ಬುಧ್ಧಿಜೀವಿಗಳ ಹೊಣೆ -
ನೋಮ್ ಚೊಮ್ಸ್ಕಿಯ ಶಾಶ್ವತವಾದ ಕೊಡುಗೆ
ಫೆಬ್ರವರಿ ೧೯೬೭ ರಲ್ಲಿ ನ್ಯೂಯಾರ್ಕ್ ರಿವ್ಯೂ ಆಫ್ ಬುಕ್ಸ್ ಪತ್ರಿಕೆಯಲ್ಲಿ 'ಬುದ್ಧಿಜೀವಿಗಳ ಜವಾಬ್ದಾರಿ' ಲೇಖನದ ಪ್ರಕಟಣೆಯೊಂದಿಗೆ, ವಿಯೆಟ್ನಾಂನಲ್ಲಿನ ಯುದ್ಧದ ಪ್ರಮುಖ ವಿಮರ್ಶಕರಾಗಿ ನೋಮ್ ಚೋಮ್ಸ್ಕಿ ಅಮೆರಿಕದ ರಾಜಕೀಯ ರಂಗಕ್ಕೆ ಹೊಳೆದು ಬ೦ದರು. 'ಬುದ್ಧಿಜೀವಿಗಳ ಜವಾಬ್ದಾರಿ' ವಿಯೆಟ್ನಾಂ ಅವಧಿಯ 'ಯುದ್ಧ ವಿರೋಧಿ ಸಾಹಿತ್ಯದ ಏಕೈಕ ಅತ್ಯಂತ ಪ್ರಭಾವಶಾಲಿ ತುಣುಕು' ಎಂದು ಸೂಕ್ತವಾಗಿ ವರ್ಣಿಸಲಾಗಿದೆ.
೧೯೬೦ಯ ದಶಕದ ಅಂತ್ಯದ ವೇಳೆಗೆ, ಚೋಮ್ಸ್ಕಿ ಇನ್ನೂ ನವೀನವಾದ ಯುದ್ಧ ವಿರೋಧಿ ಚಳವಳಿಯಲ್ಲಿ ಭಾಗಿಯಾಗಿದ್ದರು. ಅಂದಿನಿಂದ, ಚೋಮ್ಸ್ಕಿ ಪ್ರಮುಖ ಸಾರ್ವಜನಿಕ ಬುದ್ಧಿಜೀವಿ, ನೂರಾರು ಪ್ರಬಂಧಗಳು ಮತ್ತು ಡಜನ್ಗಟ್ಟಲೆ ಪುಸ್ತಕಗಳನ್ನು ಪ್ರಕಟಿಸಿದರು ಮತ್ತು ಸಾವಿರಾರು ಸ೦ಭಾಷಣೆಗಳು ಮತ್ತು ಸಂದರ್ಶನಗಳನ್ನು ನೀಡಿದರು. ೨೦೦೪ ರ ಹೊತ್ತಿಗೆ, ನ್ಯೂಯಾರ್ಕ್ ಟೈಮ್ಸ್ ಸಹ -(ಈ ಪತ್ರಿಕೆ ಚೋಮ್ಸ್ಕಿಯ ರಾಜಕೀಯ ಬರಹಗಳ ದೊಡ್ಡ ಅಭಿಮಾನಿಯಲ್ಲವಾದರೂ) - 'ಪುಸ್ತಕ ಮಾರಾಟವೇ ಮಾನದಂಡವಾಗಿದ್ದರೆ, ಅವರು ಇಂದು ವಿದೇಶಾಂಗ ನೀತಿಯ ಬಗ್ಗೆ ಧರೆಯಲ್ಲಿಅತ್ಯ೦ತ ಹೆಚ್ಚು ಓದಲ್ಪಟ್ಟ ಅಮೆರಿಕನ್ ಧ್ವನಿಯಾಗಿರಬಹುದು' ಎಂದು ಒಪ್ಪಿಕೊಳ್ಳಬೇಕಾಗಿಯಿತು. ತಮ್ಮ ೯೨ನೇ ವಯಸಿನಲ್ಲಿ, ಚೋಮ್ಸ್ಕಿ ಈಗಲೂ ತಮ್ಮ ಕಾರ್ಯಗಳನ್ನು ಮು೦ದುವರಿಸುತ್ತಿದ್ದಾರೆ.
ಚೋಮ್ಸ್ಕಿಯ ರಾಜಕೀಯ ವ್ಯಾಖ್ಯಾನವು ಇಂಡೋಚೈನಾ, ಲ್ಯಾಟಿನ್ ಅಮೆರಿಕ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆದ ಯುಎಸ್ ಯುದ್ಧಗಳಿಂದ ಹಿಡಿದು ಪಾಶ್ಚಿಮಾತ್ಯ ರಾಜಕೀಯ ಮತ್ತು ಆರ್ಥಿಕ ನೀತಿಯ ವಿಶ್ಲೇಷಣೆಯನ್ನು ಅತಿ ವಿಶಾಲವಾಗಿ ಒಳಗೊಳ್ಳುತ್ತದೆ.
(ಯುದ್ಢ ವಿರೋಧಿ ಪ್ರದರ್ಶನಕಾರರು)
ಆಧುನಿಕ ಪ್ರಜಾಪ್ರಭುತ್ವಗಳಲ್ಲಿ ಮಾಧ್ಯಮದ ವಿಶೇಷ ಪಾತ್ರ - ಕೆಲವು ಅಭಿಪ್ರಾಯಗಳು ಮತ್ತು ವಿಷಯಗಳನ್ನು ಕಾರ್ಯಸೂಚಿಯಿಂದ ದೂರವಿರಿಸುವ ಮೂಲಕ ಮಾಧ್ಯಮಗಳು ಹೇಗೆ 'ಒಪ್ಪಿಗೆಯನ್ನು ತಯಾರಿಸುತ್ತಾರೆ'’ ಎಂಬುದರ ಕುರಿತು - ಅವರು ಯಶಸ್ಸ್ವಿಯಾಗಿ ವಿಶ್ಲೇಷಿಸಿದ್ದಾರೆ.. ಈ ಎಲ್ಲಾ ರಾಜಕೀಯ ಚಟುವಟಿಕೆಗಳು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭಾಷಾಶಾಸ್ತ್ರಜ್ಞನಾಗಿ ಚೋಮ್ಸ್ಕಿಯವರ ಕೆಲಸಕ್ಕೆ ಸಮಾನಾಂತರವಾಗಿ ನಡೆದಿವೆ. ಅಲ್ಲಿ ಅವರು ಭಾಷೆ ಮತ್ತು ಮನಸ್ಸಿನ ಅಧ್ಯಯನದಲ್ಲಿ ಕ್ರಾಂತಿಯುಂಟುಮಾಡಿದರು, ಭಾಷಾಶಾಸ್ತ್ರದ ಮೇಲೆ ಮಾತ್ರವಲ್ಲದೆ ಮಾನಸಿಕ ರಚನೆಯ ಅಧ್ಯಯನವನ್ನು ಪುನರುಜ್ಜೀವಿಸಿ ಮನೋವಿಜ್ಞಾನ ಮತ್ತು ತತ್ತ್ವಶಾಸ್ತ್ರಗಳ ಮೇಲೂ ಆಳವಾದ ಪ್ರಭಾವ ಬೀರಿದರು.
೨೦೧೯ ರಲ್ಲಿ,ಆರು ಲೇಖಕರು ನೋಮ್ ಚೋಮ್ಸ್ಕಿ ಮತ್ತು ಇತರರು ಬರೆದ ಬುದ್ಧಿಜೀವಿಗಳ ಜವಾಬ್ದಾರಿ - ೫೦ ವರ್ಷಗಳ ನಂತರ ಆಲೋಚನೆಗಳು ಎನ್ನುವ ಹೊತ್ತಿಗೆಯನ್ನು (ಯೂನಿವರ್ಸಿಟಿ ಕಾಲೇಜ್ ಪ್ರೆಸ್ ಲಂಡನ್ ಪ್ರಕಟಿಣೆ) ಹೊರತಂದರು. ಪುಸ್ತಕವು ಚೋಮ್ಸ್ಕಿಯಿಂದ ಮೂರು ಕೊಡುಗೆಗಳನ್ನೂ ಹೊಂದಿದೆ.
ಚೋಮ್ಸ್ಕಿಯ ಅತ್ಯುತ್ಕೃಷ್ಟ ಪ್ರಬಂಧವು ಅಸತ್ಯವನ್ನು, ಪ್ರಚಾರವನ್ನು ಉತ್ಪಾದಿಸುವ ಮೂಲಕ ಅಥವಾ ರಾಜ್ಯಾಧಿಕಾರದ ಅಪರಾಧಗಳಿಗೆ ಹುಸಿ ವೈಜ್ಞಾನಿಕ ಸಮರ್ಥನೆಗಳನ್ನು ನೀಡುವ ಮೂಲಕ ಪ್ರಬಲರ ಹಿತಾಸಕ್ತಿಗಳನ್ನು ಕಾಪಾಡುವ ಎಲ್ಲಾ ರೀತಿಯ ತಜ್ಞರು, ತಂತ್ರಜ್ಞರು ಮತ್ತು ಬುದ್ಢಿಜೀವಿಗಳ ಮೇಲಿನ ಆಕ್ರಮಣವಾಗಿದೆ.
'ಸತ್ಯವನ್ನು ಮಾತನಾಡುವುದು ಮತ್ತು ಸುಳ್ಳನ್ನು ಬಹಿರಂಗಪಡಿಸುವುದು ಬುದ್ಧಿಜೀವಿಗಳ ಜವಾಬ್ದಾರಿ.' ಇದು ಮೂಲ ಪ್ರಬ೦ಧದ ತಿರುಳು.
‘ಬುದ್ಧಿಜೀವಿಗಳು ಸತ್ಯವನ್ನು ಹೇಳಬೇಕು’ ಎಂಬುದು ಸ್ವಯಂ ಸ್ಪಷ್ಟವಾಗಿದೆ. ಈ ಜವಾಬ್ದಾರಿಯನ್ನು ಹೊಂದಿರುವವರು ಬುದ್ಧಿಜೀವಿಗಳು ಮಾತ್ರವಲ್ಲ ಎಂಬುದೂ ಅಷ್ಟೇ ಸ್ಪಷ್ಟವಾಗಿದೆ. ಆದರೆ ಬುದ್ಧಿಜೀವಿಗಳು ಇತರರನ್ನು ಮೀರಿದ ಜವಾಬ್ದಾರಿಗಳನ್ನು ಹೊಂದಿದ್ದಾರೆ ಏಕೆಂದರೆ ಅವರಿಗೆ ವಿಶೇಷ ಸವಲತ್ತು, ಸ್ಥಾನಮಾನಗಳಿವೆ.
ಪಾಶ್ಚಿಮಾತ್ಯ ಪ್ರಜಾಪ್ರಭುತ್ವವು ಸಣ್ಣ ಸ೦ಖ್ಯೆಯ ವಿಚಾರವ೦ತರ ಒ೦ದು ಗು೦ಪಿಗೆ ವಿಶೇಷ ಅನುಕೂಲತೆ ಸವಲತ್ತುಗಳನ್ನು ನೀಡುತ್ತದೆ. ಇವರಿಗೆ ಇತಿಹಾಸದ ಘಟನೆಗಳನ್ನು ಪ್ರಸ್ತುತಪಡಿಸಲಾಗುವ ವಿಕೃತ ನೋಟ, ಅಪವರದಿ, ಸಿದ್ಧಾಂತ ಮತ್ತು ವರ್ಗ ಹಿತಾಸಕ್ತಿಯ ಮುಸುಕಿನ ಹಿಂದೆ ಅಡಗಿರುವ ಸತ್ಯವನ್ನು ಹುಡುಕುವ ವಿರಾಮ, ಸೌಲಭ್ಯಗಳು ಮತ್ತು ತರಬೇತಿಯನ್ನು ಒದಗಿಸಲಾಗಿದೆ. ಪಠ್ಯಗಳನ್ನು ವಿಮರ್ಶಾತ್ಮಕವಾಗಿ ಓದುವದು, ಮೂಲಗಳನ್ನು ಶೋಧಿಸುವದು ಮತು ಪರಿಶೀಲಿಸುವದು, ಮತ್ತು ಅದನ್ನು ನಿರಂತರ ರೀತಿಯಲ್ಲಿ ಬಹಿರಂಗಪಡಿಸಲು ಸಾಧ್ಯಪಡಿಸುವ ಸಮಯಾವಕಾಶ ಮತ್ತು ಉದ್ಯೋಗ ಸುರಕ್ಷತೆ ಇವುಗಳು ಚೊಮ್ಸ್ಕಿ ಬುಧ್ಧಿಜೀವಿಗಳು ಎ೦ದು ಕರೆಯುವ ಜನರಿಗೆ ಒದಗಿರುತ್ತದೆ. ಅಭಿಪ್ರಾಯಗಳನ್ನು ಜೈಲಿನಲ್ಲಿ ಇರಿಸಲಾಗುವುದು ಅಥವಾ ಹಿಂಸೆ ನೀಡಲಾಗುವುದು ಎಂಬ ಭಯವಿಲ್ಲದೆ ಅವರು ಸಾರ್ವಜನಿಕವಾಗಿ ವ್ಯಕ್ತಪಡಿಸಬಹುದ.
ಹೊ೦ದಿದ ಅನುಕೂಲಗಳು ಮತ್ತು ಸವಲತ್ತುಗಳ ಕಾರಣದಿಂದಾಗಿ ಅನ್ಯಾಯದ ಬಗ್ಗೆ, ರಾಜ್ಯ ಮತ್ತು ಇತರ ಪ್ರಭಾವಿ ವರ್ಗಗಳ ಹುಸಿ ಮಾತುಗಳ ಬಗ್ಗೆ , ಮಾತನಾಡುವ ಹೆಚ್ಚಿನ ಭಾರ ಈ ಗು೦ಪಿನ ಮೇಲಿದೆ.
ಸತ್ಯವನ್ನು ಹೇಳುವ ಜವಾಬ್ದಾರಿಯನ್ನು ಇತರ ಕಟ್ಟುಪಾಡುಗಳು ಮೀರಿಸುವಂತಹ ವಿಪರೀತ ಸಂದರ್ಭಗಳನ್ನು ಊಹಿಸಿಕೊಳ್ಳುವುದು ಸುಲಭ. ಆದರೂ ಇದು ಎ೦ದೂ ಒಂದು ಪ್ರಮುಖ, ಕೇಂದ್ರ ಜವಾಬ್ದಾರಿಯಾಗಿ ಉಳಿಯುತ್ತದೆ.
ಎಲ್ಲಾ ಸಂಭಾವ್ಯ ಸಂದರ್ಭಗಳಲ್ಲಿ ಸರಿಯಾದ ನಡವಳಿಕೆಯನ್ನು ನಿರ್ಧರಿಸುವ ಸರಳ ಸೂತ್ರಗಳಿಲ್ಲ ಎಂದು ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಇದರಿಂದ ಮಾನದಂಡಗಳು ಮತ್ತು ಸಾಮಾನ್ಯ, ಸಾರ್ವತ್ರಿಕವಾಗಿ ಅನ್ವಯಿಸುವ ಮೌಲ್ಯಗಳ ಬಗೆಗಿನ ಎಲ್ಲ ಕಾಳಜಿಯನ್ನು ತ್ಯಜಿಸಬೇಕು ಎಂದು ಖಂಡಿತವಾಗಿಯೂ ಒಪ್ಪಲಾಗುವದಿಲ್ಲ.
ಇವೆಲ್ಲವೂ ಸಂಪೂರ್ಣವಾಗಿ ಸ್ಪಷ್ಟವಾಗಿ ತೋರಬಹುದಾದರೂ ಒತ್ತಿಹೇಳುವ ಅವಶ್ಯಕತೆ ಬರಲಿಕ್ಕೆ ಕಾರಣವೆಂದರೆ, ಅನೇಕ ಸಾರ್ವಜನಿಕ ವ್ಯಕ್ತಿಗಳು ಸುಳ್ಳು ಪ್ರವಚಿಸಲು ಮತ್ತು ಕೇವಲ ಪ್ರಚಾರದಲ್ಲಿ ತೊಡಗಲು ಹಿ೦ದೆಮು೦ದೆ ನೋಡುವುದಿಲ್ಲ. ಚೋಮ್ಸ್ಕಿ ತಮ್ಮ ಪ್ರಬಂಧದಲ್ಲಿ ಹಲವಾರು ಉದಾಹರಣೆಗಳನ್ನು ಒದಗಿಸಿದ್ದಾರೆ.
ಶ್ಲೆಸಿಂಗರ್ ಒಬ್ಬ ಪ್ರಸಿದ್ಧ ಶೈಕ್ಷಣಿಕ ಇತಿಹಾಸಕಾರನಾಗಿದ್ದು, ೧೯೬೧ ರಲ್ಲಿ ಅಧ್ಯಕ್ಷ ಕೆನಡಿಗೆ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದಾಗ, ಕ್ಯೂಬಾದ ಮೇಲೆ ಅಮೆರಿಕ ನಡೆಸಿದ 'ಬೇ ಆಫ್ ಪಿಗ್ಸ್' ಆಕ್ರಮಣದ ಬಗ್ಗೆ ಪತ್ರಿಕೆಗಳಿಗೆ ಸುಳ್ಳು ಹೇಳಿದನು, ವರ್ಷಗಳ ನಂತರ ಅವನು ಅದನ್ನು ಸ್ಪಷ್ಟವಾಗಿ ನೇರ ಮುಖದೊಂದಿಗೆ ಒಪ್ಪಿಕೊಂಡನು. 'ಒಬ್ಬ ವ್ಯಕ್ತಿಯು ಅನ್ಯಾಯವೆಂದು ಗೊತ್ತಿದ್ದ ಒ೦ದು ಕಾರಣದ ಪರವಾಗಿ ಸುಳ್ಳು ಹೇಳಲು ಹಿ೦ಜರಿಯುವದಿಲ್ಲ; ಅದಲ್ಲದೆ ಅಂತಹ ಘಟನೆಗಳು ಬೌದ್ಧಿಕ ಸಮುದಾಯದಲ್ಲಿ ಕನಿಷ್ಠ ಪ್ರತಿಕ್ರಿಯೆಯನ್ನು ಮಾತ್ರ ಉಂಟುಮಾಡುತ್ತವೆ. '
ಚೊಮ್ಸ್ಕಿ ಹಲವಾರು ಕಪಟಾಚಾರಗಳನ್ನು ಬಯಲಿಗೆಳೆಯುತ್ತಾರೆ: ಅಮೆರಿಕಾದ ‘ಅಸಾಧಾರಣತ್ವ’ (‘American Exceptionalism’) ಎ೦ದರೆ, ಇತರ ಪ್ರಬಲ ರಾಜ್ಯಗಳಿಗಿಂತ ಅಮೆರಿಕ ಮಾತ್ರ ಭಿನ್ನವಾಗಿದೆ, ಅದರ ವಿದೇಶ ದುಸ್ಸಾಹಸಗಳು, ದುರ್ಬಲ ರಾಷ್ಟ್ರಗಳ ವಿರುದ್ಢ ಹಿಂಸೆ, ಅಪ್ರಚೋದಿತ ಆಕ್ರಮಣಗಳೂ ಸೇರಿದ೦ತೆ, ಯಾವತ್ತೂ ಕ್ರಮಗಳು, ಮೂಲಭೂತವಾಗಿ ಪರೋಪಕಾರಿ ಎನ್ನುವ ಆತ್ಮ ಪ್ರಶಂಸೆಯ ಸಿಧ್ಧಾ೦ತವನ್ನು ಅವರು ಟೊಳ್ಳು ವಾದ ಎ೦ದು ತೋರಿಸುತ್ತಾರೆ.
ಅಮೆರಿಕದ ಈ ವಾಕ್ಚಾತುರ್ಯಕ್ಕೆ ನಿಕಟ ಐತಿಹಾಸಿಕ ಸಮಾನಾಂತರಗಳಿವೆ: ಉದಾಹರಣೆಗೆ, ೧೭೮೪ ರಲ್ಲಿ, ಬ್ರಿಟಿಷ್ ಪಾರ್ಲಿಮೆಂಟ್ ಘೋಷಿಸಿತು: 'ಭಾರತದಲ್ಲಿ ವಿಜಯ ಮತ್ತು ಮೇಲಧಿಕಾರಗಳನ್ನು ವಿಸ್ತರಿಸುವ ಯೋಜನೆಗಳನ್ನು ಮುಂದುವರಿಸುವದು ಈ ನಮ್ಮ ರಾಷ್ಟ್ರದ ಆಶಯ, ಗೌರವ, ಮತ್ತು ನೀತಿಗಳಿಗೆ ಅಸಹ್ಯಕರ ಕ್ರಮಗಳು.’ 'ಇದಾದ ಸ್ವಲ್ಪವೇ ಸಮಯದ ನಂತರ, ಭಾರತದ ವಿಜಯವು ಭರದಿಂದ ಸಾಗಿತ್ತು !’ ಎ೦ದು ವ್ಯಂಗ್ಯವಾಗಿ ಹೇಳುತ್ತಾರೆ, ಚೊಮ್ಸ್ಕಿ.
ಚೋಮ್ಸ್ಕಿಯ ರಾಜಕೀಯ ಬರವಣಿಗೆಯಲ್ಲಿ , ಅನ್ಯಾಯದ ಬಗ್ಗೆ ವ್ಯಂಗ್ಯವಾಡುವುದು ಗಮನಾರ್ಹ ವೈಶಿಷ್ಟ್ಯ.
ಇನ್ನೊ೦ದು ಉದಾಹರಣೆ: ಜಾನ್ ಸ್ಟುವರ್ಟ್ ಮಿಲ್, ಖಂಡಿತವಾಗಿಯೂ ಪ್ರಮುಖ ಮತ್ತು ವಿಸ್ತ್ರುತ ದಾರ್ಶನಿಕ, 'ಸಾರ್ವಜನಿಕ ನೈತಿಕತಾವಾದಿ’ ಎ೦ದು ಪ್ರಶ೦ಸಿಸಲ್ಪಟ್ಟವರು. ಆದರೆ ಮಿಲ್ ತಮ್ಮ ವಯಸ್ಕ ಜೀವನದ ಬಹುಪಾಲು ಕೆಲಸ ಮಾಡಿದ್ದು ಈಸ್ಟ್ ಇಂಡಿಯಾ ಕಂಪನಿಯಲ್ಲಿ. ಚೊಮ್ಸ್ಕಿ ಈಸ್ಟ್ ಇಂಡಿಯಾ ಕಂಪನಿಯನ್ನು ಒ೦ದು ‘ನಿಸ್ಸಂಶಯವಾಗಿ ಅಪರಾಧಿ ಉದ್ಯಮ’ ಎ೦ದು ವರ್ಣಿಸುತ್ತಾರೆ. ‘ಅನಾಗರಿಕ’ (!) ವ೦ಶಗಳ 'ಸುಧಾರಣೆ'ಯ ಸದುದ್ದೇಶದಿ೦ದಾಗಿ, ಭಾರತದಲ್ಲಿ ಮತ್ತು ಇತರೆಡೆ ‘ಪರೋಪಕಾರಿ’ (ಎಂದು ಅವರು ಪರಿಗಣಿಸಿದ) ಬ್ರಿಟಿಷ್ 'ನಿರಂಕುಶಾಧಿಕಾರ' ಪರವಾಗಿ ಮಿಲ್ ವಾದಿಸಿದರು, ಮತ್ತು ಕೈಗೊ೦ಡ ಕ್ರಮಗಳು ಏನೇ ಆದರೂ 'ಸುಧಾರಣೆ'ಯ ಉದ್ದೇಶ ಪೂರೈಸಲು ಸಾಧಿಸಿದಲ್ಲಿ ಅವು ಸಮರ್ಥನೀಯ ಮತ್ತು ನ್ಯಾಯಸಮ್ಮತ , ಎ೦ದೂ ಪರಿಗಣಿಸಿದರು.
ಮಿಲ್ ಧರ್ಮನಿಷ್ಠೆಯಿಂದ ಆಶಿಸಿದಂತೆ ಗುರಿಯು ಒ೦ದು ವೇಳೆ ನಿಜವಾಗಿಯೂ ಅಧೀನದಲ್ಲಿರುವವರ 'ಸುಧಾರಣೆ' ಆಗಿದ್ದರೂ ಸಹ ಆ (ವಸಾಹತುಶಾಹಿ) ವರ್ತನೆ ಸಾಕಷ್ಟು ದುಷ್ಟವಾಗಿರುತ್ತದೆ. ಆದರೆ ವಾಸ್ತವಿಕವಾಗಿ ಶಕ್ತಿಶಾಲಿಗಳ ಗುರಿಗಳು ನಿರಂತರವಾಗಿ, ಕ್ರಿಸ್ತಪೂರ್ವ ೪೧೪ರಲ್ಲಿ ನಡೆದ ಮೆಲೋಸ್ ದ್ವೀಪದ ವಿರುದ್ಢ ಏಥೆನ್ಸಿನ ಆಕ್ರಮಣದಿಂದ ಹಿಡಿದು ೧೯೬೦ ರ ದಶಕದಲ್ಲಿ ಮತ್ತು ಇಂದು ಏಷ್ಯಾದಲ್ಲಿ ಅಮೇರಿಕಾದ ವಿವಿಧ ಯುದ್ಧಗಳೂ ಸೇರಿದ೦ತೆ - ಸ್ವಯಂ ಸ್ವಾರ್ಥ ಸೇವೆಯಾಗಿರುತ್ತದೆ ಎಂದು ಇತಿಹಾಸವು ತೋರಿಸುತ್ತದೆ.
ಚೋಮ್ಸ್ಕಿ ಪದೇ ಪದೇ ತೋರಿಸಿದಂತೆ, ಪ್ರಬಲರ ಅತಿಕ್ರಮಗಳ ನಿಜವಾದ ಗುರಿಗಳನ್ನು ತಿಳಿದುಕೊಳ್ಳಲು ಬಯಸಿದರೆ ನಾವು ಅವರ ಕಾರ್ಯರೀತಿಗಳನ್ನು , ಹಾಗೆಯೇ ಆಂತರಿಕ ಕಾಗದಗಳು ಮತ್ತು ಸಾರ್ವಜನಿಕ ಬಳಕೆಗಾಗಿ ಉದ್ದೇಶಿಸದ ಇತರ ದಾಖಲೆಗಳನ್ನು - ವಾಕ್ಚಾತುರ್ಯಕ್ಕೆ ಮೋಸಹೋಗದೆ - ನೋಡಬೇಕು
ಚೋಮ್ಸ್ಕಿಯ ಪ್ರಬಂಧದಲ್ಲಿನ ಸತ್ಯತೆಗಳನ್ನು ಮರೆಯದಿರಲು ಮತ್ತೊಂದು ಕಾರಣವಿದೆ : ಕೋಲಾಹಲ ಮಾಡಬಾರದು, ಅಸಮಾಧಾನವನ್ನು ಹುಟ್ಟಿಸಬಾರದು, ತನ್ನ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡಬಾರದು ಎಂಬ ಮನೋಭಾವನೆಯ ಹಿನ್ನೆಲೆಯಲ್ಲಿ, ಬಾಯಿ ಮುಚ್ಚಿ ಇರುವದು, ಅದರಿ೦ದಾಗಿ ಶಕ್ತಿಶಾಲಿಗಳ ಹಿತಾಸಕ್ತಿಗಳನ್ನು ಪೂರೈಸುವುದು, ಇದು ಯಾವಾಗಲೂ, ಸತ್ಯವನ್ನು ಪ್ರತಿಪಾದಿಸಿ ಸರಿಯಾದದ್ದನ್ನು ಮಾಡುವದಕ್ಕಿ೦ತ, ಸುಲಭ.
ಸುಳ್ಳಿನ ಕ೦ತೆಗಳ ಶಾಶ್ವತೀಕರಣ, ಅಧಿಕಾರದ ದುರುಪಯೋಗ, ಸದುದ್ದೇಶದ ಹೆಸರಿನಲ್ಲಿ ಸ್ವಾರ್ಥದ ಎಡೆತಡೆಯಿಲ್ಲದ ಬೆನ್ನಟ್ಟುವಿಕೆ ಇವೆಲ್ಲ ಅಂತರ್ರಾಷ್ತ್ರೀಯ ಮಟ್ಟದಲ್ಲಿ ಬಲವ೦ತ ಮತ್ತು ದುರ್ಬಲ ರಾಷ್ಟ್ರಗಳ ನಡುವೆ ಮಾತ್ರವಲ್ಲ, ಒ೦ದು ದೇಶದ ಒಳಗೆ, ಒ೦ದು ಸಮಾಜ ಮತ್ತು ಒ೦ದು ಕುಟು೦ಬದ ಎಲ್ಲೆಯೊಳಗೂ ಸಾಮನ್ಯವಾಗಿ ನಡೆಯುವ ವಿಷಯಗಳು.
ಚೋಮ್ಸ್ಕಿ ಈಗ 50 ಕ್ಕೂ ಹೆಚ್ಚು ವರ್ಷಗಳಿಂದ ಮಾತನಾಡುತ್ತಲೇ ಇದ್ದಾರೆ, ಮತ್ತು ಅವರ ಕೆಲಸವು ಸುಳ್ಳು ಮತ್ತು ಪ್ರಚಾರದ ಪರೆಯಿಲ್ಲದೆ ನೋಡಲು ಮತ್ತು ಜಗತ್ತನ್ನು ಅರ್ಥಮಾಡಿಕೊಳ್ಳಲು, ಅದನ್ನು ಉತ್ತಮವಾಗಿ ಬದಲಾಯಿಸಲು ಬಯಸುವ ನಮ್ಮಲ್ಲಿ ಸಾಟಿಯಿಲ್ಲದ ಸಂಪನ್ಮೂಲ ಮತ್ತು ಪ್ರೇರಣೆಯಾಗಿದೆ, ಇದರಿಂದ ನಾವು ಅವರ ಕೆಲಸ ಮತ್ತು ಅವರ ಉದಾಹರಣೆಯಿ೦ದ ಸ್ಫೂರ್ತಿ ಪಡೆಯುವದನ್ನು.ಮುಂದುವರಿಸಬೇಕು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ