಾಯಾಧೀಶರು ತಿರಸ್ಕರಿಸಿದರು (೨೦೨೧ ರ ಜನವರಿ ೨೮ ರಂದು ದೇವಂಗಾನ ಮತ್ತು ನತಾಶಾ ಮತ್ತು ಅಕ್ಟೋಬರ್ ೨೬, ೨೦೨೦ ರಂದು ಆಸಿಫ್ ಪ್ರಕರಣದಲ್ಲಿ).

ವಿಷಯದ ಜಾಮೀನು ಅರ್ಜಿಗಳನ್ನು ಸಲ್ಲಿಸಿದಾಗ ಮತ್ತು ತೀರ್ಮಾನಿಸಿದಾಗ, ಪ್ರಾಸಿಕ್ಯೂಷನ್ ಮತ್ತು ವಿಚಾರಣಾ ನ್ಯಾಯಾಧೀಶರು ಚಾರ್ಜ್‌ಶೀಟ್‌ನ ನಕಲನ್ನು ಹೊಂದಿದ್ದರು ಆದರೆ ಆರೋಪಿಗಳು, ಕಾನೂನುಬದ್ಧ ಶಾಸನಬದ್ಧ ಬೇಡಿಕೆಯ ಹೊರತಾಗಿಯೂ, ಅದನ್ನು ಹೊ೦ದಿರಲಿಲ್ಲ. ಮೂವರು ಆರೋಪಿಗಳು ತಮ್ಮ ವಿರುದ್ಧದ ಆರೋಪಗಳು ಮತ್ತು ಆರೋಪಗಳನ್ನು ತಿಳಿಯದೆ ಜಾಮೀನು ಅರ್ಜಿಯನ್ನು ವಾದಿಸಬೇಕಾಗಿತ್ತು. ನೆನಪಿಡಿ, ಚಾರ್ಜ್-ಶೀಟ್ ಅನ್ನು ಸಿಆರ್ ಪಿ ಸಿಯ ಸೆಕ್ಷನ್ ೨೦೭ ರ ಪ್ರಕಾರ ಮಾರ್ಚ್ ೨೫, ೨೦೨೧ ರಂದು ಮಾತ್ರ ಅವರಿಗೆ ಸರಬರಾಜು ಮಾಡಲಾಗಿದೆ. ಪೆನ್ ದ್ರೈವ್ ಮಾಧ್ಯಮದಲ್ಲಿ ಚಾರ್ಜ್-ಶೀಟ್ ಸರಬರಾಜು ಮಾಡಿದ್ದು ಅರ್ಥಹೀನವಾಗಿತ್ತು. 

ಮತ್ತೊಂದೆಡೆ, ಪ್ರಾಸಿಕ್ಯೂಷನ್ ಮತ್ತು ವಿಚಾರಣಾ ನ್ಯಾಯಾಧೀಶರು ಇಬ್ಬರೂ ಚಾರ್ಜ್‌ಶೀಟ್‌ನ ನಕಲನ್ನು ಹೊಂದುವಲ್ಲಿ ಅತ್ಯ೦ತ ಅನ್ಯಾಯದ ಅನುಕೂಲವನ್ನು ಹೊಂದಿದ್ದರು.  ಚಾರ್ಜ್‌ಶೀಟ್‌ನ ವಿಷಯಗಳನ್ನು ತಿಳಿಯದ ಆರೋಪಿಗಳ ವಿರುದ್ಧದ ವಸ್ತುಗಳನ್ನು ಬಳಸಲು ಅರ್ಹರಾಗಿದ್ದರು, ಮತ್ತು ಬಳಸುತ್ತಿದ್ದರು.  ಅಜ್ಞಾತ ಸಾಕ್ಷಿದಾರ ಬೀಟಾ, ಡೆಲ್ಟಾ, ಎಕೋ, ಗುರು, ಸ್ಮಿತ್, ಜಾನಿ ಮತ್ತು ಗಾಮಾ ಅವರ ಹೇಳಿಕೆಗಳೂ ಅವರ ಜ್ಞಾನದೊಳಗಿದ್ದವು,ಮತ್ತು ಸ್ಪಷ್ಟವಾಗಿ ಅವರ ಮೇಲೆ ಪ್ರಭಾವ ಬೀರುತ್ತಿತ್ತು.  ಇವೆಲ್ಲ ಆರೋಪಿಗಳ ವಿರುದ್ಧ ಬಳಸಲ್ಪಟ್ಟವು. ಇ೦ತಹ ವಾಸ್ತವಿಕ ಪರಿಸ್ಥಿತಿ ಮೂವರು ಆರೋಪಿಗಳ ವಿರುದ್ಧ  ಆಗಿತ್ತು ಮತ್ತು ಈ ಸಂದರ್ಭಗಳಲ್ಲಿ ಜಾಮೀನು ಅರ್ಜಿಯನ್ನು ಅನುಮತಿಸಲಾಗುವುದು ಎಂದು ಅವರು ಖಂಡಿತವಾಗಿಯೂ ನಿರೀಕ್ಷಿಸಲು ಅವಕಾಶವಿದ್ದಿಲ್ಲ.  ಜಾಮೀನು ಅರ್ಜಿಯ ವಿಚಾರಣೆಯನ್ನು ಅವರು ತಮ್ಮ ಕೈಗಳನ್ನು  ಬೆನ್ನಿನ ಹಿಂದೆ ಕಟ್ಟಿಕೊಂಡು, ಎಲ್ಲಾ ಅನಾನುಕೂಲತೆಗಳನ್ನು ಎದುರಿಸಿ,  ‘ಸಶಸ್ತ್ರ’ ಬಲಹೊ೦ದಿದ ಪ್ರಾಸಿಕ್ಯೂಷನ್ನಿನ ವಿರುದ್ಧಹೋರಾಡಬೇಕಾಯಿತು.

  ವೈಯಕ್ತಿಕ ಸ್ವಾತಂತ್ರ್ಯದ ವಿಷಯಗಳಲ್ಲಿ ನ್ಯಾಯದ ಅರ್ಥವೇನು? ನ್ಯಾಯ ಮುಖ್ಯವೇ?

ಜಾಮೀನು ನಿರಾಕರಣೆಯಿಂದಾಗಿ ಮೂವರು ಆರೋಪಿಗಳು ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ  ಮೇಲ್ಮನವಿ ಸಲ್ಲಿಸಿದರು ಮತ್ತು ಇದು ೨೦೨೧ ರ ಜೂನ್ ೧೫ ರ ತೀರ್ಪು ಮತ್ತು ಆದೇಶದ ಮೂಲಕ ತೀರ್ಮಾನಕ್ಕೆ ಬಂದಿತು  ಮತ್ತು ಕೂಡಲೇ ಅನುಸರಣೆಗಾಗಿ ವಿಚಾರಣಾ ನ್ಯಾಯಾಧೀಶರಿಗೆ ಮಾಹಿತಿಯನ್ನು ಕಳುಹಿಸಬೇಕೆಂದು ಹೈಕೋರ್ಟ್ ನಿರ್ದೇಶಿಸಿತು.

 

ಇಷ್ಟೆಲ್ಲವಾದರೂ, ಪ್ರಾಸಿಕ್ಯೂಷನ್ ಮತ್ತು ಪೊಲೀಸರು ಆರೋಪಿಗಳನ್ನು ಬಿಡುಗಡೆ ಮಾಡಲು ಅನಗತ್ಯ ಮತ್ತು ಅವಿವೇಕದ ವಿಳಂಬವನ್ನು ಉಂಟುಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಿದರು. ಬಹುಶಃ, ಪ್ರಾಸಿಕ್ಯೂಷನ್ ಮತ್ತು ಪೊಲೀಸರು, ತಾವು ಕಾನೂನಿಗಿ೦ತ  ಮೇಲಿದ್ದೇವೆ ಎಂದು ನಂಬುತ್ತಾರೆ. ಈ ವರ್ತನೆ ದುರುದ್ದೇಶಿತ, ಕಲುಷಿತ.

ಜಾಮೀನಿನ ವಿಷಯದಲ್ಲಿ ಸೋಲು ಪಡೆದ ಪೊಲೀಸರು ವಿಳ೦ಬದ ನೀತಿಯನ್ನು ಅನುಸರಿಸಲು ತೀರ್ಮಾನಿಸಿದರು. ಮೊದಲು, ಮೂವರು ಆರೋಪಿಗಳ ವಿಳಾಸವನ್ನು ಪರಿಶೀಲಿಸಬೇಕಾಗಿದೆ ಎಂದು ಸಂಬಂಧಪಟ್ಟ ನ್ಯಾಯಾಧೀಶರ ಮುಂದೆ ಸಲ್ಲಿಸಲಾಯಿತು.ನಂಬಿರಿ ಅಥವಾ ಬಿಡಿರಿ, ಈ ಮೂವರು ಆರೋಪಿಗಳನ್ನು ತಲಾ ಒಂದಕ್ಕಿಂತ ಹೆಚ್ಚು ಬಾರಿ ಬಂಧಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿದ್ದರು ಮತ್ತು ಇನ್ನೂ ಪೊಲೀಸರಿಗೆ ಅವರ ವಿಳಾಸವನ್ನು ಪರಿಶೀಲಿಸಲು ಸಮಯವಿದ್ದಿಲ್ಲ ಇದನ್ನು ನ೦ಬ ಬಹುದೇ? .ದೇವಂಗನಾ ವಿಷಯದಲ್ಲಿ, ರಾಜಧಾನಿ ರೈಲಿನಲ್ಲಿ ಅಸ್ಸಾಂಗೆ ಕರೆದೊಯ್ಯಲು ಪೊಲೀಸರು ಬಯಸಿದ್ದರು - ಕೇವಲ ಸಮಯ ಹರಣ ಯುಕ್ತಿ.  ನಂತರ ಪೊಲೀಸರು ಎಲ್ಲರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಲು ಬಯಸಿದ್ದಾರೆ ಮತ್ತು ಅದಕ್ಕಾಗಿ ಸ೦ಬ೦ಧಿಸಿದ ಪ್ರಾಧಿಕಾರವನ್ನು  ಸಂಪರ್ಕಿಸಬೇಕಾಗಿದೆ ಎಂದು ಹೇಳಿದರು. ಆರೋಪಿಗಳಿಗೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಮಾಡುವದು ಏನು?

 

ಇದೆಲ್ಲ ಆದ ನಂತರ ಜಾಮೀನುದಾರರ ಪರಿಶೀಲನೆ.  ಮಾಜಿ ಸಂಸತ್ ಸದಸ್ಯ (ರಾಜ್ಯಸಭೆ) ಬೃಂದಾ ಕರತ್ ಅವರು ನತಾಶಾ ಅವರಿಗೆ ಜಾಮೀನು ನೀಡಿದ್ದರು. ಇವರು ಸರ್ವ ಪರಿಚಿತರಾದರೂ, ‘ಇವರು ಯಾರು ? ಇವರ ವಿಳಾಸ ಏನು ? ಅವರ ಬಳಿ ಆಧಾರ್ ಕಾರ್ಡ್ ಇದೆಯೇ? ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು?’ ಪೊಲೀಸರಿಂದ ಸಂಪೂರ್ಣವಾಗಿ ಮನಸ್ಸಿಗೆ ಬ೦ದ೦ತೆ ಕಾಲಹರಣದ ವಿಧಾನಗಳು.  ಕರಾತ್ ಹೇಳಬೇಕಾಗಿರುವುದು ಇದನ್ನೇ: “ನಾನು ಇಡೀ ದಿನ (ವಿಚಾರಣೆ) ನ್ಯಾಯಾಲಯದಲ್ಲಿದ್ದೆ ಮತ್ತು ದೆಹಲಿ ಪೊಲೀಸರು… ಯುಎಎಪಿಎ ಬಂಧನಸ್ಥರಿಗೆ  ಜಾಮೀನು ನೀಡುವ ದೆಹಲಿ ಹೈಕೋರ್ಟ್ ತೀರ್ಪನ್ನು ಮಟ್ಟಹಾಕಲು ಮತ್ತು ಹಾಳುಮಾಡಲು ಎಲ್ಲವನ್ನು ಮಾಡಿದ್ದ ನಾಚಿಕೆಗೇಡಿನ ದಿನ ಇ೦ದು. ನತಾಶಾ ಅವರಪರ ನನ್ನ  ಜಾಮೀನನ್ನು ದೆಹಲಿ ಪೊಲೀಸರು ಎರಡು ಬಾರಿ ಪರಿಶೀಲಿಸಿದರು - ನಿನ್ನೆ ಒಮ್ಮೆ ಮತ್ತು ನಂತರ ಇಂದು ಬೆಳಿಗ್ಗೆ - ಅವರು ಇತರರೊಂದಿಗೆ ಮಾಡಿದಂತೆ. ಇದರ ಹೊರತಾಗಿಯೂ, ಅವರ ಪರಿಶೀಲನೆ ಇನ್ನೂ ಅಪೂರ್ಣವಾಗಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ. ಈ ತರದ ಪೋಲಿಸ್ ವರ್ತನೆ ಕಲ್ಪನಾತೀತವೇ ಸರಿ”.

ಈ ಇಡೀ ಪ್ರಸಂಗದ ಬಗ್ಗೆ ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರು (ನ್ಯಾಯಮೂರ್ತಿ ಜಸ್ಪಾಲ್ ಸಿಂಗ್)  ಹೇಳಿದರು:  “೧೯೬೪ ರಿಂದ ನ್ಯಾಯಾಂಗ ಅಧಿಕಾರಿಯಾಗಿ ಮತ್ತು ಎಂಟು ವರ್ಷಗಳ ಕಾಲ ಹೈಕೋರ್ಟ್ ನ್ಯಾಯಾಧೀಶರಾಗಿ, ಜಾಮೀನು ಬಾಂಡ್ ಅನ್ನು ಪರಿಶೀಲಿಸಲು ಅಥವಾ ಜಾಮೀನು ಪರಿಶೀಲಿಸಲು ಮ್ಯಾಜಿಸ್ಟ್ರೇಟ್ ಪೊಲೀಸರನ್ನು ಕೇಳಿದ್ದನ್ನು ನಾನು ನೋಡಿಲ್ಲ. ಜಾಮೀನುದಾರನು ಆರೋಪಿಗಳ ಮೇಲೆ ಸರಿಯಾದ ನಿಯಂತ್ರಣ ಹೊಂದಿದ್ದಾನೆಯೇ ಎಂದು ನ್ಯಾಯಾಲಯಗಳು ನೋಡುತ್ತವೆ. ಆದ್ದರಿಂದ ಅವನು ಪರಾರಿಯಾಗುವುದಿಲ್ಲ. ಇದು ಸಂಪೂರ್ಣವಾಗಿ ನ್ಯಾಯಾಲಯದ ಕ್ಷೇತ್ರದಲ್ಲಿದೆ. ”

ದೆಹಲಿ ಹೈಕೋರ್ಟ್‌ನಲ್ಲಿ ನಾನಿದ್ದಾಗ,  ಖಾಸಗಿ ವಿಷಯಗಳನ್ನು ಬದಿಗಿಟ್ಟು  ಸ್ವ೦ತ ನಿಮಿಷಗಳ ಕಾಲ ತ್ಯಾಗ ಮಾಡಿ  , ಇದರಿಂದಾಗಿ ಜಾಮೀನು ಆದೇಶವನ್ನು ತಕ್ಷಣ ರವಾನಿಸಬಹುದು ಮತ್ತು ಜೈಲಿನ ಗೇಟ್‌ಗಳು ಮುಚ್ಚುವ ಮೊದಲು ಕೈದಿಯನ್ನು ಬಿಡುಗಡೆ ಮಾಡಲಾಗುವುದು ಎನ್ನುವ ಹುರುಪಿನಿ೦ದ ಆದೇಶ ಹೊರ ಪಡಿಸುವ ಸಮಯಗಳಿದ್ದವು. ಜಾಮೀನು ಆದೇಶದಲ್ಲಿ ಅದನ್ನು ತಕ್ಷಣವೇ ಪಾಲಿಸಬೇಕು ಎಂದು ನಿರ್ದಿಷ್ಟಪಡಿಸುವ ಅಗತ್ಯವಿಲ್ಲ. ಈ ಅಭ್ಯಾಸವು ಇಂದಿಗೂ ಮುಂದುವರೆದಿದೆ ಎಂದು ನಾನು ನಂಬುತ್ತೇನೆ, ಈಗ ಗೌರವಾನ್ವಿತ ನ್ಯಾಯಾಧೀಶರು ತಕ್ಷಣದ ಅನುಸರಣೆಯನ್ನು ವಿಶೇಷ ಸೂಚನೆಯಾಗಿ ನಿರ್ದೇಶಿಸಬೇಕಾಗಿದೆ. ಈ ರೀತಿಯ ನಿರ್ದೇಶನವನ್ನು ಸಹ ಪೊಲೀಸರು ಮತ್ತು ಪ್ರಾಸಿಕ್ಯೂಷನ್ ತಮಗೆ ಮನತೋರಿದ೦ತೆ  ಕಡೆಗಣಿಸುತ್ತಿದ್ದಾರೆ!

 

 ಪೋಲಿಸ್ ಮತ್ತು ಪ್ರಾಸಿಕ್ಯೂಷನ್ ಇಷ್ಟು ಅಧೋಗತಿಗೆ ಮುಳುಗಲು ಸಾಧ್ಯವೇ? ನ್ಯಾಯಾಲಯದ ನಿ೦ದನೆ ಅಲ್ಲದಿದ್ದರೆ ಕನಿಷ್ಟ ಮಟ್ಟಿಗೆ, ನ್ಯಾಯಾಲಯದ ಅಗೌರವ, ಈ ‘ಶಕ್ತಿ ಪ್ರದರ್ಶನ’ ದಲ್ಲಿ  ಕ೦ಡುಬರುವದಿಲ್ಲವೆ ?

ದೇವಂಗಾನ, ನತಾಶಾ ಮತ್ತು ಆಸಿಫ್ ಬಿಡುಗಡೆಯಾಗುವ ಮೊದಲು  ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲೇ ಬೇಕು ಎಂಬ ಹಠ  ಪೊಲೀಸರ ವರ್ತನೆ ಸೂಚಿಸುತ್ತದೆ. ಅವರು ಮೇಲ್ಮನವಿ ಸಲ್ಲಿಸಲು ಅರ್ಹರಾಗಿದ್ದಾರೆ, ಆದರೆ  ಇಷ್ಟುಅನಾವಶ್ಯಕ  ಆತುರದಿ೦ದ ? ಅವರು ಬಿಡುಗಡೆಯನ್ನು ಸ್ಥಗಿತಗೊಳಿಸಲು ಮತ್ತು ರಾತ್ರಿಯಿಡೀ ಮನವಿಯನ್ನು ಸಿದ್ಧಪಡಿಸಲು ಮತ್ತು ಅದನ್ನು ಸಲ್ಲಿಸಲು ಸಿದ್ಧಗೊಳಿಸಲು ಎಲ್ಲ ತ೦ತ್ರ ಯುಕ್ತಿಗಳನ್ನು   ಬಳಸಿದರು.

ಪ್ರಕರಣಗಳ ವಿಚಾರಣೆ ಅತ್ಯ೦ತ ಮ೦ದಗತಿಯಿ೦ದ ನಡೆದಿದೆ. . ಪ್ರಾಸಿಕ್ಯೂಷನ್ ಈವರೆಗೆ ಒಬ್ಬ ಸಾಕ್ಷಿಯನ್ನು ಪರೀಕ್ಷಿಸಿಲ್ಲ. ಕಾರಣ ತನಿಖೆ ಪೂರ್ಣಗೊಂಡಿಲ್ಲ. ಅದು ಯಾವಾಗ ಪೂರ್ಣಗೊಳ್ಳುತ್ತದೆ? ಯಾರಿಗೂ ತಿಳಿದಿಲ್ಲ ಮತ್ತು ಅಲ್ಲಿಯವರೆಗೆ ಅವರಲ್ಲಿ ಕೆಲವರು ಕೈದಿಗಳಂತೆ ಜೈಲಿನಲ್ಲಿಯೇ ಇರುತ್ತಾರೆ.  ಪ್ರಕರಣದ ವಿಚಾರಣೆಬೇಗನೆ ಪ್ರಾರಂಭವಾಗುತ್ತದೆ ಎಂದೇ ಊಹಿಸಿ. ಅದು ಯಾವಾಗ ಮುಕ್ತಾಯವಾಗುತ್ತದೆ? ಯಾರಿಗೂ ತಿಳಿದಿಲ್ಲ. ಪ್ರಾಸಿಕ್ಯೂಷನ್ ೭೪೦ ಸಾಕ್ಷಿಗಳನ್ನು ಉಲ್ಲೇಖಿಸಿದೆ. ಪ್ರತಿದಿನ ಒಬ್ಬ ಸಾಕ್ಷಿಯನ್ನು ಪರೀಕ್ಷಿಸಿದರೆ, ವಿಚಾರಣೆಯನ್ನು ಮುಕ್ತಾಯಗೊಳಿಸಲು ಇನ್ನೂ ಮೂರು ವರ್ಷಗಳು ಬೇಕಾಗುತ್ತದೆ. 

ಐಸಿ ಭಿ ಕ್ಯಾ ಜಲ್ಡಿ ಹೈ?  ಏನಿಷ್ಟು ಅರ್ಜೆ೦ಟ್ ?

 

  ಅಪರಾಧ ನ್ಯಾಯ ವ್ಯವಸ್ಥೆಯಲ್ಲಿನ ಪ್ರಕ್ರಿಯೆಗಳನ್ನು ಫುಟ್ಬಾಲ್ ಚೆ೦ಡಾಟವಾಗಿಸಿದ್ದಾರೆ ಇವರು. ಸ್ಪಷ್ಟವಾಗಿ, ಕೆಲವು ವಿಧಗಳಲ್ಲಿ ಪ್ರಕ್ರಿಯೆಯ ನ್ಯಾಯದ ಮಾಪಕಗಳು ರಾಜ್ಯದ ಆಡಳಿತದ, ಪೋಲೀಸು ವ್ಯವಸ್ಥೆಯ ಪರವಾಗಿ ಹೆಚ್ಚು ತೂಕ ಹೊ೦ದಿವೆ.   ಬಲಿಪಶುಗಳು ನಿಮ್ಮ ಮತ್ತು ನನ್ನಂತಹ ಸಾಮಾನ್ಯ ಜನರು - ಸವಲತ್ತು ಪಡೆದ ಕೆಲವರಲ್ಲ. ಅದಕ್ಕಾಗಿಯೇ ಜನರು ಅಮಾನವೀಯ ಪರಿಸ್ಥಿತಿಗಳಲ್ಲಿ ಕೈದಿಗಳಂತೆ ವರ್ಷಗಟ್ಟಲೆ ಜೈಲಿನಲ್ಲಿ ಕಳೆಯುತ್ತಾರೆ. ನಮ್ಮ ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳಲ್ಲಿನ ಈ ಬಿರುಕುಗಳ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ನಾವು ನಾಗರಿಕರ ಘನತೆಯ ಬಗ್ಗೆಯೂ ಯೋಚಿಸಬೇಕು. 

ವಿಶ್ರಾ೦ತಿಯ ಸಮಯವಲ್ಲ ಈಗಿನ್ನೂ. ನಾವು  ಹೋಗಲು ಮೈಲಿಗಳಿವೆ. ನಾವು  ಹೋಗಲು ಮೈಲಿಗಳಿವೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು