ಡೆಮಾಕ್ರಸಿ ಎ೦ಡ್ ಪವರ್ - ಪ್ರಜಾಪ್ರಭುತ್ವ ಮತ್ತು ಅಧಿಕಾರ


                                                                     ನೋಮ್ ಚೋಮ್ಸ್ಕಿ


                                                        ಜಾನ್ ಡ್ರೇಝ


ಡೆಮಾಕ್ರಸಿ ಎ೦ಡ್ ಪವರ್ - ಪ್ರಜಾಪ್ರಭುತ್ವ ಮತ್ತು ಅಧಿಕಾರ ಎಂಬುದು ಚೋಮ್ಸ್ಕಿಯ ದೆಹಲಿ ಉಪನ್ಯಾಸಗಳನ್ನು ಒಳಗೊಂಡಿರುವ ಪುಸ್ತಕದ ಶೀರ್ಷಿಕೆಯಾಗಿದೆ. ಇದನ್ನು ಅರ್ಥ ಶಾಸ್ತ್ರಜ್ಞ ಜಾನ್ ಡ್ರೇಝ ಸಂಪಾದಿಸಿದ್ದಾರೆ.  

ಚೋಮ್ಸ್ಕಿ ಪ್ರದರ್ಶಿಸಿದ ಒಳನೋಟಗಳನ್ನು ಮತ್ತು ದೂರದೃಷ್ಟಿಯನ್ನು ಮುನ್ನುಡಿಯಲ್ಲಿ ಡ್ರೇಝ ಎತ್ತಿ ತೋರಿಸಿದ್ದಾರೆ. 

 

ಅಧಿಕಾರ ಕೇಂದ್ರೀಕರಣಕ್ಕೆ ನೋಮ್ ಚೋಮ್ಸ್ಕಿಯವರ ತತ್ವಬದ್ಧ ವಿರೋಧದ ತಳಹದಿಯ ಮೇಲೆ ಈ ಉಪನ್ಯಾಸಗಳು ಆಧರಿಸಿವೆ.  ಚೋಮ್ಸ್ಕಿಯ ವಿರೋಧ ರಾಜ್ಯ ಪ್ರಾಧಿಕಾರದ ಅಧಿಕಾರವಾಗಲಿ , ಅಥವಾ ಬೃಹತ್ ವಾಣಿಜ್ಯ ಸಾಂಸ್ಥಿಕ (ಕಾರ್ಪೊರೆಟ್) ಶಕ್ತಿಯದಾಗಲಿ, ಅಥವಾ ನಮಗೆ  ಸಂಬಂಧಿಸಿದಂತೆ ಭಾರತೀಯ ಸಮಾಜದಲ್ಲಿನ ಮೇಲ್ಜಾತಿಗಳದಾಗಲಿ, ಕುಟುಂಬದಲ್ಲಿ ಮಹಿಳೆಯರ ಮೇಲೆ ಪುರುಷರದಾಗಲಿ , ಹೊಣೆಗಾರಿಕೆಯ ಬಗ್ಗೆ  ಪ್ರಶ್ನಾತೀತ  ಮು೦ದಾಳು  ನಾಯಕನದಾಗಲಿ , ಅಥವಾ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಯ ಶಕ್ತಿಯಾಗಲಿ, ಇವುಗಳಿಗೆಲ್ಲ ಅನ್ವಯಿಸುತ್ತವೆ.   ಈ ದ್ದೃಷ್ಟಿ  ಅರಾಜಕತಾವಾದಿ (ಅನಾರ್ಕಿಸ್ಟ್) ಪರ೦ಪರೆಗೆ ಸೇರಿದ್ದು , ಆದರೆ ಚೋಮ್ಸ್ಕಿಯು  ಇದನ್ನು ರೂಪಿಸುವುದು ವಿಶೇಷವಾಗಿ ಆಕರ್ಷಕವಾಗುತ್ತದೆ: “... ಶ್ರೇಣಿವ್ಯವಸ್ಥೆಯ  ಮತ್ತು ಅಧಿಕಾರದ ಯಾವುದೇ ರಚನೆಯು, ಅದು  ವೈಯಕ್ತಿಕ ಸಂಬಂಧಗಳನ್ನು ಒಳಗೊಂಡಿರಲಿ ಅಥವಾ ದೊಡ್ಡ ಸಾಮಾಜಿಕ ಕ್ರಮವನ್ನು ಒಳಗೊಂಡಿರಲಿ, ಆ ರಚನೆಯು ನ್ಯಾಯವಾಗಿದೆ ಎನ್ನುವ ಸಮರ್ಥನೆಯನ್ನು ಒದಗಿಸುವ   ಭಾರವನ್ನು ಹೊತ್ತುಕೊಳ್ಳುತ್ತದೆ. ಅದು ಆ ಭಾರವನ್ನು ಹೊರಲು ಸಾಧ್ಯವಾಗದಿದ್ದರೆ - ಕೆಲವೊಮ್ಮೆ ಅದು ಸಾಧ್ಯವಿರಬಹುದು - ಆಗ ಅದು ನ್ಯಾಯಸಮ್ಮತವಲ್ಲ, ಅಡನಾಡಿ,  ಮತ್ತು ಅದನ್ನು ಕೆಡವಬೇಕು. ” ಇದು ನನಗೆ ಆಲೋಚನೆ ಮತ್ತು ಕ್ರಿಯೆಯ ಪ್ರಾಯೋಗಿಕ ಮತ್ತು ದೂರಗಾಮಿ ತತ್ವದಂತೆ ತೋರುತ್ತದೆ.

ಇದಕ್ಕೆ ಸಂಬಂಧಿಸಿದ೦ತೆ  ಉಪನ್ಯಾಸಗಳ ಮತ್ತೊಂದು ವಿಷಯವೆಂದರೆ ಅಧಿಕಾರ ಮತ್ತು ಸವಲತ್ತುಗಳ ಸಾಂದ್ರತೆಯು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯವಾಗಿದೆ. ಇದು ಹೊಸ ಆಲೋಚನೆಯಲ್ಲ, ಆದರೆ ಚೋಮ್ಸ್ಕಿ ಇದನ್ನು ಇತರರಿಗಿ೦ತ ಮು೦ದಕ್ಕೆ ತೆಗೆದುಕೊಂಡು ಹಲವಾರು ಸಂದರ್ಭಗಳಲ್ಲಿ ಹೆಚ್ಚಿನ ಸ್ಪಷ್ಟತೆಯೊಂದಿಗೆ ಅನ್ವಯಿಸಿದ್ದಾರೆ. ಭಾರತದಲ್ಲಿ, ಪ್ರಜಾಪ್ರಭುತ್ವ ಮತ್ತು ಅಧಿಕಾರದ ಏಕಾಗ್ರತೆಯ ನಡುವಿನ ಸಂಘರ್ಷವು ಡಾ. ಅಂಬೇಡ್ಕರ್ ಅವರ ಪ್ರಮುಖ ಕಾಳಜಿಯಾಗಿದ್ದು, ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವ ಅಪೂರ್ಣವಾಗಲಿದೆ ಎಂದು ಯಾವಾಗಲೂ ಒತ್ತಿ ಹೇಳಿದರು. "ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವು ರಾಜಕೀಯ ಪ್ರಜಾಪ್ರಭುತ್ವದ ಅಂಗಾಂಶಗಳು ಮತ್ತು ನಾರುಗಳಾಗಿವೆ" ಎಂದು ಅವರು ಬರೆದಿದ್ದಾರೆ. ಅಂಗಾಂಶ ಮತ್ತು ನಾರುಗಳು  ಪುಷ್ಟವಾಗುವದರಿ೦ದ  ದೇಹದ ಶಕ್ತಿ ಹೆಚ್ಚಾಗುತ್ತದೆ. ”ಈ ವಿಷಯದಲ್ಲಿ, ಚೋಮ್ಸ್ಕಿ ಮತ್ತು ಅಂಬೇಡ್ಕರ್ ಒಂದೇ ತರಂಗಾಂತರದಲ್ಲಿದ್ದಾರೆ, ಇಬ್ಬರ ವಿಚಾರಗಳು  ಪ್ರಮುಖ ರೀತಿಯಲ್ಲಿ ಭಿನ್ನವಾಗಿದ್ದರೂ ಸಹ (ಉದಾಹರಣೆಗೆ, ಆರ್ಥಿಕ ಪ್ರಜಾಪ್ರಭುತ್ವವನ್ನು ತರುವಲ್ಲಿ ರಾಜ್ಯದ ಪಾತ್ರದ ಮೇಲೆ). ಚೋಮ್ಸ್ಕಿ ಮತ್ತು ಅಂಬೇಡ್ಕರ್ ಇಬ್ಬರೂ ಜಾನ್ ಡ್ಯೂವಿಯಿಂದ ಬಲವಾಗಿ ಪ್ರಭಾವಿತರಾಗಿದ್ದರು. ಪ್ರಜಾಪ್ರಭುತ್ವ ಮತ್ತು ಅಧಿಕಾರದ ಏಕಾಗ್ರತೆಯ ನಡುವಿನ ಸಂಘರ್ಷದ ಬಗ್ಗೆ ಜಾನ್ ಡ್ಯೂವಿ ಆಳವಾಗಿ ಕಾಳಜಿ ವಹಿಸಿದ್ದರು.

ಮೂರನೆಯ ವಿಷಯವೆಂದರೆ ಕಾರ್ಪೊರೇಟ್ ಶಕ್ತಿಯ ಬೆಳವಣಿಗೆ ಮತ್ತು "ರಾಜ್ಯ-ಬೆಂಬಲಿತ ಖಾಸಗಿ ಶಕ್ತಿಯ ಹೊಸ ನಿರಂಕುಶಾಧಿಕಾರ" ದಿಂದ ಉಂಟಾಗುವ ನಿರ್ದಿಷ್ಟ ಬೆದರಿಕೆ. ಖಾಸಗಿ ಸಂಸ್ಥೆಗಳು "ಲೆಕ್ಕಿಸಲಾಗದ ಹೊಣೆಗಾರಿಕೆಯ ಪ್ರಶ್ನಾತೀರ್ಥ ಖಾಸಗಿ ದಬ್ಬಾಳಿಕೆಗಳು" ಎಂಬ ಅಭಿಪ್ರಾಯವನ್ನು ಚೋಮ್ಸ್ಕಿ ಎ೦ದೂ ಬಿಟ್ಟುಕೊಳ್ಳುವುದಿಲ್ಲ.. ಕಾರ್ಪೊರೇಟ್ ಬಂಡವಾಳಶಾಹಿ, ಅವರು ಕ೦ಡಿರುವ೦ತೆ, ಸಾಮಾನ್ಯ ಬೇರುಗಳನ್ನು ಹೊಂದಿರುವ ನಿರ೦ಕುಶ ಪ್ರಭುತ್ವದ ಮೂರು ರೂಪಗಳಲ್ಲಿ - ಬೊಲ್ಶೆವಿಸ್ಮ್, ಫಾಸಿಸ್ಮ್, ಮತ್ತು ಕಾರ್ಪೊರೇಟ್ ನಿಗಮಗಳು -  ಕೊನೆಯಲ್ಲಿ ಇನ್ನೂ  ಬದುಕುಳಿದ ವ್ಯವಸ್ಥೆ ಎ೦ದರೆ ಕಾರ್ಪೊರೆಟ್ ಬಡವಾಳಶಾಹಿ. ಆದರೆ ಇದು ಇತರ ಎರಡಕ್ಕಿಂತ ಹೆಚ್ಚು ಅಜೇಯವಲ್ಲ.. ವಾಸ್ತವವಾಗಿ, ಇದು ದುರ್ಬಲವಾಗಿದೆ ಎಂದು ನಾನು ಭಾವಿಸುತ್ತೇನೆ.   ಬೊಲ್ಶೆವಿಸಮ್ ಮತ್ತು ಫಾಸಿಸಮ್ ಗಳ ಹಿ೦ದೆ ಇದ್ದ ಬಲಾತ್ಕಾರದ  ಶಕ್ತಿ ಕಾರ್ಪೊರೇಟ ಶಾಹಿಗೆ ಇಲ್ಲ. ಆದ್ದರಿಂದ ಇದನ್ನು ಪ್ರಜಾಪ್ರಭುತ್ವ ನಿಯಂತ್ರಣ ವಿಜಯಿಸುವ೦ತೆ  ಉರುಳಿಸಬಹುದು.

"ಪ್ರಜಾಪ್ರಭುತ್ವ ನಿಯಂತ್ರಣ" ವನ್ನು ಹೇಗೆ ಚಲಾಯಿಸಬೇಕು ಎಂಬುದು ಚೋಮ್ಸ್ಕಿಗೆ ಒ೦ದು  ಖಚಿತ ಸೂತ್ರ ಅಥವಾ ನೀಲನಕ್ಷೆಯನ್ನು ಹೊಂದಿರುವ ವಿಷಯವಲ್ಲ. ಬದಲಾಗಿ, ಪ್ರಜಾಪ್ರಭುತ್ವ ನಿಯಂತ್ರಣವು ಒಂದು ಸಾಮಾನ್ಯ ತತ್ವವಾಗಿದ್ದು, ಸಾಮಾಜಿಕ ಜೀವನದ  ವಿವಿಧ  ಕ್ಷೇತ್ರಗಳಲ್ಲಿ ಇದನ್ನು ಕ್ರಮೇಣ ಅನ್ವಯಿಸುವ ಭರವಸೆಯನ್ನು ನಾವು ಹೊಂದಬಹುದು. ಆರ್ಥಿಕ ಸಂಘಟನೆಯ ಸರ್ವಾಧಿಕಾರಿ ವಿಧಾನಗಳನ್ನು ಪರ್ಯಾಯ ಸಂಸ್ಥೆಗಳ ಆಧಾರದ ಮೇಲೆ ಬದಲಿಸುವುದು ಇದರಲ್ಲಿ ಸೇರಿದೆ, ಉದಾಹರಣೆಗೆ, ಕಾರ್ಮಿಕರದೇ ಸ್ವ೦ತ ಕಾರ್ಯ ನಿರ್ವಹಣೆ, ಸ್ವಯಂಪ್ರೇರಿತ ಸಹಕಾರ, ಭಾಗವಹಿಸುವಿಕೆ ಅ೦ದರೆ ಪಾಲುಗಾರಿಕೆಯ ಯೋಜನೆ , ಮತ್ತು ಒಕ್ಕೂಟ ತತ್ವ ಮು೦ತಾದವು..

ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಮತ್ತು ಅವರ ತಮ್ಮದೇ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಖಾಸಗಿ ನಿಗಮಗಳು ಮತ್ತು ಇತರ ಅಧಿಕಾರ ಕೇಂದ್ರಗಳನ್ನು ಶಕ್ತಗೊಳಿಸುವಲ್ಲಿಮತ್ತು ಅವರ ಪ್ರಾಬಲ್ಯವನ್ನು ಕಾಪಾಡಿ ಕೊಳ್ಳುವ ಪ್ರಯತ್ನದಲ್ಲಿ ಪ್ರಚಾರದ ಪಾತ್ರ ನಾಲ್ಕನೆಯ ಅಗತ್ಯ ಕಲ್ಪನೆಯಾಗಿದೆ. “ಇಪ್ಪತ್ತನೇ ಶತಮಾನವು ಮೂರು ರಾಜಕೀಯ ಪ್ರಾಮುಖ್ಯತೆಯ ಬೆಳವಣಿಗೆಗಳಿಂದ ನಿರೂಪಿಸಲ್ಪಟ್ಟಿದೆ: ಪ್ರಜಾಪ್ರಭುತ್ವದ ಬೆಳವಣಿಗೆ;  ಬ೦ಡವಾಳಶಾಹಿ ಶಕ್ತಿಯ ಬೆಳವಣಿಗೆ; ಮತ್ತು ಈ ಸಾಂಸ್ಥಿಕ ಶಕ್ತಿಯನ್ನು ಪ್ರಜಾಪ್ರಭುತ್ವದ ವಿರುದ್ಧ ರಕ್ಷಿಸುವ ಸಾಧನವಾಗಿ ಕಾರ್ಪೊರೇಟ್ ಪ್ರಚಾರದ ಬೆಳವಣಿಗೆ.” (ಅಲೆಕ್ಸ್ ಕ್ಯಾರಿ)

 ಪ್ರಚಾರವು ಪ್ರಜಾಪ್ರಭುತ್ವ ಸಮಾಜಗಳಲ್ಲಿ ವ್ಯಾಪಕವಾದ ನಿಯಂತ್ರಣ ಸಾಧನವಾಗಿದೆ ಎಂಬ ಕಲ್ಪನೆಯು ಚೋಮ್ಸ್ಕಿಯ ಬರಹಗಳ ಪರಿಚಯವಿಲ್ಲದವರಿಗೆ  ವಿಶ್ವಾಸಾರ್ಹವಲ್ಲದ್ದಾಗಿ  ತೋರಬಹುದು, ಏಕೆಂದರೆ ಇದು ಪಿತೂರಿ ಸಿದ್ಧಾಂತದಂತೆ ತೋರುತ್ತದೆ. ಆದರೆ ಕಾರ್ಪೊರೇಟ್ ಪ್ರಚಾರವು ಸಂಘಟಿತ ಪಿತೂರಿಯಲ್ಲ. ಇದು ಮುಖ್ಯವಾಗಿ ಒಂದು ರೀತಿಯ ಸೋಸುವ (ಫಿಲ್ಟರಿಂಗ್) ಪ್ರಕ್ರಿಯೆಯ ಮೂಲಕ ಕಾರ್ಯನಿರ್ವಹಿಸುತ್ತದೆ, ಆ ಮೂಲಕ ಸರಿಯಾದ ವಿಷಯಗಳನ್ನು ಹೇಳುವವರು (ಕಾರ್ಪೊರೇಟ್ ಮೇಲಧಿಕಾರಿಗಳು ಕೇಳಲು ಇಷ್ಟಪಡುವ ವಿಷಯಗಳು) ಏಣಿಯನ್ನು ಏರಲು ಸಾಧ್ಯವಾಗುತ್ತದೆ ಮತ್ತು ಉಳಿದವರು ಹಿ೦ದೆ ಬೀಳುತ್ತಾರೆ. ಇದರ ಪರಿಣಾಮವಾಗಿ, ಕಾರ್ಪೊರೇಟ್ ಪ್ರಾಯೋಜಿತ ಸಾಮೂಹಿಕ ಮಾಧ್ಯಮ ವ್ಯವಸ್ಥೆಯು ಮೇಲ್ನೋಟಕ್ಕೆ ಬಹುತ್ವ-ವಿವಿಧತೆಗಳನ್ನು ಒಳಗೊಳ್ಳುವದಾಗಿ  ಮತ್ತು ವಿರೋಧಿ ವಿಚಾರಗಳಿಗೆ ಅವಕಾಶ ನೀಡುವದಾಗಿ ತೋರಿದರೂ, ಸಾರ್ವಜನಿಕ ಚರ್ಚೆಯನ್ನು ನಿಜಕ್ಕೂ ಅದು ವಿಶೇಷ ಸ್ಥಾನವನ್ನು ಮತ್ತು ಅಧಿಕಾರವನ್ನು ಪಡೆದಿರುವ ಗಣ್ಯ  ವಿಭಾಗಕ್ಕೆ ಸರಿತೋರುವ ಒಂದು ಕಿರಿದಾದ ಚೌಕಟ್ಟಿಗೆ ನಿರ್ಬಂಧಿಸುತ್ತದೆ. ಚೋಮ್ಸ್ಕಿ ಗಮನಿಸಿದಂತೆ, ಪ್ರಚಾರ ವ್ಯವಸ್ಥೆಯು ಸಮೂಹ ಮಾಧ್ಯಮಗಳನ್ನು ಮಾತ್ರವಲ್ಲದೆ ಮನರಂಜನಾ ಉದ್ಯಮದಂತಹ ಸಂಬಂಧಿತ ಕ್ಷೇತ್ರಗಳನ್ನೂ ಸಹ ಒಳಗೊಂಡಿದೆ, ಮತ್ತು “ಅದರ ಅಭ್ಯಾಸಕಾರರು ಒಪ್ಪಿಕೊಳ್ಳಲು ಇಷ್ಟಪಡುವದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವೃತ್ತಿಪರ  ಜ್ಞಾನಕ್ಕೂ  ಸಹ ಚಾಚುತ್ತದೆ”: ಸವಲತ್ತು ಮತ್ತು ಅಧಿಕಾರ ಪಡೆದವರ ಮೆಚ್ಚಿಗೆ ಪಡೆಯುವ ಕಲ್ಪನೆಗಳು   ( ಉದಾಹರಣೆಗೆ ಅರ್ಥಶಾಸ್ತ್ರದಲ್ಲಿ ಸಾಮಾನ್ಯವಾದ ವಿಚಿತ್ರ ಕಲ್ಪನೆ, “ವೈಚಾರಿಕತೆ ಮತ್ತು ಸ್ವಹಿತಾಸಕ್ತಿ ಹೆಚ್ಚುಕಡಿಮೆ ಸಮಾನಾರ್ಥಕವಾಗಿದೆ”) ಮೆರೆದಾಡುತ್ತವೆ ಆದರೆ ಅವರ ಹಿತಾಸಕ್ತಿಗಳಿಗೆ ಧಕ್ಕೆ ತರುವ ವಿಚಾರಗಳನ್ನು ಬದಿಗೊತ್ತುತ್ತವೆ. ಈ ಪ್ರಕ್ರಿಯೆಯು ಸಾಕಷ್ಟು ಸ್ಪಷ್ಟವಾಗಿದೆ, ಆದರೆ ಪ್ರಚಾರ-ಮುಕ್ತ ಸಮಾಜದ ಭ್ರಮೆಗೆ ನಾವು ತುಂಬಾ ಒಗ್ಗಿಕೊ೦ಡಿದ್ದೇವೆ, ಅದರಿಂದ ನಮ್ಮನ್ನು ಮುಕ್ತಗೊಳಿಸಲು ಸ್ವಲ್ಪ ಯೋಚನೆ ಬೇಕಾಗುತ್ತದೆ.

 

ಈ ವಿಚಾರಗಳನ್ನು ಹೆಚ್ಚಾಗಿ ಯುನೈಟೆಡ್ ಸ್ಟೇಟ್ಸ್‌ ಅಮೆರಿಕ ದೇಶಕ್ಕೆ  ಸಂಬಂಧಿಸಿದಂತೆ ಇದ್ದರೂ, ಅವು ಭಾರತಕ್ಕೆ ಸಮಯ ಕಳೆದಂತೆ ಹೆಚ್ಚು ಪ್ರಸ್ತುತವಾಗುತ್ತಿದೆ. ವಾಸ್ತವವಾಗಿ, ಭಾರತವು ಅಮೆರಿಕದೇಶದ೦ತೆ  ಹೆಚ್ಚು ಹೆಚ್ಚು ಆಗುತ್ತಿದೆ (ಉದಾಹರಣೆಗೆ "ಅಭಿವೃದ್ಧಿ ಹೊಂದಿದ" ಸಮಾಜವು ಹೇಗೆ ಕಾಣುತ್ತದೆ ಎಂಬುದರ ಭಾರತೀಯ ಗಣ್ಯ ವಿಭಾಗಗಳ ವಿಚಿತ್ರ ಪರಿಕಲ್ಪನೆ ಅಮೆರಿಕದ ಮಾದರಿಯನ್ನೇ ಹಿ೦ಬಾಲಿಸುತ್ತದೆ). ಚೋಮ್ಸ್ಕಿ ಅಮೆರಿಕ ದೇಶವನ್ನು ಸೂಕ್ತವಾಗಿ ವಿವರಿಸಿದಂತೆ ಭಾರತವು ಖಂಡಿತವಾಗಿಯೂ "ವಾಣಿಜ್ಯ ವ್ಯವಹಾರ-ಚಾಲಿತ ಸಮಾಜ" ವಾಗುವ ಅಪಾಯದಲ್ಲಿದೆ. ಭಾರತ ಇನ್ನೂ ಕೆಲವು ವಿಷಯಗಳಲ್ಲಿ ಆಕರ್ಷಕ  ಪ್ರಜಾಪ್ರಭುತ್ವವಾಗಿದ್ದರೂ, ಕಾರ್ಪೊರೇಟ್  ಶಕ್ತಿಯ ಬೆಳವಣಿಗೆಯು ಅರವತ್ತೈದು ವರ್ಷಗಳ ಹಿಂದೆ ಡಾ.ಅಂಬೇಡ್ಕರ್ ಚರ್ಚಿಸಿದ ಮೂಲಭೂತ ವಿರೋಧಾಭಾಸಗಳನ್ನು ಇನ್ನೂ ಹೆಚ್ಚಿಸುತ್ತದೆ. ಚೋಮ್ಸ್ಕಿ , ಈ ಉಪನ್ಯಾಸಗಳಲ್ಲಿ, ಭಾರತದ ಬಗ್ಗೆ ತಜ್ಞ ಸಲಹೆಯನ್ನು ನೀಡುವುದಿಲ್ಲ, ಆದರೆ ಅವರ ಆಲೋಚನೆಗಳು ಈ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಹಳ ಸಹಾಯ ಮಾಡುತ್ತದೆ.

ಉದಾಹರಣೆಗೆ, ಭಾರತೀಯ ವ್ಯವಹಾರ ಮಾಧ್ಯಮದಲ್ಲಿ ಸಾಮಾಜಿಕ ಕಾರ್ಯಕ್ರಮಗಳ ಕುರಿತಾದ ಬರವಣಿಗೆಗಳ  ಒಳಗಿನ ಗುಟ್ಟನ್ನು  ತಿಳಿದು ಕೊಳ್ಳಲು  ಚೋಮ್ಸ್ಕಿಯ ವಿಚಾರಗಳು ಸಾಕಷ್ಟು ಸಹಾಯಕವಾಗಿವೆ ಎಂದು ನಾನು ಕಂಡುಕೊಂಡಿದ್ದೇನೆ. ಸಾಮಾನ್ಯ ಪಲ್ಲವಿ (ಗಣ್ಯರ “ಪಾರ್ಟಿ ಲೈನ್” ) ಎಂದರೆ ಸಾಮಾಜಿಕ ಕಾರ್ಯಕ್ರಮಗಳು ಸಾರ್ವಜನಿಕ ಹಣದ ವ್ಯರ್ಥ - ಅವುಗಳನ್ನು ಹಂತಹಂತವಾಗಿ ನಿರ್ಮೂಲಗೊಳಿಸಬೇಕು ಅಥವಾ ಖಾಸಗೀಕರಣಗೊಳಿಸಬೇಕು. ಕಲಿತ ಮತ್ತು ನಿಷ್ಪಕ್ಷಪಾತ ವ್ಯಾಖ್ಯಾನಕಾರರ ತೋರಿಕೆಯಲ್ಲಿ ಬರೆಯುವ ಸ್ವತಂತ್ರ ಅಂಕಣಕಾರರ ಸುದೀರ್ಘ ಪಟ್ಟಿಯಿಂದ ಈ ಸಾಲನ್ನು ಗಮನಾರ್ಹವಾದ ಸ್ಥಿರತೆಯೊಂದಿಗೆ ಅನುಸರಿಸಲಾಗುತ್ತದೆ. ನಿಜವಾದ, ಮಾತನಾಡದೆ ಸೂಚ್ಯವಾದ  ಒಮ್ಮತ ಇದು: ಸಾಮಾಜಿಕ ಕಾರ್ಯಕ್ರಮಗಳು ವ್ಯಾಪಾರ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ, ಏಕೆಂದರೆ ಹೆಚ್ಚಿನ ಸಾಮಾಜಿಕ ಖರ್ಚು ಎಂದರೆ ಹೆಚ್ಚಿನ ತೆರಿಗೆಗಳು, ಅಥವಾ ಹೆಚ್ಚಿನ ಬಡ್ಡಿದರಗಳು ಅಥವಾ ಕಾರ್ಪೊರೇಟ್ ದೇಣಿಗೆಗಳಿಗೆ (ಇವು ‘ಪ್ರೋತ್ಸಾಹಕಗಳು’ ಎ೦ದು ಕರೆಯಲ್ಪಡುತ್ತವೆ) ಕಡಿಮೆ ಸಾರ್ವಜನಿಕ ಹಣ .  ಯಶಸ್ವಿಯಾಗಲು ಬಯಸುವ ವ್ಯಾಪಾರ ಅಂಕಣಕಾರರು (ಉದಾಹರಣೆಗೆ ಕಾರ್ಪೊರೇಟ್ ಪ್ರಾಯೋಜಿತ ಸೆಮಿನಾರ್‌ಗಳು ಅಥವಾ ಟಿವಿ ಕಾರ್ಯಕ್ರಮಗಳಿಗೆ ಆಮಂತ್ರಣಗಳನ್ನು ಪಡೆಯಲು ಇಚ್ಚಿಸುವವರು) ಅವರು ಏನು ಬರೆಯಬೇಕೆಂಬುದರ ಬಗ್ಗೆ ಚೆನ್ನಾಗಿ ತಿಳಿದುಕೊ೦ಡಿದ್ದಾರೆ. ಅವರ ಲೇಖನಗಳು ವಾದಗಳು ಅಥವಾ ಪುರಾವೆಗಳ ವಿಷಯದಲ್ಲಿ ಹೆಚ್ಚು  ಬೌದ್ಧಿಕ ಗುಣವನ್ನು ಹೊಂದದೆ ಇದ್ದರೂ,  ಅವುಗಳು ಸವಲತ್ತು ಪಡೆದ ಹಿತಾಸಕ್ತಿಗಳನ್ನು ಪೂರೈಸುವ ಕಾರಣದಿ೦ದಾಗಿ ವಿಶಾಲವಾಗಿ ಓದಲ್ಪಡುತವೆ. ಕೆಲವು ಸಮರ್ಥ ಮತ್ತು ಸುಶಿಕ್ಷಿತ, ಲೇಖಕರು ಸಾಮಾಜಿಕ ಕಾರ್ಯಕ್ರಮಗಳು ಹಣದ ವ್ಯರ್ಥ ವೆಚ್ಚ ಎಂದು ನಿಜಕ್ಕೂ ನಂಬಬಹುದು. ಆದರೆ ಅವರು   ಶಕ್ತಿಹೊ೦ದಿರುವ ಆಸಕ್ತಿಗಳಿಗೆ ಹೊ೦ದಾಣಿಕೆಯಾದ ವಿಷಯಗಳನ್ನು ವರ್ಣಿಸುತ್ತಾರೆ ಮತ್ತು ಹೆಚ್ಚಿನ ತೆರಿಗೆ ಹಾಕುವದನ್ನು ಅಥವಾ ಕನಿಷ್ಠ ವೇತನವನ್ನು ಪ್ರತಿಪಾದಿಸುವುದನ್ನು ತ್ಯಜಿಸುತ್ತಾರೆ. ಅವರ ಆಸಕ್ತಿಗಳು ಅವರ ಅಭಿಪ್ರಾಯಗಳಿಗೆ ಬಣ್ಣ ನೀಡುವುದಿಲ್ಲ ಎಂದು ನಂಬುವುದು ಕಷ್ಟ. ಇದೆಲ್ಲದರ ಫಲಿತಾಂಶವು ಪಟ್ಟುಹಿಡಿದ ಪ್ರಚಾರದ ಯುದ್ಧವಾಗಿದ್ದು, ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ತರ್ಕಬದ್ಧ ಸಾರ್ವಜನಿಕ ಚರ್ಚೆಯನ್ನು ನಡೆಸುವುದು ವಾಸ್ತವಿಕವಾಗಿ ಅಸಾಧ್ಯವಾಗಿದೆ.

 

ಈ ಪುಸ್ತಕವು ಕೇವಲ ಲೆಕ್ಕಿಸಲಾಗದ ಶಕ್ತಿಗಳಿಂದ ಪ್ರಜಾಪ್ರಭುತ್ವವನ್ನು ಮಟ್ಟಹಾಕುವ ಬಗ್ಗೆ ಮಾತ್ರ ಅಲ್ಲ . ಇದು  ಜನಪ್ರಿಯ ಹೋರಾಟಗಳ ಮೂಲಕ ಈ ವಿಧ್ವಂಸಕತೆಯನ್ನು ಹೇಗೆ ವಿರೋಧಿಸಬಹುದು ಎಂಬುದರ ಬಗ್ಗೆಯೂ ಇದೆ. ಕೇಂದ್ರೀಕೃತ ಶಕ್ತಿಯ ಬಗ್ಗೆ ಚೋಮ್ಸ್ಕಿಯವರ ದೋಷಾರೋಪಣೆಯು ಯಾವಾಗಲೂ ಜಗತ್ತನ್ನು ಬದಲಿಸುವ ಸಾಮಾನ್ಯ ಜನರ ಸಾಮರ್ಥ್ಯದ ಬಗ್ಗೆ ಮೂಲಭೂತ ವಿಶ್ವಾಸದೊಂದಿಗೆ ಕೈಜೋಡಿಸುತ್ತದೆ. ವಾಸ್ತವವಾಗಿ, ಸಾಮಾನ್ಯ ಜನರ ಹೋರಾಟಗಳು ಈಗಾಗಲೇ ಜಗತ್ತನ್ನು ಅನೇಕ ವಿಧಗಳಲ್ಲಿ ಉತ್ತಮ ಸ್ಥಳವನ್ನಾಗಿ ಮಾಡಿವೆ. ಭವಿಷ್ಯವನ್ನು ನೋಡುವಾಗ, "ಪ್ರತಿ ಸಂಸ್ಥೆಯ ಸಾಮಾನ್ಯ ಜನರ ಪ್ರಜಾಪ್ರಭುತ್ವ ನಿಯ೦ತ್ರಣದಿ೦ದ  - ಅದು ಉದ್ಯಮ, ಕಾಲೇಜುಗಳು, ವಾಣಿಜ್ಯ ಇತ್ಯಾದಿಯಾಗಲಿ  -  ಹೆಚ್ಚಿನ ಪ್ರಗತಿಯ ಸಾಧ್ಯತೆಗಳಿವೆ. ಮೊದಲಿಗೆ  ಮಾನವ ಕುಲ ಬದುಕುಳಿಯಬೇಕು -  ಆದರೆ ಇದು ಖಾತರಿಯಿಂದ ದೂರವಿದೆ.”


ಅನಿಯಂತ್ರಿತ ಹಣಕಾಸು ಮಾರುಕಟ್ಟೆಗಳ ಅಪಾಯಗಳ ಬಗ್ಗೆ ಸ್ಪಷ್ಟವಾದ ಅರ್ಥವನ್ನು 1996 ರಲ್ಲಿ ಕೆಲವೇ ಜನರು ಹೊಂದಿದ್ದರು - ಕಹಿ ಅನುಭವದಿಂದ ಇಂದು ಅದರ ಬಗ್ಗೆ ನಾವು ಹೆಚ್ಚು ತಿಳಿದಿದ್ದೇವೆ. ಚೋಮ್ಸ್ಕಿ ಅಪಾಯವನ್ನು ಕಂಡಿದ್ದಲ್ಲದೆ, ಆ ಸಮಯದಲ್ಲಿ ಹೆಚ್ಚಿನ ಅರ್ಥಶಾಸ್ತ್ರಜ್ಞರಿಗಿಂತ ಅಜಾಗರೂಕ ಅನಿಯಂತ್ರಣದ ರಾಜಕೀಯವನ್ನು ಚೆನ್ನಾಗಿ ಅರ್ಥಮಾಡಿಕೊಂಡರು. (ಇದೇ ಸಮಸ್ಯೆ ೨೦೦೮ರಲ್ಲಿ ತಿರುಗಿ ಮರುಕಳಿಸಿತು, ಈ ಸಲವೂ  ಅರ್ಥಶಾಸ್ತ್ರಜ್ಞರು  ಇದನ್ನು ಪ್ರತೀಕ್ಷಿರಲಿಲ.). ಅಂತೆಯೇ, ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ವಿನಾಶದ ಅಪಾಯಗಳ ಬಗ್ಗೆ ಈ ಉಪನ್ಯಾಸಗಳಲ್ಲಿ ದೂರದೃಷ್ಟಿಯ ಸಾಲುಗಳಿವೆ. ‘ಹವಾಮಾನ ಬದಲಾವಣೆ’ಯು ಸಾಮಾನ್ಯ  ಪದವಾಗುವುದಕ್ಕೆ ಬಹಳ ಹಿಂದೆಯೇ, ಚೋಮ್ಸ್ಕಿ ಮಾನವೀಯತೆಯ ಬದುಕುಳಿಯುವ ಸಾಮರ್ಥ್ಯದ ಬಗ್ಗೆ ಬಲವಾದ ಪ್ರಶ್ನೆಗಳನ್ನು ಎತ್ತಿದ್ದರು. ಹದಿನೆಂಟು ವರ್ಷಗಳ ಹಿಂದೆಯೇ, " ಚಾಲ್ತಿಯಲ್ಲಿರುವ ಮೌಲ್ಯ  ವ್ಯವಸ್ಥೆಯಲ್ಲಿ  (ಮಾನವ ಸ೦ತಾನದ) ಉಳಿವಿಗಿಂತ ಅಧಿಕಾರ ಪ್ರಾಬಲ್ಯವು ಮಹತ್ವದ್ದಾಗಿದೆ” ಎಂದು ಅವರು ಹೇಳಿದರು. ಇದು ಇಂದು ಇನ್ನೂ ಹೆಚ್ಚು ನಿಜವಾಗಿದೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು