ಮಧ್ಯಾಹ್ನ ಕತ್ತಲೆ: ಸ್ಟಾನ್ ಸ್ವಾಮಿಯ ಸಾವು ನ್ಯಾಯಾಂಗದ ಅವನತಿಗೆ ಸಾಕ್ಷಿಯಾಗಿದೆ

ಅಜಿತ್ ಪ್ರಕಾಶ್ ಶಾಹ್


ಅಧಿಕಾರದಲ್ಲಿರುವ  ಸ್ಥಾಪನೆಯು ಯುಎಪಿಎ ಅಡಿಯಲ್ಲಿ ೮೪ ವರ್ಷದ ಕಾರ್ಯಕರ್ತರಂತಹ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ಧೈರ್ಯದಿ೦ದ ಮುಂದುವರಿಸಲು ಒಂದು ಪ್ರಮುಖ ಕಾರಣವೆಂದರೆ ಇಂದು ನಮ್ಮಲ್ಲಿರುವ ದುರ್ಬಲ ನ್ಯಾಯಾಂಗ.ಹಕ್ಕುಗ

 

ಆರ್ಥರ್ ಕೋಸ್ಟ್ಲರ್‌ ನ ಪ್ರಖ್ಯಾತ  ಕೃತಿ DARKNESS AT NOON - ಮಧ್ಯಾಹ್ನ ಕತ್ತಲೆ - ಸ್ಟಾಲಿನ್ ನೇತೃತ್ವದಲ್ಲಿ ಸೋವಿಯತ್ ಒಕ್ಕೂಟದಲ್ಲಿ ೧೯೩೦ರ  ದಶಕದ ಉತ್ತರಾರ್ಧದ ಮಹಾ ಶುದ್ಧೀಕರಣದ ಹಿನ್ನೆಲೆಯಲ್ಲಿ ರಚಿತವಾಗಿದೆ. ಈ ಅವಧಿ ರಾಜಕೀಯ ದಬ್ಬಾಳಿಕೆ, ಪೊಲೀಸ್ ಕಣ್ಗಾವಲು, ವಿರೋಧದ ಬಹುಮುಖ  ಅನುಮಾನ, ಜೈಲು ಶಿಕ್ಷೆ ಮತ್ತು ಮರಣದಂಡನೆಗಳ ಕಾಲವೆ೦ದು ಗುರುತಿಸಲಾಗಿದೆ. ಜುಲೈ ೫ , ೨೦೧೧ರಂದು ಫಾದರ್ ಸ್ಟಾನ್ ಸ್ವಾಮಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದಾಗ ದಶಕಗಳ ನಂತರ, ಭಾರತದಲ್ಲಿ ಮಧ್ಯಾಹ್ನದ ಹೊತ್ತಿಗೆ ಕತ್ತಲೆ ಬಿದ್ದಿತು - ಇದು  ಕೋಸ್ಟ್ಲರ್ ವರ್ಣಿಸಿದ  ಭೀಕರ ಜಗತ್ತನ್ನು ಸ್ಪಷ್ಟವಾಗಿ ನೆನಪಿಸುತ್ತದ. 

ಭಯೋತ್ಪಾದಕ ಚಟುವಟಿಕೆಗಳ ಆರೋಪ ಹೊತ್ತ ಕಾರ್ಯಕರ್ತ ಫಾ.ಸ್ವಾಮಿಯ ಸಾವು ಬಹುಸಂಖ್ಯಾತ ಅಧಿಕಾರವನ್ನು ವ್ಯವಸ್ಥಿತವಾಗಿ ದುರುಪಯೋಗಪಡಿಸಿಕೊಂಡ ಮತ್ತು ಕಾನೂನಿನ ನಿಯಮವನ್ನು ಕಡೆಗಣಿಸಿದ ಪರಿಣಾಮವಾಗಿದೆ.

ಅನೇಕರಿಗೆ  ಸ್ಫೂರ್ತಿಯಾಗಿರುವ, ಜೆಸ್ಯೂಟ್ ಪಾದ್ರಿಯಾಗಿದ್ದ ಅವರು ಜಾರ್ಖಂಡ್‌ನಲ್ಲಿನ ಅಂಚಿನಲ್ಲಿರುವ ಸಮುದಾಯಗಳ ಉನ್ನತಿಯನ್ನು ತಮ್ಮ ಜೀವನದ ಕೆಲಸವನ್ನಾಗಿ ಮಾಡಲು ನಿರ್ಧರಿಸಿದರು. ಅವರು ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದರು ಮತ್ತು ಕೆಲಸ ಮಾಡಿದರು, ಅವರು ತಮ್ಮ ಜೀವನದ ಬಹುಪಾಲು ಸಕ್ರಿಯ ಕಾರ್ಯಕರ್ತರಾಗಿದ್ದರು.  ಅನ್ಯಾಯವಾಗಿ ಗುರಿಯಾಗುತ್ತಿರುವವರ ಹಕ್ಕುಗಳಿಗಾಗಿ ಹೋರಾಡಲು ಕಾನೂನು ವ್ಯವಸ್ಥೆಯನ್ನು ಬಳಸಿದರು ಮತ್ತು ನ್ಯಾಯವನ್ನು ಭದ್ರಪಡಿಸಿಕೊಳ್ಳಲು ಸಂವಿಧಾನವು ಸಹಾಯ ಮಾಡುತ್ತದೆ ಎಂದು ಭಾವಿಸಿದರು. ಜಾರ್ಖಂಡ್ ಹೈಕೋರ್ಟ್ ಮು೦ದೆ ವಿಚಾರಣಾಧೀನ ಕೈದಿಗಳ (ಅಂಡರ್  ಟ್ರಯಲ್ಸ) ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನೂ ಹಾಕಿದರು.

 ಆಗಸ್ಟ್ ೨೦೧೮, ಪುಣೆ ಪೊಲೀಸರು  ದಾಳಿ ನಡೆಸಿ ಫಾ  ಸ್ವಾಮಿಯ ಏಕ ಕೋಣೆಯ ಮನೆಯಿ೦ದ ಅವರ ಕಂಪ್ಯೂಟರ್, ಸೆಲ್ ಫೋನ್, ಪುಸ್ತಕಗಳು ಮತ್ತು ಕೆಲವು ಶಾಸ್ತ್ರೀಯ ಸಂಗೀತ ಕ್ಯಾಸೆಟ್‌ಗಳನ್ನು ವಶಪಡಿಸಿಕೊಂಡರು. ಮತ್ತೊಂದು ದಾಳಿ ೨೦೧೯ ರ ಜೂನ್‌ನಲ್ಲಿ ನಡೆಯಿತು. ಅಕ್ಟೋಬರ್ ೮, ೨೦೨೦ ರಂದು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಯಿಂದ ಫಾ  ಸ್ವಾಮಿಯನ್ನು  ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಶಂಕಿತ ಬ೦ಧಿತ ಪ್ರಾಧ್ಯಾಪಕರು, ಕಾರ್ಯಕರ್ತರು, ಬರಹಗಾರರು ಮತ್ತು ಸಾರ್ವಜನಿಕ ಬುದ್ಧಿಜೀವಿಗಳ ಪಟ್ಟಿಯಲ್ಲಿ  16 ನೆಯವರಾಗಿ ಬಂಧಿಸಲಾಯಿತು. ೮೦ ವರ್ಷಕ್ಕಿಂತ ಮೇಲ್ಪಟ್ಟ  ಸ್ವಾಮಿ ಅವರು ಸಾಯುವವರೆಗೂ ರಾಜ್ಯದ ವಶದಲ್ಲಿದ್ದರು . ಇವರು ಅನೇಕರಿ೦ದ  ಅಸಂಭಾವ್ಯವೆ೦ದು  ಪರಿಗಣಿಸಲ್ಪಟ್ಟ   ಕಾರಣಗಳಿಗಾಗಿ ಬಂಧನಕ್ಕೊಳಗಾಗುವುದರ ಜೊತೆಗೆ, ಭಾರತದಲ್ಲಿ ಭಯೋತ್ಪಾದನೆ ಆರೋಪಕ್ಕೀಡಾದ ಅತ್ಯಂತ ವೃಧ್ಧ ವಯಸ್ಸಿನ ವ್ಯಕ್ತಿಯಾಗಿರಬಹುದು.  

ಇದರಲ್ಲಿ ಅತ್ಯಂತ ದುರಂತ ಕಥೆಯೆಂದರೆ, ಆತನ ಬಂಧನವನ್ನು ರಾಜ್ಯವು, ಪೊಲೀಸರು ಮತ್ತು ಎಲ್ಲಕ್ಕಿಂತ ಕೆಟ್ಟದ್ದಾಗಿ ನ್ಯಾಯಾಲಯಗಳು ಹೇಗೆ ನಿರ್ವಹಿಸಿದವು ಎಂಬುದು. .

ಕೆಲವು ಪ್ರಚಾರ ಸಾಮಗ್ರಿಗಳು ಮತ್ತು ಕ್ಷೇತ್ರದ ಇತರ ಸಕ್ರಿಯಸ್ತರಾದ ಮತ್ತು ಇದೇ ತರಹದ ಆರೋಪಗಳ  ಮೇಲೆ ಬ೦ಧಿತರಾದ  ಸುಧಾ ಭಾರದ್ವಾಜ್ ಮತ್ತು ವರವರ ರಾವ್ ಅವರ ಸ೦ವಹನದ  ಸಾಕ್ಷ್ಯಗಳ ಮೇರೆಗೆ  ಸ್ವಾಮಿಯನ್ನು ಬಂಧಿಸಲಾಯಿತು.   ಕೆಲವು ಆಪಾದಿತ ದಾಖಲಾತಿಗಳ ಸತ್ಯಾಸತ್ಯತೆಯನ್ನು ಅಂತರರಾಷ್ಟ್ರೀಯ ವಿಧಿವಿಜ್ಞಾನ ದತ್ತಾ೦ಶ  ತಜ್ಞರು ಪ್ರಶ್ನಿಸಿದ್ದಾರೆ. ಆದರೆ ರಾಜ್ಯವು ತನ್ನ ಬಂಧನವನ್ನು ಸಮರ್ಥಿಸಿಕೊಂಡಿದ್ದು, ಈ ವಿಷಯಗಳು ವಿಚಾರಣೆಯ ಸಮಯದಲ್ಲಿ ಮಾತ್ರ ಪರಿಶೀಲಿಸ ಬೇಕು ಮತ್ತು ಆರೋಪಿಗಳು - ಅಂದರೆ, ಸ್ವಾಮಿ ಮತ್ತಿತರರು  - ಅಲ್ಲಿಯವರೆಗೆ ಜೈಲಿನಲ್ಲಿಯೇ ಇರಬೇಕು.

 

ಈ ತರ್ಕ  ಸರ್ವೋಚ್ಛ ನ್ಯಾಯಾಲಯದ ವಾಟಾಲಿ ತೀರ್ಪಿನ ಸಮಸ್ಯಾತ್ಮಕ ಫಲಿತಾಂಶವಾಗಿದೆ. ಫಾ ಸ್ವಾಮಿಯವರ ವೈದ್ಯಕೀಯ ಸಹಾಯಕ್ಕಾಗಿ ಪುನರಾವರ್ತಿತ ಮನವಿಗಳನ್ನು ನಿರಂತರವಾಗಿ ನಿರ್ಲಕ್ಷಿಸಲಾಯಿತು  ಅಥವಾ ವಜಾಗೊಳಿಸಲಾಯಿತು.  ಸ್ವಾಮಿಗೆ ಕ್ಷೀಣಗೊಳಿಸುವ  ಪಾರ್ಕಿನ್ಸನ್ ಕಾಯಿಲೆ ಇತ್ತು, ಮತ್ತು ಒಂದು ಚಮಚವನ್ನು ಹಿಡಿಯುವುದು, ಬರೆಯುವುದು, ನಡೆಯುವುದು ಅಥವಾ ಸ್ನಾನ ಮಾಡುವುದು ಮುಂತಾದ ಮೂಲಭೂತ ಕಾರ್ಯಗಳನ್ನು ಸಹ ಮಾಡಲು ಸಾಧ್ಯವಾಗುತ್ತಿದ್ದಿಲ್ಲ.  ತೀವ್ರವಾದ ಶ್ರವಣ ಸಮಸ್ಯೆ ಇತ್ತು ಮತ್ತು ದೈಹಿಕವಾಗಿ ತುಂಬಾ ದುರ್ಬಲರಾಗಿದ್ದರು ಎಂದು ನ್ಯಾಯಾಲಯವು ಗಮನಿಸಿತು, ಆದರೆ ಅದು ಕೂಡ ನ್ಯಾಯಾಲಯದ  ಮನಸ್ಸನ್ನು ಕರಗಿಸಲಿಲ್ಲ.  ವಕೀಲರು ಸಲ್ಲಿಸಿದ ಪ್ರತಿ  ಜಾಮೀನು ಅರ್ಜಿಯನ್ನು ನಿಸ್ಸಂದಿಗ್ಧವಾಗಿ ತಿರಸ್ಕರಿಸಲಾಯಿತು. ವೈದ್ಯಕೀಯ ಜಾಮೀನುಗಾಗಿ ಅರ್ಜಿ ಸಲ್ಲಿಸಿದಾಗ, ನ್ಯಾಯಾಲಯವು ಈ ವಿಷಯವನ್ನು ಮುಂದೂಡುತ್ತಲೇ ಇತ್ತು ಮತ್ತು ಕೇವಲ ಖಾಸಗಿ ಆಸ್ಪತ್ರೆಯ ಸೇವೆಗಳನ್ನು ನೀಡಿತು. ನನ್ನ ಅಭಿಪ್ರಾಯದಲ್ಲಿ, ಇದು ನ್ಯಾಯಾಧೀಶರಲ್ಲಿ ಸೂಕ್ಷ್ಮತೆಯ ಕೊರತೆಯನ್ನು ತೋರಿಸುತ್ತದೆ, ಇದು ತುಂಬಾ ದುಃಖಕರವಾಗಿದೆ.

ನ್ಯಾಯಾಂಗ ಅವನತಿಗೆ

ಫಾ ಸ್ವಾಮಿಯ ಅಂತಿಮ ಮತ್ತು ದುರಂತ ಹಾದುಹೋಗುವಿಕೆಗೆ ಕಾರಣವಾದ ಘಟನೆಗಳ ಸರಣಿಯು ಇತ್ತೀಚಿನ ವರ್ಷಗಳಲ್ಲಿ ನಾವು ಕಂಡ ನ್ಯಾಯಾಂಗ ಕುಸಿತಕ್ಕೆ ಸಾಕ್ಷಿಯಾಗಿದೆ. ಮತ್ತು ಇದು ಕಾಕತಾಳೀಯವಾಗಿಯೋ ಅಲ್ಲವೋ  ಭಾರತದ ಪ್ರಸ್ತುತ ರಾಜಕೀಯ ಆಡಳಿತದೊಂದಿಗೆ ಸಹಭಾಗಿತ್ವದಲ್ಲಿದೆ.

 ಸ್ವಾಮಿಯ ಪ್ರಕರಣದಲ್ಲಿ ಕೇವಲ ದೌರ್ಬಲ್ಯದ ಹೊರತಾಗಿ, ನ್ಯಾಯಾಧೀಶರು ಆಘಾತಕಾರಿಮಟ್ಟದ  ನಿರಾಸಕ್ತಿ ಪ್ರದರ್ಶಿಸಿದರು. ಒಂದು ಕಡೆ, ಭಾರತದ ಮುಖ್ಯ ನ್ಯಾಯಮೂರ್ತಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮನಮೋಹಕವಾಗಿ ಹೇಳಿದಾಗ, ನ್ಯಾಯಾಲಯಗಳು ಇದಕ್ಕೆ ವಿರುದ್ಧವಾಗಿರುತ್ತವೆ.

ಅಪರಾಧ ಕ್ರಮಗಳ ಕಾನೂನು (ಕ್ರಿಮಿನಲ್ ಪ್ರೊಸಿಜರ್ ಕೋಡ್) ಮತ್ತು ಕಾರ್ಯವಿಧಾನದ ಕೇಂದ್ರ ತತ್ವವಾದ “ನಿಷ್ಕಳಂಕತೆಯ ಊಹೆ ಅಥವಾ ಪ್ರಾಥಮಿಕ ವಿಶ್ವಾಸದ”  ಕಲ್ಪನೆ (Presumption of innocence) ಯು ನಮ್ಮ ದೇಶದಲ್ಲಿ ಈ ದಿನಗಳಲ್ಲಿ ಭಯಾನಕ ದುರ್ಬಲ ಸ್ಥಳಹದಿಯಲ್ಲಿದೆ ಎಂದು ಸೂಚಿಸಲು ತುಂಬಾ ಧೈರ್ಯಶಾಲಿಯಾಗಬೇಕಾಗಿಲ್ಲ.  ಇದು ನಮ್ಮೆಲ್ಲರನ್ನೂ ಬಹಳವಾಗಿ ಚಿಂತೆ ಮಾಡಿಸಬೇಕು.

  ಯುಎಪಿಎ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ  2019 ರ ವಟಾಲಿ ತೀರ್ಪು (National Investigation Agency Versus Zahoor Ahmad Shah Watali )        ಈ ಕಾನೂನಿಗೆ ಸೇರಿದ೦ತೆ  ಕೆಳಮಟ್ಟದ ನ್ಯಾಯಾಲಯಗಳ ನಿರ್ಧಾರಗಳ ಮೇಲೆ ಪರಿಣಾಮ ಬೀರಿದೆ. ಈ ನಿರ್ಧಾರವು ಹೊಸ ಸಿದ್ಧಾಂತವನ್ನು ಸೃಷ್ಟಿಸಿದೆ, ಅದು ಪರಿಣಾಮಕಾರಿಯಾಗಿ, ವಿಚಾರಣೆಯ ಅವಧಿಯುದ್ದಕ್ಕೂ, ಅಂತಿಮವಾಗಿ ವ್ಯಕ್ತಿಯ ವಿರುದ್ಧದ ಸಾಕ್ಷ್ಯಗಳು ಅನುಮತಿಸಲಾಗುವುದಿಲ್ಲ ಎಂದು ಸಾಬೀತಾದರೂ, ಮತ್ತು ಅಂತಿಮವಾಗಿ ಆರೋಪಿಯನ್ನು ಖುಲಾಸೆಗೊಳಿಸಲಾಗುವದಾದರೂ,  ಆರೋಪಿಯು ಬಂಧನದಲ್ಲಿಯೇ ಇರಬೇಕು. ನೋಡಿ  ತರ್ಕಬದ್ಧವಲ್ಲದ ಅಸ೦ಬಧ್ಧತೆ:  ಅಂತಿಮವಾಗಿ ಖುಲಾಸೆಗೊಳ್ಳಲು ಆರೋಪಿಯು ಜೈಲಿನಲ್ಲಿಯೇ  ಏಕೆ ಇರಬೇಕು?

ಈ ನಿರ್ಧಾರದ ಪ್ರಕಾರ, ಯುಎಪಿಎ ಅಡಿಯಲ್ಲಿ ಜಾಮೀನು ಅರ್ಜಿಗಳನ್ನು ಪರಿಗಣಿಸುವಾಗ, ನ್ಯಾಯಾಲಯಗಳು ಮೊದಲ ಮಾಹಿತಿ ವರದಿ (ಎಫ಼್ ಐ ಆರ್) ಯಲ್ಲಿ ಮಾಡಿದ ಪ್ರತಿಯೊಂದು ಆರೋಪವೂ ಸರಿಯೆಂದು ಭಾವಿಸಬೇಕು. ಇದಲ್ಲದೆ, ಆರೋಪಿಗಳು ಕಾನೂನು ಕ್ರಮಕ್ಕೆ ವಿರುದ್ಧವಾದ ಪುರಾವೆಗಳನ್ನು ಹಾಜರುಪಡಿಸಿದರೆ ಮಾತ್ರ ಜಾಮೀನು ಪಡೆಯಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಆರೋಪಗಳನ್ನು ಅಪ್ರಮಾಣೀಕರಿಸುವ  ಹೊರೆ ಆರೋಪಿಯ ಮೇಲೆ ಇರುತ್ತದೆ, ಇದು ಹೆಚ್ಚಿನ ಸಂದರ್ಭಗಳಲ್ಲಿ ವಾಸ್ತವಿಕವಾಗಿ ಅಸಾಧ್ಯ. ಈ ನಿರ್ಧಾರವು ಮೂಲಭೂತವಾಗಿ ಜಾಮೀನು ಹಂತದಲ್ಲಿ ಸಾಕ್ಷ್ಯಗಳ ಪ್ರವೇಶವನ್ನು ಹೊರತುಪಡಿಸಿದೆ. ಹಾಗೆ ಮಾಡುವುದರಿಂದ, ಇದು ಸಾಕ್ಷ್ಯ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಹೊರಗಿಟ್ಟಿದೆ, ಇದು ಈ ನಿರ್ಧಾರವನ್ನು ವಾದಯೋಗ್ಯವಾಗಿ ಅಸಂವಿಧಾನಿಕವಾಗಿಸುತ್ತದೆ. ಯುಎಪಿಎ ಅಡಿಯಲ್ಲಿ ಜಾಮೀನು ವಿಚಾರಣೆಗಳು ಈಗ ಕೇವಲ ಪ್ರಹಸನಗಳು ಮಾತ್ರವಾಗಿವೆ. ಪುರಾವೆಗಳ ಇಷ್ಷ್ಟು ಹೆಚ್ಚಿನ ಅಡೆತಡೆಗಳನ್ನು ಎದುರಿಸುವ  ಆರೋಪಿಯು ಜಾಮೀನು ಪಡೆಯುವುದು ಈಗ ಅಸಾಧ್ಯ, ಮತ್ತು ವಾಸ್ತವವಾಗಿ ಒಬ್ಬ ವ್ಯಕ್ತಿಯನ್ನು ಅನಿರ್ದಿಷ್ಟವಾಗಿ ಜೇಲು ಕ೦ಬಿಗಳ ಹಿಂದೆ ಇರಿಸಲು ಅನುಕೂಲಕರ ಸಾಧನವಾಗಿದೆ. ಬಂಧನಕ್ಕೊಳಗಾದವರಿಗೆ ಇದು ಘೋರ ದುಃಸ್ವಪ್ನವಾಗುವುದಕ್ಕಿಂತ ಕಡಿಮೆಯಿಲ್ಲ.

ದುರುಪಯೋಗದ ನಿಬಂಧನೆ

ಇದನ್ನು ಸರ್ಕಾರ, ಪೊಲೀಸರು ಮತ್ತು ಕಾನೂನು ಅಧಿಕಾರಿಗಳಿ೦ದ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ: ಈಗ, ಎಲ್ಲಾ ಭಿನ್ನಮತೀಯರಮೇಲೆ  ಯುಎಪಿಎ ಅಡಿಯಲ್ಲಿ  (ಅಸಭ್ಯ  ಮತ್ತು ಅಸಂಭವನೀಯ) ದೇಶದ್ರೋಹ ಅಥವಾ ಕ್ರಿಮಿನಲ್ ಪಿತೂರಿ ಆರೋಪಗಳನ್ನು ಹೇರುವದನ್ನು ರೂಢಿಯಾಗಿಸುತ್ತದೆ.. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ, ಹೈಕೋರ್ಟ್‌ಗಳ  ಕೈಗಳನ್ನು ಕಟ್ಟಿದ೦ತಾಗಿದೆ  ಮತ್ತು ಜಾಮೀನು ನಿರಾಕರಿಸುವಂತೆ ಮಾಡುತ್ತಿದೆ, ಏಕೆಂದರೆ ಪ್ರಕರಣವನ್ನು ಅಪ್ರಮಾಣೀಕರಿಸುವುದು ವಾಸ್ತವಿಕವಾಗಿ ಅಸಾಧ್ಯ. ಈ ತೀರ್ಮಾನದ ಪರಿಣಾಮವಾಗಿ, ಉದಾಹರಣೆಗೆ, ಹೈಕೋರ್ಟ್ ನ್ಯಾಯಾಧೀಶರು ಇನ್ನು ಮುಂದೆ ಒಂದು ಪ್ರಕರಣದಲ್ಲಿ ಸಾಕ್ಷ್ಯವನ್ನು ಪರಿಶೀಲಿಸಲು  ಮತ್ತು ನಿರ್ಣಯಿಸಲು ಸಾಧ್ಯವಿಲ್ಲ. ಎಲ್ಲಾ ಪ್ರಕರಣಗಳು ಈಗ ಜಾಮೀನು ನಿರಾಕರಿಸುವ ಈ ಬಿಗಿಯಾದ  ಸೂತ್ರವನ್ನು ಅನುಸರಿಸಬೇಕು. ಇದರ ಪರಿಣಾಮವು ತುರ್ತು ಪರಿಸ್ಥಿತಿಯಲ್ಲಿ  ಅಸ್ತಿತ್ವದಲ್ಲಿದ್ದ ಕಠಿಣ  ಪ್ರತಿಬ೦ಧಕ ಕಾನೂನುಗಳಿಗೆ ಹೋಲುತ್ತದೆ. ಆಗ  ನ್ಯಾಯಾಲಯಗಳು ಜನರಿಗೆ ನ್ಯಾಯಾಂಗ ಪರಿಹಾರದ ರಕ್ಷಣೆಯನ್ನು   ಕಸಿದುಕೊಂಡವು. ಆ ಯುಗದ ಅನಾಹುತಗಳನ್ನು ತಡೆಯಲು ನಾವು ಬಯಸಿದರೆ, ಈ ನಿರ್ಧಾರವನ್ನು ತುರ್ತಾಗಿ ಹಿಮ್ಮುಖಗೊಳಿಸಬೇಕು ಅಥವಾ ದುರ್ಬಲಗೊಳಿಸಬೇಕು, ಇಲ್ಲದಿದ್ದರೆ ವೈಯಕ್ತಿಕ ಸ್ವಾತಂತ್ರ್ಯಗಳು ಬಹಳ ಸುಲಭವಾಗಿ ಕಳೆದು ಕೊಳ್ಳುವ ಅಪಾಯವನ್ನು ನಾವು ಎದುರಿಸುತ್ತೇವೆ.

ಯುಎಪಿಎಯ ಅತ್ಯಂತ ಸ್ಪಷ್ಟವಾದ ದುರುಪಯೋಗ , ಮತ್ತು ವಿರೋಧಿ ಧ್ವನಿಗಳನ್ನು ಮೌನಗೊಳಿಸುವ ಸಾಧನವಾಗಿ ಆರೋಪಿಗಳ ಜಾಮೀನು ಅರ್ಜಿಗಳನ್ನು ನಿರಂತರವಾಗಿ ತಿರಸ್ಕರಿಸುವುದು, ಇವು  ಸ್ಪಷ್ಟವಾಗಿ ಕಾಣುವದು  ಭೀಮಾ ಕೋರೆಗಾಂವ್ ಪ್ರಕರಣಗಳಲ್ಲಿ - ಫಾ  ಸ್ವಾಮಿಯವರ ಪ್ರಕರಣ ಸೇರಿದಂತೆ -  ಮತ್ತು ಪೌರತ್ವದ( ತಿದ್ದುಪಡಿ) ಕಾಯ್ದೆ (ಸಿಎಎ)  ವಿರುದ್ಧದ ಪ್ರತಿಭಟನೆಗಳಿಗೆ (ಅದರಲ್ಲಿ ಕೇವಲ ಆಲೋಚನೆ ಅಥವಾ ವಿಚಾರವನ್ನು ಅಪರಾಧದ ದರ್ಜೆಗೆ  ಏರಿಸಲಾಗುತ್ತದೆ) ಸೇರಿದ ಪ್ರಕರಣಗಳಲ್ಲಿ. ಅನೇಕ ನಿದರ್ಶನಗಳಲ್ಲಿ, ಸಾಕ್ಷ್ಯವನ್ನು ಒಪ್ಪಲಾಗದು, ಕೆಲವೊಮ್ಮೆ ವಾದಯೋಗ್ಯವಾಗಿ  ಕೃತ್ರಿಮವಾಗಿ ನಟ್ಟಿರಲಾಗಿರುತ್ತದೆ,  ಮತ್ತು ಒಟ್ಟಾರೆಯಾಗಿ ದುರ್ಬಲವಾಗಿರುತ್ತದೆ. ಆದರೆ ಯುಎಪಿಎ ಕಾನೂನಿನ ಬಳಕೆಯ ಪರಿಣಾಮವಾಗಿ, ಆರೋಪಿಗಳಿಗೆ ಜಾಮೀನು ಕೂಡ ಸಿಗುವುದಿಲ್ಲ. ಮತ್ತೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ನ್ಯಾಯಾಲಯಗಳು ಪ್ರಕರಣದ ಅರ್ಹತೆ ಪರಿಶೀಲಿಸಲು  ಸಾಧ್ಯವಿಲ್ಲ.

ನ್ಯಾಯಾಲಯಗಳು ಇಂಥ  ವಿಷಯಗಳಿಗೆ ಕೈಯಿಟ್ಟಾಗ, ಉದಾಹರಣೆಗೆ  ದೆಹಲಿ ಹೈಕೋರ್ಟ್  2020 ರ ಗಲಭೆಗೆ ಸಂಬಂಧಿಸಿದ ಪಿತೂರಿಯ ಆರೋಪದಲ್ಲಿ , ಮೂವರು ಯುವ ಕಾರ್ಯಕರ್ತರಿಗೆಜಾಮೀನು ನೀಡಿದ ಸಂದರ್ಭದಲ್ಲಿ,  ಸುಪ್ರೀಂ ಕೋರ್ಟ್ ಅಸಾಧಾರಣವಾಗಿ ಪ್ರವೇಶಿಸಿ, ತನ್ನ  "ಆಶ್ಚರ್ಯ”ಮತ್ತು ಹೈಕೋರ್ಟ್‌ನ ತೀರ್ಪಿನ ಬಗ್ಗೆ  ಅಸಮಾಧಾನ ಪ್ರಕಟಿಸುತ್ತಾ  ಇದೇ ರೀತಿಯ ಪರಿಹಾರಗಳನ್ನು ನೀಡಲು ಈ ನಿರ್ಧಾರವನ್ನು“ ಯಾವುದೇ ನ್ಯಾಯಾಲಯವು ಪೂರ್ವನಿದರ್ಶನವಾಗಿ ಪರಿಗಣಿಸಬಾರದು ”ಎಂಬ ನಿರ್ದೇಶನವನ್ನು ನೀಡುತ್ತದೆ.

ನಿರ್ದಿಷ್ಟವಾಗಿ, ಸುಪ್ರೀಂ ಕೋರ್ಟ್ "ಜಾಮೀನು ಅರ್ಜಿಯಲ್ಲಿ, ಎಲ್ಲಾ ಕಾನೂನುಗಳನ್ನು ಚರ್ಚಿಸುವ 100 ಪುಟಗಳ ತೀರ್ಪು ನಮಗೆ ಆಶ್ಚರ್ಯವನ್ನುಂಟುಮಾಡುತ್ತದೆ" ಎಂದು ಹೇಳಿದೆ, ಬಹುಶಃ ಎಲ್ಲವನ್ನೂ ಪ್ರಾರಂಭಿಸಿದ ಪ್ರಕರಣವನ್ನು ಮರೆತಿರಬಹುದು , ಅಂದರೆ, ವಟಾಲಿ ಸುಪ್ರೀಂ ಕೋರ್ಟ್‌ ತೀರ್ಪು -  ಜಾಮೀನು ವಿಷಯದಲ್ಲಿ ತನ್ನದೇ ಒಂದು ತೀರ್ಪು!

ಶಾಸನಬದ್ಧ ವಿವರಣೆಯ ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಮಾತ್ರ  ತರ್ಕಿಸಬಹುದು ಮತ್ತು ಹೈಕೋರ್ಟ್‌ಗಳು - ಸಾಂವಿಧಾನಿಕ ನ್ಯಾಯಾಲಯಗಳು ತಮ್ಮದೇ ವ್ಯಾಪ್ತಿ ಯಲ್ಲಿ - ಮಾಡಬಾರದು ಎಂದು ಇದು ಸೂಚಿಸುತ್ತದೆ. ವಿಸ್ತರಣೆಯ ಮೂಲಕ, ಕಾನೂನುಗಳನ್ನು ಹೈಕೋರ್ಟ್‌ಗಳು ಪರೀಕ್ಷಿಸಬೇಕಾಗಿಲ್ಲದಿದ್ದರೆ, ವೈಯಕ್ತಿಕ ಬಂಧನಕ್ಕೊಳಗಾದವರು ಜೈಲಿನಲ್ಲಿಯೇ ಇರಬೇಕಾಗುತ್ತದೆ ಎಂದರ್ಥ, ಅಂದರೆ, ಅವರನ್ನು ಬಂಧಿಸುವ ಶಾಸನಗಳ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧರಿಸುವವರೆಗೆ? ಖಂಡಿತವಾಗಿ, ಇದು ಸಂಪೂರ್ಣವಾಗಿ ಅವೈಚಾರಿಕವಾಗುತ್ತದೆ .

ಫಾ  ಸ್ವಾಮಿಯ ಸೆರೆವಾಸ ಮತ್ತು ದುರದೃಷ್ಟಕರ ಸಾವಿಗೆ ಮತ್ತು ಅವರಂತಹ ಇನ್ನೂ ಅನೇಕರ ಜೈಲು ಶಿಕ್ಷೆಗೆ ಮುಂದಿನ ಪೀಳಿಗೆಗಳು  ನ್ಯಾಯಾಂಗವನ್ನು ದೂಷಿಸಲು ಅನುವಾಗುತ್ತದೆ.. ಆದರೆ ಪ್ರತಿಭಟನೆಯಲ್ಲಿ ಧ್ವನಿಗಳು ಹೆಚ್ಚುತ್ತಲೇ ಇರುತ್ತವೆ. ಫಾ .  ಸ್ವಾಮಿ ಸ್ವತಃ ಹೇಳಿದಂತೆ, “ನಾವು ಇನ್ನೂ ಹಾಡುಗಾರರ ಗು೦ಪಾಗಿ  ಹಾಡುತ್ತೇವೆ. ಪಂಜರದ ಹಕ್ಕಿ ಇನ್ನೂ ಹಾಡಬಹುದು. ”

ಅಜಿತ್ ಪ್ರಕಾಶ್ ಷಾ ಮಾಜಿ ಮುಖ್ಯ ನ್ಯಾಯಮೂರ್ತಿ, ದೆಹಲಿ ಹೈಕೋರ್ಟ್ ಮತ್ತು ಭಾರತದ ಕಾನೂನು ಆಯೋಗದ ಮಾಜಿ ಅಧ್ಯಕ್ಷರಾಗಿದ್ದಾರೆ. 

(೮ ಜುಲೈ ೨೦೨೧ - ದಿ ಹಿ೦ದು ಮತ್ತು ದಿ ವಯರ್ ಪತ್ರಿಕೆಗಳಲ್ಲಿ ಪ್ರಕಟಿತ ಲೇಖನವನ್ನು ಆಧರಿಸಿದೆ.)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು