ಮಾನವ ಹಕ್ಕುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದು
ಎನ್ ಎಚ್ ಆರ್ ಸಿ ಹೊಸ ಅಧ್ಯಕ್ಷರ ನೇಮಕ ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತದೆ
ನಿವೃತ್ತ ನ್ಯಾ. ಮೂ. ಅರುಣ್ ಮಿಶ್ರ ಇವರನ್ನು ರಾಷ್ಟ್ರೀಯ ಮಾನವೀಯ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ) ದ ಅಧ್ಯಕ್ಷ ರಾಗಿ ನೇಮಿಸಿರುವದು ಸಮ೦ಜಸವೇ? ಅನೇಕ ವರ್ಗಗಳು ಮೂರು ವಿಶಾಲ ಮತ್ತು ಯೋಚನಾರ್ಹವಾದ ಆಕ್ಷೇಪಣೆಗಳನ್ನು ಸೂಚಿಸಿದ್ದಾರೆ: ಕೇ೦ದ್ರ ಸರ್ಕಾರದೊಡನೆ ಅವರ ಸಾಮೀಪ್ಯ; ಅಂಚಿನಲ್ಲಿರುವ ಸಮುದಾಯಗಳಿಗೆ ಅನುಕೂಲಕರವಾಗಿಲ್ಲದ ಅವರ ನ್ಯಾಯಾಂಗ ದಾಖಲೆ; ಮತ್ತು ಅವರಿಗಿ೦ತ ಎಷ್ಟೋ ಹೆಚ್ಚು ಯೋಗ್ಯತೆ ಹೊ೦ದಿದ್ದ ಇತರ ಉಮೇದುವಾರರನ್ನು ಪರಿಗಣನೆಗೆ ತೆಗೆದುಕೊಳ್ಳದಿರುವದು.
ಮಿಶ್ರ ಅವರು ಆಡಳಿತದಲ್ಲಿರುವ ಪಕ್ಷಕ್ಕೆ ಸಮೀಪವಾಗಿದ್ದರು ಎನ್ನುವದು ರಹಸ್ಯವಲ್ಲ. ಸರ್ವೋಚ್ಚ ನ್ಯಾಯಾಲಯದ ಒಬ್ಬ ನ್ಯಾಯಾಧೀಶರಿ೦ದ ಪಾಲಿಸ ಬೇಕಾದ ನೈತಿಕ ನಡವಳಿಕೆಗೆ ವಿರುಧ್ಧವಾಗಿ ಅವರು ಪ್ರಧಾನ ಮ೦ತ್ರಿಯನ್ನು ದಾಸ್ಯಭಾವದ ಶಬ್ದಗಳಲ್ಲಿ ಹೊಗಳಿದ್ದಾಗಿ ವರದಿಯಾಗಿದೆ. ಕೇಂದ್ರ ಸರ್ಕಾರವು ಕಾಳಜಿ ವಹಿಸುವ ಪ್ರತಿಯೊಂದು ಪ್ರಮುಖ ಪ್ರಕರಣವನ್ನೂ ಅವರ ನೇತೃತ್ವದ ನ್ಯಾಯಪೀಠದ ಮುಂದೆ ಇಡಲಾಯಿತು, ಇದು 2018 ರ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ನ ಸಹ ನ್ಯಾಯಾಧೀಶರಿಂದ ಅಭೂತಪೂರ್ವ ದಂಗೆಗೆ ಕಾರಣವಾಯಿತು. ಈ ಪ್ರತಿಯೊಂದು ಪ್ರಕರಣದಲ್ಲೂ ಮಿಶ್ರಾ ನೇತೃತ್ವದ ನ್ಯಾಯಪೀಠ ನೀಡಿದ ತೀರ್ಪು ಕೇಂದ್ರ ಸರ್ಕಾರದ ಪರವಾಗಿದೆ ಎಂದು ಗಮನಿಸುವದು ಸಾಕಷ್ಟು ಆಶ್ಚರ್ಯಕರವಾಗಿದೆ. ಇವುಗಳಲ್ಲಿ ಕೆಲವು ಪ್ರಕರಣಗಳು ರಾಷ್ಟ್ರೀಯ ಪ್ರಾಮುಖ್ಯತೆ ಅಥವಾ ನ್ಯಾಯಾಂಗ ವ್ಯವಸ್ಥೆಯ ನೈತಿಕ ಸಮಗ್ರತೆಗಿಂತ, ಸರ್ಕಾರದ ಹಿತಾಸಕ್ತಿ ಕಾಪಾಡಲು ಬಹಳ ನಿರ್ಣಾಯಕವಾಗಿವೆ.
ನವದೆಹಲಿಯ ಲುಟಿಯೆನ್ಸ್ ವಲಯದಲ್ಲಿ ಮಿಶ್ರಾ ಅವರು ನಿವೃತ್ತಿಯಾದ ಹಲವು ತಿಂಗಳ ನಂತರ ಸರ್ಕಾರಿ ಬಂಗಲೆಯೊಂದರಲ್ಲಿ ಇನ್ನೂ ವಾಸವಾಗಿದ್ದಾರೆ ಎಂದು ವರದಿಯಾದಾಗ ನ್ಯಾಯಾಂಗ ನೀತಿಶಾಸ್ತ್ರವು ಮತ್ತೊಂದು ಆಘಾತವನ್ನು ಅನುಭವಿಸಿತು. ನಿವೃತ್ತಿಯ ಮೂರು ತಿಂಗಳೊಳಗೆ ನ್ಯಾಯಾಧೀಶರು ಖಾಲಿ ಮಾಡಬೇಕೆಂದು ನಿಯಮವಿದೆ.
ಎನ್‌ಎಚ್‌ಆರ್‌ಸಿ ಎಂಬುದು ಸರ್ಕಾರದ ಕಾನೂನುಬಾಹಿರ ಹಸ್ತಕ್ಷೇಪದ ವಿರುದ್ಧ ವ್ಯಕ್ತಿಯ ಜೀವನ ಹಕ್ಕನ್ನು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಒಂದು ಸ೦ಸ್ಥೆಯಾಗಿದೆ. ಮಿಶ್ರಾ ಅವರ ದಾಖಲೆಯು ಮತ್ತು ಅವರ ಪಕ್ಷಪಾತವು ಅವರು ಈ ಕಾರ್ಯಕ್ಕೆ ಸೂಕ್ತರಲ್ಲ, ತನ್ನಿ೦ದಾದ ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಕೇಂದ್ರ ಸರ್ಕಾರವನ್ನು ಯಾವುದೇ ರೀತಿಯಲ್ಲಿ ಹೊಣೆಗಾರರನ್ನಾಗಿ ಮಾಡುವ ಸಾಧ್ಯತೆ ಕಡಿಮೆ.ಎಂದು ಸೂಚಿಸುತ್ತದೆ.
ಮಿಶ್ರಾ ಅವರ ಸ್ವಂತ ನ್ಯಾಯಾಂಗ ದಾಖಲೆಯು ಅವರ ನ್ಯಾಯಾಂಗ ತತ್ತ್ವಶಾಸ್ತ್ರವು ಪರಾನುಭೂತಿಯ ಸಂಪೂರ್ಣ ಕೊರತೆಯಿಂದ ಮತ್ತು ಭಾರತದ ದೀನದಲಿತರ ಬಗ್ಗೆ ಕಾಳಜಿಯ ಅಭಾವದಿ೦ದ ಪ್ರೇರೇಪಿಸಲ್ಪಟ್ಟಿದೆ ಎಂದು ಸೂಚಿಸುತ್ತದೆ. ಅವರ ತೀರ್ಪುಗಳನ್ನು ಒಂದು ರೀತಿಯ ಗಾಂಧಿ-ವಿರೋಧಿ ಚಿ೦ತಾಮಣಿಯಿ೦ದ ನಿಶ್ಚಯಿಸಿದ೦ತೆ ತೋರುತ್ತದೆ : ಬಡವರ, ಶೋಚನೀಯ ಮತ್ತು ದುರ್ಬಲರ ಜೀವನವನ್ನು ಇನ್ನಷ್ಟು ಕೆಟ್ಟದಾಗಿಸುವಂತಹ ತೀರ್ಪನ್ನು ನೀಡಲು ಸಾಧ್ಯವಾದರೆ, ಮಿಶ್ರಾ ಹಾಗೆಯೇ ಮಾಡುತ್ತಾರೆ. ದೆಹಲಿಯ ಕೊಳೆಗೇರಿ ನಿವಾಸಿಗಳು, ಭಾರತದಾದ್ಯಂತ ಆದಿವಾಸಿಗಳು ಅಥವಾ ಬಲವಂತವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ರೈತರ ವಿಷಯವೇ ಆಗಿರಲಿ, ಮಿಶ್ರಾ ಅವರ ತೀರ್ಪುಗಳು ಅವರ ಜೀವನವನ್ನು ಇನ್ನಷ್ಟು ಹದಗೆಡಿಸುವ ಮಾರ್ಗಗಳನ್ನು ಕಂಡುಕೊಂಡವು. ಇವರೆಲ್ಲ ಸಂವಿಧಾನದಡಿಯಲ್ಲಿ ಹಕ್ಕುಗಳನ್ನು ಹೊಂದಿರುವ ವ್ಯಕ್ತಿಗಳು ಎಂಬ ಕಲ್ಪನೆಯು ಅವರ ತೀರ್ಪುಗಳಿಗೆ ಎಂದಿಗೂ ಗೋಚರಿಸಲಿಲ್ಲ.
ಈ ತರಹದ ನ್ಯಾಯಾಂಗ ದಾಖಲೆಯನ್ನು ಹೊಂದಿರುವ ಯಾರನ್ನಾದರೂ ಎನ್‌ಎಚ್‌ಆರ್‌ಸಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬುದು ಮಾನವ ಹಕ್ಕುಗಳ ಪರಿಕಲ್ಪನೆಗಾಗಿ ಪ್ರಸ್ತುತ ಆಡಳಿತದ ಸಂಪೂರ್ಣ ಅಸಡ್ಡೆ, ಘೃಣೆ ಇವುಗಳನ್ನು ಬಹಿರಂಗಪಡಿಸುತ್ತದೆ. ಈ ನೇಮಕವನ್ನು ‘ನಿವೃತ್ತಿಯ ನಂತರದ ಸ೦ಬಳಕ್ಕೊ೦ದು ಚಾಕರಿ’ ಎಂದು ಪರಿಗಣಿಸುವ, ಮತ್ತು ಸರ್ಕಾರಗಳೊಂದಿಗೆ ಯಾವುದೇ ನೈಜ ಮುಖಾಮುಖಿಯನ್ನು ತಪ್ಪಿಸಲು ಆದ್ಯತೆ ನೀಡಿದ, ಅಧ್ಯಕ್ಷರುಗಳ ಕಾರಣ ಅನೇಕ ವರ್ಷಗಳಿಂದ ದುರ್ಬಲಗೊಂಡಿರುವ ಎನ್ಎಚ್ಆರ್ ಸಿ ಸ೦ಸ್ಥೆಯು ಮಿಶ್ರಾ ಅವರ ನಾಯಕತ್ವದಲ್ಲಿ ಸರಿಪಡಿಸಲಾಗದ ಅಸಂಬದ್ಧತೆಯತ್ತ ಸಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರವೃತ್ತಿಯಂತೆ, ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರೊಂದಿಗೆ ಸಮಾಲೋಚಿಸಿ ಎನ್‌ಎಚ್‌ಆರ್‌ಸಿ ಅಧ್ಯಕ್ಷರ ನೇಮಕವನ್ನು ಮಾಡಬೇಕೆಂದು ಕಾನೂನು ಆದೇಶಿಸಿದ್ದರೂ, ಆಯ್ಕೆ ಸಮಿತಿಯಲ್ಲಿ ತನ್ನ ಅಭ್ಯರ್ಥಿಯನ್ನು ಮು೦ದೆ ತಳ್ಳಲು ಸರ್ಕಾರ ಮತ್ತೊಮ್ಮೆ ತನ್ನ ಬಹುಮತವನ್ನು ಬಳಸಿಕೊಂಡಿದೆ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಹಿನ್ನೆಲೆಯಿಂದ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ರಾಜ್ಯಸಭೆಯಲ್ಲಿನ ಪ್ರತಿಪಕ್ಷದ ನಾಯಕ ಮಲ್ಲಿಕರ್ಜುನ್ ಖರ್ಗೆ ಅವರ ಸಲಹೆಗಳು ಅತ್ಯಂತ ಸಮಂಜಸವಾದವು. ಆದಾಗ್ಯೂ, ಇದನ್ನು ಸರ್ಕಾರದ ಪ್ರಾಬಲ್ಯದ ಆಯ್ಕೆ ಸಮಿತಿಯು ರಭಸದಿಂದ ತಿರಸ್ಕರಿಸಿತು.
ಮಾನವ ಹಕ್ಕುಗಳ ಸಂರಕ್ಷಣಾ ಕಾಯ್ದೆಯಲ್ಲಿ ಗಮನಾರ್ಹವಾದ ತಿದ್ದುಪಡಿಯಿಂದ ಮಿಶ್ರಾ ಅವರ ನೇಮಕಾತಿಗೆ ಅನುಕೂಲವಾಯಿತು. ಈ ಸಂಸ್ಥೆಯ ಅಧ್ಯಕ್ಷರಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ನೇಮಕ ಮಾಡಲು ಇದ್ದ ನಿಬ೦ಧನೆಯನ್ನು ಬದಲಿಸಿ , 2019 ರ ತಿದ್ದುಪಡಿಯ ಮೂಲಕ ಸುಪ್ರೀಂ ಕೋರ್ಟ್‌ನ ಯಾವುದೇ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಅನುಮತಿಸಲಾಯಿತು. . ಇದಲ್ಲದೆ, ಅಧ್ಯಕ್ಷರ ಅವಧಿಯನ್ನು ಐದರಿಂದ ಮೂರು ವರ್ಷಕ್ಕೆ ಇಳಿಸಲಾಯಿತು. ಈ ಎರಡೂ ತಿದ್ದುಪಡಿಗಳು ಎನ್‌ಎಚ್‌ಆರ್‌ಸಿಯ ಸ್ವಾತಂತ್ರ್ಯ ಅಥವಾ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಬೇಕಾಗಿಲ್ಲ. ನಿವೃತ್ತ ಸಿಜೆಐಯನ್ನು ಎನ್‌ಎಚ್‌ಆರ್‌ಸಿಯ ಮುಖ್ಯಸ್ಥರನ್ನಾಗಿ ಮಾಡುವ ಆರಂಭಿಕ ಉದ್ದೇಶವೆಂದರೆ ಸ್ವಾತಂತ್ರ್ಯವನ್ನು ಮತ್ತು ಸ್ಥಾನಕ್ಕೆ ಒಂದು ನಿರ್ದಿಷ್ಟ ಮಟ್ಟದ ಅಧಿಕಾರವನ್ನು ಖಚಿತಪಡಿಸುವುದು. ಐದು ವರ್ಷಗಳ ಅಧಿಕಾರಾವಧಿಯು ಅಧ್ಯಕ್ಷರಿಗೆ ತಮ್ಮ ಅಧಿಕಾರ-ಜವಾಬುದಾರಿಗಳನ್ನು ಚಲಾಯಿಸಲು ಸಾಕಷ್ಟು ಸಮಯ ಮತ್ತು ಅವಕಾಶಗಳನ್ನು ನೀಡುವುದು.
ಪ್ರಾರಂಭದಿ೦ದಲೇ ಎನ್‌ಎಚ್‌ಆರ್‌ಸಿಯ ಸೀಮಿತ ಅಧಿಕಾರಗಳು ಮತ್ತು ಕಾರ್ಯಗಳ ವ್ಯಾಪ್ತಿಯಿಂದಾಗಿ ಹಕ್ಕುಗಳ ಕಾರ್ಯಕರ್ತರು ನಿರಾಶೆಗೊಂಡಿದ್ದರೆ, ಈಗ ಅದರ ಇನ್ನೂ ದುರ್ಬಲಗೊಳ್ಳುವ ಪ್ರಕ್ರಿಯೆಯನ್ನು ಕಾಣಬೇಕಾಗಿ ಬ೦ದಿದೆ. ಸ೦ಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಈಚೆಗೆ ಪ್ರಶ್ನೆಗಳು ಕೇಳಿಬ೦ದಿವೆ; ಅದರ ಇತ್ತೀಚಿನ ಕಾರ್ಯವೈಖರಿಯು ಸಾರ್ವಜನಿಕರಲ್ಲಿ ನ೦ಬಿಕೆಗೆ ಪ್ರೇರಣೆ ನೀಡಿಲ್ಲ. ಮಿಶ್ರಾ ಅವರ ನೇಮಕವು ಸಂಸ್ಥೆಗೆ ಮಾರಕ ಹೊಡೆತವನ್ನು ನೀಡುತ್ತದೆ, ತೆರಿಗೆದಾರರ ಹಣವು ಈ ಮತ್ತು ರಾಜ್ಯ ಮಟ್ಟದಲ್ಲಿ ಇದೇ ರೀತಿಯ ಸಂಸ್ಥೆಗಳಿಗೆ ಖರ್ಚು ಮಾಡಲು ಸಹ ಯೋಗ್ಯವಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಭಾರತದಲ್ಲಿ ಮಾನವ ಹಕ್ಕುಗಳನ್ನು ಗಂಭೀರವಾಗಿ ಪರಿಗಣಿಸುವುದಾದಲ್ಲಿ ನಿವೃತ್ತ ನ್ಯಾಯಾಧೀಶರು ಮತ್ತು ಅಧಿಕಾರಿಗಳಿಗೆ ‘ಸ೦ಬಳಕ್ಕಾಗಿ ಚಾಕರಿ’ ಗಳನ್ನು ರಚಿಸುವುದಕ್ಕಿಂತ ಪೊಲೀಸ್ ಮತ್ತು ಅಧೀನ ನ್ಯಾಯಾಂಗದಲ್ಲಿ ಹೆಚ್ಚಿನ ಮತ್ತು ಗುಣಾತ್ಮಕವಾದ ಹಣಹೂಡಿಕೆ ಅಗತ್ಯ.
(ಆರ್ಥಿಕ ಮತ್ತು ರಾಜಕೀಯ ವಾರಪತ್ರಿಕೆಯ ಸ೦ಪಾದಕೀಯದಿ೦ದ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ