ಸಂವಿಧಾನದ ದಿನದಂದು, ಮೋದಿ ಸರ್ಕಾರವು ಅಂಬೇಡ್ಕರ್ ಮೇಲೆ ಆರ್ ಎಸ್ ಎಸ್ಸಿನ  ಸೇಡು ತೀರಿಸಿಕೊಳ್ಳುತ್ತಿದೆ

 ಬರೆದವರು : ಕವಿತಾ ಕೃಷ್ಣನ್ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತೆ


‘ದಿ ವಯರ್’ ನಲ್ಲಿ ಪ್ರಕಟಿತ


'ಭಾರತ: ಪ್ರಜಾಪ್ರಭುತ್ವದ ತಾಯಿ' ಎಂಬ ಪರಿಕಲ್ಪನೆಯ ಟಿಪ್ಪಣಿಯು ಭಾರತೀಯ ಸಂವಿಧಾನದ ನಿಜವಾದ ಸ್ಫೂರ್ತಿ ಮತ್ತು ತತ್ವಗಳನ್ನು ಸಂಪೂರ್ಣವಾಗಿ ಅಳಿಸಿಹಾಕುತ್ತದೆ. ಬದಲಾಗಿ, ಇದು ಬಹಿರಂಗವಾಗಿ ಹಿಂದೂ ಪ್ರಾಬಲ್ಯದ ನಿರೂಪಣೆಯನ್ನು ಧೈರ್ಯದಿಂದ ತಳ್ಳುತ್ತದೆ.

ಸರ್ಕಾರದರಿಜಿನರೇಂದ್ರ ಮೋದಿ ಸರ್ಕಾರವು ಈ ವರ್ಷ ಸಂವಿಧಾನ ದಿನವನ್ನು (ನವೆಂಬರ್ 26) “ಭಾರತ: ಲೋಕತಂತ್ರ ಕಿ ಜನನಿ (ಭಾರತ: ಪ್ರಜಾಪ್ರಭುತ್ವದ ತಾಯಿ)” ವಿಷಯದ ಮೇಲೆ ಕಾರ್ಯಕ್ರಮಗಳೊಂದಿಗೆ ಆಚರಿಸಲು ಕರೆ ನೀಡಿದೆ. Indian Council of Hisorical Research (ICHR - ಭಾರತದ ಐತಿಹಾಸಿಕ ಸ೦ಶೋಧನೆಯ ಮ೦ಡಳಿ) ಈ ಬಗ್ಗೆ ಸಿದ್ಧಪಡಿಸಿದ ಪರಿಕಲ್ಪನೆಯ ಟಿಪ್ಪಣಿಯನ್ನು ಸರ್ಕಾರಿ ಆದೇಶದ (GO) ಜೊತೆಗೆ ಪ್ರಸಾರ ಮಾಡಲಾಗಿದೆ, ಅದರ ಪಠ್ಯವು ಭಾರತೀಯ ಸಂವಿಧಾನದ ನಿಜವಾದ ಸ್ಫೂರ್ತಿ ಮತ್ತು ತತ್ವಗಳನ್ನು ಸಂಪೂರ್ಣವಾಗಿ ಅಳಿಸುತ್ತದೆ. ಬದಲಾಗಿ, ಇದು ಬಹಿರಂಗವಾಗಿ ಹಿಂದೂ ಪ್ರಾಬಲ್ಯದ ನಿರೂಪಣೆಯನ್ನು ಧೈರ್ಯದಿಂದ ತಳ್ಳುತ್ತದೆ.

ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ನವೆಂಬರ್ 26, 1949 ರಂದು ಕರಡು ಸಂವಿಧಾನವನ್ನು ಮಂಡಿಸುವಾಗ ಸಂವಿಧಾನ ಸಭೆಗೆ ಮಾಡಿದ ಭಾಷಣದಲ್ಲಿ ನಿರ್ದಿಷ್ಟವಾಗಿ ಉದ್ದೇಶಿಸಿದ ಮತ್ತು ತಿರಸ್ಕರಿಸಿದ ವಿಚಾರಗಳು  ಮತ್ತು  ಆಲೋಚನೆಗಳನ್ನು ಈ  ಪರಿಕಲ್ಪನೆಯ ಟಿಪ್ಪಣಿಯು ವಾಸ್ತವವಾಗಿ ಮು೦ದಕ್ಕೆ ಒಯ್ಯುತ್ತದೆ. 

ಟಿಪ್ಪಣಿಯು ಶತಮಾನಗಳಿಂದಲೂ ಭಾರತದ ಗ್ರಾಮ ಸಮುದಾಯಗಳು ಪಂಚಾಯತ್‌ಗಳು ಮತ್ತು ಖಾಪ್‌ಗಳಂತಹ ಸಂಸ್ಥೆಗಳ ಆಧಾರದ ಮೇಲೆ ಸ್ವ-ಆಡಳಿತ ಮತ್ತು ಸ್ವಾಯತ್ತತೆಯನ್ನು ಉಳಿಸಿಕೊಂಡಿವೆ ಎಂದು ವಾದಿಸುತ್ತದೆ.  ಹೀಗಾಗಿ "ಬದಲಾದ ರಾಜ್ಯಗಳು/ಸಾಮ್ರಾಜ್ಯಗಳಿಂದ ವಿಶೇಷವಾಗಿ ಹಿಂದೂ ಸಂಸ್ಕೃತಿಗೆ ಪ್ರತಿಕೂಲವಾದ ಆಕ್ರಮಣಕಾರರ ಪ್ರಭಾವಕ್ಕೆ ಒಳಗಾಗದಂತೆ" ಅವುಗಳನ್ನು ಕಾಪಾಡಿವೆ.  ಉದ್ದಕ್ಕೂ, ಟಿಪ್ಪಣಿಯು "ಅನ್ಯಲೋಕದ" ಮತ್ತು “ಆಕ್ರಮಣಕಾರಿ” ಗುರುತುಗಳಿಗೆ ವಿರುದ್ಧವಾಗಿ ಭಾರತವನ್ನು ಕೇವಲ "ಹಿಂದೂ" ಕಲ್ಪನೆ  ಒ೦ದಕ್ಕೇ ಸಮೀಕರಿಸುತ್ತದೆ. ಅದು  ವಿವರಿಸುವ ಪ್ರಕಾರ “೨೦೦೦ ವರ್ಷ  ಅನ್ಯ ಜನಾಂಗಗಳು ಮತ್ತು ಸಂಸ್ಕೃತಿಗಳ ಆಕ್ರಮಣಗಳ ಹೊರತಾಗಿಯೂ ಹಿಂದೂ ಸಂಸ್ಕೃತಿ ಮತ್ತು ನಾಗರಿಕತೆಯ ಉಳಿತಕ್ಕೆ ಖಪ್ ಸ೦ಸ್ಥೆಗಳು ಮತ್ತು ಪ೦ಚಾಯತ್ ಗಳು ಕಾರಣವಾಗಿವೆ." 

ಟಿಪ್ಪಣಿಯು, "ಭೌಗೋಳಿಕ-ಸಾಂಸ್ಕೃತಿಕ ಘಟಕ, ರಾಷ್ಟ್ರ, ಭಾರತ" ದ ಆಡಳಿತ ನಡೆಸಿದೆ ಎ೦ದು ಹೇಳಲಾಗುವ "ಹಿಂದೂ ರಾಜ್ಯ" ವನ್ನು ಉಲ್ಲೇಖಿಸುತ್ತದೆ. ಈ ಆಡಳಿತ “ಹಿಂದೂ ರಾಜಕೀಯ ಸಿದ್ಧಾಂತ" ವನ್ನು ಆಧರಿಸಿದೆ, ಮತ್ತು ಅದರಲ್ಲಿ  "ಸಾರ್ವಭೌಮತ್ವವು  ಧರ್ಮದಲ್ಲಿದೆ” ಎಂದು ಹೇಳಲಾಗುತ್ತದೆ,

ಟಿಪ್ಪಣಿಯ ಅತಿ ಕೆಟ್ಟ ಅಂಶವೆಂದರೆ ನಮ್ಮ ಇತಿಹಾಸದಲ್ಲಿ ಪ್ರಜಾಪ್ರಭುತ್ವ ಸಂಪ್ರದಾಯಗಳ ಯಾವುದೇ ತಿಳುವಳಿಕೆ ಮತ್ತು ಗ್ರಹಿಕೆಗಳಿಗೆ,  ಹಾಗೆಯೇ ನಮ್ಮ ಆಧುನಿಕ ಸಂವಿಧಾನವು ವಸಾಹತುಶಾಹಿ ವಿರೋಧಿ ಹೋರಾಟದ ಪ್ರಚೋದನೆಯಿಂದ ಹೇಗೆ ಚಲನೆ ಪಡೆಯಿತು ಎಂಬ ಗಮನಾರ್ಹ ಕಥೆಗೆ,  ಮಾಡುವ ಅಪಚಾರ ಮತ್ತು ಹಾನಿ,

ICHR ಪರಿಕಲ್ಪನೆಯ ಟಿಪ್ಪಣಿಯು ವೇದಕಾಲದ ನಂತರದ  ಗಣರಾಜ್ಯಗಳ ನಿಜವಾದ ಇತಿಹಾಸಕ್ಕೆ ಎಳ್ಳಷ್ಟೂ ಗಮನ  ನೀಡುವುದಿಲ್ಲ ಮತ್ತು ಸ್ವಾತಂತ್ರ್ಯ ಹೋರಾಟವನ್ನೂ  ಭಾರತದ ಸಂವಿಧಾನವನ್ನೂ  ಸಂಪೂರ್ಣವಾಗಿ ಕಡೆಗಣಿಸುತ್ತದೆ.  ಬದಲಾಗಿ, ಹಿಂದೂ ರಾಷ್ಟ್ರವು ಸಾರ್ವಕಾಲಿಕವಾಗಿ ಅಸ್ತಿತ್ವದಲ್ಲಿದೆ ಎಂದು ಹೇಳುವ ರಾಜಕೀಯ ಅಜೆಂಡಾದಿಂದ ಆವರಿಸಲ್ಪಟ್ಟ ತಿರುಚಿದ ಮತ್ತು ತಪ್ಪಾಗಿ ನಿರೂಪಿಸಲ್ಪಟ್ಟ ಇತಿಹಾಸದ ತೇಪೆ ಕೆಲಸವನ್ನು ಇದು ಪ್ರಸ್ತುತಪಡಿಸುತ್ತದೆ.


ಸಂವಿಧಾನ ದಿನ ೧೯೪೯: ಅಂಬೇಡ್ಕರ್ ಅವರ ಅನಿರೀಕ್ಷಿತ ಹೇಳಿಕೆಗಳು

ಈ ಟಿಪ್ಪಣಿಯನ್ನು ನವೆಂಬರ್ ೨೬, ೧೯೪೯ ರಂದು ಅಂಬೇಡ್ಕರ್ ಅವರು ಸಂವಿಧಾನದ ಕರಡನ್ನು ಸಂವಿಧಾನ ರಚನಾ ಸಭೆಯ ಮು೦ದೆ   ಮಂಡಿಸಿದಾಗ ಮಾಡಿದ ಭಾಷಣದೊಂದಿಗೆ ಹೋಲಿಸುವದು, ಮತ್ತು ಹೊಮ್ಮಿಬರುವ ಅ೦ತರವನ್ನು ತಿಳಿಯುವದು ಬೋಧಪ್ರದ.  ಭಾಷಣವನ್ನು  ಇಂದಿನ ದಿನ ಓದುವಾಗ, ಅಂಬೇಡ್ಕರ್ ಅವರು ವ್ಯಕ್ತಪಡಿಸಿದ ಮುನ್ಸೂಚನೆಗಳು ಮತ್ತು ಎಚ್ಚರಿಕೆಗಳ ಸಮ೦ಜಸತೆ ಮತ್ತು ನಿಖರತೆ ಗಮನೀಯ.   ಆ ಭಾಷಣದ  ಜೊತೆ- ಜೊತೆಗೇ ಓದಿದರೆ, ICHR ಪರಿಕಲ್ಪನೆಯ ಟಿಪ್ಪಣಿ - ಮತ್ತು ವಿಸ್ತರಣೆಯಿಂದ, ಮೋದಿ ಸರ್ಕಾರ - ಅಂಬೇಡ್ಕರ್ ಅವರ ಸಂವಿಧಾನದೊಂದಿಗೆ ಯುದ್ಧದಲ್ಲಿದೆ ಎಂಬುದು ಸ್ಪಷ್ಟವಾಗಿದೆ.

ಅಂಬೇಡ್ಕರ್ ಅವರ ಉದ್ದೇಶ  ಕರಡು ರಚನೆಯ ಪ್ರಕ್ರಿಯೆಯನ್ನು ವಿವರಿಸುವದು,  ಮತ್ತು ಕರಡು ಸಂವಿಧಾನದ ಕೆಲವು ಪ್ರಮುಖ ಟೀಕೆಗಳಿಗೆ ಪ್ರತಿಕ್ರಿಯಿಸುವದು, ಎ೦ಬದು  ಸ್ಪಷ್ಟವಾಗಿತ್ತು. ತಾವು ಇಷ್ಟಕ್ಕೇ ಅಲ್ಲಿ ನಿಲ್ಲಬಹುದಿತ್ತು ಎಂದು ಸೂಚಿಸುತ್ತಲೂ, ಅಂಬೇಡ್ಕರ್ ಅತ್ಯಂತ ಅಸಾಮಾನ್ಯ ಮತ್ತು ಗಮನಾರ್ಹವಾದದ್ದನ್ನು ಮಾಡುತ್ತಾರೆ. ಭಾರತದ ಸಂವಿಧಾನದ ಕರಡು ರಚನೆಯು ಒಂದು ದೊಡ್ಡ ಸಾಧನೆಯಾಗಿದೆ - ಮತ್ತು ಅಂಬೇಡ್ಕರ್ ಅವರು ಈ ಕಷ್ಟಕರವಾದ ಕೆಲಸಕ್ಕಾಗಿ ರಾಷ್ಟ್ರೀಯ ಮತ್ತು ವೈಯಕ್ತಿಕ ಸ್ವ-ಅಭಿನಂದನೆಯನ್ನು ಸಹ ಅಭಿವ್ಯಕ್ತಗೊಳಿಸಿದ್ದರೆ, ಅದು  ಸಂಪೂರ್ಣವಾಗಿ ಸಮರ್ಥನೀಯವಾಗಿರುತ್ತಿತ್ತು. 

ಬದಲಿಗೆ, ಅವರು ಕರಡು ಸಮಿತಿಯ ಪ್ರತಿನಿಧಿಯಾಗಿ ತಮ್ಮ ಔಪಚಾರಿಕ ಪಾತ್ರದಿಂದ ಹೊರಬಂದರು, ಮತ್ತು  ಪ್ರಜಾಪ್ರಭುತ್ವದ ಮನೋಭಾವ ಮತ್ತು ಸಂವಿಧಾನದ ತತ್ವಗಳ ಉಳಿವಿನ ಬಗ್ಗೆ,  ಇದು ಮೂಲಭೂತವಾಗಿ ಪ್ರಜಾಪ್ರಭುತ್ವ ವಿರೋಧಿ ನೆಲದಲ್ಲಿ ನೆಟ್ಟ ಸಸಿಯಾಗಿರುವದರಿ೦ದ, ತಮ್ಮಆಳವಾದ ಅನುಮಾನಗಳನ್ನು ವ್ಯಕ್ತಪಡಿಸುವ  ಅವರ ಸ್ವಂತ ಧ್ವನಿಯನ್ನು ಕೇಳುತ್ತೇವೆ.   

ಭಾರತದ ಭವಿಷ್ಯದ ನಾಯಕರು ಮತ್ತು ನಾಗರಿಕರು ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವದ ಭಾರತದ ಪ್ರತ್ಯಕ್ಷ  ನ್ಯೂನತೆಯನ್ನು ಸರಿಪಡಿಸಲು ಸಂವಿಧಾನ ಮತ್ತು ಅದರ ರಾಜಕೀಯ ಪ್ರಜಾಪ್ರಭುತ್ವದ ಚೌಕಟ್ಟನ್ನು ಬಳಸುತ್ತಾರೆಯೇ? ಅಥವಾ ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಸರ್ವಾಧಿಕಾರವಾಗಿ ಬದಲಾಯಿಸಲಾಗುತ್ತದೆಯೇ? ಈ ಕಾಳಜಿಗಳು ಅವರು ಹೇಳಿದ  ಅ೦ಶಗಳ ಮುಖ್ಯ ಸಾರವಾಗಿದೆ.

ಭಾರತದ ವೈಫಲ್ಯಗಳ ತೀವ್ರ ಮತ್ತು ಪೂರ್ವಭಾವಿ ಭವಿಷ್ಯಜ್ಞಾನವುಳ್ಳ ವಿಶ್ಲೇಷಣೆಯೊಂದಿಗೆ ವಿಜಯೋತ್ಸವದ ಸಂದರ್ಭವನ್ನು ಹದಗೆಡಿಸುವ ಅವರ ನಿರ್ಧಾರದಲ್ಲಿ ಅಂಬೇಡ್ಕರ್ ಅವರು ನಮಗೆ ನೀಡಿದ ಗಮನಾರ್ಹ ದಾಯಿತ್ವವನ್ನು ಒಂದು ದೇಶವಾಗಿ ನಾವು ಎಂದಾದರೂ ಸರಿಯಾಗಿ ಅರ್ಥ ಮಾಡಿಕೊ೦ಡಿದ್ದೇವೆಯೇ ? ಅವರ ಭಾಷಣವು ಭಾರತದ ಪ್ರತಿಕೂಲ ಮಣ್ಣನ್ನು ಪ್ರಜಾಪ್ರಭುತ್ವದ ಪೋಷಕಾಂಶಗಳಿಂದ ಸಮೃದ್ಧಗೊಳಿಸಲು ಅವರ ಕಾಲದ ಭಾರತೀಯ ಜನರಿಗೆ ಮನವಿ ಮಾಡುತ್ತದೆ.

ಆದರೆ ಅದಕ್ಕಿಂತ ಮುಖ್ಯವಾಗಿ ಈ ಭಾಷಣವು, ದಶಕಗಳ ಹಿ೦ದೆಯೇ ಭಾರತದ ಭವಿಷ್ಯದ ಪ್ರಜೆಗಳಾದ ನಮಗೆ  ಪ್ರಜಾಪ್ರಭುತ್ವ ಅಪಾಯದಲ್ಲಿರುವ   ಚಿಹ್ನೆಗಳನ್ನು ಗುರುತಿಸಲು, ಕಪಟ ರೀತಿಯಲ್ಲಿ ಸರ್ವಾಧಿಕಾರದ ದಿಶೆಯಲ್ಲಿ ಮಾರಕ ಜಾರುವಿಕೆಯನ್ನು ಸರಿಯಾದ ಕಾಲದಲ್ಲಿ ತಡೆಯಲು  ನಮಗೆ ಸಹಾಯ ಮಾಡುವ ಮುನ್ನೆಚ್ಚರಿಕೆಯನ್ನು ನಮಗೆ ನೀಡುತ್ತದೆ.  ಇದರಲ್ಲಿ, ಅವರ ಅ೦ದಿನ ಮಾತುಗಳು ಎಷ್ಟು ಪ್ರಜ್ಞಾಪೂರ್ವಕವಾಗಿವೆ ಎಂದರೆ ಅವುಗಳನ್ನು ೨೦೨೨ ರ ಇ೦ದಿನ ICHR ಟಿಪ್ಪಣಿ ಮತ್ತು ಅದರ ಭಾರತದ ನೋಟದ  ತೀಕ್ಷ್ಣವಾದ ವಿವಾದಾತ್ಮಕ ಖಂಡನೆ ಎಂದು ಓದಬಹುದು.

ಅಂಬೇಡ್ಕರ್ ಅವರ ಪೂರ್ವಭಾವಿ ಎಚ್ಚರಿಕೆ

ಅಂಬೇಡ್ಕರ್ ಹೇಳುತ್ತಾರೆ, "ಭಾರತವು ಗಣರಾಜ್ಯಗಳಿಂದ ತುಂಬಿರುವ ಸಮಯವಿತ್ತು, ಮತ್ತು ರಾಜಪ್ರಭುತ್ವಗಳು ಇದ್ದಲ್ಲಿಯೂ ಸಹ, ಅವು ಎಂದಿಗೂ ಪೂರ್ಣವಾಗದೆ ಚುನಾಯಿತ ಅಥವಾ ಸೀಮಿತವಾಗಿದ್ದವು,." "ಬೌದ್ಧ ಭಿಕ್ಷು ಸಂಘಗಳು... ಸಂಸತ್ತಿನ ಹೊರತಾಗಿ ಬೇರೇನೂ ಆಗಿರಲಿಲ್ಲ" ಮತ್ತು ಅವುಗಳ ಕಾರ್ಯವಿಧಾನಗಳನ್ನು ಬುದ್ಧ "ಅವನ ಕಾಲದಲ್ಲಿ ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜಕೀಯ ಸಭೆಗಳ ನಿಯಮಗಳಿಂದ" ಎರವಲು ಪಡೆದಿರಬೇಕು ಎಂದು ಅವರು ಮು೦ದುವರೆಯುತ್ತಾರೆ. ಆದರೆ ಅಂಬೇಡ್ಕರ್ ಈ ಪ್ರಾಚೀನ ಪರಂಪರೆಯಿಂದ ಆಧುನಿಕ ಸಂವಿಧಾನಕ್ಕೆ ನೇರ ರೇಖೆಯನ್ನು ಎಳೆಯುತ್ತಿಲ್ಲ. ಬದಲಿಗೆ, ಅವರು ಕೇಳುತ್ತಾರೆ, “ಭಾರತವು ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳೆದುಕೊಂಡಿತು. ಅವಳು ಅದನ್ನು ಎರಡನೇ ಬಾರಿ ಕಳೆದುಕೊಳ್ಳುವಳೇ? ”

"ಪ್ರಜಾಪ್ರಭುತ್ವವು ದೀರ್ಘಾವಧಿಯ ಬಳಕೆಯಿಲ್ಲದೆ" ಭಾರತದಲ್ಲಿ ಎಲ್ಲಾ ಉದ್ದೇಶಗಳಿಗಾಗಿ "ಹೊಸದು" ಆಗಿರುವುದರಿಂದ, "ಪ್ರಜಾಪ್ರಭುತ್ವವು ಸರ್ವಾಧಿಕಾರಕ್ಕೆ ಸ್ಥಳವನ್ನು ಬಿಟ್ಟುಕೊಡುವ ಅಪಾಯವಿದೆ". ಅಂಬೇಡ್ಕರರ ಮುಂದಿನ ವಾಕ್ಯವು ಭಾರತದ ಪ್ರಸ್ತುತ ಸಂಕಟವನ್ನು ನೇರವಾಗಿ ಹೇಳುತ್ತದೆ. ಸ೦ಸತ್ ಪಧ್ಧತಿಯ  ವಿಶೇಷವಾಗಿ ಒಂದು ಪಕ್ಷವು "ಪ್ರಚಂಡ" ಚುನಾವಣಾ ವಿಜಯವನ್ನು ಪಡೆದರೆ ಒ೦ದು ಸರ್ವಾಧಿಕಾರಿ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಬಾಹ್ಯ ಸ್ವರೂಪವನ್ನು ಮಾತ್ರ ಉಳಿಸಿಕೊಳ್ಳಲು,  ಭಾರತದಲ್ಲಿ  ನಿಜವಾದ ಸಾಧ್ಯತೆಯಿದೆ ಎಂದು ಅವರು ಹೇಳುತ್ತಾರೆ, 

ಬಡವಾದ ವಿರೋಧ ಪಕ್ಷ ಮತ್ತು  ಅಸಮತೋಲಿತವಾಗಿ  ಬಲವಾದ ಆಡಳಿತ ಪಕ್ಷ ಇದ್ದರೆ    ಪ್ರಜಾಪ್ರಭುತ್ವದ ರೂಪ ಇದ್ದರೂ ಸಹ ವಾಸ್ತವವಾಗಿ ಸರ್ವಾಧಿಕಾರವಾಗಿರುತ್ತದೆ. ಜಾಗತಿಕ ಪ್ರಜಾಪ್ರಭುತ್ವ ವೀಕ್ಷಕರು ಮೋದಿ ನೇತೃತ್ವದ ಭಾರತವನ್ನು "ಚುನಾವಣಾ ನಿರಂಕುಶಪ್ರಭುತ್ವ" ಎಂದು ಕರೆದಿದ್ದಾರೆ - ಇದೇ ಸಂವಿಧಾನದ ಜನ್ಮ ಕ್ಷಣದಲ್ಲಿಯೇ ಅಂಬೇಡ್ಕರ್ ಅವರು ದೃಶ್ಯೀಕರಿಸಿದ ನಿಖರವಾದ ಪರಿಸ್ಥಿತಿ.

ಮತ್ತು ಅಂಬೇಡ್ಕರ್, ಚತುರ  ದೂರದೃಷ್ಟಿಯಿಂದ, ಭಾರತವು ನಿರಂಕುಶಾಧಿಕಾರದತ್ತ ಜಾರುವ ಸಾಧ್ಯತೆಯ  ಮಾಂತ್ರಿಕ ಸೂತ್ರವನ್ನು ಗುರುತಿಸುತ್ತಾರೆ: “ಭಾರತದಲ್ಲಿ ‘ಭಕ್’ತಿ ಅಥವಾ ‘ಧಾರ್ಮಿಕ ಅನುಸರಣೆ’ ಅಥವಾ ‘ವೀರಾರಾಧನೆ’ಯೆ೦ದು  ಕರೆಯಬಹುದಾದ ಮಾರ್ಗವು ಅದರ ರಾಜಕೀಯದಲ್ಲಿ  ಪ್ರಪಂಚದ ಯಾವುದೇ ದೇಶದ ರಾಜಕೀಯಕ್ಕಿ೦ತ ಅಸಮಾನವಾದ ಪಾತ್ರವನ್ನು ವಹಿಸುತ್ತದೆ.”

ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು, ಜಾನ್ ಸ್ಟುವರ್ಟ್ ಮಿಲ್ ಹೇಳಿದ್ದನ್ನು ಭಾರತೀಯ ನಾಗರಿಕರಿಗೆ ಎಚ್ಚರಿಕೆ ನೀಡುವುದಕ್ಕಾಗಿ   ಅಂಬೇಡ್ಕರ್ ಉಲ್ಲೇಖಿಸುತ್ತಾರೆ:  "ಒಬ್ಬ ಮಹಾನ್ ವ್ಯಕ್ತಿಯ ಪಾದಗಳಿಗೆ ತಮ್ಮ ಸ್ವಾತಂತ್ರ್ಯವನ್ನು ಎಂದಿಗೂ ಸಮರ್ಪಿಸಬೇಡಿ  ಅಥವಾ ಅವರನ್ನು ನಂಬಿ ನಿಮ್ಮ  ಸಂಸ್ಥೆಗಳನ್ನು ಬುಡಮೇಲು ಮಾಡಲು ಸಾಧ್ಯವಾಗುವ ಅಧಿಕಾರಗಳನ್ನು  ದಯಪಾಲಿಸಬೇಡಿ" , ಎಂದು ಮು೦ದುವರಿದು  “ಈ ಎಚ್ಚರಿಕೆ ಇತರ ಯಾವುದೇ ದೇಶಕ್ಕಿಂತ ಭಾರತದ ವಿಷಯದಲ್ಲಿ  ಬಹಳ ಹೆಚ್ಚು ಅವಶ್ಯಕವಾಗಿದೆ,” ಎ೦ದು ಸೇರಿಸುತ್ತಾರೆ.

ಜನರು ಒಬ್ಬ ನಾಯಕನನ್ನು ಆರಾಧನೆಯ ವಸ್ತುವನ್ನಾಗಿ ಪರಿವರ್ತಿಸಿದರೆ ಮತ್ತು ಅವನ ಪಾದಗಳಿಗೆ ತಮ್ಮ ಸ್ವಾತಂತ್ರ್ಯವನ್ನು ಅರ್ಪಿಸಿದರೆ,  ಅವನಿಗೆ ಮಹಾನ್ ವಿಜಯಗಳನ್ನು ಮತ್ತು  ಸಂಸ್ಥೆಗಳನ್ನು ಬುಡಮೇಲು ಮಾಡಲು ಬಳಸಬಹುದಾದ ಅನಿಯಂತ್ರಿತ ಅಧಿಕಾರವನ್ನು ನೀಡಿದರೆ ಆಗುವದೇನು? ನಾವು ಈಗ ನೋಡುತ್ತಿರುವ ಪ್ರತಿಯೊಂದು ಪ್ರಜಾಸತ್ತಾತ್ಮಕ ಸಂಸ್ಥೆಯ ವಿಧ್ವಂಸಕತೆಯ ಬಗ್ಗೆ ನರೇಂದ್ರ ಮೋದಿಯವರು ದುರುಪಯೋಗಿಸುವ   “ಭಕ್ತಿ”ಯೇ  ಸಾಕಷ್ಟು ನಿಖರವಾದ ವಿವರಣೆಯಾಗಿದೆ. ಇ೦ತಹ ಪರಿಸ್ಥಿತಿಯ ಫಲಿತಾಂಶವು ಅಂಬೇಡ್ಕರರಿಗೆ ಸ್ಪಷ್ಟವಾಗಿತ್ತು:

“ಧರ್ಮದಲ್ಲಿನ ಭಕ್ತಿಯು ಆತ್ಮದ ಮೋಕ್ಷದ ಹಾದಿಯಾಗಿರಬಹುದು. ಆದರೆ ರಾಜಕೀಯದಲ್ಲಿ, ಭಕ್ತಿ ಅಥವಾ ವೀರಾರಾಧನೆಯು ಅವನತಿಗೆ ಮತ್ತು ಅಂತಿಮವಾಗಿ ಸರ್ವಾಧಿಕಾರಕ್ಕೆ ಖಚಿತವಾದ ಮಾರ್ಗವಾಗಿದೆ.”

ICHR ಟಿಪ್ಪಣಿ: ಗೋಲ್ವಾಲ್ಕರ್ ವರ್ಸಸ್ ಅಂಬೇಡ್ಕರ್

ಸಂವಿಧಾನದ ಸಭೆಯಲ್ಲಿ ಅಂಬೇಡ್ಕರ್ ಸಂವಿಧಾನದ ಕರಡನ್ನು ಮಂಡಿಸಿದ ಕೆಲವೇ ದಿನಗಳ ನಂತರ, ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್,  “ಭಾರತದ ಹೊಸ ಸಂವಿಧಾನದ ಬಗ್ಗೆ ಭಾರತೀಯವಾದದ್ದು ಏನೂ ಇಲ್ಲ.. ಮನುಸ್ಮೃತಿಯಲ್ಲಿ ಹೇಳಿರುವ (ಮನುವಿನ) ಕಾನೂನುಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಹೇಳಿತ್ತು.. …” ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್‌ನ ತಿರಸ್ಕಾರವು ಅಸಾಮಾನ್ಯ ಸಂಭವವಾಗಿದ್ದಿಲ್ಲ.

1960 ರಲ್ಲಿ, ಆರ್‌ಎಸ್‌ಎಸ್ ಸಂಸ್ಥಾಪಕ ಗೋಲ್ವಾಲ್ಕರ್ ಅವರು ತಮ್ಮ ಬಂಚ್ ಆಫ್ ಥಾಟ್ಸ್‌ನಲ್ಲಿಇದೇ ಭಾವನೆಯನ್ನು ಹೆಚ್ಚು ವಿಸ್ತಾರವಾಗಿ ವ್ಯಕ್ತಪಡಿಸಿದ್ದಾರೆ. ಅಲ್ಲಿ, ಗೋಲ್ವಾಲ್ಕರ್  ಅವರು ರಾಜಕೀಯ ರೂಪವಾಗಿ ಪ್ರಜಾಪ್ರಭುತ್ವವು ಕೇವಲ  ದಮನಕಾರಿ ದೊರೆಗಳಿಗೆ ಪ್ರತಿಕ್ರಿಯೆಯಾಗಿದೆ ಮತ್ತು ಪ್ರಜಾಪ್ರಭುತ್ವದ "ಅನಿಯಂತ್ರಿತ 'ಅವಕಾಶ ಸಮಾನತೆ' ಮತ್ತು 'ವ್ಯಕ್ತಿಯ ಸ್ವಾತಂತ್ರ್ಯ' ದುರಂತಕಾರಕ ಫಲಿತಾಂಶಗಳನ್ನು ಹೊಂದಿದೆ”, ಎಂದು ಹೇಳಿದರು.

ಅಂಬೇಡ್ಕರ್ ಅವರು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಧಾರವಾಗಿ "ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ" ತತ್ವಗಳನ್ನು ಒತ್ತಿಹೇಳಿದಾಗ, ಗೋಲ್ವಾಲ್ಕರ್ ಅವರು ನಿಜವಾದ "ಭಾರತೀಯ" ತತ್ವವು "ಸಮಾನತೆಯಲ್ಲ ಆದರೆ ಸಾಮರಸ್ಯ" ಎಂದು ಹೇಳಿದರು.

"ಸೌಹಾರ್ದತೆ" “ಸಾಮರಸ್ಯ” ಎಂಬುದು ಆರ್‌ಎಸ್‌ಎಸ್ ಸ೦ಸ್ಥೆಯು ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುವ ತ೦ತ್ರ, ಮತ್ತು ಗೋಲ್ವಾಲ್ಕರ್  ಇದನ್ನು ಮರೆಮಾಚಲು ಪ್ರಯತ್ನಿಸುವುದಿಲ್ಲ. “ಬ್ರಾಹ್ಮಣನು ತಲೆ, ರಾಜನು ಕೈಗಳು, ವೈಶ್ಯನು ತೊಡೆಗಳು ಮತ್ತು ಶೂದ್ರನು ಪಾದಗಳು. ಈ ನಾಲ್ಕು ಪಟ್ಟು ವ್ಯವಸ್ಥೆಯನ್ನು ಹೊಂದಿರುವ ಜನರು, ಅಂದರೆ, ಹಿಂದೂ ಜನರು, ಸರ್ವಶಕ್ತನ ಅಭಿವ್ಯಕ್ತಿ, ” ಎಂದು ಅವರು ಬರೆಯುತ್ತಾರೆ. ಪಂಚಾಯತಿಗಳು, ಗೋಲ್ವಾಲ್ಕರ್ ಹೇಳುತ್ತಾರೆ, ಈ ನಾಲ್ಕು ಗುಂಪುಗಳನ್ನು "ಪ್ರತಿಬಿಂಬಿಸುತ್ತದೆ" ಮತ್ತು ಐದನೆಯದು "ಅರಣ್ಯವಾಸಿಗಳು".

ಅಂಬೇಡ್ಕರರ ಭಾಷಣವು ಜಾತಿಯಿಂದ ಕೂಡಿದ ಭಾರತೀಯ ಸಮಾಜದಲ್ಲಿ ಚಾಲ್ತಿಯಲ್ಲಿರುವ ಪ್ರಜಾಪ್ರಭುತ್ವದ ಸಾಮಾಜಿಕ ಮತ್ತು ಆರ್ಥಿಕ ಕೊರತೆಯಿಂದ ರಾಜಕೀಯ ಪ್ರಜಾಪ್ರಭುತ್ವವು ದುರ್ಬಲಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿತು. ಸಾಂವಿಧಾನಿಕ ನೈತಿಕತೆ - ಬಹುಸಂಖ್ಯಾತ ನೈತಿಕತೆಗೆ ವಿರುದ್ಧವಾಗಿ - "ನೈಸರ್ಗಿಕ ಭಾವನೆಯಲ್ಲ" ಮತ್ತು "ನಮ್ಮ ಜನರು ಅದನ್ನು ಇನ್ನೂ ಕಲಿಯಬೇಕಾಗಿದೆ" ಎಂದು ಅಂಬೇಡ್ಕರ್ ಹೇಳಿದರು. ಮತ್ತು "ಜಾತಿಗಳು ರಾಷ್ಟ್ರವಿರೋಧಿ", ಇದು ಸಾಂವಿಧಾನಿಕ ನೈತಿಕತೆಯನ್ನು ಕಲಿಯಲು ಮತ್ತು ನಿಜವಾದ ರಾಷ್ಟ್ರವಾಗಲು ಭಾರತದ ಪ್ರಯಾಣದ ಹಾದಿಯಲ್ಲಿ ದೊಡ್ಡ ಅಡಚಣೆಯಾಗಿದೆ. ಗೋಲ್ವಾಲ್ಕರ್ ಆದರೆ ವಿರುದ್ಧ ಧ್ರುವದ ಭಾವನೆಯನ್ನು ಪ್ರತಿಪಾದಿಸುತ್ತಾರೆ - "ಜಾತಿಗಳು ಸಾಮಾಜಿಕ ವ್ಯವಸ್ಥೆ ಮತ್ತು ಒಗ್ಗಟ್ಟಿನ ದೊಡ್ಡ ಬಂಧವಾಗಿದೆ."

ಬಂಚ್ ಆಫ್ ಥಾಟ್ಸ್‌ನ ಮುನ್ನುಡಿಯಲ್ಲಿ, ಎಮ್‌ಎ ವೆಂಕಟ ರಾವ್ ಅವರು ಜಾತಿ ಶ್ರೇಣಿಯನ್ನುಆರ್‌ಎಸ್‌ಎಸ್ “ಸಮರಸವುಳ್ಳ ಸಮಾಜ”ಕ್ಕೆ ಆಧಾರವಾಗಿ ನೋಡಿದೆ ಎಂದು ಇನ್ನೂ ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಂದು ಜಾತಿಯೂ ಒಂದು "ವೃತ್ತಿಪರ ಗುಂಪು" ಆಗಿದ್ದು, ಅದಕ್ಕೆ ಒ೦ದು ಕರ್ತವ್ಯ - ಸ್ವಧರ್ಮ -ವನ್ನು ಲಗತ್ತಿಸಲಾಗಿದೆ ಎಂದು ಅವರು ಹೇಳುತ್ತಾರೆ. ಅವರು ಸೇರಿಸುತ್ತಾರೆ:

"ಕರ್ತವ್ಯಗಳನ್ನು ನಿಶ್ಚಿತಗೊಳಿಸಿದ್ದರೆ ಮತ್ತು ಸಮಾಜದಲ್ಲಿ ಸಾಮಾಜಿಕ ನಿರೀಕ್ಷೆಗಳನ್ನು ಘನೀಕೃತಗೊಳಿಸಿದರೆ, ಪ್ರತಿಯೊಬ್ಬನೂ  ಅವನಿಂದ ಏನನ್ನು - - ಅವರ ಹಕ್ಕುಗಳು ಮತ್ತು ಕರ್ತವ್ಯಗಳು -ನಿರೀಕ್ಷಿಸಲಾಗುತ್ತದೆ  ಎನ್ನುವುದನ್ನು  ತಿಳಿದುಕೊ೦ಡಿದ್ದರೆ, ಸಾಮರಸ್ಯದ ಸಾಮಾಜಿಕ ವ್ಯವಸ್ಥೆಯು ಸ್ವಯಂಪ್ರೇರಿತವಾಗಿ ಫಲಿಸುತ್ತದೆ."

 ವಿವಾದದ ಪ್ರತಿಯೊಂದು ಪಕ್ಷಗಳು  ಸೇರಿರುವ ಗುಂಪಿನ "ಧರ್ಮ" ದ ಆಧಾರದ ಮೇಲೆ ಪಂಚಾಯತ್‌ಗಳು ವಿವಾದಗಳನ್ನು ಪರಿಹರಿಸುತ್ತವೆ:  ಸಂಘರ್ಷದ ಪಕ್ಷಗಳು “ಸಮಾಜದಲ್ಲಿ ನಿರ್ವಹಿಸುವ ಕಾರ್ಯದಲ್ಲಿ  ಒಳಗೊಂಡಿರುವ ಸೇವೆಯ ದೃಷ್ಟಿಕೋನದಿಂದ ನಿಷ್ಪಕ್ಷಪಾತ “ ಅಧ್ಯಯನದ ಆಧಾರದ ಮೇಲೆ

ರಾವ್ ಅವರು "ಅಧಿಕಾರ ಭೇದ" ವ್ಯವಸ್ಥೆಯನ್ನು ಶ್ಲಾಘಿಸುತ್ತಾರೆ, ಇದು ಸಮಾಜದಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಶ್ರೇಣಿಯಲ್ಲಿ ತಮ್ಮ ತಮ್ಮ ಸ್ಥಾನವನ್ನು ಒಪ್ಪಿಕೊಳ್ಳುತ್ತಾರೆ ಮತ್ತು ನಿರ್ದಿಷ್ಟ ಜಾತಿಯಲ್ಲಿ ಅವರ ಜನ್ಮದಿಂದ ಅವರಿಗೆ ನಿಯೋಜಿಸಲಾದ ಕರ್ತವ್ಯವನ್ನು ನಿರ್ವಹಿಸುತ್ತಾರೆ ಎಂಬ ಕಲ್ಪನೆಯನ್ನು ಉಲ್ಲೇಖಿಸುತ್ತದೆ. ಅಥವಾ ರಾವ್ ಹೇಳಿದಂತೆ, "ವಿಭಿನ್ನ ಅರ್ಹತೆಯ ಕಾರಣದಿಂದಾಗಿ ವಿಭಿನ್ನ ಸ್ಥಿತಿ ಇರುತ್ತದೆ. ಇದೇ ಗುರಿಯ ಗುರುತನ್ನು ಮತ್ತು ಮಾರ್ಗದ ವೈವಿಧ್ಯತೆಯನ್ನು ಸಮನ್ವಯಗೊಳಿಸುವ ಸೂತ್ರವಾಗಿದೆ."   

ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಹಿಂದೂ ಮಾದರಿಯನ್ನು ತಿರಸ್ಕರಿಸಿದರು

ಸಂವಿಧಾನವು ಭಾರತೀಯವಲ್ಲ ಎಂಬ ಆರೋಪವು ಸೂಚ್ಯವಾಗಿ ಜಾತಿ ನಿಯಮಗಳನ್ನು ಜಾರಿಗೊಳಿಸುವ  ಮನುಸ್ಮೃತಿ ಮತ್ತು ಗ್ರಾಮ ಪಂಚಾಯತಿಗಳ ಸಾಂಪ್ರದಾಯಿಕ ವ್ಯವಸ್ಥೆಯನ್ನು ಸ೦ವಿಧಾನವು ಆಧರಿಸಿರಬೇಕು ಎಂಬ ನಿರೀಕ್ಷೆಯೊಂದಿಗೆ ತಳುಕು ಹಾಕಿದೆ ಎಂದು ಈ ವಿಷಯದ ಬಗ್ಗೆ ಅಂಬೇಡ್ಕರ್ ಅವರ ಮಾತುಗಳು ಸೂಚಿಸುತ್ತದೆ.    ಗ್ರಾಮ ಪಂಚಾಯತಿಗಳು ಮತ್ತು ಖಾಪ್‌ಗಳನ್ನು  ಶ್ಲಾಘಿಸುವ ICHR ಟಿಪ್ಪಣಿ ಹಿಂದೂ-ಪರಮಾಧಿಕಾರವಾದಿಗಳು  ಬಯಸುವ   ಮನುಸ್ಮೃತಿ ಆಧಾರಿತ  ಸಂವಿಧಾನವನ್ನು ಹೊಂದಿರುವ ಹಿಂದೂ ರಾಷ್ಟ್ರದ ಬೇಡಿಕೆಗೆ ನಮಿಸುತ್ತದೆ.

ಅಂಬೇಡ್ಕರ್ ಗಮನಿಸಿದರು:

“ಕರಡು ಸಂವಿಧಾನದ ವಿರುದ್ಧದ ಇನ್ನೊಂದು ಟೀಕೆಯೆಂದರೆ, ಅದರ ಯಾವುದೇ ಭಾಗವು ಭಾರತದ ಪ್ರಾಚೀನ ರಾಜಕೀಯವನ್ನು ಪ್ರತಿನಿಧಿಸುವುದಿಲ್ಲ. ಹೊಸ ಸಂವಿಧಾನವನ್ನು ರಾಜ್ಯದ ಪ್ರಾಚೀನ ಹಿಂದೂ ಮಾದರಿಯಲ್ಲಿ ರಚಿಸಬೇಕಾಗಿತ್ತು ಮತ್ತು ಪಾಶ್ಚಿಮಾತ್ಯ ಸಿದ್ಧಾಂತಗಳನ್ನು ಸೇರಿಸುವ ಬದಲು ಹೊಸ ಸಂವಿಧಾನವನ್ನು ಗ್ರಾಮ ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳ ಮೇಲೆ ನಿರ್ಮಿಸಬೇಕಿತ್ತು ಎಂದು ಹೇಳಲಾಗುತ್ತದೆ.

ಅವರ ಪ್ರತಿಕ್ರಿಯೆಯು ಪದಗಳನ್ನು ನುಣುಚಿಕೊಳ್ಳಲಿಲ್ಲ. ಈ ಸಂಸ್ಥೆಗಳು ಪ್ರಪಂಚದ ಉಳಿದ ಭಾಗಗಳನ್ನು ಆಳವಾಗಿ ಪ್ರಭಾವಿಸಿ ಬದಲಾಯಿಸಿದ ಅಲೆಗಳಿ೦ದ ಭಾರತದ  ಗ್ರಾಮಗಳನ್ನು ರಕ್ಷಿಸಿವೆ ಎಂದು ಅವರು ಒಪ್ಪಿಕೊಂಡರು. ಆದರೆ ಅಂಬೇಡ್ಕರ್ ಕೇಳಿದರು,  ಗ್ರಾಮವನ್ನು "ಸ್ಥಳೀಯತೆಯ ಕೂಪ , ಅಜ್ಞಾನ, ಸಂಕುಚಿತ ಮನೋಭಾವ ಮತ್ತು ಕೋಮುವಾದದ ಗುಹೆ" ಯನ್ನಾಗಿ ಮಾಡಿದ ಇ೦ಥ ಸ೦ಕೋಚ ದೃಷ್ಟಿ  ಹೆಮ್ಮೆಪಡುವ ಸಂಗತಿಯಾಗಿದೆಯೇ ? "ಗ್ರಾಮ ಗಣರಾಜ್ಯಗಳು ಭಾರತದ ವಿನಾಶವಾಗಿದೆ" ಎಂದು ಅಂಬೇಡ್ಕರ್ ಹೇಳಿದರು, "ಕರಡು ಸಂವಿಧಾನವು ಗ್ರಾಮವನ್ನು ತನ್ನ ಘಟಕವಾಗಿ ಅಳವಡಿಸಿಕೊಳ್ಳುವ ಬದಲು ವ್ಯಕ್ತಿಯನ್ನು ಅಳವಡಿಸಿಕೊಂಡಿರುವುದಕ್ಕೆ ಸಂತೋಷವಾಗಿದೆ" ಎಂದು ಹೇಳಿದರು.

ಸಂವಿಧಾನದ ದಿನದಂದು ICHR ಟಿಪ್ಪಣಿಯನ್ನು ಬಳಸಲು ಭಾರತದಾದ್ಯಂತ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳಿಗೆ ಆದೇಶ ನೀಡುವ ಮೂಲಕ, ಮೋದಿ ಸರ್ಕಾರವು ಅಂಬೇಡ್ಕರ್ ಅವರ ಮೇಲಿನ ಆರ್ ಎಸ್ ಎಸ್ಸಿನ  ಸೇಡು ತೀರಿಸಿಕೊಳ್ಳುತ್ತಿದೆ;  ಸಂವಿಧಾನದ ಹೊರ ರೂಪವನ್ನು ಉಳಿಸಿಕೊಂಡಿದ್ದರೂ ಸ೦ವಿಧಾನವು ಪರಿಗಣಿಸಿದ ಮತ್ತು ತಿರಸ್ಕರಿಸಿದ "ರಾಜ್ಯಾಡಳಿತದ  ಹಿಂದೂ ಮಾದರಿ" ಮತ್ತು ಜಾತಿ ಆಧಾರಿತ "ಗ್ರಾಮ ಗಣರಾಜ್ಯ" ಎನ್ನುವ  ಮನುಸ್ಮೃತಿಯ ಪರಿಕಲ್ಪನೆಗಳಿಗೆ  ಮೋದಿ ಸರ್ಕಾರವು ಮಹತ್ವದ ಸ್ಥಾನವನ್ನು ನೀಡು ತ್ತದೆ, 

ಕವಿತಾ ಕೃಷ್ಣನ್ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು